Tag: ಧನಂಜಯ್

  • ನಿನ್ನಗಲಿಕೆ ನೋವು ಹೇಳತೀರದು – ಪ್ರೀತಿಯ ಸುಬ್ಬಿ ಸಾವಿಗೆ ಡಾಲಿ ಸಂತಾಪ

    ನಿನ್ನಗಲಿಕೆ ನೋವು ಹೇಳತೀರದು – ಪ್ರೀತಿಯ ಸುಬ್ಬಿ ಸಾವಿಗೆ ಡಾಲಿ ಸಂತಾಪ

    ಬೆಂಗಳೂರು: ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೃದಯಾಘಾತವಾಗಿ ಖ್ಯಾತ ಹಿರಿಯ ನಟ ರಾಕ್‍ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ. ಇವರ ಅಗಲಿಗೆ ನಟ ಧನಂಜಯ್ ಸಂತಾಪ ಸೂಚಿಸಿದ್ದಾರೆ.

    ನಟ ಧನಂಜಯ್ ಇನ್‍ಸ್ಟಾಗ್ರಾಂನಲ್ಲಿ ಅವರ ಜೊತೆಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಪ್ರೀತಿಯ ಸುಬ್ಬಿ, ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು ಸುಧಾಕರ್ ಅಣ್ಣ. ಇಂತಿ ನಿನ್ನ ಪ್ರೀತಿಯ ಡಾಲಿ” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೆ ನಟ ರಾಕ್‍ಲೈನ್ ಸುಧಾಕರ್ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಸಿನಿಮಾ ಕೆಲಸಗಳಲ್ಲಿ ಸುಧಾಕರ್ ಸಕ್ರಿಯರಾಗಿದ್ದರು. ನಟ ರಾಕ್‍ಲೈನ್ ಸುಧಾಕರ್ ಇಂದು ಚಿತ್ರೀಕರಣಕ್ಕೆ ಹಾಜರಾಗಿದ್ದರು. ಆದರೆ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೃದಯಾಘಾತವಾಗಿ ಸುಧಾಕರ್ ಮೃತಪಟ್ಟಿದ್ದಾರೆ.

    https://www.instagram.com/p/CFgml-ol3Ud/?igshid=705tzu5q5kub

    ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ ಸುಧಾಕರ್ ವಿಧಿವಶರಾಗಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮಾಡುವ ಮೂಲಕ ನಿರ್ದೇಶಕ ಸುನಿ ಮಾಹಿತಿ ನೀಡಿದ್ದರು. “2020ಯ ರೌದ್ರಾವತಾರ ಮುಂದುವರೆದಿದೆ. ಸಿನಿಕಲಾವಿದರಾದ ರಾಕ್‍ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ” ಎಂದು ಹಿರಿಯ ನಟ ಸಾವಿಗೆ ಸಂತಪಾ ಸೂಚಿಸಿದ್ದರು.

  • ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ – ದರ್ಶನ್ ವಿಶ್‌ಗೆ ಡಾಲಿ ಪ್ರತಿಕ್ರಿಯೆ

    ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ – ದರ್ಶನ್ ವಿಶ್‌ಗೆ ಡಾಲಿ ಪ್ರತಿಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡಾಲಿ ಎಂದೇ ಖ್ಯಾತಿಯಾಗಿರುವ ನಟ ಧನಂಜಯ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರು, ನಿರ್ದೇಶಕರು ಸೋಶಿಯಲ್ ಮೀಡಿಯಾದ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    ಕೊರೊನಾ ಕಾರಣದಿಂದ ಧನಂಜಯ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದು ಬೇಡ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಅದರಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಧನಂಜಯ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಡಾಲಿ’ ಎಂದು ವಿಶ್ ಮಾಡಿದ್ದು, ಧನಂಜಯ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ದರ್ಶನ್ ಪ್ರೀತಿಯ ಶುಭಾಶಯಕ್ಕೆ ಧನಂಜಯ್ ‘ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ. ಧನ್ಯವಾದಗಳು ದರ್ಶನ್’ ಎಂದು ಹೇಳಿದ್ದಾರೆ.

    ದರ್ಶನ್ ಮತ್ತು ಧನಂಜಯ್ ಇಬ್ಬರು ‘ಯಜಮಾನ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. “ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ಸವಾಲು, ಸಕ್ಸಸ್, ಸಂತೋಷ, ಯಾವಾಗಲು ನಿನ್ನ ಜೊತೆಗಿರಲಿ” ಎಂದು ಸತೀಶ್ ನೀನಾಸಂ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಸತೀಶ್ ನೀನಾಸಂ ಮತ್ತು ಧನಂಜಯ್ ಇಬ್ಬರು ಉತ್ತಮ ಗೆಳೆಯರಾಗಿದ್ದು, ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ನಗುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    “ನಗುತಾ ನಗುತಾ ಬಾಳು ನೀನು ನೂರು ವರುಷ” ಎಂದು ವಿಜಿ ವಿಶ್ ಮಾಡಿದ್ದಾರೆ. ‘ಸಲಗ’ ಸಿನಿಮಾ ತಂಡದ ಕಡೆಯಿಂದ ಧನಂಜಯ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ‘ಸಲಗ’ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

    ಹೊಂಬಾಳೆ ಫಿಲ್ಮ್ ಹುಟ್ಟುಹಬ್ಬದ ವಿಶೇಷವಾಗಿ ಬಹು ನಿರೀಕ್ಷೆಯ ‘ಯುವರತ್ನ’ ಸಿನಿಮಾದ ಲುಕ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಧನಂಜಯ್ ಆಂಟೋನಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ನಿರೂಪ್ ಭಂಡಾರಿ ಸೇರಿದಂತೆ ಅನೇಕರು ಧನಂಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಧನಂಜಯ್ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

  • ವಿಜಯ್ ಸೇತುಪತಿ ಜಾಗಕ್ಕೆ ಧನಂಜಯ್?

    ವಿಜಯ್ ಸೇತುಪತಿ ಜಾಗಕ್ಕೆ ಧನಂಜಯ್?

    ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಮತ್ತೊಮ್ಮೆ ಟಾಲಿವುಡ್‍ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಇನ್ನೊಂದು ಅಚ್ಚರಿಯ ಪಾತ್ರವೆಂದರೆ ತಮಿಳಿನ ವಿಜಯ್ ಸೇತುಪತಿಯವರ ಜಾಗಕ್ಕೆ ಡಾಲಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಹಿಂದೆ ಕನ್ನಡದ ಭೈರವಗೀತ ಚಿತ್ರದಲ್ಲಿ ಧನಂಜಯ್ ಅಭಿನಯಿಸಿದ್ದರು, ಅದು ತೆಲುಗಿಗೂ ಡಬ್ ಆಗಿತ್ತು. ಇದೀಗ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

    ಟಾಲಿವುಡ್‍ನ ಬಹುನಿರೀಕ್ಷಿತ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈ ಮೂಲಕ ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬರುತ್ತಿರುವ ಮಾಹಿತಿ ಪ್ರಕಾರ ಪುಷ್ಪ ಸಿನಿಮಾದಿಂದ ವಿಜಯ್ ಸೇತುಪತಿ ಹೊರ ನಡೆದಿದ್ದಾರಂತೆ. ಇದಕ್ಕೆ ಸೂಕ್ತ ಕಾರಣವನ್ನೂ ಸೇತುಪತಿ ನೀಡಿದ್ದಾರಂತೆ. ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿರುವುದೇ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ಬರಲು ಕಾರಣ ಎನ್ನಲಾಗಿದೆ. ಹೌದು ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ.

    ವಿಜಯ್ ಒಪ್ಪಿಕೊಂಡ ನಂತರ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗುತ್ತಿದೆ ಎಂದು ತಿಳಿದಿದೆ. ಹೀಗಾಗಿ ಸಿನಿಮಾದಿಂದ ಹೊರನಡೆದಿದ್ದಾರಂತೆ. ವಿಜಯ್‍ಗೆ ತಮಿಳಿನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲವಂತೆ. ಇದರಿಂದಾಗಿ ಅವರ ತಮಿಳು ಅಭಿಮಾನಿಗಳಿಗಾಗಿ ಬೇಸರವಾಗುತ್ತಂತೆ. ಹೀಗಾಗಿ ವಿಜಯ್ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ವಿಜಯ್ ಸದ್ಯ ತಮಿಳಿನ ಮಾಸ್ಟರ್ ಸಿನಿಮಾ ರಿಲೀಸ್‍ಗೆ ಎದುರು ನೋಡುತ್ತಿದ್ದು, ಮತ್ತೊಂದೆಡೆ ತಮಿಳು, ತೆಲುಗು ಹಾಗೂ ಹಿಂದಿ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿಯಾಗಿದ್ದಾರಂತೆ. ಹೀಗಾಗಿ ಡೇಟ್ ಹೊಂದಾಣಿಕೆಯಾಗುತ್ತಿಲ್ಲವಂತೆ. ಇದಕ್ಕಾಗಿ ಪುಷ್ಪ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.

    ವಿಜಯ್ ಸೇತುಪತಿ ಚಿತ್ರದಿಂದ ಹೊರನಡೆದಿದ್ದರಿಂದ ಆ ಜಾಗಕ್ಕೆ ಕನ್ನಡದ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಡಾಲಿಗೆ ಈಗಾಗಲೇ ಚಿತ್ರ ತಂಡದಿಂದ ಆಫರ್ ಬಂದಿದ್ದು, ಲಾಕ್‍ಡೌನ್ ಮುಗಿದ ಬಳಿಕ ಸಿನಿಮಾಗೆ ಸಹಿ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವಿಜಯ್ ಸೇತುಪತಿ ಪಾತ್ರವನ್ನೇ ನಿರ್ವಹಿಸುತ್ತಾರಾ, ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಖಚಿತವಾಗಿಲ್ಲ. ಡಾಲಿ ಸಹ ಪುಷ್ಪ ತಂಡ ಸೇರಿದರೆ ಕನ್ನಡದ ಮೂವರು ನಟಿಸಿದಂತಾಗುತ್ತದೆ. ಈಗಾಗಲೇ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ಕರಾವಳಿಯ ಸುನೀಲ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಟ್ಟಿಗೆ ಧನಂಜಯ್ ಸೇರಿದರೆ ಒಟ್ಟು ಮೂವರು ಕನ್ನಡಿಗರು ಚಿತ್ರ ತಂಡ ಸೇರಿದಂತಾಗುತ್ತದೆ.

  • ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

    ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

    ಹಳ ಕ್ರೇಜ್ ಹುಟ್ಟಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ದುನಿಯಾ ಸೂರಿ, ಡಾಲಿ ಕಾಂಬೀನೇಷನ್‍ನ ಪಕ್ಕಾ ರಾ- ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಭೋಜನ ನೀಡಿದೆ.

    ಪಾಪ್ ಕಾರ್ನ್ ಮಂಕಿ ಟೈಗರ್ ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಅಂಡರ್ ವಲ್ಡ್ ಸಿನಿಮಾಗಳನ್ನು ರಾ- ಸ್ಟೈಲ್‍ನಲ್ಲಿ ತೆರೆ ಮೇಲೆ ತರುವಲ್ಲಿ ನಿಸ್ಸೀಮರಾಗಿರುವ ಸುಕ್ಕಾ ಸೂರಿ ಈ ಸಿನಿಮಾದಲ್ಲಿ ದುನಿಯಾ, ಕಡ್ಡಿಪುಡಿ ಸಿನಿಮಾಗಳಿಗೂ ಮೀರಿ ಆಳಕ್ಕೆ ಇಳಿದು ಭೂಗತ ಲೋಕದ ಪ್ರಪಂಚವನ್ನು ಪಕ್ಕಾ ರಾ ಆಗಿ ತೋರಿಸಿದ್ದಾರೆ.

    ಪಾಪ್ ಕಾರ್ನ್ ಮಂಕಿ ಟೈಗರ್ ಒಬ್ಬ ಅಂಡರ್ ವಲ್ಡ್ ರೌಡಿಯ ಕಥೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ, ಪಾಪ್ ಕಾರ್ನ್ ದೇವಿ ಈ ಎರಡು ಪಾತ್ರಗಳ ಜೀವನದಲ್ಲಿ ನಡೆಯುವ ಏಳು ಬೀಳುಗಳೆ ಈ ಚಿತ್ರದ ಕಥೆ. ಇದನ್ನು ಒಂದು ಸಿನಿಮಾ ಅನ್ನೋದಕ್ಕಿಂತ ಒಬ್ಬ ವ್ಯಕ್ತಿಯ ಜರ್ನಿ ಅಂದ್ರೆ ತಪ್ಪಾಗೊಲ್ಲ. ಯಾಕಂದ್ರೆ ಇಡೀ ಸಿನಿಮಾ ಒಂದು ಜರ್ನಿಯಂತೆ ಫೀಲ್ ಕೊಡುತ್ತೆ. ಸುಕ್ಕಾ ಸೂರಿ ಸಿನಿಮಾ ಇಷ್ಟವಾಗೋದೇ ಅವ್ರು ಕಥೆ ಹೇಳುವ ಸ್ಟೈಲ್‍ಗೆ. ಈ ಚಿತ್ರ ಕೂಡ ಹೊರತಾಗಿಲ್ಲ. ಚಿತ್ರಕಥೆ ಹೊಸದೊಂದು ಅನುಭವವನ್ನು, ಥ್ರಿಲ್‍ಅನ್ನು ಪ್ರೇಕ್ಷಕರಿಗೆ ನೀಡುತ್ತೆ. ಚಿತ್ರದಲ್ಲಿ ಸೂರಿ ಸೃಷ್ಟಿಸಿರೋ ಪಾತ್ರಗಳ ಹೆಸರು ಮತ್ತೊಮ್ಮೆ ಸದ್ದು ಮಾಡಿದೆ. ಮಂಕಿ ಸೀನ, ಮೂಕ, ಗಲೀಜು, ಭದ್ರಾವತಿ ಕುಷ್ಕ, ಶುಗರ್ ಹೆಸರುಗಳು ಸಖತ್ ಮಜಾ ನೀಡುತ್ತೆ.

    ಮಂಕಿ ಸೀನನಾಗಿ ಧನಂಜಯ್ ಅವರದ್ದು ರಾಕ್ಷಸ ಅಭಿನಯ. ಸೂರಿ ರಾ- ಸ್ಟೈಲ್‍ಗೆ ಅಷ್ಟೇ ರಾ- ಆದ ಅಭಿನಯ ಮಾಡಿದ್ದಾರೆ ಧನಂಜಯ್. ಈ ಮೂಲಕ ತಮ್ಮ ನಟನೆಯ ತಾಕತ್ತು ಏನು ಅನ್ನೋದನ್ನ ಮತ್ತೆ ತೆರೆ ಮೇಲೆ ಸಾಭೀತು ಮಾಡಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಗಳು ಪ್ರಭಾವಿಯಾಗಿ ನಟಿಸಿದ್ದು ಚಿತ್ರದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ.

    ಅಂಡರ್ ವಲ್ಡ್ ಸಿನಿಮಾ ಅಂದ್ರೆ ಮುಖ್ಯವಾಗಿ ಹಿನ್ನೆಲೆ ಸಂಗೀತ, ಕ್ಯಾಮೆರಾ ಕೈಚಳಕ ಇವೆರಡು ಪ್ರಮುಖ ಪಾತ್ರ ವಹಿಸುತ್ತೆ. ಚಿತ್ರದಲ್ಲಿ ಬ್ಯಾಗ್ರೌಂಡ್‍ನಲ್ಲಿ ಬರುವ ಎರಡು ಸಾಂಗ್‍ಗಳು ಕಮಾಲ್ ಮಾಡಿವೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಸಿನಿಮಾಗೆ ಬೇರೆಯದ್ದೇ ಫೀಲ್ ನೀಡುತ್ತೆ. ಶೇಖರ್ ಕ್ಯಾಮೆರಾ ವರ್ಕ್ ಕೂಡ ಚಿತ್ರವನ್ನು ಶ್ರೀಮಂತಗೊಳಿಸಿದ್ದು ಆಫ್ ಸ್ಕ್ರೀನ್ ಹೀರೋಗಳಾಗಿ ಇಬ್ಬರು ಮಿಂಚಿದ್ದಾರೆ. ಒಟ್ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಮಾಸ್ ಸಿನಿ ಪ್ರಿಯರಿಗೆ ಫುಲ್ ಮೀಲ್ಸ್ ಬಡೂಟ ಅಂದ್ರೆ ತಪ್ಪಾಗೊಲ್ಲ.

    ಚಿತ್ರ: ಪಾಪ್ ಕಾರ್ನ್ ಮಂಕಿ ಟೈಗರ್
    ನಿರ್ದೇಶನ: ಸೂರಿ
    ನಿರ್ಮಾಪಕ: ಸುಧೀರ್. ಕೆ.ಎಂ
    ಸಂಗೀತ: ಚರಣ್ ರಾಜ್
    ಛಾಯಾಗ್ರಹಣ: ಶೇಖರ್
    ತಾರಾಬಳಗ: ಧನಂಜಯ್, ನಿವೇಧಿತಾ, ಅಮೃತ ಅಯ್ಯಂಗಾರ್, ಸಪ್ತಮಿ, ಸುಧಿ, ಇತರರು

    Rating 3.5 / 5

  • ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟಗರು ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮಾಸ್ ಟೀಸರ್ ರಿಲೀಸ್ ಆಗಿದೆ. ಸ್ಯಾಂಡಲ್‍ವುಡ್ ನಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾಗಳಲ್ಲಿ ಈ ಚಿತ್ರವೂ ಕೂಡ ಒಂದು. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ನಾನಾ ಅವತಾರಗಳಲ್ಲಿ ಮಾಸ್ ಲುಕ್ ನಲ್ಲಿ ಕಾಣಸಿಕೊಂಡಿದ್ದಾರೆ. ಟೀಸರ್ ಸಖತ್ ಥ್ರಿಲ್ಲ್ ಆಗಿದ್ದು, ಸುಕ್ಕಾ ಸೂರಿ ಮತ್ತೊಮ್ಮೆ ಈ ಚಿತ್ರದ ಮೂಲಕ ಸಿನಿ ಪ್ರೇಕ್ಷಕರಿಗೆ ಭರ್ಜರಿ ಬೋಜನ ನೀಡೋದು ಪಕ್ಕಾ ಅನ್ನಿಸ್ತಾಯಿದೆ.

    ಪಿಆರ್ ಕೆ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದ ಸಂಗೀತ ನಿರ್ದೇಶಕ ಚರಣ್ ರಾಜ್ ಬ್ಯಾಗ್ರೌಂಡ್ ಸ್ಕೋರ್ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಗರು ಚಿತ್ರದಲ್ಲಿ ಸೂರಿ ಚರಣ್ ರಾಜ್ ಕಾಂಬಿನೇಷನ್ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದಲ್ಲೂ ಒಂದಾಗಿರುವ ಇವ್ರ ಕಾಂಬಿನೇಷನ್ ಮತ್ತೊಂದು ಸೂಪರ್ ಹಿಟ್ ಆಲ್ಬಂ ನೀಡೋದ್ರಲ್ಲಿ ಅನುಮಾನವೇ ಇಲ್ಲ.

    ಸುದೀರ್.ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿದೆ. ಧನಂಜಯ್ ಗೆ ಜೋಡಿಯಾಗಿ ನಿವೇದಿತಾ ಸ್ಕ್ರೀನ್ ಶೇರ್ ಮಾಡಿದ್ದು, ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

    ಪೋಸ್ಟರ್ ಹಾಗೂ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಮೂಲಕ ಡಾಲಿ ಹಾಗೂ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿದೆ. ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇರೋ ಚಿತ್ರತಂಡ ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

  • ‘ಡಾಲಿ’ಗೆ ಒಲಿದ ವರಮಹಾಲಕ್ಷ್ಮಿ ಪೂಜೆ

    ‘ಡಾಲಿ’ಗೆ ಒಲಿದ ವರಮಹಾಲಕ್ಷ್ಮಿ ಪೂಜೆ

    ಬೆಂಗಳೂರು: ಟಗರು ಸಿನಿಮಾ ನಟ ಧನಂಜಯ್‍ಗೆ ಅದೃಷ್ಟದ ಮೆಟ್ಟಿಲು ಎಂದ್ರೆ ತಪ್ಪಾಗಲಾರದು. ಸಿನಿಮಾದಲ್ಲಿಯ ತಮ್ಮ ಅಮೋಘ ನಟನೆಯ ಮೂಲಕ ಪಾತ್ರದ ಡಾಲಿ ಹೆಸರಿನಿಂದಲೇ ಇಂದು ಧನಂಜಯ್ ಗುರುತಿಸಿಕೊಳ್ಳುತ್ತಿದ್ದಾರೆ. ಒಂದು ಸಿನಿಮಾ ಬಿಗ್ ಹಿಟ್ ಆದ್ರೆ ಚಿತ್ರದ ಪಾತ್ರದ ಹೆಸರು, ಹಾಡಿನ ಮೊದಲ ಸಾಲುಗಳು ಚಿತ್ರದ ಟೈಟಲ್ ಗಳಾಗಿ ಬದಲಾಗುತ್ತವೆ. ಆ ಸಾಲಿಗೆ ಟಗರು ಸಿನಿಮಾದಲ್ಲಿ ಧನಂಜಯ್ ಜೀವ ತುಂಬಿದ್ದ ‘ಡಾಲಿ’ ಸೇರ್ಪಡೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದಂತೆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ.

    ಡಾಲಿಗೆ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಯಾಗಲಿದ್ದಾರೆ. ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರತಂಡ ರಚಿತಾ ರಾಮ್ ಸಿನಿಮಾದ ನಾಯಕಿ ಎಂದು ತಿಳಿಸಿದೆ. ಗಣಪ ಸಿನಿಮಾ ಖ್ಯಾತಿಯ ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಡಾಲಿ ಚಿತ್ರ ಮೂಡಿ ಬರುತ್ತಿದೆ. ಮತ್ತೊಮ್ಮೆ ಡಾಲಿ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಚಿತ್ರದ ಪೋಸ್ಟರ್ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಭೂಗತ ಲೋಕದ ಕಥೆಯನ್ನು ಒಳಗೊಂಡಿದೆ ಎಂಬ ಸುಳಿವನ್ನು ಚಿತ್ರದ ಪೋಸ್ಟರ್ ರಿವೀಲ್ ಗೊಳಿಸಿವೆ.

    ಮೊದಲಸಲಾ ಮತ್ತು ಎರಡನೇ ಸಲ ಖ್ಯಾತಿಯ ಯೋಗೇಶ್ ನಾರಾಯಣ್ ನಿರ್ಮಾಣದಲ್ಲಿ ಡಾಲಿ ಮೂಡಿ ಬರುತ್ತಿದೆ. ಪೋಸ್ಟರ್ ಮೂಲಕವೇ ನಿರೀಕ್ಷೆ ಹುಟ್ಟು ಹಾಕಿರುವ ಡಾಲಿಯಲ್ಲಿ ಧನಂಜಯ್ ಮತ್ತೊಮ್ಮೆ ನೆಗಟಿವ್ ಪಾತ್ರದಲ್ಲಿ ಕಾಣಿಸ್ತಾರ ಅಥವಾ ಇಲ್ಲಿ ನಾಯಕನಾಗಿ ಬರುತ್ತಾರ ಎಂಬುದರ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

  • ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

    ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹಾಡುಗಳ ಭರಾಟೆ ಅಡೆತಡೆಯಿಲ್ಲದೆ ಮುಂದುವೆರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಜನಮನ ಗೆಲ್ಲುತ್ತಿದ್ದಂತೆಯೇ ಚಂದ್ರು ಚೆಂದದ ಹಾಡುಗಳ ಲಿರಿಕಲ್ ವೀಡಿಯೋಗಳನ್ನು ಲಾಂಚ್ ಮಾಡುತ್ತಾ ಸಾಗುತ್ತಿದ್ದಾರೆ. ಇದೀಗ ಐ ಲವ್ ಯೂ ಚಿತ್ರದ ಮತ್ತೊಂದು ಮನಮೋಹಕ ಡ್ಯುಯೆಟ್ ಸಾಂಗ್ ಬಿಡುಗಡೆಯಾಗಿದೆ.

    ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ… ಎಂಬ ಈ ರೊಮ್ಯಾಂಟಿಕ್ ಸಾಂಗ್ ಲಹರಿ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಆರ್ಯ ದಕ್ಷಿಣ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡನ್ನು ಸುಚಿತ್ ಸುರೇಶ್ ಹಾಡಿದ್ದಾರೆ. ಇದಕ್ಕೆ ಧನಂಜಯ್ ಸಾಹಿತ್ಯ ನೀಡಿದ್ದಾರೆ. ಯುವ ಸಮೂಹಕ್ಕೆ ಒಂದೇ ಸಲಕ್ಕೆ ಹಿಡಿಸುವಂತಿರೋ ಈ ಹಾಡೂ ಕೂಡಾ ಹಿಟ್ ಆಗೋ ಸೂಚನೆ ಬಿಡುಗಡೆಯಾಗಿ ಕ್ಷಣದೊಪ್ಪತ್ತಿನಲ್ಲಿಯೇ ಸಿಕ್ಕಿದೆ. ಯಾಕೆಂದರೆ, ಈ ಹಾಡೀಗ ಲಕ್ಷ ವೀಕ್ಷಣೆಯತ್ತ ದಾಪುಗಾಲಿಡುತ್ತಿದೆ.

    ಟ್ರೈಲರ್ ಮೂಲಕ ರಚಿತಾ ರಾಮ್ ಮತ್ತು ಉಪೇಂದ್ರ ಅವರ ಒಂದು ಮಜಲಿನ ಕೆಮಿಸ್ಟ್ರಿ ಅನಾವರಣಗೊಂಡಿತ್ತು. ಇದೀಗ ಈ ಡ್ಯುಯೆಟ್ ಸಾಂಗಿನ ಮೂಲಕ ಅದರ ಮತ್ತೊಂದು ರೊಮ್ಯಾಂಟಿಕ್ ಆಯಾಮವೂ ಜಾಹೀರಾಗಿದೆ. ಈ ಹಾಡಿನಲ್ಲಿ ಮುದ್ದಾಗಿ ನಟಿಸಿರೋ ರಚಿತಾ ರಾಮ್ ಮತ್ತು ಉಪೇಂದ್ರರನ್ನು ಕಂಡು ಅಭಿಮಾನಿಗಳೆಲ್ಲ ಹುಚ್ಚೆದ್ದಿದ್ದಾರೆ.

    ಆರ್ ಚಂದ್ರು ಈ ಹಿಂದಿನ ಚಿತ್ರಗಳಲ್ಲಿಯೂ ಹಾಡುಗಳಿಗೆ ಪ್ರಾಶಸ್ತ್ಯ ಕೊಟ್ಟಿದ್ದರು. ಆದ್ದರಿಂದಲೇ ಅವರು ನಿರ್ದೇಶನ ಮಾಡಿದ ಅಷ್ಟೂ ಚಿತ್ರದ ಹಾಡುಗಳೂ ಎವರ್ ಗ್ರೀನ್ ಅನ್ನಿಸಿಕೊಂಡಿದ್ದವು. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಐ ಲವ್ ಯೂ ಚಿತ್ರವೂ ಕೂಡಾ ಆ ಸಾಲಿಗೆ ಸೇರ್ಪಡೆಗೊಂಡಿದೆ.

  • ರೇಂಜ್ ರೋವರ್ ಕೊಟ್ಟಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧನಂಜಯ್

    ರೇಂಜ್ ರೋವರ್ ಕೊಟ್ಟಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧನಂಜಯ್

    ಬೆಂಗಳೂರು: ಟಗರು ಚಿತ್ರದಲ್ಲಿನ ಡಾಲಿ ಪಾತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತರಾಗಿರುವ ನಟ ಧನಂಜಯ್ ರೇಂಜ್ ರೋವರ್ ಖರೀದಿಸಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    ಇತ್ತೀಚೆಗೆ ಧನಂಜಯ್ ಅವರು ಕೆಂಪು ಬಣ್ಣದ ಹೊಸ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಆ ಹೊಸ ಕಾರಿಗೆ ಪೂಜೆ ಮಾಡಿಸುತ್ತಿರುವ ಫೋಟೋವನ್ನು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ರೇಂಜ್ ರೋವರ್ ಕಾರ್ ಜೊತೆ ಧನಂಜಯ್ ಟಿವಿಎಸ್ ಎಕ್ಸ್ ಎಲ್ ಸೂಪರ್ ದ್ವಿಚಕ್ರ ವಾಹನವನ್ನು ಪೂಜೆ ಮಾಡಿಸಿದ್ದಾರೆ. ಈ ಫೋಟೋವನ್ನು ಧನಂಜಯ್ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, “ಒಂದು ಅಪ್ಪ ಕೊಡಿಸಿದ್ದು, ಟಿವಿಎಸ್ ಎಕ್ಸ್ ಎಲ್, ಇನ್ನೊಂದು ನೀವು ಕೊಟ್ಟಿದ್ದು ರೇಂಜ್ ರೋವರ್. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ” ಎಂದು ಪೋಸ್ಟ್ ಮಾಡಿದ್ದಾರೆ.

    ಧನಂಜಯ್ ಅವರು ತಮ್ಮ ಹೊಸ ಕಾರನ್ನು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಈ ಕಾರಿನ ನಂಬರ್ ಕೆಎ 05 ಟಿಎಸ್ 8241 ಆಗಿದ್ದು, ಧನಂಜಯ್ ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರು.

    ಧನಂಜಯ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ಯಜಮಾನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರುಪ್ರಸಾದ್ ವಿರುದ್ಧ ಸಿಡಿದು ಸಂಗೀತಾ ಪರ ಡಾಲಿ ಧನಂಜಯ್ ಬ್ಯಾಟಿಂಗ್

    ಗುರುಪ್ರಸಾದ್ ವಿರುದ್ಧ ಸಿಡಿದು ಸಂಗೀತಾ ಪರ ಡಾಲಿ ಧನಂಜಯ್ ಬ್ಯಾಟಿಂಗ್

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ವಿರುದ್ಧ ನಟ ಧನಂಜಯ್ ಮತ್ತೆ ಸಿಡಿದಿದ್ದು, 2ನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಪರ ಬ್ಯಾಟ್ ಬೀಸಿದ್ದಾರೆ.

    ನಟಿ ಸಂಗೀತಾ ಭಟ್ ವಿರುದ್ಧ ಹೇಳಿಕೆ ನೀಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಗುರುಪ್ರಸಾದ್‍ರ ಎಲ್ಲಾ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ. ಇವರ ಹೇಳಿಕೆಯಿಂದಾಗಿ ಸಂಗೀತಾ ಭಟ್ ಸೇರಿದಂತೆ ಎರಡನೇ ಸಲ ಚಿತ್ರದಲ್ಲಿ ಕೆಲಸಮಾಡಿದ್ದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದರು.

    ನಾನು ಅವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಆದರೂ ಸಹ 2ನೇ ಸಲ ಚಿತ್ರದಲ್ಲಿ ನಟಿಸಿದ್ದರಿಂದ ಈ ಬಗ್ಗೆ ಮಾತನಾಡಲು ಬಯಸುತ್ತೇನೆ. ಸಿನಿಮಾ ತಂಡದಲ್ಲಿ ಗುರುಪ್ರಸಾದ್ ಹೊರತು ಪಡಿಸಿ ಯಾರೂ ಸಹ ಸಣ್ಣ ತಪ್ಪು ಮಾಡಿಲ್ಲ. ಅಲ್ಲದೇ ನಿರ್ಧಿಷ್ಟ ವಿಷಯಕ್ಕೆ ನಿರ್ಮಾಪಕ ಯೋಗೇಶ್ ಗುರುಪ್ರಸಾದ್‍ಗೆ ಬೈದಿದ್ದರು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

    ನಿಮಗೆ ನೈತಿಕತೆ ಇದ್ದಿದ್ದರೆ, ನೀವು ಈ ರೀತಿ ಮಾತನಾಡುತ್ತಿರಲಿಲ್ಲ. ಮನುಷ್ಯನಿಗೆ ಅಷ್ಟು ಸೇಡು ಇರಬಾರದು, ನೀವು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರನ್ನು ತುಳಿಯಲು ಯತ್ನಿಸುತ್ತಿದ್ದೀರಿ. ಆದರೆ ನಿಮ್ಮನ್ನು ಸಹ ತುಳಿಯುವವರೂ ಇರುತ್ತಾರೆ. ಇವಾಗಲಾದರೂ ನಾಲ್ಕು ಜನ ನಿಮ್ಮ ಪರವಾಗಿ ಮಾತನಾಡುವವರನ್ನು ಉಳಿಸಿಕೊಳ್ಳಿ. ಈ ರೀತಿಯ ವರ್ತನೆಯನ್ನು ಬಿಟ್ಟು ನೆಮ್ಮದಿಯಾಗಿ ಉಸಿರಾಡುವುದನ್ನು ಕಲಿತುಕೊಳ್ಳಲಿ ಎಂದು ಧನಂಜಯ್ ಕಿಡಿಕಾರಿದರು. ಇದನ್ನೂ ಓದಿ: ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

    ಒಂದು ವರ್ಷದ ಹಿಂದೆ ಎರಡನೇ ಸಲ ಸಿನಿಮಾದ ವಿಚಾರಕ್ಕೆ ನನ್ನ ವಿರುದ್ಧ ಲೈವ್ ನಲ್ಲಿ ಹರಿಹಾಯ್ದಿದ್ದರು. ನನ್ನನ್ನು ಐರನ್ ಲೆಗ್, ಗೊಡ್ಡಹಸು ಎಂದು ನೇರವಾಗಿ ಆರೋಪಿಸುವ ಮೂಲಕ ಕೆಟ್ಟದಾಗಿ ಮಾತನಾಡಿದ್ದರು. ಅದು ಸಹ ಕಿರುಕುಳವಲ್ಲವೇ, ನಾನು ಸಹ ಅವರಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ. ಎಲ್ಲರೂ ಅವರನ್ನು ಟಿವಿ ಪರದೆಯ ಮೇಲೆ ನೋಡಿರುತ್ತಾರೆ. ಆದರೆ ಅವರನ್ನು ನಾವು ತುಂಬಾ ಹತ್ತಿರದಿಂದ ನೋಡಿದ್ದೇವೆ. ಅವರು ಆಡುವ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗುರುಪ್ರಸಾದ್-ಧನಂಜಯ್ ನಡುವಿನ ಗುದ್ದಾಟಕ್ಕೆ ಇದೇ ಕಾರಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆ, ಮಕ್ಕಳೂ ಇಲ್ಲದೆ ತಾತ ಆದ್ರು ಧನಂಜಯ್

    ಮದ್ವೆ, ಮಕ್ಕಳೂ ಇಲ್ಲದೆ ತಾತ ಆದ್ರು ಧನಂಜಯ್

    ಬೆಂಗಳೂರು: ಡಾಲಿ ಎಂದೇ ಖ್ಯಾತಿಗೊಂಡಿರುವ ಧನಂಜಯ್ ಸದ್ಯ ನಿಜಜೀವನದಲ್ಲಿ ತಾತ ಆಗಿರುವ ಖುಷಿಯಲ್ಲಿದ್ದಾರೆ.

    ಧನಂಜಯ್ ತಮ್ಮ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ತಾವು ತಾತ ಆಗಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಧನಂಜಯ್ ತಮ್ಮ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಒಂದು ಮಗುವಿನ ಜೊತೆಯಿರುವ ಫೋಟೋವನ್ನು ಹಾಕಿದ್ದಾರೆ.

    ಧನಂಜಯ್ ಸ್ಟೇಟಸ್‍ನಲ್ಲಿ ಮಗುವಿನ ಫೋಟೋ ಹಾಕಿ ಅದಕ್ಕೆ, “ಅಣ್ಣನ ಮಗಳ ಮಗ, ನನ್ನ ಮೊಮ್ಮಗ. ಆಲ್ ರೆಡಿ ತಾತ ಆಗೋದೆ ನೋಡಿ” ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ಇತ್ತೀಚೆಗೆ ಧನಂಜಯ್ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ರಾತ್ರಿಯೇ ನೂರಾರು ಅಭಿಮಾನಿಗಳು ಸೇರಿ ಡಾಲಿ ಹುಟ್ಟುಹಬ್ಬವನ್ನು ಆಚರಿಸೋ ಪ್ಲಾನ್ ಕೂಡ ಮಾಡಿದ್ದರು. ಆದರೆ ಧನಂಜಯ್ ಮಾತ್ರ ಹುಟ್ಟುಹಬ್ಬದ ಅಡಂಭರಕ್ಕೆ ಬ್ರೇಕ್ ಹಾಕಿ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.

    ಜಯನಗರ ಬಳಿ ಇರುವ ಶಾಲಿನಿ ಮೈದಾನದಲ್ಲಿ ಧನಂಜಯ್ ಅವರ ನೂರಾರು ಅಭಿಮಾನಿಗಳು ಧಾವಿಸಿ ಶುಭ ಕೋರಿದಲ್ಲದೆ, ಕೈಲಾದ ದೇಣಿಗೆಯನ್ನು ನೀಡಿದ್ದರು. ಸೆಲ್ಫೀಗೊಂದಕ್ಕೆ ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ್ದ ನಟ ಧನಂಜಯ್ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ನಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv