Tag: ನಕಲಿ ಅಧಿಕಾರಿ

  • ಬೆಳಗಾವಿಯಲ್ಲಿ ನಕಲಿ ಸಿಬಿಐ ಅಧಿಕಾರಿಯನ್ನು ಬಂಧಿಸಿದ ಪೊಲೀಸರು

    ಬೆಳಗಾವಿಯಲ್ಲಿ ನಕಲಿ ಸಿಬಿಐ ಅಧಿಕಾರಿಯನ್ನು ಬಂಧಿಸಿದ ಪೊಲೀಸರು

    ಬೆಳಗಾವಿ: ಸಿಬಿಐ ಅಧಿಕಾರಿ (CBI Officer) ಎಂದು ನಂಬಿಸಿ, ಸಾರ್ವಜನಿಕರಿಂದ ಹಣ ವಂಚನೆ ಮಾಡುತ್ತಿದ್ದ ಆರೋಪದಡಿ‌ ವ್ಯಕ್ತಿಯೋರ್ವನನ್ನು ಬೆಳಗಾವಿಯ (Belagavi) ಮಾಳಮಾರುತಿ‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿಯ ಆಂಜನೇಯ ನಗರದ ನಿವಾಸಿ, ಮೂಲತಃ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದ ದಯಾನಂದ ರಾಮು ಜಿಂಡ್ರಾಳೆ(33) ಬಂಧಿತ ಆರೋಪಿ. ನನ್ನ ಗೆಳೆಯನಿಗೆ ಅಪಘಾತವಾಗಿದೆ. ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ದಯಾನಂದ ನನ್ನಿಂದ 5 ಲಕ್ಷ ರೂ. ಪಡೆದಿದ್ದ. ಅದನ್ನು ಮರಳಿಸದೇ ಬೇರೆ ಬೇರೆ ಸಹಿಯುಳ್ಳ 50 ಸಾವಿರ ರೂ. ಮತ್ತು 3 ಲಕ್ಷ ರೂ. ಎರಡು ಚೆಕ್‌ ಕೊಟ್ಟಿದ್ದ ಎಂದು ಆರೋಪಿಸಿ ಆಟೊ ನಗರದ ನಿವಾಸಿ ಅಫ್ಜಲ್‌ ಬೀಡಿ ಎಂಬುವವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: Karnataka Rain| ಜುಲೈನಲ್ಲಿ ವಾಡಿಕೆಗಿಂತಲೂ 48% ಜಾಸ್ತಿ ಮಳೆ

     

    ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ದಯಾನಂದ ಸಿಬಿಐ, ಎಐಸಿ ಅಧಿಕಾರಿ ಎಂದು ಸುಳ್ಳು ಹೇಳಿ ನಿರುದ್ಯೋಗಿ ಯುವಕರಿಗೆ ಕೆಎಸ್ಆರ್ ಟಿಸಿ,‌ಅರಣ್ಯ ಇಲಾಖೆ, ಅಬಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ಮೋಸ ಮಾಡಿದ್ದ. ನಿಪ್ಪಾಣಿ ರಾಯಬಾಗ, ಕಾಗವಾಡ, ಚಿಕ್ಕೋಡಿ, ಹಾರೂಗೇರಿ ಭಾಗದಲ್ಲಿ ಹಲವರಿಗೆ ಮೋಸ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 10ರಿಂದ 12 ಎಟಿಎಂ ಕಾರ್ಡ್‌ ಮತ್ತು ಅರಣ್ಯ ಇಲಾಖೆ ಗುರುತಿನ ಚೀಟಿ ಹೊಂದಿದ್ದ. ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ನಕಲಿ ಅಧಿಕಾರಿಯಿಂದ ಸರ್ಕಾರಿ ಬಸ್ ತಪಾಸಣೆ – ಕಂಡಕ್ಟರ್‌ಗೆ ಸಿಕ್ಕಿಬಿದ್ದ ಭೂಪ

    ನಕಲಿ ಅಧಿಕಾರಿಯಿಂದ ಸರ್ಕಾರಿ ಬಸ್ ತಪಾಸಣೆ – ಕಂಡಕ್ಟರ್‌ಗೆ ಸಿಕ್ಕಿಬಿದ್ದ ಭೂಪ

    ಕೊಪ್ಪಳ: ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಹುಲಗಿಯಿಂದ ಗಂಗಾವತಿ ಕಡೆ ಹೊರಟಿದ್ದ ಬಸ್‍ನ್ನು ತಪಾಸಣೆ ಮಾಡುವ ನೆಪದಲ್ಲಿ ಬಂದ ಆತ, ಟಿಕೆಟ್ ಮತ್ತು ಕ್ಯಾಶ್ ತಪಾಸಣೆ ಮಾಡಿದ್ದಾನೆ. ಈ ವೇಳೆ ಬಸ್ ಕಂಡೆಕ್ಟರ್ ಗೆ ಸಂಶಯ ಬಂದು ವಿಚಾರಣೆ ಮಾಡಿದಾಗ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ.

    ಬಸ್ ಪ್ರಯಾಣಿಕನ ಸೋಗಿನಲ್ಲಿ ಬಸ್ ಹತ್ತಿದ ಅಸಾಮಿ ನಂತರ ಕಂಡಕ್ಟರ್ ಬಳಿ ಬಂದು ನಾನು ತನಿಖಾಧಿಕಾರಿ ಎಂದು ಹೇಳಿ ಟಿಕೆಟ್ ಮಷಿನ್ ಪಡೆದುಕೊಂಡಿದ್ದಾನೆ. ಟೆಕೆಟ್ ಮತ್ತು ಹಣ ಎಲ್ಲವನ್ನು ಪರಿಶೀಲನೆ ಮಾಡಿದ್ದಾನೆ. ನಂತರ ನೀನು ಟಿಕೆಟ್ ಸರಿಯಾಗಿ ನೀಡಿಲ್ಲ. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾನೆ. ಜೊತೆಗೆ 500 ರೂ. ದುಡ್ಡನ್ನು ಪಡೆದುಕೊಂಡಿದ್ದಾನೆ.

    ಈ ವೇಳೆ ಅಸಾಮಿಯ ನಡುವಳಿಕೆ ನೋಡಿ ಅನುಮಾನಗೊಂಡ ಕಂಡಕ್ಟರ್, ಆತನನ್ನು ಪಶ್ನೆ ಮಾಡಲು ಶುರು ಮಾಡಿದ್ದಾರೆ. ನೀನು ನಮ್ಮ ಸಾರಿಗೆ ಇಲಾಖೆ ಅಧಿಕಾರಿನಾ? ನಿನ್ನ ಗುರುತಿನ ಚೀಟಿ ತೋರಿಸು ಎಂದು ಕೇಳಿದ್ದಾರೆ. ಈ ವೇಳೆ ಬೇರೆ ಏನೋ ಸಬೂಬು ಹೇಳಿ ಹೊರಹೋಗಲು ನೋಡಿದ ಆತನನ್ನು ಹಿಡಿದ ಕಂಡಕ್ಟರ್, ಆತನನ್ನು ಸಾರಿಗೆ ಇಲಾಖೆ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

    ಸಿಕ್ಕಿಬಿದ್ದ ವ್ಯಕ್ತಿ ಆಂಧ್ರ ಮೂಲದವನು ಎಂದು ತಿಳಿದುಬಂದಿದ್ದು, ವಿಚಾರಣೆ ಮಾಡುವ ವೇಳೆ ನಾನು ನಕಲಿ ಅಧಿಕಾರಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೆ ನಕಲಿ ಅಧಿಕಾರಿಯನ್ನು ಕಂಡೆಕ್ಟರ್ ಹನುಮೇಶ್ ಮೇಲಾಧಿಕಾರಿ ವಶಕ್ಕೆ ಒಪ್ಪಿಸಿದ್ದಾರೆ.

  • ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ವಿಜಯಪುರ: ದಾಳಿ ವೇಳೆ ನಕಲಿ ಅಧಿಕಾರಿಯೊಬ್ಬ ಸಿಕ್ಕಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಗೆ ಎಸಿಬಿ ಅಧಿಕಾರಿಗಳಾದ ಡಿಎಸ್‍ಪಿ ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ಸಚಿನ್ ಚಲವಾದಿ ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಹಾಸ ಹೊಸಮನಿ ನಕಲಿ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

    ಸರ್ಕಾರಿ ಸಿಬ್ಬಂದಿಯಂತೆ ತಹಶೀಲ್ದಾರ್ ಕಚೇರಿಯಲ್ಲೇ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಹಣಮಂತ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ನಕಲಿ ಅಧಿಕಾರಿ ಅನ್ನೋದು ಬಯಲಾಗಿದೆ.

    ಸಿಂಧುತ್ವ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದ ಹೊಸಮನಿ, ಜನರಿಂದ ಸಿಂಧುತ್ವಕ್ಕಾಗಿ ಹಣ ಪಡೆಯುತ್ತಿದ್ದ. ಈ ಚಂದ್ರಹಾಸ ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತಿತ್ತು ಎಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ. ಹೊಸಮನಿಯನ್ನು ತಹಶೀಲ್ದಾರ್ ಕಚೇರಿಯ ಸರ್ಕಾರಿ ಸಿಬ್ಬಂದಿ ಎಂದು ಭಾವಿಸಿದ್ದ ಜನರು ಮತ್ತು ಎಸಿಬಿ ಅಧಿಕಾರಿಗಳು ನಕಲಿ ಎಂದು ತಿಳಿದು ದಂಗಾಗಿದ್ದಾರೆ.

    ನಕಲಿ ಅಧಿಕಾರಿ ಹೊಸಮನಿಯನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, 25 ಕ್ಕೂ ಅಧಿಕ ಸಿಂಧುತ್ವ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸಿ ಈತನಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

  • ನಕಲಿ ಅಧಿಕಾರಿಗೆ ನಡು ರಸ್ತೆಯಲ್ಲೇ ಮಹಿಳೆಯಿಂದ ಗೂಸಾ -ವಿಡಿಯೋ ನೋಡಿ

    ನಕಲಿ ಅಧಿಕಾರಿಗೆ ನಡು ರಸ್ತೆಯಲ್ಲೇ ಮಹಿಳೆಯಿಂದ ಗೂಸಾ -ವಿಡಿಯೋ ನೋಡಿ

    ರಾಂಚಿ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯಂತೆ ಬಂದು, 50 ಸಾವಿರ ರೂ. ಬೇಡಿಕೆ ಇಟ್ಟಿದ್ದ ನಕಲಿ ಅಧಿಕಾರಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಜಮ್ಶೆಡ್‍ಪುರ್ ಮ್ಯಾಗೋ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಪೊಲೀಸರ ಎದುರೇ ಮಹಿಳೆ ನಕಲಿ ಅಧಿಕಾರಿಯ ಶರ್ಟ್ ಹಿಡಿದು ಗೂಸಾ ಕೊಟ್ಟಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    50 ಸಾವಿರ ರೂ. ನೀಡುವಂತೆ ಕೇಳಿದ್ದ ನಕಲಿ ಅಧಿಕಾರಿಗೆ ಹಣ ನೀಡುತ್ತೇನೆ ಇಂದು ಬಾ ಎಂದು ಹೇಳಿದ್ದಳು. ಇತ್ತ ಪೊಲೀಸರಿಗೂ ಮಹಿಳೆ ದೂರು ನೀಡಿದ್ದಳು. ನಕಲಿ ಅಧಿಕಾರಿ ಹಣ ಪಡೆಯಲು ಬಂದ ತಕ್ಷಣ ಆತನನ್ನು ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿಯೇ ಥಳಿಸಿದ್ದಾನೆ. ಬಳಿಕ ಮಹಿಳೆ, ನನ್ನ ಜೀವನ್ನೇ ಹಾಳು ಮಾಡಲು ಬಂದಿದ್ಯಾ ಎಂದು ಹೇಳುತ್ತ ಚಪ್ಪಲಿ ಹಿಡಿದು ಹೊಡೆದಿದ್ದಾಳೆ.

    ಈ ವೇಳೆ ಸ್ಥಳದಲ್ಲಿಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ವಿಚಾರಣೆ ಆರಂಭಿಸಿದ್ದಾರೆ.