Tag: ಧೀರ ಸಾಮ್ರಾಟ್

  • ‘ಧೀರ ಸಾಮ್ರಾಟ್’ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಡೈನಾಮಿಕ್ ಪ್ರಿನ್ಸ್

    ‘ಧೀರ ಸಾಮ್ರಾಟ್’ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಡೈನಾಮಿಕ್ ಪ್ರಿನ್ಸ್

    ಹೊಸ ಪ್ರತಿಭೆಗಳ ಸಮಾಗಮದಂತಿರುವ `ಧೀರ ಸಾಮ್ರಾಟ್’ (Dheera Samrat) ಚಿತ್ರ ಹಂತ ಹಂತವಾಗಿ ಸದ್ದು ಮಾಡುತ್ತಾ ಸಾಗಿ ಬಂದಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ 31ರಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj)  ಧೀರ ಸಾಮ್ರಾಟ್‌ ಟ್ರೈಲರ್‌ (Trailer) ಅನಾವರಣ ಮಾಡಲಿದ್ದಾರೆ.

    ಪವನ್ ಕುಮಾರ್ (ಪಚ್ಚಿ) (Pawan Kumar) ನಿರ್ದೇಶನದಲ್ಲಿ ಮೂಡಿ ಬಂದಿರುವ `ಧೀರ ಸಾಮ್ರಾಟ್’ ತನ್ನ ಶೀರ್ಷಿಕೆಯಲ್ಲಿಯೇ ರಗಡ್ ಫೀಲ್ ಅನ್ನು ಬಚ್ಚಿಟ್ಟುಕೊಂಡಂತಿರುವ ಚಿತ್ರ. ಯಾವುದಕ್ಕೂ ಸೈ ಎಂಬಂಥಾ ಹುರುಪಿನ ಹುಡುಗರ ಕಥನ ಈ ಸಿನಿಮಾದ ಜೀವಾಳ. ಈಗಾಗಲೇ ಹಾಡು ಸೇರಿದಂತೆ ನಾನಾ ರೀತಿಗಳಲ್ಲಿ ಧೀರ ಸಾಮ್ರಾಟ್ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಇನ್ನೆರಡು ದಿನದಲ್ಲಿ ಹೊರಬೀಳಲಿರುವ  ಟ್ರೈಲರ್ ನಲ್ಲಿ ಒಟ್ಟಾರೆ ಚಿತ್ರದ ಬಗೆಗಿನ ಮತ್ತಷ್ಟು ಇಂಟ್ರೆಸ್ಟಿಂಗ್‌ ಅಂಶಗಳು ಜಾಹೀರಾಗುವ ನಿರೀಕ್ಷೆಯಿದೆ.

    ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಗುರು ಬಂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಕೇಶ್ ಬಿರಾದಾರ್ ಮತ್ತು ಅದ್ವಿತಿ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ಶೋಭರಾಜ್, ರಮೇಶ್ ಭಟ್, ಹರೀಶ್ ಅರಸು, ಬಾಲ ರಾಜವಾಡಿ, ಮನಮೋಹನ್ ರೈ ಮುಂತಾದವರ ತಾರಾಗಣವಿದೆ. ಅರುಣ್ ಅರಸ್ ಛಾಯಾಗ್ರಹಣ, ರಾಘವ್ ಸಂತೋಷ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಚಿತ್ರದ ಅಸಲಿ ಆಂತರ್ಯ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಮುಟ್ಟಲು ಕ್ಷಣಗಣನೆ ಶುರುವಾಗಿದೆ.

  • ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರ ಸಾಮ್ರಾಟ್’ (Dheera Samrat) ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ ಕುಮಾರ್(ಪಚ್ಚಿ) (Pawan Kumar) ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಸರದಿಯಂತೆ ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕರು “ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‌ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವ ಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಎಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ಸಾವಿಗೆ ಸಾವಿಲ್ಲ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೆ ಸಮಾಜದಲ್ಲಿ ಯಾವುದೋ ಒಂದು  ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ” ಎಂದರು.

    ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು, ಯಾತಕ್ಕೆ ಈ ಟೈಟಲ್ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಕೊನೆಯಲ್ಲಿ ಮಾತನಾಡಿದ ಧ್ರುವ ಸರ್ಜಾ, “ಸಿನಿಮಾ ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು. ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ಅದ್ದೂರಿ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂಥವರನ್ನು ಬೆಳೆಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ.  ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ” ಎಂದು ಮಾತಿಗೆ ವಿರಾಮ ಹಾಕಿದರು.

    ತಾರಾಗಣದಲ್ಲಿ ಶಂಕರ ಭಟ್, ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‌ ಭಟ್, ಯತಿರಾಜ್, ಮನಮೋಹನ್‌ ರೈ, ಇಂಚರ, ಸಂಕಲ್ಪ್‌ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‌ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ ಹಾಗೂ ಅರುಣ್‌ಸುರೇಶ್, ಸಂಕಲನ ಸತೀಶ್‌ ಚಂದ್ರಯ್ಯ, ಹಿನ್ನಲೆ ಶಬ್ದ ವಿನು ಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವ ವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • ಚಿತ್ರೀಕರಣಕ್ಕೆ ತೆರೆ ಎಳೆದ ಧೀರ ಸಾಮ್ರಾಟ್ ಚಿತ್ರತಂಡ – ಪವನ್ ಕುಮಾರ್ ನಿರ್ದೇಶನದ ಚಿತ್ರ

    ಚಿತ್ರೀಕರಣಕ್ಕೆ ತೆರೆ ಎಳೆದ ಧೀರ ಸಾಮ್ರಾಟ್ ಚಿತ್ರತಂಡ – ಪವನ್ ಕುಮಾರ್ ನಿರ್ದೇಶನದ ಚಿತ್ರ

    ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಖ್ಯಾತಿ ಗಳಿಸಿದ್ದ ಪವನ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ಧೀರ ಸಾಮ್ರಾಟ್. ಕಳೆದ ವರ್ಷ ಜನವರಿಯಲ್ಲಿ ಸೆಟ್ಟೇರಿದ್ದ ಈ ಸಿನಿಮಾ 45 ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ ಚಿತ್ರೀಕರಣಕ್ಕೆ ತೆರೆ ಎಳೆದಿದೆ.

    ಕೊನೆಯ ದಿನದ ಶೂಟಿಂಗ್ ಬೆಂಗಳೂರಿನ ಹೊರ ಭಾಗದಲ್ಲಿ ನಡೆದಿದ್ದು, ಸಾಹಸ ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ ಕಥೆಯಾಧಾರಿತ ಸನಿಮಾವಾಗಿದೆ. ಪವನ್ ಕುಮಾರ್ ಅವರು ಧೀರ ಸಾಮ್ರಾಟ್ ಚಿತ್ರತಂಡ ಯುವ ಪಡೆಯನ್ನು ಕಟ್ಟಿಕೊಂಡು ಹೊಸ ಭರವಸೆಯೊಂದಿಗೆ ಮೊದಲ ಸಿನಿಮಾ ಆರಂಭಿಸಿದ್ದಾರೆ. ಚಿತ್ರದಲ್ಲಿ ಖಳನಟನಾಗಿಯೂ ಬಣ್ಣ ಹಚ್ಚಿದ್ದಾರೆ. ರಾಕೇಶ್ ಬಿರಾದರ್, ಅದ್ವಿತಿ ಶೆಟ್ಟಿಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಗೇಂದ್ರ ಅರಸ್, ಬಲರಾಜ್ ವಾಡಿ, ಶೋಭರಾಜ್, ಶಂಕರ್ ಭಟ್, ರಮೇಶ್ ಭಟ್, ಸಂಕಲ್ಪ್, ಹರೀಶ್ ಅರಸು, ಇಂಚರ ಸೇರಿದಂತೆ ಹಲವು ಕಲಾವಿದರ ತಾರಾಬಳಗವೇ ಸಿನಿಮಾದಲ್ಲಿ ಇರಲಿದೆ.

    ಖ್ಯಾತ ನೃತ್ಯ ನಿರ್ದೇಶಕರಾದ ಮುರುಳಿ ಮಾಸ್ಟರ್, ಕಿಶೋರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಧೀರ ಸಾಮ್ರಾಟ್ ಹಾಡುಗಳು ಮೂಡಿ ಬಂದಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನಲ್ಲಿ ಚಿತ್ರದ ಸಾಹಸ ದೃಶ್ಯಗಳು ಮೈನವಿರೇಳಿಸುವಂತೆ ತೆಗೆಯಲಾಗಿದೆ. ವಿರೇಶ್ ಹಾಗೂ ಅರುಣ್ ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕ ಕೆಲಸವನ್ನು ಮಾಡಿದ್ದಾರೆ. ಸುರೇಶ್ ಅವರ ಕ್ಯಾಮೆರಾ ನಿರ್ದೇಶನದ ಕೈಚಳಕದಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಚೇತನ್ ಕುಮಾರ್, ವಿ.ನಾಗೇಂದ್ರ ಪ್ರಸಾಧ್ ಸಾಹಿತ್ಯ ಕೃಷಿಯಲ್ಲಿ ಧೀರ ಸಾಮ್ರಾಟ್ ಹಾಡುಗಳು ಮೂಡಿ ಬಂದಿದ್ದು, ರಾಘವ್ ಸುಭಾಷ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    ತನ್ವಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಗುರು ಬಂಡಿ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಸದ್ಯಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿರೋ ಧೀರಾ ಸಾಮ್ರಾಟ್ ಚಿತ್ರತಂಡ, ಏಪ್ರಿಲ್‍ನಲ್ಲಿ ಚಿತ್ರವನ್ನು ತೆರೆ ಮೇಲೆ ತರೋ ಸಾಧ್ಯತೆ ಇದೆ.

  • ಸಾಫ್ಟ್‌ವೇರ್ ಕ್ಷೇತ್ರದಿಂದ ಬಂದ ಪ್ರತಿಭಾವಂತ ನಟ ಹರೀಶ್ ಅರಸು!

    ಸಾಫ್ಟ್‌ವೇರ್ ಕ್ಷೇತ್ರದಿಂದ ಬಂದ ಪ್ರತಿಭಾವಂತ ನಟ ಹರೀಶ್ ಅರಸು!

    ಬದುಕಿನ ಅನಿವಾರ್ಯತೆಗಳು ಅದೆತ್ತೆತ್ತ ಅಲೆಸಿದರೂ ಕಲಾಸಕ್ತಿ ಎಂಬುದು ಯಾವ ಮಾಯಕದಲ್ಲಾದರೂ ತನ್ನ ತಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಈ ಮಾತಿಗೆ ಉದಾಹರಣೆಯಂಥಾ ನೂರಾರು ಮಂದಿ ಚಿತ್ರರಂಗದಲ್ಲಿ ಸಿಗುತ್ತಾರೆ. ಅಂಥಾ ತೀವ್ರವಾದ ಸಿನಿಮಾಸಕ್ತಿಯೇ ಅಂಥವರನ್ನೆಲ್ಲ ನಟ ನಟಿಯರಾಗಿ, ಇತರೇ ವಿಭಾಗಗಳ ಪರಿಣಿತರನ್ನಾಗಿ, ಸಾಧಕರನ್ನಾಗಿ ನೆಲೆಗಾಣಿಸಿರುತ್ತದೆ. ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಹಾದಿಯಲ್ಲಿರುವವರು ಉದಯೋನ್ಮುಖ ನಟ ಹರೀಶ್ ಅರಸು.

    ಹರೀಶ್ ಅವರದ್ದು ಬಹುಮುಖ ಪ್ರತಿಭೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಹರೀಶ್ ಬದುಕಿನ ಅನಿವಾರ್ಯತೆಗೆ ಬಿದ್ದು ನಾನಾ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಿನಿಮಾ ಪ್ರಮೋಶನ್ ಕಾರ್ಯದಲ್ಲಿ ಗುರುತಿಸಿಕೊಂಡಿರೋ ಹರೀಶ್ ಪಾಲಿಗೆ ಸಿನಿಮಾ ಎಂಬುದೇ ತನ್ನ ಐಡೆಂಟಿಟಿಯಾಗಬೇಕೆಂಬ ಆಳದ ಬಯಕೆಯಿದೆ. ಬಹುಶಃ ಅದಿಲ್ಲದೇ ಹೋಗಿದ್ದರೆ ನಟನೆಯ ಗುಂಗು ಹತ್ತಿಸಿಕೊಂಡು ಐಟಿ ಕ್ಷೇತ್ರದಿಂದ ಸಿನಿಮಾ ಕ್ಷೇತ್ರದತ್ತ ವಾಲಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲವೇನೋ…

    ಇದುವರೆಗೂ ಹಲವಾರು ಕಿರುಚಿತ್ರಗಳಲ್ಲಿ ನಟಿಸಿ ಅನುಭವ ಹೊಂದಿರುವ ಹರೀಶ್ ಅರಸು ಪೂರ್ಣಪ್ರಮಾಣದಲ್ಲಿ ನಟನಾಗಿ ಗುರುತಿಸಿಕೊಂಡಿದ್ದು ‘ಕನ್ನಡ ದೇಶದೊಳ್’ ಎಂಬ ಸಿನಿಮಾ ಮೂಲಕ. ಅದರಲ್ಲಿ ಅಪ್ಪಟ ಕನ್ನಡಪ್ರೇಮಿ ಹುಡುಗನಾಗಿ ನಟಿಸಿದ್ದ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ನಟನಾಗಿ ಸಿನಿಮಾದಲ್ಲಿ ಅದು ಅವರ ಪಾಲಿಗೆ ಮೊದಲ ಅನುಭವ. ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳಿಂದ ಭರವಸೆ ತುಂಬಿಕೊಂಡಿರುವ ಅವರೀಗ ‘ಧೀರ ಸಾಮ್ರಾಟ್’ ಎಂಬ ಸಿನಿಮಾದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಇದರ ಜೊತೆಗೆ ಮತ್ತೊಂದು ಸಿನಿಮಾ ಅವಕಾಶವೂ ಅವರ ಕೈಲಿದೆ. ಅದರ ಬಗ್ಗೆ ಇಷ್ಟರಲ್ಲಿಯೇ ಮಾಹಿತಿಗಳು ಜಾಹೀರಾಗಲಿವೆ.

    ಹೀಗೆ ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಲೇ ಸಿನಿಮಾ ರಂಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡಿರುವ ಹರೀಶ್ ಮೂಲತಃ ಕಡೂರಿನ ವಡೆಯರಳ್ಳಿಯವರು. ಮಧ್ಯಮ ವರ್ಗದ ರೈತಾಪಿ ಕುಟುಂಬದಿಂದ ಬಂದಿರುವ ಅವರಿಗೆ ಹಳ್ಳಿಯ ಸಹಜ ವಾತಾವರಣವೇ ಕಲೆಗಳ ಗುಂಗು ಹತ್ತುವಂತೆ ಮಾಡಿತ್ತು. ಆ ಕಾಲಕ್ಕೆ ಹರೀಶ್ ಅವರನ್ನು ಬಹುವಾಗಿ ಸೆಳೆದುಕೊಂಡಿದ್ದದ್ದು ನೃತ್ಯ. ಹಳ್ಳಿ ಕಾರ್ಯಕ್ರಮಗಳಲ್ಲಿ ಮೈಮರೆತು ಎಲ್ಲರೂ ಮೆಚ್ಚುವಂತೆ ನೃತ್ಯ ಮಾಡುತ್ತಿದ್ದ ಹರೀಶ್ ಆ ಕಾಲದಲ್ಲಿಯೇ ತಮ್ಮ ಹಳ್ಳಿಯಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದವರು.

    ಇವರ ತಾತ ಗಂಗಯ್ಯ ಕಡೂರು ಸೀಮೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ ನಟನಾಗಿ ಪ್ರಸಿದ್ಧರಾಗಿದ್ದರಂತೆ. ಅವರು ಸುತ್ತಲ ಹತ್ತೂರುಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿರುವವರು. ಬಹುಶಃ ತಾತನ ಕಲಾಸಕ್ತಿಯ ಒಂದಂಶ ಹರೀಶ್ ಅವರೊಳಗೂ ಪ್ರವಹಿಸಿದ್ದರಿಂದಲೇ ಅವರೊಳಗೆ ಕಲಾಸಕ್ತಿ ಹುಟ್ಟಿಕೊಂಡಿದ್ದರೂ ಅಚ್ಚರಿಯೇನಿಲ್ಲ. ಶಾಲಾ ಕಾಲೇಜು ಹಂತದಲ್ಲಿ ಸಿನಿಮಾಸಕ್ತಿ ಇದ್ದರೂ ಆ ಕ್ಷಣದಲ್ಲಿ ಹರೀಶ್ ಅವರಿಗೆ ಬದುಕು ಕಟ್ಟಿಕೊಳ್ಳುವುದೇ ಮುಖ್ಯವಾಗಿತ್ತು. ಇದರಿಂದಾಗಿಯೇ ಸಾಫ್ಟ್‍ವೇರ್ ವಲಯದಲ್ಲಿ ಟ್ರಾನ್ಸ್‍ಪೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದ್ದರು.

    ಆ ನಂತರದಲ್ಲಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಫೇಸ್‍ಬುಕ್‍ನಲ್ಲಿ ವಾರಕ್ಕೊಂದರಂತೆ ಪ್ರಸಾರವಾಗುತ್ತಿದ್ದ ಸೀರೀಸ್‍ನಲ್ಲಿ ನಟಿಸಲಾರಂಭಿಸಿದ್ದರು. ಆ ನಂತರ ಒಂದಷ್ಟು ಕಿರುಚಿತ್ರಗಳಲ್ಲಿಯೂ ಹರೀಶ್ ನಟಿಸಿದ್ದರು. ಹೀಗೆ ಹಂತ ಹಂತವಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸಾಗಿ ಬಂದ ಹರೀಶ್ ಇದೀಗ ನಟನಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ನಟನಾಗಿಯೇ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹೊಂದಿದ್ದಾರೆ. ಯಾವ ಪಾತ್ರವಾದರೂ ಮಾಡುವ ಛಾತಿ ಹೊಂದಿರೋ ಹರೀಶ್ ಅರಸು ಮತ್ತೊಂದಷ್ಟು ಅವಕಾಶ ಗಿಟ್ಟಿಸಿಕೊಂಡು ನಟನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೇ ದಟ್ಟವಾಗಿವೆ.