Tag: ದ್ವಿತೀಯ ಪಿಯುಸಿ

  • ಜುಲೈ 20ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ?

    ಜುಲೈ 20ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ?

    ಬೆಂಗಳೂರು: ಇದೇ ತಿಂಗಳ 20ರ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.

    ರಾಜ್ಯಾದ್ಯಂತ ಲಾಕ್‍ಡೌನ್ ಮಾಡುವ ಮೊದಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಳೆದ ಮಾರ್ಚ್‍ನಲ್ಲಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆಯಾದ ನಂತರ ಜೂನ್ 18 ರಂದು ಇಂಗ್ಲೀಷ್ ಪರೀಕ್ಷೆ ಮಾಡಲಾಗಿತ್ತು.

    ಇದೀಗ ವಿದ್ಯಾರ್ಥಿಗಳು, ಪೋಷಕರು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಹೀಗಾಗಿ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, “ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20 ರ ಸುಮಾರಿಗೆ ಬರಲಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ” ಎಂದು ಟ್ವಿಟ್ಟರಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ಬಾರಿ ಒಟ್ಟು 6 ಲಕ್ಷದ 80 ಸಾವಿರದ 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 3 ಲಕ್ಷದ 38 ಸಾವಿರದ 431 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 41 ಸಾವಿರದ 618 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ರಾಜ್ಯಾದ್ಯಂತ 1016 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.

    ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಇಂಗ್ಲೀಷ್ ಪರೀಕ್ಷೆಗೆ ಕೋವಿಡ್-19 ಭಯದಿಂದ 27,022 ವಿದ್ಯಾರ್ಥಿಗಳು ಗೈರಾಗಿದ್ದರು. ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ 5,68,975 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಹೊರ ರಾಜ್ಯದ 1,889 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 18,529 ವಿದ್ಯಾರ್ಥಿಗಳು ಅಂತರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪಿಯುಸಿ ಬೋರ್ಡ್ ಅಧಿಕೃತ ಮಾಹಿತಿ ನೀಡಿತ್ತು.

  • ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ

    ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ

    – ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬೋರ್ಡ್ ಸಿದ್ಧ

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದು ಸತ್ಯಕ್ಕೆ ದೂರವಾಗಿದೆ. ಈಗಾಗಲೇ ವಿದ್ಯಾರ್ಥಿನಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

    ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಮಾಹಿರಿ ನೀಡಿದರು.

    ಇಡೀ ರಾಜ್ಯದಲ್ಲಿ ಪರೀಕ್ಷೆ ಬರೆದ 6 ಲಕ್ಷ ವಿದ್ಯಾರ್ಥಿಗಳ ಹಿತವನ್ನು ಕಾಯ್ದ ಶಿಕ್ಷಣ ಇಲಾಖೆಗೆ ಈ ವಿದ್ಯಾರ್ಥಿನಿಯೋರ್ವಳನ್ನು ಪರೀಕ್ಷಿಸದೇ ಬೇರೊಬ್ಬರಿಗೆ ತೊಂದರೆಯನ್ನುಂಟು ಮಾಡುವಂತಹ ಯಾವುದೇ ಉದ್ದೇಶವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಮ್ಮ ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದು, ಅವರ ಹಿತವೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ಜೂನ್ 18ರಂದು ಇಂಗ್ಲಿಷ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ, ಗೃಹ ಇಲಾಖೆಗಳು ಸೇರಿದಂತೆ ರಾಜ್ಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ ಎಂದು ಹೇಳಿದರು.

    ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾದ್ದರಿಂದ ಮಕ್ಕಳ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಮಕ್ಕಳನ್ನು ಮನೆಯಿಂದ ಪರೀಕ್ಷಾ ಕೇಂದ್ರ ಹಾಗೆಯೇ ಪರೀಕ್ಷಾ ಕೇಂದ್ರದಿಂದ ಮನೆಯವರೆಗೂ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕರೆತರಲಾಗಿತ್ತು ಎಂದು ಸಚಿವರು ವಿವರಿಸಿದರು.

    ರಾಜ್ಯದ 1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿವೆ. ಜಿಲ್ಲಾ ಕೇಂದ್ರದ 430, ತಾಲೂಕು ಕೇಂದ್ರಗಳಲ್ಲಿನ 328 ಮತ್ತು ಹೋಬಳಿ ಕೇಂದ್ರಗಳ 258 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಗಳಲ್ಲಿ 23,064 ಕೊಠಡಿಗಳನ್ನು ಮುಂಚೆ ಪರೀಕ್ಷೆಯನ್ನು ನಿರ್ವಹಿಸಲು ಗುರುತಿಸಿಕೊಳ್ಳಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸೇರ್ಪಡೆ ಮಾಡಿ 36,592 ಕೊಠಡಿಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ನಿರ್ವಹಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಉಷ್ಣಾಂಶ ಪರೀಕ್ಷೆಯನ್ನು ನಡೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಇಡೀ ರಾಜ್ಯದಲ್ಲಿ ಪರೀಕ್ಷಾ ಸಂದರ್ಭದಂದು ಜ್ವರ, ನೆಗಡಿಯಂತಹ ಅನಾರೋಗ್ಯಕ್ಕೆ ಒಳಗಾದ 20 ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು. ಅದೇ ರೀತಿ ರಾಜ್ಯಾದ್ಯಂತ ಒಟ್ಟು 223 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ವಲಯಗಳಿಂದ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನಗಳನ್ನು ಪರೀಕ್ಷಾ ಪೂರ್ವದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ನೀಡಲಾಗಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಅದೇ ರೀತಿ ಇಂಗ್ಲೀಷ್ ಭಾಷಾ ಪರೀಕ್ಷೆಯ ದಿನದಂದು ಕಂಡುಬಂದ ನ್ಯೂನತೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಂದು ಜೂನ್ 25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನೂ ಅನುಸರಿಸಲು ಈಗಾಗಲೇ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕರು, ಜೊತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಲಾಗುತ್ತದೆ. ಈ ಮೂಲಕ ನಮ್ಮ ಇಲಾಖೆಯ ದಾಖಲೆ/ದತ್ತಾಂಶಗಳೊಂದಿಗೆ ತಾಳೆ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆಗೆ ಹಾಜರಾಗಲು ವಿನಾಯ್ತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತೇನೆ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರಕಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಘನ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿ ತಲಾ 2 ಮಾಸ್ಕ್ ಗಳನ್ನು ಪಡೆಯಲಿದ್ದಾರೆ. ಪ್ರತಿ ತಾಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಜಾರಿಯಲ್ಲಿಡಲಾಗುತ್ತದೆ ಎಂದು ವಿವರಿಸಿದ ಸಚಿವರು, ಈಗಾಗಲೇ ಹೇಳಿದಂತೆ ರಾಜ್ಯದ ವಿವಿಧ ಇಲಾಖೆಗಳು ಸಂಪೂರ್ಣ ಸಮನ್ವಯದೊಂದಿಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಮಾಜಕ್ಕೆ ಒಂದು ಭರವಸೆ ನೀಡುವ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ವಹಿಲಿವೆ. ಈ ಬಗ್ಗೆ ಯಾವ ಅಪನಂಬಿಕೆಯೂ ಬೇಡ ಎಂದು ತಿಳಿಸಿದರು.

    ಪರೀಕ್ಷೆಗೆ ಬೋರ್ಡ್ ಸಿದ್ಧತೆ:
    > ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತೆ.
    > ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ನೀಡಲಾಗುತ್ತೆ.
    > ಪರೀಕ್ಷೆ ಮುಗಿದ ಮೇಲೆ ಕೊಠಡಿ ಸ್ಯಾನಿಟೈಸ್ ಮಾಡಲಾಗುತ್ತೆ.
    > ಪ್ರತಿ ಕೊಠಡಿಗೆ 18 -20 ವಿದ್ಯಾರ್ಥಿಗಳನ್ನ ಮಾತ್ರ ಕೂರಿಸುತ್ತೇವೆ.
    > ಪ್ರತಿ ವಿದ್ಯಾರ್ಥಿ ಮತ್ತು ಪ್ರತಿ ಡೆಸ್ಕ್ ಗೆ 3 ರಿಂದ ಮೂರೂವರೆ ಅಡಿ ಅಂತರ ಇರುವಂತೆ ವ್ಯವಸ್ಥೆ ಮಾಡ್ತೀವಿ.
    > ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜನೆ.
    > ಆರೋಗ್ಯದಲ್ಲಿ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಪತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
    > ಕಂಟೈನ್ಮೆಂಟ್ ಝೋನ್ ನಲ್ಲಿ ಪರೀಕ್ಷೆ ಇಲ್ಲ.
    > ಪರೀಕ್ಷೆಗೆ ಮೂರು ದಿನ ಮುಂಚೆ ಕಂಟೈನ್ಮೆಂಟ್ ಝೋನ್ ಕಂಡು ಬಂದ್ರೆ ಅ ಕೇಂದ್ರ ಬದಲಾವಣೆ.
    > ಈ ಪರೀಕ್ಷೆ ಬರೆಯಲು ಆಗದ ವಿದ್ಯಾರ್ಥಿಗಳು ಆತಂಕ ಪಡೋದು ಬೇಡ. ಅವ್ರಿಗೆ ಪೂರಕ ಪರೀಕ್ಷೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳಾಗಿ ಅವಕಾಶ.

  • ‘ಮೌಲ್ಯಮಾಪನ ಮಾಡಲ್ಲ’ – ಪಿಯು ವಿಜ್ಞಾನ ಉಪನ್ಯಾಸಕರು

    ‘ಮೌಲ್ಯಮಾಪನ ಮಾಡಲ್ಲ’ – ಪಿಯು ವಿಜ್ಞಾನ ಉಪನ್ಯಾಸಕರು

    ಬೆಂಗಳೂರು: ಪಿಯುಸಿ ಮೌಲ್ಯಮಾಪನಕ್ಕೂ ಕೊರೊನಾ ಭೀತಿ ತಟ್ಟಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದಿರಲು ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಆಯಾ ಜಿಲ್ಲೆಗಳಲ್ಲಿ ವಿಕೇಂದ್ರಿಕರಣಗೊಳಿಸುವಂತೆ ಉಪನ್ಯಾಸಕರ ಸಂಘ ಮನವಿ ಮಾಡಿತ್ತು. ಕೊರೊನಾ ಸಮುದಾಯಕ್ಕೆ ಹರಡುತ್ತಿದೆ ಎಂದು ಈ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಉಪನ್ಯಾಸಕರ ಬೇಡಿಕೆಗೆ ಈಡೇರಿಸದ ಕಾರಣ ನಾಳೆಯಿಂದ ಪ್ರಾರಂಭವಾಗಬೇಕಿದ್ದ ವಿಜ್ಞಾನ ವಿಷಯದ ಮೌಲ್ಯಮಾಪನ ಮಾಡದೇ ಇರಲು ಉಪನ್ಯಾಸಕರ ಸಂಘದಿಂದ ನಿರ್ಧಾರ ಮಾಡಿದೆ.

    ಬೆಂಗಳೂರಿಗೆ ಬಂದು ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕೊರೊನಾ ಸಮಯದಲ್ಲಿ ಸರ್ಕಾರದ ಈ ನಡೆಗೆ ಉಪನ್ಯಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಅವಕಾಶ ಕೊಡಿ. ಇಲ್ಲವೇ ಕೊರೊನಾ ಕಡಿಮೆ ಆಗುವವರೆಗೂ ಮೌಲ್ಯಮಾಪನ ಸ್ಥಗಿತ ಮಾಡಿ ಎಂದು ಸರ್ಕಾರಕ್ಕೆ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಆಗ್ರಹಿಸಿದ್ದಾರೆ.

  • 1ರಿಂದ 9ನೇ ತರಗತಿ, ಪ್ರಥಮ ಪಿಯುಸಿಗೂ ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್

    1ರಿಂದ 9ನೇ ತರಗತಿ, ಪ್ರಥಮ ಪಿಯುಸಿಗೂ ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್

    ಗಾಂಧಿನಗರ: ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಈ ವರ್ಷ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲಾ ಶಾಲೆಗಳನ್ನು ಮುಚ್ಚಲು ಮತ್ತು 1ರಿಂದ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

    ಗುಜರಾತ್‍ನಲ್ಲಿ ಮಾರ್ಚ್ ತಿಂಗಳ ಆರಂಭದಲ್ಲೇ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗಳನ್ನು ಶಿಕ್ಷಣ ಮಂಡಳಿಯು ನಡೆಸಿದೆ. ಆದಾಗ್ಯೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 15ರಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಇತರ ತರಗತಿಯ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಿಎಂ ಕಚೇರಿಯ ಕಾರ್ಯದರ್ಶಿ ಅಶ್ವನಿ ಕುಮಾರ್ ತಿಳಿಸಿದ್ದಾರೆ.

    ‘ಶಾಲೆಗಳನ್ನು ಮುಚ್ಚಲು ಕೇಳಿದ್ದರಿಂದ 1ರಿಂದ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಯ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಪಾಸ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಮಕ್ಕಳನ್ನು ಸುರಕ್ಷಿತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯವಾಗಿದೆ’ ಎಂದು ಅಶ್ವನಿ ಕುಮಾರ್ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

  • SSLC ಪರೀಕ್ಷೆ ಕಡೆ ಗಮನ ಹರಿಸಿ ಡಿಸಿಗಳಿಗೆ ಸುರೇಶ್ ಕುಮಾರ್ ಪತ್ರ

    SSLC ಪರೀಕ್ಷೆ ಕಡೆ ಗಮನ ಹರಿಸಿ ಡಿಸಿಗಳಿಗೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದೆ, ಆತಂಕವಿಲ್ಲದೆ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆ. ಡಿಸಿಗಳು, ಪೊಲೀಸ್ ಇಲಾಖೆ, ಪಿಯುಸಿ ಬೋರ್ಡ್ ಪರೀಕ್ಷೆಗೆ ಅಗತ್ಯ ಕ್ರಮ ತೆಗೆದುಕೊಂಡು ಪರೀಕ್ಷೆ ಯಶಸ್ವಿಯಾಗಿ ನಡೆಸುತ್ತಿದೆ. ಪಿಯುಸಿ ಎಕ್ಸಾಂ ಮುಗಿದ ಕೂಡಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಹೀಗಾಗಿ ಪಿಯುಸಿ ಎಕ್ಸಾಂ ನಷ್ಟೆ ಪಾರದರ್ಶಕವಾಗಿ, ಸುಗಮವಾಗಿ ನಡೆಸಲು ಕೆಲಸ ಮಾಡುವಂತೆ ಎಲ್ಲಾ ಡಿಸಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.

    ಯಾವುದೇ ಗೊಂದಲ, ಅಕ್ರಮ ಇಲ್ಲದೆ ಪರೀಕ್ಷೆ ನಸೆಸಲು ಡಿಸಿಗಳ ಸಹಕಾರ ಮುಖ್ಯ ಹೀಗಾಗಿ ಸಚಿವರೇ ಎಲ್ಲಾ ಡಿಸಿಗಳಿಗೂ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪರೀಕ್ಷೆಗಳು ಸುಲಲಿತವಾಗಿ ಹಾಗೂ ಮುಕ್ತ ವಾತಾವರಣದಲ್ಲಿ ನಡೆಯವಂತೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಇದಕ್ಕೆ ಪೊಲೀಸ್ ಇಲಾಖೆ, ಖಜಾನೆ, ಇಂಟಲಿಜೆನ್ಸ್ ಸೇರಿದಂತೆ ಎಲ್ಲ ಇಲಾಖೆಗಳೂ ಸಹಕರಿಸಿದ್ದು, ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಪರೀಕ್ಷೆಗಳು ಸುಸೂತ್ರವಾಗಿ ನಿರ್ವಹಣೆಯಾಗಬೇಕಾದ ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಆಶಯಗಳು ಸಾಕಾರಗೊಳ್ಳಬೇಕಾದರೆ ಜಿಲ್ಲಾಧಿಕಾರಿಗಳ ಜವಾಬ್ದಾರಿ ಹಿರಿದಾಗಿದ್ದು, ಈ ಕುರಿತಂತೆ ಪರೀಕ್ಷಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಧಿಕಾರಿ/ಸಿಬ್ಬಂದಿ ಅತಿ ಜಾಗರೂಕತೆಯಿಂದ ಮತ್ತು ಹೆಚ್ಚಿನ ಜವಾಬ್ದಾರಿಯಿಂದ ತೊಡಗಿಸಿಕೊಂಡು ಪರೀಕ್ಷಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

    ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಇಡುವ ಖಜಾನೆಗೆ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷ ಸಮಯ ನೀಡಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಾಗೃತ ದಳಗಳ ರಚನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ಯಾಡ್ ಇರಲಿದ್ದಾರೆ. ಪ್ರಶ್ನೆ ಪತ್ರಿಕೆ ರವಾನೆ ಮಾಡೋ ವಾಹನಕ್ಕೆ ಜಿಪಿಎಸ್ ಅಳವಡಿಕೆ ಮಾಡುವ ಕಾರ್ಯ ನಡೆಯುತ್ತಿದೆ.

  • ದ್ವೀತಿಯ ಪಿಯುಸಿ ಉತ್ತರ ಪತ್ರಿಕೆ ಪುಟಗಳ ಸಂಖ್ಯೆ ಹೆಚ್ಚಳ

    ದ್ವೀತಿಯ ಪಿಯುಸಿ ಉತ್ತರ ಪತ್ರಿಕೆ ಪುಟಗಳ ಸಂಖ್ಯೆ ಹೆಚ್ಚಳ

    – ಎಕ್ಸಾಂ ಹಾಲ್‍ನಲ್ಲಿ ಸಿಬ್ಬಂದಿಗೂ ಮೊಬೈಲ್ ನಿಷೇಧ

    ಬೆಂಗಳೂರು: ದ್ವೀತಿಯ ಪಿಯುಸಿ ಪರೀಕ್ಷೆಗೆ ಸಿದ್ಧತೆಗಳು ಪ್ರಾರಂಭವಾಗಿದೆ. ಮಾರ್ಚ್ ನಲ್ಲಿ ನಡೆಯಲಿರುವ ಪರೀಕ್ಷೆ ಸುಸೂತ್ರವಾಗಿ ನಡೆಯಲು ಖುದ್ದು ಶಿಕ್ಷಣ ಸಚಿವರು ಅಖಾಡಕ್ಕೆ ಇಳಿದಿದ್ದಾರೆ. ಸ್ವತಃ ಸಚಿವ ಸುರೇಶ್ ಕುಮಾರ್ ಪರೀಕ್ಷೆ ಸಿದ್ಧತೆ ಬಗ್ಗೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಬಾರಿಯ ಪರೀಕ್ಷೆ ಹತ್ತು-ಹಲವು ವಿಶೇಷಗಳಿಗೆ, ಹೊಸ ನಿಯಮಗಳಿಗೆ ಸಾಕ್ಷಿಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಲುವಾಗಿ ದ್ವೀತಿಯ ಪಿಯುಸಿ ಉತ್ತರ ಪತ್ರಿಕೆಯ ಪುಟಗಳ ಸಂಖ್ಯೆಯನ್ನ ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ 24 ಪುಟಗಳ ಬುಕ್ ಲೆಟ್‍ನ್ನ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು. ಇದರಿಂದ ಮಕ್ಕಳು ಹೆಚ್ಚುವರಿ ಉತ್ತರ ಪತ್ರಿಕೆಗೆ ಬೇಡಿಕೆ ಇಡುತ್ತಿದ್ದರು. ಈ ಸಮಸ್ಯೆಯನ್ನ ನಿವಾರಿಸಲು ಈ ವರ್ಷದಿಂದ 40 ಪುಟಗಳ ಉತ್ತರ ಪತ್ರಿಕೆ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ.

    ಇಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ನಿಷೇಧ ಮಾಡಲಾಗಿತ್ತು. ಆದರೆ ಈ ಬಾರಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋ ಎಲ್ಲಾ ಸಿಬ್ಬಂದಿಗೂ ಮೊಬೈಲ್ ಫೋನ್ ನಿಷೇಧ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಸಮಸ್ಯೆಯನ್ನು ತಡೆಯಲು ಎಂದಿನಂತೆ ಈ ವರ್ಷವೂ ಎಕ್ಸಾಂಮಿನೇಷನ್ ಸೆಕ್ಯೂರ್ ಸಿಸ್ಟಮ್ ಅಳವಡಿಕೆ ಮಾಡಲಾಗುತ್ತಿದೆ. ಫೆಬ್ರವರಿಯಲ್ಲೆ ಪ್ರಶ್ನೆ ಪತ್ರಿಕೆ ಖಜಾನೆಗಳ ಭದ್ರತೆ ಕೆಲಸ ಪ್ರಾರಂಭವಾಗಲಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಖಜಾನೆಯ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ.

    ಪರೀಕ್ಷಾ ಕೇಂದ್ರಗಳಲ್ಲಿ ತಕ್ಷಣ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ, ಪರೀಕ್ಷಾ ಕೇಂದ್ರದ ಸಿಬ್ಬಂದಿ, ಉತ್ತರ ಪತ್ರಿಕೆ ರವಾನೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

  • ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಕರ್ನಾಟಕ ಪಿಯುಸಿ ಬೋರ್ಡ್‌ನಿಂದ ಅಧಿಕೃತವಾಗಿ ಪ್ರಕಟವಾಗಿದೆ.

    ಆಕ್ಷೇಪಣೆ ಸಲ್ಲಿಸಲು ಪಿಯುಸಿ ಬೋರ್ಡ್ ಸೂಚನೆ ನೀಡಿದ್ದು, ಅಕ್ಟೋಬರ್ 31ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. 2020ರ ಮಾರ್ಚ್ 4ರಿಂದ ಮಾರ್ಚ್ 19ವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

    ಪಿಯುಸಿ ತಾತ್ಕಾಲಿಕಾ ವೇಳಾಪಟ್ಟಿ:
    ಮಾರ್ಚ್ 4 – ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ
    ಮಾರ್ಚ್ 5 – ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
    ಮಾರ್ಚ್ 6 – ಉರ್ದು, ಸಂಸ್ಕೃತ
    ಮಾರ್ಚ್ 7 – ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ

    ಮಾರ್ಚ್ 9 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
    ಮಾರ್ಚ್ 10 – ಎನ್.ಎಸ್.ಕ್ಯೂ.ಎಫ್(NSQF)
    ಮಾರ್ಚ್ 11 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

    ಮಾರ್ಚ್ 12 – ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ
    ಮಾರ್ಚ್ 13 – ಭೂಗೋಳಶಾಸ್ತ್ರ, ಕರ್ನಾಟಿಕ್ ಸಂಗೀತ, ಹಿಂದೂಸ್ಥಾನಿ ಸಂಗೀತ
    ಮಾರ್ಚ್ 14 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ
    ಮಾರ್ಚ್ 16 – ಅರ್ಥಶಾಸ್ತ್ರ, ಜೀವಶಾಸ್ತ್ರ

    ಮಾರ್ಚ್ 17 – ಹಿಂದಿ
    ಮಾರ್ಚ್ 18 – ಕನ್ನಡ
    ಮಾರ್ಚ್ 19 – ಇಂಗ್ಲಿಷ್

  • ಕಲಾ ವಿಭಾಗದಲ್ಲಿ ಬಳ್ಳಾರಿಯ ಕುಸುಮ ಫಸ್ಟ್ – ಇಂದೂ ಕಾಲೇಜಿನ 9 ಮಂದಿ ಟಾಪರ್

    ಕಲಾ ವಿಭಾಗದಲ್ಲಿ ಬಳ್ಳಾರಿಯ ಕುಸುಮ ಫಸ್ಟ್ – ಇಂದೂ ಕಾಲೇಜಿನ 9 ಮಂದಿ ಟಾಪರ್

    ಬೆಂಗಳೂರು/ಬಳ್ಳಾರಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದ್ದಾರೆ.

    ಈ ವರ್ಷ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ. 1,86,690 ಬಾಲಕರು, 2,27,897 ಬಾಲಕಿಯರು ತೇರ್ಗಡೆಯಾಗಿದ್ದಾರೆ. 54,823 ಮಂದಿ ಉನ್ನತ ಶ್ರೇಣಿ, 2,27,301 ಮಂದಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.

    ಕಲಾ ವಿಭಾಗದಲ್ಲಿ 2,00,022 ಮಂದಿ ಹಾಜರಾಗಿದ್ದರೆ, 1,01,073 ಮಂದಿ ಪಾಸ್ ಆಗಿದ್ದು, ಶೇ.50.53 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಅದರಲ್ಲೂ ಎಂದಿನಂತೆ ಇಂದು ಕಾಲೇಜಿನ ವಿದ್ಯಾರ್ಥಿಗಳು ಟಾಪರ್ ಆಗಿದ್ದು, ಮೊದಲ 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

    ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು
    1. ಕುಸುಮ ಉಜ್ಜಿನಿ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕುಸುಮ ಕನ್ನಡ ಮತ್ತು ಸಂಸ್ಕೃತದಲ್ಲಿ 96 ಅಂಕ ಪಡೆದುಕೊಂಡಿದ್ದಾರೆ. ಇನ್ನೂ ಐಚ್ಛಿಕ ಕನ್ನಡ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಮೂರು ವಿಷಯದಲ್ಲೂ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ ಶಿಕ್ಷಣದಲ್ಲಿ 99 ಅಂಕವನ್ನು ಪಡೆದುಕೊಂಡಿದ್ದಾರೆ.

    2. ಹೊಸಮನಿ ಚಂದ್ರಪ್ಪ
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 591

    3. ನಾಗರಾಜ್
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 591

    4. ಓಮೇಶ ಎಸ್
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 591

    5. ಸಚಿನ್ ಕೆ.ಜೆ.
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 589

    6. ಸುರೇಶ್ ಎಚ್
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 589

    7. ಬರಿಕರ ಶಿವಕುಮಾರ್
    * ಕಾಲೇಜು – ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯ ಎಸ್‍ಯುಜೆಎಂ ಪಿಯು ಕಾಲೇಜು
    * ಪಡೆದ ಅಂಕ – 589

    8. ಹರಿಜನಸೊಪ್ಪಿನ ಹುಚ್ಚಂಗೆಮ್ಮ
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 588

    9. ಕೋನಪುರ ಮಥಾಡ ನಂದೀಶ
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 588

    10. ಅಂಗಡಿ ಸರಸ್ವತಿ
    * ಕಾಲೇಜು – ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಇಂದು ಪಿಯು ಕಾಲೇಜು
    * ಪಡೆದ ಅಂಕ – 587

  • ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಒಟ್ಟು 2,17,766 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,44,983 ಮಂದಿ ತೇರ್ಗಡೆಯಾಗಿ ಶೇ.66.58 ರಷ್ಟು ಫಲಿತಾಂಶ ದಾಖಲಾಗಿದೆ. ಬೆಂಗಳೂರಿನ ಎಸ್. ರಜತ್ ಕಶ್ಯಪ್ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

                                                      ರಯಿಸಾ

    ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಟಾಪ್ 10 ವಿದ್ಯಾರ್ಥಿಗಳು

    1. ಎಸ್. ರಜತ್ ಕಶ್ಯಪ್ – 594 – ಕುಮಾರನ್ಸ್ ಪಿಯು ಕಾಲೇಜು, ಬೆಂಗಳೂರು
    2. ದಿವ್ಯಾ ಕೆ – 593 – ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು
    3. ಪ್ರಿಯಾ ನಾಯಕ್ – 593 – ಆರ್ ವಿ ಪಿಯು ಕಾಲೇಜು, ಬೆಂಗಳೂರು
    4. ರಯಿಸಾ – 592 – ಎಸ್‍ಆರ್ ಪಿಯು ಕಾಲೇಜು, ಉಡುಪಿ
    5. ಡಿ. ನಿಕೇತನ್ ಗೌಡ – 592 – ಮಾಸ್ಟರ್ಸ್ ಪಿಯು ಕಾಲೇಜು, ಹಾಸನ

                                                     ಸ್ವಾತಿ

    6. ಜಾಗೃತಿ. ಜೆ. ನಾಯಕ್ – 592 – ವಿವೇಕಾನಂದ ಪಿಯು ಕಾಲೇಜು, ಪುತ್ತೂರು
    7. ಸ್ವಾತಿ – 592 – ಮಹತ್ಮಾ ಗಾಂಧಿ ಮೆಮೋ ಪಿಯು ಕಾಲೇಜು, ಉಡುಪಿ
    8. ಸೈಶ್ ಶ್ರೀಕಾಂತ್ ಮೆಂದ್ಕೆ – 591 – ಗೋವಿಂದರಾಮ್ ಸೆಕ್ಸಾರಿಯಾ ಪಿಯು ಕಾಲೇಜು, ಬೆಳಗಾವಿ
    9. ಪಲ್ಲವಿ. ಜಿ – 591 – ಎಎಸ್‍ಸಿ ಪಿಯು ಕಾಲೇಜು, ಬೆಂಗಳೂರು
    10. ಪ್ರಥಮ್. ಎನ್ – 591- ಶಾರದಾ ಪಿಯುಸಿ ಕಾಲೇಜು, ಮಂಗಳೂರು

  • ಪಿಯು ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದಕ್ಷಿಣ ಕನ್ನಡ  ದ್ವಿತೀಯ

    ಪಿಯು ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ನಿರ್ಮಿಸಿದ್ದು ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ವರ್ಷ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ.

    1,86,690 ಬಾಲಕರು, 2,27,897 ಬಾಲಕಿಯರು ತೇರ್ಗಡೆಯಾಗಿದ್ದಾರೆ. 54,823 ಮಂದಿ ಉನ್ನತ ಶ್ರೇಣಿ, 2,27,301 ಮಂದಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.

    ಉಡುಪಿ ಶೇ.92.20, ದಕ್ಷಿಣ ಕನ್ನಡ ಶೇ.90.91, ಕೊಡಗು ಶೇ.83.31 ಫಲಿತಾಂಶ ದಾಖಲಿಸುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರದುರ್ಗ ಶೇ.51.42 ಫಲಿತಾಂಶ ದಾಖಲಿಸಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

    ಕಳೆದ ವರ್ಷಕ್ಕಿಂತ ಈ ವರ್ಷ ಫಲಿತಾಂಶ ಏರಿಕೆ ಕಂಡಿದ್ದು, ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು ಏ.29 ಕೊನೆಯ ದಿನವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನವಾಗಿದೆ.

    ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ. ದರ ನಿಗದಿಯಾಗಿದ್ದು, ಸ್ಕ್ಯಾನಿಂಗ್ ಕಾಪಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ದರ ನಿಗದಿಯಾಗಿದೆ. ಜೂನ್ ಮೊದಲ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ.

    ಫಲಿತಾಂಶ ಹೇಗಿದೆ?
    ಒಟ್ಟು ಹಾಜರಾದ 6,71,653 ವಿದ್ಯಾರ್ಥಿಗಳ ಪೈಕಿ 4,14,587 ಮಂದಿ ಪಾಸ್ ಆಗುವ ಮೂಲಕ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ 2,00,022 ಮಂದಿ ಹಾಜರಾಗಿದ್ದರೆ 1,01,073 ಮಂದಿ ಪಾಸ್ ಆಗಿದ್ದು ಶೇ.50.53 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 2,53,865 ಮಂದಿ ಪರೀಕ್ಷೆ ಬರೆದಿದ್ದು, 1,68,531 ಮಂದಿ ತೇರ್ಗಡೆಯಾಗಿ ಶೇ.66.58 ರಷ್ಟು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 2,17,766 ಮಂದಿ ಪರೀಕ್ಷೆ ಬರೆದಿದ್ದು, 1,44,983 ಮಂದಿ ತೇರ್ಗಡೆಯಾಗಿ ಶೇ.66.58 ರಷ್ಟು ಫಲಿತಾಂಶ ದಾಖಲಾಗಿದೆ.

    ಫಲಿತಾಂಶ ಲಭ್ಯವಾಗುವ ವೆಬ್ ಸೈಟ್ 
    http://pue.kar.nic.in
    www.karresults.nic.in