Tag: ದ್ವಿಚಕ್ರ ವಾಹನ

  • ಯೋಧನ ಕುಟುಂಬದ ಮೇಲೆ ಹಲ್ಲೆ – ಜಿಲ್ಲಾಧಿಕಾರಿಗಳ ಮೊರೆ ಹೋದ ಸೈನಿಕ

    ಯೋಧನ ಕುಟುಂಬದ ಮೇಲೆ ಹಲ್ಲೆ – ಜಿಲ್ಲಾಧಿಕಾರಿಗಳ ಮೊರೆ ಹೋದ ಸೈನಿಕ

    ಬೆಳಗಾವಿ: ಯೋಧರೊಬ್ಬರ ಮನೆಯ ಮೇಲೆ ಕಲ್ಲುಗಳನ್ನು ಎಸೆದು ಮನೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಮಹಾನಗರದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಗೌಂಡವಾಡ ಗ್ರಾಮದಲ್ಲಿ ಕರ್ತವ್ಯನಿರತರಾಗಿರುವ ಯೋಧ ದೀಪಕ್ ಪಾಟೀಲ್ ಎಂಬವರ ಮನೆಯ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಯಲ್ಲಿದ್ದ ಫ್ರಿಡ್ಜ್ – ಟಿವಿ ಸೇರಿದಂತೆ ಇತರ ವಸ್ತುಗಳನ್ನು ಧ್ವಂಸ ಮಾಡಿ ಇಡೀ ಕುಟುಂಬವನ್ನು ಊರಿನವರು ಬಹಿಷ್ಕಾರ ಹಾಕಿದ್ದಾರೆ.

    ಸದ್ಯ ಈ ಕಿರುಕಳ ಸಹಿಸಲಾರದೆ ದೇಶ ಕಾಯುವ ಯೋಧನ ಕುಟುಂಬ ಕಾಕತಿ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದರೂ ಅಲ್ಲಿನ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ ಮಕ್ಕಳು ದಿನಸಿ ಅಂಗಡಿಗೆ ಹೋಗಿ ಬಿಸ್ಕತ್ತು ಕೊಡಿ ಎಂದರೆ ಅಂಗಡಿಯವರು ನಮ್ಮಲ್ಲಿ ಬಿಸ್ಕತ್ತು ಇಲ್ಲ ಎಂದು ಮಕ್ಕಳಿಗೆ ಹೇಳಿ ಮರಳಿ ಕಳಿಸುತ್ತಾರೆ. ನಂತರ ಮಕ್ಕಳು ಅಮ್ಮನ ಬಳಿ ಬಂದು ಅಳುತ್ತಾರೆ. ಜೊತೆಗೆ ದೀಪಕ್ ಪಾಟೀಲ್‍ರವರ ದ್ವಿಚಕ್ರ ವಾಹನಕ್ಕೂ ಗ್ರಾಮಸ್ಥರು ಬೆಂಕಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.

    ಯೋಧ ದೀಪಕ್ ಸಂಬಂಧಿ ಅಶೋಕ್ ಪಾಟೀಲ್ ಅವರಿಗೆ ಸೇರಿದ ಐದು ಎಕರೆ ಜಮೀನು ವಿವಾದದಲ್ಲಿದ್ದು, ಗ್ರಾಮಸ್ಥರಿಗೂ ಹಾಗೂ ಯೋಧನ ಕುಟುಂಬಕ್ಕೆ ಜಗಳವಾಗಿದೆ ಎಂದು ಹೇಳಲಾಗುತ್ತಿದೆ. ಈಗ ಯೋಧ ನ್ಯಾಯಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

  • ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ- ನೆಲಕ್ಕೆ ಬಿದ್ದ ಯುವತಿಯನ್ನು ಧರಧರನೇ ಎಳೆದೊಯ್ದ!

    ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ- ನೆಲಕ್ಕೆ ಬಿದ್ದ ಯುವತಿಯನ್ನು ಧರಧರನೇ ಎಳೆದೊಯ್ದ!

    – ಯುವತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಖಾದರ್
    – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಕಾರಿನಡಿ ಸಿಲುಕಿದ ಯುವತಿಯನ್ನು ಧರಧರನೇ ಎಳೆದೊಯ್ದ ಭೀಕರ ಘಟನೆ ನಗರದ ಕದ್ರಿ ಕಂಬಳದಲ್ಲಿ ನಡೆದಿದೆ.

    ಅಪಘಾತದ ಭೀಕರತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನಡಿ ಸಿಲುಕಿದ್ದ ಯುವತಿಯನ್ನು ಕೂಡಲೇ ಮಾಜಿ ಸಚಿವ ಯು.ಟಿ ಖಾದರ್ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

    ನಡೆದಿದ್ದೇನು?
    ಯುವತಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಕಾರು ಬಂದು ಡಿಕ್ಕಿಯಾಗಿದೆ. ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದ ರಭಸಕ್ಕೆ ಯುವತಿ ಹಾರಿ ಕಾರಿನ ಎದುರು ಬಿದ್ದಿದ್ದಾಳೆ. ಈ ವೇಳೆ ಕಾರು ಆಕೆಯನ್ನು ಧರಧರನೇ ಎಳೆದುಕೊಂಡು ಮುಂದೆ ಚಲಿಸಿದೆ.

    ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಆ ಮಾರ್ಗವಾಗಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಕಾರನ್ನು ಮೇಲಕ್ಕೆತ್ತಿ ಅಡಿಗೆ ಬಿದ್ದಿದ್ದ ಯುವತಿಯನ್ನು ಹೊರಗಡೆ ತೆಗೆದಿದ್ದಾರೆ. ಯುವತಿಯ ತಲೆಗೆ ಮತ್ತು ಪಕ್ಕೆಲುಬುಗಳಿಗೆ ತೀವ್ರ ಗಾಯಗಳಾಗಿದೆ. ಇದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ಯು.ಟಿ ಖಾದರ್ ಕೂಡಲೇ ಗಂಭೀರ ಗಾಯಗೊಂಡ ಯುವತಿಯನ್ನು ತಮ್ಮ ಕಾರಿನಲ್ಲಿ ಹಾಕಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

    ಯುವತಿ ಕಾರಿನಡಿಗೆ ಬಿದ್ದರೂ ಕಾರನ್ನು ಚಲಾಯಿಸಿದ ಕಾರು ಚಾಲಕನ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಏ. 20ರ ನಂತರ ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದ್ದು ಸರಿಯಲ್ಲ: ಹೊರಟ್ಟಿ

    ಏ. 20ರ ನಂತರ ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದ್ದು ಸರಿಯಲ್ಲ: ಹೊರಟ್ಟಿ

    ಹುಬ್ಬಳ್ಳಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸವಾರರಿಗೆ ರಿಲಾಕ್ಸ್ ನೀಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯತನಕ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಿದ್ದು, ನನಗೆ ಸರಿ ಅನ್ನಿಸುತ್ತಿಲ್ಲ ಎಂದರು.

    ಇಲ್ಲಿಯವರೆಗೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಇಲ್ಲ. ಆದರೆ ದ್ವಿಚಕ್ರ ವಾಹನ ಸವಾರರಿಗೆ ರಿಲ್ಯಾಕ್ಸ್ ನೀಡಿದರೆ ಗತಿ ಏನು ಎಂದು ಪ್ರಶ್ನಿಸಿದ ಅವರು, ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದರೇ ಅವರು ಗ್ರಾಮೀಣ ಭಾಗಕ್ಕೆ ಹೋಗುತ್ತಾರೆ. ಯಾರಲ್ಲಿ ಕೊರೊನಾ ಇರುತ್ತೆ ಎಂದು ಯಾರಿಗೆ ಗೊತ್ತು. ಆಗ ಏನಾದರು ಗ್ರಾಮೀಣ ಪ್ರದೇಶದಲ್ಲಿ ಸೋಂಕು ಬಂದರೆ ಏನ್ ಗತಿ ಎಂದು ಆತಂಕ ವ್ಯಕ್ತಪಡಿಸಿದರು.

    ಸಾರ್ವಜನಿಕ ಹಿತಾಸಕ್ತಿಯಿಂದ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲನೆ ಮಾಡಬೇಕು. ಸಿಎಂಗೆ ನಾನು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರದ ನಿರ್ಧಾರದಂತೆ ಲಾಕ್‍ಡೌನ್ ಇರುವ ಮೇ 3ರವರೆಗೂ ಇದೇ ಪರಸ್ಥಿತಿ ಮುಂದುವರಿಸಬೇಕಿತ್ತು. ಈವಾಗಲೇ ಜನ ಮುಗಿಬಿಳುತ್ತಾರೆ ಈ ರೀತಿ ರಿಲ್ಯಾಕ್ಸ್ ನೀಡಿದರೆ ಹೇಗೆ ಎಂದು ಬಸವರಾಜ್ ಹೊರಟ್ಟಿ ಅಸಮಾಧಾನ ಹೊರ ಹಾಕಿದರು.

  • ಸರ್ಕಾರಿ ಕಚೇರಿ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ ಅನಾಮಧೇಯ ದ್ವಿಚಕ್ರ ವಾಹನಗಳು

    ಸರ್ಕಾರಿ ಕಚೇರಿ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ ಅನಾಮಧೇಯ ದ್ವಿಚಕ್ರ ವಾಹನಗಳು

    ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣದ ಜಿಲ್ಲಾಪಂಚಾಯ್ತಿ ಕಾರ್ಯಪಾಲಕ ಅಭಿಯಂತರರ ಕಚೇರಿ ಸ್ಥಳದಲ್ಲಿ ಅನಾಮಧೇಯ ವಾಹನಗಳು ಪತ್ತೆಯಾಗಿವೆ.

    ತುಕ್ಕು ಹಿಡಿದಿರುವ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪತ್ತೆಯಾಗಿದ್ದು ಅವು ಯಾರಿಗೆ ಸೇರಿದ್ದು, ಯಾವ ಕಾರಣಕ್ಕೆ ಇಲ್ಲಿ ನಿಲ್ಲಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

    ಸಾಕಷ್ಟು ದಿನಗಳಿಂದ ಹೀಗೆ ತುಕ್ಕು ಹಿಡಿದ ವಾಹನಗಳು ಇಲ್ಲಿ ನಿಂತಿದ್ದು ಕಚೇರಿ ಸಿಬ್ಬಂದಿಗಾಗಲಿ, ಅಧಿಕಾರಿಗಳಿಗಾಗಲಿ ವಾಹನಗಳ ಬಗ್ಗೆ ಮಾಹಿತಿ ಇಲ್ಲ. ಪೊಲೀಸರಿಗೂ ಇವುಗಳ ಬಗ್ಗೆ ಮಾಹಿತಿ ಇಲ್ಲ.

    ವಾಹನಗಳು ಇಲ್ಲಿಗೆ ಬಂದದ್ದಾದರೂ ಹೇಗೆ…? ಯಾರಿಗೆ ಸೇರಿದ್ದು ಈ ದ್ವಿಚಕ್ರ ವಾಹನಗಳು ಎಂಬುದು ಗೊತ್ತಾಗುತ್ತಿಲ್ಲ. ಅಲ್ಲದೆ ಕೆಲವು ವಾಹನಗಳಿಗೆ ನಂಬರ್ ಪ್ಲೇಟ್ ಕೂಡ ಇಲ್ಲ. ಸರ್ಕಾರಿ ಕಚೇರಿ ಆವರಣದ ಪೊದೆಗಳ ಮಧ್ಯೆ ಈ ವಾಹನಗಳು ಸೇರಿಕೊಂಡಿದ್ದು, ಗಿಡಗಂಟೆಗಳು ಒಣಗಿದ ಪರಿಣಾಮ ವಾಹನಗಳು ಗೋಚರವಾಗಿವೆ.

  • ಬೆಂಗಳೂರಿನ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

    ಬೆಂಗಳೂರಿನ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

    – ಅಲ್ಟ್ರಾವೈಲೆಟ್ ಕಂಪನಿಯಿಂದ ಸ್ಫೋರ್ಟ್ಸ್ ಬೈಕ್
    – ಒಂದು ಬಾರಿ ಚಾರ್ಜ್ ಮಾಡಿದ್ರೆ 140 ಕಿ.ಮೀ ಸಂಚರಿಸುತ್ತೆ

    ಬೆಂಗಳೂರು: ಎಲೆಕ್ಟ್ರಿಕ್ ಬೈಕ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಈಗ ಬೆಂಗಳೂರು ಮೂಲದ ಕಂಪನಿಯೊಂದು ಸ್ಫೋರ್ಟ್ಸ್ ಬೈಕನ್ನು ಬಿಡುಗಡೆ ಮಾಡಿದೆ.

    ಅಲ್ಟ್ರಾವೈಲೆಟ್ ಕಂಪನಿ ಎಫ್777 ಹೆಸರಿನಲ್ಲಿ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದೆ. ಏರ್ ಕೂಲ್ಡ್ ಬ್ರಷ್‍ಲೆಸ್ ಡಿಸಿ(ಬಿಎಲ್‍ಡಿಸಿ) ಮೋಟಾರ್ ಹೊಂದಿರುವ ಬೈಕ್ 25 ಕಿಲೋ ವ್ಯಾಟ್ (33.5 ಬಿಎಚ್‍ಪಿ) ಸಾಮರ್ಥ್ಯ 450 ಎನ್‍ಎಂ ಟಾರ್ಕ್ ಹೊಂದಿದ್ದು ಆನ್ ರೋಡ್ 3 ಲಕ್ಷ ರೂ. ದರವನ್ನು ನಿಗದಿ ಪಡಿಸಿದೆ.

    ಗಂಟೆಗೆ 147 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಬೈಕ್ ಹೊಂದಿರುವುದು ವಿಶೇಷ. 0-60 ಕಿ.ಮೀ ವೇಗವನ್ನು 2.9 ಸೆಕೆಂಡಿನಲ್ಲಿ, 0-100 ಕಿ.ಮೀ ವೇಗವನ್ನು 7.5 ಸೆಕೆಂಡಿನಲ್ಲಿ ಕ್ರಮಿಸುತ್ತದೆ ಎಂದು ಕಂಪನಿ ತಿಳಿಸಿದೆ. ಬುಧವಾರದಿಂದಲೇ ಬುಕ್ಕಿಂಗ್ ಅವಕಾಶ ಆರಂಭಿಸಿದ್ದು 2020ರ ಮೂರನೇ ತ್ರೈಮಾಸಿಕದಲ್ಲಿ ಬೈಕ್ ಗ್ರಾಹಕರಿಗೆ ಸಿಗಲಿದೆ.

     

    ಮೂರು ಸ್ಲಿಮ್ ಮತ್ತು ಮಾಡ್ಯುಲರ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ 130-140 ಕಿ.ಮೀ ಸಂಚರಿಸಬಹುದು ಎಂದು ಹೇಳಿಕೊಂಡಿದೆ. ಸ್ಟಾಂಡರ್ಡ್ ಚಾರ್ಜರ್ ಬಳಸಿದರೆ ಪೂರ್ಣವಾಗಿ ಚಾರ್ಜ್ ಆಗಲು 5 ಗಂಟೆ ಬೇಕು. ಪೋರ್ಟೆಬಲ್ ಫಾಸ್ಟ್ ಚಾರ್ಜರ್ ಬಳಸಿದರೆ 50 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜ್ ಆದರೆ 90 ನಿಮಿಷದಲ್ಲಿ ಪೂರ್ಣವಾಗಿ 8.5 ಕೆಜಿ ತೂಕದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.

    ಡ್ಯುಯಲ್ ಎಬಿಎಸ್, ಫುಲ್ ಕಲರ್ ಟಿಎಫ್‍ಟಿ ಸ್ಕ್ರೀನ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಏರ್ ಅಪ್‍ಡೇಟ್ ಮಾಡಲು ಅಪ್ಲಿಕೇಶನ್, ಬೈಕ್ ಲೊಕೇಟರ್, ರೈಡ್ ಅನಾಲಿಸಿಸ್, ಸ್ಪೀಡ್ ಲಿಮಿಟ್ ಗಳೊಂದಿಗೆ ಈ ಬೈಕ್ ಬಿಡುಗಡೆಯಾಗಿದೆ.

    ಬೆಂಗಳೂರಿನ ಬಿಎಂಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಿರಾಜ್ ರಾಜ್‍ಮೋಹನ್ ಮತ್ತು ನಾರಾಯಣ್ ಸುಬ್ರಮಣಿಯನ್ ಅವರು 2015ರಲ್ಲಿ ಅಲ್ಟ್ರಾವೈಲೆಟ್ ಕಂಪನಿಯನ್ನು ಆರಂಭಿಸಿದ್ದಾರೆ. ದೇಶದ ಪ್ರಸಿದ್ಧ ದ್ವಿಚಕ್ರ ವಾಹನ ಕಂಪನಿ ಟಿವಿಎಸ್ 11 ಕೋಟಿ ರೂ. ಹೂಡಿಕೆ ಮಾಡಿ ಕಂಪನಿಯಲ್ಲಿ ಶೇ.25.76 ಪಾಲನ್ನು ಪಡೆದುಕೊಂಡಿದ್ದಾರೆ.

  • 67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    ಭೋಪಾಲ್: ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು 67,490 ನಾಣ್ಯಗಳನ್ನು ನೀಡಿ ಹೊಂಡಾ ಆಕ್ಟೀವಾ ಖರೀದಿಸಿದ್ದಾರೆ.

    ಸತ್ನಾ ನಿವಾಸಿಯಾಗಿರುವ ರಾಕೇಶ್‍ರಿಗೆ ದ್ವಿಚಕ್ರ ವಾಹನ ಬೇಕಾಗಿತ್ತು. ಈ ವೇಳೆ ಅವರು ಹೊಂಡಾ ಆಕ್ಟೀವಾ ಖರೀದಿಸಲು ನಿರ್ಧರಿಸುತ್ತಾರೆ. ಬಳಿಕ  ನಾಣ್ಯಗಳು ತುಂಬಿರುವ ಬ್ಯಾಗ್ ತೆಗೆದುಕೊಂಡು ‘ಕೃಷ್ಣ ಹೊಂಡಾ ಡೀಲರ್ ಶಿಪ್’ಗೆ ಹೋಗುತ್ತಾರೆ.

    ರಾಕೇಶ್ ಆಕ್ಟೀವಾ 125BSVI ಖರೀದಿಸಲು ನಿರ್ಧರಿಸಿದ್ದರು. ಆಕ್ಟೀವಾ ಖರೀದಿಸಿ 67,490 ರೂ. ಅನ್ನು ನಾಣ್ಯದ ರೂಪದಲ್ಲಿ ಪೇಮೆಂಟ್ ಮಾಡಿದ್ದಾರೆ. ರಾಕೇಶ್ ನೀಡಿದ ನಾಣ್ಯದ ಹಣವನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ಮೂರು ಗಂಟೆ ಬೇಕಾಯಿತು. ಇದನ್ನೂ ಓದಿ: ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ಈ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್, ಬೇರೆ ಕುಟುಂಬಗಳಂತೆ ನನಗೂ ಹಾಗೂ ನನ್ನ ಕುಟುಂಬದವರಿಗೂ ದೀಪಾವಳಿ ಹಬ್ಬ ತುಂಬಾನೇ ಮುಖ್ಯ. ದನ್ತೇರಸ್(ಚಿನ್ನ ಅಥವಾ ಹೊಸ ವಸ್ತು ಖರೀದಿಸುವ ದಿನ) ದಿನದಂದು ನನಗೆ ನಾನೇ ನೀಡಿದ ಉಡುಗೊರೆ ಇದು ಎಂದು ಹೇಳಿದ್ದಾರೆ.

    ಈ ಹಿಂದೆ ರಾಜಸ್ಥಾನದ ಜೋಧ್‍ಪುರ್ ನಲ್ಲಿ 17 ವರ್ಷದ ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500ರೂ ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದನು. 13,500 ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ನಾಲ್ಕು ಗಂಟೆ ಬೇಕಾಯಿತು.

  • ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.

    ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ  ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜಾಗೃತಿ ಮೂಡಿಸಲು ಕಾರಣವೇನು?:
    ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.

    ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

  • ಎರಡು ದ್ವಿಚಕ್ರ ವಾಹನ-ಕಾರ್ ನಡುವೆ ಮುಖಾಮುಖಿ ಡಿಕ್ಕಿ

    ಎರಡು ದ್ವಿಚಕ್ರ ವಾಹನ-ಕಾರ್ ನಡುವೆ ಮುಖಾಮುಖಿ ಡಿಕ್ಕಿ

    ಬೆಂಗಳೂರು: ಕಾರು ಹಾಗು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು ಮತ್ತಿಬ್ಬರಿಗೆ ಗಂಭೀರ ಗಾಯಗೊಂಡಿರುವಂತ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ಸಂಭವಿಸಿದೆ.

    ಬನ್ನೇರುಘಟ್ಟದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಎದುರು ದಿಕ್ಕಿನಿಂದ ಬರುತ್ತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಒಂದು ಬೈಕ್ ನಲ್ಲಿದ್ದ ಇಬ್ಬರು ಸವಾರರಲ್ಲಿ ಓರ್ವ ಸವಾರ ಮೃತ ಪಟ್ಟಿದರೆ, ಇನ್ನುಳಿದ ಇಬ್ಬರು ಸವಾರರಿಗೆ ಗಂಭೀರ ಗಾಯವಾಗಿದೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮೃತ ವ್ಯಕ್ತಿ ಎಲ್ಲಿಯವರು ಎಂಬ ಗುರುತು ಪತ್ತೆಯಾಗಿಲ್ಲ. ಈ ಅಪಘಾತಕ್ಕೆ ಕಾರ್ ಚಾಲಕನ ಅತೀ ವೇಗವೇ ಕಾರಣವಾಗಿದ್ದು ಡಿಕ್ಕಿಯ ರಭಸಕ್ಕೆ ಆಕ್ಸಿಸ್ ಬೈಕ್ ಎರಡು ತುಂಡಾಗಿದೆ.

    ಈ ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದ್ವಿಚಕ್ರ ವಾಹನ, ಕಾರಿನಲ್ಲಿ ಕಾಲೇಜಿಗೆ ಹೋಗೋರಿಗೆ ಶಾಕಿಂಗ್ ನ್ಯೂಸ್!

    ದ್ವಿಚಕ್ರ ವಾಹನ, ಕಾರಿನಲ್ಲಿ ಕಾಲೇಜಿಗೆ ಹೋಗೋರಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ಕಾಲೇಜಿಗೆ ದ್ವಿಚಕ್ರ ವಾಹನ ಹಾಗೂ ಕಾರಿನಲ್ಲಿ ಹೋಗುವವರಿಗೆ ಶಿಕ್ಷಣ ಇಲಾಖೆ ಶಾಕಿಂಗ್ ನ್ಯೂಸ್ ಪ್ರಕಟವಾಗುವ ಸಾಧ್ಯತೆಯಿದೆ.

    ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ನಿರ್ಬಂಧಿಸಲು ಚಿಂತನೆ ನಡೆಸುತ್ತಿದೆ. ಸಾರ್ವಜನಿಕ ಸಾರಿಗೆ ಉತ್ತೇಜಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.

    ಉನ್ನತ ಶಿಕ್ಷಣ ಇಲಾಖೆ ಸಚಿವರಾದ ಜಿ.ಟಿ.ದೇವೇಗೌಡ ಅವರು ಕಾಲೇಜಿನ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳ ವಾಹನ ನಿಷೇಧಿಸುವ ಬಗ್ಗೆ ಕಾಲೇಜು ಮಂಡಳಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಭೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಖಾಸಗಿ ಮತ್ತು ಡೀಮ್ಡ್ ವಿ.ವಿ ಪ್ರತಿನಿಧಿಗಳು, ವೃತ್ತಿಪರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಲಿದ್ದಾರೆ.

    ಇಲಾಖೆ ನೀಡುವ ಪ್ರಸ್ತಾವನೆಯ ಆಧಾರದಲ್ಲಿ ಆಡಳಿತ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪೋಷಕರ ಹಾಗೂ ಪಾಲಕರ ಮನವೊಲಿಸಬೇಕಾಗಿದೆ.

    ವಿದ್ಯಾರ್ಥಿಗಳ ವಾಹನಗಳು ಅಪಘಾತಗಳಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಕ್ಯಾಂಪಸ್ ಒಳಗಡೆ ದ್ವಿಚಕ್ರ ಮತ್ತು ಕಾರುಗಳನ್ನು ನಿರ್ಬಂಧಿಸಲು ಇಲಾಖೆ ಚಿಂತನೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸುಡುಬಿಸಿಲಿಗೆ ದ್ವಿಚಕ್ರ ವಾಹನಗಳಿಗೂ ಬಂತು ಛತ್ರಿ

    ಸುಡುಬಿಸಿಲಿಗೆ ದ್ವಿಚಕ್ರ ವಾಹನಗಳಿಗೂ ಬಂತು ಛತ್ರಿ

    ಬೆಂಗಳೂರು: ಈಗಂತೂ ನೆತ್ತಿ ಸುಡೋ ಬಿಸಿಲು. ಕಾರಿನಲ್ಲಿ ಹೋಗೋರೇನೂ ಏಸಿ ಹಾಕ್ಕೊಳ್ತಾರೆ. ನಡೆದುಕೊಂಡು ಹೋಗೋರು ಛತ್ರಿ ಹಿಡ್ಕೊಂಡು ಹೋಗಬಹುದು. ಆದ್ರೆ ದ್ವಿಚಕ್ರ ವಾಹನಗಳಲ್ಲಿ ಓಡಾಡೋರು ಏನ್ಮಾಡ್ಬೇಕು? ಇದಕ್ಕೂ ಒಂದು ಐಡಿಯಾ ಬಂದಿದೆ. ಬೆಂಗಳೂರಿನಲ್ಲಿ ಸ್ಪೆಷಲ್ ಬೈಕ್ ಛತ್ರಿ ಬಂದಿದೆ.

    ಬಿಸಿಲು ಕಾದ ಕೆಂಡದಂತಿರುವಾಗ ದ್ವಿಚಕ್ರ ವಾಹನಗಳಲ್ಲಿ ಹೋಗೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ. ಇದಕ್ಕಾಗಿ ಈ ಸ್ಪೆಷಲ್ ಕೊಡೆ ಬಂದಿದೆ. ದಾಸರಹಳ್ಳಿಯ ಬ್ರೌನಿ ಅನ್ನೋರು ಈ ಕೊಡೆಯನ್ನು ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿ ಹೊಸ ಅವಿಷ್ಕಾರ ಮಾಡಿದ್ದಾರೆ. ಸದ್ಯ ಈ ಸಮ್ಮರ್ ಸ್ಪೆಷಲ್ ಛತ್ರಿಗೆ ಫುಲ್ ಡಿಮ್ಯಾಂಡ್ ಇದೆ. ಇದನ್ನ ತೈವಾನ್‍ನಿಂದ ತರಿಸಲಾಗುತ್ತಿದ್ದು, ಎಷ್ಟೇ ವೇಗದಲ್ಲಿ ಹೋದ್ರೂ ಛತ್ರಿ ಅಲ್ಲಾಡಲ್ಲ. ಇಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ಛತ್ರಿಯ ನೆರಳು ಬೀಳುತ್ತೆ, ಜೊತೆಗೆ ಸೂರ್ಯನ ಕಿರಣವನ್ನೂ ತಡೆಯೋ ಶಕ್ತಿ ಈ ಛತ್ರಿಗಿದೆಯಂತೆ.

    ಇನ್ನು ಹುಡ್ಗೀರಂತೂ ಈ ಟೂ ವೀಲರ್ ಛತ್ರಿಗೆ ಫುಲ್ ಫಿದಾ ಆಗಿದ್ದಾರೆ. ಕೇವಲ ಸ್ಕೂಟಿ, ಸ್ಕೂಟರ್‍ಗಳಿಗೆ ಮಾತ್ರವಲ್ಲ ಬೈಕ್‍ಗಳಿಗೂ ಇದನ್ನು ಆಳವಡಿಸಬಹುದಾಗಿದೆ. ಸ್ಕೂಟಿ ಛತ್ರಿಗಾದ್ರೆ ಎರಡು ಸಾವಿರ, ಬೈಕಿಗಾದ್ರೇ ಮೂರು ಸಾವಿರ ರೂಪಾಯಿ ನೀಡಬೇಕಾಗುತ್ತೆ. ಸದ್ಯ ಈ ಟೂ ವೀಲರ್ ಛತ್ರಿ ಟ್ರೆಂಡ್ ಆಗಿದೆ. ವಾಹನ ಸವಾರರಿಗೂ ಖುಷಿ ಕೊಡುತ್ತಿದೆ.

    ಬೇಸಿಗೆಯಲ್ಲಿ ಕೂಲ್ ಆಗಿರಬೇಕು ಅಂತಾ ಅಂದುಕೊಳ್ಳೋರು ಈ ಸ್ಪೆಷಲ್ ಛತ್ರಿಯನ್ನ ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿಕೊಂಡು ಹಾಯಾಗಿ ರೌಂಡ್ ಹೊಡೀಬಹುದು.