Tag: ದೋಸ್ತಿ ಸರ್ಕಾರ

  • ಅಧಿಕಾರ ಹೋಗುತ್ತಿದ್ದಂತೆಯೇ ದೋಸ್ತಿ ಖತಂ

    ಅಧಿಕಾರ ಹೋಗುತ್ತಿದ್ದಂತೆಯೇ ದೋಸ್ತಿ ಖತಂ

    ಬೆಂಗಳೂರು: ಅಧಿಕಾರ ಇದ್ದಾಗ ನಾವೆಲ್ಲ ಒಂದೇ, ರಾಜ್ಯದ ಅಭಿವೃದ್ಧಿ ಮಾಡುವ ಜೋಡೆತ್ತು ಎಂದಿದ್ದ ದೋಸ್ತಿ ನಾಯಕರು ಅಧಿಕಾರ ಹೋದ ಮೇಲೆ ಹೊಸ ವರಸೆ ತೆಗೆದಿದ್ದಾರೆ. ಮೈತ್ರಿ ಮುರಿಯಲು ಹೊಸ ರಾಗ-ತಾಳ ಹಾಕುತ್ತಿರುವ ಎರಡು ಪಕ್ಷದ ನಾಯಕರೂ ಸ್ಕ್ರೀನ್ ಪ್ಲೇ ಪ್ರಾರಂಭ ಮಾಡಿದ್ದಾರೆ. ಮೈತ್ರಿ ಆಟಕ್ಕೆ ಬ್ರೇಕ್ ಹಾಕೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

    ಶತಾಯಗತಾಯ ದೋಸ್ತಿ ಕಟ್ ಮಾಡಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿರುವ ಎರಡೂ ಪಕ್ಷದ ನಾಯಕರು ಸಿಕ್ಕ-ಸಿಕ್ಕ ಕಡೆ ದೋಸ್ತಿ ಬೇಡ ಎನ್ನುವ ಡೈಲಾಗ್‍ಗಳನ್ನು ಹೊಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್‍ನ ಮಾಜಿ ಸಚಿವ ಜಿ.ಟಿ ದೇವೇಗೌಡ ಬಿಜೆಪಿಗೆ ಬಾಹ್ಯ ಬೆಂಬಲ ಕೊಡೋಣ ಎಂದು ಶಾಸಕರು ಹೇಳಿದ್ದಾರೆ ಎಂದು ಹೇಳಿದ್ದರೋ, ಅಂದಿನಿಂದ ದೋಸ್ತಿ ಫ್ರೆಂಡ್ ಶಿಫ್ ಮುಗಿಯೋಕೆ ಪ್ರಾರಂಭವಾಯಿತು. ಈಗ ಇದೇ ದಾಟಿಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡ ಕೂಡ ಮಾತನಾಡಿದ್ದು, ದೋಸ್ತಿ ಸಹವಾಸಕ್ಕೆ ಕೊನೆ ಮೊಳೆ ಹೊಡೆಯುವ ಹೇಳಿಕೆ ಕೊಟ್ಟಿದ್ದಾರೆ.

    ಭಾನುವಾರ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಗೌಡರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತಾಡಿ ದೋಸ್ತಿ ಅಳಿವು-ಉಳಿವು ಮಾತನಾಡುತ್ತೇನೆ ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರು ಉಪ ಚುನಾವಣೆಗೆ ಏಕಾಂಗಿ ಸ್ಪರ್ಧೆ ಎಂದು ಘೋಷಣೆ ಮಾಡಿದ್ದಾರೆ.

    ಜೆಡಿಎಸ್ ವರಿಷ್ಠರು ಹೀಗೆ ಹೇಳುತ್ತಿದ್ದರೆ, ಕಾಂಗ್ರೆಸ್ ವಲಯದಲ್ಲೂ ದೋಸ್ತಿ ಬೇಡ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮಾಜಿ ಶಾಸಕರ ರಾಜಣ್ಣ ಶನಿವಾರ ದೋಸ್ತಿ ಸಹವಾಸ ಮಾಡಿದರೆ ಕಾಂಗ್ರೆಸ್ ಮುಳುಗುತ್ತೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಸಚಿವ ಶಿವಾನಂದ ಪಾಟೀಲ್ ಕೂಡ ದೋಸ್ತಿ ಮೇಲೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿಜಯಪುರದಲ್ಲಿ ಭಾನುವಾರ ಮಾತನಾಡಿದ ಅವರು, ರೇವಣ್ಣನಿಂದಾನೇ ಮೈತ್ರಿಗೆ ಈ ಕಷ್ಟ. ನನ್ನ ಇಲಾಖೆ ಸೇರಿದಂತೆ ಎಲ್ಲರ ಇಲಾಖೆಯಲ್ಲಿ ರೇವಣ್ಣ ಕೈಹಾಕಿದರು. ಕೆಎಂಎಫ್‍ನಲ್ಲೂ ರೇವಣ್ಣ ದರ್ಬಾರ್ ಜೋರಾಗಿತ್ತು ಎಂದು ಆರೋಪ ಮಾಡುವ ಮೂಲಕ ದೋಸ್ತಿ ಸರ್ಕಾರ ಪತನಕ್ಕೆ ರೇವಣ್ಣ ಕಾರಣ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಜೊತೆ ಹೋದ್ರೆ ಲಾಭ ಏನು? ಅನ್ನೋ ಲೆಕ್ಕದಲ್ಲಿ ದೊಡ್ಡಗೌಡ್ರು ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಜಿಟಿಡಿ ಬಿಜೆಪಿಗೆ ಬಾಹ್ಯ ಬೆಂಬಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವರು ಜೆಡಿಎಸ್ ಸಹವಾಸ ಬೇಡ ಎನ್ನುತ್ತಿದ್ದಾರೆ. ಇದೆಲ್ಲವನ್ನ ನೋಡುತ್ತಿದ್ದರೆ ದೋಸ್ತಿ ಮುಗಿಯುವ ಲಕ್ಷಣಗಳು ಕಾಣುತ್ತಿದೆ.

  • ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣು

    ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣು

    ಬೆಂಗಳೂರು: ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣಾಗಲಿದ್ದಾರೆ.

    ಇಂದು ಚರ್ಚೆ ಮುಗಿಯುವವರೆಗೂ ಶಾಸಕರು ಸೈಲೆಂಟ್ ಆಗಿರಲು ಸೂಚನೆ ನೀಡಲಾಗಿದೆ. ಇಂದು ಸದನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಮಾತ್ರ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರು ನಾಯಕರು ಹೊರತು ಪಡಿಸಿ ಇನ್ನೆಲ್ಲ ಶಾಸಕರು ಇಂದು ಸಹ ಮೌನಕ್ಕೆ ಶರಣಾಗಲಿದ್ದಾರೆ.

    ಬಿಜೆಪಿ ಪಾಳೆಯ ಅದೇ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಇಂದು ಸರ್ಕಾರ ಪತನವಾಗುತ್ತೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಸೋಮವಾರವೇ ಸ್ಪೀಕರ್ ಸರ್ಕಾರದ ವಿರುದ್ಧ ಅಲ್ಲಲ್ಲಿ ಚಾಟಿ ಬೀಸಿ ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಇಂದು ಸ್ಪೀಕರ್ ತಾವು ನೀಡಿದ್ದ ಮಾತಿಗೆ ತಪ್ಪಲಾರರು ಎನ್ನುವ ಎನ್ನುವ ಭರವಸೆಯಲ್ಲಿ ಇದ್ದಾರೆ.

    ಸೋಮವಾರದ ರಾತ್ರಿ 11.30ರ ವೇಳೆಗೆ ಸ್ಪೀಕರ್, ಇಡೀ ರಾಜ್ಯದ ಜನರು ನಮ್ಮ ನಡವಳಿಕೆಗಳನ್ನು ನೋಡುತ್ತಿದ್ದಾರೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನಾನು ರಾತ್ರಿ 11 ಗಂಟೆಗೆಯವರೆಗೂ ಇಲ್ಲಿಯೇ ಕೂರುತ್ತೇನೆ. ಯಾರು ಬೇಕಾದರೂ ಚರ್ಚೆ ಮಾಡಿ. ಇವತ್ತೇ ವಿಶ್ವಾಸಮತದ ನಿರ್ಣಯದ ಪ್ರಕ್ರಿಯೆಯನ್ನು ಮುಗಿಸೋಣ ಎಂದು ಹೇಳಿದರು.

    ಸಿದ್ದರಾಮಯ್ಯನವರು ಎದ್ದು ನಿಂತು ಮಂಗಳವಾರ ಎಲ್ಲದ್ದಕ್ಕೂ ಅಂತ್ಯ ಹಾಡೋಣ ಎಂದಾಗ ಸ್ಪೀಕರ್ ಎಷ್ಟು ಗಂಟೆಯ ಒಳಗಡೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ರಾತ್ರಿ 8 ಗಂಟೆ ಎಂದಾಗ ಸ್ಪೀಕರ್ ಇಷ್ಟು ಸಮಯ ನೀಡುವುದಿಲ್ಲ. ಸಂಜೆ 4 ಗಂಟೆಗೆ ಚರ್ಚೆ ಮುಗಿಯಬೇಕು ನಂತರ ಸಿಎಂ ಮಾತನಾಡಿ 6 ಗಂಟೆಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿ ಕಲಾಪವನ್ನು ಮುಂದೂಡಿದ್ದರು.

  • ಡೆಡ್‍ಲೈನ್ ಉಲ್ಲಂಘಿಸಿದ್ರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ

    ಡೆಡ್‍ಲೈನ್ ಉಲ್ಲಂಘಿಸಿದ್ರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ

    ಬೆಂಗಳೂರು: ರಾಜ್ಯಪಾಲರು ಬಹುಮತ ಸಾಬೀತಿಗೆ ವಿಧಿಸಿದ್ದ ಗಡುವನ್ನು ದೋಸ್ತಿ ಸರ್ಕಾರ ಮೀರಿದೆ. ಈಗ ಇಂದು ಕಲಾಪ ಮುಗಿಯುವುದರ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಮತ್ತೊಂದು ಡೆಡ್‍ಲೈನ್ ನೀಡಿದ್ದಾರೆ. ಒಂದು ವೇಳೆ ಈ ಡೆಡ್‍ಲೈನ್ ಒಳಗಡೆ ಬಹುಮತ ಸಾಬೀತು ಆಗದೇ ಇದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಯಿದೆ.

    ಬಿಜೆಪಿ ನಿಯೋಗ ಸರ್ಕಾರದ ವಿರುದ್ಧ ದೂರು ನೀಡಿದ ಬಳಿಕ ರಾಜ್ಯಪಾಲರು ಕಲಾಪಕ್ಕೆ ವಿಶೇಷ ಅಧಿಕಾರಿಯನ್ನು ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಗುರುವಾರ ರಾತ್ರಿ ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದ್ದರು. ಇಷ್ಟಾಗಿಯೂ ಸರ್ಕಾರ ಈ ಆದೇಶವನ್ನು ಪಾಲಿಸಿರಲಿಲ್ಲ.

    ಇಂದು ರಾಜ್ಯಪಾಲರು ಎರಡನೇ ಡೆಡ್‍ಲೈನ್ ನೀಡಿದ್ದಾರೆ. ಈ ಗಡುವು ಮೀರಿದರೆ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುತ್ತಾರೆ. ಈ ವರದಿ ಆಧಾರಿಸಿ ಅಮಿತ್ ಶಾ ನೇತೃತ್ವದ ಗೃಹ ಇಲಾಖೆ ರಾಷ್ಟ್ರಪತಿ ಆಡಳಿತ ಹೇರಬೇಕೋ? ಬೇಡವೋ ಎನ್ನುವ ನಿರ್ಧಾರವನ್ನು ಕೈಗೊಳ್ಳಲಿದೆ.

    ಆರ್ಟಿಕಲ್ 175(2) ರಡಿ ವಿಶ್ವಾಸ ಮತಯಾಚಿಸಿ ಎಂದು ರಾಜ್ಯಪಾಲರೂ ಸಿಎಂಗೆ ಎರಡು ಬಾರಿ ಸೂಚಿಸಿದರೂ ಪಾಲನೆ ಆಗಿಲ್ಲ. ಈಗಾಗಲೇ ಎರಡು ಪಕ್ಷದ 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ವಿಶ್ವಾಸಮತ ಯಾಚಿಸಬೇಕಿತ್ತು. ಆದರೆ ರಾಜ್ಯಪಾಲರು ಬಹುಮತ ಸಾಬೀತಿಗೆ ವಿಧಿಸಿದ್ದ ಗಡುವನ್ನು ದೋಸ್ತಿ ಸರ್ಕಾರ ಮೀರಿದೆ. ಹೀಗಾಗಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.

  • ಮುರಿಯುತ್ತಿಲ್ಲ ಅತೃಪ್ತರ ಒಗ್ಗಟ್ಟು – ದೋಸ್ತಿಗಳು ಕಂಗಾಲು

    ಮುರಿಯುತ್ತಿಲ್ಲ ಅತೃಪ್ತರ ಒಗ್ಗಟ್ಟು – ದೋಸ್ತಿಗಳು ಕಂಗಾಲು

    ಬೆಂಗಳೂರು: ಅತೃಪ್ತರ ಹಠ ಕಂಡು ದೋಸ್ತಿ ನಾಯಕರು ದಿಕ್ಕು ಕಾಣದಂತಾಗಿದ್ದಾರೆ. ಪಕ್ಷದ ಹಿರಿಯ ನಾಯಕರ ಮನವೊಲಿಕೆಗೂ ಜಗ್ಗದ ಅತೃಪ್ತರ ಮೇಲೆ ವಿಪ್ ಅಸ್ತ್ರ ಪ್ರಯೋಗಿಸಲು ದೋಸ್ತಿಗಳು ಮುಂದಾಗಿದ್ದರೂ ಅತೃಪ್ತರು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ.

    ಹೌದು, ಸದನದಲ್ಲಿ ಕಾಲ ವಿಳಂಬ, ಕಾನೂನು ಕಗ್ಗಂಟ್ಟಿನ ಆಟಕ್ಕೆ ಅತೃಪ್ತರು ಬಗ್ಗುತ್ತಾರೆ ಎಂಬ ದೋಸ್ತಿಗಳ ಪ್ಲಾನ್ ಮಕಾಡೆ ಮಲಗಿದೆ. ಎಷ್ಟೇ ಕಾನೂನು ಕಗ್ಗಂಟ್ಟಿಗೆ ದೋಸ್ತಿಗಳು ಯತ್ನಿಸಿದರೂ ನಮ್ಮ ನಿರ್ಧಾರ ಅಚಲ, ನಮ್ಮ ಒಗಟ್ಟು ಹೀಗೆ ಇರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರೆಬೆಲ್ ಶಾಸಕರು ರವಾನಿಸಿದ್ದಾರೆ. ಅಲ್ಲದೆ ಇತ್ತ ರಾಜೀನಾಮೆ ವಾಪಾಸ್ ಪಡೆದ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ವಿರುದ್ಧ ಅತೃಪ್ತರು ಸಿಡಿದೆದ್ದಿದ್ದಾರೆ.

    ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ. ನಮ್ಮ ಗುರಿ, ನಿರ್ಧಾರ ಸ್ಪಷ್ಟವಿದೆ ಎಂಬ ಅತೃಪ್ತರ ಸಂದೇಶದಿಂದ ದೋಸ್ತಿಗಳು ಕಂಗಾಲಾಗಿದ್ದಾರೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸ್ ಪಡೆದಿರುವುದಕ್ಕೂ ನಮಗೂ ಸಂಬಂಧ ಇಲ್ಲ. ಅವರ ದಾರಿಗೆ ನಾವು ಬರಲ್ಲ, ಅವರನ್ನ ನಾವು ಫಾಲೋ ಮಾಡಲ್ಲ ಎಂದು ಅತೃಪ್ತ ಶಾಸಕರು ಧೃಢ ನಿರ್ಧಾರ ಮಾಡಿದ್ದಾರೆ. ಇದರಿಂದ ರಾಮಲಿಂಗಾ ರೆಡ್ಡಿ ಪುನರ್ ಆಗಮನ ಅತೃಪ್ತರ ಒಗ್ಗಟ್ಟು ಮುರಿಯೋಕೆ ಅಸ್ತ್ರ ಎಂಬ ದೋಸ್ತಿಗಳ ಲೆಕ್ಕಚಾರ ಸಂಪೂರ್ಣ ಉಲ್ಟಾ ಆಗಿದೆ.

    ಸಂಧಾನಕ್ಕೂ ಮಣಿಯುತ್ತಿಲ್ಲ, ರಾಮಲಿಂಗಾ ರೆಡ್ಡಿ ಯೂಟರ್ನ್ ಗೂ ಅತೃಪ್ತರು ಬದಲಾಗುತ್ತಿಲ್ಲ. ಇತ್ತ ಅತೃಪ್ತರು ವಿಪ್ ಅಸ್ತ್ರಕ್ಕೂ ಹೆದರುತ್ತಿಲ್ಲ. ಈ ರೆಬೆಲ್ ಶಾಸಕರ ಒಗ್ಗಟ್ಟು ಸಮಿಶ್ರ ಸರ್ಕಾರದ ಹಡಗನ್ನು ಮುಳುಗಿಸುತ್ತೆ ಎಂಬ ಮಾತುಗಳು ಕೇಳಿಬರುತ್ತಿದೆ.

  • ಎಲೆಕ್ಷನ್‍ಗೆ ಹೋಗೋಣ, ಇಲ್ಲ ವಿರೋಧ ಪಕ್ಷವಾಗಿ ಕೂರೋಣ: ಮಂಡ್ಯದ ಕೈ ನಾಯಕ

    ಎಲೆಕ್ಷನ್‍ಗೆ ಹೋಗೋಣ, ಇಲ್ಲ ವಿರೋಧ ಪಕ್ಷವಾಗಿ ಕೂರೋಣ: ಮಂಡ್ಯದ ಕೈ ನಾಯಕ

    ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಂಡ್ಯದ ಕೈ ನಾಯಕ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿಯೂ ಸರ್ಕಾರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಇದರಿಂದ ಜೊತೆಲಿದ್ದಂತಹ ಕಾಂಗ್ರೆಸ್ ಪಕ್ಷ ನೋವು ಅನುಭವಿಸಬೇಕಾಗುತ್ತದೆ. ಜೆಡಿಎಸ್ ನವರರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಎಲೆಕ್ಷನ್‍ಗೆ ಹೋಗೋಣ ಇಲ್ಲ ವಿರೋಧ ಪಕ್ಷವಾಗಿ ಕೂರೋಣ” ಎಂದು ಬರೆದು ಈ ಮೂಲಕ ತಮ್ಮ ನಿರ್ಧಾರವನ್ನು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

    ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ಧ. ಆದರೆ ಇದೇ ತರ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮ ನಾಯಕರು ಇದನ್ನ ಸರಿಪಡಿಸಬೇಕು ಇಲ್ಲ, ಒಂದು ಪೂರ್ಣ ಪ್ರಮಾಣದ ತೀರ್ಮಾನ ತೆಗೆದುಕೊಳ್ಳಬೇಕು. ಆಗ್ಲಿಲ್ಲ ಅಂದರೆ ಮುಂದೆ ಪಕ್ಷವನ್ನು ಈ ಸ್ಥಿತಿಗೆ ಬರದೆ ಇರುವಂತೆ ನೋಡಿಕೊಳ್ಳವುದಕ್ಕೆ ಪಕ್ಷದ ಎಲ್ಲ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

    ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡುವುದಕ್ಕೆ ಹೋಗಲ್ಲ. ಆದರೆ ಈಗಿನ ನಡವಳಿಕೆ ನೋಡುತ್ತಿದ್ದರೆ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣುತ್ತಿಲ್ಲ. ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ ಎಂದು ಈಗ ಕೆಲವರಿಗೆ ಮನವರಿಕೆಯಾಗಿದೆ. ನಾನು ಕಾದು ನೋಡುತ್ತೀನಿ. ಹೆಚ್ಚು ದಿನ ಉಳಿಯಲ್ಲ. ಈಗಾಗಲೇ ಜನ ಲೋಕಸಭಾ ಚುನಾವಣೆಯಲ್ಲಿ ಒಂದು ಸಾರಿ ತೋರಿಸಿದ್ದಾರೆ. ಇನ್ನು ಮತ್ತೆ ಅದನ್ನೇ ಮಾಡಿದರೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಬಿಡಿ, ನನ್ನೊಬ್ಬನ ಕೈಲಿ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಚುನಾವಣಾ ಸೋಲಿಗೆ ದೋಸ್ತಿ ನಾಯಕರೇ ಕಾರಣ, ಪ್ರಣಾಳಿಕೆ ಪ್ರಿಂಟ್ ಆಗಲೇ ಇಲ್ಲ – ಮೊಯ್ಲಿ

    ಚುನಾವಣಾ ಸೋಲಿಗೆ ದೋಸ್ತಿ ನಾಯಕರೇ ಕಾರಣ, ಪ್ರಣಾಳಿಕೆ ಪ್ರಿಂಟ್ ಆಗಲೇ ಇಲ್ಲ – ಮೊಯ್ಲಿ

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರಿಗಷ್ಟೇ ದೋಸ್ತಿ ಸರ್ಕಾರದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಶಿಸ್ತು ಸಮನ್ವಯತೆ ಬರುವುದಿಲ್ಲ ಎಂದು ದೋಸ್ತಿ ಸರ್ಕಾರದ ನಾಯಕರ ವಿರುದ್ಧವೇ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಸಮಾಧಾನ ಹೊರಹಾಕಿದ್ದಾರೆ.

    ಚಿಕ್ಕಬಳ್ಳಾಪುರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ಸಚಿವ ಸಂಪುಟ ವಿಸ್ತರಣೆ ಪುನಾರಚನೆ ಬಗ್ಗೆ ದೋಸ್ತಿ ಸರ್ಕಾರದ ಯಾವುದೇ ನಾಯಕರು ನಮ್ಮ ಬಳಿ ಚರ್ಚೆ ಮಾಡಿಲ್ಲ. ಯಾರನ್ನು ಮಂತ್ರಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿಲ್ಲ. ಕೇವಲ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಸಿಎಂ ಕುಮಾರಸ್ವಾಮಿ, ಎಚ್‍ಡಿ ದೇವೇಗೌಡರೇ ಎಲ್ಲ ತೀರ್ಮಾನ ಮಾಡುತ್ತಿದ್ದಾರೆ ಎಂದರು.

    ಹಿರಿಯ ನಾಯಕರ ನಡುವೆ ಸಹ ಸರಿಯಾದ ಸಮಾಲೋಚನೆ ಮಾಡುತ್ತಿಲ್ಲ. ಈ ದೋಸ್ತಿ ಪಕ್ಷಗಳ ವ್ಯವಸ್ಥೆ ಸರಿಯಿಲ್ಲ. ಇದಲ್ಲದೇ ದೋಸ್ತಿ ಪಕ್ಷಗಳ ನಾಯಕರ ನಡುವೆ ಸಹ ಸಮನ್ವಯತೆಯ ಕೊರತೆ ಇದೆ. ವಲಸಿಗರು-ಹೊಸ ಕಾಂಗ್ರೆಸ್ಸಿಗರೆಂಬ ಬೇಧಭಾವ ಮಾಡಬಾರದು. ಎಲ್ಲರೂ ಕೂತು ಒಮ್ಮತದ ನಿರ್ಣಯ ತೆಗೆದುಕೊಳ್ಳಬೇಕು. ಹಳೆಯ ಹಾಗೂ ವಲಸಿಗರ ನಡುವೆ ಸಹ ಭಾವೈಕ್ಯತೆ ಮೂಡಬೇಕು ಅದೇ ರೀತಿ ದೋಸ್ತಿ ಪಕ್ಷಗಳ ನಾಯಕರ ನಡುವೆಯೂ ಒಮ್ಮತ ಮೂಡಬೇಕು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹಿನ್ನೆಡೆಗೆ ಸಮನ್ವಯತೆಯ ಕೊರತೆಯೇ ನೇರ ಕಾರಣ ಎಂದರು.

    ಜಾತ್ಯಾತೀತ ರಾಜ್ಯ ಕರ್ನಾಟಕದಲ್ಲಿ ಬಿಜೆಪಿ ಹೊರಗೆ ಇಡುವ ಉದ್ದೇಶದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿದ ರಾಹುಲ್ ಗಾಂಧಿಯವರ ನಿರ್ಧಾರ ಸರಿ ಇದೆ. ಆದರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಮಾತ್ರ ಸರ್ಕಾರ ನಡೆಸಿದರೆ ಸಾಲದು, ಎಲ್ಲ ಕಡೆಯಲ್ಲೂ ಸಮನ್ವಯತೆ ಮೂಡಿಸಬೇಕಿತ್ತು. ಇಲ್ಲದಿದ್ದರೆ ಅದು ಹೊಂದಾಣಿಕೆಯಾಗುವುದಿಲ್ಲ. ಕೇರಳದಲ್ಲೂ ಸಹ ಮೈತ್ರಿ ಸರ್ಕಾರ ರಚಿಸಿದ್ದೇವೆ. ಅಲ್ಲಿ ಏನೇ ಕಾರ್ಯಕ್ರಮ ರೂಪಿಸಿದರೂ ಎಲ್ಲಾ ಪಕ್ಷಗಳು ಒಂದುಗೂಡಿ ಮಾಡಿದ್ದೇವು. ಆದರೆ ಅಂತಹ ವ್ಯವಸ್ಥೆ ಕರ್ನಾಟಕದಲ್ಲಿ ನಿರ್ಮಾಣ ಆಗಲಿಲ್ಲ. ಕೇವಲ ಸರ್ಕಾರ ನಡೆಸಲಿಕ್ಕಷ್ಟೇ ತೃಪ್ತಿಪಟ್ಟುಕೊಂಡು ಕೂತರು. ಇದು ಸರಿಯಾಗಲಿಲ್ಲ ಎಂದು ಕಿರಿಕಾಡಿದರು.

    ಲೋಕಚುನಾವಣೆಗೆ ನನ್ನ ಅಧ್ಯಕ್ಷತೆಯಲ್ಲೇ ಪ್ರಣಾಳಿಕೆ ಸಹ ಸಿದ್ದಪಡಿಸಿದ್ದೇವು. ಆದರೆ ದೋಸ್ತಿ ಸರ್ಕಾರ ಅದನ್ನು ಪ್ರಿಂಟ್ ಸಹ ಮಾಡಲಿಲ್ಲ. ಅದು ಜನರಿಗೆ ಹಂಚಿಕೆ ಮಾಡಬೇಕಿತ್ತು. ಅದನ್ನು ಸಹ ಮಾಡಲಿಲ್ಲ. ಇದರಿಂದ ಜನರ ಮನಸ್ಸಿನಲ್ಲೂ ಸಹ ದೋಸ್ತಿ ಸರ್ಕಾರ ಎಂದು ಬರುವಂತೆ ಮಾಡಲಾಗಲಿಲ್ಲ. ಲೋಕಸಭಾ ಚುನಾವಣೆಗೆ ಹಠಾತ್ ಆಗಿ ಸಮನ್ವಯತೆ ಇಲ್ಲದೆ ಮಾಡಿದ್ದೇವೆ. ಆದರಿಂದ ಜಯ ಸಿಗಲಿಲ್ಲ. ನಿಗಮ ಮಂಡಳಿ, ಸಚಿವ ಸ್ಥಾನ ಹಂಚಿಕೆ ಸಮರ್ಪಕವಾಗಿ ಆಗಬೇಕು. ಅಧಿಕಾರ ಎಲ್ಲರಿಗೂ ಹಂಚಿಕೆಯಾಗಬೇಕು ಎಂದರು.

    ಸಚಿವ ಸ್ಥಾನ ಹಂಚಿಕೊಂಡರಷ್ಟೇ ಸಾಲದು. ತಳ ಮಟ್ಟದಲ್ಲೂ ಸಹ ಅಧಿಕಾರದ ಹಂಚಿಕೆ ಆಗಬೇಕು. ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ರಚನೆ ಆಗಬೇಕಿತ್ತು. ಅದು ಯಾವುದು ಆಗದ ಕಾರಣ ಸಮನ್ವಯತೆಯ ಕೊರತೆಯೇ ಸೋಲಿಗೆ ಕಾರಣ ಆಯಿತು ಎಂದು ವೀರಪ್ಪ ಮೊಯ್ಲಿ ವಿಮರ್ಶಿಸಿದರು. ಈ ಎಲ್ಲಾ ಕಾರಣಗಳಿಂದ ಮೈತ್ರಿ ವಿಫಲವಾಗಿ ಸೋಲುವಂತಾಯಿತು ಎಂದು ವೀರಪ್ಪ ಮೊಯ್ಲಿ ಅಸಮಾಧಾನ ಹೊರಹಾಕಿದರು.

  • ಆಪರೇಷನ್ ಮಾಡಿ ಎಂದು ಅವರೇ ಮುಂದೆ ಬರ್ತಿದಾರೆ- ರಾಘವೇಂದ್ರ ಟಾಂಗ್

    ಆಪರೇಷನ್ ಮಾಡಿ ಎಂದು ಅವರೇ ಮುಂದೆ ಬರ್ತಿದಾರೆ- ರಾಘವೇಂದ್ರ ಟಾಂಗ್

    ಶಿವಮೊಗ್ಗ: ಈಗ ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲ. ಅವರೇ ಆಪರೇಷನ್ ಮಾಡಿ ಎಂದು ಮುಂದೆ ಬರುತ್ತಿದ್ದಾರೆ. ದೋಸ್ತಿ ಪಕ್ಷದ ನಾಯಕರ ಗೊಂದಲಗಳಿಂದಾಗಿ ಸರ್ಕಾರ ಬಿದ್ದರೆ ಅಚ್ಚರಿಯೇನಿಲ್ಲ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟಾಂಗ್ ಕೊಟ್ಟಿದ್ದಾರೆ.

    ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲ. ಅವರೇ ಆಪರೇಷನ್ ಮಾಡಿ ಎಂದು ಮುಂದೆ ಬರುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಹೊರಟ್ಟಿ ಅವರು ವಿಧಾನಸಭೆ ವಿಸರ್ಜನೆ ಮಾಡಿ ಎಂದಿದ್ದಾರೆ. ಅವರ ಗೊಂದಲಗಳಿಂದಾಗಿ ಸರ್ಕಾರ ಬಿದ್ದರೆ ಅಚ್ಚರಿ ಏನಿಲ್ಲ ಎಂದು ಹೇಳಿದರು.

    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ನಿರೀಕ್ಷೆಯಂತೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಸಂಘಟನೆಯಲ್ಲಿ ಮೂರು ವರ್ಷಕ್ಕೊಮ್ಮೆ ಅಧ್ಯಕ್ಷ ಬದಲಾವಣೆ ಪ್ರಕ್ರಿಯೆ ಸಹಜವಾಗಿಯೇ ನಡೆಯುತ್ತದೆ. ಬಿಜೆಪಿ ಪ್ರಜಾಪ್ರಭುತ್ವ ತತ್ವವನ್ನು ಅಳವಡಿಸಿಕೊಂಡಿರುವ ಪಕ್ಷ. ಈ ಹಿನ್ನಲೆಯಲ್ಲಿ ಪಕ್ಷದ ನಾಯಕರುಗಳ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.

    ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿವೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಸಮೀಕ್ಷೆಗಳು ಮಾಹಿತಿ ನೀಡಿವೆ. ನೂರಕ್ಕೆ ನೂರರಷ್ಟು ಈ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಲಿವೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಹಾಕಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಅದೆಲ್ಲವೂ ಸುಳ್ಳಾಗಲಿದೆ ಎಂಬುದನ್ನ ಸಮೀಕ್ಷೆಗಳು ಹೇಳುತ್ತಿವೆ ಎಂದು ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

  • ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ರಾಹುಲ್ ಗಾಂಧಿ!

    ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ರಾಹುಲ್ ಗಾಂಧಿ!

    ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕವೂ ರಾಜ್ಯದ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ದೃಢ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಅವರ ಜೊತೆ ಸೌಮ್ಯ ಸಂಬಂಧವನ್ನು ಕಾಯ್ದುಕೊಳ್ಳಿ ಎಂದು ಮೈತ್ರಿಭಂಗಕ್ಕೆ ಕಾರಣವಾಗುವ ವಿವಾದಾತ್ಮಕ ಹೇಳಿಕೆಯನ್ನು ಯಾರೂ ನೀಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಸಭೆಯಲ್ಲಿ ಕೈ ಪಕ್ಷದ ಯಾವುದೇ ನಾಯಕರು ಜೆಡಿಎಸ್ ವಿರುದ್ಧ ಮಾತನಾಡಬಾರದು. ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ಮೈತ್ರಿ ನಿಯಮ ಪಾಲನೆ ಮಾಡದಿದ್ದರೆ ಹಾಗೂ ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಯನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎನ್ನಲಾಗಿದೆ.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಹುಲ್ ಭಾನುವಾರದಂದು ಮಹತ್ವದ ಸಭೆ ನಡೆಸಿದರು. ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಬೇಕು. ಪಾರ್ಲಿಮೆಂಟ್ ಎಲೆಕ್ಷನ್ ಫಲಿತಾಂಶ ಬರುತ್ತಿದ್ದಂತೆ ಬಿರುಸಿನ ರಾಜಕೀಯ ಚಟುವಟಿಕೆ ನಡೆಯಬಹುದು. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ಸಾಧ್ಯತೆಗಳಿವೆ ಎಂದಿದ್ದಾರೆ.

    ಈ ವೇಳೆ ಕರ್ನಾಟಕದ ಮೈತ್ರಿಯಲ್ಲಿ ಗೊಂದಲವಾದರೆ ಕಷ್ಟವಾಗುತ್ತದೆ. ಕೇಂದ್ರದಲ್ಲಿ ಬಿಜೆಪಿಯನ್ನು ದೂರವಿಡಲು ಕರ್ನಾಟಕದ ಮೈತ್ರಿಯೇ ಅಡಿಪಾಯ. ಒಂದು ವೇಳೆ ಮಹಾಮೈತ್ರಿಕೂಟದಲ್ಲಿ ಏರುಪೇರು ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಅವರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಅವರನ್ನು ಕರೆಸಿ ಕೆಲವು ನಾಯಕರು ಸಿಎಂ ಕುಮಾರಸ್ವಾಮಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದ್ದರು ಎನ್ನಲಾಗಿತ್ತು. ಅಲ್ಲದೆ ರಾಜ್ಯದಲ್ಲಿ ಬಹುತೇಕ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಎಂಬ ಹೇಳಿಕೆ ಕೊಡುತ್ತಿರುವುದು ದೋಸ್ತಿ ಸರ್ಕಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ರಾಹುಲ್ ಸಭೆ ಬಳಿಕ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಬಗ್ಗೆ ಉತ್ತಮ ಚರ್ಚೆಯಾಗಿದೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬಲಗೊಳಿಸಲು ಸಮಾಲೋಚಿಸಲಾಗಿದೆ. ಮೇ 23ರ ಫಲಿತಾಂಶ ಕಾಂಗ್ರೆಸ್ ಮೈತ್ರಿಕೂಟಕ್ಕೆ ದೊಡ್ಡ ಶಕ್ತಿ ನೀಡುವ ವಿಶ್ವಾಸವಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಹಾಗೆಯೇ ಇನ್ನೊಂದು ಟ್ವೀಟ್‍ನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆ ತಂದೊಡ್ಡುವ ವಿವಾದಾತ್ಮಕ ಹೇಳಿಕೆಯನ್ನು ಯಾರೂ ನೀಡಬಾರದು. ಕಾಂಗ್ರೆಸ್ ಜತೆಗೆ ಜೆಡಿಎಸ್ ಮುಖಂಡರಿಗೂ ಇದು ಅನ್ವಯವಾಗುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ಮುಖ್ಯವಾಗಬೇಕು ಮನವಿ ಮಾಡಿಕೊಂಡಿದ್ದರು.

  • ಪ್ರಧಾನಿ ಪೂಜೆ ಮಾಡಬಹುದು, ಸಿಎಂ ಪೂಜೆ ಮಾಡಬಾರದೇ: ರೇವಣ್ಣ ಪ್ರಶ್ನೆ

    ಪ್ರಧಾನಿ ಪೂಜೆ ಮಾಡಬಹುದು, ಸಿಎಂ ಪೂಜೆ ಮಾಡಬಾರದೇ: ರೇವಣ್ಣ ಪ್ರಶ್ನೆ

    ಹಾಸನ: ಪ್ರಧಾನಮಂತ್ರಿಯೇ ದೀಪ ಬೆಳಗಿಸಿ ಪೂಜೆ ಮಾಡಬಹುದು. ಆದರೆ ಕುಮಾರಸ್ವಾಮಿ ಪೂಜೆ ಮಾಡಬಾರದೇ ಎಂದು ಸಚಿವ ಹೆಚ್.ಡಿ.ರೇವಣ್ಣ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಮಗನಿಗಾಗಿ ಪೂಜೆಗೆ ಹೋಗಿದ್ದಾರೆ ಅಂತ ಜಗದೀಶ್ ಶೆಟ್ಟರ್ ಆರೋಪಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಪ್ರಧಾನಮಂತ್ರಿಯೇ ದೀಪ ಬೆಳಗಿ ಪೂಜೆ ಮಾಡ್ತಾರೆ ಆದರೆ ಕುಮಾರಸ್ವಾಮಿ ಪೂಜೆ ಮಾಡಬಾರದಾ? ಮಗನಿಗಾಗಿ ಅವರು ಪೂಜೆ ಮಾಡಿದರೆ ತಪ್ಪೇನಿದೆ? ಟಂಪಲ್ ರನ್ ಅಂತಾರೆ ಯಾಕೆ ನಾವು ಟೆಂಪಲ್ ಗೆ ಹೋಗಬಾರದೇ ಎಂದು ವಿರೋಧ ಪಕ್ಷದವರಿಗೆ ಪ್ರಶ್ನೆ ಹಾಕಿದ್ದಾರೆ.

    ಕಾಂಗ್ರೆಸ್ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಚರ್ಚೆ ವಿಚಾರ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೋಡಿಕೊಳ್ಳುತ್ತಾರೆ. ಫಲಿತಾಂಶದ ಬಳಿಕ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಯಾರೂ ತಲೆಕೆಡಿಸಿಕೊಳ್ಳಬೇಡಿ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಅಧಿಕಾರದ ದಾಹ ಹೆಚ್ಚಾಗಿದೆ ಎಂದು ಟಾಂಗ್ ನೀಡಿದರು.

    ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪರವರು ಬರಗಾಲ ನಿಭಾಯಿಸಬೇಕು ಅಂತಾರೆ. ಮತ್ತೊಂದು ಕಡೆ ಕೆಲಸವಾಗಬಾರದು ಎಂದು ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಎಂದು ಅರ್ಜಿ ಕೊಡುತ್ತಿದ್ದಾರೆ. ಬರಗಾಲ ನಿಭಾಯಿಸಲು ಹಾಸನ ಜಿಲ್ಲೆಯಲ್ಲಿ 8 ಕೋಟಿ ಹಣ ಪಿಡಿ ಖಾತೆಯಲ್ಲಿದೆ. ಜಿಲ್ಲಾಧಿಕಾರಿ ಈವರೆಗೆ ಬರ ನಿಭಾಯಿಸಲು ಒಂದೇ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲಾಧಿಕಾರಿ ಯಾವುದೇ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ವಿಪಕ್ಷದವರು ಒಂದುಕಡೆ ಅರ್ಜಿ ಬರೆಯೋದು ಮತ್ತೊಂದು ಕಡೆ ಬರ ನಿಭಾಯಿಸಿಲ್ಲ ಅಂತಾರೆ. ಹೀಗಿರುವಾಗ ಬರ ನಿಭಾಯಿಸುವುದು ಹೇಗೆ ಎಂದು ಮುಖ್ಯ ಚುನಾವಣಾ ಆಯುಕ್ತರೇ ಹೇಳಬೇಕು. ಬರ ನಿರ್ವಹಣೆ ಮಾಡುವ ಬಗ್ಗೆ ಚುನಾವಣಾ ಆಯುಕ್ತರು ಮತ್ತು ಮುಖ್ಯ ಕಾರ್ಯದರ್ಶಿ ಗಮನಹರಿಸಬೇಕು. ಜಿಲ್ಲಾಧಿಕಾರಿ ಅವರ ಕರ್ತವ್ಯ ಮಾಡಬೇಕು ಎಂದರು.

  • ರೆಸಾರ್ಟ್, ಟೆಂಪಲ್ ರನ್ ಬಿಟ್ಟರೆ ಸಿಎಂಗೆ ಏನೂ ಕೆಲಸವಿಲ್ಲ: ವಿ. ಸೋಮಣ್ಣ ಟಾಂಗ್

    ರೆಸಾರ್ಟ್, ಟೆಂಪಲ್ ರನ್ ಬಿಟ್ಟರೆ ಸಿಎಂಗೆ ಏನೂ ಕೆಲಸವಿಲ್ಲ: ವಿ. ಸೋಮಣ್ಣ ಟಾಂಗ್

    ಲಬುರಗಿ: ಒಂದೆಡೆ ರೆಸಾರ್ಟ್ ಇನ್ನೊಂದೆಡೆ ಟೆಂಪಲ್ ರನ್, ಇವೆರಡು ಬಿಟ್ಟರೆ ಸಿಎಂ ಕುಮಾರಸ್ವಾಮಿ ಅವರಿಗೆ ಏನೂ ಕೆಲಸವಿಲ್ಲ ಅನಿಸುತ್ತೆ ಎಂದು ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ಕಾಂಗ್ರೆಸ್ ನವರಿಗೆ ಅಸ್ತಿತ್ವವೇ ಇಲ್ಲ. ಅವರು ತೋಡಿಕೊಂಡಿರುವ ಗುಂಡಿಯಲ್ಲಿ ಅವರೇ ಬಿದ್ದು ಹೋಗುತ್ತಾರೆ. ಯಾವತ್ತೂ ಕೂಡಾ ಕಲಿಯುಗ ಅಷ್ಟು ಸುಲಭ ಇಲ್ಲ. ಅವರ ಅವನತಿಯನ್ನು ಅವರೇ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ರೆಸಾರ್ಟ್ ಇನ್ನೊಂದೆಡೆ ಟೆಂಪಲ್ ರನ್, ಇವೆರಡು ಬಿಟ್ಟರೆ ಸಿಎಂ ಕುಮಾರಸ್ವಾಮಿ ಅವರಿಗೆ ಏನೂ ಕೆಲಸವಿಲ್ಲ ಅನಿಸುತ್ತೆ ಎಂದು ಟೀಕಿಸಿದರು.

    ಬಸವಣ್ಣನವರ ವಿಷಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮುಂದಾದರೆ ಅವರಂತಹ ಶತ ದಡ್ಡರು ಯಾರೂ ಇಲ್ಲ. ಜನರ ಕಷ್ಟ ಕೇಳಲು ಒಬ್ಬ ಅಧಿಕಾರಿ, ಸಿಎಂ ಇಲ್ಲ ಅನ್ನೋದು ವಿಪರ್ಯಾಸನಾ ಅಥವಾ ಹುಡುಗಾಟನಾ ಅಂತಾ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.

    ಮಲ್ಲಿಕಾರ್ಜುನ ಖರ್ಗೆ ಸಾಹೇಬರು ದೊಡ್ಡ ನಾಯಕರು. ತುಂಬಾ ದಿನ ಕಣ್ಣು ಮುಚ್ಕೊಂಡು ಹಾಲು ಕುಡಿಯಲು ಆಗಲ್ಲ. ಬೆಕ್ಕು ಕಣ್ಣು ಮುಚ್ಕೊಂಡು ಹಾಲು ಕುಡಿದ ಹಾಗೆ ನಾವು ಕೆಲಸ ಮಾಡಬಹುದು ಎಂಬ ಕಾಲ ಹೊರಟುಹೋಗಿದೆ. ಅವರು ಮಠಕ್ಕಾದರೂ ಹೋಗಲಿ, ದೇವಸ್ಥಾನಕ್ಕಾದರೂ ಹೋಗಲಿ. ಇನ್ನು ಮುಂದಾದರೂ ಅವರು ಆತ್ಮವನ್ನು ಶುದ್ಧವಾಗಿ ಇಟ್ಟುಕೊಂಡು ಎಲ್ಲರನ್ನೂ ಸಮಾನತೆಯಿಂದ ಕಾಣಲಿ ಎಂದು ಕಿಡಿಕಾರಿದರು.