Tag: ಧರಣಿ

  • ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಧರಣಿ ಮಾಡ್ತಿದ್ದೇವೆ: ಯು.ಟಿ. ಖಾದರ್

    ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಧರಣಿ ಮಾಡ್ತಿದ್ದೇವೆ: ಯು.ಟಿ. ಖಾದರ್

    ಬೆಂಗಳೂರು: ನಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯುತ್ತಾ ಇಲ್ಲವಾ ಎಂದು ನೋಡಲು ಧರಣಿ ಮಾಡುತ್ತಿಲ್ಲ. ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅದನ್ನು ಖಂಡಿಸಿ ನಮ್ಮ ನೋವನ್ನು ವ್ಯಕ್ತಪಡಿಸಿ ಧರಣಿ ಮಾಡುತ್ತಿದ್ದೇವೆ, ಎಲ್ಲಿಯ ತನಕ ಆಗುತ್ತದೆಯೋ ನೋಡೋಣ. ಈ ವಿಚಾರದಲ್ಲಿ ನಾವು ತಾರ್ಕಿಕ ಅಂತ್ಯ ಕಾಣುತ್ತೇವೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಜಬ್ ವಿಚಾರದಲ್ಲಿ ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಬಿಜೆಪಿ ವಿಫಲವಾಗಿದೆ. ಬಿಜೆಪಿ ವಿರುದ್ಧ ಇವತ್ತು ಪೋಷಕರು ಶಾಪ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹಾಕದೇ ಉತ್ತಮ ಶಿಕ್ಷಣ ಕೊಡಬೇಕು. ಈ ಒತ್ತಾಯ ಕಾಂಗ್ರೆಸ್ ಮೊದಲಿಂದಲೂ ಮಾಡುತ್ತಿದೆ. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಪ್ರಕರಣಗಳು ಕಂಡು ಬಂದಿಲ್ಲ. ಎಲ್ಲರ ಸಹಕಾರದಿಂದ ನಾವು ಉತ್ತಮ ಆಡಳಿತ ನೀಡಿದ್ದೇವೆ. ನಮ್ಮ ಅವಧಿಯಲ್ಲಿ ಇಂತಹ ಒಂದೇ, ಒಂದು ಕಿರುಕುಳ ಇರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಬಿಜೆಪಿ ಸಮಸ್ಯೆಯೊಳಗೆ ಸಮಸ್ಯೆ ಸೃಷ್ಟಿಸುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ. ಈ ಆದೇಶವನ್ನು ತಳಮಟ್ಟದಲ್ಲಿ ಗೊಂದಲ ಹುಟ್ಟಿಸಲಾಗಿದೆ. ಶಿಕ್ಷಕಿಯರನ್ನೇ ಹೊರಗೆ ನಿಲ್ಲಿಸಿ ಪ್ರವೇಶ ನಿರ್ಬಂಧಿಸುವ ಪ್ರಕರಣಗಳು ನಡೆಯುತ್ತಿವೆ. ಈ ಆದೇಶ ಶಾಲೆ, ಕಾಲೇಜುಗಳ ಸಿಬ್ಬಂದಿಗೆ ಅನ್ವಯ ಆಗಲ್ಲ. ಇದರ ಬಗ್ಗೆ ಕಾಂಗ್ರೆಸ್ ವಿಧಾನಸಭೆಯಲ್ಲೂ ಚರ್ಚಿಸಿದೆ. ಹಿಜಬ್ ಧರಿಸಿ ಪಾಠ ಮಾಡಲು ಶಿಕ್ಷಕಿಯರಿಗೆ ಅವಕಾಶ ಇದೆ. ಅವರಿಗೆ ಅಡ್ಡಿ ಮಾಡುವುದು ಬೇಡ. ಎಲ್ಲವನ್ನೂ ಕೋರ್ಟ್ ಈ ಸರ್ಕಾರಕ್ಕೆ ಹೇಳಾಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು

    ಕೋಮುವಾದಿಗಳ ಪ್ರಸ್ತಾಪಿತ ವಿಚಾರ: ಇದರಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಮುಂದೆ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

  • ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

    ಜಮೀನು ತಕರಾರು – ಡಿಸಿ ಕಚೇರಿ ಮುಂದೆ ನೊಂದ ಕುಟುಂಬಸ್ಥರ ಧರಣಿ

    ಯಾದಗಿರಿ: ಸರ್ಕಾರ ಕೊಟ್ಟ ಜಮೀನಿನಲ್ಲಿ ಉಳುಮೆ ಮಾಡಲು ಪಕ್ಕದ ಜಮೀನಿನ ಮಾಲೀಕರು ಬಿಡದ ಕಾರಣ, ನೊಂದ ಕುಟುಂಬವೊಂದು ಜಮೀನು ಕೊಡಿಸಿ ಇಲ್ಲವೇ ವಿಷ ಕೊಡಿ ಎಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಗೆ ಮುಂದಾಗಿದೆ.

    ಜಿಲ್ಲೆಯ ಶಹಾಪುರ್ ತಾಲೂಕಿನ ಹೊಸಕೇರ ಬಾಂಗ್ಲಾ ತಾಂಡಾದಲ್ಲಿ ಕಳೆದ ಇಪ್ಪತ್ತು ವರ್ಷದ ಹಿಂದೆ ಸರ್ಕಾರದ ಜಮೀನನ್ನು ಟೋಪುನಾಯಕ ಎಂಬುವರರಿಗೆ ಕೊಡಲಾಗಿತ್ತು. ಜೊತೆಗೆ ಹಕ್ಕು ಪತ್ರವನ್ನು ಕೂಡ ನೀಡಲಾಗಿತ್ತು. ಆದರೆ ಆ ವೇಳೆಯಲ್ಲಿ ಜಮೀನಿಗೆ ಸರ್ವೆ ಮಾಡದ ಕಾರಣ, ಟೋಪುನಾಯಕ ಕುಟುಂಬಕ್ಕೆ ಜಮೀನಿನಲ್ಲಿ ಉಳುಮೆ ಮಾಡಲು ಪ್ರತಿ ವರ್ಷ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ -ದಂಧೆಕೋರ ಅಂದರ್

    ಟೋಪುನಾಯಕ ಕುಟುಂಬ ಎರಡು ವರ್ಷಗಳಿಂದ ಸರ್ವೆ ಮಾಡಿ ಕೊಡಿ ಎಂದು ಶಹಾಪುರ್ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಟೋಪು ನಾಯಕ ಅವರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೆ ಇದೀಗ ತಮ್ಮ ಜಾಗದ ಹಕ್ಕುಪತ್ರವನ್ನು ಪಕ್ಕದ ಜಮೀನಿನ ಮರೆಪ್ಪ ಪಟೇಲರಿಗೆ ನೀಡಲಾಗಿದೆ ಎಂದು ಸಂತ್ರಸ್ತ ಟೋಪುನಾಯಕ ಅವರು ಆರೋಪಿಸಿ ಧರಣಿಗೆ ಮುಂದಾಗಿದ್ದಾರೆ.

  • ಕೊರೊನಾ ತಗುಲಿ ಪ್ರಾಣ ಬೇಕಾದರೂ ಹೋಗಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡ್ತೀನಿ: ರೇವಣ್ಣ

    ಕೊರೊನಾ ತಗುಲಿ ಪ್ರಾಣ ಬೇಕಾದರೂ ಹೋಗಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡ್ತೀನಿ: ರೇವಣ್ಣ

    – ದುಡ್ಡಿಗಾಗಿ ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡುತ್ತೆ

    ಹಾಸನ: ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯವನ್ನು ಖಂಡಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ನಾಳೆ ಬೆಳಗ್ಗೆ 9 ರಿಂದ 10 ಗಂಟೆಯವರೆಗೂ ಧರಣಿ ನಡೆಸುತ್ತೇನೆ, 144 ಸೆಕ್ಷನ್ ಇದೆ ಹಾಗಾಗಿ ನಾನೋಬ್ಬನೇ ಧರಣಿ ಕೂರುತ್ತೇನೆ. ಅರೆಸ್ಟ್ ಮಾಡೋದಾದರೆ ಮಾಡಲಿ, ಕೊರೊನಾ ಬರೋದಾದರೆ ಬರಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ದುಡ್ಡಿಗಾಗಿ ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡುತ್ತೆ. ಹಿಮ್ಸ್ ಆಸ್ಪತ್ರೆಯ ಡಿಎಚ್‍ಒ ಅನ್ನು ಸರ್ಕಾರ ವರ್ಗಾವಣೆ ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ನಮ್ಮ ಜನರನ್ನು ಉಳಿಸಿಕೊಳ್ಳಲಾಗದಿದ್ದರೆ ನಾವೇಕೆ ಬದುಕಿರಬೇಕು, ನನ್ನ ಪ್ರಾಣ ಬೇಕಾದ್ರೂ ಹೋಗಲಿ, ನನಗೆ ಕೊರೊನಾದ್ರೂ ಬರಲಿ ನಾನು ಬೆಳಗ್ಗೆ ಸಿಎಂ ಮನೆ ಮುಂದೆ ಹೋಗಿ ಕೂರುತ್ತೇನೆ ಎಂದರು.

    ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ, ಒಂದೇ ಒಂದು ರೆಮ್‍ಡಿಸಿವಿರ್ ಇಂಜೆಕ್ಷನ್ ಸಿಗ್ತಿಲ್ಲ, ರಾಜ್ಯದ ಪರಿಸ್ಥಿತಿಯೂ ಹದಗೆಟ್ಟು ಹೋಗಿದೆ. ಉಳ್ಳವರಿಗೆ ಮಾತ್ರ ಚಿಕಿತ್ಸೆ ಸಿಗುವಂತಾಗಿದೆ, ಸರ್ಕಾರದ ವಿಫಲತೆಯನ್ನು ಖಂಡಿಸಿ ನಾನು ಏಕಾಂಗಿಯಾಗಿ ಧರಣಿ ನಡೆಸುತ್ತೇನೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈ ಬಾರಿ ನಮ್ಮಪ್ಪ ಹೇಳಿದರೂ ನಾನು ಕೇಳೋದಿಲ್ಲ, ಪ್ರತಿಭಟನೆ ಮಾಡೇ ಮಾಡುತ್ತೇನೆ. ತರಕಾರಿ ಮಾರುವವನಿಗೆ ದಿಢೀರ್ ತಳ್ಳೋ ಗಾಡಿಯಲ್ಲಿ ಮಾಡಿ ಎಂದಿದ್ದಾರೆ. ದಿಢೀರ್ ಆದೇಶ ಹೊರಡಿಸಿದರೆ ಅವರು ತಳ್ಳೋಗಾಡಿ ಎಲ್ಲಿಂದ ತರುತ್ತಾರೆ. ಜನರನ್ನು ಸಂದಿಗ್ಧ ಪರಿಸ್ಥಿತಿಗೆ ಸರ್ಕಾರ ತಳ್ಳುತ್ತಿದೆ ಎಂದು ಸರ್ಕಾರದ ಕೋವಿಡ್ ಮಾರ್ಗಸೂಚಿಯ ವಿರುದ್ಧ ರೇವಣ್ಣ ಕಿಡಿಕಾರಿದರು.

  • ನೆರೆ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ಮುಂದೆ ಅಹೋರಾತ್ರಿ ಧರಣಿ

    ನೆರೆ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ಮುಂದೆ ಅಹೋರಾತ್ರಿ ಧರಣಿ

    ಹಾವೇರಿ: ನೆರೆ ಹಾಗೂ ಅತಿಯಾದ ಮಳೆಯಿಂದಾಗಿ ಬಿದ್ದಿದ್ದ ಮನೆಗಳಿಗೆ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಹಾವೇರಿ ತಾಲೂಕಿನ ಹೊಸಕಿತ್ತೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಗ್ರಾಮಸ್ಥರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

    ಕೊರಡೂರು ಗ್ರಾಮದ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಅಹೋರಾತ್ರಿ ಧರಣಿಗೆ ಮುಂದಾದವರು. ಕಳೆದ 2019ರಲ್ಲಿನ ಅತಿವೃಷ್ಟಿ ಮತ್ತು 2020ರಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳು ಬಿದ್ದು ಹೋಗಿ ನಷ್ಟ ಅನುಭವಿಸಿದ್ದರು.

    ಗ್ರಾಮದ 25ಕ್ಕೂ ಅಧಿಕ ಕುಟುಂಬಗಳು ಅತಿವೃಷ್ಟಿ ಮತ್ತು ಮಳೆಯಿಂದ ಮನೆಯನ್ನು ಕಳೆದುಕೊಂಡು ನಷ್ಟಕ್ಕೆ ತುತ್ತಾಗಿ ಎರಡು ವರ್ಷ ಕಳೆದರು ಈವರೆಗೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳಿಗೆ ಹಾಗೂ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರೂ ಪರಿಹಾರ ಸಿಕ್ಕಿರಲಿಲ್ಲ. ಹಾಗಾಗಿ ಕುಟುಂಬ ಸಮೇತ ಪಂಚಾಯತ್ ಕಚೇರಿ ಎದುರು ಅಡುಗೆ ತಯಾರಿಸಿ, ಊಟ ಮಾಡಿ ಧರಣಿ ನಡೆಸುವ ಮೂಲಕ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪರಿಹಾರ ಸಿಗುವವರೆಗೂ ನಿರಂತರ ಧರಣಿ ಮಾಡಲು ಫಲಾನುಭವಿಗಳು ನಿರ್ಧರಿಸಿದ್ದಾರೆ.

  • ಪೋಷಕರನ್ನ ನೋಡಲು ಹೋದ ಪತ್ನಿ ಲಾಕ್ – ಅತ್ತೆ ಮನೆ ಮುಂದೆ ಪತಿ ಧರಣಿ

    ಪೋಷಕರನ್ನ ನೋಡಲು ಹೋದ ಪತ್ನಿ ಲಾಕ್ – ಅತ್ತೆ ಮನೆ ಮುಂದೆ ಪತಿ ಧರಣಿ

    – ಪ್ರೇಯಸಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ

    ಕೋಲ್ಕತ್ತಾ: ಪತ್ನಿಯನ್ನ ತನ್ನ ಮನೆಗೆ ವಾಪಸ್ ಕಳಿಸುವಂತೆ 28 ವರ್ಷದ ಯುವಕನೊಬ್ಬ ಅತ್ತೆ-ಮಾವನ ಮನೆಯ ಮುಂದೆ ಧರಣಿ ಕುಳಿತಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.

    ಅಲೋಕ್ ಮಲ್ಲಿಕ್ ಇಂದು ಬೆಳಗ್ಗೆಯಿಂದ ಅತ್ತೆ-ಮಾವನ ಮನೆಯ ಹೊರಗೆ ಪತ್ನಿಗಾಗಿ ಧರಣಿ ಕುಳಿತಿದ್ದಾನೆ. ಅಲೋಕ್ ತಾನು ಪ್ರೀತಿಸಿದ ಹುಡುಗಿ ಸಂಗೀತಾ ಘೋಷ್‍ಗೆ 18 ವರ್ಷ ತುಂಬಿದ ನಂತರ ಇತ್ತೀಚೆಗೆ ವಿವಾಹವಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಸಂಗೀತಾ ತನ್ನ ಕುಟುಂಬದ ವಿರೋಧದ ನಡುವೆಯೂ ಅಲೋಕ್ ಜೊತೆಗೆ ವಿವಾಹವಾಗಿದ್ದಳು. ಅಲೋಕ್ ಫೋಟೋಗ್ರಾಫ್ ಸ್ಟುಡಿಯೋ ಇಟ್ಟುಕೊಂಡಿದ್ದನು. ಇವರ ವಿವಾಹವು ದೇವಾಲಯವೊಂದರಲ್ಲಿ ಹಿಂದೂ ಆಚರಣೆಗಳ ಪ್ರಕಾರ ನಡೆದಿದೆ. ಅದನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ.

    ಇತ್ತೀಚೆಗೆ ಸಂಗೀತಾ ತನ್ನ ಪೋಷಕರನ್ನು ನೋಡಲು ಸೋನಾಖಾಲಿ ಗ್ರಾಮದಲ್ಲಿರುವ ಮನೆಗೆ ಹೋಗಿದ್ದಳು. ಆದರೆ ಆಕೆಯ ಕುಟುಂಬವು ಮತ್ತೆ ಸಂಗೀತಾಳನ್ನು ವಾಪಸ್ ಪತಿಯ ಮನೆಗೆ ಹೋಗಲು ಬಿಡುತ್ತಿಲ್ಲ. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿ ಬೇರೆಡೆಗೆ ಕಳುಹಿಸಿದ್ದಾರೆ. ಹೀಗಾಗಿ ನನ್ನ ಪತ್ನಿಯನ್ನು ಕಳುಹಿಸಬೇಕು ಎಂದು ಅಲೋಕ್ ಹೇಳಿದ್ದಾನೆ.

    ಅಲೋಕ್ ವಿವಾಹದ ಫೋಟೋಗಳು ಮತ್ತು ಮದುವೆ ಪ್ರಮಾಣಪತ್ರ ಹಿಡಿದು ಅತ್ತೆ-ಮಾವನ ಮನೆಯ ಮುಂದೆ ಧರಣಿ ಕುಳಿತಿದ್ದಾನೆ. ನನ್ನ ಪತ್ನಿಯನ್ನು ಪೋಷಕರು ಅಪರಿಚಿತ ಸ್ಥಳಕ್ಕೆ ಕಳುಹಿಸುತ್ತಿದ್ದಂತೆ ಧರಣಿ ಕುಳಿತುಕೊಂಡೆ. ಅವರು ನನ್ನ ಪತ್ನಿಯನ್ನ ಮನೆಗೆ ವಾಪಸ್ ಕಳುಹಿಸುವರೆಗೂ ಧರಣಿಯನ್ನು ಮುಂದುವರಿಸುತ್ತೇನೆ ಎಂದು ಅಲೋಕ್ ಹೇಳಿದ್ದಾನೆ.

    ಸಂಗೀತಾಳನ್ನು ತನ್ನ ಜೊತೆ ಕಳುಹಿಸಲು ಸ್ಥಳೀಯರು ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾನೆ. ಇತ್ತೀಚೆಗೆ ಸಂಗೀತಾ ಕುಟುಂಬವು ಅಲೋಕ್ ವಿರುದ್ಧ ಹರಿಂಗಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾವು ಆಕೆಯ ಪತಿಯನ್ನು ಸಹ ವಿಚಾರಣೆ ಮಾಡಿದ್ದೇವೆ. ಇಂದು ಮುಂಜಾನೆ ಅಲೋಕ್ ಮನೆಯ ಹೊರಗೆ ಧರಣಿ ಕುಳಿತಿದ್ದಾನೆ. ನಂತರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲೇ ಜಮಾಯಿಸಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

  • ಮಳೆಯಲ್ಲೇ ನೆನೆಯುತ್ತಾ ಪೊಲೀಸ್ ಠಾಣೆ ಮುಂದೆ ಮಹಿಳೆ ಧರಣಿ

    ಮಳೆಯಲ್ಲೇ ನೆನೆಯುತ್ತಾ ಪೊಲೀಸ್ ಠಾಣೆ ಮುಂದೆ ಮಹಿಳೆ ಧರಣಿ

    ಚಾಮರಾಜನಗರ: ಮಹಿಳೆಯೊಬ್ಬರು ಮಳೆಯಲ್ಲೇ ನೆನೆಯುತ್ತಾ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕತ್ತಲಾದರೂ ಮಳೆಯಲ್ಲೇ ನೆನಯುತ್ತಾ ಧರಣಿ ನಡೆಸಿದರೂ ಪೊಲೀಸರು ಕ್ಯಾರೇ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಬಂದಿದೆ. ಚಾಮರಾಜನಗರ ತಾಲೂಕಿನ ಚಂದಕವಾಡಿ ಹೆಚ್.ಡಿ ಫಾರೆಸ್ಟ್ ಸರ್ವೆ ನಂಬರ್ 1/168ರಲ್ಲಿ ಸುಶೀಲ- ಶಿವಣ್ಣ ದಂಪತಿಯ ಜಮೀನಿದ್ದು, ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬಾತ ಅತಿಕ್ರಮಣ ಮಾಡಿಕೊಂಡಿದ್ದ ಎನ್ನಲಾಗಿದೆ.

    ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿ ದಾಖಲೆಗಳು ತಮ್ಮಂತೆಯೇ ಇರುವುದು ದೃಢಪಟ್ಟಿದೆ. ಈಗ ವ್ಯವಸಾಯ ಮಾಡಲು ಹೋದರೆ ಆತ ತೊಂದರೆ ಕೊಡುತ್ತಿದ್ದಾನೆ. ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಸುಶೀಲ ಅವರು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಪೊಲೀಸ್ ನಿಯೋಜಿಸಿಕೊಡಲು ಸೇವಾ ಶುಲ್ಕವನ್ನು ಪಾವತಿಸಿದ್ದರು.

    ಅಷ್ಟೆಲ್ಲ ಮಾಡಿದರೂ ತಮಗೆ ಯಾವುದೇ ರಕ್ಷಣೆ ನೀಡದ ಹಿನ್ನೆಲೆಯಲ್ಲಿ ಸುಶೀಲ ಅವರು ಜೂನ್ 10ರಂದು ಇಡೀ ದಿನ ಠಾಣೆಯ ಮುಂದೆ ಮಳೆಯಲ್ಲೇ ನೆನೆಯುತ್ತಾ ಧರಣಿ ನಡೆಸಿದ್ದಾರೆ. ಮಹಿಳೆ ಧರಣಿ ಕಳಿತರೂ ಪೊಲೀಸ್ ಅಧಿಕಾರಿಗಳು ಕ್ಯಾರೇ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

  • ಗುರೂಜಿಯಾಗಲ್ಲ ಕನ್ನಡಿಗನಾಗಿ ಧರಣಿಗೆ ಬಂದಿದ್ದೇನೆ: ವಿನಯ್ ಗುರೂಜಿ

    ಗುರೂಜಿಯಾಗಲ್ಲ ಕನ್ನಡಿಗನಾಗಿ ಧರಣಿಗೆ ಬಂದಿದ್ದೇನೆ: ವಿನಯ್ ಗುರೂಜಿ

    -100ನೇ ದಿನಕ್ಕೆ ಕಾಲಿಟ್ಟ ಸರೋಜಿನಿ ಮಹಿಷಿ ಧರಣಿ

    ಬೆಂಗಳೂರು: ಕನ್ನಡಿಗರಿಗೆ ಕರ್ನಾಟಕದ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಿ ಎಂದು ಕನ್ನಡ ಪರ ಸಂಘಟನೆಗಳು ಮಾಡುತ್ತಿರುವ ಧರಣಿ 100ನೇ ದಿನಕ್ಕೆ ಕಾಲಿಟ್ಟಿದೆ.

    ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ವಿನಯ್ ಗುರೂಜಿ ಮತ್ತು ಮಾಜಿ ಸಚಿವ ಯು.ಟಿ ಖಾದರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೌರ್ಯ ಸರ್ಕಲ್‍ನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿ, 100 ದಿನದ ಹೋರಾಟವನ್ನ ದೀಪ ಬೆಳಗುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.

    ಈ ಬಗ್ಗೆ ಮಾತನಾಡಿದ ವಿನಯ್ ಗುರೂಜಿ, ಕರ್ನಾಟಕದಲ್ಲಿ ಕನ್ನಡಿಗರು ವಿಷ ಕುಡಿಯೋಕೆ ಅವಕಾಶ ಸರ್ಕಾರ ಮಾಡಿಕೊಡಬಾರದು. ಬೇರೆ ರಾಜ್ಯದವರಿಗೆ ಕೆಲಸ ಕೊಡೋದಲ್ಲ ನಮ್ಮ ರಾಜ್ಯದವರಿಗೆ ಕೆಲಸ ಕೊಡಿ. ನಮ್ಮ ಮನೆ ಪೈಂಟ್ ಮೊದಲು ಮಾಡಿ ಆ ಮೇಲೆ ಬೇರೆ ಮನೆ ಪೈಂಟ್ ಮಾಡಿ. ನಾನು ತನು, ಮನ, ಧನ ಎಲ್ಲಾ ಮರೆತು ಇದಕ್ಕೆ ಕೆಲಸ ಮಾಡುತ್ತೇನೆ. ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ ಎಂದರು.

    ಯಾವುದೇ ಗುರೂಜಿಯಾಗಿ ನಾನಿಲ್ಲಿ ಬಂದಿಲ್ಲ. ಸಾಮಾನ್ಯ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಕುಳಿತಿರುವ ಎಲ್ಲರು ಕನ್ನಡಿಗರೇ, ಕನ್ನಡಿಗರ ವೋಟಿನಿಂದ ಸರ್ಕಾರ ಇದೆ. ನಾನೊಬ್ಬ ಗುರೂಜಿಯಾಗಲ್ಲ ಕನ್ನಡಿಗನಾಗಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಇದು ಭರವಸೆ ಅಲ್ಲ ಇದು ನನ್ನ ಕರ್ತವ್ಯ. ಈ ಹೋರಾಟಕ್ಕೋಸ್ಕರ ನಾನು ಇವತ್ತು ಒಂದು ಹೊತ್ತಿನ ಊಟ ಬಿಡುತ್ತಿದ್ದೀನಿ. ಎಲ್ಲರಿಗೂ ಇದು ಮಾದರಿಯಾಗಬೇಕು ಹೋರಾಟ ಮುಂದುವರೆಯಲಿ ಎಂದು ಹೇಳಿದರು.

    ಕಳೆದ ನವಂಬರ್ 1ರಿಂದ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಟ ಅವದಿ ಪ್ರತಿಭಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರಾರಂಭವಾಗಿದ್ದು, ಇಂದಿಗೆ 100ನೇ ದಿನಕ್ಕೆ ಕಾಲಿಟ್ಟಿದೆ.

    100 ದಿನ ಧರಣಿ ಮಾಡಿದರೂ ಸರ್ಕಾರದಿಂದ ಡಾ. ಸರೋಜಿನಿ ಮಹಿಷಿ ವರದಿಯನ್ನ ಅನುಷ್ಠಾನಗೊಳಿಸುವ ಯಾವುದೇ ರೀತಿಯ ಭರವಸೆಗಳು ಸಿಕ್ಕಿಲ್ಲ. ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತಂದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವದ ದಿನದಿಂದ ಹೋರಾಟವನ್ನ ಮಾಡಿಕೊಂಡು ಬಂದಿದೆ.

  • ವೈದ್ಯಾಧಿಕಾರಿಯ ವರ್ಗಾವಣೆ ಖಂಡಿಸಿ ಅಹೋರಾತ್ರಿ ಧರಣಿ, ಸತ್ಯಾಗ್ರಹ

    ವೈದ್ಯಾಧಿಕಾರಿಯ ವರ್ಗಾವಣೆ ಖಂಡಿಸಿ ಅಹೋರಾತ್ರಿ ಧರಣಿ, ಸತ್ಯಾಗ್ರಹ

    ಶಿವಮೊಗ್ಗ: ಕರ್ತವ್ಯನಿರತ ವೈದ್ಯಾಧಿಕಾರಿಯ ವರ್ಗಾವಣೆ ಮಾಡಿದ ಜಿಲ್ಲಾ ವೈದ್ಯಾಧಿಕಾರಿಯ ಕ್ರಮ ಖಂಡಿಸಿ ಹೊಸನಗರ ತಾಲೂಕಿನ ಸೊನಲೆ ಗ್ರಾಮಸ್ಥರು ಇಂದು ಹೊಸನಗರದ ತಾಲೂಕು ಆಸ್ಪತ್ರೆ ಮುಂದೆ ಆಹೋರಾತ್ರಿ ಧರಣಿ, ಸತ್ಯಾಗ್ರಹ ನಡೆಸುತ್ತಿದ್ದಾರೆ.

    ತಾಲೂಕಿನ ಸೊನಲೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಡಾ.ಮಾರುತಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ರಿಪ್ಪನ್‍ಪೇಟೆಗೆ ವರ್ಗಾವಣೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಇವರೊಬ್ಬರೇ ವೈದ್ಯರು ಇರುವ ಕಾರಣ ಇದೀಗ ಇರುವ ಒಬ್ಬ ವೈದ್ಯರನ್ನು ವರ್ಗಾವಣೆ ಮಾಡಿದರೇ ಇಲ್ಲಿನ ಹಲವು ರೋಗಿಗಳಿಗೆ ವೈದ್ಯರಿಲ್ಲದಂತಾಗುತ್ತದೆ.

    ಈಗಾಗಿ ವೈದ್ಯರ ವರ್ಗಾವಣೆ ಖಂಡಿಸಿ ಇಲ್ಲಿನ ಸ್ಥಳೀಯ ನಾಗರೀಕರು, ಸಂಘ-ಸಂಸ್ಥೆಗಳು, ಪಕ್ಷಾತೀತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ರವಾನಿಸಿದ್ದಾರೆ. ಈ ನಿಯೋಜನೆಯನ್ನು ರದ್ದುಗೊಳಿಸುವವರೆಗೆ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಸ್ವಾಮಿರಾವ್, ತಾ.ಪಂ ಸದಸ್ಯ ಆಲವಳ್ಳಿ ವೀರೇಶ್, ವಾಲೆಮನೆ ನಾಗೇಶ್, ಗುರುಶೆಟ್ಟಿ ಬಿಳ್ಳೋಡಿ, ನಿವಣೆ ಮಹೇಶ್ ಗೌಡ, ಸೊನಲೆ ಸುರೇಶ್, ಸೊನಲೆ ರಾಜೇಶ್, ಸೊನಲೆ ವಿಜಯೇಂದ್ರಗೌಡ, ಹರೀಶ್, ವಿದ್ಯಾ, ಸುಮಾ, ರೂಪ, ಚೈತ್ರ, ಸುಮಿತ್ರ, ಅನುಪಮ, ನವ್ಯ, ಮಹಿಳಾ ಹಾಗೂ ಪುರುಷ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

  • ಬಿಡಿಎ ಮುಂದೆ ರೈತರ ಅಹೋರಾತ್ರಿ ಧರಣಿ

    ಬಿಡಿಎ ಮುಂದೆ ರೈತರ ಅಹೋರಾತ್ರಿ ಧರಣಿ

    ಬೆಂಗಳೂರು: ಬಿಡಿಎಯು ಪೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಸ್ವಾಧೀನ ಪಡೆಸಿಕೊಳ್ಳುತ್ತಿರುವ ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ, ನೂರಾರು ರೈತರು ಬಿಡಿಎ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯುತ್ತಿದೆ. 15 ವರ್ಷದ ಹಿಂದಿನ ಯೋಜನೆಗೆ ತ್ವರಿತಗತಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು. 65 ಕಿಲೋ ಮೀಟರ್ ಯೋಜನೆಗಾಗಿ ರೈತರ ಭೂಮಿಯನ್ನು ಬಿಡಿಎ ವಶಪಡಿಸಿಕೊಂಡಿತ್ತು. ಆದರೆ ಸ್ವಾಧೀನ ಮಾಡಿಕೊಂಡಿರುವ ರೈತರ ಭೂಮಿಗೆ ಸರ್ಕಾರ ನಿಗದಿತ ಬೆಲೆ ನೀಡಿಲ್ಲ. ರೈತರ ಭೂಮಿಗೆ ಎಕರೆಗೆ 5 ಕೋಟಿ ಪರಿಹಾರ ನೀಡಬೇಕು ಎಂಬುದು ಭೂಮಿ ಕಳೆದುಕೊಳ್ಳುತ್ತಿರುವ ರೈತರ ಆಗ್ರಹವಾಗಿದೆ.

    ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದ ಸಿಎಂ ರಾಜಕೀಯವ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ಸರ್ಕಾರದ ಅಡ್ವಕೇಟ್ ಜನರಲ್ ಜೊತೆ ಮಾತನಾಡುತ್ತೇನೆ. ಅದಕ್ಕೂ ಮುನ್ನ ನಿಮ್ಮ ರೈತ ಮುಖಂಡರ ಜೊತೆ ಮಾತನಾಡಿ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿದ ಬಳಿಕ ನೇರವಾಗಿ ಸಿಎಂ ಜೊತೆ ಮಾತನಾಡುತ್ತೇನೆ. ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಿಕೊಡಬೇಕು ಎಂಬುದು ನನ್ನ ಅಪೇಕ್ಷೆ ಕೂಡ ಎಂದು ಹೇಳಿದ್ರು.

    ರೈತರ ಜೊತೆ ಮಾತನಾಡುವ ವೇಳೆ, ಎಸ್ ಆರ್ ವಿಶ್ವನಾಥ್ ಅವರನ್ನು ಕೆಲ ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ಯಾವುದೇ ಕಾರಣಕ್ಕೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈ ಬಿಡಲ್ಲ ಎಂದು ಹೇಳಿ ರೈತರು ಬಿಡಿಎ ಮುಂದೆಯೇ ಅಡುಗೆ ಮಾಡುತ್ತಾ ಪ್ರತಿಭಟಿಸಿದರು.

  • ಪೌರತ್ವ ಕಾಯ್ದೆ ಕಿಚ್ಚು- ಇಂಡಿಯಾ ಗೇಟ್ ಬಳಿ ಪ್ರಿಯಾಂಕಾ ಧರಣಿ

    ಪೌರತ್ವ ಕಾಯ್ದೆ ಕಿಚ್ಚು- ಇಂಡಿಯಾ ಗೇಟ್ ಬಳಿ ಪ್ರಿಯಾಂಕಾ ಧರಣಿ

    ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಹೊತ್ತಿಕೊಂಡಿದ್ದು, ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರದ ನಂತರ ದೆಹಲಿಯಲ್ಲೂ ಹೆಚ್ಚಾಗಿದೆ. ಈ ನಡುವೆಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಧರಣಿ ನಡೆಸಲು ಪ್ರಾರಂಭಿಸಿದ್ದಾರೆ.

    ಪ್ರಿಯಾಂಕಾ ಗಾಂಧಿಯವರು ಇಂಡಿಯಾ ಗೇಟ್ ಬಳಿ ಧರಣಿ ಆರಂಭಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿವೆ.

    ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ನಾಯಕರು ಎರಡು ಗಂಟೆಗಳ ಕಾಲ ಇಂಡಿಯಾ ಗೇಟ್ ಬಳಿ ಧರಣಿ ನಡೆಸುವುದಾಗಿ ಹೇಳಿದ್ದರು. ಇದು ದೇಶದ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರಶ್ನೆಯಾಗಿದೆ. ಹೀಗಾಗಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಜೆ ನಾಲ್ಕರಿಂದ 2ಗಂಟೆಗಳ ಕಾಲ ಸಾಂಕೇತಿಕ ಧರಣಿ ನಡೆಸುತ್ತೇವೆ ಎಂದು ಹೇಳಿದ್ದರು.

    ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿವೆ. ಈ ಮಧ್ಯೆಯೇ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಪೌರತ್ವ ತಿದ್ದಪಡಿ ಮಸೂದೆಯು ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ಪಾಸ್ ಆಗಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸಹ ಅಂಕಿತ ಹಾಕಿದ್ದು, ಕಾಯ್ದೆಯಾಗಿದೆ. ಇದರ ಬೆನ್ನಲ್ಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಹೋರಾಟ ತೀವ್ರಗೊಂಡಿದೆ.

    ಅಸ್ಸಾಂ, ಮೆಘಾಲಯ ಸೇರಿದಂತೆ ಈಶಾನ್ಯದ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಬಸ್, ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ಥಾನ ಅಲ್ಪಸಂಖ್ಯಾತರಿಗೆ ಪೌರತ್ವ ವಿಸ್ತರಿಸುವುದಾಗಿದೆ.