ಧಾರವಾಡ: ಬೆಂಗಳೂರಿನಲ್ಲಿ ಕಾಂಗ್ರೆಸ್ (Congress) ನಾಯಕರು ಚಿಲುಮೆ ಸಂಸ್ಥೆಯ ಮೇಲೆ ಮತದಾರರ ಪಟ್ಟಿಯಲ್ಲಿ ಗೋಲ್‍ಮಾಲ್ ಮಾಡಿದ ಆರೋಪದ ಬೆನ್ನಲ್ಲೇ, ಧಾರವಾಡ ಜಿಲ್ಲೆಯಲ್ಲಿ ಕೂಡಾ ಇದೇ ರೀತಿ ಗೋಲ್‍ಮಾಲ್ ನಡೆದ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಅಲ್ಪಸಂಖ್ಯಾತ ಮತದಾರರನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆರೋಪ ಮಾಡಿದ್ದು, ಪಾಲಿಕೆಯ ಹಲವು ವಾರ್ಡ್ ಗಳಲ್ಲಿ ಈ ರೀತಿಯ ಮತದಾರರ ಪಟ್ಟಿಯಿಂದ ಹೆಸರು ಗಾಯಬ್ ಮಾಡಲಾಗಿದೆ ಎಂದಿದ್ದಾರೆ. ಈ ಕ್ಷೇತ್ರದ ವಾರ್ಡ್ ನಂಬರ್ 14, 16 ಹಾಗೂ 22ರಲ್ಲಿ ಬೇರೆ ಕಡೆ ಮತದಾರರನ್ನ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಧಾರವಾಡ ನಗರದ ಪಿಜಿಯಲ್ಲಿ ಇರುವ ಬೇರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹಾಕುವ ಕೆಲಸ ನಡೆದಿದೆ ಆರೋಪಿಸ್ತಿದ್ದಾರೆ.

ಮತ್ತೊಂದು ಕಡೆ ಈ ಮತದಾರರ ಪಟ್ಟಿ ಹಿಡಿದು ಮನೆಗೆ ಬರುವ ಕೆಲವರು, ಯಾರಿಗೆ ಮತ ಹಾಕ್ತಾರೆ ಎಂದು ಕೇಳ್ತಾರಂತೆ. ಅವರು ಕಾಂಗ್ರೆಸ್‍ಗೆ ಮತ ಹಾಕ್ತೇವೆ ಎಂದ್ರೆ ಆ ಮತದಾರನ್ನ ಪಟ್ಟಿಯಿಂದ ಡಿಲೀಟ್ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆರೋಪಿಸಿದ್ದಾರೆ. ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ

ಪಾಲಿಕೆ ಚುನಾವಣೆಯಲ್ಲಿ ಇದೇ ರೀತಿ ಮಾಡಿ ಬಿಜೆಪಿ ಪಶ್ಚಿಮ ಕ್ಷೇತ್ರದ ನಾಲ್ಕು ವಾರ್ಡ್ ಗೆದ್ದಿದೆ, 80 ಬೂತ್‍ಗಳಲ್ಲಿ ಮತದಾರರನ್ನ ಡಿಲೀಟ್ ಮಾಡುವ ಕೆಲಸ ನಡೆದಿದೆ. ಇದರ ಹಿಂದೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ (Aravind Bellad) ಕೈವಾಡ ಇದೆ ಎಂದು ಆರೋಪಿಸಲಾಗ್ತಿದೆ.

ಒಟ್ಟಿನಲ್ಲಿ ಬೆಂಗಳೂರಿನ ನಂತರ ಅವಳಿ ನಗರವಾದ ಧಾರವಾಡದಲ್ಲೂ ಮತಪಟ್ಟಿ ಗೋಲ್ಮಾಲ್ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಾಲಿಕೆ ಆಯುಕ್ತರು ಅಥವಾ ಚುನಾವಣಾ ಆಯೋಗವೇ ಸತ್ಯ ಹೇಳಬೇಕಿದೆ.
























