Tag: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘ

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹಣ ಕಳ್ಳತನ ಪ್ರಕರಣ – ಸಂಘದ ಸಿಬ್ಬಂದಿ ಸೇರಿ 10 ಕಳ್ಳರು ಅಂದರ್

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹಣ ಕಳ್ಳತನ ಪ್ರಕರಣ – ಸಂಘದ ಸಿಬ್ಬಂದಿ ಸೇರಿ 10 ಕಳ್ಳರು ಅಂದರ್

    ಧಾರವಾಡ: ನಗರದ ಹೊರವಲಯದ ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ಕಚೇರಿಯಲ್ಲಿ ಹಣ ಕಳ್ಳತನಕ್ಕೆ ಸಂಬಂಧಪಟ್ಟಂತೆ ಸಂಘದ ಮೂವರು ಸದಸ್ಯರು ಸೇರಿ 10 ಕಳ್ಳರನ್ನು ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ಕಚೇರಿಯಲ್ಲಿ ಕಳೆದ ಅಕ್ಟೋಬರ್ 24 ರಂದು ಕಳ್ಳತನವಾಗಿತ್ತು. ಕಚೇರಿಯ ಲಾಕರ್‌ನಲ್ಲಿದ್ದ 1 ಕೋಟಿ 24 ಲಕ್ಷ ರೂ. ಹಣ ಕಳುವಾಗಿತ್ತು. ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಎಲ್ಲ ವ್ಯವಹಾರ, ಕಚೇರಿ ಕೆಲಸಗಳು ಇಲ್ಲಿಯೇ ನಡೆಯುತ್ತವೆ. ಆದರೆ ಇಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರಲಿಲ್ಲ.

    ಅಂದು ಕಚೇರಿ ಹಿಂಭಾಗದಲ್ಲಿನ ಶೌಚಾಲಯದ ಕಿಟಕಿ ಮುರಿದು ಒಳ ಬಂದಿದ್ದ ಕಳ್ಳರು ಒಟ್ಟು 4 ಲಾಕರ್‌ಗಳನ್ನು ಮುರಿದು ಅಲ್ಲಿದ್ದ ಅಷ್ಟೂ ಹಣ ದೋಚಿದ್ದರು. ಈ ಸಂಸ್ಥೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಸೇರಿದ್ದು, ಮೇಲಾಗಿ ಅಲ್ಲಿ ಇದ್ದ ಹಣವೆಲ್ಲವೂ ವಿವಿಧ ಹಳ್ಳಿಗಳ ಸ್ವ-ಸಹಾಯ ಸಂಘಗಳಿಂದ ಸಂಗ್ರಹಿಸಿದ್ದಾಗಿತ್ತು. ಹೀಗಾಗಿ ಯಾರೋ ಸಂಘದಲ್ಲಿ ಇದ್ದವರೇ ಶಾಮೀಲಾಗಿದ್ದಾರೆ ಅನ್ನೋ ಶಂಕೆಯನ್ನಿಟ್ಟುಕೊಂಡು ತನಿಖೆ ಮಾಡಿದ ಪೊಲೀಸರು ಕೊನೆಗೂ 10 ಜನರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ – ಹಲವರ ಬಂಧನ

    ಈ ಪ್ರಕರಣ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿದ್ದು, ಇದಕ್ಕಾಗಿಯೇ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡ ರಚಿಸಿದ್ದರು. ಫಿಲ್ಡ್ಗಿಳಿದ ತಂಡ ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರ, ನವಲಗುಂದದವರಾದ ಬಸವರಾಜ ಶೇಖಪ್ಪ ಬಾಬಜಿ, ಜಿಲಾನಿ ಬವರಸಾಬ ಜಮಾದಾರ, ಪರಶುರಾಮ ಹನಮಂತಪ್ಪ ನೀಲಪ್ಪಗೌಡರ, ಮಹಾಂತೇಶ ಲಕ್ಷ್ಮಣ ಹಿರಗಣ್ಣವರ, ರಂಗಪ್ಪ ನಾಗಪ್ಪ ಗುಡಾರದ, ಮಂಜುನಾಥ ಯಮನಪ್ಪ ಬೋವಿ, ಕಿರಣ ಶರಣಪ್ಪ ಕುಂಬಾರ, ರಜಾಕಅಹ್ಮದ ಅಲ್ಲಾವುದ್ದೀನ್ ಮುಲ್ಲಾನವರ ಮತ್ತು ವೀರೇಶ ಸಿದ್ದಪ್ಪ ಚವಡಿ ಎಂಬುವವರನ್ನು ಬಂಧಿಸಿದೆ. ಜೊತೆಗೆ 79 ಲಕ್ಷ 89 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಕಳ್ಳತನಕ್ಕೆ ಬಳಸಿದ್ದ 1 ಕಾರು, 2 ಬೈಕ್ ಮತ್ತು 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತರ ಪೈಕಿ ಕುಶಾಲಕುಮಾರ, ಬಸವರಾಜ್ ಮತ್ತು ಮಹಾಂತೇಶ ಇದೇ ಸಂಘದ ಸಿಬ್ಬಂದಿಯೇ ಆಗಿದ್ದಾರೆ. ಈ ಮೂವರು ಸೇರಿ ಕಳ್ಳತನಕ್ಕೆ ಎಲ್ಲಿಂದ ಬರಬೇಕು, ಹೇಗೆ ಬರಬೇಕು, ಎಲ್ಲಿ ಲಾಕರ್ ಇವೆ ಎಂಬುದನ್ನೆಲ್ಲ ಸ್ಕೆಚ್ ಹಾಕಿ, ಪ್ಲ್ಯಾನ್ ಮಾಡಿದ್ದರು. ಇದನ್ನು ಕಾರ್ಯಗತಗೊಳಿಸಲು ಈಗಾಗಲೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನವಲಗುಂದದ ಗ್ಯಾಂಗ್‌ಗೆ ನೀಡಿದ್ದರು. ಹೀಗಾಗಿ ಸಲೀಸಾಗಿ ಬಂದು ಕದ್ದುಕೊಂಡು ಹೋಗಿದ್ದರು. ಸದ್ಯ ಪ್ರಕರಣ ಬೇಧಿಸಿ ಕಳ್ಳರನ್ನು ಜೈಲಿಗೆ ಅಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ-ಬೆಂಗಳೂರು ವಿಮಾನದಲ್ಲಿ ತಾಂತ್ರಿಕ ದೋಷ; ವಿಮಾನ ಹಾರಾಟ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರ್‌ನಲ್ಲಿದ್ದ 1.24 ಕೋಟಿ ಕಳವು

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರ್‌ನಲ್ಲಿದ್ದ 1.24 ಕೋಟಿ ಕಳವು

    ಧಾರವಾಡ: ಇಡೀ ನಾಡು ದಸರಾ ಸಂಭ್ರಮದಲ್ಲಿದೆ. ಅದರಲ್ಲಿಯೂ ಈ ಸಲದ ದಸರಾ ಭಾನುವಾರ ಹಿಡಿದುಕೊಂಡೇ ಬಂದಿದ್ದರಿಂದ ಭರ್ಜರಿ ರಜೆಯ ಆಫರನ್ನೇ ನೀಡಿತ್ತು. ಆದರೆ ಈ ರಜೆಯ ಪ್ರಯೋಜನ ಪಡೆದುಕೊಂಡ ಕಳ್ಳರು ಧಾರವಾಡದಲ್ಲಿ (Dharwad) ಭರ್ಜರಿ ಕರಾಮತ್ ತೋರಿಸಿದ್ದಾರೆ.

    ಹೌದು. ಧಾರವಾಡದ ರಾಯಾಪುರ ಬಡಾವಣೆಯಲ್ಲಿರೋ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ (SKDRDP) ಕಚೇರಿಯ ಲಾಕರ್ ಅನ್ನೇ ಕಳ್ಳರು ಲೂಟಿ ಮಾಡಿದ್ದಾರೆ. 1 ಕೋಟಿ 24 ಲಕ್ಷ ರೂ. ಹಣ ಎಗರಿಸಿದ್ದಾರೆ. ಇಲ್ಲಿರೋ ಒಟ್ಟು ನಾಲ್ಕೂ ಲಾಕರ್ ಗಳನ್ನು ಮುರಿದಿರುವ ಕಳ್ಳರು, ಅಲ್ಲಿದ್ದ ಒಂದು ಪೈಸೆಯನ್ನೂ ಬಿಡದೆ ಕದ್ದುಕೊಂಡು ಹೋಗಿದ್ದಾರೆ. ಸೆಕ್ಯೂರಿಟಿ ಗಾರ್ಡ್‍ಗಳು ಊಟಕ್ಕೆ ಹೋದ ಸಮಯದಲ್ಲಿ ಕಚೇರಿಯ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಕೃತ್ಯ ಎಸಗಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದ ಬಂದು ಕಳ್ಳತನ ಮಾಡಿರೋದು ಹಲವು ಅನುಮಾನ ಮೂಡಿಸಿದೆ.

    ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್‍ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಹೀಗಾಗಿ ಕಚೇರಿಯಲ್ಲಿನ ಲಾಕರ್ ನಲ್ಲೇ ಇಟ್ಟು ಹೋಗಿದ್ದರು. ಇದೆಲ್ಲ ತಿಳಿದುಕೊಂಡವರೇ ಕೃತ್ಯ ಎಸಗಿರಬಹುದು ಅಂತ ಶಂಕೆ ವ್ಯಕ್ತವಾಗಿದೆ. ಸದ್ಯ ಕಚೇರಿಯ ಸಿಬ್ಬಂದಿ ಸೇರಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ರಾಮನಗರ ಇಬ್ಭಾಗ, ಬೆಂಗಳೂರಿಗೆ ಕನಕಪುರ – ಏನಿದು ಡಿಕೆಶಿ ಲೆಕ್ಕಾಚಾರ?

    ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಇಷ್ಟೊಂದು ಹಣ ಕಳ್ಳತವಾಗಿರೋದು, ಅದರಲ್ಲೂ ಖದೀಮರು ಯಾವುದೇ ಸುಳಿವು ಬಿಡದೇ ಇರೋದು ತನಿಖೆಗೆ ಸವಾಲಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರೇ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯೋನ್ಮುಖವಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಹಾರ ಕಿಟ್ ವಿತರಣೆ: ಎಸ್.ಟಿ.ಸೋಮಶೇಖರ್ ಚಾಲನೆ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಹಾರ ಕಿಟ್ ವಿತರಣೆ: ಎಸ್.ಟಿ.ಸೋಮಶೇಖರ್ ಚಾಲನೆ

    – 5.5 ಟನ್ ಆಮ್ಲಜನಕ, 1 ವೆಂಟಿಲೇಟರ್ ಜಿಲ್ಲಾಡಳಿತಕ್ಕೆ ಹಸ್ತಾಂತರ

    ಮೈಸೂರು: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡಕುಟುಂಬದವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮೈಸೂರು ಜಿಲ್ಲಾ ಆಡಳಿತಕ್ಕೆ ಕಳುಹಿಸಿ ಕೊಟ್ಟಿರುವ 5.5 ಟನ್ ಆಮ್ಲಜನಕ, SMT ಆಸ್ಪತ್ರೆಗೆ 1 ವೆಂಟಿಲೇಟರ್ ಸಚಿವರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯತಿ ಸಿ.ಇ.ಒ. ಎ.ಎಂ.ಯೋಗೀಶ್, ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಮಂಜುನಾಥಸ್ವಾಮಿ, ಗ್ರಂಥಾಲಯ ಉಪ ನಿರ್ದೇಶಕ ಹಾಗೂ ಆಕ್ಸಿಜನ್ ನೋಡಲ್ ಅಧಿಕಾರಿ ಬಿ. ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಟೆಂಟ್ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

  • ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಧರ್ಮಸ್ಥಳದಲ್ಲಿ ನಮೋ ಮೇನಿಯಾ- ಭಾಷಣದುದ್ದಕ್ಕೂ ಹೆಗ್ಗಡೆ ಅವರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಮೋದಿ ಉಜಿರೆಯ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 12 ಲಕ್ಷ ಮಹಿಳೆಯರಿಗೆ ರುಪೇ ಕಾರ್ಡ್ ವಿತರಣೆ ಮಾಡಲಾಯಿತು.

    ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿರುವ ವೀರೇಂದ್ರ ಹೆಗ್ಗಡೆ ಅವರಿಗೆ ಶಾಲು ಹೊದಿಸಿ ಮೋದಿ ಸನ್ಮಾನಿಸಿದರು. ಸನ್ಮಾನದ ಬಳಿಕ ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಮಹಿಳೆಯರಿಗೆ ನನ್ನ ನಮಸ್ಕಾರಗಳು. ನನ್ನ ಪ್ರೀತಿಯ ಸಹೋದರಿಯರಿಗೆ ನನ್ನ ಧನ್ಯವಾದಗಳು ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಮಾತು ಆರಂಭಿಸಿದರು.

    ಇದು ನನ್ನ ಸೌಭಾಗ್ಯ ಭಗವಾನ್ ಮಂಜುನಾಥ್ ಸ್ವಾಮಿಯ ದರ್ಶನದ ಜೊತೆಗೆ ನಿಮ್ಮೆಲ್ಲರ ದರ್ಶನ ಮಾಡುವ ಭಾಗ್ಯ ದೊರೆತಿದೆ. ಕಳೆದ ವಾರ ನಾನು ಕೇದರನಾಥ್ ತೆರಳಿದ್ದೆ, ಇಂದು ದಕ್ಷಿಣ ಭಾರತದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುವುದು ಅತೀವ ಆನಂದವನ್ನು ತರಿಸಿದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೆಗ್ಗಡೆ ಅವರನ್ನು ಸನ್ಮಾನಿಸಲು ನಾನು ತುಂಬಾ ಚಿಕ್ಕವನು. ದೇಶದ ಜನರು ನನ್ನನ್ನು ಒಂದು ಸ್ಥಾನದಲ್ಲಿ ಕೂರಿಸಿದ್ದರಿಂದ ಇಂದು ನಾನು ಹೆಗ್ಗಡೆಯವರನ್ನು ಸನ್ಮಾನಿಸಿದ್ದೇನೆ. ಇದು ನನ್ನ ಸೌಭಾಗ್ಯ ಎಂದು ಹೇಳಿದರು.

    ಸಮಾಜದ ರಕ್ಷಣೆ: ಹೆಗ್ಗಡೆ ಅವರನ್ನು ನಾನು ಎಷ್ಟು ಬಾರಿ ನೋಡಿದರೂ ಅವರ ಮುಖದ ಮೇಲಿನ ಮುಗುಳ್ನಗೆ ಎಂದು ಹೋಗಲ್ಲ. ನಾನು ಹೆಗ್ಗಡೆವರಿಂದ ಕಲಿಯುವುದು ತುಂಬಾ ಇದೆ. ಹೆಗ್ಗಡೆ ಅವರು ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಕೌಶಲ್ಯ ತರಬೇತಿ ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾನವ ಸಂಪನ್ಮೂಲದ ಬಳಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ಅವರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ. ದೇಶ ಬದಲಾವಣೆಯತ್ತ ಸಾಗುತ್ತಿದ್ದು, ಇಂದು 12 ಲಕ್ಷ ಮಹಿಳೆಯರು ತಮ್ಮನ್ನು ಮ್ಮ ಹಣಕಾಸಿನ ವ್ಯವಹಾರವನ್ನು ಡಿಜಿಟಲ್ ಕ್ಷೇತ್ರದತ್ತ ಆರಂಭಿಸುತ್ತಿದ್ದಾರೆ. 21 ನೇ ಶತಮಾನ ಕೌಶಲ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ನಮ್ಮ ಹಿರಿಯರು ಪೂರ್ವಜರು ನಮಗೆ ಸಮಾಜ ಬಿಟ್ಟು ಹೋಗಿದ್ದು, ನಾವು ನಮ್ಮ ಮುಂದಿನ ಪೀಳಿಗೆಯವರಿಗೆ ಬಿಟ್ಟು ಕೊಡಬೇಕಾಗಿದೆ. ಪರಿಸರ ಮತ್ತು ಸಮಾಜದ ರಕ್ಷಣೆ ನಮ್ಮ ಮೇಲಿದೆ ಎಂದು ತಿಳಿಸಿದರು.

    ಪರ್ ಡ್ರಾಪ್ ಮೋರ್ ಕ್ರಾಪ್: ನಾವು ಎಂದೂ ಭೂಮಿ ತಾಯಿಯ ಬಗ್ಗೆ ಯೋಚನೆ ಮಾಡುವುದಿಲ್ಲ. ನಮಗೆ ನಮ್ಮ ಲಾಭ ಮಾತ್ರ ಮುಖ್ಯವಾಗಿದೆ. ಹಲವು ಕ್ರಿಮಿನಾಶಕಗಳನ್ನು ಬಳಸುತ್ತಿದ್ದೇವೆ. ಕ್ರಿಮಿನಾಶಕಗಳ ಬಳಕೆಯ ಪ್ರಮಾಣ ಕಡಿಮೆಗೊಳಿಸಬೇಕು. 2022ರೊಳಗೆ ಯೂರಿಯಾ ಉಪಯೋಗವನ್ನು ಶೇ.50ರಷ್ಟು ಕಡಿಮೆ ಬಳಕೆ ಮಾಡುತ್ತೇವೆ ಎಂದು ಎಲ್ಲ ಕೃಷಿ ಬಾಂಧವರು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಮೈಕ್ರೋ ಇರಿಗೇಷನ್ `ಪರ್ ಡ್ರಾಪ್ ಮೋರ್ ಕ್ರಾಪ್’ ಎಂಬ ಸಂಕಲ್ಪವನ್ನು ನಮ್ಮ ರೈತ ಬಾಂಧವರು ಮಾಡಬೇಕಾಗಿದೆ ಎಂದ್ರು.

    ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಇಂದು 12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್ ಗೆ ಪ್ರಯಾಣಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆಗೆ ಪ್ರಯಾಣಿಸಿದ್ದಾರೆ. ಮಧ್ಯಾಹ್ನ 1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

     

  • ಮೋದಿ ಧರ್ಮಸ್ಥಳ ಮಂಜುನಾಥನಿಗೆ ಹೀಗೆ ಸಲ್ಲಿಸ್ತಾರಂತೆ ಪೂಜೆ!

    ಮೋದಿ ಧರ್ಮಸ್ಥಳ ಮಂಜುನಾಥನಿಗೆ ಹೀಗೆ ಸಲ್ಲಿಸ್ತಾರಂತೆ ಪೂಜೆ!

    – ನಾಳೆ ಮೋದಿ ಕರ್ನಾಟಕ ಕಾರ್ಯಕ್ರಮದ ಸಂಪೂರ್ಣ ವಿವರ

    – ನರೇಂದ್ರ ಮೋದಿ ಪೂಜೆ ಸಲ್ಲಿಕೆ ವೇಳೆ ಯಾರಿಗೂ ಪ್ರವೇಶವಿರಲ್ಲ

    ಬೆಂಗಳೂರು/ಮಂಗಳೂರು: ನಾಳೆ ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಸಂಪ್ರದಾಯ ಬದ್ಧವಾಗಿಯೇ ಪೂಜೆಯಲ್ಲೇ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಮೋದಿ ಆಪ್ತವಲಯದಿಂದ ಲಭ್ಯವಾಗಿದೆ.

    ಧರ್ಮಸ್ಥಳದ ಮಂಜುನಾಥ ಸನ್ನಿಧಿಯ ಸಂಪ್ರದಾಯದಂತೆ ಸುಮಾರು ಅರ್ಧ ಗಂಟೆಗಳ ಕಾಲ ಪೂಜಾ ವಿಧಿವಿಧಾನಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿಗಾಗಿ ಪಂಚೆ, ಶಲ್ಯ ರೆಡಿಯಾಗಿದ್ದು, ಇದನ್ನು ಧರಿಸಿಯೇ ಪೂಜೆ ಮಾಡಲಿದ್ದಾರೆ. ಪೂಜೆ ವೇಳೆ ಮೋದಿ ಬಿಟ್ಟು ಬೇರೆ ಸಚಿವರು, ಅಧಿಕಾರಿಗಳಿಗೆ ಎಂಟ್ರಿ ಇರಲ್ಲ. ಧರ್ಮಸ್ಥಳದ ಧರ್ಮಾಧಿಕಾರಿಗಳು, ನರೇಂದ್ರ ಮೋದಿ ಹಾಗೂ ಪುರೋಹಿತರು ಮಾತ್ರ ಪೂಜೆ ವೇಳೆ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಾಳೆ ಏನೇನು ನಡೆಯುತ್ತೆ?: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನದ ಬಳಿಕ ಉಜಿರೆಗೆ ರಸ್ತೆ ಮಾರ್ಗದಲ್ಲಿ ಆಗಮಿಸಲಿದ್ದಾರೆ. ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದಲ್ಲಿ ಹೆಗ್ಗಡೆಯವರ ನೂತನ ಸಂಕಲ್ಪವಾದ ‘ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಅಭಿಯಾನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

    ಇದೇ ವೇಳೆ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಅವರಿಗೆ ರುಪೇ ಕಾರ್ಡ್ ಗಳನ್ನು ಮೋದಿ ವಿತರಿಸಲಿದ್ದಾರೆ. ಸ್ವ-ಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತವಾಗಿ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರಗಳನ್ನು ಪ್ರೇರೇಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದು ಇದಕ್ಕೆ ನಾಳೆ ಅಂಕಿತ ಬೀಳಲಿದೆ.

    ಈ ಕಾರ್ಯಕ್ರಮದಲ್ಲಿ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ನಿಗ್ರಹ ದಳದವರು ಧರ್ಮಸ್ಥಳ, ಉಜಿರೆ ಮತ್ತು ಕನ್ಯಾಡಿಯಲ್ಲಿ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

    ವಾಹನ ನಿಲುಗಡೆ: ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಾಥಮಿಕ ಶಾಲೆ ಬಳಿ ಮತ್ತು ಅಜ್ಜರಕಲ್ಲು ಮೈದಾನದಲ್ಲಿ ಹಾಗೂ ಇತರರು ಜನಾರ್ಧನ ಸ್ವಾಮಿ ದೇವಸ್ಥಾನದ ಬಳಿ ವಾಹನಗಳನ್ನು ನಿಲ್ಲಿಸಬಹುದು. ಧರ್ಮಸ್ಥಳದಿಂದ ಉಜಿರೆಗೆ ಭಾನುವಾರ ಬೆಳಿಗ್ಗೆ 9 ಗಂಟೆ ವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ. 9 ಗಂಟೆ ಬಳಿಕ ಅಪರಾಹ್ನ ಎರಡು ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಭಾನುವಾರ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆ ವರೆಗೆ ಎಲ್ಲಾ ಅಂಗಡಿಗಳನ್ನು ಮುಚ್ಚಲು ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ.

    ಸಾರ್ವಜನಿಕರಿಗೆ ಸೂಚನೆ: ಸಮಾರಂಭದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಬೆಳಿಗ್ಗೆ 10 ಗಂಟೆಗೆ ಮೊದಲು ಬಂದು ಆಸೀನರಾಗಬಹುದು. ಸಾರ್ವಜನಿಕರು ಉಜಿರೆ ಕಡೆಯಿಂದ ಬೆಳಾಲು ರಸ್ತೆ ಮೂಲಕ ಕ್ರೀಡಾಂಗಣ ಪ್ರವೇಶಿಸಬಹುದು. ವಿ.ಐ.ಪಿ. ಪಾಸ್ ಹೊಂದಿರುವವರು ಎಸ್.ಡಿ.ಎಂ. ಕಾಲೇಜು ಬಳಿ ನಿರ್ಮಿಸಿದ ದ್ವಾರದ ಮೂಲಕ ಪ್ರವೇಶಿಸಬಹುದು. ಭದ್ರತೆಗಾಗಿ ಉಜಿರೆ ಮತ್ತು ಧರ್ಮಸ್ಥಳದಲ್ಲಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಎಲ್ಲಾ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ.

    ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿ. ರಮಾನಾಥ ರೈ, ಸಂಸದರಾದ ಬಿ. ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಡಿ. ವೀರೇಂದ್ರ ಹೆಗ್ಗಡೆಯವರು, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.

    ಪ್ರಧಾನಿ ಭೇಟಿ ವೇಳಾಪಟ್ಟಿ: ಬೆಳಿಗ್ಗೆ 10.30ಕ್ಕೆ ಮಂಗಳೂರಿನಿಂದ ವಿಶೇಷ ಸೇನಾ ಹೆಲಿಕಾಪ್ಟರ್ ನಲ್ಲಿ ಹೊರಟು ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. 11.00 ಗಂಟೆಗೆ ಹೆಗ್ಗಡೆಯವರ ನಿವಾಸಕ್ಕೆ ಭೇಟಿ ನೀಡಿ, 11.30ಕ್ಕೆ ದೇವರ ದರ್ಶನ ಪಡೆಯಲಿದ್ದಾರೆ. 11.40ಕ್ಕೆ ರಸ್ತೆ ಮೂಲಕ ಉಜಿರೆಗೆ ಪ್ರಯಾಣ ಬೆಳೆಸಿ, 12.00 ಗಂಟೆಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್ ಗೆ ಪ್ರಯಾಣಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.