Tag: ಧ್ಯಾನ

  • ಡಯಟ್, ಧ್ಯಾನದಿಂದ ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಡಯಟ್, ಧ್ಯಾನದಿಂದ ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಹೈದರಾಬಾದ್: ಆಂಧ್ರ ಪ್ರದೇಶ ಕರ್ನೂಲ್‌ನಲ್ಲಿ ಮಹಾಮಾರಿ ಕೊರೊನಾದಿಂದ 105 ವರ್ಷದ ಅಜ್ಜಿ ಚೇತರಿಸಿಕೊಂಡಿದ್ದಾರೆ.

    ಬಿ.ಮೋಹನಮ್ಮ ಕೊರೊನಾದಿಂದ ಗೆದ್ದ 105 ವರ್ಷದ ಅಜ್ಜಿ. ಮೋಹನಮ್ಮ ಕಳೆದ ತಿಂಗಳು ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ನಂತರ ಜುಲೈ 13 ರಂದು ಅವರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಇತ್ತೀಚೆಗೆ ಅಜ್ಜಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. “ಇದು ಹೆಚ್ಚು ಆತ್ಮವಿಶ್ವಾಸ, ಸರಿಯಾದ ಆಹಾರ, ಔಷಧಿ ಮತ್ತು ಯೋಗದಿಂದ ಮಾತ್ರ ಸಾಧ್ಯ. ಜೊತೆಗೆ ಪ್ರತಿದಿನ ಸಮತೋಲಿತ ಆಹಾರ ಸೇವಿಸುತ್ತಿದ್ದೆ. ಅಲ್ಲದೇ ಧ್ಯಾನ ಮತ್ತು ವಾಕಿಂಗ್ ಮಾಡುತ್ತಿದ್ದೆ ಎಂದಿದ್ದಾರೆ.

    ಕರ್ನೂಲ್‌ನಲ್ಲಿ ಅಜ್ಜಿ ತಮ್ಮ ಮಗನೊಂದಿಗೆ ವಾಸಿಸುತ್ತಿದ್ದು, ಇವರಿಗೆ 26 ಮೊಮ್ಮಕ್ಕಳು. ಅಜ್ಜಿ ವಾಸಿಸುವ ಬೀದಿ ಕರ್ನೂಲ್‌ನಲ್ಲಿ ಹೆಚ್ಚು ಕೊರೊನಾ ಪ್ರಕರಣ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿವೆ.

    ಸಮತೋಲಿತ ಆಹಾರ, ಔಷಧಿ ಮತ್ತು ಧ್ಯಾನದಂತಹ ಅಭ್ಯಾಸಗಳು ಅವರ ಚೇತರಿಕೆಗೆ ಸಹಾಯ ಮಾಡಿದವು. ಅವರು ಆಸ್ಪತ್ರೆಯ ಸಿಬ್ಬಂದಿಗೆ ಭಯವಿಲ್ಲದೆ ಸಹಕರಿಸಿದರು ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಜಿ.ನರೇಂದ್ರನಾಥ ರೆಡ್ಡಿ ಹೇಳಿದ್ದಾರೆ. ಕೊರೊನಾ ಪ್ರೋಟೋಕಾಲ್ ಪ್ರಕಾರ 12 ದಿನಗಳ ನಂತರ ಅಜ್ಜಿಯನ್ನು ಬಿಡುಗಡೆ ಮಾಡಲಾಗಿದೆ.

  • ಆಸ್ಟ್ರೇಲಿಯಾ ಮಹಿಳೆಗೆ ತವರಿಗೆ ತೆರಳಲು ಅವಕಾಶ ಕಲ್ಪಿಸಿದ ಎಸ್‍ಪಿ ವರ್ತಿಕಾ ಕಟಿಯಾರ್!

    ಆಸ್ಟ್ರೇಲಿಯಾ ಮಹಿಳೆಗೆ ತವರಿಗೆ ತೆರಳಲು ಅವಕಾಶ ಕಲ್ಪಿಸಿದ ಎಸ್‍ಪಿ ವರ್ತಿಕಾ ಕಟಿಯಾರ್!

    ಹುಬ್ಬಳ್ಳಿ: ಲಾಕ್‍ಡೌನ್ ಪೂರ್ವದಲ್ಲಿಯೇ ಧ್ಯಾನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ ದೇಶದಿಂದ ಹುಬ್ಬಳ್ಳಿಗೆ ಆಗಮಿಸಿದ ಮಹಿಳೆಯನ್ನು ಇಂದು ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ ಮಾರ್ಗವಾಗಿ ಆಸ್ಟ್ರೇಲಿಯಾ ದೇಶಕ್ಕೆ ತಲುಪಿಸುವ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತ ಮುಂದಾಗಿದೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ನೇತೃತ್ವದಲ್ಲಿಂದು ಖಾಸಗಿ ವಾಹನದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಹಿಳೆಯನ್ನು ಕಳಿಸಿ ಕೊಡಲಾಗಿದೆ.

    ಮೈಶಿಯಾನ್ ನಿಯಾಂಗ್ ಅವರು ಮೂರು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಗೆ ಆಗಮಿಸಿದ್ದು, ಲಾಕ್‍ಡೌನ್ ಘೋಷಣೆಯಿಂದಾಗಿ ಹುಬ್ಬಳ್ಳಿಯ ರೇಣುಕಾ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ನಿನ್ನೆಯಷ್ಟೇ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಮಹಿಳೆಯ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‍ಪಿ ವರ್ತಿಕಾ ಕಟಿಯಾರ್ ಅವರು ಆಸ್ಟ್ರೇಲಿಯಾಕ್ಕೆ ಕಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಅವರನ್ನು ಕಳಿಸಿಕೊಡಲಾಯಿತು.

    ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಸುಮಾರು ಮೂರು ತಿಂಗಳ ಹಿಂದೆಯಷ್ಟೇ ಮಹಿಳೆ ಆಧ್ಯಾತ್ಮಿಕ ಧ್ಯಾನ ಯೋಗ ಕಲಿಕೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇಂದು ಕ್ಯಾಬ್ ಮೂಲಕ ಬೆಂಗಳೂರಿಗೆ ಕಳಿಸಲಾಗುತ್ತಿದೆ. ಬಳಿಕ ಮಹಿಳೆಯು ಬೆಂಗಳೂರಿನಿಂದ ದೆಹಲಿ ಹಾಗೂ ದೆಹಲಿಯಿಂದ ಆಸ್ಟ್ರೇಲಿಯಾಗೆ ತೆರಳಿಲಿದ್ದಾರೆ ಎಂದು ತಿಳಿಸಿದರು.

    ದೆಹಲಿಯಲ್ಲಿ ನಮ್ಮ ಸ್ನೇಹಿತರಿದ್ದು, ಅವರ ಮೂಲಕ ಆಸ್ಟ್ರೇಲಿಯಾ ದೇಶಕ್ಕೆ ಕಳಿಸಿಕೊಡಲಾಗುತ್ತದೆ. ಅಲ್ಲದೇ ಮಹಿಳೆಗೆ ನಮ್ಮ ಸಿಬ್ಬಂದಿಗಳು ಕೂಡ ಆರ್ಥಿಕ ಸಹಾಯ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಡಿಸಿಪಿ ಪಿ.ಕೃಷ್ಣಕಾಂತ, ಗ್ರಾಮೀಣ ಪೊಲೀಸ್ ಸಿಪಿಐ ಡಿಸೋಜಾ, ಉಪನಗರ ಠಾಣೆಯ ಸಿಪಿಐ ಸುಂದರೇಶ ಹೊಳೆಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

    ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

    – ಮನ್ ಕೀ ಬಾತ್‍ನಲ್ಲಿ ಪ್ರಧಾನಿ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ದಿಢೀರನೇ ಕೇದಾರನಾಥಕ್ಕೆ ತೆರಳಿ ಒಂದು ದಿನ ಧ್ಯಾನಕ್ಕೆ ಕುಳಿತರು. ಈ ವೇಳೆ ವಿರೋಧ ಪಕ್ಷಗಳು ಹಾಗೂ ಇತರರು ರಾಜಕೀಯ ಲಾಭಕ್ಕಾಗಿ ಧ್ಯಾನ ಮಾಡುತ್ತಿದ್ದು, ಇದೆಲ್ಲ ಡೋಂಗಿ ಎಂದೆಲ್ಲ ಟೀಕಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಸರ್ಕಾರದ ರಚನೆಯಾದ ನಂತರ ಇಂದು ತಮ್ಮ ಮೊದಲ ‘ಮನ್ ಕೀ ಬಾತ್’ನಲ್ಲಿ ಉತ್ತರಿಸಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಕೇದಾರನಾಥಕ್ಕೆ ಪ್ರವಾಸ ಮಾಡಿ ಧ್ಯಾನಕ್ಕೆ ಕುಳಿತಿದ್ದು, ರಾಜಕೀಯ ಲಾಭಕ್ಕಾಗಿ ಅಲ್ಲ. ಬದಲಿಗೆ ಅದು ನನ್ನ ಅಂತರಂಗವನ್ನು ಅರಿಯಲು ದೊರೆತ ಒಂದು ಅವಕಾಶ ಎಂದು ವಿವಾದದ ಕುರಿತು ಸ್ಪಷ್ಟಪಡಿಸಿದ್ದಾರೆ.

    ಹಲವರು ಇದನ್ನು ರಾಜಕೀಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ನನಗಿದು ನನ್ನ ಅಂತರಂಗವನ್ನರಿಯಲು ದೊರೆತ ಅವಕಾಶ. ಅಲ್ಲದೆ, ಕೊನೆಯ ಬಾರಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಡಿದ್ದರ ಬೇಸರವನ್ನು ಹಾಗೂ ಆ ಸ್ಥಾನವನ್ನು ಕೇದಾರನಾಥ ಪ್ರವಾಸ ತುಂಬಿತು ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ.

    ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು ಹಾಗೂ ಪುಸ್ತಕ ಓದುವುದರ ಕುರಿತು ಕೇಳುಗರಿಗೆ ನೆನಪಿದ್ದಾರೆ. ಇದೇ ವೇಳೆ ತಮ್ಮ ‘ಕೇದಾರನಾಥ ಪ್ರವಾಸ’ ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಹಿಂದಿನ ಸರ್ಕಾರದ ಅವಧಿಯಲ್ಲಿ(ಫೆಬ್ರವರಿ) ನಡೆದ ಕೊನೆಯ ‘ಮನ್ ಕೀ ಬಾತ್’ನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.

    ಮತದಾನದ ನಂತರ ‘ಮನ್ ಕೀ ಬಾತ್’ಗೆ ಹಿಂದಿರುಗುವುದಾಗಿ ನೀಡಿದ್ದ ನನ್ನ ಭರವಸೆಗೆ ರಾಜಕೀಯದ ಅರ್ಥ ನೀಡಿ ಟೀಕಿಸಿದ್ದರು. ಅಲ್ಲದೆ, ‘ಅತಿಯಾದ ಆತ್ಮ ವಿಶ್ವಾಸ’ ಎಂದು ಅಲ್ಲಗಳೆದಿದ್ದರು. ಆದರೆ, ನಿಮ್ಮ ವಿಶ್ವಾಸದಿಂದ ನಾನು ಮರಳಿ ಬರಲು ನೆರವಾಯಿತು. ನೀವು ಆಹ್ವಾನಿಸದ ಹೊರತು ನನ್ನೊಬ್ಬನಿಂದಲೇ ಮರಳಿ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

    ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ಮತದಾನದ ಮಹತ್ವವನ್ನು ವಿವರಿಸುವಾಗ ತುರ್ತು ಪರಿಸ್ಥಿತಿಯ ಉದಾಹರಣೆ ನೀಡಿದ್ದು, 1977ರಲ್ಲಿ ಹೇರಿದ ತುರ್ತು ಪರಿಸ್ಥಿತಿ ವೇಳೆ ಮೂಲಭೂತ ಹಕ್ಕುಗಳನ್ನು ಹೇಗೆ ಕಸಿದುಕೊಂಡಿದ್ದರು ಎಂದು ವಿವರಿಸಿದರು. ಅಲ್ಲದೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು ಎಂದು ಮೋದಿ ವಿವರಿಸಿದ್ದಾರೆ.

    ಪ್ರಜಾಪ್ರಭುತ್ವವೆಂದರೆ ಪ್ರತಿಯೊಬ್ಬ ಮತದಾರನಿಗೂ ಗೌರವ ಸಲ್ಲಿಸುವುದು. ಲೋಕಸಭಾ ಚುನಾವಣೆ ಮುಗಿಯುವ ಹೊತ್ತಿನಲ್ಲಿ ದೂರದ ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಒಂಟಿ ಮಹಿಳೆಗೆ ಮತಗಟ್ಟೆ ಸ್ಥಾಪಿಸಲು ಚುನಾವಣಾಧಿಕಾರಿಗಳು ಎರಡು ದಿನಗಳ ಕಾಲ ಪ್ರಯಾಣಿಸಿ, ಹೇಗೆ ಕಷ್ಟಪಟ್ಟರು ಎಂಬುದನ್ನು ಇದೇ ವೇಳೆ ವಿವರಿಸಿದರು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಸಂತಸವಾಗಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಇದೇ ವೇಳೆ ಯುವಕರಿಗೆ ಹಾಗೂ ಕೇಳುಗರಿಗೆ ಕರೆ ನೀಡಿದರು. ಇತ್ತೀಚೆಗೆ ಪ್ರೇಮ್‍ಚಂದ್ ಅವರ ಜನಪ್ರಿಯ ಕಥೆಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕ ಓದುತ್ತಿದ್ದಾಗ ಯುವಕನಾಗಿದ್ದಾಗ ನಾನು ಅನುಭವಿಸಿದ ಸಾಮಾಜಿಕ ಸವಾಲುಗಳು ನೆನಪಾದವು ಎಂದು ತಿಳಿಸಿದರು.

    ತಿಂಗಳುಗಳ ನಂತರ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೊಸ ಸರ್ಕಾರ ರಚನೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ‘ಮನ್ ಕೀ ಬಾತ್’ ಇದಾಗಿದೆ.

  • ವಿನಯ್ ಗುರೂಜಿಗಾಗಿ ಸಿದ್ಧವಾಗ್ತಿದೆ ಕೃತಕ ಗುಹೆ

    ವಿನಯ್ ಗುರೂಜಿಗಾಗಿ ಸಿದ್ಧವಾಗ್ತಿದೆ ಕೃತಕ ಗುಹೆ

    ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿರುವ ವಿನಯ್ ಗುರೂಜಿಗಾಗಿ ಗುಹೆ ನಿರ್ಮಾಣವಾಗುತ್ತಿದೆ.

    ಹೌದು. ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಗುಹೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ವಿನಯ್ ಗುರೂಜಿ ಗುಹೆಯಲ್ಲಿ ಧ್ಯಾನ ಮಾಡಲಿದ್ದಾರೆ. ಏಕಾಗ್ರತೆಗಾಗಿ ಭಕ್ತರಿಂದ ದೂರ ಉಳಿಯುವ ನಿಟ್ಟಿನಲ್ಲಿ ಗುರೂಜಿ ಈ ಗುಹೆ ಸೇರಲಿದ್ದಾರೆ ಎನ್ನಲಾಗಿದೆ.

    ಪ್ರತಿ ಶುಕ್ರವಾರ ಮಾತ್ರ ಭಕ್ರಿಗೆ ದರ್ಶನ ಕೊಡ್ತಿರೋ ಗುರೂಜಿಯವರು ಕೆಲ ದಿನಗಳಲ್ಲೇ ಗುಹೆಯೊಳಗೆ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ. ಸಿಮೆಂಟ್ ನಿಂದ ನಿರ್ಮಾಣವಾಗ್ತಿರೋ ಈ ಕೃತಕ ಗುಹೆಯನ್ನು ಗುರೂಜಿಯವರೇ ತಮ್ಮ ಸಿಬ್ಬಂದಿಗೆ ಹೇಳಿ ಸಿದ್ಧಪಡಿಸಿದ್ದಾರೆ.

    ಗುರೂಜಿ ಈ ಹಿಂದೆ ಹಿರಿಯ ರಾಜಕಾರಣಿಗಳಿಂದ ಪಾದಪೂಜೆ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಗುರೂಜಿಯ ಏಕಾಗ್ರತೆಗೆ ಭಂಗವಾಗಿದೆಯಂತೆ. ಇದರಿಂದ ದೂರವಾಗಲು ಗುಹೆ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದು, ಇದೇ ತಿಂಗಳಲ್ಲಿ ಗುಹೆ ಸಿದ್ಧವಾಗಿ ಪ್ರವೇಶ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ದೇವರಲ್ಲಿ ನಾನು ಏನನ್ನೂ ಬೇಡಿಲ್ಲ – ಧ್ಯಾನದ ಬಳಿಕ ಮೋದಿ ಮಾತು

    ದೇವರಲ್ಲಿ ನಾನು ಏನನ್ನೂ ಬೇಡಿಲ್ಲ – ಧ್ಯಾನದ ಬಳಿಕ ಮೋದಿ ಮಾತು

    ಡೆಹ್ರಾಡೂನ್: ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಹಾಗೂ ಧ್ಯಾನದ ವೇಳೆ ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಕೇದಾರನಾಥ ಗುಹೆಯಲ್ಲಿ 20 ಗಂಟೆ ಧ್ಯಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತಗಿಟ್ಟಿಸಲು ಗುಹೆಯೊಳಗೆ ಧ್ಯಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಶಾಂತಿ, ಪ್ರಾರ್ಥನೆ ಹಾಗೂ ಧ್ಯಾನ ಮಾಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲೆ ಕೇಳಿ ಬಂದ ಆರೋಪಗಳಿಗೆ ತಿರುಗೇಟು ನೀಡಿದರು.

    ಕೇದಾರನಾಥ ದೇವಾಲಯವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ. ಈ ಪುಣ್ಯ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದೇ ನನ್ನ ಗುರಿಯಾಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರನಾಥ ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ದೇವಾಲಯದ ಅಭಿವೃದ್ಧಿಗಾಗಿ ತಂಡ ಕಠಿಣ ಪರಿಶ್ರಮ ಪಡುತ್ತಿದೆ. ಒಟ್ಟಿನಲ್ಲಿ ಈ ಪ್ರದೇಶದ ಬಗ್ಗೆ ವರದಿ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಲು ಮಾಧ್ಯಮ ಕೂಡ ಸಹಾಯ ಮಾಡಿದೆ. ಅದಕ್ಕಾಗಿ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

    ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಮಹಾತಪಸ್ಸು ಮಾಡಿದ್ದರು. ಶನಿವಾರ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ. ಮೋದಿಯವರು 2014ರಲ್ಲಿ ಬಿಜೆಪಿಯಿಂದ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇದಾರನಾಥಕ್ಕೆ ನಾಲ್ಕನೇ ಬಾರಿ ಭೇಟಿ ಮಾಡಿದ್ದಾರೆ.

  • ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ಮೋದಿ ದೇವರ ಮೊರೆ – ರಾತ್ರಿಯಿಡೀ ಕೇದಾರನಾಥ ಗುಹೆಯಲ್ಲಿ ನಮೋ ಧ್ಯಾನ

    ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ಮೋದಿ ದೇವರ ಮೊರೆ – ರಾತ್ರಿಯಿಡೀ ಕೇದಾರನಾಥ ಗುಹೆಯಲ್ಲಿ ನಮೋ ಧ್ಯಾನ

    – ಪವಿತ್ರ ಕಡ್ತಲ
    ಬೆಂಗಳೂರು: ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಮಹಾತಪಸ್ಸು ಮಾಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಲಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ. ಧ್ಯಾನದ ಬಳಿಕ ಬದರೀನಾಥ್ ದೇಗುಲಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

    ನಿನ್ನೆ ಬುದ್ಧಪೂರ್ಣಿಮಯೆ ದಿನವೇ ಗವಿ ಧ್ಯಾನ ಆರಂಭಿಸಿದ್ದು ನಾನಾ ಕುತೂಹಲ ಸೃಷ್ಟಿಸಿದೆ. ನೂರು ವರ್ಷ ಐತಿಹ್ಯವಿರುವ, ಶಿವವನ್ನು ಒಲಿಸಲು ಪಾರ್ವತಿ ತಪಸ್ಸು ಮಾಡಿರುವ ಮಹಾಶಕ್ತಿಯ ಕ್ಷೇತ್ರದಲ್ಲಿ ಮೋದಿ ತಪಸ್ಸಿಗೆ ಹಾಗೂ ಬುದ್ಧನ ಬದುಕು ಸಾಕ್ಷ್ಯತ್ಕಾರ ಕಂಡ ದಿನವೇ ಮೋದಿ ಮಾಡಿದ ಧ್ಯಾನಕ್ಕೆ ಮಹಾ ಶಕ್ತಿ ಇದೆಯಂತೆ.

    ಶಿಲಾಗುಹೆಯಲ್ಲಿ ಮಾಡಿದ ತಪಸ್ಸಿನ ವಿಶೇಷವೇನು?
    * ಮೋದಿ ಗುಹೆಯಲ್ಲಿ ಬರೀ ಮೌನವಾಗಿ ಧ್ಯಾನಸ್ಥರಾಗಿರಲಿಲ್ಲ. ಬದಲಾಗಿ ಅಕ್ಷರಲಕ್ಷ ಜಪ ಮಾಡಿದ್ರು. ಓಂ ನಮಃ ಶಿವಾಯ ಮಂತ್ರವನ್ನು ನಿರಂತರವಾಗಿ ಜಪಿಸಿದ್ರು.
    * ಓಂ ನಮಃ ಶಿವಾಯ ಮಂತ್ರಘೋಷವನ್ನು ಓಂಕಾರ ಘೋಷವನ್ನು ಒಂದು ಲಕ್ಷ ಬಾರಿ ಶ್ರದ್ಧೆಯಿಂದ ಜಪಿಸಿದ್ರೆ ಇಷ್ಟಾರ್ಧ ಈಡೇರುತ್ತದೆ ಅನ್ನುವ ನಂಬಿಕೆ ಇದೆ.
    * ಪ್ರಧಾನಿ ಮೋದಿ ತಪಸ್ಸು ಮಾಡಲು ಬುದ್ಧ ಪೂರ್ಣಿಮೆಯ ದಿನವನ್ನೇ ಆಯ್ಕೆ ಮಾಡಿಕೊಂಡರು. ಬುದ್ಧನಿಗೆ ಸಾಕ್ಷ್ಯಾತ್ಕರವಾದ ದಿನ ಬುದ್ಧ ಹುಟ್ಟಿದ ದಿನ. ಅಷ್ಟೇ ಅಲ್ಲ ಬುದ್ಧಪೌರ್ಣಿಮೆಯ ದಿನಕ್ಕೆ ಅಪಾರ ಶಕ್ತಿಯಿದ್ದು ಭಕ್ತರು ಒಂದು ಬಾರಿ ಪಠಿಸಿದ ಮಂತ್ರಘೋಷ ಲಕ್ಷ ಮಂತ್ರಘೋಷವಾಗಿ ಮಾರ್ಪಾಡಾಗಲಿದೆ.

    * ಪ್ರಧಾನಿ ಕಾಷಾಯ ತೊಟ್ಟಿದ್ದು ಏಕಾಗ್ರತೆ ಹಾಗೂ ಶುದ್ಧಿಯ ಸಂಕೇತವಾಗಿ. ಅಲ್ಲದೆ ಕೇದಾರನಾಥದಲ್ಲೂ ಪೂಜೆ ಮಾಡುವಾಗ ಸಾಂಪ್ರದಾಯಿಕ ಪಹರಿ ವಸ್ತ್ರ ಧರಿಸಿದರು. ಪೂಜೆಯಲ್ಲಿ ಆಯಾಯ ವಸ್ತ್ರಗಳಿಗೂ ಅಷ್ಟೆ ಮಹತ್ವವಿದೆ.
    * ಪಾರ್ವತಿ ದೇವಿ ಇದೇ ಗುಹೆಯಲ್ಲಿ ತಪಸ್ಸು ಮಾಡಿ ಶಿವದೇವರನ್ನು ಒಲಿಸಿಕೊಂಡಳು ಅನ್ನುವ ಪ್ರತೀತಿ ಇದೆ. ಸಾಕ್ಷತ್ ಶಿವನ ಸಾಕ್ಷ್ಯತ್ಕಾರದ ಸನ್ನಿಧಾನದಲ್ಲಿ ಮೋದಿಯ ತಪಸ್ಸು ರಾಜಕೀಯ ಭವಿಷ್ಯದ ಕಠಿಣ ಹಾದಿಯನ್ನು ಸುಗಮಗೊಳಿಸಲಿದೆ ಅನ್ನೋದು ಜ್ಯೋತಿಷಿಗಳ ಮಾತು.

    * ಐದು ಮೀಟರ್ ಉದ್ದ ಮೂರು ಮೀಟರ್ ಅಗಲವುಳ್ಳ ಈ ಗುಹೆಯಲ್ಲಿ ಮೋದಿ ಈ ಹಿಂದೆಯೂ ತಪಸ್ಸು ಮಾಡಿದ್ದರಂತೆ. ಇದರಿಂದ ರಾಜಕೀಯ ಬದುಕಿನಲ್ಲಿ ಔನತ್ಯಕ್ಕೇರಿದ್ದರೆಂದು ಹೇಳಲಾಗುತ್ತಿದೆ.
    * ಈ ಶಿಲಾಗುಹೆಯಲ್ಲಿ ತಪಸ್ಸು ಮಾಡೋದು ಅಂದರೆ ಅದು ಅಷ್ಟು ಸುಲಭವಲ್ಲ, ತಪಸ್ಸು ಮಾಡುವವರಿಗೆ ಅತ್ಯಂತ ಏಕಾಗ್ರತೆ, ಶ್ರದ್ಧೆ, ಆತ್ಮ ಹಾಗೂ ಪರಮಾತ್ಮನ ಅನುಸಂಧಾನ ಮಾಡುವಂತ ವಿಶೇಷ ಶಕ್ತಿ ಇರಬೇಕು.
    * ಈ ಶಿಲಾಗುಹೆಯಲ್ಲಿ ತಪಸ್ಸು ಮಾಡಿದವರ ಬೇಡಿಕೆ ಇಷ್ಟಾರ್ಥ ಎಲ್ಲವೂ ನೇರವೇರಲಿದೆ. ಇದು ಗೆಲುವಿನ ಮಹಾಯಜ್ಞ ಹಾಗೂ ಶಿವನನ್ನು ನೇರವಾಗಿ ಒಲಿಸಿಕೊಳ್ಳುವ ಮಾರ್ಗ ಅನ್ನೋದು ಧಾರ್ಮಿಕ ನಂಬಿಕೆ.

    ಚುನಾವಣೆಯ ಮಹಾ ಫಲಿತಾಂಶದ ಹೊಸ್ತಿಲಲ್ಲಿ ಮೋದಿಯ ಈ ತಪಸ್ಸು ನಾನಾ ಕುತೂಹಲಕ್ಕೆ ಕಾರಣವಾಗಿದೆ. ದೇವರ ಒಲಿಸಿಕೊಳ್ಳಲು ಹೊರಟ ಮೋದಿಗೆ ಮತದಾರ ಒಲೀತಾನ ಪ್ರಧಾನಿಯ ಸಿಂಹಾಸನ ಸಿಗಲಿದೆಯಾ ಅನ್ನೋ ಪ್ರಶ್ನೆ ಮೂಡಿದ್ದು, ಗೆಲುವಿನ ಸಾಕ್ಷ್ಯತ್ಕಾರವಾ, ಸೋಲಿನ ಕಹಿಯಾ ಅನ್ನೋದು ದಿನಾಂಕ 23 ರಂದು ಗೊತ್ತಾಗಲಿದೆ.

  • ಲೋಕ ಕಲ್ಯಾಣಕ್ಕಾಗಿ ಅನ್ನ ಆಹಾರ ಬಿಟ್ಟು 24 ದಿನಗಳ ಕಾಲ ಜಪಕ್ಕೆ ಕುಳಿತ ಖಾವಿಧಾರಿ ಮಾತೆ!

    ಲೋಕ ಕಲ್ಯಾಣಕ್ಕಾಗಿ ಅನ್ನ ಆಹಾರ ಬಿಟ್ಟು 24 ದಿನಗಳ ಕಾಲ ಜಪಕ್ಕೆ ಕುಳಿತ ಖಾವಿಧಾರಿ ಮಾತೆ!

    ಬಾಗಲಕೋಟೆ: ಲೋಕ ಕಲ್ಯಾಣಾರ್ಥವಾಗಿ ಖಾವಿಧಾರಿ ಮಾತೆಯೊಬ್ಬರು ಇಲಕಲ್ ಪಟ್ಟಣದ ಹೊರವಲಯದಲ್ಲಿ ನಿರಂತರ 24 ದಿನಗಳ ಕಾಲ ಅನ್ನ ಆಹಾರ ಬಿಟ್ಟು ನಿರ್ಜನ ಪ್ರದೇಶದಲ್ಲಿ ಜಪಕ್ಕೆ ಕುಳಿತಿದ್ದಾರೆ.

    ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುಗಳ್ ಗ್ರಾಮದ ಮಹಾದೇವಮ್ಮ ಇಲಕಲ್ ಪಟ್ಟಣಕ್ಕೆ ಬಂದ ವೇಳೆ ತಮ್ಮ ಇಚ್ಚಾನುಸಾರ ಭಕ್ತರನ್ನ ಸೇರಿಸಿ 24 ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಿದ್ದಾರೆ.

    ಸುತ್ತ ನಾಲ್ಕು ಕಡೆಗೆ ಗೋಡೆಯನ್ನು ನಿರ್ಮಿಸಿಕೊಂಡು ಒಳಗಡೆ ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ. ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ ಚಳಗೇರಿ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರೆದ ಭಕ್ತರಿಗೆ ಮಾಹಿತಿ ನೀಡಿ, ಜಪದ ಕೊನೆಯ ದಿನ ಪಂಚಪೀಠಾಧೀಶರ ಸಮ್ಮುಖದಲ್ಲಿ ಜಪ ಮಂಗಳವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

    ಮಹಾದೇವಮ್ಮ ಆಶಯದಂತೆ ಭಕ್ತರು ರಂಭಾಪುರಿ ಶ್ರೀಗಳ ಸಮ್ಮುಖದಲ್ಲಿ ಜನವರಿ 26ರಂದು ಅವರ ಜಪ ಮಂಗಳಗೊಳಿಸಲು ಮುಂದಾಗಿದ್ದಾರೆ. ಒಟ್ಟಾರೆ ಅನ್ನ ಆಹಾರ ತ್ಯಜಿಸಿ ಮಾತೆಯೊಬ್ಬರು ಜಪಕ್ಕೆ ಕುಳಿತ್ತಿದ್ದು ಭಕ್ತ ಸಮೂಹದಲ್ಲಿ ಅಚ್ಚರಿ ಮೂಡಿಸಿದೆ.

  • ಕೆರೆಯ ನೀರಿನ ಮಧ್ಯೆ ಮುಳ್ಳಿನ ಮೇಲೆ ಸ್ವಾಮೀಜಿ ಜಪ

    ಕೆರೆಯ ನೀರಿನ ಮಧ್ಯೆ ಮುಳ್ಳಿನ ಮೇಲೆ ಸ್ವಾಮೀಜಿ ಜಪ

    ಬಾಗಲಕೋಟೆ: ಸ್ವಾಮೀಜಿಯೊಬ್ಬರು ಎರಡು ದಿನಗಳಿಂದ ನೀರಿನಲ್ಲಿಯೇ ಮುಳ್ಳಿನ ಮೇಲೆ ಕುಳಿತು ಧ್ಯಾನ ಮಾಡಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಮಹಾ ಸಿದ್ದೇಶ್ವರ ಮಠದ ಪೀಠಾಧಿಪತಿ ಸುರೇಶ ಸ್ವಾಮೀಜಿ ಎರಡು ದಿನಗಳ ಹಿಂದೆ ಏಕಾಏಕಿ ಕಾರಣ ಹೇಳದೆ ತುಂಗಳ ಗ್ರಾಮದ ಹೊಸಕೆರೆಯಲ್ಲಿ ಮುಳ್ಳಿನೊಂದಿಗೆ ನೀರಿನಲ್ಲಿ ತೇಲುತ್ತ ಜಪಕ್ಕೆ ಮುಂದಾಗಿದ್ದರು.

    ಈ ಬಗ್ಗೆ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಸ್ವಾಮೀಜಿಯನ್ನ ನೋಡೋಕೆ ಆಗಮಿಸುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು. ನಿರಂತರ ನೀರಿನಲ್ಲಿ ಇರುವುದು ಆರೋಗ್ಯಕ್ಕೆ ಸರಿಯಲ್ಲ ಎಂಬ ಉದ್ದೇಶದಿಂದ ಇತ್ತ ತಹಶಿಲ್ದಾರರು ಮತ್ತು ಪೊಲೀಸ್ ಸಿಬ್ಬಂದಿ ಸ್ವಾಮೀಜಿಯನ್ನ ಹೊರಕರೆಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

    ಆದರೆ ಅಂದುಕೊಂಡಂತೆ ಸ್ವಾಮೀಜಿ ಸೋಮವಾರದಂದು ಭಕ್ತರ ಸಮ್ಮುಖದಲ್ಲಿ ಹೊರಬಂದಿದ್ದು, ಭಕ್ತರು ಹರ್ಷಗೊಂಡರು. ಇತ್ತ ಸುರೇಶ ಸ್ವಾಮೀಜಿ ಲೋಕ ಕಲ್ಯಾಣಾರ್ಥ ಕೆರೆಯಲ್ಲಿ ಜಪ ಮಾಡಿದ್ದೇನೆ ಎಂದು ಹೇಳಿದರು.