Tag: ಧರ್ಮ ಸಂಸದ್

  • ನಿಮ್ಮ ಮಕ್ಕಳು, ನೀವು ಸಾಯುತ್ತೀರಿ: ಪೊಲೀಸರನ್ನು ಶಪಿಸಿದ ದ್ವೇಷ ಭಾಷಣ ಕೇಸ್‌ ಆರೋಪಿ

    ನಿಮ್ಮ ಮಕ್ಕಳು, ನೀವು ಸಾಯುತ್ತೀರಿ: ಪೊಲೀಸರನ್ನು ಶಪಿಸಿದ ದ್ವೇಷ ಭಾಷಣ ಕೇಸ್‌ ಆರೋಪಿ

    ಡೆಹ್ರಾಡೂನ್:‌ ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಿತೇಂದ್ರ ನಾರಾಯಣ್‌ ಸಿಂಗ್‌ ತ್ಯಾಗಿ ಅವರ ಬಂಧನಕ್ಕೆ ಪ್ರಕರಣದ ಮತ್ತೊಬ್ಬ ಆರೋಪಿ ಯತಿ ನರಸಿಂಘಾನಂದ ಖಂಡನೆ ವ್ಯಕ್ತಪಡಿಸಿದ್ದಾರೆ. ತ್ಯಾಗಿಯನ್ನು ಬಂಧಿಸಲು ಮುಂದಾದ ಪೊಲೀಸರ ವಿರುದ್ಧವೂ ಹರಿಹಾಯ್ದಿದ್ದಾರೆ.

    ಹರಿದ್ವಾರದ ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ ಕಾರಣಕ್ಕಾಗಿ ಜಿತೇಂದ್ರ ನಾರಾಯಣ್‌ ಸಿಂಗ್‌ ತ್ಯಾಗಿಯನ್ನು ಪೊಲೀಸರು ಬಂಧಿಸಿದರು. ಮತ್ತೊಬ್ಬ ಆರೋಪಿ ಯತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ʻನೀವು, ನಿಮ್ಮ ಮಕ್ಕಳು ಸಾಯುತ್ತೀರಿʼ ಎಂದು ಬಂಧನಕ್ಕೆ ಮುಂದಾಗಿದ್ದ ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ದಲಿತ ಮತಗಳ ಮೇಲೆ ಕಣ್ಣು- ಎರಡು ಕ್ಷೇತ್ರಗಳಲ್ಲಿ ಸಿಎಂ ಚನ್ನಿ ಸ್ಪರ್ಧೆ?

    ತ್ಯಾಗಿಯನ್ನು ಯಾಕೆ ಬಂಧಿಸುತ್ತಿದ್ದೀರಿ ಎಂದು ಯತಿ ಪ್ರಶ್ನಿಸಿದ್ದಾರೆ. ಅದಕ್ಕೆ ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಯತಿ, ಮೂರು ಪ್ರಕರಣಗಳಲ್ಲಿ ನಾನೂ ಅವರೊಟ್ಟಿಗಿದ್ದೇನೆ. ಅವರು ಒಬ್ಬರೇ ಈ ಕೆಲಸ ಮಾಡಿದ್ದಾರೆ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನೀವು ಮತ್ತು ನಿಮ್ಮ ಮಕ್ಕಳು ಸಾಯುತ್ತೀರಿ ಎಂದು ಶಪಿಸಿದ್ದಾರೆ.

    ಜಿತೇಂದ್ರ ತ್ಯಾಗಿ ಮೂಲತಃ ಮುಸ್ಲಿಂ ಸಮುದಾಯದವರು. ವಾಸೀಂ ರಿಜ್ವಿಯಾಗಿದ್ದ ಅವರು ಹಿಂದೂ ಧರ್ಮಕ್ಕೆ ಮತಾಂತರರಾಗಿ ಜಿತೇಂದ್ರ ತ್ಯಾಗಿಯಾದರು. ಈಚೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೇಷನ್‌ ಕಾರ್ಡ್‌ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ

    ದ್ವೇಷ ಭಾಷಣ ಪ್ರಕರಣದಲ್ಲಿ ತ್ಯಾಗಿ, ನರಸಿಂಘಾನಂದ ಸೇರಿದಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ತ್ಯಾಗಿ ಅವರನ್ನು ರೂರ್ಕಿಯಲ್ಲಿ ಬಂಧಿಸಲಾಗಿದೆ ಎಂದು ಹರಿದ್ವಾರ ಹಿರಿಯ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಯೋಗೇಂದ್ರ ರಾವತ್‌ ತಿಳಿಸಿದ್ದಾರೆ.

    ದ್ವೇಷ ಭಾಷಣ ಪ್ರಕರಣದ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಬೇಕು. ಪ್ರಕರಣ ಕುರಿತು ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ 10 ದಿನದೊಳಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿತ್ತು.

  • ಗಾಂಧಿ ನಿಂದಿಸಿ, ನಾಥೂರಾಮ್ ಗೋಡ್ಸೆ ಹೊಗಳಿದ ಹಿಂದೂ ಧಾರ್ಮಿಕ ಮುಖಂಡ ಅರೆಸ್ಟ್

    ಗಾಂಧಿ ನಿಂದಿಸಿ, ನಾಥೂರಾಮ್ ಗೋಡ್ಸೆ ಹೊಗಳಿದ ಹಿಂದೂ ಧಾರ್ಮಿಕ ಮುಖಂಡ ಅರೆಸ್ಟ್

    ಭೋಪಾಲ್: ಮಹಾತ್ಮ ಗಾಂಧಿಯನ್ನು ಅವಮಾನಿಸಿ, ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ಹಿನ್ನೆಲೆ ಮಹಾರಾಷ್ಟ್ರದ ಹಿಂದೂ ಧಾರ್ಮಿಕ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

    ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಬಂಧಿತ ಆರೋಪಿ. ಈತ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್ ಸಭೆಯಲ್ಲಿ ಪಾಲ್ಗೊಂಡು ವಿವಾದಾತ್ಮಕ ಭಾಷಣ ಮಾಡಿದ್ದ.

    ಭಾಷಣದಲ್ಲಿ ಏನು ಹೇಳಿದ್ದಾರೆ?
    ಮೋಹನ್‌ದಾಸ್ ಕರಮಚಂದ್ ಗಾಂಧಿಯವರು ಭಾರತ ದೇಶವನ್ನು ನಾಶಪಡಿಸಿದ್ದಾರೆ. ಅವರನ್ನು ಕೊಂದ ನಾಥೂರಾಮ್ ಗೋಡ್ಸೆಗೆ ನಮಸ್ಕಾರಗಳು. ಹಿಂದೂ ಧರ್ಮವನ್ನು ರಕ್ಷಿಸಲು ಜನರು ಒಳ್ಳೆಯ ಹಿಂದೂ ನಾಯಕನನ್ನು ಆಯ್ಕೆ ಮಾಡಬೇಕೆಂದು ಭಾಷಣದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲಿನ ಪುಡಿಗೇ ಕನ್ನ

    ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಳಿಚರಣ್ ಭಾಷಣದ ವೀಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪೊಲೀಸರ ಟ್ರ‍್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಲು, ಕಾಳಿಚರಣ್ ಆಪ್ತ ಸಹಾಯಕರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇಂದು ಬೆಳಗ್ಗೆ 10 ಗಂಟೆಗೆ ಪೊಲೀಸರ ತಂಡ ಅವರನ್ನು ಅರೆಸ್ಟ್ ಮಾಡಿದೆ. ನಂತರ ಅವರನ್ನು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಕರೆದೊಯ್ದಿದ್ದಾರೆ. ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆ ತಡೆಯಲು ಚೆನ್ನೈನಲ್ಲಿ ವಾಹನ ಸಂಚಾರ ಬ್ಯಾನ್

  • ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

    ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ: ಪೇಜಾವರಶ್ರೀ

    ಉಡುಪಿ: ನಾನು ಸಂವಿಧಾನ ಬದಲಿಸಿ ಎಂದು ಧರ್ಮ ಸಂಸದ್ ನಲ್ಲಿ ಹೇಳಿಲ್ಲ. ಅಂಬೇಡ್ಕರ್ ಗೆ ಅಪಮಾನ ಮಾಡಿಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕೆಂದು ನಾನು ಹೇಳಿದೆ. ಆದರೆ ದಲಿತರ ಮೀಸಲಾತಿ ವಿಚಾರ ನಾನು ಮಾತನಾಡಲೇ ಇಲ್ಲ. ದಲಿತರಿಗೆ ಮೀಸಲಾತಿ ವಿಸ್ತರಿಸಬೇಕು ಎಂದು ಹೇಳುವವರಲ್ಲಿ ನಾನು ಒಬ್ಬ. ಸಂವಿಧಾನಕ್ಕೆ ಅಪಮಾನ ಮಾಡಿದರೆ ದೇಶಕ್ಕೆ ಅಪಮಾನ ಮಾಡಿದಂತೆ ಎಂದರು.

    ವೇದಿಕೆಯಲ್ಲಿದ್ದ ಸಾಹಿತಿಗಳಿಗೂ ಇದು ಅರ್ಥವಾಗಲಿಲ್ಲವಲ್ಲ ಅನ್ನುವುದೇ ವಿಪರ್ಯಾಸ. ಸಂವಿಧಾನ ಅಂಬೇಡ್ಕರ್ ಒಬ್ಬರೇ ರಚನೆ ಮಾಡಿದ್ದಲ್ಲ. ಸಂವಿಧಾನ ರಚನಾ ಸಮಿತಿಯಲ್ಲಿ ದೇಶದ ಎಲ್ಲಾ ಪ್ರತಿನಿಧಿಗಳು ಇದ್ದರು. ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ, ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್, ಅಂಬೇಡ್ಕರ್ ಕೆಲಸಕ್ಕೆ ಕೈಜೋಡಿಸಿದ್ದ ಪ್ರಮುಖರು. ತಮ್ಮ ಹೇಳಿಕೆ ಹೋರಾಟಗಾರ ದ್ವಾರಕನಾಥ್ ರಂತ ದೊಡ್ಡ ವಕೀಲರಿಗೂ ಅರ್ಥವಾಗಲಿಲ್ಲ ಎಂಬುವುದೇ ವಿಪರ್ಯಾಸ ಎಂದು ಹೇಳಿದರು.

    ಧರ್ಮದ ಹೆಸರಲ್ಲಿ ವಿಭಜನೆ ಬೇಡ. ಚರ್ಚ್-ಮಸೀದಿಗಿರುವ ಸ್ವಾಯತ್ತತೆ ಎಲ್ಲರಿಗೂ ಬರಲಿ. ಶಾದಿಭಾಗ್ಯ ದಲಿತರಿಗೆ ಯಾಕಿಲ್ಲ, ದಲಿತರಲ್ಲಿ ಬಡವರು ಇಲ್ವಾ ಎಂದು ಇದೇ ವೇಳೆ ಪ್ರಶ್ನಿಸಿದರು.

    ಉಡುಪಿ ಧರ್ಮ ಸಂಸದ್ ಯಶಸ್ವಿಯಾಗಿದೆ. ಧರ್ಮ ಸಂಸದ್ ಯಶಸ್ವಿಯಾದದ್ದನ್ನು ಬುದ್ಧಿ ಜೀವಿಗಳಿಗೆ, ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಸಾಹಿತಿಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾಗುತ್ತಿದೆ. ಪಾಪದ ದಲಿತರನ್ನು ಇವರು ವಿವಾದವೆಂದು ಹೇಳಿ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

    ಪೇಜಾವರ ಶ್ರೀ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಹಲವು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

     


  • ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಸಿಎಂ ಯೋಗಿ, ಉಮಾ ಭಾರತಿ ಗೈರಾಗಿದ್ದು ಯಾಕೆ?

    ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಸಿಎಂ ಯೋಗಿ, ಉಮಾ ಭಾರತಿ ಗೈರಾಗಿದ್ದು ಯಾಕೆ?

    ಬೆಂಗಳೂರು: ಉಡುಪಿಯಲ್ಲಿ ಆಯೋಜನೆಗೊಂಡಿದ್ದ ಧರ್ಮ ಸಂಸದ್ ಸಮಾರೋಪ ಸಮಾರಂಭಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವೆ ಉಮಾ ಭಾರತಿ ಗೈರಾಗಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಭಾಷಣ ಮಾಡಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿತ್ತು. ಆದರೆ ಭಾನುವಾರ ನಡೆದ ಸಮಾರೋಪ ಸಮಾರಂಭಕ್ಕೆ ಬಿಜೆಪಿಯ ಇಬ್ಬರು ಫೈರ್ ಬ್ರಾಂಡ್ ನಾಯಕರು ಗೈರಾಗಿದ್ದಾರೆ.

    ಯೋಗಿ ಮತ್ತು ಉಮಾ ಭಾರತಿ ಗುಜರಾತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎನ್ನು ಮಾಹಿತಿ ಸಿಕ್ಕಿದೆ. ಆದರೆ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಧರ್ಮ ಸಂಸದ್ ನಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಕ್ಕೆ ಅಸಮಾಧಾನಗೊಂಡು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕನಾಗಿ ಭಾಗವಹಿಸದೇ ಗೋರಖ್‍ಪುರದ ಪೀಠಾಧಿಪತಿಯಾಗಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಈ ಮೊದಲು ಪ್ರಕಟವಾಗಿತ್ತು.

    1992ರ ನವೆಂಬರ್ 17ರಂದು ಉಮಾ ಭಾರತಿ ಅವರಿಗೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆ ಕೊಟ್ಟಿದ್ದರು. ಹೀಗಾಗಿ ಪೇಜಾವರ ಶ್ರೀಗಳ ಪರ್ಯಾಯದ ಅವಧಿಯಲ್ಲಿ ಉಡುಪಿಯಲ್ಲೇ ಆಯೋಜನೆಗೊಂಡಿದ್ದ ಎರಡನೇ ಧರ್ಮ ಸಂಸದ್ ನಲ್ಲಿ ಉಮಾಭಾರತಿ ಭಾಗವಹಿಸುವ ನಿರೀಕ್ಷೆಯನ್ನು ಹಿಂದೂ ಮುಖಂಡರು ಇಟ್ಟುಕೊಂಡಿದ್ದರು.

    ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಈ ಕಾರ್ಯಕ್ರಮಕ್ಕೆ ಗೈರು ಹಾಜರಿ ಹಾಕಿದ್ದಾರೆ ಎನ್ನಲಾಗಿದೆ. ಕೇರಳದ ಪ್ರಸಿದ್ಧ ಮಾತಾ ಅಮೃತಾನಂದಮಯಿ ಅವರು ಈ ಕಾರ್ಯಕ್ರಮಕ್ಕೆ ಗೈರು ಹಾಜರಿಹಾಕಿದ್ದಾರೆ.


  • ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಉಡುಪಿ/ಮೈಸೂರು: ಮೋದಿ ಸರ್ಕಾರದ ಅವಧಿ ಮುಗಿಯುವ ಮೊದಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಿರ್ಣಯವನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳಲಾಗಿದೆ.

    ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ 2019 ರ ಒಳಗಡೆ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ನಿರ್ಧಾರವನ್ನು ಈ ಧರ್ಮಸಂಸದ್ ನಲ್ಲಿ ಕೈಗೊಳ್ಳಲಾಗಿದೆ ಎಂದು ವಿಎಚ್‍ಪಿ ಮೂಲಗಳು ತಿಳಿಸಿವೆ.

    ರಾಮಮಂದಿರ ನಿರ್ಮಾಣವಾಗಲಿರುವುದರಿಂದಲೇ ಮುಂದಿನ ಧರ್ಮ ಸಂಸದ್ ಆಯೋಧ್ಯೆಯನ್ನು ನಡೆಸಲು ವಿಎಚ್‍ಪಿ ಈಗಾಗಲೇ ನಿಶ್ಚಯಿಸಿದೆ. ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾದ ಹಿನ್ನೆಲೆಯಲ್ಲಿ 2019 ರ ಒಳಗಡೆ ಮಂದಿರ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಈ ಧರ್ಮ ಸಂಸದ್‍ನಲ್ಲಿ ವ್ಯಕ್ತವಾಗಿದೆ.

    ಈಗಾಗಲೇ ಹೋರಾಟಗಳು ಪೂರ್ಣವಾಗಿದ್ದು, ಈಗ ಅಂತಿಮ ಹೋರಾಟದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದ ಬಿಟ್ಟು, ಎಲ್ಲರೂ ಒಟ್ಟಾಗಿ ರಾಮನ ಸೈನಿಕರಾಗಿ ಮುಂದುವರಿಯಬೇಕು ಎಂದು ಚಿನ್ಮಯಾನಂದಜಿ ಮಹಾರಾಜ್ ತಿಳಿಸಿದ್ದರು.

    4 ತಿಂಗಳಿನಲ್ಲಿ ಪ್ರಕರಣ ಇತ್ಯರ್ಥ: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆ ಶನಿವಾರ ಆಯೋಜಿಸಿದ್ದ ರಾಮಮಂದಿರ ಮುಂದಿನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಮುಂದಿನ 4 ತಿಂಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಪ್ರಕರಣ ಇತ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.

    ಮುಂದಿನ ದೀಪಾವಳಿ ವೇಳೆಗೆ ಸುಪ್ರೀಂಕೋರ್ಟ್ ಆದೇಶ ಬರಲಿದೆ. ಬಹುಶಃ ರಾಮಮಂದಿರ ನಿರ್ಮಾಣ ವಿಷಯವನ್ನು ದೀಪಾವಳಿಯಲ್ಲಿ ಆಚರಿಸಬಹುದು. ಜನವರಿ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ನಡೆಯುವ ನನ್ನ ವಾದ ಬರಿ ಉತ್ತರವಾಗುವುದಿಲ್ಲ. ರಾಮಮಂದಿರಕ್ಕಾಗಿ ಅದು ನನ್ನ ಬ್ರಹ್ಮಾಸ್ತ್ರ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ 21 ಮಸೀದಿಗಳಿವೆ. ಅಲ್ಲಿಗೆ ಯಾರು ಸಹ ನಮಾಜ್ ಮಾಡಲು ಹೋಗುವುದೇ ಇಲ್ಲ. ಆದರೆ ರಾಮಮಂದಿರ ಇದ್ದ ಜಾಗದಲ್ಲಿ ಮಾತ್ರ ನಮಾಜ್‍ಗೆ ಹೋಗುತ್ತಾರೆ. ರಾಮಮಂದಿರ ಇದ್ದ ಜಾಗದಲ್ಲಿ ದೇವಾಲಯ ಇತ್ತು ಅಂತ ಸಾಕ್ಷಿಗಳೇ ಹೇಳಿವೆ. ದಾಖಲೆಗಳೇ ರಾಮಮಂದಿರವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

    ದೇವಾಲಯ ಹಾಗೂ ಮಸೀದಿ ಒಂದೇ ಅಲ್ಲ. ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕೆಂದಿಲ್ಲ. ನಮಾಜ್ ಅನ್ನು ಎಲ್ಲಿ ಬೇಕಾದರೂ ಮಾಡಬಹುದು. ಇಸ್ಲಾಮ್ ನಲ್ಲಿ ನಮಾಜ್‍ಗೆ ಕಡ್ಡಾಯ ಸ್ಥಳ ನಿಗದಿ ಮಾಡಿಲ್ಲ. ರಸ್ತೆ, ಏರ್ ಪೋರ್ಟ್, ಕೋಣೆ ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವರನ್ನ ಎಲ್ಲಿ ಬೇಕಾದರೂ ಪೂಜಿಸಲು ಆಗುವುದಿಲ್ಲ ಎಂದರು.

    ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಹಿಂದೂ ಮುಖಂಡ ಜಗದೀಶ್ ಶೆಟ್ಟಿ. ಮಾಜಿ ರಾಮದಾಸ್, ನಟಿ ಮಾಳವಿಕ ಭಾಗಿಯಾಗಿದ್ದರು.

     

     

     

     

  • ಗೋಹತ್ಯೆ ವಿರುದ್ಧ ಉಡುಪಿಯಲ್ಲಿ 3 ನಿರ್ಣಯ ಮಂಡನೆ

    ಗೋಹತ್ಯೆ ವಿರುದ್ಧ ಉಡುಪಿಯಲ್ಲಿ 3 ನಿರ್ಣಯ ಮಂಡನೆ

    ಉಡುಪಿ: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಧರ್ಮ ಸಂಸದ್ ನಲ್ಲಿ ಭಾನುವಾರ ಗೋ ಹತ್ಯೆ ನಿಷೇಧ ಕುರಿತು ಚರ್ಚೆ ನಡೆಯಿತು. ಈ ವೇಳೆ ಧಾರ್ಮಿಕ ಗೋಷ್ಠಿಯಲ್ಲಿ ಗೋ ಹತ್ಯೆ ನಿಷೇಧದ ಕುರಿತು ಮೂರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

    ಭಾರತ ಗೋವು ಮಾಂಸ ರಫ್ತು ಮುಕ್ತ ಆಗಬೇಕು. ಗೋಹತ್ಯೆ ಪ್ರತೀ ರಾಜ್ಯದಲ್ಲೂ ನಿಷೇಧ ಆಗಬೇಕು. ದೇಶದಲ್ಲಿ ಗೋಮಂತ್ರಾಲಯ ಸ್ಥಾಪನೆ ಮಾಡಬೇಕು ಎಂಬ ಮೂರಂಶದ ನಿರ್ಣಯ ತೆಗದುಕೊಳ್ಳಲಾಯಿತು.

    ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದ ಸುಮಾರು 1300 ಸಂತರ ಮುಂದೆ ಗೋ ಹತ್ಯೆ ನಿಷೇಧದ ಕುರಿತ ನಿರ್ಣಯವನ್ನು ಘೋಷಣೆ ಮಾಡಲಾಯಿತು. ಇಂದು ಬೆಳಗ್ಗೆ ಒಂಬತ್ತೂವರೆಗೆ ಆರಂಭವಾದ ಗೋ ಹತ್ಯೆ ನಿಷೇಧ ಕಾಯ್ದೆಯ ವಿರುದ್ಧದ ಧಾರ್ಮಿಕ ಗೋಷ್ಠಿ ಮಧ್ಯಾಹ್ನ ಒಂದು ಗಂಟೆಯ ತನಕವೂ ಮುಂದುವರೆಯಿತು. ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಪ್ರಮುಖ ಸಂತರು ತಮ್ಮ ವಿಚಾರವನ್ನು ಮಂಡಿಸಿದರು.

    ಭಾರತ ದೇಶದ ಪ್ರತಿ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುವಂತೆ ಸಂತರು ನೋಡಿಕೊಳ್ಳಬೇಕು. ಅಲ್ಲದೇ ರಾಜಕೀಯ ಪಕ್ಷಗಳ ಮೇಲೆ ಸಂತರು ಒತ್ತಡವನ್ನು ತಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆದೇಶಿಸಲಾಯಿತು. ಎಲ್ಲಾ ಸಂತರು ಧರ್ಮ ಸಂಸತ್ ನಿರ್ಣಯಕ್ಕೆ ಕೈ ಎತ್ತಿ ಜೈ ಘೋಷ ಮಾಡುವ ಮೂಲಕ ತಮ್ಮ ಅನುಮೋದನೆ ಸಲ್ಲಿಸಿದರು.

     


  • ಸಾವಿರ, ಲಕ್ಷದ ಮೊಬೈಲ್ ಬಿಡಿ, ಕೈಲಿ ತಲ್ವಾರ್ ಹಿಡೀರಿ- ಕಾಶಿ ಮಠಾಧೀಶರಿಂದ ವಿವಾದಾತ್ಮಕ ಹೇಳಿಕೆ

    ಸಾವಿರ, ಲಕ್ಷದ ಮೊಬೈಲ್ ಬಿಡಿ, ಕೈಲಿ ತಲ್ವಾರ್ ಹಿಡೀರಿ- ಕಾಶಿ ಮಠಾಧೀಶರಿಂದ ವಿವಾದಾತ್ಮಕ ಹೇಳಿಕೆ

    ಉಡುಪಿ: ಮೊಬೈಲ್ ಬಿಡಿ, ಕೈಯಲ್ಲಿ ತಲ್ವಾರ್ ಹಿಡೀರಿ. ಲಕ್ಷ ರೂಪಾಯಿ ಮೊಬೈಲ್ ಇಟ್ಟುಕೊಳ್ಳಬೇಡಿ. ಪ್ರತಿಯೊಬ್ಬರು ಕೈಯಲ್ಲಿ ಹತ್ಯಾರ್ ಹಿಡಿದುಕೊಳ್ಳಿ ಎಂದು ಕಾಶಿ ಮಠಾಧೀಶ ನರೇಂದ್ರ ಭಾಯ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉಡುಪಿ ಧರ್ಮ ಸಂಸದ್ ನಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಚಾಕು, ಖಡ್ಗ ಇಟ್ಟುಕೊಳ್ಳಿ ಎಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ, ರಕ್ಷಣೆಗಾಗಿ ಮನೆಯಲ್ಲಿ ಕೋಲು ಇಟ್ಟುಕೊಳ್ಳಿ. ನಾಯಿ- ಬೆಕ್ಕುಗಳನ್ನು ಹೊಡೆದುರುಳಿಸಿ. ನಾಯಿ ಬೆಕ್ಕುಗಳೆಂದ್ರೆ ಈ ದೇಶದ ವಿರೋಧಿಗಳು. ದೇಶ ವಿರೋಧಿಗಳನ್ನು ಮುಗಿಸಿಬಿಡಿ. ಮೊದಲು ನಾವು ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ದೇಶ ರಕ್ಷಣೆ ಮೊದಲು ಸಮರ್ಪಕವಾದರೆ, ನಂತರ ರಾಮ ಮಂದಿರ ಕಟ್ಟಬಹುದು ಎಂದರು.

    ದೇಶದ್ರೋಹಿಗಳ ವಿರುದ್ಧ ಶಸ್ತ್ರಾಸ್ತ್ರ ಉಪಯೋಗಿಸಿ. ಪರವಾನಿಗೆ ಪಡೆದೋ, ಪಡೆಯದೆಯೋ ಶಸ್ತ್ರಾಸ್ತ್ರ ಬಳಸಿ ಎಂದು ಕರೆ ನೀಡಿದರು. ಹಿಂದೂಗಳು ಎರಡು ಮಕ್ಕಳನ್ನು ಮಾತ್ರ ಮಾಡ್ಬೇಕಾ? ಮುಸ್ಲಿಮರು ನಾಲ್ಕು ಮದುವೆಯಾಗಿ 20 ಮಕ್ಕಳನ್ನು ಹೊಂದಬಹುದಾ ಎಂದು ಪ್ರಶ್ನೆ ಹಾಕಿದ್ರು. ಚೈನಾ ಮಾದರಿಯ ಕಠಿಣ ಜನಸಂಖ್ಯಾ ನಿಯಂತ್ರಣ ಭಾರತದಲ್ಲಿ ಜಾರಿಯಾಗಲಿ. ಸಮಾನ ಕಾನೂನು ಜಾರಿಗೆ ಭಾರತದಲ್ಲಿ ಅವಕಾಶ ಇಲ್ಲವೇ ಎಂದು ಪ್ರಶ್ನಿಸಿದರು.

    https://twitter.com/ShobhaBJP/status/934302285286457345

     

  • ಸಾಹಿತ್ಯ ಸಮ್ಮೇಳನದಲ್ಲಿ ಮತಯಾಚನೆ ಘೋಷಣೆ ಮಾಡಿರೋದು ದುರಂತ: ಧರ್ಮ ಸಂಸದ್‍ನಲ್ಲಿ ಶೋಭಾ ಕಿಡಿ

    ಸಾಹಿತ್ಯ ಸಮ್ಮೇಳನದಲ್ಲಿ ಮತಯಾಚನೆ ಘೋಷಣೆ ಮಾಡಿರೋದು ದುರಂತ: ಧರ್ಮ ಸಂಸದ್‍ನಲ್ಲಿ ಶೋಭಾ ಕಿಡಿ

    ಉಡುಪಿ: ಮೈಸೂರಿನಲ್ಲಿ ನೆಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಗ್ರೆಸ್ ಮಯವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಘೋಷಣೆ ಕೂಗಿರೋದು ದುರಂತ ಅಂತ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

    ನಗರದಲ್ಲಿ ನಡೆಯುತ್ತಿರೋ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಕನ್ನಡಿಗರ ಸಮ್ಮೇಳನವಾಗಿ ಉಳಿದಿಲ್ಲ. ಕನ್ನಡಿಗರ ಬಗ್ಗೆ ಚರ್ಚೆಯಾಗದೇ ಬಿಜೆಪಿಯನ್ನು ವಿರೋಧ ಮಾಡುವ ಕಡೆ ಚರ್ಚೆಯಾಗುತ್ತಿರುವುದು ನಮ್ಮೆಲ್ಲರ ದುರಂತ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೇವಲ ಎಡಪಂಥಿಯರಿಗೆ ಮಣೆ ಹಾಕುವ ಕೆಲಸವಾಗುತ್ತಿದೆ. ಯಾರು ಅವರ ಕಿವಿ ಕಚ್ಚುತ್ತಿದ್ದಾರೋ, ಯಾರೂ ಹಿಂದು ವಿರೋಧಿ ಭಾವನೆ ಹೊಂದಿದ್ದಾರೋ ಅವರನ್ನು ಮಾತ್ರ ಸಾಹಿತ್ಯ ಸಮ್ಮೇಳನಕ್ಕೆ ಕರೆಯಲಾಗಿದೆ. ಅವರಿಗೆ ಕಮಿಟಿಯಲ್ಲಿ ಹಾಗೂ ಆಯೋಗದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಟೀಕಿಸಿದ್ರು.

    ಚಂಪಾ ಹೇಳಿದ್ದು ಏನು?: ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಾತಂತ್ರ್ಯ, ಸಮಾನತೆ, ಸಹಭಾವ, ಸೆಕ್ಯುಲರಿಸಂ, ಸಾಮಾಜಿಕ ನ್ಯಾಯ ಮುಂತಾದವುಗಳಿಗೆ ಕಂಟಕ ಒದಗಿಬಂದಿದೆ ಎಂಬ ಆತಂಕ ವ್ಯಕ್ತಪಡಿಸಿದ್ರು. ಅಲ್ಲದೇ ನಮ್ಮ ರಾಜ್ಯದ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಸೆಕ್ಯುಲರ್ ಪಕ್ಷಗಳ ಪರವಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದ್ದರು.

    ಒಂದು ರಾಷ್ಟ್ರೀಯ ಪಕ್ಷ ಕನ್ನಡದ ಪರ ಕೆಲಸ ಮಾಡುತ್ತಿದೆ. ಆದರೆ, ಇನ್ನೊಂದು ರಾಷ್ಟ್ರೀಯ ಪಕ್ಷವು ನಾಡಧ್ವಜ ವಿವಾದ, ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯೆತ್ತುತ್ತಿ ಮೌನ ತಾಳಿದೆ. ಈ ಚುನಾವಣೆಯಲ್ಲಿ ಆ ಪಕ್ಷವನ್ನು ಜನ ದೂರವಿಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ನೆರೆದಿದ್ದ ಜನತೆಗೆ ಕರೆಕೊಟ್ಟಿದ್ದರು.

    ಕನ್ನಡ ಸಂಸ್ಕೃತಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಡುವೈರಿಯಾಗಲು ಕೇಂದ್ರ ಸರಕಾರದ ನೀತಿಯೇ ಕಾರಣವಾಗಿದೆ. ಒಂದೇ ಭಾಷೆ-ಒಂದೇ, ಧರ್ಮ-ಒಂದೇ ಸಿದ್ಧಾಂತ ಎಂಬ ಧಾಟಿಯಲ್ಲಿ ನಾವೆಲ್ಲ ಒಕ್ಕೊರಲಿನಿಂದ ಹಾಡುತ್ತಿದ್ದ ವಂದೇಮಾತರಂ ಗೀತೆಯನ್ನೇ ಹೈಜಾಕ್ ಮಾಡಲಾಗಿದೆ. ಭಾರತ ಮಾತೆ, ಬರೀ ಹಿಂದೂ ಮಾತೆ ಆಗುತ್ತಿರುವಳೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಮಾಡುವುದೇ ರಾಷ್ಟ್ರದ್ರೋಹವಾಗಿ, ವೈಚಾರಿಕತೆ ಮೇಲೆ ಹಲ್ಲೆ ಎಸಗುವುದೇ ಸಂಸ್ಕೃತಿಯಾಗಿ, ದಟ್ಟ ಭಯ ಆವರಿಸಿದೆ ಎಂದಿದ್ದರು.

     

  • ಉಡುಪಿ `ಧರ್ಮ ಸಂಸದ್’ಗೆ ಉಗ್ರರ ಭೀತಿ – ಗುಪ್ತಚರ ಇಲಾಖೆಯಿಂದ ರಾಜ್ಯಕ್ಕೆ ಕಟ್ಟೆಚ್ಚರ

    ಉಡುಪಿ `ಧರ್ಮ ಸಂಸದ್’ಗೆ ಉಗ್ರರ ಭೀತಿ – ಗುಪ್ತಚರ ಇಲಾಖೆಯಿಂದ ರಾಜ್ಯಕ್ಕೆ ಕಟ್ಟೆಚ್ಚರ

    ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ನಡೆಯುತ್ತಿರೋ ಧರ್ಮ ಸಂಸದ್ ಕಾರ್ಯಕ್ರಮ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಕಾರ್ಯಕ್ರಮಕ್ಕೆ ಉಗ್ರರ ಭೀತಿ ಎದುರಾಗಿದೆ.

    ಉಗ್ರರ ದಾಳಿ ಬಗ್ಗೆ ಗುಪ್ತಚರ ಇಲಾಖೆ ಈಗಾಗಲೇ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ. ರಾಮಮಂದಿರ ನಿರ್ಮಾಣದ ಘೋಷಣೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಕರ್ನಾಟಕದ ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಮೌಖಿಕ ಆದೇಶ ನೀಡಲಾಗಿದ್ದು, ಕೋಮು ಸಂಘಟನೆಗಳ ಚಟುವಟಿಕೆ ಮೇಲೂ ಕಣ್ಣಿಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ. ಇನ್ನು ಇಂದು ನಡೆಯುವ ಸಭೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.

    2ನೇ ದಿನವಾದ ಇಂದು ಸಂವಾದ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳು, ಗೋ ಹತ್ಯೆ ನಿಷೇಧ ಕಾಯಿದೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಮತಾಂತರ ತಡೆ ಹಾಗೂ ಪರಿವರ್ತನಾ ಪ್ರಯತ್ನಗಳು, ನಮ್ಮ ಸಂಸ್ಕೃತಿಯ ರಕ್ಷಣೆಗೆ ಯೋಜನೆಗಳು ಈ ವಿಚಾರದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ವಿಶೇಷ ಅಂದ್ರೆ ಗೋಷ್ಠಿಯಲ್ಲಿ 1200 ಮಂದಿ ಸಂತರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.

  • 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    – ಧರ್ಮಸಂಸದ್ ನಲ್ಲಿ ರಾಮಮಂದಿರ ಕಹಳೆ
    – ಪರ್ಯಾಯ ನಂತರ ನಾನು ದೈಹಿಕವಾಗಿಯೂ ಹೊರಾಟಕ್ಕಿಳಿಯುತ್ತೇನೆಂದ ಪೇಜಾವರ ಶ್ರೀ

    ಉಡುಪಿ: ಬಾಬ್ರೀ ಮಸೀದಿ ಧ್ವಂಸವಾಗಿ 25 ವರ್ಷಗಳೇ ಕಳೆದಿವೆ. ಇನ್ನೂ ನಾವು ಕಾಯುವುದರಲ್ಲಿ ಅರ್ಥವಿಲ್ಲ. ಸಂಘ ಪರಿವಾರದ ಸ್ವಯಂ ಸೇವಕರು ತುಂಬಾ ಆಸೆಯಿಂದ ರಾಮ ಮಂದಿರ ಕಟ್ಟೋದು ಯಾವಾಗ ಅಂತಾ ಕೇಳ್ತಾರೆ. ಸ್ವಯಂ ಸೇವಕರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ. ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ. 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಆರ್‍ಎಸ್‍ಎಸ್ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

    ರಾಮಮಂದಿರದ ವಿಜಯ ನಿಶ್ಚಿತವಾಗಿದ್ದು, ಹಿಂದೂ ದೇಶದ ದಿಗ್ಧರ್ಶನ ಉಡುಪಿಯಲ್ಲಿ ಆಗಿದೆ. ಧರ್ಮ ಸಂಸದ್ ನಂತರ ಹಿಂದೂ ಸಮಾಜ ಒಂದು ಹೆಜ್ಜೆ ಮುಂದಿಟ್ಟು, ನಮ್ಮ ಹೋರಾಟ ವಿಜಯದತ್ತ ಸಾಗಬೇಕಿದೆ. ಮಂದಿರದ ವಿಜಯ ಸಾಧಿಸದೇ ನಾವು ಸುಮ್ಮನೆ ಕೂರುವವರಲ್ಲ. ಸಾಮಾಜಿಕ ಸಾಮರಸ್ಯ ನಮ್ಮ ಮೇಲೆ ಮಾತ್ರವಲ್ಲದೇ ಎಲ್ಲ ವರ್ಗಕ್ಕೂ ಸೀಮಿತವಾಗಬೇಕಿದೆ. ಗೋರಕ್ಷಣೆಯ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು, ಗೋ ಹತ್ಯೆ ನಿಷೇಧ ಆಗುವರೆಗೂ ನಮಗೆಲ್ಲರಿಗೂ ನೆಮ್ಮದಿ ಇಲ್ಲ. ಮತಾಂತರ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಆಯೋಧ್ಯೆಯಲ್ಲಿ ಬೇರೆ ಕಟ್ಟಡಗಳು ಬೇಡ: ಆಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣವಾಗಬೇಕು. ಅಲ್ಲಿ ಬೇರೆ ಯಾವುದೇ ಕಟ್ಟಡಗಳು ಬರಬಾರದು. ಅದೇ ಕಲ್ಲುಗಳಿಂದ ರಾಮಮಂದಿರ ಕಟ್ಟಲಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ, ಹಿಂದೂ ದೇಶ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಎಲ್ಲರೂ ಜೈಕಾರ ಕೂಗಲು ಸಿದ್ಧರಾಗಿರಿ ಎಂದು ಭಾಗವತ್ ಹೇಳಿದ್ರು.

    ಸುತ್ತೂರು ಶ್ರೀಗಳು ಮಾತನಾಡಿ, ಧರ್ಮ ಸಂಸದ್ ನ ಆಶಯಗಳು ಈಡೇರಬೇಕಾದರೆ ಸಂತರ ನಿರ್ಣಯಗಳು ಶೀಘ್ರ ಅನುಷ್ಠಾನಕ್ಕೆ ಬರಬೇಕು. ಭಾರತ ವಿಜ್ಞಾನಿ-ತತ್ವಜ್ಞಾನಿಗಳ ದೇಶ, ಭಾರತದ ಸಂಸ್ಕೃತಿ- ಭಾಷೆ ಅನನ್ಯವಾದದ್ದು. ನಾವೀಗ ನ್ಯೂಕ್ಲಿಯರ್ ಯುಗದಲ್ಲಿದ್ದೇವೆ. ಮಾತಿನಲ್ಲಿ ಬಗೆಹರಿಯುವ ವಿಚಾರ ಯುದ್ಧಕ್ಕೆ ತಿರುಗುತ್ತಿದೆ. ಅಸ್ಪೃಶ್ಯತೆ, ಜಾತಿಪದ್ಧತಿ ಹಿಂದೂ ಧರ್ಮದಿಂದ ದೂರವಾಗಿ ಮಹಿಳೆಯರ ಸ್ಥಿತಿ ಬದಲಾಗಬೇಕು ಎಂದರು.

    ಇದೇ ವೇಳೆ ಪೇಜಾವರ ಶ್ರೀಗಳು ಮಾತನಾಡಿ, ಇದು ಧರ್ಮ ಸಂಸದ್ ಮಾತವಲ್ಲ, ಕ್ಷೀರ ಸಮುದ್ರದ ಮಂಥನವಾಗುತ್ತಿದೆ. ಅಸ್ಪೃಶ್ಯತೆ ಎಂಬುದು ಕಾಲಕೂಟ ವಿಷ ಸರ್ಪ. ಅದರ ಉಚ್ಛಾಟನೆ ಮೊದಲು ಹಿಂದೂಗಳಲ್ಲಿ ಆಗಬೇಕಿದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಒಂದು ನಿಯಮ, ಬಹುಸಂಖ್ಯಾತರಿಗೆ ಬೇರೆಯೇ ಕಾನೂನುಗಳಿವೆ. ಜಾತ್ಯಾತೀತ ಪಕ್ಷಗಳು ಸಮಾಜವನ್ನು ಒಡೆಯುತ್ತಿದ್ದು ಭಾರತದ ಸಂವಿಧಾನ ಬದಲಾಗಬೇಕಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ತರುವ ಸರ್ಕಾರ ಬರಬೇಕಿದೆ. 2019 ರೊಳಗೆ ರಾಮ ಮಂದಿರ ಆಗೋದು ನಿಶ್ಚಿತವಾಗಿದೆ. ದೇಶ ರಾಮಮಂದಿರ ನಿರ್ಮಾಣದ ವಾತಾವರಣವನ್ನು ಹೊಂದಿದೆ. ರಾಮಮಂದಿರ ನಿರ್ಮಾಣ ವಿಚಾರಕ್ಕೆ ಕೃಷ್ಣನ ಅನುಗ್ರಹವಿದೆ. ಪರ್ಯಾಯ ನಂತರ ನಾನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹೋರಾಟಕ್ಕೆ ಇಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.