Tag: ನಂಜಪ್ಪ ಕಾಳೇಗೌಡ

  • ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯನಿಗೆ ಎಲ್ಲಿಯ ರಕ್ಷಣೆ: ಎಎಪಿ

    ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯನಿಗೆ ಎಲ್ಲಿಯ ರಕ್ಷಣೆ: ಎಎಪಿ

    ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯನಿಗೆ ಎಲ್ಲಿಯ ರಕ್ಷಣೆ? ಗೃಹ ಖಾತೆಯನ್ನು ನಿಭಾಯಿಸುವುದರಲ್ಲೇ ವಿಫಲರಾಗಿರುವ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವೇ ಎಂದು ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಪ್ರಶ್ನಿಸಿದರು.

    ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಕಾಳೇಗೌಡ ಅವರು, “ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗುತ್ತಿವೆ. ಮಕ್ಕಳು ಮಹಿಳೆಯರು ಮಾತ್ರವಲ್ಲದೇ ಸಣ್ಣಪುಟ್ಟ ಜನಪ್ರತಿನಿಧಿಗಳು ಕೂಡ ಹೆದರಿಕೆಯಿಂದ ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಶಾಸಕರಿಗೆ ರಕ್ಷಣೆ ಕೊಡಲಾಗದ ಬಿಜೆಪಿ ಸರ್ಕಾರ ಯಾವ ಮಟ್ಟದಲ್ಲಿ ಜನಸಾಮಾನ್ಯನಿಗೆ ರಕ್ಷಣೆ ಕೊಡಲು ಸಾಧ್ಯ? ಇಷ್ಟೆಲ್ಲಾ ಅಪರಾಧಗಳು ನಡೆಯುವಾಗ ಪೊಲೀಸ್ ಇಲಾಖೆ ಯಾವ ಮಟ್ಟಿನ ಭಯವನ್ನು ಕ್ರಿಮಿನಲ್ ಗಳಲ್ಲಿ ಪೊಲೀಸ್ ಇಲಾಖೆ ಇಟ್ಟಿದೆ? ಇಂದು ಮುಖ್ಯಮಂತ್ರಿ ಆಗಿರುವ ಬೊಮ್ಮಾಯಿ ಅವರು ಗೃಹ ಸಚಿವ ಆಗಿದ್ದಾಗ ಅಪರಾಧ ಪ್ರಕರಣಗಳು ಶೇ.20ರಷ್ಟು ಹೆಚ್ಚಾಗಿದೆ ಎಂದು ಬೊಮ್ಮಾಯಿಯವರೇ ಒಪ್ಪಿಕೊಂಡಿದ್ದರು. ಆದರೂ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕ ಠಾಣೆಗಳಲ್ಲಿ  ಪೊಲೀಸರು ಎಫ್‍ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ” ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ – ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಆರಂಭ

    ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಾನೂನಿನ ಮೇಲೆ ಭಯ ಇಲ್ಲದ ಹಾಗೆ ಆಗಿದೆ. ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ, ಪೊಲೀಸ್ ಮೇಲೆ ಹಲ್ಲೆ ನಡೆಯಿತು. ಬಿಜೆಪಿ ಕರ್ಪೊರೇಟರ್ ರೇಖಾ ಖದಿರೇಶ್ ಹತ್ಯೆ ನಡೆಯಿತು. ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಪ್ರಾಣ ಹಾನಿಯಾನಿಯಾಗದೆ ಅನಾಹುತ ತಪ್ಪಿದೆ. ತಮ್ಮ ಶಾಸಕರಿಗೆ ರಕ್ಷಣೆ ಕೊಡಲಾಗದ ಬಿಜೆಪಿ ಸರ್ಕಾರ ಯಾವ ಮಟ್ಟದಲ್ಲಿ ಜನಸಾಮಾನ್ಯನಿಗೆ ರಕ್ಷಣೆ ಕೊಡಲು ಸಾಧ್ಯ? ಇಷ್ಟೆಲ್ಲಾ ಅಪರಾಧಗಳು ನಡೆಯುವಾಗ ಪೊಲೀಸ್ ಇಲಾಖೆ ಯಾವ ಮಟ್ಟಿನ ಭಯವನ್ನು ಕ್ರಿಮಿನಲ್ ಗಳಲ್ಲಿ ಪೊಲೀಸ್ ಇಲಾಖೆ ಇಟ್ಟಿದೆ? ಎಂದು ಪ್ರಶ್ನೆ ಮಾಡಿದರು.

    ಬೆಂಗಳೂರಿನಲ್ಲಿ ಅಲ್ಲಲ್ಲಿ ಲೆಕ್ಕವಿಲ್ಲದಷ್ಟು ಚೈನ್ ಹಾಗೂ ಮೊಬೈಲ್ ಕಳ್ಳತನ ನಡೆಯುತ್ತಿದೆ. ಪೊಲೀಸರು ಈ ಪ್ರಕರಣಗಳನ್ನು ಎಫ್‍ಐಆರ್ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಇಂದು ರಸ್ತೆಗಳಲ್ಲಿ ನಿಂತುಕೊಂಡು ವಾಹನ ಸವಾರರನ್ನು ನಿಲ್ಲಿಸಿ ದಂಡ ಹಾಕಿ ಹಣ ವಸೂಲಿ ಮಾಡುವ ಕೆಲಸದಲ್ಲಿ ನಿರತರಾಗಿದ್ದು ಕಳ್ಳತನ, ಕೊಲೆ ಮೊದಲಾದ ಅಪರಾಧಗಳನ್ನು ತಡೆಯುವ ಕೆಲಸವನ್ನು ಮಾಡುತ್ತಿಲ್ಲ. ಇಲಾಖೆ ಇದ್ದು ಏನು ಪ್ರಯೋಜನ ಎಂದರು.

    ಪತ್ರಿಕಾಗೋಷ್ಠಿಯ ಉಪಸ್ಥಿತರಿದ್ದ ಫಿರೋಜ್ ಅವರು ಮಾತನಾಡಿ, ರಾಜ್ಯದಲ್ಲಿ ಸೈಬರ್ ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ಫೇಸ್ ಬುಕ್‍ನಲ್ಲಿ ನಕಲಿ ಖಾತೆ ತೆರೆದು, ಅವರ ಸ್ನೇಹಿತರಿಗೆಲ್ಲ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ಕೇಳುವ ದೊಡ್ಡ ಜಾಲವಿದೆ. ಸುರೇಶ್ ಕುಮಾರ್ ಸೇರಿದಂತೆ ರಾಜ್ಯದ ಲಕ್ಷಕ್ಕೂ ಅಧಿಕ ಸಾಮಾಜಿಕ ತಾಣ ಬಳಕೆದಾರರು ಇದರಿಂದ ತೊಂದರೆ ಅನುಭವಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಇಂತಹ ಯಾವುದೇ ಪ್ರಕರಣವನ್ನು ಬೇಧಿಸಿಲ್ಲ. ದಕ್ಷತೆಗೆ ಹೆಸರಾಗಿರುವ ಕರ್ನಾಟಕ ಪೊಲೀಸ್ ಇಲಾಖೆ ಇಂದು ಕೈಕಟ್ಟಿ ಕುಳಿತಿದೆ. ಹೀಗೆ ಮುಂದುವರಿದಲ್ಲಿ ಕರ್ನಾಟಕ ಕೂಡ ಇನ್ನೊಂದು ಉತ್ತರ ಪ್ರದೇಶ ಆಗುವುದರಲ್ಲಿ ಅಚ್ಚರಿ ಇಲ್ಲ ಎಂದು ತಿಳಿಸಿದರು.

  • ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಮಹಾದುರಂತದ ಸಮಯದಲ್ಲಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಬೆಡ್ ಬ್ಲಾಕಿಂಗ್ ದಂಧೆಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಾಕಷ್ಟು ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುವ ವಿಷಯ. ಈ ಕೂಡಲೇ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಂಜಪ್ಪ ಕಾಳೇಗೌಡ, ಹಲವು ವರ್ಷಗಳಿಂದ ಇವರ ಬಳಿ ಆಪ್ತ ಸಹಾಯಕನಾಗಿರುವ ಬಾಬು ಎಂಬಾತನನ್ನು ಹಾಗೂ ಇನ್ನಿತರರನ್ನು ಈಗಾಗಲೇ ಕೇಂದ್ರ ಅಪರಾಧ ದಳ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಬಗ್ಗೆ 200ಕ್ಕೂ ಹೆಚ್ಚು ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಹ ಈಗಾಗಲೇ ಸಲ್ಲಿಸಿದೆ. ಈ ಹಿಂದೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಾರ್ ರೂಂಗೆ ನುಗ್ಗಿ ಶಾಸಕರ ಬೆಂಬಲಿಗರು ಬೆಡ್ ಬ್ಲಾಕಿಂಗ್ ದಂಧೆಗೆ ಬೆಂಬಲ ನೀಡುತ್ತಿಲ್ಲವೆಂಬ ಕಾರಣಕ್ಕಾಗಿ ಕಿರಿಯ ಐಎಎಸ್ ಅಧಿಕಾರಿಯೊಬ್ಬರಿಗೆ ಹಲ್ಲೆಯನ್ನು ಸಹ ನಡೆಸಲು ಪ್ರಯತ್ನಿಸಿ ಧಾಂದಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ ದಂಧೆ ಪ್ರಕರಣ – ಸತೀಶ್ ರೆಡ್ಡಿ ಆಪ್ತನ ಬಂಧನಕ್ಕೆ ಸಿಸಿಬಿ ಸಿದ್ಧತೆ

     

    ಶಾಸಕರ ಆಪ್ತ ಸಹಾಯಕ ಶಾಸಕರ ಬೆಂಬಲವಿಲ್ಲದೆ ಇಂತಹ ದುಷ್ಕೃತ್ಯಗಳಲ್ಲಿ ತೊಡಗುವುದು ಖಂಡಿತ ಸಾಧ್ಯವಿಲ್ಲ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಈ ಪ್ರಕರಣದಲ್ಲಿ ಶಾಸಕರ ಪಾತ್ರ ಏನು ಎಂಬುದನ್ನು ಸರ್ಕಾರ ಹಾಗೂ ತನಿಖಾ ಸಂಸ್ಥೆಯು ರಾಜ್ಯದ ಜನತೆಗೆ ಬಹಿರಂಗಗೊಳಿಸಬೇಕಿದೆ. ಕೇವಲ ಸಣ್ಣಪುಟ್ಟ ವ್ಯಕ್ತಿಗಳನ್ನು ಮಾತ್ರ ಬಂಧಿಸಿ ಪ್ರಭಾವಿ ಶಾಸಕರನ್ನು ಕರೆದು ವಿಚಾರಣೆಯನ್ನೂ ಸಹ ಮಾಡಿಲ್ಲ. ಬಿಜೆಪಿ ಸರ್ಕಾರವು ಅವರದೇ ಪಕ್ಷದ ಶಾಸಕನ ಪರ ನಿಂತಿರುವುದು ದೇಶದ ನ್ಯಾಯದಾನ ವ್ಯವಸ್ಥೆಗೆ ಅಪಮಾನ ತರುವ ವಿಷಯವಾಗಿದೆ. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಕೇಸ್ – ಸತೀಶ್ ರೆಡ್ಡಿ ಆಪ್ತ ಅರೆಸ್ಟ್

    ಬೆಡ್ ಬ್ಲಾಕಿಂಗ್ ನಂತಹ ಘೋರಾತಿಘೋರ ಅಪರಾಧ ಕೃತ್ಯದಿಂದ ಈಗಾಗಲೇ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಇವರುಗಳ ಸಾವಿಗೆ ಸೂಕ್ತ ನ್ಯಾಯವನ್ನು ಒದಗಿಸುವ ಇರಾದೆ ಹಾಗೂ ಕಿಂಚಿತ್ತು ಕಾಳಜಿ ಏನಾದರೂ ಸರ್ಕಾರಕ್ಕೆ ಇದ್ದಲ್ಲಿ ಈ ಕೂಡಲೇ ಸತೀಶ್ ರೆಡ್ಡಿ ಅವರನ್ನು ಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಪ್ರಕರಣವು ಪ್ರಭಾವಿಗಳ ಒತ್ತಡದಿಂದ ಸಂಪೂರ್ಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.