Tag: ಧರ್ಮೇಂದ್ರ ಡಿಯೋಲ್

  • ಪತ್ನಿ ಹೇಮಾ ಮಾಲಿನಿ ಜೊತೆ ಕ್ಷಮೆ ಕೇಳಿದ ಧರ್ಮೇಂದ್ರ

    ಪತ್ನಿ ಹೇಮಾ ಮಾಲಿನಿ ಜೊತೆ ಕ್ಷಮೆ ಕೇಳಿದ ಧರ್ಮೇಂದ್ರ

    – ಕಸ ಗುಡಿಸಿದ್ದನ್ನು ಹಾಸ್ಯ ಮಾಡಿದ್ದ ಪತಿ

    ಮುಂಬೈ: ಬಾಲಿವುಡ್ ಹಿರಿಯ ನಟ ಧಮೇಂದ್ರ ಡಿಯೋಲ್ ಪತ್ನಿ, ಸಂಸದೆ ಹೇಮಾ ಮಾಲಿನಿ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ.

    ಇತ್ತೀಚೆಗೆ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸಂಸತ್ ಆವರಣದಲ್ಲಿ ಹೇಮಾ ಮಾಲಿನಿ ಕಸ ಗುಡಿಸಿದ್ದರು. ಸಂಸದೆ ಹೇಮಾ ಮಾಲಿನಿ ಕಸ ಗುಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ವಿಡಿಯೋ ನೋಡಿದ ನೆಟ್ಟಿಗರು, ಕಮೆಂಟ್ ಗಳ ಮೂಲಕ ಸಂಸದೆಯವರನ್ನು ಟ್ರೋಲ್ ಮಾಡಲಾರಂಭಿಸಿದ್ದರು. ಮೊದಲ ಬಾರಿಗೆ ಹೇಮಾಮಾಲಿನಿ ಪೊರಕೆ ಹಿಡಿದು, ಗಾಳಿಯಲ್ಲಿ ಕಸ ಗುಡಿಸಿದ್ದಾರೆ ಎಂದು ಬರೆದು ಕಾಲೆಳೆಯಲು ಆರಂಭಿಸಿದ್ದರು.

    ಟ್ವಿಟ್ಟರ್ ನಲ್ಲಿ ಸಿದ್ದ್ ಎಂಬವರು ಸರ್, ಮೇಡಂ ಜೀವನದಲ್ಲಿ ಒಮ್ಮೆಯಾದ್ರೂ ಪೊರಕೆ ಹಿಡಿದಿದ್ದಾರಾ ಎಂದು ಧರ್ಮೇಂದ್ರ ಅವರನ್ನು ಪ್ರಶ್ನಿಸಿದ್ದರು. ಸಿದ್ಧ್ ಟ್ವೀಟ್ ಗೆ ಮುಗುಳ್ನಗುತ್ತಲೇ ಉತ್ತರಿಸಿದ್ದ ಧರ್ಮೇಂದ್ರ, ಸಿನಿಮಾಗಳಲ್ಲಿ ಪೊರಕೆ ಹಿಡಿದಿದ್ದಾರೆ. ವಿಡಿಯೋ ನೋಡಿದಾಗ ನನಗೂ ಅದೇ ರೀತಿ ಅನ್ನಿಸಿತು. ನಾನು ಬಾಲ್ಯದಲ್ಲಿಯೇ ಅಮ್ಮನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ. ಹಾಗಾಗಿ ನಾನು ಚೆನ್ನಾಗಿ ಕಸ ಗುಡಿಸಬಲ್ಲೆ. ನಾನು ಸ್ವಚ್ಛತೆಯನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಧರ್ಮೇಂದ್ರ ಉತ್ತರಿಸಿದ್ದನ್ನು ಕಂಡ ಸಿದ್ದ್, ನಿಮ್ಮ ಪ್ರಾಮಾಣಿಕತೆಯ ಉತ್ತರಕ್ಕೆ ನಾನು ಗೌರವ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

    ಧರ್ಮೇಂದ್ರ ಡಿಯೋಲ್ ಟ್ವೀಟ್ ಗೆ ಹಲವರು ಮೆಚ್ಚುಗೆ ಸೂಚಿಸಿ ಹೇಮಾ ಮಾಲಿನಿ ಅವರನ್ನು ಮತ್ತೆ ಟ್ರೋಲ್ ಮಾಡಲಾರಂಭಿಸಿದ್ದರು. ಟ್ವೀಟ್ ಬಳಿಕ ಪತ್ನಿ ಮುನಿಸಿಕೊಂಡ ಕಾರಣ, ಇಂದು ಧರ್ಮೇಂದ್ರ ಟ್ವಿಟ್ಟರ್ ನಲ್ಲಿ ಕೈ ಮುಗಿದು ಕುಳಿತಿರುವ ತಮ್ಮ ಸಿನಿಮಾದ ಹಳೆ ಫೋಟೋವನ್ನು ಹಂಚಿಕೊಂಡು ಪತ್ನಿಯ ಕ್ಷಮೆ ಕೇಳಿದ್ದಾರೆ.

    ಕೆಲವೊಮ್ಮೆ ಏನೇನು ಮಾತನಾಡುತ್ತೇನೆ. ಯಾರದ್ದೋ ಭಾವನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತೇನೆ. ಅದರಲ್ಲಿ ಪೊರಕೆ ವಿಷಯವನ್ನೇ ತಪ್ಪಾಗಿ ಅರ್ಥೈಸಿಕೊಂಡೆ, ಈ ರೀತಿ ತಪ್ಪು ಎಂದೂ ಮಾಡಲಾರೆ. ಓ ದೇವರೇ ನನ್ನನ್ನು ಕ್ಷಮಿಸು ಎಂದು ಧರ್ಮೇಂದ್ರ ಡಿಯೋಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.