Tag: ನಕಲಿ

  • KEA ಪರೀಕ್ಷೆ – ಮಂಗಳಸೂತ್ರ, ಕಾಲುಂಗರಕ್ಕೆ ಮಾತ್ರ ವಿನಾಯಿತಿ : ಟಫ್‌ ರೂಲ್ಸ್‌ ಏನು?

    KEA ಪರೀಕ್ಷೆ – ಮಂಗಳಸೂತ್ರ, ಕಾಲುಂಗರಕ್ಕೆ ಮಾತ್ರ ವಿನಾಯಿತಿ : ಟಫ್‌ ರೂಲ್ಸ್‌ ಏನು?

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನವೆಂಬರ್‌ 18 ಮತ್ತು 19 ರಂದು ನಡೆಸಲಿರುವ ನಿಗಮ-ಮಂಡಳಿಗಳ ಪರೀಕ್ಷೆಗೆ ಮತ್ತಷ್ಟು ಟಫ್‌ ರೂಲ್ಸ್‌ (Tough Rules) ಜಾರಿ ಮಾಡಿದೆ.

    ನೇರ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು ಅ‍ಭ್ಯರ್ಥಿಗಳು ವಸ್ತ್ರ ಸಂಹಿತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸೂಕ್ಷ್ಮ ಕೇಂದ್ರಗಳಲ್ಲಿ ಪೊಲೀಸರಿಂದ (Police ತಪಾಸಣೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಿದೆ.

    ಏನೇನು ರೂಲ್ಸ್‌?
    – ಡ್ರೆಸ್ ಕೋಡ್ (Dress Code) ಜಾರಿಯಾಗಿದ್ದು, ಪರೀಕ್ಷೆಯ ದಿನದಂದು ತುಂಬುತೋಳಿನ ಶರ್ಟ್ ಧರಿಸುವಂತಿಲ್ಲ.
    – ಅಭ್ಯರ್ಥಿಗಳಿಗೆ ಜೇಬು ಇಲ್ಲದ ಅಥವಾ ಕಡಿಮೆ ಜೇಬಿರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚನೆ.
    – ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ.
    – ಧರಿಸುವ ಬಟ್ಟೆಗಳು ಹಗುರವಾಗಿದ್ದು ದೊಡ್ಡ ಎಂಬ್ರಾಯಿಡರಿ, ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್‌ಗಳು – ಇವುಗಳನ್ನು ಹೊಂದಿರಬಾರದು.
    – ಅಭ್ಯರ್ಥಿಗಳು ಶೂ ಹಾಕಿಕೊಂಡು ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಲಾಗಿದ್ದು, ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸಬೇಕು.

    – ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಅಭ್ಯರ್ಥಿಯು ಕುತ್ತಿಗೆಯ ಸುತ್ತ ಲೋಹದ ಆಭರಣ ಧರಿಸುವುದು ಅಥವಾ ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧಿಸಲಾಗಿದೆ.
    – ಬ್ಲೂಟೂತ್ ಸಾಧನ ಬಳಕೆಗೆ ಆಸ್ಪದವಾಗಬಾರದೆಂದು ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವಂತಿಲ್ಲ. ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ/ ಸಾಧನ ಧರಿಸುವುದನ್ನು ನಿಷೇಧಿಸಲಾಗಿದೆ.
    – ಯಾವುದೇ ರೀತಿಯ ಮಾಸ್ಕ್ ಸಹ ಧರಿಸುವಂತಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್ ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿ ಇಲ್ಲ
    – ಪೆನ್ಸಿಲ್, ಪೇಪರ್, ರಬ್ಬರ್‌, ಜಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್ ಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಇದನ್ನೂ ಓದಿ: ಓದು ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಮನನೊಂದು ಪುತ್ರ ನೇಣಿಗೆ ಶರಣು

    – ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ಕೊಂಡೊಯ್ಯಬೇಕು. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಹೊಂದಿರುವುದು ಕೂಡ ಕಡ್ಡಾಯ.
    – ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.

     

    ಒಂದು ಕೇಂದ್ರದಲ್ಲಿ ಮಾತ್ರ ಪರೀಕ್ಷೆ
    – ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈಗಾಗಲೇ ಲಿಂಕ್ ನೀಡಲಾಗಿದೆ. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ ಕಾರಣ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಬಿಡುಗಡೆಯಾಗಿರುತ್ತದೆ.
    – ಇಂತಹ ಅಭ್ಯರ್ಥಿಗಳು ಮಾತ್ರ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯತಕ್ಕದ್ದು, ಪರೀಕ್ಷಾ ದಿನದಂದು ಎರಡೂ ಪ್ರವೇಶ ಪತ್ರಗಳನ್ನು ಕೊಠಡಿಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು.

    ಪೊಲೀಸ್ ಸಿಬ್ಬಂದಿ ನಿಯೋಜನೆ
    – ಅಭ್ಯರ್ಥಿಗಳ ಸೂಕ್ತ ತಪಾಸಣೆಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲೂ 25 ವಿದ್ಯಾರ್ಥಿಗಳ ಗುಂಪಿಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು.
    – ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮೆಟಲ್ ಡಿಟೆಕ್ಟರ್ ಮತ್ತು ಪೊಲೀಸ್ ಇಲಾಖೆಗೆ ಸೂಕ್ತವೆನಿಸುವ ಇತರೆ ಉಪಕರಣಗಳನ್ನು ಬಳಸಿ ತಪಾಸಣೆಗೆ ಒಳಪಡಿಸಬೇಕು.
    – ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಯಾವುದೇ ಕಾರು, ಮಿನಿ ಬಸ್ ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧ ಹಾಕಬೇಕು.
    – ಪರೀಕ್ಷಾ ಕೇಂದ್ರದ ಸುತ್ತ ಇರುವ ಹೋಟೆಲ್, ಪೇಯಿಂಗ್ ಗೆಸ್ಟ್, ವಸತಿ ನಿಲಯಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಗಳನ್ನು ಪರಿಶೀಲಿಸಬೇಕು
    – ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಕಂಡು ಬಂದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಕಮಿಷನರ್ ಅವರನ್ನು/ಪೊಲೀಸ್ ವರಿಷ್ಠಾಧಿಕಾರಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.

  • ‘ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ ನಕಲಿ ನಿರ್ದೇಶಕ

    ‘ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ ನಕಲಿ ನಿರ್ದೇಶಕ

    ಕೆಜಿಎಫ್ 2 ಸಿನಿಮಾದ ನಂತರ ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಸದ್ದು ಮಾಡಿದ ಚಿತ್ರ ಚಾರ್ಲಿ 777. ಬಾಕ್ಸ್ ಆಫೀಸಿನಲ್ಲಿ ಅದು ಸಖತ್ ಕಮಾಯಿ ಮಾಡಿತು. ಚೊಚ್ಚಲು ಸಿನಿಮಾದ ಮೂಲಕ ನಿರ್ದೇಶಕ ಕಿರಣ್ ರಾಜ್, ಭಾರತೀಯ ಸಿನಿಮಾ ರಂಗಕ್ಕೆ ಪರಿಚಯವಾದರು. ಕಿರಣ್ ರಾಜ್ ಗೆ ಇದೀಗ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ಇವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ಘಟನೆ ನಡೆದಿದೆ. ನಕಲಿ ನಿರ್ದೇಶಕನೊಬ್ಬ ಕಿರಣ್ ರಾಜ್ ಹೆಸರನ್ನು ಬಳಸಿಕೊಂಡು, ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ್ದಾನೆ.

    ಮಲಯಾಳಂ ಖ್ಯಾತ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿರುವ ನಕಲಿ ನಿರ್ದೇಶಕ, ತಾನು ಚಾರ್ಲಿ ಸಿನಿಮಾದ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ತನ್ನ ಮುಂದಿನ ಚಿತ್ರಕ್ಕೆ ತಮ್ಮ ಡೇಟ್ ಬೇಕಾಗಿತ್ತು ಎಂದು ಕೇಳಿದ್ದಾನೆ. ನಾಲ್ಕೈದು ಬಾರಿ ಕರೆ ಮಾಡಿದಾಗ ಮಾಲಾಗೆ ಅನುಮಾನ ಬಂದು, ತಮಗೆ ಪರಿಚಿತ ಚಾರ್ಲಿ ಸಿನಿಮಾದ ತಂತ್ರಜ್ಞರೊಬ್ಬರಿಗೆ ಕರೆ ಮಾಡಿದ್ದಾರೆ. ಅವರು ಕಿರಣ್ ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ವತಃ ಅಚ್ಚರಿಗೊಂಡಿದ್ದಾರೆ ಕಿರಣ್. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಆ ನಕಲಿ ಡೈರೆಕ್ಟರ್ ನನ್ನು ಕಂಡು ಹಿಡಿಯಬೇಕು ಎಂದು ಮಾಲಾ ಅವರಿಗೆ, ನಕಲಿ ಡೈರೆಕ್ಟರ್ ಜೊತೆ ಕಾನ್ಫರೆನ್ಸ್ ಕಾಲ್ ಹಾಕಲು ಹೇಳಿದ್ದಾರೆ. ಮಾಲಾ ಅದೇ ರೀತಿ ಮಾಡಿದಾಗ ನಕಲಿ ಡೈರೆಕ್ಟರ್ ಬಣ್ಣ ಬಯಲಾಗಿದೆ. ಕೂಡಲೇ ಅವರು ಆ ವ್ಯಕ್ತಿಯ ಮೇಲೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಲ್ಲದೇ, ಈ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ವ್ಯಕ್ತಿಗಳಿಂದ ದೂರವಿರಿ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕಿರಣ್ ರಾಜ್, ನಾನೆಂದೂ ಆ ರೀತಿ ಕೆಲಸ ಮಾಡುವವನು ಅಲ್ಲ. ಹಾಗಾಗಿ ನನ್ನ ಹೆಸರಿನಲ್ಲಿ ಈ ರೀತಿ ಕೆಲಸ ನಡೆದಿದೆ ಎಂದಾಗ ಶಾಕ್ ಆದೆ. ಆ ವ್ಯಕ್ತಿಗೆ ಪಾಠ ಕಲಿಸಲೇಬೇಕು ಎಂದು ಮಾಲಾ ಅವರಿಗೆ ತಿಳಿಸಿದೆ. ಅವರು ಕೂಡ ನಾನು ಹೇಳಿದಂತೆ ಮಾಡಿದರು. ಕೊನೆಗೂ ಆ ನಕಲಿ ಡೈರೆಕ್ಟರ್ ನನ್ನು ಕಂಡು ಹಿಡಿದೆವು. ಆದರೆ, ಈ ಘಟನೆ ನಂತರ ಅವನು ಮೊಬೈಲ್ ಆಫ್ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಕಿರಣ್.

    Live Tv
    [brid partner=56869869 player=32851 video=960834 autoplay=true]

  • ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಚೆನ್ನೈ: ಅವಳಿ-ಜವಳಿ ಕಥೆ ಹೇಳಿ ಎರಡನೇ ಮದುವೆಯಾಗಲು ಹೋಗಿ ವರ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎರಡನೇ ಮದುವೆಯಾಗಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದ. ಅದು ಕೂಡ ಸಿನಿಮೀಯ ಶೈಲಿಯ ಡಬಲ್ ಆ್ಯಕ್ಟಿಂಗ್ ಮೂಲಕ ಎಂಬುದು ವಿಶೇಷ. ಆದರೆ ಈತ ಇದೀ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ:  ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

    ಆರೋಪಿ ರಾಯನ್‍ಗೆ ಈ ಹಿಂದೆಯೇ ಮದುವೆಯಾಗಿತ್ತು. ಈ ದಂಪತಿಗೆ ಒಂದು ಮಗು ಇದೆ. ಇದಾಗ್ಯೂ 30 ವರ್ಷದ ರಾಯನ್ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೆ ಮೊದಲ ಪತ್ನಿ ಹಾಗೂ ಮಗುವಿರುವ ವಿಷಯವನ್ನು ರಾಯನ್ ಆಕೆಯೊಂದಿಗೆ ಮರೆಮಾಚಿದ್ದ. ಅಲ್ಲದೆ ತನ್ನ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದನು. ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ತನ್ನ ಮೊದಲ ಮದುವೆ ವಿಚಾರ ಬಹಿರಂಗವಾದರೂ ಸಂಶಯ ಮೂಡದಂತೆ ಮಾಡಲು ತನಗೆ ಸಹೋದರನೊಬ್ಬನಿದ್ದಾನೆ ಎಂದು ಮೊದಲೇ ಕಥೆ ಕಟ್ಟಿದ್ದ.

    ನಾವಿಬ್ಬರೂ ಅವಳಿ-ಜವಳಿ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದನು. ಈಗ ಅವನು ದುಬೈನಲ್ಲಿದ್ದಾನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮತ್ತಷ್ಟು ನಂಬಿಸಲು ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದನು. ಆದರೆ ಮದುವೆಗೆ ಇನ್ನೇನು ದಿನಗಳಿರುವಾಗ ಸಂಬಂಧಿಕರೊಬ್ಬರು ರಾಯನ್‍ಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿದ್ದಾರೆ.

    ಇದರಿಂದ ಸಂಶಯಗೊಂಡ ಯುವತಿ ಪ್ರಶ್ನಿಸಿದಾಗ, ನಕಲಿ ದಾಖಲೆಗಳನ್ನು ಮುಂದಿಟ್ಟಿದ್ದಾನೆ. ಆದರೆ ಆತನ ನಡವಳಿಕೆ ಬಗ್ಗೆ ಮತ್ತಷ್ಟು ಅನುಮಾನಗೊಂಡ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯುವತಿಗೆ ತನ್ನ ಪ್ರಿಯಕರನ ಅಸಲಿಯತ್ತು ಗೊತ್ತಾಗಿದೆ. ಇದೀಗ ಮೋಸ ಹೋದ ಯುವತಿಯ ಕುಟುಂಬ ನೀಡಿದ ದೂರಿನಂತೆ ಅಡಿ ಪೊಲೀಸರು ರಯಾನ್ ಹಾಗೂ ಆತನ ತಾಯಿ ಸೆಲಿನಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಪದವಿ ಪರೀಕ್ಷೆಯಲ್ಲಿ ನಕಲು- ಪ್ರಾಂಶುಪಾಲರೇ ಸಾಥ್

    ಪದವಿ ಪರೀಕ್ಷೆಯಲ್ಲಿ ನಕಲು- ಪ್ರಾಂಶುಪಾಲರೇ ಸಾಥ್

    ಕೊಪ್ಪಳ: ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಎ ಮೂರನೇ ಸೆಮೆಸ್ಟರ್ ನ ಇತಿಹಾಸ ವಿಷಯದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

    ಮಂಗಳವಾರ ಕೊಠಡಿಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುರಿಸಿ ಪರೀಕ್ಷೆ ಬರೆಯಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಕಾಲೇಜು ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿಗೆ ಒಳಪಡುತ್ತದೆ. ಪರೀಕ್ಷಾ ಕಾರ್ಯಕ್ಕೆ ಖಾಯಂ, ಅತಿಥಿ ಉಪನ್ಯಾಸಕರು ಗೈರಾಗಿದ್ದರಿಂದ ಅನ್ಯವ್ಯಕ್ತಿಗಳ ಮೂಲಕ ಕೊಠಡಿ ಮೇಲ್ವಿಚಾರಣೆ ಕಾರ್ಯ ನಡೆಸಿದ ಆರೋಪ ಇದೀಗ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ವಿರುದ್ಧ ಕೇಳಿಬಂದಿದೆ.

    ಮಂಗಳವಾರ ಬಿಎ ಮೂರನೇ ಸೆಮಿಸ್ಟರ್ ನ ಇತಿಹಾಸ ವಿಷಯದ ಪರೀಕ್ಷೆ ಇತ್ತು. ಈ ವೇಳೆ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ವಿದ್ಯಾರ್ಥಿಗಳಿಂದ ಹಣ ಪಡೆದು ಒಂದು ಕೊಠಡಿಯಲ್ಲಿ ಇಬ್ಬರೇ ವಿದ್ಯಾರ್ಥಿನಿಯರನ್ನು ಕುರಿಸಿ, ಪರೀಕ್ಷೆ ಬರೆಯಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಡಾ.ಗಣಪತಿ ವಿರುದ್ಧ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತನಿಖೆ ಆರಂಭವಾಗಿದ್ದು, ಕಾಲೇಜಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಾಜಕುಮಾರ್ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ಬಡಿಗೇರ್, ನಗರ ಠಾಣೆ ಇನ್‍ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ತನಿಖಾ ತಂಡ ಕುಲಪತಿಗಳಿಗೆ ವರದಿ ಸಲ್ಲಿಸಲಿದೆ.

  • ಅತ್ತೆ ಮಕ್ಕಳಿಗೆ 17 ಲಕ್ಷ ರೂಪಾಯಿ ಟೋಪಿ ಹಾಕಿದ್ರಾ ಬಿಜೆಪಿ ಮುಖಂಡ!

    ಅತ್ತೆ ಮಕ್ಕಳಿಗೆ 17 ಲಕ್ಷ ರೂಪಾಯಿ ಟೋಪಿ ಹಾಕಿದ್ರಾ ಬಿಜೆಪಿ ಮುಖಂಡ!

    ಹುಬ್ಬಳ್ಳಿ: ಸೋದರ ಮಾವನ ಹೆಸರಿನಲ್ಲಿ ನಕಲಿ ಬಾಂಡ್ ಸೃಷ್ಟಿ ಮಾಡಿ ಮಾವನ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆಂಬ ಆರೋಪವೊಂದು ಭಾರತೀಯ ಜನತಾ ಪಕ್ಷದ ಮುಖಂಡನ ವಿರುದ್ಧ ಕೇಳಿಬಂದಿದೆ.

    ಸಂಗಮೇಶ ಗೌರಕ್ಕನವರ್ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ. ಇವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದು, ಇದೀಗ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಅಳಿಯಂದಿರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಾಧರ ವಾಲಿ ಎಂಬವರ ಕುಟುಂಬಕ್ಕೆ ಸಂಗಮೇಶ್ ಅನ್ಯಾಯ ಮಾಡಿ 17 ಲಕ್ಷ 68 ಸಾವಿರ ಕೊಡುವಂತೆ ಪೀಡಿಸುತ್ತಿದ್ದಾರೆಂದು ವಾಲಿ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.

     

    ಗಂಗಾಧರ ವಾಲಿಯವರು ತೀರಿಕೊಳ್ಳುವ ಮುನ್ನವೇ ಬಾಂಡ್ ಒಂದನ್ನ ಮಾಡಿಕೊಂಡಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಕೈಗಡ ಎಂದು ಬರೆಯಲಾಗಿದೆ. ಆದರೆ ಒಂದು ವರ್ಷದಲ್ಲಿ ಅದರ ಬಡ್ಡಿ ಸಮೇತ 17 ಲಕ್ಷಕ್ಕೂ ಹೆಚ್ಚು ಹಣವನ್ನ ಕೊಡುವಂತೆ ಪೀಡಿಸುತ್ತಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಸಂಗಮೇಶ ಗೌರಕ್ಕನವರ್ ಬಿಜೆಪಿ ಮುಖಂಡರ ಜೊತೆಗೂಡಿ ಇಂತಹ ದಂಧೆಗಳನ್ನ ಮಾಡುತ್ತಿದ್ದಾರೆಂದು ವಾಲಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ನಕಲಿ ಬಾಂಡ್‍ಗೆ ಮೃತ ರಾಘವೇಂದ್ರ ರಾಮದುರ್ಗ ಅವರ ಸಹಿ ಕೂಡಾ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೋದರ ಮಾವನ ಮಕ್ಕಳು ಬಿಜೆಪಿ ಮುಖಂಡನ ಅಕ್ರಮದ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ತನಿಖೆಯಿಂದ ಸತ್ಯ ತಿಳಿಯಲಿದೆ.

  • ಪರೀಕ್ಷೆಯಲ್ಲಿ ನಕಲಿಗೆ ಸಹಕಾರ- 4 ಶಿಕ್ಷಕರು, ಕೊಠಡಿಯ ಮೇಲ್ವಿಚಾರಕನ ಮೇಲೆ ಕೇಸ್

    ಪರೀಕ್ಷೆಯಲ್ಲಿ ನಕಲಿಗೆ ಸಹಕಾರ- 4 ಶಿಕ್ಷಕರು, ಕೊಠಡಿಯ ಮೇಲ್ವಿಚಾರಕನ ಮೇಲೆ ಕೇಸ್

    ಹಾವೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಕಲಿಗೆ ಸಹಕರಿಸುತ್ತಿದ್ದ ಖಾಸಗಿ ಶಾಲೆಯ ನಾಲ್ವರು ಶಿಕ್ಷಕರು ಹಾಗೂ ಕೊಠಡಿಯ ಮೇಲ್ವಿಚಾರಕನನ್ನು ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೇಳಿಕೊಡಲು ಬಂದ ಶಿಕ್ಷಕರನ್ನು ಜಗದೀಶ್ ಶಿವಪ್ಪನವರ, ಮನೋಹರ ಬಿ.ಆರ್, ಗುತ್ತೆಪ್ಪ ಬಾಳಂಬೀಡ, ಶಿವಯೋಗಿ ರಾಗಿ ಎಂದು ಗುರುತಿಸಲಾಗಿದೆ. ಹಿರೇಕೆರೂರು ತಹಶೀಲ್ದಾರ ಆರ್.ಎಚ್.ಭಾಗವಾನ ಭೇಟಿ ನೀಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ತಹಶೀಲ್ದಾರ್ ಹಾಗೂ ಪೊಲೀಸರನ್ನು ಕಂಡು ಶಿಕ್ಷಕರು ಓಡಿ ಹೋಗುತ್ತಿದ್ದರು. ಇದನ್ನು ಗಮನಿಸಿದ ತಹಶೀಲ್ದಾರ್ ಭಾಗವಾನ ನಾಲ್ವರು ಶಿಕ್ಷಕರನ್ನು ಹಾಗೂ ಕೊಠಡಿಯ ಮೇಲ್ವಿಚಾರಕ ನಾಗರಾಜ್ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ನಂತರ ಪೊಲೀಸರು ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

  • ಕಾಂಗ್ರೆಸ್ ನೀಡಿದ ಚೆಕ್ ನಕಲಿ: ಆರ್ ಅಶೋಕ್ ಗಂಭೀರ ಆರೋಪ

    ಕಾಂಗ್ರೆಸ್ ನೀಡಿದ ಚೆಕ್ ನಕಲಿ: ಆರ್ ಅಶೋಕ್ ಗಂಭೀರ ಆರೋಪ

    ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ಕಳುಹಿಸಲೆಂದು ಕಾಂಗ್ರೆಸ್ ನೀಡಿದ ಚೆಕ್ ನಕಲಿ ಎಂದು ಕಂದಾಯ ಮಂತ್ರಿ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ. ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಡಿಕೆಶಿಗೆ ಟಾಂಗ್ ನೀಡಿದರು.

    ಇದೇ ವೇಳೆ ಕಾಂಗ್ರೆಸ್ ನಾಯಕರು ಕೆಂಪೇಗೌಡ ಬಸ್ ನಿಲ್ದಾಣ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಿನ್ನೆ ಸುಮಾರು 5 ಸಾವಿರ ಮಂದಿ ಮಧ್ಯದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರಿಗಾದರೂ ಸೋಂಕು ಇದ್ದರೆ ಅನ್ನೋ ಪರಿಜ್ಞಾನವೂ ಅವರಿಗೆ ಇರಲಿಲ್ಲ. ಹೀಗಿರುವಾಗ ಬೇರೆಯವರಿಗೆ ಹೇಳುವ ನೈತಿಕತೆ ಅವರಿಗಿಲ್ಲ. ಹೀಗಾಗಿ ಅವರಿಗೂ ತಪಾಸಣೆಯಾಗಬೇಕು. ಜೊತೆಗೆ ಅವರಿಗೂ ಕ್ವಾರೆಂಟೈನ್ ಮಾಡೋ ಚಾನ್ಸ್ ಬರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ಸಿಎಂ ಜೊತೆ ಚರ್ಚಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ದಿನೇಶ್ ಗುಂಡುರಾವ್ ಅಧ್ಯಕ್ಷರಾಗಿದ್ದಾಗ ದೇಣಿಗೆ ನೀಡಿರಲಿಲ್ಲ. ಈಗ ಡಿಕೆ ಶಿವಕುಮಾರ್ ಅಧ್ಯಕ್ಷ ಆಗುತ್ತಿದ್ದಂತೆ ಏಕಾಏಕಿ ದುಡ್ಡು ಬಂದಿದೆ. ಅದು ನಮಗೆ ಆಶ್ಚರ್ಯ ತಂದಿದೆ. ಹೀಗಾಗಿ ಅವರು ನೀಡಿದ ಚೆಕ್‍ನ್ನು ನಾವು ಹುಷಾರಾಗಿ ನೋಡುತ್ತಿದ್ದೇವೆ. ಅವರ ಒಂದು ಕೋಟಿ ಚೆಕ್ ಅನ್ನು ನಾವು ತಗೆದುಕೊಂಡಿಲ್ಲ. ನಾವು ನೂರಾರು ಕೋಟಿ ಈಗಾಗಲೇ ಖರ್ಚು ಮಾಡಿದ್ದೇವೆ. ಕಾಂಗ್ರೆಸ್ ದೇಶದಿಂದ ಪಡೆದಿದ್ದೆ ಹೆಚ್ಚು. ಅರವತ್ತು ವರ್ಷದಲ್ಲಿ ನೀವು ಎಷ್ಟು ಪಡೆದಿದ್ದೀರಿ. ಈಗ ತೀರ್ಥ ಕೊಟ್ಟಂತೆ ಕೊಡಬೇಡಿ. ನಿಮ್ಮ ಪಕ್ಷಕ್ಕೆ 120 ವರ್ಷ ಇತಿಹಾಸ ಇದೆ. ಕೊಡುವುದಿದ್ದರೆ 120 ಕೋಟಿ ಕೊಡಿ ಅದನ್ನು ಬಿಟ್ಟು ಪ್ರಚಾರಕ್ಕೆ ಹಣ ಕೊಡಬೇಡಿ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

  • ನಿಧಿ ಆಸೆಗೆ ಬಿದ್ದು 3.50 ಲಕ್ಷ ರೂ. ಕಳ್ಕೊಂಡ

    ನಿಧಿ ಆಸೆಗೆ ಬಿದ್ದು 3.50 ಲಕ್ಷ ರೂ. ಕಳ್ಕೊಂಡ

    ದಾವಣಗೆರೆ: ವ್ಯಕ್ತಿಯೊಬ್ಬರಿಗೆ ಕಡಿಮೆ ಬೆಲೆಯಲ್ಲಿ ಕೆ.ಜಿ.ಗಟ್ಟಲೇ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ 3.50 ಲಕ್ಷ ವಂಚಿಸಿರುವ ಪ್ರಕರಣ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಮೂಡ್ಡಪಾಳ್ಯದ ನಿವಾಸಿ ಶ್ರೀನಿವಾಸ್ ಮೋಸ ಹೋಗಿದ್ದಾರೆ. ಶಿವಮೊಗ್ಗದ ಹರೀಶ್ ಹಾಗೂ ಆತನ ಸಹಚರ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೋಟೆಲ್‍ನಲ್ಲಿ ಕೆಲಸ ಮಾಡುವ ಶ್ರೀನಿವಾಸ್‍ಗೆ ಹರೀಶ್ ಫೋನ್ ಮಾಡಿ, ನಾನು ನಿಮ್ಮ ಹೋಟೆಲ್‍ಗೆ ಪ್ರತಿ ದಿವ ಬರುತ್ತೇನೆ. ನೀವು ನನ್ನನ್ನು ನೋಡಿದ್ದೀರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ.

    ಮತ್ತೊಂದು ದಿನ ಕರೆ ಮಾಡಿ, ಕಲಬುರ್ಗಿಯಲ್ಲಿರುವ ನನ್ನ ಅಜ್ಜ ಒಂದು ತಿಂಗಳ ಹಿಂದೆ ಮನೆಯ ಪಾಯ ತೆಗೆಯುತ್ತಿರುವಾಗ ನಿಧಿ ಸಿಕ್ಕಿದೆ. ನಿಮಗೆ ಬೇಕಾದರೆ ಒಂದು ಕೆ.ಜಿಯಷ್ಟು ಕೊಡುತ್ತೇನೆ. ಈ ವಿಷಯವನ್ನು ಯಾರಿಗೂ ಹೇಳಬೇಡಿ. ಸ್ಯಾಂಪಲ್ ಕೊಡುತ್ತೇನೆ ಶಿವಮೊಗ್ಗಕ್ಕೆ ಬನ್ನಿ ಎಂದು ತಿಳಿಸಿದ್ದಾನೆ.

    ಇದನ್ನು ನಂಬಿದ ಶ್ರೀನಿವಾಸ್ ಶಿವಮೊಗ್ಗಕ್ಕೆ ಹೋಗಿದ್ದಾರೆ. ನಂತರ ಅವರನ್ನು ಹರೀಶ್ ಚೀಲೂರಿಗೆ ಕರೆಸಿಕೊಂಡಿದ್ದಾನೆ. ಒಂದು ಬಿಲ್ಲೆಯನ್ನು ನೀಡಿದ್ದಾನೆ. ಇದನ್ನು ಪರೀಕ್ಷಿಸಿದಾಗ ಅದು ಅಸಲಿ ಬಂಗಾರವಾಗಿತ್ತು. ಕೊನೆಗೆ 5 ಲಕ್ಷ ಕೊಟ್ಟರೆ ಒಂದು ಕೆ.ಜಿ ಬಂಗಾರ ನೀಡುತ್ತೇನೆ ಎಂದು ಹರೀಶ್ ನಂಬಿಸಿದ್ದಾನೆ. ಇದನ್ನು ನಂಬಿದ ಶ್ರೀನಿವಾಸ್ ಜನವರಿಯಲ್ಲಿ 3.50 ಲಕ್ಷ ತೆಗೆದುಕೊಂಡು ಚೀಲೂರಿಗೆ ಬಂದಿದ್ದಾರೆ. ಆಗ ಆರೋಪಿಗಳು ನಕಲಿ ಬಂಗಾರ ನೀಡಿ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ನಂತರ ಮನೆಗೆ ಹೋಗಿ ಪರೀಕ್ಷಿಸಿದಾಗ ಕೆ.ಜಿ.ಗಟ್ಟಲೇ ನಕಲಿ ಬಂಗಾರ ಇರುವುದು ಗೊತ್ತಾಗಿದೆ.

    ತಕ್ಷಣ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • 10 ಸಾವಿರ ಕೊಟ್ರೆ ಕೈಗಿಡ್ತಾರೆ ನಿಮಗೆ ಬೇಕಾದ ಮಾರ್ಕ್ಸ್ ಕಾರ್ಡ್

    10 ಸಾವಿರ ಕೊಟ್ರೆ ಕೈಗಿಡ್ತಾರೆ ನಿಮಗೆ ಬೇಕಾದ ಮಾರ್ಕ್ಸ್ ಕಾರ್ಡ್

    – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ವಿಜಯಪುರ: 5ರಿಂದ 10 ಸಾವಿರ ರೂಪಾಯಿ ಕೊಟ್ಟರೆ ನೀವು ಶಾಲೆಗೆ ಹೋಗಬೇಕಿಲ್ಲ, ಓದೋದಂತು ಬೇಕೇ ಇಲ್ಲ. ಕಾಸು ಕೊಟ್ರೆ ಬೇಕಾದ ಕ್ಲಾಸ್‍ನ ಮಾರ್ಕ್ಸ್ ಕಾರ್ಡ್ ನಿಮ್ಮ ಕೈಗಿಡುತ್ತಾರೆ. ಈ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ವೇಳೆ ಬಯಲಾಗಿದೆ.

    ಹೌದು. ದುಡ್ಡು ಕೊಟ್ಟರೆ ಮಲ್ಲಪ್ಪ ಎಂಬಾತ ಏನ್ ಬೇಕಾದ್ರೂ ಮಾಡಿಕೊಡುತ್ತಾನೆ. ಅದರಲ್ಲೂ ಶಾಲೆಗೆ ಹೋಗದೇ ಇದ್ದರೂ ಪರೀಕ್ಷೆ ಬರೆಯದೇ ಇದ್ದರೂ ಒಂದರಿಂದ 10ನೇ ತರಗತಿವರೆಗೆ ಪಾಸ್ ಆಗಿದ್ದೀರಿ ಅಂತ ಒಂದೇ ದಿನದಲ್ಲಿ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಡುತ್ತಾನೆ. ಅಂದಹಾಗೆ ಈತ ಮಾಡಿ ಕೊಡುವ ಸ್ಪಾಟ್ ಮಾಕ್ರ್ಸ್ ಕಾರ್ಡಿಗೆ 5-10 ಸಾವಿರ ರೂಪಾಯಿ ಕೊಡಬೇಕು.

    ಮಲ್ಲಪ್ಪ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಗೆ ಏಜೆಂಟ್ ಆಗಿರೋದು ಪಿ.ಕೆ ರಾಥೋಡ್ ಅನ್ನೋ ಮಹಾನುಭವನಿಂದ. ರಾಥೋಡ್ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದ ಹೆಚ್ ಪಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯ. ಅಲ್ಲದೆ ಮಲ್ಲಪ್ಪ ಮಾಡೋ ದಂಧೆಯಲ್ಲಿ ಶೇರ್ ತಗೊಂಡು ನಕಲಿ ಅಂಕಪಟ್ಟಿ ಮತ್ತು ಟಿಸಿ ಕೊಡೋ ಪುಣ್ಯಾತ್ಮ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿಯನ್ನೂ ರಾಥೋಡ್ ನಕಲಿ ಮಾಡುತ್ತಾರೆ.

    ಸ್ವತಃ ಮಲ್ಲಪ್ಪ ಹೇಳುವಂತೆ ನಕಲಿ ಅಂಕಪಟ್ಟಿಗಳನ್ನ ಡಿಎಲ್, ಅಂಗನವಾಡಿ ಸಹಾಯಕಿಯರ ಕೆಲಸ ಗಿಟ್ಟಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಪಬ್ಲಿಕ್ ಟಿವಿ ಸ್ಟಿಂಗ್ ಬಳಿಕವಾದ್ರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲಪ್ಪ ಮತ್ತು ರಾಥೋಡ್ ವಿರುದ್ಧ ಕ್ರಮಕೈಗೊಳ್ಳಬೇಕಿದೆ.

  • ಇನ್ಸ್‌ಪೆಕ್ಟರ್ ಯಾಮಾರಿಸಲು ಮುಂದಾದ ನಕಲಿ ಐಪಿಎಸ್ ಅಧಿಕಾರಿ ಅರೆಸ್ಟ್

    ಇನ್ಸ್‌ಪೆಕ್ಟರ್ ಯಾಮಾರಿಸಲು ಮುಂದಾದ ನಕಲಿ ಐಪಿಎಸ್ ಅಧಿಕಾರಿ ಅರೆಸ್ಟ್

    ಮೈಸೂರು: ಪೊಲೀಸ್ ಇನ್ಸ್‌ಪೆಕ್ಟರ್ ಗೆ ದೋಖಾ ಮಾಡಲು ಯತ್ನಿಸಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದಿಲೀಪ್ ಬಂಧಿತ ನಕಲಿ ಐಪಿಎಸ್ ಆಗಿದ್ದು, ಮೈಸೂರಿನ ವಿಜಯನಗರ ನಿವಾಸಿಯಾಗಿದ್ದಾನೆ. ಈತ ಮೈಸೂರಿನ ಕೆ.ಆರ್.ಠಾಣೆ ಇನ್ಸ್‌ಪೆಕ್ಟರ್ ವಿ.ನಾರಾಯಣಸ್ವಾಮಿ ಅವರನ್ನು ಯಾಮಾರಿಸಲು ಮುಂದಾಗಿದ್ದನು.

    ನಾನು ಐಪಿಎಸ್ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಂಡಿದ್ದ ದಿಲೀಪ್, ತನ್ನ ಕುಟುಂಬಸ್ಥರ ಪ್ರವಾಸಕ್ಕೆ ಇನ್ನೋವಾ ಕಾರು ವ್ಯವಸ್ಥೆ ಮಾಡಿ ಎಂದು ಹೇಳಿದ್ದನು. ಅಲ್ಲದೆ ಕಾರು ಬಾಡಿಗೆ ಮೊತ್ತ ಮತ್ತು ಚಾಲಕನ ಕೂಲಿ ನೀವೇ ನೀಡಿ ಎಂದು ಹೇಳಿದ್ದಾನೆ. ದಿಲೀಪ್ ಮಾತಿನಿಂದ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಆತ ನಕಲಿ ಐಪಿಎಸ್ ಅಧಿಕಾರಿ ಎಂದು ಸಾಬೀತಾಗಿದೆ.

    ಐಪಿಎಸ್ ಆಯ್ಕೆಪಟ್ಟಿಯನ್ನ ಡೌನ್ ಲೋಡ್ ಮಾಡಿ, ಅದರಲ್ಲಿ ತನ್ನ ಹೆಸರು ಸೇರಿಸಿಕೊಂಡಿದ್ದ ಈತ ಖತರ್ನಾಕ್ ಆಸಾಮಿಯಾಗಿದ್ದಾನೆ. ನಕಲಿ ಐಪಿಎಸ್ ಎಂದು ತಿಳಿದ ತಕ್ಷಣವೇ ದಿಲೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.