Tag: ನಕಲಿ ಐಎಎಸ್ ಅಧಿಕಾರಿ

  • ನಕಲಿ ಐಎಎಸ್ ಅಧಿಕಾರಿ ಸರೆಂಡರ್

    ಚೆನ್ನೈ: ತಾನೊಬ್ಬ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ನಕಲಿ ಬಿಸಿನೆಸ್ ಕಾರ್ಡ್ ನೀಡಿದ್ದ ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವಿರುಗಂಬಾಕ್ಕಂ ನಿವಾಸಿ ಸುಬಾಷ್(27) ತಾನೊಬ್ಬ ಸರ್ಕಾರಿ ಜಂಟಿ ಕಾರ್ಯದರ್ಶಿಯಾಗಿದ್ದು, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದ.

    ಜನವರಿ 1 ರಂದು ಸುಬಾಷ್ ತನ್ನನ್ನು ನಾಲ್ವರು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸುತ್ತಿದ್ದಾರೆ ಎಂಬುದಾಗಿ ಪೊಲೀಸರಿಗೆ ಫೋನ್ ಕರೆಯಲ್ಲಿ ದೂರು ನೀಡಿದ್ದ. ತಾನೊಬ್ಬ ಐಎಎಸ್ ಅಧಿಕಾರಿ, ನನಗೆ ರಕ್ಷಣೆ ಬೇಕು ಎಂಬುದಾಗಿ ಹೇಳಿಕೊಂಡಿದ್ದ ಸುಬಾಷ್‌ನ ಮಾತು ನಂಬಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹಿಂಬಾಲಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ನಂತರ ಪೊಲೀಸರು ಸುಬಾಷ್ ಹೇಳಿದ ಇಲಾಖೆಗೆ ಭೇಟಿ ನೀಡಿ ಸಂಪರ್ಕಿಸಲು ಮುಂದಾದಾಗ ಅಂತಹ ಯಾವುದೇ ಅಧಿಕಾರಿ ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಕಳುಹಿಸಿ – ಕ್ರಿಮಿನಾಶಕ ಸೇವಿಸಿದ ಕೈದಿಗಳು

    ಬಳಿಕ ಪೊಲೀಸರು ಸುಬಾಷ್‌ನ ಹುಡುಕಾಟದಲ್ಲಿದ್ದು, ಶನಿವಾರ ಆರೋಪಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ.

  • ಅಸಲಿ ಐಎಎಸ್ ಅಧಿಕಾರಿಯನ್ನೇ ಮೀರಿಸಿದ ನಕಲಿ ಐಎಎಸ್ ಅಧಿಕಾರಿ

    ಅಸಲಿ ಐಎಎಸ್ ಅಧಿಕಾರಿಯನ್ನೇ ಮೀರಿಸಿದ ನಕಲಿ ಐಎಎಸ್ ಅಧಿಕಾರಿ

    ಚಿಕ್ಕಬಳ್ಳಾಪುರ: ಅಬ್ಬಬ್ಬಾ ಅದೇನು ಸೂಟುಬೂಟು, ಕಾರಿನ ಖದರ್, ಕಾರು ಚಾಲಕನಿಗೆ ಸೇಮ್ ಟು ಸೇಮ್ ಪೈಲೆಟ್ ರೀತಿ ಡ್ರೆಸ್ ಕೋಡ್. ಸೂಟು ಬೂಟು ಹಾಕ್ಕೊಂಡು ಕೈಯಲ್ಲೊಂದು ಬುಕ್ ಹಿಡ್ಕೊಂಡು. ಜೇಬಿನಲ್ಲಿ ಕೂಲಿಂಗ್ ಗ್ಲಾಸ್ ವಿತ್ ಪೆನ್ ಇಟ್ಕೊಂಡು ಐಎಎಸ್ ಅಧಿಕಾರಿಯಂತೆ ಬಂದ ವ್ಯಕ್ತಿಯ ಅಸಲಿ ಸತ್ಯ ಬಯಲಾಗಿದೆ.

    ಹೌದು ಇಂತಹ ವಿಲಕ್ಷಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಬಾಗೇಪಲ್ಲಿ ತಾಲೂಕಿನ ಚೇಳೂರು ಹಾಗೂ ಚಾಕ್ ವೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಅಂದಹಾಗೆ ಮಂಗಳವಾರ ಮಧ್ಯಾಹ್ನ ಹೈಟೆಕ್ ಸ್ಕಾರ್ಪಿಯೋ ಕಾರಿನಲ್ಲಿ ಎಂಟ್ರಿ ಕೊಟ್ಟ ನಾರೇಮದ್ದೇಪಲ್ಲಿ ಗ್ರಾಮದ ನಾಗೇಶ್ ಎಂಬಾತ ಸಿನಿಮಾ ಸ್ಟೈಲ್‍ನಲ್ಲಿ ತಾನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ ಅಂತ ಹೇಳಿಕೊಂಡಿದ್ದ.

    ನಕಲಿ ಐಎಎಸ್ ಅಧಿಕಾರಿ ನಾಗೇಶ್ ಆಸ್ಪತ್ರೆಗೆ ಎಂಟ್ರಿಕೊಟ್ಟಿದ್ದೇ ತಡ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಭಯ ಭೀತರಾಗಿ ಸರ್ ನಮಸ್ಕಾರ, ನಮಸ್ಕಾರ ಅಂತ ಸೆಲ್ಯೂಟ್ ಹೊಡೆದಿದ್ದರು. ಸರ್ ಆಸ್ಪತ್ರೆಯಲ್ಲಿ ಆ ಸಮಸ್ಯೆ ಇದೆ, ಈ ಸಮಸ್ಯೆ ವೇತನವೇ ಆಗುತ್ತಿಲ್ಲ ಅಂತ ಸಿಬ್ಬಂದಿ ಅಳಲು ತೋಡಿಕೊಂಡಿದ್ದರು. ಇದನ್ನು ಆಲಿಸಿದ ನಕಲಿ ಅಧಿಕಾರಿ ನಾಗೇಶ್ ಆಸ್ಪತ್ರೆಯ ರೆಕಾರ್ಡ್ ಬುಕ್‍ನಲ್ಲಿ ಇಂಗ್ಲೀಷ್‍ನಲ್ಲೇ ಬರೆದು ಹೋಗಿದ್ದ. ಆದರೆ ಈ ವಿಚಾರ ಅಂದು ಆಸ್ಪತ್ರೆಯಲ್ಲಿರದೆ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸಭೆಗೆ ಹಾಜರಾಗಿದ್ದ ವೈದ್ಯರಿಗೂ ತಲುಪಿತ್ತು. ಆಗ ವೈದ್ಯರು ವಿಚಾರಿಸಿದಾಗ ಆಸಲಿ ವಿಷಯ ಗೊತ್ತಾಗಿದೆ.

    ಐಎಎಸ್ ಕನಸು ಕಂಡಿದ್ದ ನಾಗೇಶ್:
    ನಾನು ಎಂಎ ಪದವೀಧರನಾಗಿದ್ದು, ಐಎಎಸ್ ಆಫೀಸರ್ ಆಗಬೇಕು ಅಂತ ಕೋಚಿಂಗ್ ಕ್ಲಾಸ್‍ಗೆ ಹೋಗುತ್ತಿದ್ದೇನೆ. ಜೊತೆಗೆ ಮಾನವ ಹಕ್ಕು ಸಂಘಟನೆಯಲ್ಲಿ ಸಿಇಒ ಆಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹೋಗಿರುವುದು ನಿಜ. ಆದರೆ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ ಅವರು ಕರೆ ಮಾಡಿ ಆ ರೀತಿ ಹೋಗಬಾರದು ಅಂತ ತಿಳಿಸಿದ್ದಾರೆ. ಇನ್ನೂ ಮುಂದೆ ಹಾಗೆ ಹೋಗುವುದಿಲ್ಲ ಅಂತ ಹೇಳಿದ್ದೇನೆ ಎಂದು ನಾಗೇಶ್ ಹೇಳಿಕೊಂಡಿದ್ದಾನೆ.

    ನನಗೆ ಮೂರು ಬಾರಿ ಹಾವು ಕಚ್ಚಿದ್ದು ಆಸ್ಪತ್ರೆಗಳಿಗೆ ಹೋದಾಗ ಸರಿಯಾದ ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ಈಗ ಅಧಿಕಾರಿಯಂತೆ ಹೋಗಿ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದು ನಾಗೇಶ್ ತಿಳಿಸಿದ್ದಾನೆ.

    ಆತ್ಮಹತ್ಯೆ ಬೆದರಿಕೆ:
    ನಕಲಿ ಐಎಎಸ್ ಅಫೀಸರ್ ನಾಗೇಶ್ ವಿರುದ್ಧ ಕೇವಲ ಮೌಖಿಕವಾಗಿ ಬಾಗೇಪಲ್ಲಿ ವೃತ್ತನೀರೀಕ್ಷಕರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ನಾಗೇಶ್‍ಗೆ ಬುದ್ಧಿವಾದ ಹೇಳಿ ಟಿಎಚ್‍ಒ ಸತ್ಯನಾರಾಯಣ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಡಿಎಚ್‍ಒ ಯೋಗೇಶ್ ಗೌಡ, ಆತನ ಹೆಸರು ನಾಗೇಶ್ ಅಂತ ನಾರೇಮದ್ದೇಪಲ್ಲಿ ನಿವಾಸಿ. ಜೀವನದಲ್ಲಿ ಐಎಎಸ್ ಆಗಬೇಕೇಂಬ ಆಸೆ ಹೊಂದಿದ್ದ. ಆದರೆ 33 ವರ್ಷದ ನಾಗೇಶ್ ವಿಫಲನಾಗಿ ಈ ರೀತಿ ವರ್ತನೆ ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗಿದೆ. ಆತನನ್ನು ಕರೆಸಿ ವಿಚಾರಣೆ ಮಾಡಲಾಗಿದ್ದು, ಹಿಡಿದುಕೊಳ್ಳಲು ಹೋದರೆ ಬಾವಿಗೆ ಬೀಳುತ್ತೇನೆ ಅಂತ ಬೆದರಿಸುತ್ತಿದ್ದಾನೆ. ಹೀಗಾಗಿ ಬಲವಂತವಾಗಿ ಕ್ರಮ ಕೈಗೊಂಡರೆ ಅಚಾತುರ್ಯ ಆಗಬಹುದಾದ ಸಂಭವವಿದೆ. ಮುಂದಿನ ದಿನಗಳಲ್ಲಿ ಈ ರೀತಿ ಮಾಡಬಾರದು ಅಂತ ಎಚ್ಚರಿಕೆ ನೀಡಿದ್ದೇವೆ. ಜೊತೆಗೆ ನಾಗೇಶ್ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖನಾಗಲು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

  • ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ಸಿಕ್ಕಿಬಿದ್ದ ನಕಲಿ ಐಎಎಸ್ ಅಧಿಕಾರಿ

    ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ಸಿಕ್ಕಿಬಿದ್ದ ನಕಲಿ ಐಎಎಸ್ ಅಧಿಕಾರಿ

    ರಾಮನಗರ: ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ನಕಲಿ ಐಎಎಸ್ ಅಧಿಕಾರಿಯೊಬ್ಬ ಸಿಕ್ಕಿಬಿದ್ದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

    ಶಿವಮೊಗ್ಗ ಮೂಲದ ಮಹಮ್ಮದ್ ಸಲ್ಮಾನ್ (37) ಬಂಧಿತ ನಕಲಿ ಐಎಎಸ್ ಅಧಿಕಾರಿ. ಆರೋಪಿಗೆ ಸಹಕರಿಸಿದ್ದ ಓರ್ವ ಗನ್ ಮ್ಯಾನ್ ಹಾಗೂ ಇಬ್ಬರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಮ್ಮದ್ ಸಲ್ಮಾನ್, ತಾನು ವಿಧಾನಸೌಧದಲ್ಲಿ ಐಎಎಸ್ ಅಧಿಕಾರಿ ಎಂದು ವಂಚಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

    ಚನ್ನಪಟ್ಟಣ ತಾಲೂಕಿನ ಬೆಳಕೆರೆ ಗ್ರಾಮದ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ವಿವಾದ ಇತ್ತು. ಈ ವಿಚಾರವಾಗಿ ಮಹಮ್ಮದ್ ಸಲ್ಮಾನ್, ಗ್ರಾಮಲೆಕ್ಕಿಗರ ಫೋನ್ ಮಾಡಿ ತಾನು ವಿಧಾನಸೌಧದಲ್ಲಿ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೇ ಗೋಮಾಳ ಪಹಣಿ ತಿದ್ದುಪಡಿ ಯಾಕೆ ಮಾಡಿಲ್ಲ? ಅರ್ಜಿದಾರರು ನನ್ನ ಕಚೇರಿಗೆ ಬಂದು ದೂರು ನೀಡಿದ್ದಾರೆ. ಇದಕ್ಕೆ ಸೂಕ್ತ ಉತ್ತರ ಕೊಡಿ ಎಂದು ತರಾಟೆ ತೆಗೆದುಕೊಂಡಿದ್ದ.

    ಇದೇ ವಿಚಾರವಾಗಿ ಆರೋಪಿ ಮಹಮ್ಮದ್ ಇನೋವಾ ಕಾರಿಗೆ ಕರ್ನಾಟಕ ಸರ್ಕಾರ ಎಂಬ ಬೋರ್ಡ್ ಹಾಕಿಕೊಂಡು ಶುಕ್ರವಾರ ಚನ್ನಪಟ್ಟಣಕ್ಕೆ ಬಂದಿದ್ದ. ಬಳಿಕ ಗೋಮಾಳ ಪಹಣಿ ತಿದ್ದುಪಡಿ ಸಂಬಂಧ ದಾಖಲೆಗಳನ್ನು ತೆಗೆದುಕೊಂಡು ಪ್ರವಾಸಿ ಮಂದಿರಕ್ಕೆ ಬರುವಂತೆ ಅಧಿಕಾರಿಗಳಿಗೆ ಹೇಳಿದ್ದ. ಈ ವಿಚಾರವನ್ನು ಗ್ರಾಮಲೆಕ್ಕಿಗರು ಚನ್ನಪಟ್ಟಣ ತಹಸೀಲ್ದಾರ್ ಸುದರ್ಶನ್ ಅವರಿಗೆ ತಿಳಿಸಿ ಪ್ರವಾಸಿ ಮಂದಿರಕ್ಕೆ ಹೋಗಲು ಸಿದ್ಧತೆ ನಡೆದಿದ್ದರು.

    ಐಎಎಸ್ ಅಧಿಕಾರಿ ಬಂದಿರುವ ಸುದ್ದಿ ತಿಳಿಸಿ ತಹಸೀಲ್ದಾರ್ ಸುದರ್ಶನ್ ಅವರು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಈ ವೇಳೆ ನೀವು ಯಾವ ಬ್ಯಾಚ್‍ನ ಅಧಿಕಾರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಲು ಮಹಮ್ಮದ್ ಸಲ್ಮಾನ್ ತಡವರಿಸಿದ. ಇದರಿಂದ ಅನುಮಾನ ವ್ಯಕ್ತಪಡಿಸಿದ ಸುದರ್ಶನ್ ಅವರು, ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಯಲಹಂಕ ವಾಯುನೆಲೆಯಲ್ಲಿ 2 ದಿನ ಮೊಕ್ಕಾಂ ಹಾಕಿದ್ದ ನಕಲಿ ಐಎಎಸ್ ಅಧಿಕಾರಿ ಅರೆಸ್ಟ್!

    ಯಲಹಂಕ ವಾಯುನೆಲೆಯಲ್ಲಿ 2 ದಿನ ಮೊಕ್ಕಾಂ ಹಾಕಿದ್ದ ನಕಲಿ ಐಎಎಸ್ ಅಧಿಕಾರಿ ಅರೆಸ್ಟ್!

    ಬೆಂಗಳೂರು: ಐಎಎಸ್ ಅಧಿಕಾರಿ ಎಂದು ನಕಲಿ ದಾಖಲೆ ಸೃಷ್ಟಿಸಿ ನಗರದ ಯಲಹಂಕ ವಾಯುನೆಲೆಯಲ್ಲಿ 2 ದಿನಗಳ ಕಾಲ ಮೊಕ್ಕಾಂ ಹೂಡಿದ್ದ ವ್ಯಕ್ತಿಯನ್ನ ಯಲಹಂಕ ಪೊಲೀಸರು ಬಂಧಿಸಿದ್ದಾರೆ.

    ಪೂರ್ಣಚಂದ್ರ ದಾಸ್ ಬಂಧಿತ ಆರೋಪಿಯಾಗಿದ್ದು, ಸೆಪ್ಟೆಂಬರ್ 25ರಂದು ಯಲಹಂಕ ವಾಯನೆಲೆಯ ಒಳಗೆ ಪತ್ನಿಯೊಂದಿಗೆ ಪ್ರವೇಶ ಪಡೆದಿದ್ದ. ತಾನು ದೆಹಲಿ ಮೂಲದ ಐಎಎಸ್ ಅಧಿಕಾರಿ ಎಂದು ಗುರುತಿನ ಚೀಟಿ ನೀಡಿದ್ದ. ಅಲ್ಲದೇ ತಾನು ಡೈರೆಕ್ಟರೇಟ್ ಪರ್ಸನಲ್ ಆಂಡ್ ಟ್ರೈನಿಂಗ್‍ನಲ್ಲಿ ಅಧಿಕಾರಿ ಎಂದು ಹೇಳಿದ್ದ. ಅಲ್ಲದೇ ಸೆ. 25 ರಿಂದ 26ರವರೆಗೆ ಮೆಸ್ ನಲ್ಲಿ ರೂಮ್ ನೀಡುವಂತೆ ಕೇಳಿದ್ದ. ಇದರ ಅನ್ವಯ ಆಫೀಸರ್ಸ್ ಮೆಸ್‍ನಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಐಎಎಸ್ ಅಧಿಕಾರಿ ಎಂದು ಹೇಳಿದ್ದ ಪೂರ್ಣಚಂದ್ರ ದಾಸ್ ನೀಡಿದ್ದ ಗುರುತಿನ ಚೀಟಿ ಹಾಗೂ ಸಹಿ ಮಾಡುವ ವೇಳೆ ಬರೆದಿದ್ದ ಹೆಸರಿನಲ್ಲಿ ಅಕ್ಷರ ದೋಷ ಇರುವುದನ್ನು ಅಧಿಕಾರಿಗಳು ಗಮನಿಸಿದ್ದು, ಇದರಿಂದ ಅನುಮಾನಗೊಂಡು ದೆಹಲಿ ಕಚೇರಿಗೆ ಸಂಪರ್ಕ ಮಾಡಿದ್ದಾರೆ. ಈ ವೇಳೆ ಪೂರ್ಣಚಂದ್ರ ದಾಸ್ ನಕಲಿ ಐಎಎಸ್ ಅಧಿಕಾರಿ ಎಂದು ತಿಳಿದುಬಂದಿದೆ.

    ಸದ್ಯ ಆರೋಪಿಯ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 419 ಮತ್ತು 420ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಬಂಧಿಸಲಾಗಿರುವ ಪೂರ್ಣಚಂದ್ರ ದಾಸ್ 2017 ರಲ್ಲೂ ನ್ಯಾಷನಲ್ ಏರೋಸ್ಪೇಸ್ ಲ್ಯಾಬ್‍ನಲ್ಲಿ ತಂಗಿದ್ದ ಕುರಿತು ಮಾಹಿತಿ ಲಭಿಸಿದ್ದು, 5 ದಿನಗಳ ಕಾಲ ಐಎಎಸ್ ಅಧಿಕಾರಿ ಎಂದು ರೂಮ್ ಪಡೆದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪೂರ್ಣಚಂದ್ರ ದಾಸ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ನಕಲಿ ಅಧಿಕಾರಿಯ ಹೆಸರಿನಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv