Tag: ಧಾರವಾಡ

  • ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಧಾರವಾಡ: ರಿಯಲ್ ಎಸ್ಟೇಟ್ (Real Estate) ಉದ್ಯಮಿ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಧಾರವಾಡದಲ್ಲಿ (Dharwad) ತಡರಾತ್ರಿ ನಡೆದಿದೆ.

    ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ಹಾಗೂ ಮತ್ತೊರ್ವ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಗರದ ಕಮಲಾಪುರ (Kamalapur) ಹೊರವಲಯದ ಮನೆ ಎದುರು ಮಹಮ್ಮದ್ ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

    ಮಹಮ್ಮದ್ ಅವರ ಅವರ ಮನೆಯಲ್ಲಿದ್ದ ಮತ್ತೋರ್ವನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆತ ಓಡಿ ಹೋಗಿದ್ದು, ಮನೆಯಿಂದ ರಸ್ತೆಯುದ್ದಕ್ಕೂ ರಕ್ತ ಚೆಲ್ಲಾಡಿದೆ. ಆತ ಕೂಡ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ಹೆಸರು ತಿಳಿದು ಬಂದಿಲ್ಲ.

    ಸ್ಥಳಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಸೇರಿದಂತೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೋಡಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಈ ಹತ್ಯೆ ಹಿಂದಿನ ಕಾರಣ ಏನು ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಗುಪ್ತಾ ಅವರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಾರಕಾಸ್ತ್ರಗಳು ಪತ್ತೆಯಾಗಿವೆ. ಆರೋಪಿಗಳ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ – ಮಾರ್ಗಸೂಚಿಯಲ್ಲಿ ಏನಿರಬಹುದು?

  • ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಧಾರವಾಡ: ಹೆರಿಗೆಗೆಂದು (Delivery) ಗರ್ಭಿಣಿಯನ್ನು (Pregnant) ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಂಬುಲೆನ್ಸ್‌ನಲ್ಲೇ (Ambulance) ಮಗುವಿಗೆ ಜನ್ಮ ನೀಡಿದ ಪ್ರಸಂಗ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೆನಕುಂಠಿ ಗ್ರಾಮದ ಆಫ್ರೀನ್ ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮವಿತ್ತ ತಾಯಿ. ಗುರುವಾರ ಆಫ್ರೀನ್‌ಗೆ ಹೆರಿಗೆ ನೋವು ಆರಂಭವಾಗಿತ್ತು. ತಕ್ಷಣವೇ ಕುಟುಂಬದವರು 108 ಅಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಸಿಬ್ಬಂದಿ ಕುಂದಗೋಳ ತಾಲೂಕು ಆಸ್ಪತ್ರೆಗೆ ಆಕೆಯನ್ನು ಸಾಗಿಸುತ್ತಿದ್ದ ಸಂದರ್ಭ ಹೆರಿಗೆ ನೋವು ಜೋರಾಗಿದೆ. ಇದನ್ನೂ ಓದಿ: ಗ್ಯಾರಂಟಿ ಗೊಂದಲದ ನಡುವೆ ಕರೆಂಟ್ ಬಿಲ್ ಗೋಲ್‌ಮಾಲ್: ಜೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ

    ತಕ್ಷಣವೇ ಎಚ್ಚೆತ್ತುಕೊಂಡ ಅಶೋಕ್ ಪೂಜಾರ, ಬಸವರಾಜ ರಾಠೋಡ್ ಎಂಬ ಸಿಬ್ಬಂದಿ ಅಂಬುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕರ್ತವ್ಯ ಲೋಪ ಎಸಗಿದ್ರೆ ವರ್ಗಾವಣೆ ಇಲ್ಲ ನೇರವಾಗಿ ಸಸ್ಪೆಂಡ್- ಅಧಿಕಾರಿಗಳಿಗೆ ವಾರ್ನಿಂಗ್

  • ವಿಷಕಾರಿ ಹಾವು ಕಚ್ಚಿ 27 ವರ್ಷದ ಯುವಕ ಸಾವು

    ವಿಷಕಾರಿ ಹಾವು ಕಚ್ಚಿ 27 ವರ್ಷದ ಯುವಕ ಸಾವು

    ಧಾರವಾಡ: ವಿಷಕಾರಿ ಹಾವು (Poisonous Snake) ಕಚ್ಚಿ 27 ವರ್ಷದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಶ್ರಿರಾಮನಗರ (Shriram Nagar) ನಿವಾಸಿ ಚೇತನ್ (27) ಮೃತಪಟ್ಟ ಯುವಕ. ವಿಷಪೂರಿತ ಹಾವೊಂದು ಶ್ರಿರಾಮನಗರದ ತುಳಜಾ ಭವಾನಿ ದೇವಸ್ಥಾನದ ಬಳಿ ಬಂದಿತ್ತು. ಅದನ್ನು ಹಿಡಿಯುವ ಸಲುವಾಗಿ ಚೇತನ್ ಅದರ ಸಮೀಪ ಹೋಗಿದ್ದಾರೆ. ಈ ವೇಳೆ ಅವರಿಗೆ ಹಾವು ಕಚ್ಚಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮೊಸಳೆ ದಾಳಿಗೆ ಬಾಲಕ ಬಲಿ – ಮೃತದೇಹಕ್ಕಾಗಿ ಹುಡುಕಾಟ

    ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾವು ಕಚ್ಚಿದ ತಕ್ಷಣ ಚೇತನ್ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಚೇತನ್ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

  • ಮೊದಲ ಮತದಾನಕ್ಕೆ ಬಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿದ್ಯಾರ್ಥಿನಿ

    ಮೊದಲ ಮತದಾನಕ್ಕೆ ಬಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿದ್ಯಾರ್ಥಿನಿ

    ರಾಯಚೂರು: ತನ್ನ ಮೊದಲ ಮತದಾನ (Voting) ಮಾಡಲು ಉತ್ಸಾಹದಲ್ಲಿ ಸ್ವಗ್ರಾಮಕ್ಕೆ ಬಂದಿದ್ದ ವಿದ್ಯಾರ್ಥಿನಿ ಮತದಾನ ನಂತರ ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಲಿಂಗಸುಗೂರಿನ ಮುದಗಲ್ ಬಳಿ ಮೇ 10 ರಂದು ಅಪಘಾತ ನಡೆದಿದೆ.

    ಮತದಾನ ಮಾಡಿ ಬೈಕ್‌ನಲ್ಲಿ ಮನೆಗೆ ಮರಳುವಾಗ ಬೈಕ್ ಹಾಗೂ ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ (Road Accident) ನಡೆದಿದ್ದು, 20 ವರ್ಷದ ಸನಾ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮೊದಲ ಬಾರಿಗೆ ಮತದಾನ ಮಾಡಲು ಧಾರವಾಡದಿಂದ ಹಟ್ಟಿ ಪಟ್ಟಣಕ್ಕೆ ಬಂದಿದ್ದಳು. ಮಸ್ಕಿ ವಿಧಾನಸಭಾ ಕ್ಷೇತ್ರದ ಜಕ್ಕಲುಮರಡಿಯಲ್ಲಿ ಮತದಾನ ಮಾಡಿ ವಾಸವಿರುವ ಹಟ್ಟಿಗೆ ಬೈಕ್‌ನಲ್ಲಿ ಮರಳುವಾಗ ಮುದಗಲ್ ಬಳಿ ಅಪಘಾತ ನಡೆದಿದೆ. ಇದನ್ನೂ ಓದಿ: ಬಿಎಸ್‍ವೈ ಕಣ್ಣೀರು ಹಾಕಿ ರಾಜೀನಾಮೆ ಕೊಟ್ಟು ಬಂದಾಗಿನಿಂದ ಇಂಪ್ಯಾಕ್ಟ್ ಆಯ್ತು: ಶೆಟ್ಟರ್

    ಧಾರವಾಡದಲ್ಲಿ ಬಿಎಸ್‌ಸಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಗೆ (BSC Nursing Student) ಅಪಘಾತದಲ್ಲಿ ಕೈ, ಕಾಲು ಮುರಿತವಾಗಿದ್ದು, ಕಿಡ್ನಿ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಗಳ ಚಿಕಿತ್ಸೆಗೆ ಪರದಾಡುತ್ತಿರುವ ಬಡ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಮನೆಗೆ ಆಧಾರವಾಗಬೇಕಿದ್ದ ಮಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ ಪೋಷಕರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಸಚಿನ್‌ ಪೈಲೆಟ್‌ಗೆ ರಾಹುಲ್‌ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ

  • ವಿನಯ್ ಕುಲಕರ್ಣಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವಂತೆ ಮುರುಘಾಮಠದ ಶ್ರೀಗಳ ಒತ್ತಾಯ

    ವಿನಯ್ ಕುಲಕರ್ಣಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವಂತೆ ಮುರುಘಾಮಠದ ಶ್ರೀಗಳ ಒತ್ತಾಯ

    ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ವಿನಯ್ ಕುಲಕರ್ಣಿಯವರಿಗೆ (Vinay Kulkarni) ಉಪಮುಖ್ಯಮಂತ್ರಿ (Deputy Chief Minister) ಸ್ಥಾನ ನೀಡಬೇಕು ಎಂದು ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಜನಪ್ರಿಯ ಶಾಸಕರು. ಉತ್ತರ ಕರ್ನಾಟಕದ ಪ್ರಬಲ ನಾಯಕರು. ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಚೆನ್ನಾಗಿರುತ್ತದೆ. ಇದು ನನ್ನ ಸ್ವಂತ ವಿಚಾರ. ಸಾಮಾಜಿಕವಾಗಿ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: 135 ಶಾಸಕರು ನಮ್ಮವರೇ, ಹೈಕಮಾಂಡ್ ಪಾದಕ್ಕೆ ಹಾಕಿದ್ದೀವಿ: ಡಿಕೆ ಶಿವಕುಮಾರ್

    ವಿನಯ್ ಕುಲಕರ್ಣಿ ಮುರುಘಾಮಠದ (Murugamata) ಕಾರ್ಯಾಧ್ಯಕ್ಷರು. ಅವರ ಜೊತೆ ಉಳಿದ ಲಿಂಗಾಯತ ಶಾಸಕರಿಗೂ ಒಳ್ಳೆಯ ಸ್ಥಾನಮಾನ ಕೊಡಬೇಕು. ವಿನಯ್ ಕುಲಕರ್ಣಿ ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದೇ ಆದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲು ಪುಷ್ಠಿ ನೀಡಿದಂತಾಗುತ್ತದೆ. ಅವರು ನಮ್ಮ ಮಠದ ಕಾರ್ಯಾಧ್ಯಕ್ಷರಾಗಿರುವುದರಿಂದ ಇದರಲ್ಲೂ ನಮ್ಮ ಸ್ವಾರ್ಥ ಇದೆ ಎಂದಿದ್ದಾರೆ. ಇದನ್ನೂ ಓದಿ: ಕಜಕಿಸ್ತಾನದಿಂದ ಬೆದರಿಕೆ ಕರೆ – ಪೊಲೀಸರಿಗೆ ದೂರು ನೀಡಿದ ಈಶ್ವರಪ್ಪ

  • ಶೆಟ್ಟರ್ ಸೋತರೂ ಧಾರವಾಡದಲ್ಲಿ ಕಾಂಗ್ರೆಸ್‍ನದ್ದೇ ಮೇಲುಗೈ

    ಶೆಟ್ಟರ್ ಸೋತರೂ ಧಾರವಾಡದಲ್ಲಿ ಕಾಂಗ್ರೆಸ್‍ನದ್ದೇ ಮೇಲುಗೈ

    ಧಾರವಾಡ: ಕಾಂಗ್ರೆಸ್ ಸುನಾಮಿಗೆ ಬಿಜೆಪಿ ಮಕಾಡೆ ಮಲಗಿದ್ದು, ಜಿಲ್ಲೆಯಲ್ಲಿ 4 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿ ಗೆಲುವು ಸಾಧಿಸಿದೆ.

    ಹುಬ್ಬಳ್ಳಿ, ಧಾರವಾಡ ಕೇಂದ್ರ: ತೀವ್ರ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ ಧಾರವಾಡ ಕೇಂದ್ರದಲ್ಲಿ ಮಹೇಶ್ ತೆಂಗಿನಕಾಯಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದ ಜಗದೀಶ್ ಶೆಟ್ಟರ್ ಹಿನಾಯ ಸೋಲು ಅನುಭವಿಸಿದ್ದಾರೆ.

    ಕುಂದಗೋಳ: ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎಂ.ಆರ್ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಶಿವಳ್ಳಿ ಸ್ಪರ್ಧಿಸಿದ್ದರು.

    ನವಲಗುಂದ: ಕಾಂಗ್ರೆಸ್ ಅಭ್ಯರ್ಥಿ ಎನ್.ಹೆಚ್ ಕೋನರಡ್ಡಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ, ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಪರಭವಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎನ್ ಗಡ್ಡಿ ಸ್ಪರ್ಧಿಸಿದ್ದರು.

    ಹುಬ್ಬಳ್ಳಿ ಧಾರವಾಡ ಪೂರ್ವ: ಕಾಂಗ್ರೆಸ್ ಅಬ್ಬಯ್ಯ ಪ್ರಸಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಡಾ. ಕ್ರಾಂತಿ ಕಿರಣ್ ಸ್ಪರ್ಧಿಸಿದ್ದರು.

    ಹುಬ್ಬಳ್ಳಿ ಧಾರವಾಡ ಪಶ್ಚಿಮ: ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನಿಂದ ದೀಪಕ್ ಚಿಂಚೋರೆ, ಜೆಡಿಎಸ್‍ನಿಂದ ಗುರುರಾಜ್ ಹುಣಶಿಮರದ ಸ್ಪರ್ಧಿಸಿದ್ದರು.

    ಕಲಘಟಗಿ: ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ನಾಗರಾಜ್ ಛಬ್ಬಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಮೈಸೂರು ಜಿಲ್ಲೆಯ ಕ್ಷೇತ್ರಗಳ ಚುನಾವಣಾ ಫಲಿತಾಂಶ

    ಧಾರವಾಡ ಗ್ರಾಮೀಣ: ಕ್ಷೇತ್ರಕ್ಕೆ ಬಾರದೇ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಅಮೃತ ದೇಸಾಯಿ, ಜೆಡಿಎಸ್‍ನಿಂದ ಮಂಜುನಾಥ ಹಗೇದಾರ್ ಕಣದಲ್ಲಿದ್ದರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಬಿಜೆಪಿಗೆ ಶಾಕ್ – ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಜಯ

  • ರಾಜ್ಯಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧ

    ರಾಜ್ಯಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧ

    ಧಾರವಾಡ: ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೇ 8 ರಂದು ಸಂಜೆ 5 ಗಂಟೆಯಿಂದ ಮೇ 11ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಧಾರವಾಡ (Dharwad) ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ (Gurudatta Hegde) ತಿಳಿಸಿದ್ದಾರೆ.

    ಧಾರವಾಡ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 13 ರಂದು ಮತ ಎಣಿಕೆ ನಡೆಯುವುದರಿಂದ ಆ ದಿನವೂ ಬೆಳಿಗ್ಗೆ 6 ಗಂಟೆಯಿಂದ ಮೇ 14ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನ ನಿಷೇಧಿಸಲಾಗಿದೆ. ಈ ಹಿನ್ನೆಯೆಲ್ಲಿ ಜಿಲ್ಲೆಯಲ್ಲೂ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ ಎಂದರು. ಇದನ್ನೂ ಓದಿ: ನಾಳೆ ನನ್ನ ಶುಲ್ಕ ಮರೆಯುವುದಿಲ್ಲ – ವಿದ್ಯಾರ್ಥಿಗಳಿಗೆ ಬರೆಯುವ ಶಿಕ್ಷೆ ವಿಧಿಸಿದ್ದ ಟೀಚರ್ ಸಸ್ಪೆಂಡ್

    ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7,65,160 ಪುರುಷ ಮತದಾರರು, 7,57,831 ಮಹಿಳಾ ಮತದಾರರಿದ್ದಾರೆ. ಇತರೆ 89 ಮತದಾರರಿದ್ದು, ಒಟ್ಟು 15,23,080 ಮತದಾರರಿದ್ದಾರೆ. ಈಗಾಗಲೇ 80 ವರ್ಷ ಮೇಲ್ಪಟ್ಟ ಒಟ್ಟು 1,615 ಮಂದಿ ಮತದಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ IT ರೇಡ್ – ಕೋಟಿ ಕೋಟಿ ಹಣ ಸೀಜ್

    ಜಿಲ್ಲೆಯಲ್ಲಿ ಒಟ್ಟು 1,636 ಮುಖ್ಯ ಮತಗಟ್ಟೆಗಳು ಹಾಗೂ 6 ಆಕ್ಸಲರಿ ಮತಗಟ್ಟೆಗಳನ್ನ ತೆರೆಯಲಾಗಿದೆ. ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 58 ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ. 1.58 ಕೋಟಿ ಹಣ ಸೀಜ್ ಮಾಡಲಾಗಿದೆ. 1.42 ಕೋಟಿ ಮೌಲ್ಯದ ಲಿಕ್ಕರ್ ಸೀಜ್ ಮಾಡಲಾಗಿದೆ. ಮತದಾನ ಪೂರ್ವ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮೇ 8ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ ಎಂದು ಹೇಳಿದ್ದಾರೆ.

    ಮತದಾನಕ್ಕೆ ಒಟ್ಟು 8,319 ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಒಟ್ಟು 1,642 ಮತಗಟ್ಟೆಗಳ ಪೈಕಿ 824 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಮಾಡಲಾಗಿದೆ. 175 ಮತಗಟ್ಟೆಗಳಿಗೆ ಮೈಕ್ರೊ ಅಬ್ಸರ್ವರ್‌ಗಳನ್ನ ನಿಯೋಜಿಸಲಾಗಿದೆ. ಮತದಾನದ ದಿನ ಸರ್ಕಾರಿ ಶಾಲಾ, ಕಾಲೇಜು, ಕಚೇರಿಗಳು, ವಿವಿಧ ಸಂಘ, ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ವಿವರಿಸಿದರು.

  • ಲಿಂಗಾಯತ ಅಭ್ಯರ್ಥಿಯನ್ನೇ ಸಿಎಂ ಮಾಡುತ್ತೇವೆಂದು ಹೇಳುವ ಧೈರ್ಯ ಬಿಜೆಪಿಗಿದೆಯಾ?: ಜಗದೀಶ್ ಶೆಟ್ಟರ್

    ಲಿಂಗಾಯತ ಅಭ್ಯರ್ಥಿಯನ್ನೇ ಸಿಎಂ ಮಾಡುತ್ತೇವೆಂದು ಹೇಳುವ ಧೈರ್ಯ ಬಿಜೆಪಿಗಿದೆಯಾ?: ಜಗದೀಶ್ ಶೆಟ್ಟರ್

    ಧಾರವಾಡ: ಮುಂದೆಯೂ ಲಿಂಗಾಯತ (Lingayat) ಅಭ್ಯರ್ಥಿಯನ್ನೇ ಸಿಎಂ ಮಾಡುತ್ತೇವೆ ಎಂದು ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ಪ್ರಶ್ನೆ ಮಾಡಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಈಗ ಯಾರ ಕೈಯಲ್ಲಿ ಇದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಇದರಿಂದ ಉಳಿದ ಸಮಯದಾಯದವರು ನೊಂದಿದ್ದಾರೆ. ಇದಕ್ಕೆ ತಕ್ಕ ಪಾಠ ಬಿಜೆಪಿಗೆ ಚುನಾವಣೆಯಲ್ಲಿ ಸಿಗಲಿದೆ. ಲಿಂಗಾಯತ ಸಮುದಾಯ ಹೊರಗಿಟ್ಟು ಅದರ ಬೆಂಬಲ ಇಲ್ಲದೇ ಬಿಜೆಪಿಯವರು ಸರ್ಕಾರ ರಚನೆ ಮಾಡಲು ಹೊರಟಿದ್ದಾರೆ. ಅವಸರವೇ ಬಿಜೆಪಿಗೆ ಅಪಘಾತವನ್ನುಂಟು ಮಾಡಲಿದೆ ಎಂದರು.

    ರಾಜ್ಯದಲ್ಲಿ 25 ಸಂಸದರಿದ್ದರೂ ಪ್ರಹ್ಲಾದ್ ಜೋಶಿ (Pralhad Joshi) ಒಬ್ಬರನ್ನೇ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ಮಾಡಲಾಗಿದೆ. ನಾರಾಯಣಸ್ವಾಮಿ ದಲಿತ ಜನಾಂಗದವರು ಅವರು ರಾಜ್ಯಮಂತ್ರಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಒಕ್ಕಲಿಗರು ಅವರು ಕೂಡ ರಾಜ್ಯಮಂತ್ರಿಯಾಗಿದ್ದಾರೆ. ಲಿಂಗಾಯತ ಸಮಾಜದ ಭಗವಂತ ಖೂಬಾ ಹಾಗೂ ಸುರೇಶ್ ಅಂಗಡಿ (Suresh Angadi) ಯವರನ್ನೂ ರಾಜ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಇಲ್ಲೇ ತಾರತಮ್ಯ ಎದ್ದು ಕಾಣುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಚಳಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಚಟ ಈಶ್ವರಪ್ಪರಿಗಿದೆ, ನನಗಿಲ್ಲ: ಮಧು ಬಂಗಾರಪ್ಪ

    ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ನೇರವಾಗಿ ಬಂದು ಪ್ರಚಾರ ಮಾಡಲು ಆಗುತ್ತಿಲ್ಲ. ಅವರ ಮೇಲೆ ದೊಡ್ಡ ಷಡ್ಯಂತ್ರವೇ ನಡೆದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರ ಬೆಂಬಲಿಗರಿಗೆ ಪ್ರಚಾರ ಮಾಡುವ ಹಕ್ಕಿದೆ. ಆದರೆ ಅವರ ಬೆಂಬಲಿಗರ ಮೇಲೂ ಐಟಿ ದಾಳಿ ನಡೆಸಿ ಹೆದರಿಸುವ ತಂತ್ರ ನಡೆದಿದೆ. ಇದು ಬಹಳ ದಿನ ನಡೆಯುವುದಿಲ್ಲ. ಕೇಂದ್ರದಲ್ಲಿ ಅಧಿಕಾರ ಇದೆ ಎಂದು ಇಲ್ಲಿನ ಕೇಂದ್ರ ಸಚಿವರು ಈ ರೀತಿ ದಾಳಿ ಮಾಡಿಸುತ್ತಿದ್ದಾರೆ. ಇದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ. ಇದೆಲ್ಲದಕ್ಕೂ ಮೇ.13 ರಂದು ಜನ ಉತ್ತರ ಕೊಡುತ್ತಾರೆ ಎಂದು ಶೆಟ್ಟರ್ ಹೇಳಿದರು.

    ನಿನ್ನೆ ನಾನು ರೋಣ, ಹಾವೇರಿ, ಗಜೇಂದ್ರಗಡ ಸೇರಿದಂತೆ ಹಲವು ಕಡೆ ಪ್ರಚಾರ ಮಾಡಿದ್ದೇನೆ. ಮಧ್ಯಾಹ್ನ ಉರಿಬಿಸಿಲಿನಲ್ಲೂ ಜನ ಸೇರಿದ್ದರು. ಇದನ್ನು ನೋಡಿದರೆ ನಮಗೆ ಉತ್ತಮ ಬೆಂಬಲ ಸಿಗುತ್ತಿದೆ. ಬಿಜೆಪಿಯಲ್ಲಿ ನನಗೆ ಅಪಮಾನ ಮಾಡಿದ್ದಕ್ಕೆ ಹೊರ ಬಂದಿದ್ದೇನೆ. ನಾನು ಕಟ್ಟಿದ ಮನೆಯಿಂದ ನನ್ನನ್ನು ಹೊರ ಹಾಕುವ ಕೆಲಸ ನಡೆಯಿತು ಎಂದರು.

  • ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

    ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

    ಧಾರವಾಡ: ಬಜರಂಗದಳ (Bajarangdal) ದವರು ನಮ್ಮ ಹನುಮನ ಭಕ್ತರು. ಒಬ್ಬೊಬ್ಬರು ಸಿಡಿದು ನಿಂತರೆ ಬೇರು ಸಮೇತ ಕಿತ್ತು ಹೋಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ‌ (Shankar Patil Munenakoppa) ಪರ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ನವಲಗುಂದಕ್ಕೆ ಇದು ಬಂಡಾಯ ನಾಡು ಎಂದು ಕರೆದರು. ಈ ಭಾಗದಲ್ಲಿ ಮಹದಾಯಿ ನೀರು ಬಂದಿರಲಿಲ್ಲ, ರೈತರ ಮೇಲೆ ಗುಂಡು ಹಾಕಿದ ಸರ್ಕಾರ ಕಾಂಗ್ರೆಸ್ ಎಂದು ಟೀಕಿಸಿದ ಅವರು, ಮಹದಾಯಿ (Mayadayi) ನೀರನ್ನು ಮಲಪ್ರಭೆಗೆ ತಂದು ನೀರು ಕೊಡಲು ಅಡ್ಡ ಹಾಕಿದ್ದ ಕಾಂಗ್ರೆಸ್, ಸೋನಿಯಾ ಗಾಂಧಿ ಅವರು ಗೋವಾ (Goa) ದಲ್ಲಿ ಹೋಗಿ ಹನಿ ನೀರು ಕೊಡಲ್ಲ ಎಂದಿದ್ರು ಎಂದರು.

    ಮನಮೋಹನ್ ಸಿಂಗ್ (Manamohan Singh) ಅವರು ನಮಗೆ ನೀರು ಕೊಡಲು ಟ್ರಿಬುನಲ್ ಮಾಡಿದ್ರು, ಸಿದ್ದರಾಮಯ್ಯ ಸರ್ಕಾರ ಗೋಡೆ ಕಟ್ಟಿದ್ರು, ಒಂದು ಕೋಟಿ ಖರ್ಚು ಮಾಡಿ ನಾವು ಕೆನಲ್ ಕಟ್ಟಿದೆವು, ಗೋಡೆ ಕಟ್ಟಿದೆವು ಎಂದ ಸಿಎಂ, ಇದೇ ನವಲಗುಂದ ತಾಲೂಕಿನಲ್ಲಿ ಹೆಣ್ಣು ಮಕ್ಕಳ ಮೇಲೆ ಲಾಠಿ ಹೊಡೆದವರಿಗೆ ಮತ ಹಾಕ್ತಿರಾ ಎಂದು ಪ್ರಶ್ನೆ ಮಾಡಿದರು. ಮೋದಿ ಅವರು ನಮಗೆ ಮಹದಾಯಿಗಾಗಿ ಅನುಮತಿ ಕೊಟ್ಡಿದ್ದಾರೆ. ನಾವು ಟೆಂಡರ್ ಮಾಡಿದ್ದೇವೆ, ಕೆಲಸ ಆರಂಭ ಆಗಲಿದೆ ಎಂದ ಬೊಮ್ಮಾಯಿ, ಈಗಾಗಲೇ ನಾನು ಒಂದು ಸಾವಿರ ಕೋಟಿ ಕೊಟ್ಟಿದ್ದೇನೆ. ಎರಡು ವರ್ಷದಲ್ಲಿ ಕಾಮಗಾರಿ ಮಾಡ್ತೇವೆ ಎಂದರು.

    ಗ್ಯಾರಂಟಿ ಕೊಡುತ್ತಾರೆ ಕಾಂಗ್ರೆಸ್ ನವರು, ಮೋದಿ (Narendra Modi) ಅವರ ಅಕ್ಕಿ ಅದು, ಎಲ್ಲ ಗ್ಯಾರಂಟಿ ಮೇ 10ವರೆಗೆ, ಅದರ ನಂತರ ಗಳಗಂಟಿ ಎಂದ ಸಿಎಂ, ಮೀಸಲಾತಿ ಹೆಚ್ಚಳ ಮಾಡಿದೆ. ನಮ್ಮ ದುಡಿಯುವ ಜನರಿಗೆ ಮೀಸಲಾತಿ ಕೊಟ್ಟಿದ್ದೇವೆ, ನಮ್ಮ ಎದುರಿಗೆ ಅವರು ವಿರೋಧ ಮಾಡಿ ಕೋರ್ಟ್‍ಗೆ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಮೋದಿಗೆ ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತೆ: ಕಾಂಗ್ರೆಸ್‍ಗೆ ಅಮಿತ್ ಶಾ ತಿರುಗೇಟು

    ನಾವು ಬಜರಂಗದಳ ಬ್ಯಾನ್ ಮಾಡುತ್ತೇವೆ ಅಂತಾರೆ, ಭಯೋತ್ಪಾದನೆ ಮಾಡಿದ ಪಿಎಫ್‍ಐಗೆ ಅವರು ಕೇಸ್ ವಾಪಸ್ ಪಡೆದರು, ಬಜರಂಗದಳದವರು ನಮ್ಮ ಹನುಮನ ಭಕ್ತರು, ಒಬ್ಬೊಬ್ಬರು ಸಿಡಿದು ನಿಂತರೆ ಬೇರು ಸಮೇತ ಕಿತ್ತು ಹೋಗ್ತೀರಿ ಎಂದ ಸಿಎಂ, ರಾಮನ ದೇವಸ್ಥಾನ ಆಗುತ್ತಿದೆ. ಸಬ್ ಕಾ ವಿಕಾಸ ನಾವು ಮಾಡುತ್ತೇವೆ. ಮನೆ ಮನೆಗೆ ಹೋಗಿ ಮೇ 10 ಕ್ಕೆ ಮುನೇನಕೊಪ್ಪ ಅವರಿಗೆ ಮತ ಹಾಕುವಂತೆ ಹೇಳಿ, ಬಹಳ ಜನ ಮಾತನಾಡುತ್ತಾರೆ. ಆದರೆ ಜಗದೇಕ ಮಲ್ಲ ಮುನೇನಕೊಪ್ಪ, 25 ಸಾವಿತ ಮತದಿಂದ ಗೆಲ್ಲಿಸಿ ಎಂದು ಕೇಸರಿ ಶಾಲು ತಿರುವಿಸಿ ಬಜರಂಗಿ ಎಂದು ಘೋಷಣೆ ಹಾಕಿದರು. ಇದೇ ವೇಳೆ ಕುರುಬ ಸಮುದಾಯದಿಂದ ಸಿಎಂಗೆ ಕಂಬಳಿ ಹೊದಿಸಿ ಸನ್ಮಾನ ಮಾಡಿದರು. ಸಿಎಂಗೆ ಟಗರು ಮರಿ ಕೊಟ್ಟ ನಂತರ ಅದಕ್ಕೆ ಕೈಯಲ್ಲಿ ಹಿಡಿದು ಸಿಎಂ ಮುತ್ತಿಟ್ಟರು ಎಂದರು.

  • ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ – ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್

    ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ – ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್

    ಧಾರವಾಡ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) `ಮೋದಿ ವಿಷದ ಹಾವು ಇದ್ದಂತೆ’ ಎಂದು ಹೇಳಿಕೆ ನೀಡಿದ ಬಳಿಕ ಹರಿಹಾಯ್ದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) `ಸೋನಿಯಾ ಗಾಂಧಿ ವಿಷಕನ್ಯೆನಾ?’ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ ಎಂದು ಹೇಳುವ ಮೂಲಕ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.

    ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಹುಚ್ಚ ಅಲ್ಲ, ಅರೆಹುಚ್ಚ. ಪಾಕಿಸ್ತಾನಿಗಳೇ ಬೆಂಬಲಕೊಡಿ ಮೋದಿಯವರನ್ನ (Narendra Modi) ದೇಶದಿಂದ ಹೊರಗೆ ಹಾಕ್ತೀವಿ ಅಂತಾರೆ. ದೇಶದ ಬಗ್ಗೆ ಕಾಳಜಿ ಇಲ್ಲದವರನ್ನ ಅರೆಹುಚ್ಚ ಅನ್ನದೆ ಗ್ರೇಟ್ ಸ್ಕಾಲರ್ ಅನ್ಬೇಕಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?

    ಇವತ್ತು ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಹಗುರವಾಗಿ ಮಾತನಾಡಿದ್ದಾನೆ. ಅವರ ಪಕ್ಷದಲ್ಲೇ ಮೂರು ಬಿಟ್ಟವರು ಇದ್ದಾರೆ. ಆದ್ರೆ ಮೋದಿ 150 ಕೋಟಿ ಜನರ ಆಶೀರ್ವಾದ ಪಡೆದು ಪ್ರಧಾನಿಯಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ ; ಮೂವರು ಯುವಕರು ಸಾವು

    ಕ್ವಂಯ್ ಅಂದ್ರೆ ಎನ್‌ಕೌಂಟರ್:
    ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉತ್ತರಪ್ರದೇಶದ ಮಾದರಿ ಜಾರಿಗೆ ಬರಲಿದೆ. ಕ್ವಂಯ್ ಅಂದ್ರೆ ಎನ್‌ಕೌಂಟರ್ ಆಗುತ್ತೆ, ಭಾರತದ ವಿರುದ್ಧ ಮಾತನಾಡಿದ್ರೆ ಢಂ ಢಂ ಮಾಡ್ತೀವಿ, ರೋಡ್ ಮೇಲೆಯೇ ಡಿಷ್ಕ್ಯಾಂ ಆಗುತ್ತೆ ಮುಂದೆ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.