Tag: ಧ್ವಜಾರೋಹಣ

  • 70ನೇ ಗಣರಾಜ್ಯೋತ್ಸವ- ರಾಜ್‍ಪಥ್‍ನಲ್ಲಿ ರಾಷ್ಟ್ರಪತಿಯಿಂದ ಧ್ವಜಾರೋಹಣ

    70ನೇ ಗಣರಾಜ್ಯೋತ್ಸವ- ರಾಜ್‍ಪಥ್‍ನಲ್ಲಿ ರಾಷ್ಟ್ರಪತಿಯಿಂದ ಧ್ವಜಾರೋಹಣ

    ನವದೆಹಲಿ: 70ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ದೆಹಲಿಯ ರಾಜ್‍ಪಥ್‍ನಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಬಾರಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಆಫ್ರೀಕಾದ ಅಧ್ಯಕ್ಷ ಸಿರಿಲ್ ರಾಮಪೋಸಾ ಅವರು ಆಗಮಿಸಿದ್ದಾರೆ. ಹಾಗೆಯೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಅಮರ್ ಜವಾನ್ ಜ್ಯೋತಿ ಬಳಿ ಭಾರತದ ಹೆಮ್ಮೆಯಾಗಿರುವ ಮೂರು ಸೇನಾ ಪಡೆಗಳ ಮುಖ್ಯಸ್ಥರ ಉಪಸ್ಥಿತಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ಇರುವ “ಅಮರ್ ಜವಾನ್ ಜ್ಯೋತಿ” ಬಳಿ ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಯೋಧರಿಗೆ ಪುಷ್ಪ ನಮನ ಸಲ್ಲಿಸಿ, ಎರಡು ನಿಮಿಷ ಹುತಾತ್ಮರಾಗಿರುವರ ಆತ್ಮಕ್ಕೆ ಶಾಂತಿ ದೊರಕಲೆಂದು ಮೌನಾಚರಣೆ ಮಾಡಿದರು. ಹಾಗೆಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಅಮರರಾದ ಭಾರತದ ಯೋಧರಿಗೆ ನಮನ ಸಲ್ಲಿಸಿದರು.

    ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಕೇಂದ್ರ ಸರ್ಕಾರ ವಿಶೇಷವಾಗಿ ಮಹಾತ್ಮ ಗಾಂಧಿ ಅವರ ಪರಿಕಲ್ಪನೆ ಕುರಿತಾದ ಸ್ತಬ್ಧಚಿತ್ರಗಳನ್ನು ರಚಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಹಾಗಾಗಿ ಎಲ್ಲಾ ರಾಜ್ಯಗಳು ಕೂಡ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಂತಹ ವಿವಿಧ ಸ್ತಬ್ಧ ಚಿತ್ರಗಳನ್ನು ಇಂದು ಪ್ರದರ್ಶಿಸಲಿದೆ.

    ರಾಜ್‍ಪಥ್‍ಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಮುಖ್ಯ ಅತಿಥಿ ದಕ್ಷಿಣ ಆಫ್ರೀಕಾದ ಅಧ್ಯಕ್ಷ ರಾಮಪೋಸಾ ಅವರನ್ನು ಮಾನ್ಯ ಪ್ರಧಾನ ಮಂತ್ರಿಯವರು ಸ್ವಾಗತಿಸಿದರು. ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೇರವೇರಿಸಿದರು. ಈ ವೇಳೆ 21 ಕುಶಾಲತೋಪು ಸಿಡಿಸಿ ರಾಷ್ಟ್ರ ಧ್ವಜಕ್ಕೆ ಹಾಗೂ ಭಾರತಾಂಭೆಗೆ ಸೇನಾ ಗೌರವ ಸಲ್ಲಿಸಲಾಯಿತು. ಬಳಿಕ ಭಾರತ ಸೇನೆಯಲ್ಲಿ ಸಾಧನೆ ಮಾಡಿದ ಯೋಧರಿಗೆ ಅತ್ಯುನ್ನತ ಸೇನಾ ಗೌರವ ಅಶೋಕ ಚಕ್ರವನ್ನು ರಾಷ್ಟ್ರಪತಿ ಅವರು ನೀಡಿ ಗೌರವಿಸಿದರು.

    ಲ್ಯಾನ್ಸ್ ನಾಯಕ್ ನಾಜೀರ್ ಅಹಮದ್ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರದಾನ ಮಾಡಲಾಯಿತು. ಈ ಗೌರವವನ್ನು ನಾಜೀರ್ ಅಹಮದ್ ವಾನಿ ಅವರ ಪತ್ನಿ ಹಾಗೂ ತಾಯಿ ಅವರ ಪರವಾಗಿ ಪಡೆದರು. ಬಳಿಕ ಲೆ. ಜನರಲ್ ಅಸಿತ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಈ ಪಥಸಂಚಲದಲ್ಲಿ ಸೇನಾ ಚಕ್ರ ಪಡೆದಿರುವ ಯೋಧರ ಶಿಸ್ತಿನ ಪರೇಡ್ ಹಾಗೂ ಇದೇ ಮೊದಲ ಬಾರಿಗೆ ರಾಜ್‍ಪಥ್‍ ಮಾರ್ಗದಲ್ಲಿ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಅವರ ನೇತೃತ್ವದ 144 ಯೋಧರ ಪರೇಡ್ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಸುಭಾಷ್‍ಚಂದ್ರ ಬೋಸ್ ಅವರು ಸ್ಥಾಪಿಸಿದ ರಾಷ್ಟ್ರೀಯ ಭಾರತೀಯ ಸೇನೆಯ ನಾಲ್ವರು ಭಾಗವಹಿಸಿದ್ದು ವಿಶೇಷವಾಗಿತ್ತು. ಬಳಿಕ ಅಶ್ವದಳ ಪಥಸಂಚಲನ ನಡೆಯಿತು. ನಂತರ ಅರ್ಜುನ್ ಟಿ-90 ಭೀಷ್ಮ ಟ್ಯಾಂಕ್, ಗಡಿಪ್ರತಿರೋಧಿ ವಾಹನ ಪ್ರದರ್ಶಿಸಲಾಯಿತು. ಹಾಗೆಯೇ ಭೂ ಮೇಲ್ಮೈ ಗಣಿ ಸ್ವಚ್ಛತಾ ವ್ಯವಸ್ಥೆಯ ತಂತ್ರಜ್ಞಾನ, ಕೆ-9 ವಜ್ರ ಟ್ಯಾಂಕ್, ಅಲ್ಟ್ರಾ ಲೈಟ್ ಹೌಟ್ಜ್, ಟಿಎಸ್‍ಟಿ ತಂತ್ರಜ್ಞಾನ ಹಾಗೂ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ಸೇನೆ ಪ್ರದರ್ಶಿಸಿತು.

    https://www.youtube.com/watch?v=QmK1zbMMIv4

    https://www.youtube.com/watch?v=QxzTqdy-KS4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಧೋಳದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ

    ಮುಧೋಳದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ

    ಬಾಗಲಕೋಟೆ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಇಂದು ಧ್ವಜಾರೋಹಣ ನೆರವೇರಿಸಲಾಯಿತು.

    ಮುಧೋಳ ನಗರದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಕರ್ನಾಟಕ ಧ್ವಜವನ್ನು ಬಿಟ್ಟು ಹೊಸ ಧ್ವಜವನ್ನು ರಚಿಸಿ ಧ್ವಜಾರೋಹಣ ನಡೆಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ.

    ಸೆಪ್ಟೆಂಬರ್ 23 2018 ರಂದು ಬಾಗಲಕೋಟೆ ನಗರದಲ್ಲಿ ಹೋರಾಟ ಸಮಿತಿ ಸದಸ್ಯರು ಪಂಚನಿರ್ಣಯ ಕೈಗೊಂಡಿದ್ದರು. ಆಗ ಜನವರಿ 1ರಂದು ಪ್ರತ್ಯೇಕ ಧ್ವಜಾರೋಹಣದ ಮಾಡಬೇಕು ಎಂದು ಹೋರಾಟಗಾರರು ನಿರ್ಧರಿಸಿದ್ದರು. ಇಂದು ಧ್ವಜಾರೋಹಣ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಪ್ರತ್ಯೇಕ ಧ್ವಜವು 4 ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ ಉತ್ತರ ಕರ್ನಾಟಕದ ನಕ್ಷೆಯನ್ನು ಒಳಗೊಂಡಿದೆ. ಕೇಸರಿ, ಹಳದಿ, ಹಸಿರು ಬಣ್ಣದ ಮಧ್ಯೆ ನೀಲಿ ವರ್ಣದ ಉತ್ತರ ಕರ್ನಾಟಕ ನಕ್ಷೆಯ ಧ್ವಜವನ್ನು ಅನಾವರಣ ಮಾಡಲಾಗಿದೆ. ಈ ಪ್ರತ್ಯೇಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿದಂತೆ ಇತರೇ ಹೋರಾಟಗಾರರು ಭಾಗಿಯಾಗಿದ್ದರು.

    ಒಟ್ಟು ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳು ಒಳಗೊಂಡ ನಕ್ಷೆಯನ್ನು ಧ್ವಜದ ಮಧ್ಯೆ ರೂಪಿಸಲಾಗಿದೆ. ಹಾಗೆಯೇ ಕೇಸರಿ ಬಣ್ಣ ಧೈರ್ಯ, ಶೌರ್ಯದ ಸಂಕೇತವಾದರೆ, ಹಳದಿ ಹೊಸತನದ ಸಂಕೇತ, ಹಸಿರು ಸಮೃದ್ಧಿಯ ಸಂಕೇತ ಹಾಗೂ ನೀಲಿ ವಿಶಾಲತೆಯ ಸಂಕೇತ ಎಂದು ಹೊಸ ಧ್ವಜದಲ್ಲಿ ಬಳಸಿರುವ ಬಣ್ಣಗಳ ಕುರಿತು ಹೋರಾಟಗಾರರು ತಿಳಿಸಿದರು.

    ಈ ವೇಳೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಭಾಷಣ ಮಾಡಿ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಹೀಗೆ ನೂತನ ಧ್ವಜವನ್ನು ಸೃಷ್ಟಿಸಿ ಧ್ವಜಾರೋಹಣ ಮಾಡಿದ್ದೇವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ. ಆಗ ಇಲ್ಲಿನ ಮನೆ ಮನೆಯಲ್ಲೂ ಈ ಧ್ವಜವನ್ನು ಹಾರಿಸೋಣ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧ್ವಜಾರೋಹಣ ಬಿಟ್ಟು ಚುನಾವಣೆ ಪ್ರಚಾರ ಮಾಡಲು ಹೊರಟ ಜಮೀರ್ ಅಹ್ಮದ್

    ಧ್ವಜಾರೋಹಣ ಬಿಟ್ಟು ಚುನಾವಣೆ ಪ್ರಚಾರ ಮಾಡಲು ಹೊರಟ ಜಮೀರ್ ಅಹ್ಮದ್

    ಹಾವೇರಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡೋದನ್ನ ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉಪಚುನಾವಣೆಯ ಪ್ರಚಾರ ಮಾಡಿದ್ದಾರೆ.

    63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಧ್ವಜಾರೋಹಣ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಆಚರಣೆಯಲ್ಲಿ ಭಾಗಿಯಾಗದೇ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ.

    ಸಚಿವರ ಗೈರಿನಿಂದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮತ್ತು ಇತರ ಅಧಿಕಾರಿಗಳು ಸೇರಿ ಧ್ವಜಾರೋಹಣ ಮಾಡಿದರು. ಈ ಸಂಭ್ರಮದಲ್ಲಿ ಸ್ಥಳಿಯ ಶಾಸಕ ನೆಹೆರು ಓಲೇಕಾರ್ ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಂದ್ಯಾ ಪುಟ್ಟಾ, ಹೋದ್ಯಾ ಪುಟ್ಟಾ- ಶ್ರೀನಿವಾಸ್ ವಿರುದ್ಧ ದಾವಣಗೆರೆ ಜನರ ಆಕ್ರೋಶ

    ಬಂದ್ಯಾ ಪುಟ್ಟಾ, ಹೋದ್ಯಾ ಪುಟ್ಟಾ- ಶ್ರೀನಿವಾಸ್ ವಿರುದ್ಧ ದಾವಣಗೆರೆ ಜನರ ಆಕ್ರೋಶ

    ದಾವಣಗೆರೆ: ಜಿಲ್ಲೆಗೆ ಬಂದು ಧ್ವಜಾರೋಹಣ ನೆರವೇರಿಸಿ, ತುರ್ತಾಗಿ ಮರಳಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ನಡೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಜಿಲ್ಲೆಯ ಉಸ್ತುವಾರಿ ಸಚಿವರೇ ಹೀಗೆ ಮಾಡಿದರೆ ಹೇಗೆ? ಬಂದ್ಯಾ ಪುಟ್ಟಾ, ಹೋದ್ಯಾ ಪುಟ್ಟಾ ಎನ್ನುವಂತೆ ಸಚಿವರು ನಡೆದುಕೊಂಡಿದ್ದಾರೆ. ಜಿಲ್ಲೆಯ ಜವಾಬ್ದಾರಿ ಮರೆತು ತಮ್ಮ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರಕ್ಕೆ ಹೋಗಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಇಂದು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಜಿಲ್ಲೆಗೆ ಭೇಟಿ ನೀಡಿದ ಶ್ರೀನಿವಾಸ್ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಹರಿಹರ ತಾಲೂಕು ಸಮೀಪ ಸಾರಥಿ ಗ್ರಾಮದ ಸೇತುವೆ ವೀಕ್ಷಿಸಿ ವಾಪಸ್ ಹೋಗಿದ್ದಾರೆ. ಮಳೆಯಿಂದಾಗಿ ಜಿಲ್ಲೆಯ ಜನರು ಸಂಕಷ್ಟಕ್ಕ ಸಿಲುಕಿದ್ದಾರೆ, ಇದನ್ನು ಪರಿಶೀಲನೆ ಮಾಡದೇ ಕೇವಲ ಸಾರಥಿ ಗ್ರಾಮದ ಸೇತುವೆ ವೀಕ್ಷಿಸಿ ಮರಳಿದ ಶಾಸಕರ ವಿರುದ್ಧ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದರು.

    ಹೊನ್ನಾಳಿ ತಾಲೂಕಿನಲ್ಲಿ ನೆರೆಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ನದಿ ಪಾತ್ರದ 50 ಕ್ಕೂ ಹೆಚ್ಚು ಮನೆ ಜಲಾವೃತಗೊಂಡಿದೆ. ಶಾಲೆ, ಸರ್ಕಾರಿ ಕಟ್ಟಡಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಭತ್ತ, ಅಡಕೆ ಹಾಳಾಗಿದೆ. ಇತ್ತ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನವು ನಡುಗಡ್ಡೆಯಂತಾಗಿದೆ. ಹರಪನಹಳ್ಳಿ ತಾಲೂಕಿನ ನಿಟ್ಟೂರು, ನಂದ್ಯಾಲ, ಹಲುವಾಗಲು ಗ್ರಾಮಗಳಿಗೆ ಹಾಗೂ ಬೆಳೆ ಹಾನಿ ಇದ್ದ ನೂರಾರು ಎಕರೆ ಗದ್ದೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯ ಜನರ ಸಮಸ್ಯೆಯನ್ನು ಆಲಿಸದೆ ಸಚಿವರು ತೆರಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರಿನ ಮಧ್ಯೆ ನಿಂತು ಧ್ವಜಾರೋಹಣ ನೆರವೇರಿಸಿದ ಗ್ರಾಮಸ್ಥರು

    ನೀರಿನ ಮಧ್ಯೆ ನಿಂತು ಧ್ವಜಾರೋಹಣ ನೆರವೇರಿಸಿದ ಗ್ರಾಮಸ್ಥರು

    ಮಡಿಕೇರಿ: ಇಂದು ನಾಡಿನಾದ್ಯಂತ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ. ಕಳೆದ ಹಲವು ದಿನಗಳಿಂತ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಮಳೆ ನೀರನ ಮಧ್ಯೆಯೇ ಕೊಡಗಿನ ಗ್ರಾಮಸ್ಥರು ಧ್ವಜಾರೋಹಣ ನೆರವರಿಸಿದ್ದಾರೆ.

    ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮಸ್ಥರು ಮಳೆ ನೀರಿನ ಮಧ್ಯೆಯೇ ಧ್ವಜ ಹಾರಿಸಿ ದೇಶ ಪ್ರೇಮ ಮೆರೆದಿದ್ದಾರೆ. ಬೇತ್ರಿ ಮಸೀದಿಯಲ್ಲಿ ತೆಪ್ಪದ ಸಹಾಯದಿಂದ ಧ್ವಜ ಕಂಬದ ಹತ್ತಿರ ಹೋಗಿ ಸ್ಥಳೀಯರು ತಿರಂಗ ಧ್ವಜ ಹಾರಿಸಿದ್ದಾರೆ.

    ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ಪ್ರವಾಹದ ಸ್ಥಿತಿ ಎದುರಾಗಿದೆ. ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಪಂಚಾಯತಿ ವ್ಯಾಪ್ತಿಯ ನಿವಾಸಿ ಚಂಗಪ್ಪನವರ ಶೆಡ್ ಕುಸಿದ ಪರಿಣಾಮ ನಿಲ್ಲಿಸಿದ್ದ ಕಾರು, ಜೀಪು, ಬೈಕ್, ಟಿಲ್ಲರ್ ಸಂಪೂರ್ಣ ಜಖಂಗೊಂಡಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಸಮೀಪದ ಗುಡ್ಡೆಯಲ್ಲಿ ನೀರು ಹರಿಯಲಾರಂಭಿಸಿದ ಪರಿಣಾಮ ಗುಡ್ಡೆ ಕುಸಿತಗೊಂಡಿದೆ.

    ಗುಡ್ಡ ಕುಸಿದು ಕಾಂಪೌಂಡ್ ಮೇಲೆ ಬಿದ್ದ ಪರಿಣಾಮ ಶೆಡ್ ನಲ್ಲಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿದೆ. ಆದ್ರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ತೆರಳಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಮಹಜರು ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಭರವಸೆ ನೀಡಿದ್ದಾರೆ. ಅಂದಾಜು 7 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

    ಹಾರಂಗಿ ಜಲಾಶಯದಿಂದ 20 ಸಾವಿರಕ್ಕೂ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕುಶಾಲನಗರ ಅನೇಕ ಬಡಾವಣೆ ನೀರಿನಲ್ಲಿ ಮುಳುಗಡೆಯಾಗಿದೆ. ಸುಮಾರು 60 ಮನೆಗಳಿಗೆ ಜಲಾವೃತವಾಗಿದ್ದು, ಗಂಜಿಕೇಂದ್ರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಕೊಡಗಿಗೆ ರಕ್ಷಣಾ ತಂಡ ಬಂದಿದ್ದು, ಸುಮಾರು 30 ಜನರ ಎನ್ ಡಿ ಆರ್ ಎಫ್ ತಂಡ ಬೋಟ್ ಗಳ ಮೂಲಕ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಕೊಪ್ಪಳ: ಭೋರ್ಗರೆದು ಹರಿಯುತ್ತಿರುವ ನದಿಯಲ್ಲಿ ಹುಲಗಿ ಗ್ರಾಮದ ಯುವಕರು ಹುಚ್ಚು ಸಾಹಸ ಮಾಡಿ ಧ್ವಜವನ್ನು ಹಾರಿಸಿದ್ದಾರೆ.

    ಯುವಕರು ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರ ನದಿಯಲ್ಲಿ ಈಜಿ, ನದಿಯ ಮಧ್ಯದಲ್ಲಿ ಕಲ್ಲುಗಳನ್ನು ಜೋಡಿಸಿ ಧ್ವಜವನ್ನು ನೆಟ್ಟಿದ್ದಾರೆ.

    ಈ ದೃಶ್ಯವನ್ನು ನೋಡುತ್ತಿದ್ದ ಗ್ರಾಮಸ್ಥರು ಸಾಹಸ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ಯುವಕರು ನದಿಯ ಮಧ್ಯದಲ್ಲೇ ಧ್ವಜವನ್ನು ಹಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ರೀತಿ ಸಾಹಸ ಮಾಡಿ ದೇಶ ಪ್ರೇಮ ತೋರಿಸುವ ಅಗತ್ಯವಿಲ್ಲ. ಹೆಚ್ಚು ಕಡಿಮೆಯಾಗಿ ಪ್ರಾಣಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೀವು ರಾಷ್ಟ್ರ ಧ್ವಜವನ್ನು ಹಾರಿಸದೇ ಇದ್ದರೂ ಬೇಸರವಿಲ್ಲ. ಆದರೆ ದಯವಿಟ್ಟು ಈ ರೀತಿಯ ಹುಚ್ಚು ಸಾಹಸವನ್ನು ಯಾರು ಮಾಡಲು ಹೋಗಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾಭದ್ರ ನದಿಯು ಅಪಾಯದಮಟ್ಟವನ್ನು ಮೀರಿ ಹರಿಯುತ್ತಿದೆ. ಈಗಾಗಲೇ ತುಂಗಭದ್ರಾ ಜಲಾಶಯವು ಸಹ ತುಂಬಿದ್ದು, ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ವಾಸ್ತುಪ್ರಕಾರ ರೇವಣ್ಣ ಧ್ವಜಾರೋಹಣ!

    ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ವಾಸ್ತುಪ್ರಕಾರ ರೇವಣ್ಣ ಧ್ವಜಾರೋಹಣ!

    ಹಾಸನ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ರೇವಣ್ಣ ಎಂದಿನಂತೆ ತಮ್ಮ ವಾಸ್ತು ವಿಶೇಷತೆಯಿಂದ ಗಮನ ಸೆಳೆದಿದ್ದಾರೆ. ಖುದ್ದು ಎಸ್ಪಿಯವರ ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ಚಪ್ಪಲಿ ಬಿಟ್ಟು ಧ್ವಜಾರೋಹಣ ನಡೆಸಿದರು.

    ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ದಶಕದ ನಂತರ ಹಾಸನ ಜಿಲ್ಲೆಯಲ್ಲಿ ಧ್ಜಜಾರೋಹಣ ನೇರವೇರಿಸಿದರು. ಈ ಮೊದಲು 2007 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಧ್ವಜಾರೋಹಣ ಮಾಡಿದ್ದರು. ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸಲಾಗಿತ್ತು.

    ಸಮಯಕ್ಕೆ ಮೊದಲೇ ಬಂದಿದ್ದ ರೇವಣ್ಣ ನಿರ್ದಿಷ್ಟ ಸಮಯಕ್ಕೆ ಕಾದು, ಒಂದು ಸೆಕೆಂಡ್ ಕೂಡ ಹೆಚ್ಚು ಕಡಿಮೆ ಆಗದಂತೆ ನಿಗಾವಹಿಸಿದ್ದರು. ಅಲ್ಲದೇ ಪಕ್ಕದಲ್ಲಿ ನಿಂತಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಬಳಿ ಸಮಯ ಸರಿಯಾಗಿದ್ದನ್ನು ಸ್ಪಷ್ಟಪಡಿಸಿಕೊಂಡು ಬಳಿಕ, ಚಪ್ಪಲಿ ಬಿಟ್ಟು ಧ್ವಜಾರೋಹಣ ಮಾಡಿದರು. ಸಾಮಾನ್ಯವಾಗಿ ಪಂಚೆ ಧರಿಸುವ ರೇವಣ್ಣನವರು ಇಂದು ಪ್ಯಾಂಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಬಿಜೆಪಿ ನಾಯಕ ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿ, ಈಶ್ವರಪ್ಪನವರು ಹೇಳಿದ್ದ ಅಧಿಕಾರಿಗಳನ್ನೂ ಸಹ ನಾನು ವರ್ಗ ಮಾಡಿಕೊಟ್ಟಿದ್ದೇನೆ. ಆ ಅಧಿಕಾರಿಗಳೇನಾದರೂ ನನಗೆ ಹಣ ಕೊಟ್ಟಿದ್ದಾರೆಯೇ ಎಂಬುದನ್ನು ಬಹಿರಂಗ ಪಡಿಸಲಿ. ಅವರೊಬ್ಬ ಪ್ರತಿಪಕ್ಷ ನಾಯಕರು, ಏನೇ ಮಾತನಾಡಿದರು ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲವಾದರೆ ಅವರ ಹೇಳಿಕೆಗಳು ಪೊಳ್ಳಾಗಿ ಹೋಗುತ್ತದೆ ಎಂದು ಲೇವಡಿ ಮಾಡಿದರು.

    ಈ ವೇಳೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಒಂದು ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರೇ ಈ ಬಗ್ಗೆ ಖುದ್ದು ಪರಿಶೀಲಿಸಲಿ. ನಾನು ಯಾವುದೇ ದುರುದ್ದೇಶದಿಂದ ಯಾರ ಮೇಲೆಯೂ ಕೇಸು ದಾಖಲಿಸಿಲ್ಲ. ಅಲ್ಲದೇ ಯಾರನ್ನೂ ಸಹ ಜೈಲಿಗೆ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಾತಂತ್ರ್ಯ ದಿನಾಚರಣೆಯಂದು ಮಾನವೀಯತೆ ಮೆರೆದ ಬೆಂಗ್ಳೂರಿನ ಟೆಕ್ಕಿ-ನಗರದ ಹಲವೆಡೆ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ

    ಸ್ವಾತಂತ್ರ್ಯ ದಿನಾಚರಣೆಯಂದು ಮಾನವೀಯತೆ ಮೆರೆದ ಬೆಂಗ್ಳೂರಿನ ಟೆಕ್ಕಿ-ನಗರದ ಹಲವೆಡೆ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ

    -ಹಸಿರು ಬಿಳಿ ಕೇಸರಿ ಲೈಟಿಂಗ್ ನಿಂದ ಕಂಗೊಳಿಸಿದ ಬ್ರಿಗೇಡ್ ರೋಡ್
    -ಕೋರಮಂಗಲದಲ್ಲಿ ಪಂಜಿನ ಮೆರವಣಿಗೆ

    ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಟೆಕ್ಕಿ ಹಾಗು ಉದ್ಯಮಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಬಡವರು, ಭಿಕ್ಷುಕರು ಹಾಗೂ ಬೀದಿ ಬದಿ ಮಲಗವರಿಗೆ ಬ್ಲಾಂಕೆಟ್, ಹಾಸಿಗೆ ವಿತರಿಸಿದ್ದಾರೆ. ಟೆಕ್ಕಿ ಕಾರ್ತಿಕ್ ಹಾಗೂ ಉದ್ಯಮಿ ವಿನೋದ್ ತಮ್ಮ ಕೈಲಾದ ಸಹಾಯವನ್ನು ಸ್ವತಂತ್ರ ದಿನದಂದು ಮಾಡಿದ್ದಾರೆ.

    ಯಶವಂತಪುರ ರೈಲ್ವೇ ನಿಲ್ದಾಣ ಸುತ್ತಮುತ್ತ ಇರೋ ಭಿಕ್ಷುಕರಿಗೆ ಬ್ಲಾಂಕೆಟ್ ,ಹಣ್ಣು ಹಂಪಲು, ಊಟ ಹೊದಿಕೆ ವಿತರಣೆ ಮಾಡಿದ್ರು. ಅಲ್ಲದೇ ಫೂಟ್ ಪಾತ್ ಮೇಲೆ ಮಲಗೋ ಬಡವರಿಗೂ ಬ್ಲಾಕೇಟ್ ವಿತರಣೆ ಮಾಡಿ ಸಾರ್ಥಕತೆ ಮೆರೆದರು. ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ಮಾನವೀಯತೆ ಮೆರೆಯುತ್ತಿರುವ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

    ಮಧ್ಯರಾತ್ರಿ 12 ಗಂಟೆಗೆ ನಗರದ ಬನ್ನಪ್ಪ ಪಾರ್ಕ್ ನಲ್ಲಿ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು. ಹಿಂದೂ ಜಾಗರಣ ವೇದಿಕೆ ಅಖಂಡ ಭಾರತ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ರು. ಸ್ವಾಮಿ ಪರಮಾನಂದ ಸ್ವಾಮೀಜಿಗಳು ಹಾಗು ನೂರಾರು ಕಾರ್ಯಕರ್ತರು, ಸಾರ್ವಜನಿಕರ ಸಮ್ಮುಖದಲ್ಲಿ 12 ಗಂಟೆಗೆ ಸರಿಯಾಗಿ ಧ್ವಜಾರೋಹಣ ಮಾಡಲಾಯಿತು.

    ಬ್ರಿಗೇಡ್ ರೋಡ್ ನಲ್ಲಿ ಹಸಿರು, ಬಿಳಿ, ಕೇಸರಿ ಲೈಟಿಂಗ್ ನಿಂದ ಅಲಂಕರಿಸಲಾಗಿದೆ. ಮೊದಲ ಬಾರಿಗೆ ಬ್ರಿಗೇಡ್ ರೋಡ್ ನ ದೀಪಾಂಲಕರ ಮಾಡಿದ್ದು ಎಲ್ಲರನ್ನು ಸೆಳೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದ ಧ್ವಜ ಬಣ್ಣದ ರೀತಿಯ ಲೈಟ್ ಗಳನ್ನು ಹಾಕಿ ವಿಶೇಷವಾಗಿ ಶೃಂಗರಿಸಲಾಗಿದೆ. ಕೋರಮಂಗಲ ಬಳಿಯಿರುವ ಟೀಚರ್ಸ್ ಕಾಲೋನಿಯಲ್ಲಿ ತಡರಾತ್ರಿ 12 ಗಂಟೆಗೆ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯ್ತು. ‘ನಮ್ಮ ಟೀಚರ್ಸ್’ ಸಂಘದ ವತಿಯಿಂದ ವಿಶೇಷವಾಗಿ ಪಂಜು ಮೆರವಣಿಗೆ ಮುಖಾಂತರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಕ್ಕಳು ಸೇರಿದಂತೆ ಮಹಿಳೆಯರು, ಸಾರ್ವಜನಿಕರು ಪಂಜು ಹಾಗೂ ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣರಾಜ್ಯೋತ್ಸವದಂದು ಕೊಪ್ಪಳದಲ್ಲಿ ಎಡವಟ್ಟು- ತಲೆಕೆಳಗಾಗಿ ಹಾರಿದ ರಾಷ್ಟ್ರ ಧ್ವಜ

    ಗಣರಾಜ್ಯೋತ್ಸವದಂದು ಕೊಪ್ಪಳದಲ್ಲಿ ಎಡವಟ್ಟು- ತಲೆಕೆಳಗಾಗಿ ಹಾರಿದ ರಾಷ್ಟ್ರ ಧ್ವಜ

    ಕೊಪ್ಪಳ: 69ನೇ ಗಣರಾಜ್ಯೋತ್ಸವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ಈ ಜಿಲ್ಲೆಯಲ್ಲಿ ಆರಂಭದ ಮೊದಲೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿಕೊಂಡಿದೆ.

    ಜಿಲ್ಲೆಯ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಈ ಎಡವಟ್ಟು ಮಾಡಿಕೊಂಡಿದ್ದು, ಧ್ವಜವನ್ನು ಉಲ್ಟವಾಗಿ ಹಾರಿಸಲಾಗಿದೆ. ದೇಶದ ಎಲ್ಲಾ ಭಾಗದಲ್ಲೂ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರದ ಹಿರಿಮೆಯ ಪ್ರತೀಕವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜವನ್ನು ಶ್ಲಾಘಿಸಲಾಗುತ್ತದೆ. ಆದರೆ ಈ ಕಾಲೇಜಿನಲ್ಲಿ ಪ್ರಾಚಾರ್ಯ ನಿರ್ಲಕ್ಷ್ಯದಿಂದ ಧ್ವಜವನ್ನು ಉಲ್ಟಾ ಹಾರಿಸಿದ್ದಾರೆ.

    ಗಣರಾಜ್ಯೋತ್ಸವ ದಿನದಂದೇ ತಲೆಕೆಳಗಾಗಿ ಧ್ವಜಾರೋಹಣ ಮಾಡಿದ್ದರಿಂದ ರಾಷ್ಟ್ರ ಧ್ವಜ್ಕಕೆ ಅಪಮಾನ ಮಾಡಿದಂತಾಗಿದೆ. ಆದರೆ ತಕ್ಷಣ ಮತ್ತೆ ಧ್ವಜವನ್ನು ಸರಿ ಮಾಡಿ ಉಪನ್ಯಾಸಕರು ದ್ವಜಾರೋಹಣ ನೇರವೇರಿಸಿದ್ದಾರೆ.

  • ಈ ಫೋಟೋವನ್ನ ನೀವೂ ಶೇರ್ ಮಾಡಿದ್ರಾ? ಹಾಗಿದ್ರೆ ಈ ಸುದ್ದಿ ಓದಿ

    ಈ ಫೋಟೋವನ್ನ ನೀವೂ ಶೇರ್ ಮಾಡಿದ್ರಾ? ಹಾಗಿದ್ರೆ ಈ ಸುದ್ದಿ ಓದಿ

    ಗುವಾಹಾಟಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರವಾಹ ಪೀಡಿತ ಅಸ್ಸಾಂನ ಸರ್ಕಾರಿ ಶಾಲೆಯೊಂದರಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆ ನಿಂತು ಧ್ವಜಾರೋಹಣ ಮಾಡಿದ್ದರು. ಶಿಕ್ಷಕರು ಹಾಗೂ ಮಕ್ಕಳು ನೀರಿನ ಮಧ್ಯೆ ನಿಂತು ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ರಾಷ್ಟ್ರೀಯ ಹಾಗೂ ಕೆಲವು ಅಂತಾರಾಷ್ಟ್ರೀಯ ವೆಬ್‍ಸೈಟ್‍ಗಳಲ್ಲೂ ವರದಿಯಾಗಿತ್ತು. ಇದೀಗ ಈ ಫೋಟೋ ತೆಗೆದಿದ್ದು ಯಾಕೆ ಎಂಬ ಸತ್ಯ ಬಯಲಾಗಿದೆ.

    ರಾಜ್ಯದ ನಿಯಮದ ಪ್ರಕಾರ ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಫೋಟೋಗಳ ಸಮೇತ ದಾಖಲು ಮಾಡಬೇಕು. ಹಾಗೇ ಈ ಫೋಟೋವನ್ನ ಗುವಾಹಾಟಿಯ ರಾಜ್ಯ ಶಿಕ್ಷಣ ಇಲಾಖೆಗೆ ಕಳುಹಿಸುವ ಸಲುವಾಗಿ ತೆಗೆಯಲಾಗಿತ್ತು. ಫೋಟೋದಲ್ಲಿ ಕಾಣುವ ಇಬ್ಬರು ವಿದ್ಯಾರ್ಥಿಗಳಿಗೆ ಈಜು ಬರುತ್ತಿದ್ದ ಕಾರಣ ಅವರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನಾಲ್ವರು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಗೂ ವಂದೇಮಾತರಂ ಹಾಡಿದ್ದು, ಉಳಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಹೊರಗೆ ನಿಂತು ವೀಕ್ಷಿಸಿದ್ರು ಎಂದು ವರದಿಯಾಗಿದೆ.

    ಇಲ್ಲಿನ ಧುಬ್ರಿ ಜಿಲ್ಲೆಯ ದಿ ನಸ್ಕಾರಾ ಲೋವರ್ ಪ್ರೈಮರಿ ಸ್ಕೂಲ್ ನ ಮುಖ್ಯ ಶಿಕ್ಷಕ ತಝೀಮ್ ಸಿಕ್ದರ್ ಹಾಗೂ ಸಹೋದ್ಯೋಗಿಗಳಾದ ಸ್ರಿಪೆನ್ ರಬಾ, ಜಾಯ್‍ದೇವ್ ರಾಯ್, ಮಿಜಾನುರ್ ರೆಹ್‍ಮಾನ್ ಪ್ರವಾಹದ ಮಧ್ಯೆಯೂ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ತೀರ್ಮಾನಿಸಿದ್ರು. ಇಬ್ಬರು ವಿದ್ಯಾರ್ಥಿಗಳಾದ ಜಿಯಾರುಲ್ ಸಲಿ ಖಾನ್ ಮತ್ತು ಹೈದರ್ ಸಲಿ ಖಾನ್‍ನನ್ನು ಫೋಟೋದಲ್ಲಿ ಕಾಣಬಹುದು. ಶಾಲೆಯ ಶಿಕ್ಷಕರಾದ ಮಿಜಾನುರ್ ರೆಹಮಾನ್ ಈ ಫೋಟೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿತ್ತು.

    ಎರಡು ದಿನಗಳ ನಂತರ ಅವರು ಮತ್ತೊಮ್ಮೆ ಈ ಬಗ್ಗೆ ಪೋಸ್ಟ್ ಮಾಡಿದ್ದು, ಈ ಭಾಗದ ಎಲ್ಲಾ ಜನರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರವಾಹದ ನಡುವೆಯೂ ನೀವು ನಿಮ್ಮ ನಿಜವಾದ ದೇಶಭಕ್ತಿ ಹಾಗೂ ದೇಶದ ಮೇಲಿನ ಪ್ರೀತಿ ವ್ಯಕ್ತಪಡಿಸುವುದನ್ನ ಮರೆಯಲಿಲ್ಲ. ದೇಶದ ಮೇಲಿನ ಪ್ರೀತಿ ಹಾಗೂ ಬದ್ಧತೆಗೆ ಈ ಯಶಸ್ಸೇ ಪ್ರತಿಬಿಂಬ ಎಂದು ಅವರು ಪೋಸ್ಟ್ ಮಾಡಿದ್ದಾರೆ.

    ಆದ್ರೆ ಮತ್ತೊಂದು ವಿಷಾದಕರ ಸಂಗತಿಯೆಂದರೆ ರೆಹಮಾನ್ ಅವರು ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿದ ಕೆಲವೇ ಗಂಟೆಗಳಲ್ಲೇ ಅವರ 18 ವರ್ಷದ ಸಹೋದರ ಸಂಬಂಧಿ ರಶೀದುಲ್ ಇಸ್ಲಾಂ ಫಕೀರ್‍ಗಂಜ್‍ನಲ್ಲಿ ಮುಳುಗಿಹೋಗಿದ್ದರು. ಇಸ್ಲಾಂ ಅವರು ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಈ ವೈರಲ್ ಫೋಟೋದಿಂದಾದ್ರೂ ಪ್ರಾವಹ ಪೀಡಿತ ಧುಬ್ರಿಯ 484 ಗ್ರಾಮಗಳತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಾರೆ ಎಂದು ರೆಹಮಾನ್ ಅವರ ಕುಟುಂಬ ನಂಬಿದೆ.

    https://www.facebook.com/mizanur.rahman.50552/videos/pcb.1789351124426262/1789349987759709/?type=3&theater

    https://www.facebook.com/mizanur.rahman.50552/videos/pcb.1789351124426262/1789354911092550/?type=3&theater

    https://www.facebook.com/photo.php?fbid=1790020037692704&set=a.436854836342571.115881.100000541760233&type=3&theater

    https://www.facebook.com/mizanur.rahman.50552/posts/1791323744229000