Tag: ನಂಜನಗೂಡು

  • ಅಂತೂ ಕಾಂಗ್ರೆಸ್ ಬತ್ತಳಿಕೆ ಸೇರಿತು ಜೆಡಿಎಸ್ ಬ್ರಹ್ಮಾಸ್ತ್ರ

    ಕೆಪಿ ನಾಗರಾಜ್
    ನಂಜನಗೂಡಿನ ಪ್ರಭಾವಿ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವುದು ಅಧಿಕೃತವಾಗಿದೆ. ಯಾವಾಗ ಎಂಬ ದಿನಾಂಕ ಮಾತ್ರ ನಿರ್ಧಾರವಾಗಬೇಕಿದೆ. ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೆ ಪಬ್ಲಿಕ್ ಟಿವಿ ವೆಬ್‍ಸೈಟ್. ಒಂದು ತಿಂಗಳ ಹಿಂದೆಯೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ಈ ಸುದ್ದಿ ಬರೆಯಲಾಗಿತ್ತು. ಇವತ್ತು, ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

    ನಂಜನಗೂಡಿನಲ್ಲಿ ಸಭೆ ನಡೆಸಿದ ಕಳಲೆ ಕೇಶವಮೂರ್ತಿ ತಾವು ತಮ್ಮ ಹಿತೈಷಿಗಳ ಅಭಿಪ್ರಾಯದಂತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಂಜನಗೂಡು ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ವಿರುದ್ಧ ತಾವೇ ಕಾಂಗ್ರೆಸ್‍ನ ಅಭ್ಯರ್ಥಿ ಎಂಬುದನ್ನು ಹೇಳಿದ್ದಾರೆ. ಹೀಗಾಗಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯೋ ಪ್ಲಾನ್ ನಡೆಸಿದ್ದ ಮೂಲ ಕಾಂಗ್ರೆಸಿಗರ ಕನಸಿಗೆ ತಣ್ಣೀರು ಎರಚಿದಂತಾಗಿದೆ.

    ಈ ಉಪ ಚುನಾವಣೆಯಲ್ಲೆ ತಮ್ಮ ಮಗನಿಗೆ ಚುನಾವಣಾ `ಟ್ರಯಲ್’ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ, ಮಹದೇವಪ್ಪ ಅಂದುಕೊಂಡಿದ್ದರು. ಇದಕ್ಕಾಗಿ, ನಂಜನಗೂಡು ಕ್ಷೇತ್ರದ ಹಳ್ಳಿ ಹಳ್ಳಿಯನ್ನು ಸುತ್ತಿದ್ದರು. ಯಾರೇ ಅಭ್ಯರ್ಥಿ ಆದರೂ ತಾವೇ ಓಡಾಟ ಮಾಡಬೇಕು. ಹಣ ವೆಚ್ಚ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ತಮ್ಮ ಮಗನಿಗೆ ಯಾಕೆ ಟಿಕೆಟ್ ಕೊಡಿಸಿ ಒಂದು ಟ್ರಯಲ್ ನೋಡಬಾರದು. ಗೆದ್ದರೆ ಮಗ ಶಾಸಕ, ಸೋತರೆ ಮಗನಿಗೆ ಒಂದು ಕ್ಷೇತ್ರ ಸಿಕ್ಕಂತಾಗುತ್ತೆ. ಜೊತೆಗೆ ಚುನಾವಣೆ ಎದುರಿಸೋ ಅನುಭವವಾಗುತ್ತೆ ಅನ್ನೋದು ಮಹದೇವಪ್ಪ ಅವರ ಪ್ಲಾನ್ ಆಗಿತ್ತು.

    ಆದರೆ, ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಚಿವರ ಮಗ ಸುನೀಲ್‍ಬೋಸ್‍ಗೆ ಟಿಕೆಟ್ ಕೊಡೋ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಶ್ರೀನಿವಾಸಪ್ರಸಾದ್ ಅಂತಹ ಹಿರಿಯ ರಾಜಕಾರಣಿ ಮುಂದೆ ಸುನೀಲ್‍ಬೋಸ್ ಸ್ಪರ್ಧಿಸಿದರೆ ಸೋಲಿನ ಜೊತೆಗೆ ದೊಡ್ಡ ಅವಮಾನ ಎದುರಿಸಬೇಕಾಗುತ್ತೆ. ಹೀಗಾಗಿ, ಸುನೀಲ್‍ಬೋಸ್‍ಗೆ ಟಿಕೆಟ್ ಬೇಡ ಅನ್ನೋ ಕೂಗು ಎದ್ದಿತ್ತು. ಈ ಕೂಗಿಗೆ ಚಾಮರಾಜನಗರ ಸಂಸದ ಧೃವನಾರಾಯಣ್ ಕೂಡ ಧ್ವನಿ ಸೇರಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ, ಮಹದೇವಪ್ಪಗೆ ಮಗನನ್ನು ಕಣಕ್ಕೆ ಇಳಿಸೋ ಯೋಚನೆ ಕೈ ಬಿಡುವಂತೆ ಹೇಳಿದ್ದರು. ಇದರಿಂದ, ಮಹದೇವಪ್ಪ ಬೇಸರಕ್ಕೆ ಒಳಗಾಗಿದ್ದು ಈಗ ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.

    ಪ್ರತಿಷ್ಠೆಯ ಮಹಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿಗಾಗಿ ಕವಡೆ ಬೀಡುತ್ತಿದ್ದ ಸಿಎಂ ಟೀಂ ಈಗ ಯಶಸ್ವಿಯಾಗಿ ಆಪರೇಷನ್ ಕಾಂಗ್ರೆಸ್ ನಡೆಸಿದೆ. ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲು ನಿರ್ಧರಿಸಿದೆ. ಇದನ್ನು ಒಪ್ಪಿದ ಕಳಲೆ ಕೇಶವಮೂರ್ತಿ ಇವತ್ತು ಜೆಡಿಎಸ್‍ಗೆ ಗುಡ್ ಬೈ ಹೇಳಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ, ಶ್ರೀನಿವಾಸಪ್ರಸಾದ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಭಾಗದ ದಲಿತ, ಲಿಂಗಾಯತ ಹಾಗೂ ಒಕ್ಕಲಿಗ ಮತದಾರರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರೋ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಚುನಾವಣೆಯಲ್ಲಿ ಲಾಭವಾಗುತ್ತೆ ಅನ್ನೊ ಲೆಕ್ಕಚಾರ ದಿಂದ ಕಾಂಗ್ರೆಸ್ ಕಳಲೆ ಕೇಶವಮೂರ್ತಿಗೆ ಮಣೆ ಹಾಕಿದೆ.

    ಅಲ್ಲದೆ, ಕಳಲೆ ಕೇಶವಮೂರ್ತಿ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ಇಳಿಯೋ ಕಾರಣ ಜೆಡಿಎಸ್‍ಗೆ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ. ತಮ್ಮ ಬತ್ತಳಿಕೆಯಲ್ಲಿನ ಪ್ರಬಲ ಆಸ್ತ್ರವೇ ಕಾಂಗ್ರೆಸ್‍ಗೆ ಹೋಗಿರೋ ಕಾರಣ ಜೆಡಿಎಸ್ ಮೌನವಾಗಿಯೆ ಕಣದಿಂದ ಹಿಂದೆ ಸರಿಯುತ್ತಾರೆ. ಇದರಿಂದ ಜೆಡಿಎಸ್ ಮತಗಳು ಕೇಶವಮೂರ್ತಿ ವರ್ಚಸ್ಸಿನಿಂದ ಕಾಂಗ್ರೆಸ್‍ಗೆ ಬರುತ್ತೆ ಅನ್ನೋ ಲೆಕ್ಕ ಹಾಕಿಯೇ ಸಿಎಂ ಟೀಂ, ಕಳಲೆ ಕೇಶವಮೂರ್ತಿಯನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ.

    ಅಲ್ಲಿಗೆ, ಕಳೆದ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಯಾರು ಪ್ರಬಲ ಪೈಪೋಟಿ ನೀಡಿದ್ದರೋ ಅವರೆ ಇವತ್ತು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಯೋದು ನಿಶ್ಚಿತ. ಕಾಂಗ್ರೆಸ್‍ನ ಈ ಆಪರೇಷನ್ ಲೆಕ್ಕಚಾರಗಳು ವರ್ಕ್ ಔಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಗೋಕೆ ಇನ್ನೂ ಎರಡು ತಿಂಗಳು ಕಾಯಬೇಕಿದೆ.

  • ನಾನು ಕಾಂಗ್ರೆಸ್‍ಗೆ ಸೇರುತ್ತಿರುವುದು ಯಾಕೆ: ಕೇಶವಮೂರ್ತಿ ಉತ್ತರಿಸಿದ್ದು ಹೀಗೆ

    ಮೈಸೂರು: ನಾನು ಜನರ ಮತ್ತು ಅಭಿಮಾನಿಗಳ ಆಸೆಯಂತೆ ಕಾಂಗ್ರೆಸ್‍ಗೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕಳಲೆ ಕೇಶವಮೂರ್ತಿ ಹೇಳಿದ್ದಾರೆ.

    ಇಂದು ಕೇಶವಮೂರ್ತಿ ಆಪ್ತರು ಮತ್ತು ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯ ನಂತರ ಜೆಡಿಎಸ್ ನಿಂದ ಹೊರ ಬರುತ್ತಿರುವುದಾಗಿ ತಿಳಿಸಿದರು. ಇನ್ನು ಕಲವೇ ದಿನಗಳಲ್ಲಿ ಕೇಶವಮೂರ್ತಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ನಂಜನಗೂಡಿನ ಉಪಚುನಾವಣೆಯಲ್ಲಿ ಕೇಶವಮೂರ್ತಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಆಗುವ ಸಾಧ್ಯತೆಗಳಿವೆ.

    ನಾನು ಸ್ವಾಭಿಮಾನದ ಹೆಸರು ಹೇಳಿಕೊಂಡು ಪಕ್ಷಾಂತರ ಮಾಡುವಂತಹ ವ್ಯಕ್ತಿಯಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ನಾನು ನಂಜನಗೂಡಿನಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದವನು. ಈಗ ಪಕ್ಷ ತೊರೆಯುವ ಪರಿಸ್ಥಿತಿ ಬಂದೊದಗಿದೆ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯತೆ ಎದುರಾಗಿದೆ ಎಂದು ಕೇಶವಮೂರ್ತಿ ತಿಳಿಸಿದರು.

    ಜೆಡಿಎಸ್ ನಿಂದಲೇ ಸ್ಪರ್ಧಿಸಿದರೆ ರಾಜ್ಯ ಸರ್ಕಾರದ ಹಣ ಬಲ, ತೋಳ್ಬಲದ ಮುಂದೆ ಜಯಿಸುವುದು ಕಷ್ಟವಾಗುತ್ತದೆ. ಇದನ್ನು ದೇವೇಗೌಡರಿಗೆ ಹೇಳಿದ್ದೇನೆ. ಅವರು ನನಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕದೇ ನನ್ನ ಗೆಲುವಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದಲೇ ನಾನು ಕಾಂಗ್ರೆಸ್ ನತ್ತ ಮುಖ ಮಾಡಿದ್ದೇನೆ ಎಂದು ಹೇಳಿದರು.

     

  • ರಾಜಹಂಸ ಬಸ್ ಪಲ್ಟಿ- ಇಬ್ಬರು ಪ್ರಯಾಣಿಕರ ಕೈ ತುಂಡು

    ಮೈಸೂರು: ರಾಜಹಂಸ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರ ಕೈಗಳು ತುಂಡಾಗಿರುವ ಘಟನೆ ಜಿಲ್ಲೆಯ ನಂಜನಗೂಡಿನ ಗೋಳೂರು ಕ್ರಾಸ್ ಬಳಿ ನಡೆದಿದೆ

    ಇಂದು ಬೆಳಗಿನ ಜಾವ 4 ಗಂಟೆ ವೇಳೆಯಲ್ಲಿ ಈ ಅವಘಢ ಸಂಭವಿಸಿದೆ. ರಾಜಹಂಸ ಬಸ್ ಪಲ್ಟಿಯಾಗಿದ್ದರಿಂದ ಇಬ್ಬರ ಕೈ ತುಂಡಾಗಿದೆ. ನಾಲ್ವರ ಕೈ ಮೂಳೆ ಮುರಿತವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತದೆ.

    ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಪರಮೇಶ್ವರ್‍ಗೆ ಮಾನ ಮರ್ಯಾದೆ ಇಲ್ವಾ: ವಿಶ್ವನಾಥ್ ಪ್ರಶ್ನೆ

    ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ ಎಂದರೇ ಅರ್ಥವೇನು? ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ಗೆ ಮಾನ ಮರ್ಯಾದೆ ಇಲ್ವಾ ಎಂದು ಮಾಜಿ ಸಂಸದ ವಿಶ್ವನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಒಂದು ಕಾಲದಲ್ಲಿ ಶ್ರೀನಿವಾಸ್ ಪ್ರಸಾದ್ ಗೆದ್ದಿದ್ದು ಕಾಂಗ್ರೆಸ್ ನಿಂದಲೇ, ಈಗ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅಭ್ಯರ್ಥಿ ಇಲ್ಲ ಎಂದು ಜೆಡಿಎಸ್ ನ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ. ಆ ಕಳಲೆ ಇನ್ನೂ ಕಾಂಗ್ರೆಸ್ ಪಕ್ಷವನ್ನು ಸೇರಿಲ್ಲ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುವ ಪರಮೇಶ್ವರ್ ಗೆ ಮಾನ ಮರ್ಯಾದೆ ಇದೆಯಾ ಎಂದು ಅವರು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಎಸ್.ಎಂ.ಕೃಷ್ಣ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಅವರ ಮನಸ್ಸಿಗೆ ನೋವಾಗಿದೆ ಹಾಗೂ ಗೌರವಕ್ಕೆ ಚ್ಯುತಿ ಬಂದಿದೆ ಎಂದು ಕಾಂಗ್ರೆಸ್ ತೊರೆದಿದ್ದಾರೆ. ಅವರ ಆ ಮಾತುಗಳು ಸಾಕಷ್ಟು ಅರ್ಥದಿಂದ ಕೂಡಿವೆ. ಆದರೂ ಕಾಂಗ್ರೆಸ್ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ. ಎಲ್ಲರಿಗೂ ಕಾಂಗ್ರೆಸ್ ಪಕ್ಷ ಅನಿವಾರ್ಯವಿದೆ. ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷ ರಾಷ್ಟ್ರಾಧ್ಯಕ್ಷ ಹಾಗೂ ಪ್ರಧಾನಿ ಮಂತ್ರಿ ಎರಡು ಹುದ್ದೆಯನ್ನು ಬಿಟ್ಟು ಎಲ್ಲವನ್ನು ನೀಡಿದೆ, ಹಾಗೇ ನೋಡಿದರೆ ಕೃಷ್ಣ ಅವರು ಮೂಲ ಕಾಂಗ್ರೆಸಿಗರಲ್ಲ, ನಾನು ಕಾಂಗ್ರೆಸ್ ಮಾತ್ರ ಬಿಡುತ್ತಿದ್ದು ಸಕ್ರೀಯ ರಾಜಕೀಯವನ್ನಲ್ಲ ಎಂಬ ಅವರು ಹೇಳಿಕೆಯಲ್ಲಿ ಬಹಳ ಅರ್ಥವಿದೆ. ಮುಂದೆ ಏನ್ ಆಗುತ್ತೆ ಎನ್ನುವುದನ್ನು ಕಾದು ನೋಡೋಣ ಎಂದು ಹೇಳಿದರು.

    ಜಾಫರ್ ಷರೀಫ್ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರನ್ನು ಏನ್ ಬೇಕಾದರೂ ಟೀಕೆ ಮಾಡಿ, ಆದರೆ ಅವರ ಜಾತಿಯನ್ನು ಟೀಕಿಸಬೇಡಿ. ಇದು ಕಿರುಬ ಸರ್ಕಾರ ಎಂದು ಹೇಳುತ್ತಿರಲ್ಲ, ಆಗಿದ್ದರೆ ಸರ್ಕಾರದಲ್ಲಿ ಎಷ್ಟು ಜನ ಕುರುಬರಿದ್ದಾರೆ ಹಾಗೂ ಎಷ್ಟು ಕುರುಬ ಅಧಿಕಾರಿಗಳಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.