Tag: ದ್ವಿತೀಯ ಪಿಯುಸಿ

  • ದ್ವಿತೀಯ ಪಿಯುಸಿ ಪರೀಕ್ಷೆ ರದ್ದು – ಕಾಲೇಜಿನ ಮುಂದೆ ಬೂದುಗುಂಬಳ ಒಡೆದು ವಿದ್ಯಾರ್ಥಿಗಳ ಸಂಭ್ರಮ

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು – ಕಾಲೇಜಿನ ಮುಂದೆ ಬೂದುಗುಂಬಳ ಒಡೆದು ವಿದ್ಯಾರ್ಥಿಗಳ ಸಂಭ್ರಮ

    ತುಮಕೂರು: ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಸಂತೋಷಗೊಂಡಿರುವ ವಿದ್ಯಾರ್ಥಿಗಳ ತಂಡವೊಂದು ಕಾಲೇಜಿನ ಬಳಿ ತೆರಳಿ ಬೂದುಗುಂಬಳ ಕಾಯಿ ಒಡೆದು ಸಂಭ್ರಮಾಚರಣೆ ನಡೆಸಿದ ಘಟನೆ ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.

    ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಮಾರು 10ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ದ್ವಿತೀಯ ಪಿಯುಸಿಯ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಸರ್ಕಾರದ ನಿರ್ಧಾರ ಪ್ರಕಟವಾದಂದು ಲಾಕ್‍ಡೌನ್ ಇದ್ದ ಕಾರಣ ಯಾರೂ ಹೊರಗೆ ಬರದಂತಾಗಿತ್ತು. ನಿನ್ನೆ ಲಾಕ್‍ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಬಳಿ ಬಂದು ಗೇಟ್ ಮುಂದೆ ಬೂದುಗುಂಬಳ ಕಾಯಿ, ತೆಂಗಿನ ಕಾಯಿಯನ್ನು ಒಡೆದು, ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    ಸಂಭ್ರಮಾಚರಣೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಜಯಕಾರವನ್ನು ಹಾಕಿರುವ ವಿದ್ಯಾರ್ಥಿಗಳು ಕಾಲೇಜಿಗೆ ಗುಡ್ ಬಾಯ್ ಹೇಳಿ ನಮಸ್ಕರಿಸಿದ್ದಾರೆ. ಇದೆಲ್ಲವನ್ನು ವೀಡಿಯೋ ಮಾಡಿರುವ ವಿದ್ಯಾರ್ಥಿಗಳು ಅದಕ್ಕೆ ಹಾಡನ್ನು ರಿಮೇಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಸಂಭ್ರಮಾಚರಣೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

  • ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

    ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಕೊರೊನಾದಿಂದಾಗಿ ರಾಜ್ಯದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ರದ್ದುಗೊಂಡಿದೆ. ಪಬ್ಲಿಕ್ ಟಿವಿಯ ಸಲಗೆ ಸ್ವೀಕರಿಸಿರುವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರ ಹೊಸ ಮಾನದಂಡವನ್ನು ಪ್ರಕಟಿಸಿದೆ.

    ನಿನ್ನೆ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರದಲ್ಲಿ ಪಾಸ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದಿದ್ದರು. ಆದರೆ ಇಂದು ಎಲ್ಲಾ ವಿದ್ಯಾರ್ಥಿಗಳ ಪಾಸ್ ಮಾಡಲು ಮಾನದಂಡದಲ್ಲಿ ಕೆಲ ಬದಲಾವಣೆಯನ್ನು ತರಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    ಇದೇ ವಿಚಾರವಾಗಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ರವರು ನಡೆಸಿಕೊಡುವ ಬಿಗ್ ಬುಲೆಟಿನ್ ನಲ್ಲಿ ನಿನ್ನೆ ಪ್ರಥಮ ಪಿಯುಸಿ ಜೊತೆಗೆ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಪರಿಗಣಿಸಿ ಅಂತ ಸಲಹೆ ನೀಡಿದ್ರು. ಸಲಹೆಯನ್ನ ಸ್ವೀಕಾರ ಮಾಡಿರುವ ಶಿಕ್ಷಣ ಸಚಿವರು ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಪರಿಗಣಿಸಿ ಗ್ರೇಡ್ ಮಾನದಂಡ ಸಿದ್ದ ಮಾಡಿ ಅಂತ ಶಿಕ್ಷಣ‌ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಶಿಕ್ಷಣ ಇಲಾಖೆ ‌ಪ್ರಧಾನ ಕಾರ್ಯದರ್ಶಿ, ಪಿಯುಸಿ ಬೋರ್ಡ್ ನಿರ್ದೇಕರು ಹಾಗೂ ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕರಿಗೆ ಪತ್ರ ಬರೆದು ಮಾನದಂಡ ರೂಪಿಸಲು ಸೂಚನೆ ನೀಡಿದ್ದಾರೆ.

    ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಪ್ರಕಾರ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಲು ವಿದ್ಯಾರ್ಥಿಯ ಪ್ರಥಮ ಪಿಯುಸಿ ಪರೀಕ್ಷೆಯ ಅಂಕಗಳ ಜೊತೆಗೆ ಎಸ್‍ಎಸ್‍ಎಲ್‍ಸಿ ಅಂಕಗಳು ಸೇರಿ ಮಾನದಂಡ ಇಟ್ಟುಕೊಂಡು ಫಲಿತಾಂಶ ನೀಡಲು ಸರ್ಕಾರದ ತೀರ್ಮಾನಿಸಿದೆ.

    ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಎಷ್ಟು ಪ್ರಮಾಣದಲ್ಲಿ ಅಂಕ ಪರಿಗಣನೆ ಮಾಡಬೇಕು ಎಂದು ನಿರ್ಧಾರ ವಾಗಿಲ್ಲ. ಶೀಘ್ರವೇ ಈ ಕುರಿತು ಪಿಯುಸಿ ಬೋರ್ಡ್ ಸರಿಯಾದ ನಿರ್ಧಾರ ತೆಗೆದುಕೊಂಡು ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

    ಕಳೆದ ವರ್ಷ ತಜ್ಞರು ನೀಡಿದ ಸಲಹೆಯ ಆಧಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು.  ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಆದೆ ಕೊರೊನಾ ಕಾಲದಲ್ಲಿ ಪರೀಕ್ಷೆ ನಡೆಸುವುದು ಬಹಳ ಅಪಾಯಕಾರಿ. ಪರೀಕ್ಷೆ ನಡೆಸದೇ ಹೋದರೂ ಸರ್ಕಾರಕ್ಕೆ ಸಮಸ್ಯೆಯಾಗಲಿದೆ. ಒಟ್ಟಿನಲ್ಲಿ ಪರೀಕ್ಷೆ ಎಂಬ ಅಡಕತ್ತರಿಯಲ್ಲಿ ಶಿಕ್ಷಣ ಇಲಾಖೆ ಸಿಲುಕಿತ್ತು.

    ಪರೀಕ್ಷೆ ಇಲ್ಲದೆ ಪಾಸ್ ಏನಾಗಬಹುದು?
    ಶೈಕ್ಷಣಿಕ ಗುಣಮಟ್ಟಕ್ಕೆ ಭಾರೀ ಹೊಡೆತ ಬೀಳುವುದರ ಜೊತೆಗೆ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು. ನೀಟ್, ಸಿಇಟಿ ಸೀಟ್ ಹಂಚಿಕೆಯಲ್ಲಿ ಭಾರೀ ಗೊಂದಲವಾಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲು ಏರಬಹುದು. ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಬಹುದು. ಕೆಲ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಇದನ್ನೂ ಓದಿ: ಸುರೇಶ್ ಕುಮಾರ್ ಆತ್ಮವಂಚನೆ ಮಾಡಿಕೊಂಡು ಪಿಯುಸಿ ಪರೀಕ್ಷೆ ರದ್ದು ಮಾಡಿದ್ದಾರೆ – ಅಮರೇಗೌಡ

    ಪರೀಕ್ಷೆ ನಡೆಸಿದ್ರೆ ಏನಾಗಬಹುದು?
    ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೋವಿಡ್ ಅಪಾಯವಾಗಿ ಸೋಂಕು ಸ್ಫೋಟ ಆಗಬಹುದು. ಕೋವಿಡ್ ಸಾವು ನೋವು ಹೆಚ್ಚಾಗಬಹುದು.

    ತಜ್ಞರು ಏನು ಹೇಳಿದ್ರು?
    ಕೊರೊನಾ ಸಮಯದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ಅಲ್ಲ. ಪರೀಕ್ಷೆಗೆ ಸರ್ಕಾರ ಆತುರ ಪಡಬಾರದು. ಪರೀಕ್ಷೆ ಮಾಡಲೇಬೇಕು ಅಂದರೆ ಸೋಂಕು ನಿಯಂತ್ರಣಗೊಂಡ ಬಳಿಕ ನಡೆಸಬಹುದು. ಶಾಲಾ-ಕಾಲೇಜುಗಳ ಹಂತದಲ್ಲಿಯೇ ಆಫ್‍ಲೈನ್ ಬದಲು ಆನ್‍ಲೈನ್ ಪರೀಕ್ಷೆ ನಡೆಸಬೇಕು.

    ಪರೀಕ್ಷೆ ಬೇಡ ಎನ್ನುವವರ ವಾದ ಏನು?
    ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಬಾರದು. ಮಕ್ಕಳ ಶಿಕ್ಷಣಕ್ಕಿಂತ ಮಕ್ಕಳ ಜೀವ ನಮಗೆ ಮುಖ್ಯ. ಈ ಕೊರೊನಾ ವರ್ಷದಲ್ಲಿ ಪರೀಕ್ಷೆಯೇ ಬೇಡ. ಸಿಬಿಎಸ್‍ಇ ಮಾದರಿಯಲ್ಲಿ ಎಲ್ಲರನ್ನು ಪಾಸ್ ಮಾಡಿ.

    ಪರೀಕ್ಷೆ ಬೇಕು ಎನ್ನುವವರ ವಾದ ಏನಿತ್ತು?
    ಸರ್ಕಾರ ಪರೀಕ್ಷೆ ರದ್ದು ಮಾಡಬಾರದು. ಸೆಕೆಂಡ್ ಪಿಯುಸಿ ಪರೀಕ್ಷೆ ಮುಖ್ಯ. ಸಾಮೂಹಿಕವಾಗಿ ಪಾಸ್ ನಿರ್ಧಾರ ಸರಿಯಲ್ಲ. ಒಂದು ವೇಳೆ ಎಲ್ಲರನ್ನೂ ಪಾಸ್ ಮಾಡಿದರೆ ಅಷ್ಟು ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳಲ್ಲಿ ಸೀಟ್ ಸಿಗಲಾರದು. ಬೇಡಿಕೆ ಜಾಸ್ತಿಯಾದರೆ ಕಾಲೇಜುಗಳೇ ಪರೀಕ್ಷೆ ನಡೆಸಿ ಪ್ರವೇಶ ನೀಡಬಹುದು. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ನಡೆಸಬೇಕಾಗುತ್ತದೆ. ಇಲ್ಲ ಅಂದ್ರೆ ನೀಟ್, ಸಿಇಟಿ ವೇಳೆ ಮಕ್ಕಳಿಗೆ ತೊಂದರೆ ಆಗುತ್ತದೆ.

  • ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ಬೆಂಗಳೂರು: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪರೀಕ್ಷೆ ಪೋಷಕರು, ಮಕ್ಕಳು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪರೀಕ್ಷೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಸಚಿವರು ಹೇಳಿದ್ದೇನು?
    ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವೀತಿಯ ಪಿಯುಸಿ ಪರೀಕ್ಷೆ ಮಾಡದೇ ಇರಲು ಈಗ ನಿರ್ಧಾರ ಮಾಡಲಾಗಿದೆ. ಈ ವರ್ಷದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ್ದೇ ಗ್ರೇಡ್ ಆಧಾರದಲ್ಲಿ ಪಾಸ್ ಹಾಗೂ ಕಲಿಕಾ ಮಟ್ಟದಲ್ಲಿ ಅಂಕ ನೀಡಿ ಪಾಸ್ ಮಾಡಲು ನಿರ್ಧಾರ ಮಾಡಿದ್ದೇವೆ.  

    ಕೆಲ ರಾಜ್ಯದಲ್ಲಿ ಎಕ್ಸಾಂ ರದ್ದು ಮಾಡಿದ ಮೇಲೆ ಆ ರಾಜ್ಯದವರ ಜೊತೆ ಮಾತಾಡಿದ್ದೇವೆ. ಯಾವ ಆಧಾರದಲ್ಲಿ ಪಾಸ್ ಮಾಡ್ತೀರಾ ಅಂತ ಕೇಳಿದ್ದೇವೆ. ಯಾವುದೇ ಮಾನದಂಡ ಯಾರು ಕೊಟ್ಟಿಲ್ಲ. ಮುಂದೆ ಯೋಜನೆ ಮಾಡೋದಾಗಿ ಹೇಳಿದ್ದಾರೆ. ದ್ವಿತಿಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದೇವೆ. ಎಲ್ಲಾ ಮಕ್ಕಳಿಗೆ ಯಾವ ಆಧಾರಲ್ಲಿ ಪಾಸ್ ಮಾಡಬಹುದು ಅಂತ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ.  

    ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನಾವು ಕೆಲ ಮಾನದಂಡವನ್ನ ರಿಲೀಸ್ ಮಾಡುತ್ತೇವೆ. ಆ ಆಧಾರದಲ್ಲಿ ಎಬಿಸಿ ಮಾದರಿ ಗ್ರೇಡ್ ಕೊಡ್ತೀವಿ. ವಿದ್ಯಾರ್ಥಿಗಳಿಗೆ ಆ ಫಲಿತಾಂಶ ಇಷ್ಟ ಆಗದೇ ಹೋದ್ರೆ ಕೋವಿಡ್ ನಿಯಂತ್ರಣವಾದರೆ ಮಕ್ಕಳಿಗೆ ಪರೀಕ್ಷೆ ಮಾಡೋ ಬಗ್ಗೆ ಚಿಂತನೆ ಮಾಡುತ್ತೇವೆ. ದ್ವಿತಿಯ ಪಿಯುಸಿ ಮಕ್ಕಳು ಗ್ರೇಡ್ ಆಧಾರದಲ್ಲಿ ಪಾಸ್ ಮಾಡುತ್ತೇವೆ.

    ವಿದ್ಯಾರ್ಥಿಗಳು ಗೊಂದಲ ಆಗೋದು ಬೇಡ. ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರಲ್ಲಿ ಪಾಸ್ ಮಾಡಲಾಗುತ್ತದೆ. ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಸಿದ್ಧರಾಗಿರಿ. ನಿಮ್ಮ ಜೀವನ ಉಜ್ವಲ ಆಗಲಿ ಎಂದು ದ್ವಿತಿಯ ಪಿಯಸಿ ಮಕ್ಕಳಿಗೆ ಸಚಿವರುಗೆ ಶುಭ ಕೋರಿದ್ದಾರೆ.

  • ಕೇಂದ್ರ ಸರ್ಕಾರದ ವಿದ್ಯಾರ್ಥಿ ಸ್ನೇಹಿ ದೀಕ್ಷಾ ಆ್ಯಪ್ ಲೋಕಾರ್ಪಣೆ

    ಕೇಂದ್ರ ಸರ್ಕಾರದ ವಿದ್ಯಾರ್ಥಿ ಸ್ನೇಹಿ ದೀಕ್ಷಾ ಆ್ಯಪ್ ಲೋಕಾರ್ಪಣೆ

    – ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ `ಪರೀಕ್ಷಾ ಅಭ್ಯಾಸ’
    – ಕಾರ್ಯಕ್ರಮಕ್ಕೆ ಸುರೇಶ್ ಕುಮಾರ್ ಚಾಲನೆ

    ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಪ್ರಸ್ತುತ ಪಡಿಸಿದ `ದೀಕ್ಷಾ’-ಆಪ್‍ನನ್ನು (ದೀಕ್ಷಾ-ಆ್ಯಪ್) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.

    ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ `ಪರೀಕ್ಷಾ ಅಭ್ಯಾಸ’ ಎಂಬ ವಿನೂತನ ಕಾರ್ಯಕ್ರಮವನ್ನು ಅಳವಡಿಸಿ ದೀಕ್ಷಾ ವೇದಿಕೆಯ ಮೂಲಕ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್‍ರವರು, ಪಿಯುಸಿ ವಿದ್ಯಾರ್ಥಿಗಳಿಗೆ ಮುಂಬರಲಿರುವ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದರು.

    ಅದೇ ರೀತಿಯಾಗಿ ಡಿ.ಎಸ್.ಇ.ಆರ್.ಟಿ.ಯು 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿದ್ಧತೆ ಮಾಡುವುದಕ್ಕಾಗಿ “ಫೋಕಸ್” ಎಂಬ ಪುನರ್ಮನನ ಕಾರ್ಯಕ್ರಮವನ್ನು ದೀಕ್ಷಾದಲ್ಲಿ ಪ್ರಸ್ತುತಪಡಿಸಿದೆ. ಪ್ರತಿಯೊಂದು ವಿಷಯಕ್ಕೆ ಇ-ಪಠ್ಯಪುಸ್ತಕ, ಕನಿಷ್ಠ 2 ಮಾಡೆಲ್ ಪ್ರಶ್ನೆ ಪತ್ರಿಕೆಗಳು, ವಿವರಾಣಾತ್ಮಕ ವಿಡಿಯೋಗಳು, ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಅದರಲ್ಲಿ ದೊರೆಯಲಿವೆ ಎಂದು ಹೇಳಿದರು.

    ವಿದ್ಯಾರ್ಥಿಗಳಿಗೆ ಮಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದಕ್ಕೆ ಸಹಾಯ ಮಾಡಲು ಪಿಸಿಎಂಬಿ ವಿಷಯಕ್ಕೆ ಸುಮಾರು 9,000 ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯು) ಅಧ್ಯಾಯವಾರು ಒದಗಿಸಲಾಗಿದೆ. ದೇಶದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದ್ದು, ನಮ್ಮ ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇದನ್ನು ಪ್ರಪ್ರಥಮವಾಗಿ ಜಾರಿಗೊಳಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಎಲ್ಲ ಪಠ್ಯಾಂಶಗಳನ್ನು ‘ದೀಕ್ಷಾ-ಆ್ಯಪ್’ದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಚಿವರು ಕೋರಿದರು.

    ಏನಿದು ದೀಕ್ಷಾ-ಆಪ್ ಪ್ರೋಗ್ರಾಂ: ದೀಕ್ಷಾ ಪೋರ್ಟಲ್ ಅನ್ನು www.diksha.gov.in ಇಲ್ಲಿ ನೋಡಬಹುದಾಗಿದೆ. ಆಂಡ್ರಾಯಿಡ್ ಫೋನ್ ಗಳಲ್ಲಿ ದೀಕ್ಷಾ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಈ ಲಿಂಕ್ ಒತ್ತಿ ದೀಕ್ಷಾ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು. DIKSHA – Platform for School Education

    ದೀಕ್ಷಾ ಆ್ಯಪ್ ಅಥವಾ ಪೋರ್ಟಲ್ ನಲ್ಲಿ ನಿಮಗೆ ಬೇಕಿರುವ ಬೋರ್ಡ್, ಮಾಧ್ಯಮ, ಭಾಷೆ ಮತ್ತು ತರಗತಿಗಳನ್ನು ಆಯ್ಕೆ ಮಾಡಿಕೊಂಡು, ವಿವಿಧ ಬಗೆಯ ಪಠ್ಯಾಂಶಗಳನ್ನು ಪಡೆದುಕೊಳ್ಳಬಹುದು.

    ದೀಕ್ಷಾ-ಆಪ್ ಉದ್ದೇಶ: ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ, ಅವರ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರೋಗ್ರಾಂ ರೂಪಿಸಲಾಗಿದೆ. ಕೋವಿಡ್ ಪಿಡುಗಿನ ಈ ಕಷ್ಟಕರ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ನಿಯಮಿತವಾಗಿ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಶಿಕ್ಷಣ ಇಲಾಖೆಯು ಚಂದನ ಟಿವಿಯ ಮೂಲಕ ಆನ್‍ಲೈನ್ ಪಾಠಗಳನ್ನು ನಡೆಸುತ್ತಿದೆ. ಆದಾಗ್ಯೂ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ವೀಕ್ಷಿಸುವುದು ಸಾಧ್ಯವಾಗಿರುವುದಿಲ್ಲ. ದೀಕ್ಷಾ ಪೋರ್ಟಲ್‍ನಲ್ಲಿ ಅಳವಡಿಸಲಾಗಿರುವ ಈ ಎಲ್ಲಾ ಇ-ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ತಮಗೆ ಸಾಧ್ಯವಾದಾಗ ಮತ್ತು ಅಗತ್ಯವಿದ್ದಾಗ ನೋಡಿಕೊಳ್ಳಬಹುದು.

    ಕಾರ್ಯಕ್ರಮದ ವ್ಯಾಪ್ತಿ: 1 ರಿಂದ 12ನೇ ತರಗತಿಗಳಿಗೆ ಎಲ್ಲ ಬಗೆಯ ಪಠ್ಯಾಂಶಗಳು ಅಂದರೆ ಇ-ಪಠ್ಯಪುಸ್ತಕಗಳು (ಇಟಿಬಿ), ವಿವರಣಾತ್ಮಕ ಪಠ್ಯಾಂಶಗಳು, ಕಲಿಕಾ ಸಂಪನ್ಮೂಲಗಳು, ಅಭ್ಯಾಸ ಪ್ರಶ್ನೆಗಳು, ಪ್ರಶ್ನೆ ಕೋಶ (ಕ್ವಶ್ಚನ್ ಬ್ಯಾಂಕ್) ಮತ್ತು ಶಿಕ್ಷಕರಿಗೆ ಪಾಠ ಯೋಜನೆ ಇನ್ನಿತರ ಸಂಪನ್ಮೂಲಗಳನ್ನು ದೀಕ್ಷಾ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ.

    ಕ್ವಶ್ಚನ್ ಬ್ಯಾಂಕಿನಲ್ಲಿ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು), ಕಿರು ಉತ್ತರಗಳು (ವೆರಿ ಶಾರ್ಟ್ ಅನ್ಸರ್), ಸಂಕ್ಷೀಪ್ತ ಉತ್ತರಗಳು (ಶಾರ್ಟ್ ಅನ್ಸರ್), ದೀರ್ಘ ಉತ್ತರಗಳು (ಲಾಂಗ್ ಅನ್ಸರ್); ಹೀಗೆ ನಾಲ್ಕು ರೀತಿಯ ಪ್ರಶ್ನೆಗಳು ಸೇರಿವೆ.

    ಫೋಕಸ್ ಪ್ರೋಗ್ರಾಂ: 10ನೇ ತರಗತಿಯ ವಿದ್ಯಾರ್ಥಿಗಳು ಮಂಡಳಿಯ ಪರೀಕ್ಷೆಗೆ ಸಿದ್ಧರಾಗುವುದಕ್ಕೆ ಸಹಾಯವಾಗಲೆಂದು ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಪ್ರತಿ ಅಧ್ಯಾಯಕ್ಕೆ ಸುಮಾರು 30 ಪ್ರಶ್ನೆಗಳನ್ನು ಸೇರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹಲವಾರು ಕ್ಲಿಷ್ಟಕರ ಪರಿಕಲ್ಪನೆಗಳನ್ನು ಪುನರ್ಮನನ ಮಾಡುತ್ತ, ಪರೀಕ್ಷೆಗೆ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಸಾಧ್ಯಗೊಳಿಸುತ್ತದೆ.

    ದ್ವಿತೀಯ ಪಿಯುಸಿಗೆ: ಪಿಸಿಎಂಬಿ ವಿಷಯಗಳಿಗೆ, ಪ್ರತಿ ಅಧ್ಯಾಯಕ್ಕೂ ಸಮಾರು 80-100 ಪ್ರಶ್ನೆಗಳನ್ನು ಅಪ್ಲೋಡ್ ಮಾಡಲಾಗಿದೆ. ಇದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೆಸಿಇಟಿ, ಸಿಓಎಂಇಡಿಕೆ, ಜೆಇಇ, ನೀಟ್, ಹೀಗೆ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡುವುದಕ್ಕೆ ಸಹಾಯವಾಗುತ್ತದೆ.

    ಇದು ವಿದ್ಯಾರ್ಥಿಗಳಿಗೆ ಹೇಗೆ ಉಪಯುಕ್ತ?
    ಈ ಎಲ್ಲಾ ಪಠ್ಯಾಂಶಗಳು ದೀಕ್ಷಾ ಪೋರ್ಟಲ್ ಮತ್ತು ದೀಕ್ಷಾ ಆ್ಯಪ್ ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮಗೆ ಅರ್ಥವಾಗದ ಪಾಠ ಅಥವಾ ಅಧ್ಯಾಯಗಳನ್ನು ರಿಪ್ಲೇ ಮಾಡಿ ನೋಡಲು ಸಾಧ್ಯವಿರುತ್ತವೆ. ಜೊತೆಗೆ ವಿಡಿಯೋ, ಪಿಡಿಎಫ್ ರೂಪದಲ್ಲಿರುವ ವಿವರಣಾತ್ಮಕ ಪಠ್ಯಾಂಶಗಳನ್ನು ಆ್ಯಪ್‍ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡರೆ, ಇಂಟರ್ನೆಟ್ ಇಲ್ಲದಿದ್ದಾಗಲೂ ನೋಡಿಕೊಂಡು, ಅಭ್ಯಾಸ ಮಾಡುವುದಕ್ಕೆ ಸಾಧ್ಯವಿದೆ. ಶಿಕ್ಷಣ ಇಲಾಖೆಯ ತಜ್ಞ ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ಅಗತ್ಯ, ಪರೀಕ್ಷೆಯ ಸ್ವರೂಪ ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಪಠ್ಯಾಂಶಗಳನ್ನು ಸಿದ್ಧಪಡಿಸಿರುವುದರಿಂದ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧರಾಗಲು ಅತ್ಯಂತ ಉಪಯುಕ್ತವಾಗಿವೆ.

    10ನೇ ತರಗತಿಯ ಸುಮಾರು 9 ಲಕ್ಷ ವಿದ್ಯಾರ್ಥಿಗಳು, 1ರಿಂದ – 10ನೇ ತರಗತಿ: ಸುಮಾರು 85 ಲಕ್ಷ ವಿದ್ಯಾರ್ಥಿಗಳು, ಪಿಯುಸಿ (ಪ್ರಥಮ & ದ್ವಿತೀಯ): ಸುಮಾರು 13 ಲಕ್ಷ ವಿದ್ಯಾರ್ಥಿಗಳು ದೀಕ್ಷಾ-ಆಪ್ ನ ಪ್ರಯೋಜನ ಪಡೆಯಲಿದ್ದಾರೆ. ಇಲಾಖೆಯು ಒದಗಿಸಿದ ಎಲ್ಲ ಪಠ್ಯಾಂಶಗಳನ್ನು `ದೀಕ್ಷಾ’ ವೇದಿಕೆಗೆ ಅಪ್ಲೋಡ್ ಮಾಡುವುದಕ್ಕೆ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

  • ಕೇಂದ್ರದಿಂದ ರಾಜ್ಯಗಳಿಗೆ 2 ಆಯ್ಕೆ – ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ?

    ಕೇಂದ್ರದಿಂದ ರಾಜ್ಯಗಳಿಗೆ 2 ಆಯ್ಕೆ – ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ?

    ಬೆಂಗಳೂರು: ಕೋವಿಡ್ 19ನಿಂದಾಗಿ ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್ ಎನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಮುಂದೂಡಲ್ಪಟ್ಟಿದೆ. ಅದು ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಕರ್ನಾಟಕ ಸರ್ಕಾರ ಜುಲೈನಲ್ಲಿ ಪರೀಕ್ಷೆ ನಡೆಸಲು ಒಲವು ವ್ಯಕ್ತಪಡಿಸಿದೆ.

    ಭಾನುವಾರ ಕೇಂದ್ರ ಸರ್ಕಾರ ನಡೆಸಿದ ಸಿಬಿಎಸ್‍ಸಿ 12ನೇ ತರಗತಿಗಳ ಪರೀಕ್ಷೆ ನಿಗದಿ ಕುರಿತ ಸಭೆಯಲ್ಲಿ, ಸೋಂಕು ಇಳಿಕೆಯಾದ ಕೂಡಲೇ ಎಕ್ಸಾಂ ನಡೆಸಲು ಅವಕಾಶ ನೀಡಿ. ಒಂದ್ವೇಳೆ ಜುಲೈನಲ್ಲಿ ಪರೀಕ್ಷೆಗಳನ್ನು ಆಯೋಜಿಸಿದ್ರೆ ಆಗಸ್ಟ್ ನಲ್ಲಿ ಫಲಿತಾಂಶ ನೀಡಬಹುದು ಎಂದು ಸಚಿವ ಸುರೇಶ್ ಕುಮಾರ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

    ಸಭೆಯಲ್ಲಿ ಹಲವು ರಾಜ್ಯಗಳು ಕೊರೊನಾ ನಡುವೆ  ಎಕ್ಸಾಂ ನಡೆಸೋದು ಸರಿಯಲ್ಲ ಎಂದು ಆಕ್ಷೇಪ ಎತ್ತಿವೆ. ಆದರೂ, ಕೇಂದ್ರ ಕೂಡ ರಾಜ್ಯ ಸರ್ಕಾರಗಳಿಗೆ ಎರಡು ಆಯ್ಕೆ ನೀಡಿದೆ. ನಾಳೆಯೊಳಗೆ ನಿಮ್ಮ ಅಭಿಪ್ರಾಯ ತಿಳಿಸಿ. ಜೂನ್ ಒಂದಕ್ಕೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದಿದೆ.

    ಆಯ್ಕೆ 1
    ಮುಂದಿನ 3 ತಿಂಗಳಲ್ಲಿ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಿ, ಆಗಸ್ಟ್‍ನಲ್ಲಿ ಮುಖ್ಯ ವಿಷಯಗಳ ಪರೀಕ್ಷೆಯನ್ನಷ್ಟೇ ನಡೆಸುವುದು. ಸೆಪ್ಟೆಂಬರ್ ವೇಳೆಗೆ ಫಲಿತಾಂಶ ನೀಡುವುದು. ಪರೀಕ್ಷೆ ದಿನಾಂಕ ನಿಗದಿಯನ್ನು ರಾಜ್ಯಗಳಿಗೆ ಬಿಡುವುದು.

    ಆಯ್ಕೆ 2
    ಪರೀಕ್ಷೆ ಅವಧಿಯನ್ನು 3 ಗಂಟೆ ಬದಲು 90 ನಿಮಿಷಕ್ಕೆ ಇಳಿಸುವುದು. 2 ಹಂತಗಳಲ್ಲಿ ಪರೀಕ್ಷೆಗೆ ಅವಕಾಶ (ಜುಲೈ 15, ಆಗಸ್ಟ್ ಮೊದಲ ವಾರ). ಮುಖ್ಯ ವಿಷಯಗಳ ಜೊತೆ ಒಂದು ಭಾಷಾ ವಿಷಯದ ಪರೀಕ್ಷೆ. ಆಯಾ ಶಾಲೆಗಳಲ್ಲೇ ಪರೀಕ್ಷೆ ನಡೆಸಲು ಅವಕಾಶ ನೀಡುವುದು

    ರಾಜ್ಯ ಸರ್ಕಾರದ ನಿಲುವು ಏನು?
    ಜುಲೈನಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಸರ್ಕಾರ ಒಲವು ವ್ಯಕ್ತಪಡಿಸಿದ್ದು,  ಜುಲೈನಲ್ಲಿ ಪರೀಕ್ಷೆ ನಡೆದರೇ ಆಗಸ್ಟ್ ನಲ್ಲಿ ಫಲಿತಾಂಶ ಪ್ರಕಟಿಸಬಹುದು.  ಇದರಿಂದ ನೀಟ್/ಜೆಇಇ/ಸಿಇಟಿ/ಐಸಿಎಆರ್ ಪರೀಕ್ಷೆಗೆ ಅನುಕೂಲವಾಗಲಿದೆ.  ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನ ಅಗತ್ಯ. ನಾವು ಪರೀಕ್ಷೆ ನಡೆಸಲು ರೆಡಿ ಇದ್ದೇವೆ.

  • ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

    – ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ಪ್ರತಿಪಾದನೆ

    ಬೆಂಗಳೂರು: ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ವೃತ್ತಿಪರ ಶಿಕ್ಷಣಕ್ಕೆ ಸನ್ನದ್ಧರಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ಕೋವಿಡ್ ಸಂಪೂರ್ಣವಾಗಿ ತಹಬಂದಿಗೆ ಬಂದ ನಂತರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿಯಾದರೂ ಪರೀಕ್ಷೆಗಳನ್ನು ನಡೆಸುವುದು ಸಮರ್ಪಕವಾಗುತ್ತದೆ ಎಂದು ಪ್ರತಿಪಾದಿಸಿದರು.

    ಪ್ರಸ್ತುತ ಕೋವಿಡ್ ಪ್ರಸರಣವು ಎಲ್ಲೆಡೆ ತೀವ್ರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಎರಡನೇ ಅಲೆ ತಹಬಂದಿಗೆ ಬಂದ ಕೂಡಲೇ 15-20 ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಕೋವಿಡ್ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಸರ್ಕಾರವು ಯೋಜಿಸಿದೆ ಎಂದರು.

    ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳ್ಳಬೇಕೆಂದು ಹಲವರ ಪ್ರತಿಪಾದನೆಯಾಗಿದೆ. ಸರಳೀಕೃತ ಮಾದರಿಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಕಾಲಾವಕಾಶ ಅಗತ್ಯವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೂ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಸಲಹಾತ್ಮಕವಾಗಿ ಹೇಳಿದೆ. ಕರ್ನಾಟಕ ರಾಜ್ಯವು ಕಳೆದ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಿದ ಅನುಭವ ಹೊಂದಿದ್ದು, ಈ ಅನುಭವದ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಮರ್ಥವಾಗಿ ಆಯೋಜಿಸುವುದು ಹೆಚ್ಚಿನ ಸಮಸ್ಯೆಯಾಗದಿದ್ದರೂ, ವಿದ್ಯಾರ್ಥಿಗಳ ಕಲಿಕೆ, ಪೋಷಕರ ಮನ:ಸ್ಥಿತಿ, ಕೇಂದ್ರ ಸರ್ಕಾರದ ಸಲಹೆಗಳು ಹಾಗೂ ಪ್ರಸ್ತುತ ಪೂರ್ವಸಿದ್ಧತಾ ಕಾರ್ಯಗಳನ್ನು ಸಮಗ್ರವಾಗಿ ಅವಲೋಕಿಸಿ, ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜುಲೈ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್ ತಿಂಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ತಿಂಗಳ ಸೂಕ್ತ ದಿನಾಂಕಗಳಂದು ಆಯೋಜಿಸಬಹುದಾಗಿದೆಯೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.

    ಕೇಂದ್ರ ಸರ್ಕಾರದ ಈ ರೀತಿಯ ಸಮಾಲೋಚನಾ ಸಭೆಯು ಅಭಿನಂದನಾರ್ಹ ಪ್ರಯತ್ನ. ಇಂತಹ ಪ್ರಯತ್ನಗಳು ಸಂಕಷ್ಟದ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜಕ್ಕೆ ವಿಶ್ವಾಸವನ್ನು ಮೂಡಿಸುವಂತಹದ್ದಾಗಿವೆ ಎಂದರು. ಸಭೆಯಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ತಮ್ಮ ರಾಜ್ಯಗಳ ಸ್ಥಿತಿಗತಿಗಳನ್ನು ಗಮನಕ್ಕೆ ತಂದರು ಹಾಗೂ ಸಿ.ಬಿ.ಎಸ್.ಇ. ಮಂಡಳಿಯು ಸೇರಿದಂತೆ ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸುವ ಪರವಾಗಿ ವಿಚಾರ ಮಂಡಿಸಿದರು. ಬಹುಪಾಲು ಸಚಿವರು ಪರೀಕ್ಷೆಗಳನ್ನು ನಡೆಸಲೇಬೇಕೆಂದು ಪ್ರತಿಪಾದಿಸಿದರು. ಸಭೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಜವಳಿ ಸಚಿವೆ ಸ್ಮೃತಿ ಇರಾನಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಹಾಜರಿದ್ದರು.

  • ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್

    ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮುಂದಿನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

    ಮಂಗಳವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗಳು ಆರಂಭವಾಗುವುದಕ್ಕೆ 15-20 ದಿನಗಳ ಮುನ್ನವೇ ಪ್ರಕಟಿಸಲಾಗುವುದು ಎಂದರು.

    ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವುದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರೆಸಬೇಕೆಂದು ಅವರು ಮನವಿ ಮಾಡಿದ್ದಾರೆ.

    ಮೊದಲನೆ ಪಿಯು ವಿದ್ಯಾರ್ಥಿಗಳಿಗೆ ಪ್ರಮೋಷನ್:
    ದ್ವಿತೀಯ ಪಿಯು ಪರೀಕ್ಷೆಗಳ ನಂತರ ನಡೆಸಬೇಕೆಂದು ನಿರ್ಧರಿಸಲಾಗಿದ್ದ ಪ್ರಥಮ ಪಿಯು ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು, ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವ ನಿರ್ಧಾರವನ್ನೂ ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ಮುನ್ನ ಬ್ರಿಡ್ಜ್ ಕೋರ್ಸ್ಗಳನ್ನು ನಡೆಸಲಾಗುತ್ತದೆ. ಹಾಗೆಯೇ ಇಲಾಖೆಯ ಯೂ-ಟ್ಯೂಬ್ ಚಾನಲ್ಗಳ ಮೂಲಕ ಈಗಿನಿಂದಲೇ ಈ ಬ್ರಿಡ್ಜ್ ಕೋರ್ಸ್ಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದರು.

    ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ:
    ಪರೀಕ್ಷೆಗಳನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುವಂತೆ ಉಪನ್ಯಾಸಕರು ವರ್ಕ್ ಫ್ರಂ ಹೋಂ ಕೆಲಸ ಮಾಡಲು ಸೂಚಿಸಲಾಗಿದೆ.

    ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ, ಇಲಾಖೆಯ ಪಠ್ಯ ಬೋಧನಾ ಕ್ರಮಗಳನ್ನು ಅವರೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲ ಆಡಳಿತಾತ್ಮಕ ಕ್ರಮಗಳಲಿಗೆ ಅವರು ಸದಾ ಲಭ್ಯವಾಗಬೇಕಿದೆ. ಹಾಗೆಯೇ ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರು ತಮ್ಮ ಕೋವಿಡ್ ಜವಾಬ್ದಾರಿಗಳನ್ನು ಪೂರೈಸಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ರಾಜ್ಯಾದ್ಯಂತ 1047 ಕೇಂದ್ರಗಳಲ್ಲಿನ 5562 ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

    ಈ ಬಾರಿ 5,92,816 ಹೊಸ ವಿದ್ಯಾರ್ಥಿಗಳು, 76,422 ಪುನರಾವರ್ತಿತ ಅಭ್ಯಗಳು ಹಾಗೂ 17,470 ಖಾಸಗಿ ಅಭ್ಯಗಳು ಸೇರಿ 68,6708 ಅಭ್ಯಗಳು ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದರು. ಪ್ರಾಯೋಗಿಕ ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿದೆ. ರಾಜ್ಯಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಹರಡುತ್ತಿರುವುದು,   ಪರೀಕ್ಷೆಗೆ ಸಹಕಾರ ನೀಡಬೇಕಿದ್ದ ಇಲಾಖೆಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ಹಾಗೆಯೇ ಪರೀಕ್ಷೆ ತೆಗೆದುಕೊಳ್ಳಬೇಕಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನಲ್ಲಿ ವಾಸ್ತವ್ಯ ಮಾಡಿರುವುದು, ವಿದ್ಯಾರ್ಥಿಗಳ ಮತ್ತು ಪೋಷಕರ ಮಾನಸಿಕ ಒತ್ತಡಗಳು ಸೇರಿದಂತೆ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.

    ಸಿಬಿಎಸ್ಇ ಸೇರಿದಂತೆ ಕೇಂದ್ರ ಮಂಡಳಿ ಪರೀಕ್ಷೆಗಳು ಹಾಗೆಯೇ ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಹಿಮಾಚಲ ಪ್ರದೇಶ, ಛತ್ತೀಸ್ಘಡ್, ರಾಜಸ್ಥಾನ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ 12ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪರೀಕ್ಷೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಪಿಯು ಮಂಡಳಿ ನಿರ್ದೇಶಕಿ ಆರ್. ಸ್ನೇಹಲ್ ಮತ್ತಿತರರು ಭಾಗವಹಿಸಿದ್ದರು.

  • ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್

    ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ: ಸುರೇಶ್ ಕುಮಾರ್

    ಬೆಂಗಳೂರು: ಏಪ್ರಿಲ್ 28ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವಾರ್ಷಿಕ ಪರೀಕ್ಷೆಗಳು ಮುಗಿದ ಕೂಡಲೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ಪೋಷಕರೊಂದಿಗೆ ಅಧಿಕಾರಿ ಹಂತದ ಸುಧೀರ್ಘ ಚರ್ಚೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವ ಕಾರಣ ವಿಚಲಿತರಾಗದೇ ಏಕಾಗ್ರತೆಯಿಂದ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ಮುಂದುವರಿಸಬೇಕೆಂದು ಕಿವಿಮಾತು ಹೇಳಿದ್ದಾರೆ.

  • ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ

    ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ

    ಬೆಂಗಳೂರು: 2020-21ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 24 ರಿಂದ ಜೂನ್ 16ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮ ಹೇಳಿಕೆ ಮೂಲಕ ವೇಳಾಪಟ್ಟಿ ಪ್ರಕಟ ಮಾಡಿದ್ದಾರೆ. ಇತ್ತೀಚೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಕಾಶ ಕೊಡಲಾಗಿತ್ತು. ಆಕ್ಷೇಪಣೆ ಪರಿಶೀಲನೆ ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ರಚನೆ ಮಾಡಲಾಗಿದೆ. ಮೇ 24 ರಿಂದ ಜೂನ್ 16ರ ವರೆಗೆ ದ್ವೀತಿಯ ಪಿಯಸಿ ಪರೀಕ್ಷೆಗಳು ನಡೆಯಲಿವೆ.

    ವೇಳಾಪಟ್ಟಿ ಹೀಗಿದೆ
    ಮೇ 24- ಇತಿಹಾಸ
    ಮೇ 25- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
    ಮೇ 26- ಭೂಗೋಳ ಶಾಸ್ತ್ರ
    ಮೇ 27- ಮನಃಶಾಸ್ತ್ರ, ಬೇಸಿಕ್ ಗಣಿತ
    ಮೇ 28- ತರ್ಕಶಾಸ್ತ್ರ
    ಮೇ 29- ಹಿಂದಿ
    ಮೇ 31- ಇಂಗ್ಲಿಷ್
    ಜೂನ್ 01- ಮಾಹಿತಿ ತಂತ್ರಜ್ಞಾನ, ಹೆಲ್ತ್‍ಕೇರ್, ವೆಲ್‍ನೆಸ್ ಬ್ಯೂಟಿ
    ಜೂನ್ 02- ರಾಜ್ಯಶಾಸ್ತ್ರ, ಗಣಕ ವಿಜ್ಞಾನ
    ಜೂನ್ 03- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
    ಜೂನ್ 04- ಅರ್ಥಶಾಸ್ತ್ರ
    ಜೂನ್ 05- ಗೃಹ ವಿಜ್ಞಾನ
    ಜೂನ್ 07- ವ್ಯವಹಾರ ಅಧ್ಯಯನ, ಭೌತಶಾಸ್ತ್ರ
    ಜೂನ್ 08- ಐಚ್ಛಿಕ ಕನ್ನಡ
    ಜೂನ್ 09- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
    ಜೂನ್ 10- ಸಮಾಜ ಶಾಸ್ತ್ರ, ರಸಾಯನಶಾಸ್ತ್ರ
    ಜೂನ್ 11- ಉರ್ದು, ಸಂಸ್ಕೃತ
    ಜೂನ್ 12- ಸಂಖ್ಯಾಶಾಸ್ತ್ರ
    ಜೂನ್ 14- ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ
    ಜೂನ್ 15- ಭೂಗರ್ಭಶಾಸ್ತ್ರ
    ಜೂನ್ 16- ಕನ್ನಡ

  • ಕಲಾ ವಿಭಾಗ ಟಾಪರ್ಸ್ ಲಿಸ್ಟ್ – ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಮೂರು ಸ್ಥಾನ

    ಕಲಾ ವಿಭಾಗ ಟಾಪರ್ಸ್ ಲಿಸ್ಟ್ – ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಮೂರು ಸ್ಥಾನ

    ಬೆಂಗಳೂರು: ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಪ್ರತಿ ವರ್ಷದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಮೊದಲ ಮೂರು ಸ್ಥಾನಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

    ಕರೇಗೌಡರ ದಾಸನಗೌಡ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ, 591 ಅಂಕ ಪಡೆದ ಸ್ವಾಮಿ ಎರಡನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಈ ವರ್ಷ ಕಲಾ ವಿಭಾಗದ ಪರೀಕ್ಷೆಗೆ 1,98,875 ಮಂದಿ ಹಾಜರಾಗಿದ್ದು, 82,077 ಮಂದಿ ತೇರ್ಗಡೆಯಾಗುವ ಮೂಲಕ ಶೇ.41.27 ಫಲಿತಾಂಶ ದಾಖಲಾಗಿದೆ.

    ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ ಬಂದಿದೆ.

    ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
    1. ಕರೇಗೌಡರ ದಾಸನಗೌಡ 594 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
    2. ಸ್ವಾಮಿ ಎಸ್.ಎಂ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
    3. ಮಹಮ್ಮದ್ ರಫೀಕ್ ಹೆಚ್ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
    4. ಗೀತಾ ದೊಗ್ಗಳ್ಳಿ 590 ಅಂಕ, ಎಸ್‍ಯುಜೆಎಂ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
    4. ಶಮೀನ್ 590 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ


    5. ಪ್ರಿಯಾಂಕ ಎಂ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
    5. ಶರಣಬಸಪ್ಪಬಡಿಗೇರ್ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
    5. ಹಕ್ಕಿ ರೂಪ 589 ಅಂಕ, ಎಸ್‍ಎಸ್‍ಹೆಚ್ ಜೈನ್ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
    5. ತೋಟದ ತೇಜಸ್ವಿನಿ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ