Tag: ನಕಲಿ ಅಧಿಕಾರಿಗಳು

  • ಸಾಗರದಲ್ಲಿ 3 ನಕಲಿ ತೆರಿಗೆ ಅಧಿಕಾರಿಗಳ ಬಂಧನ

    ಸಾಗರದಲ್ಲಿ 3 ನಕಲಿ ತೆರಿಗೆ ಅಧಿಕಾರಿಗಳ ಬಂಧನ

    ಶಿವಮೊಗ್ಗ: ಆದಾಯ ತೆರಿಗೆ ಅಧಿಕಾರಿಗಳೆಂದು ವಂಚಿಸಿ ಹಣವನ್ನು ಪಡೆಯುತ್ತಿದ್ದ ಮೂವರು ನಕಲಿ ಅಧಿಕಾರಿಗಳನ್ನು ಸಾಗರದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಭದ್ರಾವತಿ ಮೂಲದ ಚಂದನ್, ನವೀನ ಮತ್ತು ಲತೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 1.50 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಇಟಿಯಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್‍ಪಿ ಕೆ.ಎಂ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

    ಜೂನ್ 12ರಂದು ಜನ್ನೆಹಕ್ಲುವಿನ ವಿಶ್ವನಾಥ್ ಎಂಬುವವರ ಮನೆಗೆ ನಾಲ್ವರು ಅಪರಿಚಿತರು ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಎಂದು ಹೇಳಿದ್ದರು. ನಂತರ ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೆದರಿಸಿ ಅವರಿಂದ 2.30 ಲಕ್ಷ ಹಾಗೂ ಖಾಲಿ ಚೆಕ್ ಪಡೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.

    ಈ ಸಂಬಂಧ ವಿಶ್ವನಾಥ್ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮೂವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆನಂದಪುರ ಸಮೀಪದ ದಾಸಕೊಪ್ಪ ವೃತ್ತದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

  • ಮಂಗಳೂರು ಏರ್‌ಪೋರ್ಟ್‌ನಲ್ಲಿ ನಕಲಿ ಕಸ್ಟಮ್ಸ್ ಅಧಿಕಾರಿಗಳ ಬಂಧನ

    ಮಂಗಳೂರು ಏರ್‌ಪೋರ್ಟ್‌ನಲ್ಲಿ ನಕಲಿ ಕಸ್ಟಮ್ಸ್ ಅಧಿಕಾರಿಗಳ ಬಂಧನ

    ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಪ್ರಯಾಣಿಕರಿಂದ ಹಣ ಕೀಳಲು ಯತ್ನಿಸಿದ ಮೂವರು ನಕಲಿ ಕಸ್ಟಮ್ಸ್ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳೂರು ವಿಮಾಣ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸಿದ್ದ ಎಂ.ಡಿ.ಶಮಾಸ್ ಎಂಬ ಪ್ರಯಾಣಿಕರೋರ್ವರನ್ನು ಮೂರು ಮಂದಿ ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ನಡೆಸಿದರು.

    ಬಳಿಕ ಪ್ರಯಾಣಿಕ ಶಮಾಸ್ ರಿಂದ ಹಣ ಕೀಳುವ ಪ್ರಯತ್ನ ನಡೆಸಿದ್ದು, ಈ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಲು ಸಾಧ್ಯವಿಲ್ಲ ಎಂದು ಅನುಮಾನಗೊಂಡ ಶಮಾಸ್ ತಕ್ಷಣ ವಿಮಾನ ನಿಲ್ದಾಣದ ಸಿ.ಐ.ಎಸ್.ಎಫ್ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಭದ್ರತಾ ಸಿಬ್ಬಂದಿಗಳು ಈ ಮೂವರನ್ನು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ಸಂದರ್ಭ ಇವರು ನಕಲಿ ಅಧಿಕಾರಿಗಳು ಎಂದು ತಿಳಿದಿದ್ದು, ಆರೋಪಿಗಳಾದ ರಿಯಾಝ್, ಮಹಮ್ಮದ್ ಸಾಹಿಬ್ ಹಾಗೂ ಖಾಝಿ ಅಫ್ತಾಬ್ ಎಂಬವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.