Tag: ಧಾರವಾಡ ಹೈಕೋರ್ಟ್

  • ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಿಲ್ಲ

    ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಿಲ್ಲ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ರಿಟ್ ಅರ್ಜಿಗಳಿಗೆ ಮಧ್ಯಂತರ ಆದೇಶ ನೀಡಲು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.

    ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ್ ಹಾಗೂ ಬಸವರಾಜ ತೇರದಾಳರವರು ರಿಟ್ ಅರ್ಜಿ ಸಲ್ಲಿಸಿದ್ದರು. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಶೇ.50 ಕ್ಕಿಂತ ಹೆಚ್ಚು ಸ್ಥಾನ, ಉಳಿದ ಮೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಶೇ.50 ಕ್ಕಿಂತ ಕಡಿಮೆ ಸ್ಥಾನ ಹಂಚಿಕೆ ಮಾಡಿ ತಾರತಮ್ಯ ಮಾಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನವಾಗಿ ಶೇ. 50ರಷ್ಟು ವಾರ್ಡ್‍ಗಳನ್ನು ಹಂಚಿಕೆ ಮಾಡಬೇಕೆಂದು ಕೋರಿ ಅಲ್ತಾಫ್ ಕಿತ್ತೂರ್ ಹಾಗೂ ಮೀಸಲಾತಿ ನಿಗದಿಯಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆ ಎಂದು ಬಸವರಾಜ ತೇರದಾಳ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ:ಗದ್ದೆಯ ಬದುವಿನ ಮೇಲೆ ರೈತರಂತೆ ನಡೆದ ಹುಲಿ- ಆತಂಕದಲ್ಲಿ ಹಳ್ಳಿಗರು

    ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಪಾಲಿಕೆ ಚುನಾವಣೆಗೆ ತಡೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಚಾರಣೆಯನ್ನು ಚಾಲ್ತಿಯಲ್ಲಿಟ್ಟು ಮುಂದೂಡಿದೆ. ವಿಚಾರಣೆಯ ಮುಂದಿನ ದಿನಾಂಕವನ್ನು ಸೂಚಿಸಿಲ್ಲ ಎಂದು ತೇರದಾಳ ತಿಳಿಸಿದ್ದಾರೆ. ಪಾಲಿಕೆ ಚುನಾವಣೆಗೆ ತಡೆ ನೀಡುವಂತೆ ಧಾರವಾಡ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಶುಕ್ರವಾರ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಅಲ್ತಾಫ್ ಕಿತ್ತೂರ ತಿಳಿಸಿದ್ದಾರೆ. ಇದನ್ನೂ ಓದಿ:ಹಣದಾಸೆಗೆ ಗಾಂಜಾ ಮಾರಾಟ- 19ರ ಯುವಕ ಅರೆಸ್ಟ್

  • ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಧಾರವಾಡ: ಮಾಜಿ ಸಚಿವರ ವಿರುದ್ಧ ಸಿಡಿ ಕೇಸ್ ವಿಚಾರವಾಗಿ ಯುವತಿ ತಂದೆ ದಾಖಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥಗೊಳಿಸಿ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

    ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೆಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ಇಂದು ನಡೆದ ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ.

    “ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ.”

    ಎಂದು ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳ ಎದುರು ವಿಡಿಯೋ ಸಂವಾದದಲ್ಲಿ ಹೇಳಿದ್ದಾಳೆ. ಯುವತಿಯ ಹೇಳಿಕೆ ಆಧಾರದ ಮೇಲೆ ತಂದೆ ಹಾಕಿದ ಅರ್ಜಿಯನ್ನ ಇತ್ಯರ್ಥ ಮಾಡಿ ಹೈಕೋರ್ಟ್ ಆದೇಶ ಮಾಡಿದೆ.

  • ವಿನಯ್ ಕುಲಕರ್ಣಿ ಜಾಮೀನು ಅರ್ಜಿ – ನಾಳೆಗೆ ವಿಚಾರಣೆ ಮುಂದೂಡಿಕೆ

    ವಿನಯ್ ಕುಲಕರ್ಣಿ ಜಾಮೀನು ಅರ್ಜಿ – ನಾಳೆಗೆ ವಿಚಾರಣೆ ಮುಂದೂಡಿಕೆ

    ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್‍ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ನಾಳೆಗೆ ಮುಂದೂಡಿದೆ.

    ಧಾರವಾಡ ಹೈಕೋರ್ಟ್‍ನಲ್ಲಿ ಇಡೀ ದಿನ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ ಸಿಬಿಐ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ಸಿಬಿಐ ವಕೀಲರ ಪ್ರತಿವಾದ ಪೂರ್ಣಗೊಳ್ಳದ ಹಿನ್ನೆಲೆ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದ್ದು, ನಾಳೆ ಸಿಬಿಐ ಪರ ವಕೀಲರು ಪುನಃ ಪ್ರತಿವಾದ ಮುಂದುವರಿಸಲಿದ್ದಾರೆ.

    ದಿನವಿಡಿ ನಡೆದ ವಾದ ಪ್ರತಿವಾದ ಹಿನ್ನೆಲೆ ನಾಳೆಗೆ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಸಿಬಿಐ ಪರ ವಕೀಲರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‍ನಲ್ಲಿಯೇ ಪ್ರತಿವಾದ ಮಂಡಿಸಿದರು. ಸಿಬಿಐ ಪರ ವಕೀಲರು ನಾಳೆ ಇನ್ನು ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಳೆದ ನವಂಬರ್ 20 ರಂದು ಸಿಬಿಐ ಬಂಧಿಸಿತ್ತು. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.