– ವಿಚಾರಣೆಗೆ ಹಾಜರಾಗದಿದ್ರೆ ಮುಲಾಜಿಲ್ಲದೇ ಅರೆಸ್ಟ್ ಎಚ್ಚರಿಕೆ
– ತಿಮರೋಡಿ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ
ಮಂಗಳೂರು: ಇಡೀ ದೇಶಾದ್ಯಂತ ಸದ್ದು ಮಾಡಿದ್ದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ (Dharmasthala Case) ಇನ್ನೇನು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬರುವಂತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ವಿಚಾರಣೆಗೆ ಬೆಳ್ತಂಗಡಿಯ ಎಸ್‌ಐಟಿ (SIT) ಕಚೇರಿಗೆ ಹಾಜರಾಗಲು ಐವರಿಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿದೆ.

ಪ್ರಕರಣದ ಸೂತ್ರಧಾರಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ (Girish Mattannavar), ಜಯಂತ್. ಟಿ, ವಿಠಲ ಗೌಡ, ಸುಜಾತ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತನಿಖಾಧಿಕಾರಿ ಎಸ್.ಪಿ ಜಿತೇಂದ್ರ ದಯಾಮಾ ನೋಟಿಸ್ ಜಾರಿಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗದಿದ್ದರೆ, ಬಂಧನ ಮಾಡುವ ಎಚ್ಚರಿಕೆಯೊಂದಿಗೆ ನೋಟಿಸ್ ನೀಡಿದ್ದಾರೆ. ಬಿಎನ್‌ಎಸ್‌ಎಸ್ 35(3) ಅಡಿಯಲ್ಲಿ ಪ್ರದತ್ತವಾದ ವಿಶೇಷ ಅಧಿಕಾರ ಬಳಸಿಕೊಂಡು ಪ್ರಕರಣದ ಸೂತ್ರಧಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಇದನ್ನೂ ಓದಿ: ನಕಲಿ ʻಲೋಕಾಯುಕ್ತ ಜಸ್ಟೀಸ್ʼ ಹಾವಳಿಗೆ ಬೆಚ್ಚಿಬಿದ್ದ ಅಧಿಕಾರಿಗಳು – ದೂರು ದಾಖಲು
ಮತ್ತೆ ನೋಟಿಸ್‌ಗೆ ಕಾರಣ ಏನು?
ನೊಟೀಸ್‌ನಲ್ಲಿ ಹಲವು ಅಂಶ ಉಲ್ಲೇಖಿಸಿರೋ ತನಿಖಾಧಿಕಾರಿ ದಯಾಮ, ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಹಲವು ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ನಿಮ್ಮನ್ನ ವಿಚಾರಿಸುವುದು ಅಗತ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮುಂದಿನ ತಿಂಗಳಿಂದಲೇ ಭಾರತ್ ಟ್ಯಾಕ್ಸಿ ಶುರು – ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿಗೆ ಬ್ರೇಕ್!
ತಿಮರೋಡಿ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ
ಇನ್ನೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಪರ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ತಿಮರೋಡಿ ಪ್ರಕರಣ ನ್ಯಾಯಾಲಯದಲ್ಲಿ ಇರೋ ಹಿನ್ನೆಲೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಇನ್ನೂ ಅನುಮತಿ ಇಲ್ಲದಿದ್ರೂ ಪ್ರತಿಭಟನೆಗೆ ಮುಂದಾಗಿದ್ದ ಕೆಲ ತಿಮರೋಡಿ ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರಸ್ತೆಗಳಲ್ಲಿ ಬಟರ್ ಫ್ಲೈ ಲೈಟ್ ಹಾಕಿದ್ದೇವೆಂದು 73 ಲಕ್ಷ ಹಣ ಪಡೆದು ಗುಳುಂ; ಗೋಲ್ಮಾಲ್ ಬಹಿರಂಗ




















