Tag: ಧಾರವಾಡ

  • ಗೋ ರಕ್ಷಣೆಗೆ ಹೋದವರ ಮೇಲೆ ಹಲ್ಲೆ ಆರೋಪ; ಹಿಂದೂ – ಮುಸ್ಲಿಂ ಯುವಕರ ನಡುವೆ ಗಲಾಟೆ – ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ!

    ಗೋ ರಕ್ಷಣೆಗೆ ಹೋದವರ ಮೇಲೆ ಹಲ್ಲೆ ಆರೋಪ; ಹಿಂದೂ – ಮುಸ್ಲಿಂ ಯುವಕರ ನಡುವೆ ಗಲಾಟೆ – ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ!

    – ಧಾರವಾಡ ಉಪನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

    ಧಾರವಾಡ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದ ಬಜರಂಗದಳದ ಕಾರ್ಯಕರ್ತ ಸೋಮಶೇಖರ್ ಎಂಬುವವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಹೇಳಿಬಂದಿದೆ. ಈ ಬೆನ್ನಲ್ಲೇ ಹಿಂದೂ-ಮುಸ್ಲಿಮ್‌ ಯುವಕರ ನಡುವೆ ಗಲಾಟೆಯೂ ನಡೆದಿದ್ದು ಕೆವಲರಿಗೆ ಗಾಯಗಳಾಗಿರುವ ಘಟನೆ ಧಾರವಾಡ ನಗರದ ಎಪಿಎಂಸಿ ಬಳಿ ನಡೆದಿದೆ.

    ಹಲ್ಲೆಯನ್ನು ಖಂಡಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸೋಮಶೇಖರ್ ಅವರ ಮೇಲೆ ಹಲ್ಲೆ ಮಾಡಿದ ಅನ್ಯಕೋಮಿನ ಜನರನ್ನು ಬಂಧಿಸುವಂತೆ ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಉಪನಗರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗವೂ ನಡೆಯಿತು.

    ಇನ್ನು ಪ್ರತಿಭಟನೆಗೆ ಆಗಮಿಸಿದ ಧಾರವಾಡ ಶಾಸಕ ಅರವಿಂದ ಬೆಲ್ಲದ್, ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ನಾಳೆವರೆಗೆ ಬಂಧಿಸದೇ ಇದ್ದರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸದ್ಯ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ, ನಾಳೆ ಬೆಳಗಿನವರೆಗೂ ನಾವು ಕಾದು ನೋಡುತ್ತೇವೆ, ಆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬೆಲ್ಲದ್ ತಿಳಿಸಿದರು.

    ನಂತರ ಮಾತನಾಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಎರಡು ಕೋಮಿನವರ ಮಧ್ಯೆ ಗಲಾಟೆಯಾಗಿದೆ. ಇಬ್ಬರು ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ, ಈ ಸಂಬಂಧ ಅವರು ದೂರು ದಾಖಲಿಸಿದ್ದಾರೆ. ಆ ಪ್ರಕಾರ ಎಫ್‌ಐಆರ್ ದಾಖಲಿಸಿಕೊಳ್ಳುತ್ತೇವೆ. ದೂರಿನಲ್ಲಿ ಇಬ್ಬರ ಹೆಸರಿನ ಜೊತೆಗೆ ಇನ್ನಷ್ಟು ಜನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಾದ ಏರಿಯಾದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ, ಅದನ್ನೆಲ್ಲ ಪರಿಶೀಲಿಸಿ ನಾವು ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.

  • ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಮಂಗ!

    ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಮಂಗ!

    ಧಾರವಾಡ: ಮೃತಪಟ್ಟ ವ್ಯಕ್ತಿಯೋರ್ವನ ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕೋತಿ ಬಂದು ಕುಳಿತ ಅಚ್ಚರಿಯ ಘಟನೆಗೆ ಧಾರವಾಡ (Dharwad) ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.

    ನವಲಗುಂದದ ಬಸವೇಶ್ವರ ನಗರದ ನಿವಾಸಿ ರವಿ ಮಾಗ್ರೆ ಮೊನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಹಿನ್ನೆಲೆ ರವಿ ಮನೆಯವರು ನಿನ್ನೆ ದಿನ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿಕೊಂಡಿದ್ದರು. ಅದರಂತೆಯೇ ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಹೋಗಿ ಅಗ್ನಿ ಸ್ಪರ್ಶ ಮಾಡೊಣ ಎನ್ನುವಷ್ಟರಲ್ಲಿ ಈ ಕೋತಿ ಸಾವನ್ನಪ್ಪಿದ ವ್ಯಕ್ತಿಯ ಎದೆಯ ಮೇಲೆಯೇ ಬಂದು ಕುಳಿತಿದೆ.

    ಈ ಕೋತಿಗೆ ಸಾವನ್ನಪ್ಪಿದ ವ್ಯಕ್ತಿಯ ಎದೆಯ ಮೇಲಿಂದ ಎಷ್ಟೇ ಓಡಿಸಿದರೂ ಸಹ ಕೆಳಗೆ ಇಳಿಯಲೇ ಇಲ್ಲ. ಕೊನೆಗೆ ಮೃತದೇಹಕ್ಕೆ ಬೆಂಕಿ ಸ್ಪರ್ಶಿಸಿದಾಗ ಕೋತಿ ಕೆಳಗೆ ಇಳಿದಿದೆ. ಮೃತದೇಹಕ್ಕೆ ಬೆಂಕಿ ಹಚ್ಚಿದ ನಂತರ ಅಲ್ಲಿಯೇ ಪಕ್ಕಕ್ಕೆ ಕುಳಿತ ಕೋತಿ, ಕೊನೆಗೆ ಎಲ್ಲರೂ ಹೋದ ಮೇಲೆ ಹೋಗಿದೆ.

    ಸದ್ಯ ಈ ಅಚ್ಚರಿಯ ಘಟನೆ ಸ್ಥಳದಲ್ಲಿದ್ದ ಜನರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಶೂಟ್ ಮಾಡಿಕೊಂಡಿದ್ದು, ಆ ವಿಡಿಯೋ ಈಗ ವೈರಲ್ ಆಗಿವೆ. ಇದನ್ನೂ ಓದಿ: ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ, ಸಾಮೂಹಿಕವಾಗಿ ಗ್ಯಾರಂಟಿ ಯೋಜನೆ ಕೊಡುವುದನ್ನು ನಿಲ್ಲಿಸೋದೆ ಒಳಿತು: ಎಂ.ಲಕ್ಷ್ಮಣ್

  • ಧಾರವಾಡದಲ್ಲಿ ಮತ್ತೆ ಕಮಲ ಕಿಲಕಿಲ – ಜೋಶಿಗೆ ʻಪಂಚʼ ಜಯ!

    ಧಾರವಾಡದಲ್ಲಿ ಮತ್ತೆ ಕಮಲ ಕಿಲಕಿಲ – ಜೋಶಿಗೆ ʻಪಂಚʼ ಜಯ!

    ಧಾರವಾಡ: ಪ್ರಸ್ತುತ ಲೋಕಸಭಾ ಕ್ಷೇತ್ರದಲ್ಲಿ ಸತತ 5 ಬಾರಿ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೊಸ ಇತಿಹಾಸ ನಿರ್ಮಿಸಿದ್ದಾರೆ.

    2004, 2009, 2014, 2019ರಲ್ಲಿ ಗೆಲುವು ಸಾಧಿಸಿದ್ದ ಜೋಶಿ 2024ರಲ್ಲಿ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದೇ ಧಾರವಾಡ ಕ್ಷೇತ್ರದಿಂದ (Dharwad Constituency) ಈ ಹಿಂದೆ ಸರೋಜಿನಿ ಮಹಿಶಿ ಹಾಗೂ ಡಿ.ಕೆ ನಾಯ್ಕರ್‌ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದರು. ಡಿ.ಪಿ ಕರ್ಮಾಕರ್ ಒಮ್ಮೆ ಹಾಗೂ ವಿಜಯ ಸಂಕೇಶ್ವರ್‌ ಮೂರು ಬಾರು ಗೆದ್ದಿದ್ದರು. ಆದ್ರೆ ಪ್ರಹ್ಲಾದ್‌ ಜೋಶಿ 5ನೇ ಬಾರಿಗೆ ಗೆಲುವು ಸಾಧಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌; ಜನರ ಹೃದಯ ಗೆದ್ದ ಡಾಕ್ಟರ್‌ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್‌?

    2009ರಲ್ಲಿ 4,46,786 ಮತಗಳು, 2014ರಲ್ಲಿ 5,45,395 ಮತಗಳು ಹಾಗೂ 2019ರಲ್ಲಿ 6,84,837 ಮತಗಳನ್ನು ಪಡೆದಿದ್ದ ಜೋಶಿ 2024ರಲ್ಲಿ 7,16,231 ಮತಗಳನ್ನು ಪಡೆಯುವ ಮೂಲಕ 97,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನೋದ್ ಅಸೂತಿ 6,18,907 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ:
    ಸದ್ಯ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಹ್ಲಾದ್‌ ಜೋಶಿ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಕೃಷಿ ವಿವಿ ಮುಖ್ಯ ದ್ವಾರದ ಎದುರು ಪಟಾಕಿ ಸಿಡಿಸಿದ್ದಾರೆ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

  • 1 ಮಾವಿಗೆ 10 ಸಾವಿರ ರೂ., ಕಿಲೋಗೆ 2.7 ಲಕ್ಷ ರೂ. – ಧಾರವಾಡದಲ್ಲಿದೆ ದುಬಾರಿ ಮಾವು

    1 ಮಾವಿಗೆ 10 ಸಾವಿರ ರೂ., ಕಿಲೋಗೆ 2.7 ಲಕ್ಷ ರೂ. – ಧಾರವಾಡದಲ್ಲಿದೆ ದುಬಾರಿ ಮಾವು

    – ಮಾವು ಮೇಳದಲ್ಲಿ ಗಮನ ಸೆಳೆದ ಮಾವು
    – ಪ್ರದರ್ಶನಕ್ಕೆ ಇಡಲಾಗಿದೆ ಮೀಯಾಝಾಕಿ ಮಾವು

    ಧಾರವಾಡ: ಮಾವಿಗೆ (Mango) ಹಣ್ಣುಗಳ ರಾಜ ಎಂದು ಸುಮ್ಮನೇ ಕರೆಯಲ್ಲ. ಧಾರವಾಡದಲ್ಲಿ (Dharawada) ನಡೆಯುತ್ತಿರುವ ಮಾವು ಮೇಳದಲ್ಲಿ, ವಿಶ್ವದಲ್ಲಿಯೇ ಅತಿ ದುಬಾರಿಯಾದ ಮಾವಿನ ಹಣ್ಣು ಬಂದಿದೆ. ಧಾರವಾಡ ಮಾವಿನ ಮೇಳದಲ್ಲಿ ಪ್ರತಿ ಕಿಲೋ ಗೆ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆದಿದೆ.

    ವಿಶ್ವದ ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ (Miyazaki Mango) ತಳಿಯ ಮಾವನ್ನು ಪ್ರದರ್ಶನಕ್ಕಿಡಲಾಗಿದೆ. ಧಾರವಾಡ ನಗರದ ಪ್ರಮೋದ ಗಾಂವ್ಕರ್ ಎಂಬವರು ತಮ್ಮ ಕಲಕೇರಿ ಗ್ರಾಮದ ತೋಟದಲ್ಲಿ ಈ ಮಾವನ್ನು ಬೆಳೆದಿದ್ದಾರೆ.

    ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವಿನ ಮೇಳದಲ್ಲಿ ಜಪಾನ್ ಮೂಲದ ಈ ವಿಶೇಷ ಮಾವಿನ ತಳಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿ ಕೆಜಿಗೆ ಮೀಯಾಝಾಕಿ ಹಣ್ಣಿಗೆ ಮಾರು 2.7 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದೇ ಒಂದು ಹಣ್ಣು ಸುಮಾರು 10 ಸಾವಿರ ರೂ. ಬೆಲೆಬಾಳುತ್ತದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

    ಮೀಯಾಝಾಕಿ ತಳಿ ಮೂಲತಃ ಜಪಾನಿನ (Japan) ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಪೌಷ್ಟಿಕತೆಗೆ ಇದು ವಿದೇಶಗಳಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಇದು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಜಪಾನಿನ ಮೀಯಾಝಾಕಿ ಎಂಬುವವರು ಇದನ್ನ ಮೊದಲು ಬೆಳೆದಿದ್ದಕ್ಕೆ ಈ ಮಾವಿಗೆ ಅವರ ಹೆಸರನ್ನು ಇಡಲಾಗಿದೆ.

    ಧಾರವಾಡದ ಪ್ರಮೋದ್ ಗಾಂವ್ಕರ್ ಅವರು ಈ ಮಾವಿನ ಸಸಿಯನ್ನ 2012 ರಲ್ಲಿ ತಮ್ಮ ತೋಟದಲ್ಲಿ ನೆಟ್ಟಿದ್ದರು. 2015 ರಿಂದ ಇಳುವರಿ ಆರಂಭವಾಗಿದ್ದು ಕಳೆದ ವರ್ಷ ಎರಡು ಮಾವಿನ ಮರಗಳಲ್ಲಿ ಕೇವಲ 15 ಮಾವು ಆಗಿದ್ದವು. ಈ ವರ್ಷ 4 ಮಾವು ಮಾತ್ರ ಆಗಿದೆ.

    ಇಳುವರಿ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ. ಮುಂದೆ ರೈತರು ಈ ಮಾವು ಬೆಳೆದು ಇಳುವರಿ ಹೆಚ್ಚಾದರೆ ಬೆಲೆ ಕೂಡಾ ಕಡಿಮೆಯಾಗಲಿದೆ‌ ಎಂದು ತೋಟದ ಮಾಲಿಕ ಪ್ರಮೋದ್‌ ಗಾಂವ್ಕರ್ ಹೇಳುತ್ತಾರೆ.

  • 4 ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ಶಾಸಕ ವಿನಯ್ ಕುಲಕರ್ಣಿ

    4 ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ಶಾಸಕ ವಿನಯ್ ಕುಲಕರ್ಣಿ

    ಧಾರವಾಡ: ಕ್ಷೇತ್ರದ ಹೊರಗಿದ್ದುಕೊಂಡೇ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ (Dharawda) ಕಾಲಿಟ್ಟಿದ್ದಾರೆ.

    ಜಿಲ್ಲಾ‌ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣಕ್ಕೆ(Yogesh Gowda Murder Case) ಸಂಬಂಧಿಸಿದಂತೆ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಗಿರುವ ವಿನಯ್ ಕುಲಕರ್ಣಿ ಅವರು ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲಾ ಪ್ರವೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ (Supreme Court) ನಿರ್ಬಂಧ ಹೇರಿದೆ. ಹೀಗಿದ್ದರೂ ವಿನಯ್ ಕುಲಕರ್ಣಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ  ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಒಕ್ಕಲಿಗ ನಾಯಕತ್ವಕ್ಕಾಗಿ ಚಿಲ್ರೆ ಕೆಲ್ಸ ಮಾಡಿದ್ರೆ ಆಗಲ್ಲ: ಡಿವಿಎಸ್‌

    ಚುನಾವಣೆ ಬಳಿಕ ಹಲವು ಬಾರಿ ತಮಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅವರು ಅರ್ಜಿ ಸಲ್ಲಿಸುತ್ತಲೇ ಬಂದಿದ್ದರೂ ನ್ಯಾಯಾಲಯ ಮಾತ್ರ ಅವರ ಅರ್ಜಿಯನ್ನು ತಿರಸ್ಕರಿಸುತ್ತಲೇ ಬಂದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡುವ ಸಲುವಾಗಿ ಧಾರವಾಡಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನ್ಯಾಯಾಲಯ ಕೂಡ ಅವರ ಅರ್ಜಿ ತಿರಸ್ಕರಿಸಿದ ಕಾರಣ ಅವರು ಬೆಂಗಳೂರಿನ ಹೈಕೋರ್ಟ್ (High Court) ಮೊರೆ ಹೋಗಿದ್ದರು.

    ವಿನಯ್ ಕುಲಕರ್ಣಿ ಮನವಿಗೆ ಸ್ಪಂದಿಸಿದ ಹೈಕೋರ್ಟ್‌, ಲೋಕಸಭಾ ಚುನಾವಣೆಗೆ (Lok Sabha Election) ಮತದಾನ ಮಾಡಿ ಬರಬಹುದು. ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಕೂಡಲೇ ಧಾರವಾಡ ಬಿಟ್ಟು ಮತ್ತೆ ಹೊರಡಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಸಪ್ತಾಪುರದಲ್ಲಿರುವ ಶಾರದಾ ಸ್ಕೂಲ್‌‌ನ ಮತಗಟ್ಟೆ 75ಕ್ಕೆ ಬಂದ ವಿನಯ್ ಕುಲಕರ್ಣಿ ತಮ್ಮ ಹಕ್ಕು ಚಲಾಯಿಸಿ ಮತ್ತೆ ಅಲ್ಲಿಂದ  ತೆರಳಿದ್ದಾರೆ. ಇದನ್ನೂ ಓದಿ: ಕಾಡಿನಲ್ಲಿ ಇರೋದು ಒಬ್ಬನೇ ವ್ಯಕ್ತಿ – ಕೇವಲ ಒಂದೇ ವೋಟ್‌ನಿಂದ 100% ಮತದಾನ

    ಧಾರವಾಡಕ್ಕೆ ಬರುತ್ತಿದ್ದಂತೆ  ಸೇರಿದ್ದ ವಿನಯ್ ಅವರ ಬೆಂಬಲಿಗರು ಅವರ ಪರ ಘೋಷಣೆಗಳನ್ನು ಕೂಗಿದರು. ಅವರ ಕೈ ಕುಲುಕಿ ಖುಷಿಪಟ್ಟರು. ವಿನಯ್ ಅವರು ಆಗಮಿಸುತ್ತಿದ್ದಂತೆ ಅವರ ಪತ್ನಿ ಶಿವಲೀಲಾ ಹಾಗೂ ಪುತ್ರಿ ವೈಶಾಲಿ ಕೂಡ ಹರ್ಷ ವ್ಯಕ್ತಪಡಿಸಿ ಅವರನ್ನು ಭೇಟಿಯಾದರು. ಅಲ್ಲದೇ ಕಾರ್ಯಕರ್ತರು ವಿನಯ್ ಅವರ ಕಾರಿನ ಮೇಲೆ ಹೂಮಳೆ ಸುರಿಸಿದರು.

    ವಿನಯ್ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಸಾಥ್ ನೀಡಿದರು.

     

  • ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಧಾರವಾಡ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣದ ಆರೋಪಿ ಫಯಾಜ್‍ನನ್ನು ಇಂದು ಸಿಐಡಿ (CID) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರು ದಿನಗಳ ಕಾಲ ಫಯಾಜ್‍ನನ್ನು ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಧಾರವಾಡ ಜೈಲಿನಿಂದ ವಶಕ್ಕೆ ಪಡೆದ ಬಳಿಕ ತಮ್ಮ ಬೊಲೆರೋ ವಾಹನದಲ್ಲಿ ಕರೆದುಕೊಂಡು ಹೋದರು. ಈ ವೇಳೆ ಎರಡು ಕ್ರೂಸರ್ ವಾಹನದಲ್ಲಿ ಪ್ರತ್ಯೇಕವಾಗಿ ಭದ್ರತಾ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದರು.

    ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದ ಬಳಿಕ ಜೈಲಿನಿಂದ ನೇರವಾಗಿ ತಪಾಸಣೆಗೆ ಕರೆತರಲಾಯಿತು. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತನ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ತಪಾಸಣೆಯ ಬಳಿಕ ಸಿಐಡಿ ಅಧಿಕಾರಿಗಳು ಫಯಾಜ್‍ನನ್ನು (Fayaz) ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್‍ಗೆ ಕರೆದೊಯ್ದರು. ಅಧಿಕಾರಿಗಳು ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆಗಮಿಸುತ್ತಿದ್ದಂತೆಯೇ ಕಾಲೇಜಿನ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತ್ ಒದಗಿಸಲಾಯಿತು. ಅಲ್ಲಿ ಸ್ಥಳ ಮಹಜರು ನಡೆಸಲಾಯಿತು. ಈ ವೇಳೆ ಎಡಿಜಿಪಿ ಬಿ.ಕೆ ಸಿಂಗ್ ಹಾಜರಿದ್ದರು.

    ಕೊಲೆ ನಡೆದ ಸ್ಥಳದಲ್ಲಿಯೇ ಅಧಿಕಾರಿಗಳು 3 ಗಂಟೆ ತನಿಖೆ ನಡೆಸಿದರು. ಸ್ಥಳ ಮಹಜರು ಜೊತೆಗೆ ಮಹತ್ವದ ವಿಚಾರಣೆಯನ್ನು ಸಹ ಮಾಡಿದ್ದಾರೆ. ಇದಾದ ಬಳಿಕ ಧಾರವಾಡ ನಗರಕ್ಕೆ ಬಾರದೇ ಅಧಿಕಾರಿಗಳು ಫಯಾಜ್‍ನನ್ನು ನೇರವಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಅಜ್ಞಾತ ಸ್ಥಳದಲ್ಲೇ ಫಯಾಜ್ ಹೆಚ್ಚಿನ ವಿಚಾರಣೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. ಇದನ್ನೂ ಓದಿ: 9 ಅಲ್ಲ 14 ಬಾರಿ ನೇಹಾಳನ್ನು ಇರಿದು ಕೊಂದ ಫಯಾಜ್- ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ?

  • ಜೋಶಿ ವಿರುದ್ಧ ಸ್ಪರ್ಧೆ ಇಲ್ಲ – ನಾಮಪತ್ರ ವಾಪಸ್‌ ಪಡೆದ ದಿಂಗಾಲೇಶ್ವರ ಶ್ರೀ

    ಜೋಶಿ ವಿರುದ್ಧ ಸ್ಪರ್ಧೆ ಇಲ್ಲ – ನಾಮಪತ್ರ ವಾಪಸ್‌ ಪಡೆದ ದಿಂಗಾಲೇಶ್ವರ ಶ್ರೀ

    ಧಾರವಾಡ: ಪ್ರಹ್ಲಾದ್‌ ಜೋಶಿ (Pralhad Joshi) ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ (Dingaleshwar swamiji) ನಾಮಪತ್ರ ವಾಪಸ್‌ ಪಡೆದಿದ್ದಾರೆ.

    ಸ್ವಾಮೀಜಿ ಸೂಚಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಖಾತೆ ತೆರೆದ ಬಿಜೆಪಿ 

     

    ಸ್ವಾಮೀಜಿ ಪರ ನಾಮಪತ್ರ ವಾಪಸ್ ಪಡೆಯಲು ಬಂದಿದ್ದ ಸಚಿನ್ ಪಾಟೀಲ್ ಪ್ರತಿಕ್ರಿಯಿಸಿ, ಸ್ವಾಮೀಜಿ ಅವರ ನಾಮಪತ್ರ ವಾಪಸ್‌ ಪಡೆದಿದ್ದೇವೆ. ದಿಂಗಾಲೇಶ್ವರ ಸ್ವಾಮೀಜಿ ಅವರ ಆದೇಶದಂತೆ ನಾಮಪತ್ರ ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

    ದಿಂಗಾಲೇಶ್ವರ ಶ್ರೀಗಳ ನಾಮಪತ್ರ ವಾಪಸ್‌ ಪಡೆಯುವಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh Lad) ಯಶಸ್ವಿಯಾಗಿದ್ದಾರೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಹುಬ್ಬಳ್ಳಿ ಖಾಸಗಿ ಹೋಟೆಲಿನಲ್ಲಿ ವಚನಾನಂದ ಶ್ರೀಗಳ ಮಧ್ಯಸ್ಥಿಕೆಯಲ್ಲಿ ಮನವೊಲಿಸುವ ಕಾರ್ಯ ನಡೆದಿತ್ತು.

    ದಿಂಗಾಲೇಶ್ವರ ಶ್ರೀ ಕಣದಿಂದ ಹಿಂದಕ್ಕೆ ಸರಿದ ಕಾರಣ ಧಾರವಾಡದಲ್ಲಿ ಪ್ರಹ್ಲಾದ್‌ ಜೋಶಿ ಹಾಗೂ ವಿನೋದ್‌ ಅಸೂಟಿ (Vinod Asuti) ನಡುವೆ ನೇರ ಹಣಾಹಣಿ ನಡೆಯಲಿದೆ.

     

  • ಅಂಜುಮನ್ ಕಾಲೇಜು ಕೊಠಡಿಗೆ ನೇಹಾ ಹೆಸರು; ಧಾರವಾಡದಲ್ಲಿ ಸೋಮವಾರ ಅರ್ಧದಿನ ವ್ಯಾಪಾರ ಬಂದ್

    ಅಂಜುಮನ್ ಕಾಲೇಜು ಕೊಠಡಿಗೆ ನೇಹಾ ಹೆಸರು; ಧಾರವಾಡದಲ್ಲಿ ಸೋಮವಾರ ಅರ್ಧದಿನ ವ್ಯಾಪಾರ ಬಂದ್

    ಧಾರವಾಡ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ (Neha Hiremath) ಹತ್ಯೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಧಾರವಾಡದ (Dharwad) ಅಂಜುಮನ್ ಸಂಸ್ಥೆ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಧಾರವಾಡದ ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹೆಸರಿಡಲು ನಿರ್ಧರಿಸಿದೆ.

    ಈ ಕುರಿತು ಮಾಹಿತಿ ನೀಡಿದ ಅಂಜುಮನ್ ಸಂಸ್ಥೆ (Anjuman Institution) ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ನೇಹಾ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಒಬ್ಬ ವಿದ್ಯಾರ್ಥಿನಿಯ ಹತ್ಯೆಯಾಗಿದೆ. ಅವಳ ನೆನಪಿಗಾಗಿ ನಾವು ನಮ್ಮ ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹಿರೇಮಠ ಅವರ ಹೆಸರಿಡಲು ತೀರ್ಮಾನಿಸಿದ್ದೇವೆ. ಅದನ್ನು ಅವರ ತಂದೆ-ತಾಯಿಯಿಂದಲೇ ಉದ್ಘಾಟನೆ ಮಾಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

    ನಾಳೆ ಅರ್ಧದಿನ ವ್ಯಾಪಾರ ಬಂದ್:
    ನೇಹಾ ಹತ್ಯೆ ಪ್ರಕರಣ ಖಂಡಿಸಿ ನಾಳೆ (ಏ.22) ಧಾರವಾಡದಲ್ಲಿ ಅಂಜುಮನ್ ಕಾಲೇಜದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯಾಪಾರ ಬಂದ್ ಮಾಡಲಿದ್ದು, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವ್ಯಾಪಾರಿಗಳು ಸೋಮವಾರ ಅರ್ಧದಿನ ವ್ಯಾಪಾರ ವಹಿವಾಟು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳೂ ಇದಕ್ಕೆ ಸಾಥ್ ನೀಡಿವೆ ಎಂದು ಹೇಳಿದ್ದಾರೆ.

    ಮುಂದುವರಿದು ಮಾತನಾಡಿದ ಇಸ್ಮಾಯಿಲ್, ನೇಹಾ ಕೊಲೆಯನ್ನು ನಾವು ಖಂಡಿಸುತ್ತೇವೆ. ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಈ ನಾಡನ್ನ ಮತಾಂಧರ ಯುದ್ಧಭೂಮಿಯಾಗಿ ಮಾಡಿದೆ: ಬಿಎಸ್‌ವೈ ಕಿಡಿ

  • ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

    ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

    – ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ
    – ನನ್ನ ಮಗನ ತಪ್ಪಿಗೆ ಕರ್ನಾಟಕದ ಜನತೆ, ನೇಹಾ ತಂದೆ-ತಾಯಿ ಬಳಿ ಕ್ಷಮೆಯಾಚಿಸುತ್ತೇನೆ

    ಧಾರವಾಡ: ನನ್ನ ಮಗ ಮಾಡಿರುವ ತಪ್ಪಿಗೆ ಕರ್ನಾಟಕದ ಸಮಸ್ತ ಜನತೆಗೆ ಕೈಮುಗಿದು ಕ್ಷಮೆ ಯಾಚಿಸುತ್ತೇನೆ ಎಂದು ನೇಹಾ ಹತ್ಯೆಗೈದ ಫಯಾಜ್‌ ತಾಯಿ (Fayaz Mother) ಮುಮ್ತಾಜ್‌ ಕಣ್ಣೀರಿಟ್ಟಿದ್ದಾರೆ.

    ಮಗನ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ನೇಹಾಳ ತಂದೆ-ತಾಯಿಯವರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನೇಹಾ (Neha Hiremath) ಕೂಡ ನನ್ನ ಮಗಳು ಇದ್ದಂತೆ. ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ. ನೇಹಾ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ಆಗಿದೆ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

    ನನ್ನ ಮಗ ಮಾಡಿರುವುದು ತಪ್ಪು. ಯಾವ ಮಕ್ಕಳು ಮಾಡಿದರು ತಪ್ಪು ತಪ್ಪೇ. ಈ ನೆಲದ ಕಾನೂನು ಏನು ಹೇಳುತ್ತೋ ಅದರ ಪ್ರಕಾರವೇ ಶಿಕ್ಷೆ ಆಗಲಿ ಎಂದು ಹೇಳಿದರು.

    ನನ್ನ ಮಗನನ್ನ ಐಎಎಸ್‌ ಅಧಿಕಾರಿ ಮಾಡುವ ಆಸೆ ಇತ್ತು. ತುಂಬಾ ಬುದ್ಧಿವಂತ ಇದ್ದ. ಎಲ್‌ಕೆಜಿ, ಯುಕೆಜಿ ಯಿಂದ 90% ಜಾಸ್ತಿ ಮಾರ್ಕ್ಸ್‌ ತೆಗೆಯುತ್ತಿದ್ದ ಎಂದು ಮಗನ ಬಗ್ಗೆ ಹೇಳಿಕೊಂಡರು. ಇದನ್ನೂ ಓದಿ: ಕೈ ಮುಗಿದು ಕೇಳಿಕೊಳ್ತೀನಿ, ಸಿಎಂ ಹೇಳಿಕೆ ನೀಡುವುದನ್ನು ನಿಲ್ಲಿಸಿ: ನೇಹಾ ತಂದೆ ನಿರಂಜನ್‌ ಕಿಡಿ

    ಅವನು ತಪ್ಪು ಮಾಡಿದ್ದಾನೆ. ಶಿಕ್ಷೆ ಆಗಲೇಬೇಕು. ನಾನು ಕೂಡ ನೂರಾರು ಮಕ್ಕಳಿಗೆ ಶಿಕ್ಷೆ ಕೊಟ್ಟಿದ್ದೇನೆ. ಈಗ ನನ್ನ ಮಗ ತಪ್ಪು ಮಾಡಿದ್ದಾನೆ ಅಂದ್ಮೇಲೆ ಶಿಕ್ಷೆ ಆಗಬೇಕು. ಶಿಕ್ಷೆಯನ್ನು ಅವನು ಅನುಭವಿಸಲಿ. ಮಗನ ತಪ್ಪಿಗೆ ನಾವು ತಲೆ ತಗ್ಗಿಸುವಂತಾಗಿದೆ ಎಂದು ಕಣ್ಣೀರಿಟ್ಟರು.

  • 8 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯಿದ್ದ ಬ್ಯಾಗ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

    8 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯಿದ್ದ ಬ್ಯಾಗ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

    ಹುಬ್ಬಳ್ಳಿ: ಪ್ರಯಾಣಿಕ ಆಟೋದಲ್ಲಿ ಬಿಟ್ಟು ಹೋಗಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯನ್ನು ವಾಪಸ್ ನೀಡಿ ಆಟೋ ಚಾಲಕ (Auto Driver) ಪ್ರಾಮಾಣಿಕತೆ ಮೆರೆದಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ನಾಗರಾಜ್ ಎಂಬವರ ಆಟೋದಲ್ಲಿ ಮೂವರು ಗೋಕುಲ ಬಸ್ ನಿಲ್ದಾಣದಿಂದ ಹೊಸುರ ಬಸ್ ನಿಲ್ದಾಣದ ವರೆಗೆ ಪ್ರಯಾಣ ಮಾಡಿದ್ದರು. ಆಟೋ ಇಳಿಯುವಾಗ ಬ್ಯಾಗ್ ಆಟೋದಲ್ಲಿ ಬಿಟ್ಟು ಹೋಗಿದ್ದರು. ಇದನ್ನೂ ಓದಿ: ಏ.20ಕ್ಕೆ ಚಿಕ್ಕಬಳ್ಳಾಪುರಕ್ಕೆ ಮೋದಿ

    ಬ್ಯಾಗ್‌ನಲ್ಲಿ 4 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ ಮನೆಯ ದಾಖಲಾತಿಗಳು ಇದ್ದವು. ಧಾರವಾಡದ ನಿಸ್ಸಾಮುದ್ದೀನ್ ಕಾಲೊನಿ ಮಹಿಳೆ ಬ್ಯಾಗ್ ಬಿಟ್ಟು ಹೋಗಿದ್ರು. ಇದನ್ನು ಗಮನಿಸಿದ ಆಟೋ ಚಾಲಕ, ಪ್ರಯಾಣಿಕರನ್ನು ಗುರುತಿಸಿ ಬ್ಯಾಗ್‌ನ್ನು ವಾಪಸ್ ನೀಡಿದ್ದಾರೆ.

    ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಇತರೆ ಆಟೋ ಚಾಲಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಆಟೋ ಚಾಲಕ ನಾಗರಾಜ್ ಬ್ಯಾಗ್‌ನ್ನು ಹಿಂದಿರುಗಿಸಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಪೊಲೀಸರು ಸನ್ಮಾನಿಸಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ