Tag: ನಂಜುಡೇಶ್ವರ

  • ನೆಲದ ಘಮಲಿನ ಚಿತ್ರ ‘ಸಿಂಹರೂಪಿಣಿ’ : ನಿರ್ಮಾಪಕ ನಂಜುಂಡೇಶ್ವರ

    ನೆಲದ ಘಮಲಿನ ಚಿತ್ರ ‘ಸಿಂಹರೂಪಿಣಿ’ : ನಿರ್ಮಾಪಕ ನಂಜುಂಡೇಶ್ವರ

    ದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ಲಿನ ಗಾಳಿ ಬಲವಾಗಿ ಬೀಸುತ್ತಿರುವಾಗ, ವಿಶಿಷ್ಟ ರೀತಿಯ ಪ್ರಯತ್ನವಾಗಿ, ಪ್ಯಾನ್ ಇಂಡಿಯಾ ಕಲಾವಿದರನ್ನು ಬಳಸಿಕೊಂಡು ರೂಪಿಸಲ್ಪಟ್ಟಿರುವ ಚಿತ್ರ `ಸಿಂಹರೂಪಿಣಿ’ (Simha Roopini). ಅಕ್ಟೋಬರ್ ೧೭ರಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವವರು ಕೆ.ಎಂ ನಂಜುಂಡೇಶ್ವರ (Nanjundeshwar). ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆಯನ್ನೂ ಅವರೇ ಒದಗಿಸಿದ್ದಾರೆ. ಸಾಮಾನ್ಯವಾಗಿ, ಸಿನಿಮಾ ನಿರ್ಮಾಣ ಎಂಬುದು ಬ್ಯುಸಿನೆಸ್ ಅಂತಲೇ ಭಾವಿಸಲಾಗುತ್ತದೆ. ಆದರೆ, ಸಿಂಹರೂಪಿಣಿ ನಿರ್ಮಾಣದ ಹಿಂದಿರೋದು ಅಕ್ಷರಶಃ ಭಕ್ತಿ ಎಂಬ ಶಕ್ತಿ. ಈ ಕುರಿತಾದ ಒಂದಷ್ಟು ಮಾಹಿತಿಗಳನ್ನು ಖುದ್ದು ಅವರೇ ತೆರೆದಿಟ್ಟಿದ್ದಾರೆ.

    ದೊಡ್ಡ ಬಳ್ಳಾಪುರದ ಕಲ್ಲುದೇವನಹಳ್ಳಿಯವರು ಕೆ.ಎಂ ನಂಜುಂಡೇಶ್ವರ. ಬದುಕು ಅರಸಿ ಬೆಂಗಳೂರಿಗೆ ಬಂದು ನೆಲೆಗೊಂಡು ಮೂರು ದಶಕಗಳು ಕಳೆದಿವೆ. ಮೆಡಿಕಲ್ ಅಡ್ಮಿನಿಸ್ಟ್ರೇಷನ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂಜುಂಡೇಶ್ವರ ಅವರ ಪಾಲಿಗೆ ಮಾರಮ್ಮದೇವಿ ಆರಾಧ್ಯ ದೇವತೆ. ಅವರ ಬದುಕನ್ನು ಒಂದಷ್ಟು ಸಂಕಷ್ಟಗಳಿಂದ ಪಾರುಮಾಡಿದ ಮಾರಮ್ಮದೇವಿಯ ಆರಾಧಕರಾಗಿಯೂ ಅವರು ಮುಂದುವರೆದು ಬಂದಿದ್ದಾರೆ. ಅವರ ಪಾಲಿಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಬಹು ವರ್ಷಗಳ ಕನಸಾಗಿತ್ತು. ಕಡೆಗೂ ಅದಕ್ಕೊಂದು ಸರಿಕಟ್ಟಾದ ವಾತಾವರಣ ನಿರ್ಮಾಣವಾದ ಘಟ್ಟದಲ್ಲಿ ತನ್ನ ಬದುಕು ಬದಲಿಸಿದ ಮಾರಮ್ಮ ದೇವಿಯ ಕುರಿತಾದ ಸಿನಿಮಾ ನಿರ್ಮಾಣ ಮಾಡಬೇಕೆಂದು ನಂಜುಂಡೇಶ್ವರ ತೀರ್ಮಾನಿಸಿದ್ದರಂತೆ. ಇದಕ್ಕೆ ದೇವಿಯ ಕಡೆಯಿಂದಲೂ ಸಕಾರಾತ್ಮಕ ವಾಗ್ದಾನ ಸಿಗುವ ಮೂಲಕ ಸಿಂಹರೂಪಿಣಿ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು.

    ಆ ನಂತರದಲ್ಲಿ ನಿರ್ದೇಶನಕ್ಕೆ ಕಿನ್ನಾಳ್ ರಾಜ್ ವರಿಂದ ಮೊದಲ್ಗೊಂಡು ಎಲ್ಲ ಆಯ್ಕೆಗಳಿಗೂ ಮಾರಮ್ಮದೇವಿಯ ವಾಗ್ದಾನದ ಮೊರೆ ಹೋಗಲಾಗಿದೆ. ದೇವಿಯ ಆಣತಿಯೊಂದಿಗೇ ಪ್ರತೀ ಹೆಜ್ಜೆಯನ್ನಿಟ್ಟಿರುವ ಧನ್ಯತಾ ಭಾವವೊಂದು ನಿರ್ಮಾಪಕ ನಂಜುಂಡೇಶ್ವರರಲ್ಲಿದೆ. ಈಗೊಂದು ಮೂವತ್ತು ವರ್ಷಗಳ ಹಿಂದೆ ಹಳ್ಳಿ ವಾತಾವರಣವೇ ಬೇರೆಯದ್ದಿತ್ತು. ಇಂಥಾ ದೇವರು, ದೇವಿಯರ ಮಹಾತ್ಮೆಗಳ ಬಗ್ಗೆ ಹಿರೀಕರು ಒಂದಷ್ಟು ಕಥೆಗಳನ್ನು ಹೇಳುತ್ತಿದ್ದರು. ಆ ಮೂಲಕ ನೆಲಮೂಲದ ಕಥಾನಕಗಳು ಹೊಸ ತಲೆಮಾರಿಗೆ ದಾಟಿಕೊಳ್ಳುತ್ತಿದ್ದವು. ಈವತ್ತಿಗೂ ನಮ್ಮ ನಡುವಲ್ಲಿರುವ ನಂಬಿಕೆಗಳು ಹಾಗೆ ಹಿರಿಯರಿಂದ ದಾಟಿಕೊಂಡವುಗಳೇ. ಆದರೀಗ, ಅಂಥಾ ಕಥೆಗಳನ್ನು ಹೇಳುವವರೂ ಇಲ್ಲ. ಕೇಳಲು ಪುರಸೊತ್ತಿರುವವರೂ ಇಲ್ಲ. ಈ ಕೊರತೆ ನೀಗಿಸುತ್ತಲೇ, ನೆಲದ ನಂಟಿನ ಮಾರಮ್ಮದೇವಿಯ ಕಥೆಯನ್ನು ಅಜರಾಮರವಾಗಿಸುವ ಸದುದ್ದೇಶದೊಂದಿಗೆ ಸಿಂಹರೂಪಿಣಿ ಚಿತ್ರವನ್ನು ನಿರ್ಮಾಣ ಮಾಡಿದ್ದಾಗಿ ನಂಜುಂಡೇಶ್ವರ ಹೇಳಿಕೊಳ್ಳುತ್ತಾರೆ.

    ಈ ಸಿನಿಮಾದಲ್ಲಿ ಯಾವುದನ್ನೂ ಅತಿಶಯವೆಂಬಂತೆ ಹೇಳಲಾಗಿಲ್ಲ. ಯಾವ ದೃಷ್ಯಗಳೂ ಡ್ರಾಮಾ ಸ್ವರೂಪ ಪಡೆಯದಂತೆ, ಅತ್ಯಂತ ನೈಜವಾಗಿ ಚಿತ್ರೀಕರಿಸಲಾಗಿದೆಯಂತೆ. ವಿಶೇಷವೆಂದರೆ, ನೈಜ ಘಟನೆಗಳನ್ನೇ ಒಟ್ಟು ಸೇರಿಸಿ, ಅದನ್ನು ಕಮರ್ಶಿಯಲ್ ಹಾದಿಯಲ್ಲಿ ನಿರೂಪಿಸಲಾಗಿದೆಯಂತೆ. ಇದರ ಚಿತ್ರೀಕರಣದ ಹಂತದಲ್ಲಿ ಪ್ರತಿಯೊಬ್ಬರಿಗೂ ರೋಮಾಂಚಕ ಅನುಭವಗಳಾಗಿವೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಂತೂ ಹಲವರಿಗೆ ಶಕ್ತಿಯ ಆವಾಹನೆಯಾದಂತಾಗಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತಂತೆ. ಆ ಹಂತದಲ್ಲಿ ನಡೆದ ಘಟನಾವಳಿಗಳನ್ನು ಮೂರು ಕ್ಯಾಮೆರಾಗಳಲ್ಲಿ ಶೂಟ್ ಮಾಡಿಕೊಂಡು ಅದನ್ನು ಹಾಗೆಯೇ ತೋರಿಸಲಾಗಿದೆ. ಅದರ ಮೂಲಕ ರೋಮಾಂಚನವೊಂದು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳಲಿದೆ. ಅದನ್ನು ಸ್ವೀಕರಿಸುವ ಬಗೆ ಪ್ರೇಕ್ಷಕರಿಗೆ ಬಿಟ್ಟಿದ್ದೆನ್ನುವ ಅಭಿಪ್ರಾಯ ನಂಜುಂಡೇಶ್ವರರದ್ದು.

     

    ಇದು ಪ್ಯಾನಿಂಡಿಯಾ ಭರಾಟೆಯ ಕಾಲ. ಇಂಥಾ ಹೊತ್ತಿನಲ್ಲಿ ದೇವಿಯ ಮೇಲೆ ನಂಬಿಕೆ ಇಟ್ಟು, ಅಪ್ಪಣೆಯೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಧನ್ಯತಾ ಭಾವ ನಂಜುಂಡೇಶ್ವರ ಅವರಲ್ಲಿದೆ. ಓರ್ವ ನಿರ್ಮಾಪಕನಾಗಿ ಪ್ರತಿಯೊಂದರಲ್ಲಿಯೂ ಭಾಗಿಯಾಗಿ, ಒಟ್ಟಾರೆ ಚಿತ್ರವನ್ನು ರೂಪಿಸಿದ  ತೃಪ್ತಿ ಅವರಲ್ಲಿದೆ. ಇದು ಭಕ್ತಿಯಿಂದ ಚಿತ್ರೀಕರಿಸಿರುವ ಸಿನಿಮಾ. ಎಲ್ಲ ವರ್ಗದವರಿಗೂ ಇಷ್ಟವಾಗಬಲ್ಲಂತೆ ಮೂಡಿ ಬಂದಿದೆ. ಬಹು ದಿನಗಳ ನಂತರ ಕುಟುಂಬ ಸಮೇತರಾಗಿ ನೋಡಿ ಮುದಗೊಳ್ಳಬಹುದಾದ ಚಿತ್ರ ಸಿಂಹರೂಪಿಣಿ. ಈ ಸಿನಿಮಾ ನೋಡುವ ಸರ್ವರಿಗೂ ದೇವಿಯ ಕೃಪಾಶೀರ್ವಾದ ಸಿಗುವಂತಾಗಲಿ ಎಂಬ ಸದಾಶಯ ನಂಜುಂಡೇಶ್ವರ ಅವರದ್ದು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಿದೆ.

  • ನಂಜುಂಡೇಶ್ವರನ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ

    ನಂಜುಂಡೇಶ್ವರನ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ

    ಧ್ರುವ ಸರ್ಜಾ ನಟನೆಯ ಕೆಡಿ (KD) ಸಿನಿಮಾದ ಶೂಟಿಂಗ್‍ (Shooting) ಗಾಗಿ ಮೈಸೂರಿಗೆ ಬಂದಿಳಿದಿದ್ದಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty). ಚಿತ್ರೀಕರಣದ ಮಧ್ಯ ಬಿಡುವು ಮಾಡಿಕೊಂಡು ಅವರು ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದಾರೆ.

    ಈ ವರ್ಷ ಧ್ರುವ  ಸರ್ಜಾ ಅಭಿನಯದ ಎರಡು ಬಹು ನಿರೀಕ್ಷಿತ ಚಿತ್ರಗಳು ರಿಲೀಸಾಗುವುದು ಕನ್ ಫರ್ಮ್ ಆಗಿದೆ. ಅದರಲ್ಲಿ ಜೋಗಿ‌ ಪ್ರೇಮ್  ನಿರ್ದೇಶನದ ಕೆಡಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಕಾಣಲಿದೆ ಎಂದು  ನಿರ್ದೇಶಕ ಪ್ರೇಮ್ ಅವರೇ ಪ್ರಕಟಿಸಿದ್ದಾರೆ. ಅತಿದೊಡ್ಡ ತಾರಾಗಣ,  ಅದ್ದೂರಿ ಮೇಕಿಂಗ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ  ಕೆಡಿ  ಚಿತ್ರದ ಆಡಿಯೋ ಹಕ್ಕು ಕೂಡ ಆನಂದ್ ಆಡಿಯೋ ಸಂಸ್ಥೆಗೆ ಸೇಲಾಗಿದೆ. ಇದುವರೆಗೂ ತಮ್ಮ ಚಿತ್ರದ  ಆಡಿಯೋ ಹಕ್ಕು ಎಷ್ಟು ಮೊತ್ತಕ್ಕೆ ಹೋಗಿದೆ ಎಂದು ಯಾವೊಬ್ಬ ನಿರ್ಮಾಪಕರೂ ಹೇಳಿಕೊಂಡಿದ್ದಿಲ್ಲ. ಆದರೆ ಇದೇ ಮೊದಲಬಾರಿಗೆ ನಿರ್ದೇಶಕ ಪ್ರೇಮ್ ತಮ್ಮ ಕೆಡಿ  ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು 17.70 ಕೋಟಿ ರೂ.ಗಳಿಗೆ ತಗೊಂಡಿದ್ದಾರೆ ಎಂದು ಪ್ರಕಟಿಸಿದ್ದಾರೆ,


    ಹೌದು, ಈ ವಿಷಯವನ್ನು ಸ್ವತಃ ಪ್ರೇಮ್ ಅವರೇ ಹೇಳಿದ್ದಾರೆ. ಕೆಡಿ ಚಿತ್ರದ  ವಿಶೇಷ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ  ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ, ವೇದಿಕೆಯಲ್ಲಿ ಚಿತ್ರದ ನಿರ್ದೇಶಕ, ನಾಯಕ, ಸಂಗೀತ ನಿರ್ದೇಶಕ ಸೇರಿ ಎಲ್ಲರೂ ವಿಂಟೇಜ್ ಡ್ರೆಸ್‌ನಲ್ಲಿದ್ದುದು ವಿಶೇಷವಾಗಿತ್ತು. ಏಕೆಂದರೆ ಈ ಚಿತ್ರದ ಕಥೆ ನಡೆಯುವುದು ಎಪ್ಪತ್ತು, ಎಂಭತ್ತರ ದಶಕದಲ್ಲಿ.  ನಿರ್ದೇಶಕ ಪ್ರೇಮ್, ಚಿತ್ರದ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ, ಇನ್ನು ಈ  ಚಿತ್ರದ ಹಾಡುಗಳಿಗೆ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲಬಾರಿಗೆ 256 ಪೀಸ್  ಆರ್ಕೆಸ್ಟ್ರಾ   ಬಳಸಲಾಗಿದೆ,  ಶಾರುಖ್‌ಖಾನ್ ಅಭಿನಯದ ಜವಾನ್ ಚಿತ್ರಕ್ಕೆ ೧೮೦ ಪೀಸ್ ಆರ್ಕೆಸ್ಟ್ರಾ ಬಳಸಲಾಗಿತ್ತು, ಇದೀಗ  ಆ  ದಾಖಲೆಯನ್ನು ಕೆಡಿ ಸಿನಿಮಾ ಮುರಿದಿದೆ.

    ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಪ್ರೇಮ್,  ಕೆಡಿ ಚಿತ್ರಕ್ಕೆ ಈವರೆಗೆ 150 ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಇನ್ನೊಂದು ವಾರದ ಟಾಕಿ ಪೋರ್ಷನ್ ಹಾಗೂ  3 ಹಾಡುಗಳನ್ನು ಶೂಟ್ ಮಾಡಿದರೆ ಚಿತ್ರೀಕರಣ ಮುಗಿದಂತೆ, ನೈಜಘಟನೆ ಆಧಾರಿತ ಈ ಚಿತ್ರಕ್ಕೆ ಇಪ್ಪತ್ತು  ಎಕರೆ ಜಾಗದಲ್ಲಿ ಸೆಟ್ ಹಾಕಿದ್ದೇವೆ, ಚಿತ್ರದಲ್ಲಿ ಆರು ಹಾಡುಗಳಿದ್ದು,  ಆರು ಜನ ಕೊರಿಯಾಗ್ರಾಫರ‍್ಸ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ನಂತರ ಕೆಡಿ ಚಿತ್ರವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರುವುದಾಗಿ ತಿಳಿಸಿದರು. ಅಲ್ಲದೆ  ಆಗಸ್ಟ್ 16ರ ವರಮಹಾಲಕ್ಷ್ಮಿ ಹಬ್ಬದಂದು ಮುಂಬೈನಲ್ಲಿ ಚಿತ್ರದ ಟೀಸರ್ ಹಾಗೂ 24ಕ್ಕೆ ಚಿತ್ರದ ಮೊದಲ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿರುವುದಾಗಿಯೂ ಅವರು ತಿಳಿಸಿದರು.

     

    ನನ್ನ ವಿಐಪಿಗಳಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ನಾಯಕ ಧ್ರುವ, ಮೊದಲು ನಾನು ಕೆವಿಎನ್ ಜೊತೆ ಸೈನ್ ಮಾಡಿದಾಗ  ಯಾರಕೈಲಿ ನಿರ್ದೇಶನ  ಮಾಡಿಸುವುದು ಎಂಬ ಪ್ರಶ್ನೆ ಬಂದಾಗ ಫಸ್ಟ್  ನನ್ನ ಬಾಯಲ್ಲಿ ಬಂದದ್ದು ಪ್ರೇಮ್ ಹೆಸರು, ಅವರು ಸಿನಿಮಾ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ, ನಾವು ಸೆಟ್‌ಗೆ ಹೋದಾಗ ಅವರು ಟೀಚರ್ ಥರ ಇರ್ತಾರೆ, ಅವರೇ ಆಕ್ಟ್ ಮಾಡಿ ತೋರಿಸುತ್ತಾರೆ, ಇದು 1970-75ರಲ್ಲಿ  ಬೆಂಗಳೂರಲ್ಲಿ ನಡೆಯುವ ಕಥೆ, ಇಡೀ ಬೆಂಗಳೂರನ್ನೇ ಸೆಟ್ ಹಾಕಿ ಅವರು, ಇನ್ನೊಂದು ಬೆಂಗಳೂರು ಥರ ಮಾಡಿಬಿಟ್ಟಿದ್ರು, ಚಿತ್ರದ ಬಗ್ಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ವೈಬ್ಸ್ ಬರ‍್ತಾ ಇದೆ, ನಾನು ಕೂಡ ತುಂಬಾ ಎಕ್ಸೂಟ್ ಆಗಿದ್ದೇನೆ ಎಂದು ಹೇಳಿದರು, ಕಾರ್ಯಕಾರಿ ನಿರ್ಮಾಪಕರಾದ ಸುಪ್ರೀತ್ ಮಾತನಾಡಿ ಈ ಸಿನಿಮಾ ಸ್ಟಾರ್ಟ್ ಆಗಲು ಕಾರಣ ಪ್ರೇಮ್, ನಾನು ವೆಂಕಟ್ ಅವರ ಬಳಿ ಚರ್ಚೆ ಮಾಡುತ್ತ `ಧ್ರುವ ಸರ್ಜಾ  ಸಿನಿಮಾನ  ಯಾರಕೈಲಿ ಡೈರೆಕ್ಟ್ ಮಾಡಿಸೋದು ಎಂಬ ಪ್ರಶ್ನೆ ಬಂದಾಗ  ಫಸ್ಟ್ ನೆನಪಾದದ್ದು ಪ್ರೇಮ್. ಜನ್ಯ ಅವರು ನಮ್ಮ ಸಿನಿಮಾಗೆ ಕೊಟ್ಟಷ್ಟು ಟೈಮನ್ನು ಯಾವ ಚಿತ್ರಕ್ಕೂ ಕೊಟ್ಟಿಲ್ಲ ಎಂದು ಹೇಳಿದರು. ಅರ್ಜುನ್ ಜನ್ಯ ಮಾತನಾಡಿ ನನ್ನ ಲೈಫ್ ನಲ್ಲೇ ದ ಬೆಸ್ಟ್ ಸಿನಿಮಾ ಇದು. ಭಾರತದ ಎಲ್ಲ ಬೆಸ್ಟ್ ಮ್ಯುಸಿಶಿಯನ್ಸ್ ಪರ್ ಫಾರ್ಮ್ ಮಾಡಿದ್ದಾರೆ. ಈ ಥರದ ಮ್ಯೂಸಿಕ್ ತೆಗೆಸೋದು ಪ್ರೇಮ್  ಕೈಲಷ್ಟೇ ಸಾಧ್ಯ ಎಂದು ಹೇಳಿದರು,

     

    ಕೆಡಿ ಚಿತ್ರಕ್ಕೆ ಪ್ರೇಮ್ ಅವರೇ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್‌ಅಡಿ ನಿರ್ಮಾಣವಾಗಿರೋ ಈ  ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿಯಂಥ ದಿಗ್ಗಜ ಕಲಾವಿದರು  ನಟಿಸಿದ್ದಾರೆ.  ವಿಲಿಯಂ ಡೇವಿಡ್ ಅವರ  ಛಾಯಾಗ್ರಹಣ  ಕೆಡಿ  ಚಿತ್ರಕ್ಕಿದೆ.

  • ಉತ್ಸವ ಮೂರ್ತಿಗೆ ಎಂಜಲು ನೀರು ಪ್ರಕರಣ- ನಂಜನಗೂಡಲ್ಲಿ ಭಕ್ತರಿಂದ ಪ್ರತಿಭಟನೆ, ಕಣ್ಣೀರಿಟ್ಟ ಅರ್ಚಕ

    ಉತ್ಸವ ಮೂರ್ತಿಗೆ ಎಂಜಲು ನೀರು ಪ್ರಕರಣ- ನಂಜನಗೂಡಲ್ಲಿ ಭಕ್ತರಿಂದ ಪ್ರತಿಭಟನೆ, ಕಣ್ಣೀರಿಟ್ಟ ಅರ್ಚಕ

    ಮೈಸೂರು: ನಂಜುಂಡೇಶ್ವರನ (Nanjanagudu) ಮೂರ್ತಿಗೆ ಎಂಜಲು ನೀರು ಎರಚಿದ ಪ್ರಕಣ ಸಂಬಂಧ ಇಂದು ದೇವಾಲಯದ ಮುಂದೆ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.

    ಶ್ರೀ ಕಂಠೇಶ್ವರ ಭಕ್ತ ಮಂಡಳಿ ವತಿಯಿಂದ ಪ್ರತಿಭಟನೆ ನಡೆದಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ವಿರುದ್ಧ ಪ್ರತಿಭಟನಾಕಾರರು ದಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ.

    ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ (Protest) ನಡೆಸಿದ್ದಾರೆ. ಈ ವೇಳೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪ ಕೂಡ ಮಾಡಿದ್ದಾರೆ.

    ಇತ್ತ ಪ್ರಕರಣ ಸಂಬಂಧ ಮಾತನಾಡುತ್ತಾ ದೇಗುಲದ ಹಿರಿಯ ಅರ್ಚಕ ಶ್ರೀಕಂಠ ದೀಕ್ಷಿತ್ ಮಾತನಾಡುತ್ತಾ ಕಣ್ಣೀರು ಹಾಕಿದರು. ನಾನು 50 ವರ್ಷದಿಂದ ಅರ್ಚಕನಾಗಿದ್ದೇನೆ. ಈಗ ಕಿಡಿಗೇಡಿಗಳು ನೀರನ್ನು ಎರಚಿದ್ದಾರೆ. ನಾಳೆ ಇನ್ನೇನಾದರೂ ಆಗಬಹುದು. ಮುಂದೆ ಜಾತ್ರೆ ಉತ್ಸವಗಳಿದೆ. ಹೀಗಾಗಿ ದೇವಾಲಯಕ್ಕೆ ರಕ್ಷಣೆ ಕೊಡಿ ಎಂದು ಕಣ್ಣೀರಿಡುತ್ತಲೇ ಮನವಿ ಮಾಡಿಕೊಂಡರು.

    ಏನಿದು ಪ್ರಕರಣ..?: ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದರೂ, ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿದೆ.

    ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿ ಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ಇಓ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ದೂರಿನಲ್ಲೇನಿತ್ತು..?: ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನ ಎರಚುವ ಮೂಲಕ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ವಿವರಿಸಿದ್ದೇವೆ. ಆದರೂ ಕೆಲವು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟ್ಲಿಯಿಂದ ನೀರು ಎರಚಿದ್ದಾರೆ. ಇದು ಭಕ್ತಾಧಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಉಲ್ಲೇಖಿಸಿದ್ದರು.

  • ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪ- ಐವರ ವಿರುದ್ಧ ದೂರು

    ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪ- ಐವರ ವಿರುದ್ಧ ದೂರು

    ಮೈಸೂರು: ನಂಜುಂಡೇಶ್ವರ (Nanjundeshwara) ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ ಇದೀಗ ಐವರ ವಿರುದ್ಧ ದೂರು ಕೂಡ ನೀಡಲಾಗಿದೆ.

    ನಡೆದಿದ್ದೇನು..?: ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದಾರೆ. ಆದರೆ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿ ಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ದೂರು ನೀಡಿದ್ದಾರೆ.

    ಘಟನೆ ಸಂಬಂಧ ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ಇಓ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ:  ಕಾಲಿಗೆ ಸರಪಳಿ ಹಾಕಿ ಜೀತಕ್ಕಿಟ್ಟ ಮಾಲೀಕ- ಕಾರ್ಮಿಕನ ರಕ್ಷಣೆ

    ದೂರಿನಲ್ಲೇನಿದೆ..?: ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನ ಎರಚುವ ಮೂಲಕ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ವಿವರಿಸಿದ್ದೇವೆ. ಆದರೂ ಕೆಲವು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟ್ಲಿಯಿಂದ ನೀರು ಎರಚಿದ್ದಾರೆ. ಇದು ಭಕ್ತಾಧಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದಿದ್ದಾರೆ.

  • ನಂಜನಗೂಡು ನಂಜುಂಡೇಶ್ವರನ ಬಳಿ ಯಶ್ ಕೇಳಿದ್ದೇನು?

    ನಂಜನಗೂಡು ನಂಜುಂಡೇಶ್ವರನ ಬಳಿ ಯಶ್ ಕೇಳಿದ್ದೇನು?

    ಶ್ (Yash) ನಯಾ ಯುದ್ಧಕ್ಕೆ ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾದ ಮಾಹಿತಿ ಜಗತ್ತಿನ ಮುಂದೆ ಇಡಲಿದ್ದಾರೆ. ಅಖಾಡ ಸಿದ್ಧವಾಗಿದೆ. ಕುದುರೆ ಏರುವುದೊಂದೇ ಬಾಕಿ. ಅದಕ್ಕೂ ಮುನ್ನ ಮನೆ ದೇವರು ನಂಜುಂಡೇಶ್ವರನ (Nanjundeshwar) ಪಾದಕ್ಕೆ ಶರಣಾಗಿದ್ದಾರೆ. ಮಹಾ ಗೆಲುವಿಗಾಗಿ ಬೇಡಿಕೊಂಡಿದ್ದಾರೆ. ಇನ್ನೇನು ಕೋರಿಕೊಂಡರು ರಾಕಿಭಾಯ್? ನಯಾ ಸಿನಿಮಾ ಘೋಷಣೆ ಯಾವಾಗಂತೆ? ಬಾಲಿವುಡ್‌ಗೆ ಹೋಗಲಿದ್ದಾರಾ ರಾಮಾಚಾರಿ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿವೆ.

    ರಾಕಿಭಾಯ್ ಚಿತ್ತ. ಹೊಸ ಸಿನಿಮಾದತ್ತ. ಈ ಹಿಂದೆ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ. ಈಗ ಮಾಡಲಿರುವ ಚಿತ್ರದ್ದು ಭೂಮಿ ತೂಕ. ಅದಕ್ಕಾಗಿಯೇ ಕಳೆದ ಎರಡು ಮೂರು ವರ್ಷಗಳಿಂದ ಹುಡುಕಿ ಹುಡುಕಿ ಕತೆ ಮಾಡಿಸಿದ್ದಾರೆ. ಈಗಾಗಲೇ ಚಿತ್ರಕತೆ ಒಂದು ಹಂತಕ್ಕೆ ಬಂದಿದೆ. ತಿದ್ದುವಿಕೆ ನಡೆಯುತ್ತಲೇ ಇರುತ್ತದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಟರ್ ಪಟ್ಟದಲ್ಲಿ ಕುಳಿತಿದ್ದಾರೆ. ಒಂದೊಂದು ವಿಭಾಗವೂ ಹಗಲು ರಾತ್ರಿ ಬೆವರು ಸುರಿಸುತ್ತಿದೆ. ಈ ಸಮಯದಲ್ಲಿಯೇ ರಾಕಿಭಾಯ್ ಮನೆ ದೇವರು ನಂಜನಗೂಡು (Nanjangudu) ನಂಜುಂಡೇಶ್ವರನ ಪಾದಕ್ಕೆ ಅಡ್ಡ ಬಿದ್ದಿದ್ದಾರೆ. ದಿವ್ಯ ಗೆಲುವನ್ನು ನೀಡು ಎಂದು ಕೈಮುಗಿದಿದ್ದಾರೆ.

    ಯಶ್ ಬಾಲ್ಯದಿಂದಲೇ ಓಡಾಡಿ ಬೆಳೆದ ಜಾಗ ಈ ನಂಜುಂಡೇಶ್ವರನ ಸನ್ನಿಧಿ. ಮೈಸೂರಿನಿಂದ ಹಬ್ಬ ಹರಿದಿನಗಳಲ್ಲಿ ಅಪ್ಪ ಅಮ್ಮ ಹಾಗೂ ಇಬ್ಬರು ಮಕ್ಕಳು ಈ ದೈವ ದರ್ಶನಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅದನ್ನು ನಿವಾರಿಸು ಭಗವಂತ ಎಂದು ಕೋರುತ್ತಿದ್ದರು. ಡ್ರೈವರ್ ಆಗಿದ್ದ ಅಪ್ಪ. ಮನೆ ಒಡತಿಯಾಗಿದ್ದ ಅಮ್ಮ. ಇಬ್ಬರೂ ಮಕ್ಕಳಿಗೆ ಏನೇನು ಬೇಕೊ ಎಲ್ಲವನ್ನೂ ಕೊಟ್ಟು ಭಾವುಕರಾಗುತ್ತಿದ್ದರು. ಅದೇ ದೇವರ ಮೆಟ್ಟಿಲ ಮೇಲೆ ಇಂದು ಯಶ್ ಮೀಸೆ ತಿರುವುತ್ತಾ ನಿಂತಿದ್ದಾರೆ. ನಂಜುಂಡೇಶ್ವರನ ಅನುಗ್ರಹದಿಂದಲೇ ಈಗ ನ್ಯಾಶನಲ್ ಸ್ಟಾರ್ ಪಟ್ಟದಲ್ಲಿ ಕುಳಿತಿದ್ದಾರೆ.

    ಅದೊಂದು ಕಾಲದಲ್ಲಿ ಅಪ್ಪ ಅಮ್ಮನ ಜೊತೆ ಈ ಸನ್ನಿಧಿಗೆ ಹೋಗುತ್ತಿದ್ದ ಯಶ್ ಈಗ ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳ ಸಮೇತ ಹೋಗುವ ಸಮಯ ಬಂದಿದೆ. ಅಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಕಿ ಈಗ ಕೋಟಿ ಕೋಟಿ ಬೆಲೆ ಬಾಳು ಐಷಾರಾಮಿ ಕಾರಿನಲ್ಲಿ ಹೋಗಿದ್ದಾರೆ. ಇವರಿಗಾಗಿ ವಿಶೇಷ ಪೂಜೆ ಕೂಡ ಮಾಡಲಾಯಿತು. ಕೆಜಿಎಫ್ ಮುಗಿದ ಮೇಲೆ ಯಶ್ ಎಲ್ಲೇ ಸಿಗಲಿ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ. `ಯಾವಾಗ ಹೊಸ ಸಿನಿಮಾ ಅನೌನ್ಸ್ಮೆಂಟ್ ?’ ಅದಕ್ಕೆ ಸಿದ್ಧರಾಗಿಯೇ ಬಂದಂತಿದ್ದ ಯಶ್ ಮತ್ತೆ ಅದೇ ಮಾತನ್ನು ರಿಪೀಟ್ ಮಾಡಿದರು. ಸದ್ಯದಲ್ಲೇ ಎಲ್ಲವನ್ನೂ ತಿಳಿಸುತ್ತೇನೆ ಎಂದರು. ಇದನ್ನೂ ಓದಿ:ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

    ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ಯಾವುದೇ ರೀತಿ ಬೇಸರ ಆಗಬಾರದು. ಅಂಥ ಸಿನಿಮಾಕ್ಕಾಗಿಯೇ ಒಂದು ನಿಮಿಷ ವ್ಯರ್ಥ ಮಾಡದೇ ದುಡಿಯುತ್ತಿದ್ದೇನೆ ಎಂದು ಹೇಳಿ ಇನ್ನಷ್ಟು ಕುತೂಹಲ ಮೂಡಿಸಿದರು. ಈ ನಡುವೆ ತೂರಿ ಬಂದ ಪ್ರಶ್ನೆ ಒನ್ಸ್ ಅಗೇನ್ ಅದೇ. ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರಂತೆ. ಈಗಾಗಲೇ ರಾಮಾಯಣ ತಂಡ ಸಂಪರ್ಕ ಮಾಡಿದೆಯಂತೆ. ಇದೇ ಕೆಲವು ದಿನಗಳಿಂದ ಗಿರಕಿ ಹೊಡೆಯುತ್ತಿತ್ತು. ಹಾಗೆಯೇ ರಜನಿ ಜೊತೆ ಯಶ್ ನಟಿಸಲಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಅದಕ್ಕೆಲ್ಲ ಖಡಕ್ ಉತ್ತರ ಕೊಟ್ಟು ನಕ್ಕರು.

    ಈಗಾಗಲೇ ಯಶ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಜಿಎಫ್ (KGF) ಗೆಲುವು ಸುಮ್ಮನೆ ಬಂದಿಲ್ಲ ಎನ್ನುವುದನ್ನು ಅವರು ಸಾಬೀತು ಪಡಿಸಬೇಕಿದೆ. ಕಾರಣ ಕಣ್ಣ ಮುಂದಿದೆ. ಬಾಹುಬಲಿ ನಂತರ ಟಾಲಿವುಡ್ ಸ್ಟಾರ್ ಪ್ರಭಾಸ್ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಎಲ್ಲವೂ ಅಟ್ಟರ್ ಫ್ಲಾಪ್. ರಾಜಮೌಳಿ ಇದ್ದಿದ್ದಕ್ಕೇ ಬಾಹುಬಲಿ ಗೆದ್ದಿತು ಎನ್ನುವ ಮಾತು ಶುರುವಾಗಿದೆ. ಅದೇ ರೀತಿ ಪ್ರಶಾಂತ್ ನೀಲ್ ಮಾತ್ರ ಗೆಲುವಿಗೆ ಕಾರಣ ಎನ್ನುವಂತೆ ಆಗಬಾರದಲ್ಲವೆ? ಅದಕ್ಕಾಗಿ ಹೊಸ ಸಿನಿಮಾ ಜಗತ್ತಿನ ತುಂಬಾ ಮೆರವಣಿಗೆ ಹೊರಡಬೇಕಿದೆ. ಅದೆಲ್ಲ ಲೆಕ್ಕಾಚಾರ ತಲೆಯಲ್ಲಿ ಇಟ್ಟುಕೊಂಡು ಯಶ್ ಯಾಗಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ.

  • ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – ಭಕ್ತಾದಿಗಳಿಂದ ಹರಿದು ಬಂತು ಕೋಟ್ಯಂತರ ರೂ.

    ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – ಭಕ್ತಾದಿಗಳಿಂದ ಹರಿದು ಬಂತು ಕೋಟ್ಯಂತರ ರೂ.

    ಮೈಸೂರು: ಕೋವಿಡ್-19 ಮಹಾಮಾರಿ ಎಲ್ಲಾ ಉದ್ಯಮಗಳ ಮೇಲೂ ಬಾರಿ ಹೊಡೆತ ಬೀರಿದೆ. ಇದರಿಂದ ಜನರಂತೂ ತತ್ತರಿಸಿ ಹೋಗಿದ್ದಾರೆ. ಹೀಗಿದ್ದರೂ ಕೊರೊನಾ ಸಾಂಕ್ರಮಿಕ ರೋಗದ ನಡುವೆಯೂ ರಾಜ್ಯದ ದೇವಾಲಯಗಳ ಹುಂಡಿಗೆ ಭಕ್ತರಿಂದ ಅಪಾರವಾದ ಹಣ ಸಂಗ್ರಹವಾಗಿದೆ.

    ಇತ್ತೀಚೆಗಷ್ಟೇ ಮಲೆಮಹದೇಶ್ವರ ಬೆಟ್ಟದ ದೇವಾಲಯ ಹುಂಡಿ ಹಣ ಏಣಿಕೆ ಮಾಡಲಾಯಿತು. ಮಹದೇಶ್ವರನಿಗೆ ಭಕ್ತರಿಂದ ಕ್ಯೋಟ್ಯಂತರ ರೂಪಾಯಿ ಹಣ ಹರಿದುಬಂದಿದೆ. ಇದೀಗ ಮೈಸೂರಿನಲ್ಲಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಯಿತು. ಈ ವೇಳೆ ನಂಜುಂಡೇಶ್ವರ ಸನ್ನಿಧಾನಕ್ಕೂ ಒಂದು ಕೋಟಿಗೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.

    ಹೌದು, ಈ ಬಾರಿ ನಂಜುಂಡೇಶ್ವರ ದೇವಾಲಯಕ್ಕೆ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಲ್ಲಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ 1,01,71,910 ರೂ. ಸಂಗ್ರಹವಾಗಿದೆ. ಏಣಿಕೆ ವೇಳೆ 7500 ರೂ ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ಮೌಲ್ಯದ 2 ನೋಟುಗಳು ಹಾಗೂ 500 ಮೌಲ್ಯದ 11 ನಿಷೇಧಿತ ನೋಟುಗಳು ಸಂಗ್ರಹವಾಗಿದೆ. ಅಲ್ಲದೆ 2 ವಿದೇಶಿ ಕರೆನ್ಸಿಗಳು ಕಾಣಿಕೆ ರೂಪದಲ್ಲಿ ಬಂದಿದೆ.

    ಇಲ್ಲಿಯವರೆಗೂ 20ಕ್ಕೂ ಹೆಚ್ಚು ಹುಂಡಿಗಳ ಹಣವನ್ನು 50ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದ್ದಾರೆ. ಜೊತೆಗೆ ಹುಂಡಿಯಲ್ಲಿ 70 ಗ್ರಾಂ ಚಿನ್ನ ಹಾಗೂ 3.5 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ನಂಜುಂಡೇಶ್ವರ ಸ್ವಾಮಿಗೆ ಭಕ್ತರು ಉದಾರವಾಗಿ ಕಾಣಿಕೆ ಸಲ್ಲಿಸಿದ್ದಾರೆ.

  • ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿದ ರಾಕಿಂಗ್ ದಂಪತಿ

    ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿದ ರಾಕಿಂಗ್ ದಂಪತಿ

    ಮೈಸೂರು: ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಳ ಮುಡಿ ತೆಗೆಸಿದ್ದಾರೆ.

    ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಇಂದು ಬೆಳ್ಳಂಬೆಳಗ್ಗೆ ಯಶ್ ಮತ್ತು ರಾಧಿಕಾ ಆಗಮಿಸಿದ್ದರು. ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿ ಹರಕೆ ತೀರಿಸಿದರು. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ದೇವರಿಗೆ ವಂದಿಸಿದರು.

    ಕಳೆದ ವರ್ಷ ಯಶ್ ಹಾಗೂ ರಾಧಿಕಾ ಐರಾಗೆ ಕಿವಿ ಚುಚ್ಚಿಸಿದ್ದರು. ಈ ವೇಳೆ ಯಶ್ ಕಣ್ಣೀರು ಹಾಕಿದ್ದ ವಿಷಯವನ್ನು ರಾಧಿಕಾ ಹಂಚಿಕೊಂಡಿದ್ದರು. ಇನ್‍ಸ್ಟಾದಲ್ಲಿ ರಾಧಿಕಾ, “ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ. ಅವಳು ತುಂಬಾ ಅಳುತ್ತಿದ್ದಾಗ ನಮ್ಮ ಹೃದಯ ಒಡೆದು ಹೋದ ಅನುಭವವಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಆಗ ಈ ಸಂಬಂಧ ಎಷ್ಟು ಸುಂದರ ಎಂಬುದು ತಿಳಿಯಿತು. ಸದ್ಯ ಅಪ್ಪ-ಮಗಳು ಕ್ಷೇಮವಾಗಿದ್ದಾರೆ” ಎಂದು ರಾಧಿಕಾ ಪೋಸ್ಟ್ ಮಾಡಿದ್ದರು.

    ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಅವರಿಗೆ ಯಶ್ ತಾಳಿ ಕಟ್ಟಿದ್ದರು.

    ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು.

  • ನಂಜುಡೇಶ್ವರ ದರ್ಶನ ಪಡೆದ ನಾದಬ್ರಹ್ಮ ಹಂಸಲೇಖ

    ನಂಜುಡೇಶ್ವರ ದರ್ಶನ ಪಡೆದ ನಾದಬ್ರಹ್ಮ ಹಂಸಲೇಖ

    ಚಾಮರಾಜನಗರ/ಮೈಸೂರು: ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಡೇಶ್ವರನ ದೇವಾಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

    ಶುಕ್ರವಾರ ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲ್ಲೆಯಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ-ಹವನ ನಡೆಯುತ್ತಿತ್ತು. ಅದೇ ರೀತಿ ನಗರದ ನಂಜುಡೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಅವರು ದೇವಾಲಯಕ್ಕೆ ಭೇಟಿ ನೀಡಿ ನಂಜುಡೇಶ್ವರನಿಗೆ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರ ಪೂರ್ಣಿಮೆ ಹಾಗೂ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಂಜಗೂಡಿನಲ್ಲಿ ನಂಜುಡೇಶ್ವರನ ರಥೋತ್ಸವ ನಡೆದಿದ್ದು, ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ ರಥೋತ್ಸವ ಮಾಡಿದ್ದಾರೆ. ಭಕ್ತರಿಗೆ ಹಾಗೂ ರಾಜ್ಯದ ಜನತೆ ಒಳಿತಾಗುವಂತೆ ನಂಜುಡೇಶ್ವರನ ರಥೋತ್ಸವ ನರೆವೇರಿದೆ. ಬಳಿಕ ಗ್ರಹಣದ ಹಿನ್ನೆಲೆಯಲ್ಲಿ ರಥೋತ್ಸವದ ನಂತರ ಅರ್ಚಕರು ದೇವಸ್ಥಾನದ ಬಾಗಿಲು ಹಾಕಿದ್ದಾರೆ.

    ಎಂದಿನಂತೆ ಶುಕ್ರವಾರ ರಾತ್ರಿ 8.30ಕ್ಕೆ ದೇವಸ್ಥಾನದ ಬಾಗಿಲು ಬಂದ್ ಆಗಿದ್ದು, ಎಂದಿನಂತೆ ಇಂದು ಬೆಳಗ್ಗೆ 6.00 ಗಂಟೆಗೆ ಅರ್ಚಕರು ದೇವಸ್ಥಾನದ ಬಾಗಿಲು ತೆರೆದಿದ್ದಾರೆ. ದೇವಾಲಯದ ಬಾಗಿಲು ತೆರದ ನಂತರ ಕಪಿಲ ನದಿ ನೀರಿನಿಂದ ದೇವಸ್ಥಾನದ ಶುದ್ಧಿ ಕಾರ್ಯ ಮಾಡಿದ್ದಾರೆ. ಬಳಿಕ ನಂಜುಡೇಶ್ವರನಿಗೆ ವಿವಿಧ ಅಭಿಷೇಕಗಳ ನಂತರ ಮಹಾಮಂಗಳಾರತಿ ನಡೆಯಲಿದೆ.