Tag: ಧಾರವಾರ

  • ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ, ತಾಯಿ ಮೇಲೂ ಹಲ್ಲೆ- ಬೇಸತ್ತ ತಂದೆಯಿಂದ ಮಗನ ಕೊಲೆ

    ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ, ತಾಯಿ ಮೇಲೂ ಹಲ್ಲೆ- ಬೇಸತ್ತ ತಂದೆಯಿಂದ ಮಗನ ಕೊಲೆ

    ಧಾರವಾಡ: ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಗನನ್ನು ತಂದೆ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ತೆಲುಗರ ಓಣಿಯಲ್ಲಿ ನಡೆದಿದೆ.

    ತಂದೆ ಫಕೀರಪ್ಪ ಹಿರೇಕುಂಬಿ ತನ್ನ ಮಗ ಬಸವರಾಜ ಹಿರೇಕುಂಬಿ (36)ಯನ್ನು ಕೊಲೆ ಮಾಡಿದ್ದಾನೆ. ಕುಡಿಯಲು ಹಣ ನೀಡುವಂತೆ ನಿತ್ಯ ಮಗ ಪೀಡಿಸುತ್ತಿದ್ದ ಎನ್ನಲಾಗಿದ್ದು, ಕಳೆದ ರಾತ್ರಿ ಇದೇ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ಆರಂಭವಾಗಿದೆ. ಕೊಲೆಯಾದ ಮಗ ಬಸವರಾಜ್, ತಾಯಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಫಕ್ಕೀರಪ್ಪ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಬಸವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಶಹರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • 30 ಜಮುನಾಪೂರಿ ಮೇಕೆ, ಕುದುರೆ ಖರೀದಿ ಮಾಡಿದ ನಟ ದರ್ಶನ್

    30 ಜಮುನಾಪೂರಿ ಮೇಕೆ, ಕುದುರೆ ಖರೀದಿ ಮಾಡಿದ ನಟ ದರ್ಶನ್

    – ಧಾರವಾಡಕ್ಕೆ ಬಂದ ಕಾರಣ ತಿಳಿಸಿದ ದಾಸ

    ಧಾರವಾಡ: ನಟ ದರ್ಶನ್ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಂದು ಧಾರವಾಡಕ್ಕೆ ಆಗಮಿಸಿರುವ ದರ್ಶನ್, ಮಾಜಿ ಸಚಿವ ವಿನಯ್ ಕುಲಕರ್ಣಿ ಡೈರಿಗೆ ಭೇಟಿ ನೀಡಿದ್ದಾರೆ.

    ವಿನಯ ಕುಲಕರ್ಣಿ ಅವರ ಬಳಿ 30 ಜಮುನಾಪೂರಿ ಮೇಕೆಯನ್ನು ಖರೀದಿ ಮಾಡಿರುವ ನಟ ದರ್ಶನ್, ನಾನು ಮೇಕೆ ಸಾಕಾಣಿಕೆ ಮಾಡುತ್ತಿರುವ ಹಿನ್ನೆಲೆ ಧಾರವಾಡಕ್ಕೆ ಮೇಕೆ ಖರೀದಿಗೆ ಬಂದಿದ್ದೇನೆ ಎಂದು ಹೇಳಿದರು. ಇವತ್ತು ಬೆಳಿಗ್ಗೆಯಿಂದ ಡೇರಿಯಲ್ಲೇ ಚಕ್ಕಡಿ ಓಡಿಸಿದ್ದ ದರ್ಶನ್, ನಾನು ಲ್ಯಾಂಬೊರ್ಗಿನಿ ಓಡಿಸೋಕು ರೇಡಿ, ಚಕ್ಕಡಿ ಓಡಿಸೋಕೂ ರೆಡಿ ಎಂದು ಹೇಳಿದರು.

    ಈ ಮೊದಲು ಹಸುಗಳನ್ನು ಕೂಡಾ ಇಲ್ಲೇ ಖರೀದಿ ಮಾಡಿದ್ದೇನೆ ಎಂದ ದರ್ಶನ್, ವಿನಯ ಕುಲಕರ್ಣಿ ಬಳಿ ಎತ್ತುಗಳು ಚನ್ನಾಗಿವೆ ಎಂದು ಹೇಳಿದರು. ಇದೇ ವೇಳೆ ದರ್ಶನ್ ಬಗ್ಗೆ ಮಾತನಾಡಿದ ವಿನಯ್ ಕುಲಕರ್ಣಿ, ದರ್ಶನ್ ಮೊದಲಿನಿಂದಲೂ ಪ್ರಾಣಿ ಪ್ರಿಯ. ಮೊದಲು ಹಸುಗಳ ಹಾಲನ್ನು ಕೂಡಾ ಅವರು ಮನೆಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೇನೆ ಎಂದು ದರ್ಶನ್ ಬಗ್ಗೆ ಹೊಗಳಿದ ವಿನಯ್ ಕುಲಕರ್ಣಿ, ಇವತ್ತು ನಾನು ದರ್ಶನ್ ಅವರಿಗೆ ಜೀವಂತ ಮೇಕೆಯನ್ನು ಪ್ರತಿ ಕೆಜಿಗೆ 400ರಂತೆ ಕೊಟ್ಟಿದ್ದೇನೆ ಎಂದು ಹೇಳಿದರು.

    ದರ್ಶನ್ ಇದೇ ಡೈರಿಯಲ್ಲಿ ಒಂದು ಕುದುರೆಯನ್ನು ಕೂಡಾ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಟ ದರ್ಶನ್ ವಿನಯ್ ಡೈರಿಗೆ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಸಾಲು ಸಾಲಾಗಿ ಬಂದು ಕಾದರು. ನಂತರ ದರ್ಶನ್ ಅವರನ್ನು ಭೇಟಿ ಮಾಡಿ ಸಂತಸಪಟ್ಟರು.

  • 8.50 ಲಕ್ಷ ಸ್ಪರ್ಧಿಗಳನ್ನ ಹಿಂದಿಕ್ಕಿ ಸೇನೆಗೆ ಧಾರವಾಡದ ಯುವತಿ ಆಯ್ಕೆ

    8.50 ಲಕ್ಷ ಸ್ಪರ್ಧಿಗಳನ್ನ ಹಿಂದಿಕ್ಕಿ ಸೇನೆಗೆ ಧಾರವಾಡದ ಯುವತಿ ಆಯ್ಕೆ

    ಧಾರವಾಡ: 8.50 ಲಕ್ಷ ಸ್ಪರ್ಧಿಗಳನ್ನು ಹಿಂದಿಕ್ಕಿ ಭಾರತೀಯ ಸೇನೆಗೆ ಧಾರವಾಡದ ಯುವತಿ ಭೀಮಕ್ಕ ಆಯ್ಕೆಯಾಗಿದ್ದಾರೆ.

    ಧಾರವಾಡ ಜಿಲ್ಲೆಯ ಮದಿಕೊಪ್ಪ ಗ್ರಾಮದ ಭೀಮಕ್ಕ ಚವ್ಹಾಣ (18) ದೇಶದ ಸೈನ್ಯಕ್ಕೆ ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ವರ್ಷ ದೇಶದ ಸೇನೆ ಭರ್ತಿಗೆ ಕರೆದಿದ್ದ ರ‍್ಯಾಲಿಯಲ್ಲಿ ಭೀಮಕ್ಕ ಆಯ್ಕೆಯಾಗಿದ್ದರು. ಮಂಗಳೂರು ನೇಮಕಾತಿ ವಲಯದಲ್ಲಿ 11 ಜಿಲ್ಲೆಗಳಲ್ಲಿ ಏಕೈಕ ಯುವತಿಯಾಗಿ ಆಯ್ಕೆಯಾಗಿದ್ದು ವಿಶೇಷ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬೀಮಕ್ಕ, ಸೇನೆ ಸೇರುವುದು ನನ್ನ ಕನಸಾಗಿತ್ತು. ಇಂದು ಕನಸು ನನಸಾಗಿದೆ. ನನಗೆ ಈ ಸಾಧನೆ ಮಾಡಲು ಪ್ರೇರಣೆ ನೀಡಿದ ಎಲ್ಲಾ ನನ್ನ ಗುರುವೃಂದದವರಿಗೆ ಧನ್ಯವಾದಗಳು. ಸೇನೆ ಸೇರುತ್ತೇನೆ ಎಂದು ಹೋದಾಗ ಅದಕ್ಕೆ ಪ್ರೋತ್ಸಾಹ ನೀಡಿದ ತಂದೆ ತಾಯಿಗೆ ನನ್ನ ವಂದನೆಗಳು. ಸೇನೆಗೆ ಸೇರಿ ದೇಶಕ್ಕಾಗಿ ಏನಾದರೂ ಸಾಧನೆ ಮಾಡುತ್ತೇನೆ ಎಂದು ಭೀಮಕ್ಕ ಹೇಳಿದ್ದಾರೆ.

    ಭೀಮಕ್ಕ ನಗರದ ಕೆಸಿಡಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದು, ಇದರ ನಡುವೆ ಸೇನೆಗೆ ಆಯ್ಕೆಯಾಗಿದ್ದಾರೆ. ಈ ವಿಷಯ ತಿಳಿದ ಗ್ರಾಮದ ಜನರಲ್ಲಿ ಸಂಭ್ರಮ ಮನೆ ಮಾಡಿದ್ದು, ಎಲ್ಲರೂ ಭೀಮಕ್ಕ ಕುಟುಂಬಸ್ಥರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸೇನೆಗೆ ಆಯ್ಕೆಯಾಗಿದ್ದು ಭೀಮಕ್ಕಳ ತಾಯಿಯ ಕಣ್ಣಲ್ಲಿ ಸಂತಸದ ಕಣ್ಣೀರು ತರಿಸಿದೆ. ಸದ್ಯ ಈ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭೀಮಕ್ಕ ಹೇಳಿದ್ದಾರೆ.

  • 3 ವರ್ಷದ ಬಾಲಕನನ್ನ ಕಿಡ್ನಾಪ್ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ 16ರ ಪೋರ

    3 ವರ್ಷದ ಬಾಲಕನನ್ನ ಕಿಡ್ನಾಪ್ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ 16ರ ಪೋರ

    ಧಾರವಾಡ: ಮೂರು ವರ್ಷದ ಬಾಲಕನನ್ನು 16 ವರ್ಷದ ಬಾಲಕನೊಬ್ಬ ಕಿಡ್ನಾಪ್ ಮಾಡಿ ಐದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಜಯನಗರದಲ್ಲಿನ ಸಂಕಲ್ಪ ಪಿಜಿ ಸೆಂಟರ್‌ನ ಮಾಲೀಕರ ಮಗುವನ್ನು 16 ವರ್ಷದ ಅಪ್ರಾಪ್ತ ಬಾಲಕ ಇಂದು ಮಧ್ಯಾಹ್ನ ಅಪಹರಿಸಿದ್ದ. ಬಳಿಕ ಭಾರತಿ ಅವರಿಗೆ ಕರೆ ಮಾಡಿ, ನಿಮ್ಮ ಮಗ ನಮ್ಮ ಬಳಿಯೇ ಇದ್ದಾನೆ. ಐದು ಲಕ್ಷ ರೂ. ತಂದುಕೊಟ್ಟು ಮಗನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದ. ಇದರಿಂದ ಗಾಬರಿಗೊಳಗಾದ ಭಾರತಿ ಪೊಲೀಸರು ಮೊರೆ ಹೋಗಿದ್ದರು.

    ಭಾರತಿ ಅವರಿಗೆ ಕರೆ ಮಾಡಿದ್ದ ಅಪ್ರಾಪ್ತನ ಮೊಬೈಲ್ ನಂಬರ್ ಅನ್ನು ಪೊಲೀಸರು ಟ್ರೇಸ್ ಮಾಡಿದ್ದರು. ಈ ವೇಳೆ ಅಪಹರಣಕಾರ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತಾಡುತ್ತಿರುವುದು ಖಚಿತವಾಗಿತ್ತು. ಕವಿವಿ ಆವರಣದಲ್ಲಿ ಕಾರ್ಯಾಚರಣೆಗೆ ಇಳಿದ 30ಕ್ಕೂ ಹೆಚ್ಚು ಪೊಲೀಸರು ಕ್ಯಾಂಪಸ್ ಸುತ್ತಲೂ ನಾಕಾಬಂಧಿ ಮಾಡಿದ್ದರು. ಇತ್ತ ಭಾರತಿ ಅವರು 5 ಲಕ್ಷ ರೂ. ತೆಗೆದುಕೊಂಡು ವಿಶ್ವವಿದ್ಯಾಲಯ ಕ್ಯಾಂಪಸ್‍ಗೆ ಬಂದಿದ್ದರು.

    ಬಟಾನಿಕಲ್ ಗಾರ್ಡನ್‍ನಲ್ಲಿ ಬಾಲಕನ ಸಮೇತ ಬಚ್ಚಿಟ್ಟುಕೊಂಡಿದ್ದ ಅಪ್ರಾಪ್ತನನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಬಳಿಕ ಭಾರತಿ ಅವರ ಮಗುವನ್ನ ರಕ್ಷಿಸಿ ಅಪ್ರಾಪ್ತನನ್ನು ವಶಕ್ಕೆ ಪಡಿದಿದ್ದಾರೆ.

    ಅಪ್ರಾಪ್ತನು ಈ ಹಿಂದೆ ಸಂಕಲ್ಪ ಪಿಜಿ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದ. ಶುಕ್ರವಾರ ಮನೆಗೆ ಬಂದು ಭಾರತಿ ಅವರನ್ನು ಮಾತನಾಡಿಸಿ ವಾಪಸ್ ಹೋಗಿದ್ದ. ಹಾಗೆಯೇ ಇವತ್ತು ಕೂಡ ಮನೆಗೆ ಬಂದು, ವಾಪಸ್ ಹೋಗುವಾಗ ಮನೆಯ ಮುಂದೆ ಆಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದ ನಂತರ ಭಾರತಿ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.