Tag: ದೋಣಿ ದುರಂತ

  • ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ತಿರುವನಂತಪುರಂ: ಪ್ರವಾಸಿ ದೋಣಿ (Tourist Boat) ಮುಳುಗಡೆಯಾಗಿ 22 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಕೇರಳ ಸರ್ಕಾರ (Kerala Government) ಘೋಷಣೆ ಮಾಡಿದೆ.

    ಪ್ರವಾಸಿ ದೋಣಿ ದುರಂತ ಸಂಬಂಧ ಕೇರಳ ಸರ್ಕಾರವು ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ. ಪೊಲೀಸ್ ವಿಶೇಷ ತನಿಖಾ ತಂಡವು ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಿಎಂಒ ಮಾಹಿತಿ ನೀಡಿದೆ.

    ಇತ್ತ ಘಟನೆಯಲ್ಲಿ ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದು, ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಪಿಎಂಎನ್‍ಆರ್ ಎಫ್‍ನಿಂದ 2 ಲಕ್ಷ ರೂ.ವನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದರು.

    ಏನಿದು ಘಟನೆ?: ಸುಮಾರು 30 ಮಂದಿಯಿದ್ದ ಪ್ರವಾಸಿ ದೋಣಿಯು ಭಾನುವಾರ ಮಲಪ್ಪುರಂನ ತನೂರಿನ ತೂವಲ್ತೀರಂ ಕಡಲತೀರದ ಸಮೀಪ ಸಂಜೆ 7 ಗಂಟೆ ಸುಮಾರಿಗೆ ಮುಳುಗಡೆಯಾಗಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಸುಮಾರು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು

    ಈ ಸಂಬಂಧ ಮಲಪ್ಪುರಂ ಪೊಲೀಸರು ಮಾಧ್ಯಮದ ಜೊತೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯ ಬಳಿಕ ದುರಂತ ಸಂಬಂಧ ತನಿಖೆ ನಡೆಸುತ್ತೇವೆ. ಹೆಚ್ಚಿನ ಜನ ಹಾಕಿಕೊಂಡು ಹೋಗಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಘಟನೆಯ ಬಳಿಕ ದೋಣಿಯ ಮಾಲೀಕ ನಜಾರ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.

  • ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ರಾಂಚಿ: ಜಾರ್ಖಂಡ್‍ನ ಜಮ್ತಾರಾ ಜಿಲ್ಲೆಯ ಬಳಿಯ ನದಿಯಲ್ಲಿ ಇತ್ತೀಚೆಗಷ್ಟೇ ಪ್ರಯಾಣಿಕ ದೋಣಿ ಮುಳುಗಡೆಗೊಂಡಿದ್ದು, ಸೋಮವಾರ ಎನ್‌ಡಿಆರ್‌ಎಫ್ ತಂಡ ಆರು ಶವಗಳನ್ನು ಹೊರತೆಗೆದಿದ್ದಾರೆ ಮತ್ತು ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜಾರ್ಖಂಡ್‍ನ ಜಮ್ತಾರಾದ ದಾಮೋದರ್ ನದಿಯ ಬಾರ್ಬೆಂಡಿಯಾ ಸೇತುವೆಯ ಬಳಿ ಶುಕ್ರವಾರ ದೋಣಿ ಮುಳುಗಿ ಈ ದುರಂತ ಸಂಭವಿಸಿದೆ. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

    ಸೋಮವಾರ ಆರು ಮೃತದೇಹಗಳು ಪತ್ತೆಯಾಗಿದ್ದು, ಭಾನುವಾರ ಎಂಟು ಮಂದಿ ಶವ ಪತ್ತೆಯಾಗಿತ್ತು. ಇನ್ನೂ ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಒಟ್ಟು ಈವರೆಗೂ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಜಮ್ತಾರಾ ಉಪ ಆಯುಕ್ತ ಫೈಜ್ ಅಹ್ಮದ್ ಮುಮ್ತಾಜ್ ತಿಳಿಸಿದ್ದಾರೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಡೈವರ್‌ಗಳ ಹುಡುಕಾಟ ಬಹುತೇಕ ಮುಗಿದಿದೆ ಎಂದು ಅವರು ಹೇಳಿದರು. ಈ ಘಟನೆ ಕುರಿತಂತೆ ವಿಧಾನಸಭೆಯಲ್ಲಿ ನಿರ್ಸಾದ ಬಿಜೆಪಿ ಶಾಸಕಿ ಅಪರ್ಣಾ ಸೇನ್‍ಗುಪ್ತಾ ಅವರು ಕೇಳಿದ ಪ್ರಶ್ನೆಗೆ ಹೇಮಂತ್ ಸೋರೆನ್ ಅವರು, ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ವಿಪತ್ತು ನಿರ್ವಹಣಾ ಇಲಾಖೆಯಿಂದ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

    ನದಿಗೆ ಅಡ್ಡಲಾಗಿರುವ ಬಾರ್ಬೆಂಡಿಯಾ ಸೇತುವೆ ಕಾರ್ಯರೂಪಕ್ಕೆ ತಂದಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ವಿರೋಧ ಪಕ್ಷಗಳ ಹಲವಾರು ನಾಯಕರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಸೇತುವೆಯ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದ ಕಾರಣ ಜನರು ನದಿ ದಾಟಲು ನದಿ ಮಾರ್ಗದ ಮೂಲಕ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  • ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

    ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

    ಹಾವೇರಿ: ಕಾರವಾರ ಅರಬ್ಬಿ ಸಮುದ್ರದ ನಡುಗಡ್ಡೆ ಕೂರ್ಮಗಡ ನರಸಿಂಹದೇವರ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ಮಡಿದ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರ ಹಾಗೂ ಯತ್ನಳ್ಳಿಯ ಬೆಳವಲಕೊಪ್ಪ ಕುಟುಂಬಗಳ ಒಂಭತ್ತು ಜನರಿಗೆ ತಲಾ ಐದು ಲಕ್ಷ ರೂ. ಪರಿಹಾರದಂತೆ ಒಟ್ಟಾರೆ 45 ಲಕ್ಷ ರೂ. ಪರಿಹಾರ ಚೆಕ್‍ ಅನ್ನು ಕುಟುಂಬ ವರ್ಗಕ್ಕೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ, ದೋಣಿ ದುರಂತದಲ್ಲಿ ಮಡಿದ ಕುಟುಂಬದ ಸೋಮಪ್ಪ ಬಿ.ಬೆಳವಲಕೊಪ್ಪ ಸವಣೂರ ಇವರಿಗೆ 20 ಲಕ್ಷ ರೂ. ಚೆಕ್ ಹಾಗೂ ಎಂಟು ವರ್ಷದ ಬಾಲಕ ಗಣೇಶ ಪಿ.ಬೆಳವಲಕೊಪ್ಪ ಹಾಗೂ ಶ್ರೀಮತಿ ಕೇಶವ್ವ ಬಿ.ಬೆಳವಲಕೊಪ್ಪ ಅವರಿಗೆ 25 ಲಕ್ಷ ರೂ.ಗಳ ಚೆಕ್‍ಗಳನ್ನು ಸಚಿವರು ನೀಡಿದರು.

    ಕಾರವಾರ ಅರಬ್ಬಿಸಮುದ್ರದ ನಡುಗಡ್ಡೆ ಕೂರ್ಮಗಡ ದೋಣಿ ದುರಂತದಲ್ಲಿ 16 ಜನ ಜಲಸಮಾಧಿಯಾಗಿದ್ದು, ಈ ಪೈಕಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರು ಯತ್ನಳ್ಳಿಯ 9 ಜನ ದುರಂತದಲ್ಲಿ ಸಾವನ್ನಪ್ಪಿದ್ದರು. ಬಿ.ಸೋಮಪ್ಪ ಅವರ ಹೆಂಡತಿ ಶ್ರೀಮತಿ ಮಂಜುಳಾ ಎಸ್. ಬೆಳವಲಕೊಪ್ಪ, ಮಕ್ಕಳಾದ ಕಿರಣ, ಅರುಣಾ ಹಾಗೂ ಸಹೋದರಿ ಕೀರ್ತಿ ಸಾವನ್ನಪ್ಪಿದ್ದರು. ತಲಾ ಐದು ಲಕ್ಷ ರೂ.ದಂತೆ 20 ಲಕ್ಷ ರೂ. ಪರಿಹಾರ ಚೆಕ್‍ನ್ನು ಸೋಮಪ್ಪ ಅವರು ಗೃಹ ಸಚಿವರಿಂದ ಸ್ವೀಕರಿಸಿದರು. ಇದೇ ಗ್ರಾಮದ ಇನ್ನೊಂದು ಕುಟುಂಬದ ಪರಶುರಾಮ ಬಿ.ಬೆಳವಲಕೊಪ್ಪ, ಹೆಂಡತಿ ಭಾರತಿ ಬೆಳವಲಕೊಪ್ಪ, ಮಗಳಾದ ಸಂಜನಿ, ಸುಜಾತಾ, ಮಗ ಸಂಜಯ ಸೇರಿದಂತೆ ಐದು ಜನ ಮೃತಪಟ್ಟಿದ್ದು, ಪರಶುರಾಮ ಅವರ ಎರಡನೇ ಮಗನಾದ ಗಣೇಶ ಘಟನೆಯಲ್ಲಿ ಬದುಕಿ ಉಳಿದ್ದನು. ಮೃತರ ಮಗ ಗಣೇಶ ಹಾಗೂ ಅವರ ಅಜ್ಜಿ ಕೇಶವ್ವ (ಮೃತ ಪರಶುರಾಮ ತಾಯಿ) ಅವರಿಗೆ ಗೃಹ ಸಚಿವರು 25 ಲಕ್ಷ ರೂ. ಪರಿಹಾರದ ಚೆಕ್‍ನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾದ ಎಸ್.ಕೆ ಕರಿಯಣ್ಣನವರ, ಬ್ಯಾಡಗಿ ಕ್ಷೇತ್ರದ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿಗಳಾದ ಕೃಷ್ಣ ಭಾಜಪೇಯಿ, ಪೊಲೀಸ್ ಅಧೀಕ್ಷಕರಾದ ಕೆ.ಜಿ.ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‍ಪಿ ವಿಜಯಕುಮಾರ, ಜಿ.ಪಂ. ಸದಸ್ಯರಾದ ಸಿದ್ದರಾಜು ಕಲಕೋಟಿ, ಹಾಗೂ ಪೊಲೀಸ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.

  • ಮಹಾನಂದಾ ನದಿಯಲ್ಲಿ ದೋಣಿ ದುರಂತ- 7 ಮಂದಿ ಸಾವು, 28 ಮಂದಿ ರಕ್ಷಣೆ

    ಮಹಾನಂದಾ ನದಿಯಲ್ಲಿ ದೋಣಿ ದುರಂತ- 7 ಮಂದಿ ಸಾವು, 28 ಮಂದಿ ರಕ್ಷಣೆ

    ಕೋಲ್ಕತ್ತಾ (ಮಾಲ್ಡಾ): ಪಶ್ಚಿಮ ಬಂಗಾಳದಿಂದ ಬಿಹಾರಕ್ಕೆ ಪಯಣ ಬೆಳೆಸಿದ್ದ ದೋಣಿ ಕತಿಹಾರ್ ಪ್ರದೇಶದಲ್ಲಿರುವ ಮಹಾನಂದಾ ನದಿಯಲ್ಲಿ ಮುಳುಗಿದ್ದು, 7 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ದೋಣಿಯಲ್ಲಿದ್ದ ಪ್ರಯಾಣಿಕರು ಪಶ್ಚಿಮ ಬಂಗಾಳದ ಮಾಲ್ಡಾನಿಂದ ಬಿಹಾರದ ಕತಿಹಾರ್ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ಪಂಚಮಿ ಪ್ರಯುಕ್ತ ಮುಕುಂದಪುರ ಘಾಟ್ ಬಳಿ ಹರಿಯುವ ಮಹಾನಂದಾ ನದಿಯಲ್ಲಿ ದೋಣಿ ಸ್ಪರ್ಧೆ ಪ್ರತಿ ವರ್ಷ ನಡೆಸಲಾಗುತ್ತದೆ. ಆದ್ದರಿಂದ ಈ ಸ್ಪರ್ಧೆ ಮುಗಿಸಿ ಜನರು ಮನೆಗೆ ದೋಣಿಯಲ್ಲಿ ಹಿಂದಿರುತ್ತಿದ್ದಾಗ ಈ ದುರಂತ ನಡೆದಿದೆ. ಈ ದೋಣಿಯಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಸಂಜೆ ಸುಮಾರು 6.30ಕ್ಕೆ ಈ ಅವಘಡ ನಡೆದಿದೆ. ಇಲ್ಲಿಯವರೆಗೂ 28 ಜನರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ:ಗೋದಾವರಿಯಲ್ಲಿ ಮುಳುಗಿದ ಬೋಟ್ – 13 ಮಂದಿ ಸಾವು, 40 ಜನ ನಾಪತ್ತೆ

    ಸಾವನ್ನಪ್ಪಿದ 7 ಮಂದಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೋಣಿ ದುರಂತಕ್ಕೆ ನಿಖರ ಕಾರಣ ಹಾಗೂ ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ಆದರೆ ದೋಣಿಯಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣಕ್ಕೆ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

    ಕಳೆದ ತಿಂಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಕೂಡ ಭೀಕರ ದೋಣಿ ದುರಂತ ಸಂಭವಿಸಿತ್ತು. ಆ ದುರಂತದಲ್ಲಿ ಕನಿಷ್ಠ 15 ಜನ ಸಾವನ್ನಪ್ಪಿದ್ದರು. ಅಲ್ಲದೆ ಅನೇಕರು ನಾಪತ್ತೆಯಾಗಿದ್ದರು. ಗಂಡಿ ಪೋಚಮ್ಮ ದೇವಾಲಯದ ದರ್ಶನ ಮುಗಿಸಿ ಪಾಪಿಕೊಂಡಲು ಪ್ರವಾಸಿ ತಾಣದತ್ತ ಪ್ರವಾಸಿಗರು ಬರುತ್ತಿದ್ದ ವೇಳೆ ಮಾರ್ಗ ಮಧ್ಯ ದೋಣಿ ಮುಗಿಚಿ ಪ್ರಯಾಣಿಕರನ್ನು ಬಲಿ ಪಡೆದಿತ್ತು.

  • ಗಣೇಶ ವಿಸರ್ಜನೆ ವೇಳೆ ದೋಣಿ ದುರಂತ – 11 ಮಂದಿ ದುರ್ಮರಣ

    ಗಣೇಶ ವಿಸರ್ಜನೆ ವೇಳೆ ದೋಣಿ ದುರಂತ – 11 ಮಂದಿ ದುರ್ಮರಣ

    ಭೋಪಾಲ್: ಇಂದು ಬೆಳಗ್ಗೆ ಗಣೇಶ ವಿಸರ್ಜನೆ ವೇಳೆಯಲ್ಲಿ ದೋಣಿ ದುರಂತ ನಡೆದು 11 ಮಂದಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಖಟ್ಲಾಪುರ ಘಾಟ್ ಬಳಿ ನಡೆದಿದೆ.

    ಮುಂಜಾನೆ 4.30ರ ಹೊತ್ತಿಗೆ ಖಟ್ಲಾಪುರ ಘಾಟ್ ಬಳಿಯ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು 16 ಮಂದಿ ದೋಣಿಯಲ್ಲಿ ತೆರಳಿದ್ದರು. ಆದರೆ ಆಕಸ್ಮಿಕವಾಗಿ ದೋಣಿ ಪಲ್ಟಿಯಾಗಿ ಅದರಲಿದ್ದವರು ನೀರಿಗೆ ಬಿದ್ದಿದ್ದಾರೆ. ಈ ಬಗ್ಗೆ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತಂಡ ಸ್ಥಳಕ್ಕೆ ಆಗಮಿಸಿ 16 ಮಂದಿಯಲ್ಲಿ ಐವರನ್ನು ರಕ್ಷಣೆ ಮಾಡಿದ್ದು, 11 ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಖಿಲ್ ಪಟೇಲ್ ಹೇಳಿದ್ದಾರೆ.

    ಮುಳುಗು ತಜ್ಞರೊಂದಿಗೆ 40 ಮಂದಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಕೂಡಾ ಘಟನಾ ಸ್ಥಳದಲ್ಲಿ ಇರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

    ಮಧ್ಯ ಪ್ರದೇಶ ಸಚಿವ ಪಿ. ಸಿ. ಶರ್ಮಾ ಅವರು ದೋಣಿ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದೊಂದು ದುರದೃಷ್ಟಕರ ಸಂಗತಿ, ಜಿಲ್ಲಾಧಿಕಾರಿಗಳಿಂದ ಪರಿಹಾರವನ್ನು ವಿತರಿಸಲಾಗುವುದು ಎಂದಿದ್ದಾರೆ. ಅಲ್ಲದೆ ಈ ದುರಂತ ಪ್ರಕರಣ ಸಂಬಂಧ ತನಿಖೆ ನಡೆಸಲು ಸಚಿವರು ಸೂಚಿಸಿದ್ದಾರೆ.

  • ದೋಣಿ ಮುಗುಚಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸೇರಿ 5 ಮಕ್ಕಳ ಸಾವು

    ದೋಣಿ ಮುಗುಚಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸೇರಿ 5 ಮಕ್ಕಳ ಸಾವು

    ತಿರುವನಂತಪುರ: ಹಿನ್ನೀರಿನಲ್ಲಿ ದೋಣಿ ಮುಗುಚಿದ ಪರಿಣಾಮ ಆರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಮಣಪುರಂ ಜಿಲ್ಲೆಯ ಚಂಗರಕುಳಂ ಗ್ರಾಮದಲ್ಲಿ ನಡೆದಿದೆ.

    ಚಂಗರಕುಳಂ ಗ್ರಾಮದ ಬಳಿ ನಾರನಿಪುಜಂ ನದಿಯ ಹಿನ್ನೀರಿನಲ್ಲಿ ಈ ದೋಣಿ ದುರಂತ ನಡೆದಿದೆ. ವೈಶಣ್ (20), ಪ್ರಸೀನಾ (13), ಜನೀಶಾ (17), ಪೂಜಾ (13), ಅಭಿದೇವ್ (13) ಮತ್ತು ಆದಿನಾಥ್ (14) ದೋಣಿ ದುರಂತದಲ್ಲಿ ಮೃತ ದುರ್ದೈವಿಗಳು. ಇನ್ನು ಈ ದುರಂತದಲ್ಲಿ ಅಂಬಿಗ ವೇಲಾಯುಧ (55), ಫಾತಿಮಾ (9) ಮತ್ತು ಶಿಬಕಾ (11) ಬದುಕುಳಿದಿದ್ದಾರೆ.

    ಮಕ್ಕಳೆಲ್ಲ ತಮ್ಮ ಸಂಬಂಧಿ ಅಂಬಿಗನಾದ ವೇಲಾಯುಧ ಜೊತೆ ಜಲಾಶಯ ನೋಡಲು ಚಿಕ್ಕದಾದ ಬೋಟ್ ನಲ್ಲಿ ತೆರಳಿದ್ದರು. ಕೇವಲ ಇಬ್ಬರು ಸಾಮರ್ಥವುಳ್ಳ ಬೋಟ್ ನಲ್ಲಿ ಒಂಭತ್ತು ಜನ ಪ್ರಯಾಣಿಸಿದ್ರಿಂದ ನದಿಯ ಮಧ್ಯಭಾಗದಲ್ಲಿ ಬೋಟ್ ಮುಗುಚಿ ಬಿದ್ದಿದೆ. ವೇಲಾಯುಧ ರಿಗೆ ಈಜು ಬರುತ್ತಿದ್ದರಿಂದ ಫಾತಿಮಾ ಎಂಬ ಬಾಲಕಿಯನ್ನು ರಕ್ಷಿಸಿ, ತಾನು ಬದುಕುಳಿದಿದ್ದಾರೆ. ಇತ್ತ 11 ವರ್ಷದ ಶಿಬಕಾ ಈಜಿ ದಡ ಸೇರಿದ್ದಾನೆ. ದೋಣಿಯಲ್ಲಿದ್ದ ವೇಲಾಯುಧ ಮಗ ವೈಶಾಲ್ ಗೆ ಈಜು ಬರುತ್ತಿದ್ದರೂ ಮಕ್ಕಳನ್ನು ಬದುಕಿಸಲು ಹೋಗಿ ಜಲಸಮಾಧಿ ಆಗಿದ್ದಾನೆ.

    ಮೃತ ದೇಹಗಳನ್ನೆಲ್ಲಾ ನದಿಯಿಂದ ಹೊರ ತೆಗೆಯಲಾಗಿದೆ. ಬದುಕುಳಿದು ಬಂದವರನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ 38 ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಗುಚಿ ಬಿದ್ದಿದೆ.

    ಜಿಲ್ಲೆಯ ಪವಿತ್ರ ಸಂಗಮಂ ಘಾಟ್ ಬಳಿ ಈ ದುರಂತ ನಡೆದಿದೆ. ಬೋಟ್ ನಲ್ಲಿದ್ದ 11 ಜನರು ಕಣ್ಮರೆಯಾಗಿದ್ದು, ಇದೂವರೆಗೂ ಕೇವಲ 15 ಮೃತ ದೇಹಗಳು ಮಾತ್ರ ಪತ್ತೆಯಾಗಿವೆ. ಇನ್ನೂ 12 ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ ಪತ್ರಿಕೆಗಳು ವರದಿ ಮಾಡಿವೆ. ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ವ್ಯಸ್ಥವಾಗಿದ್ದಾರೆ. ಆದರೆ ಸಾವು- ನೋವಿನ ಬಗ್ಗೆ ನಿಖರ ಅಂಕಿ ಅಂಶಗಳು ಇದೂವರೆಗೂ ಲಭ್ಯವಾಗಿಲ್ಲ.

    ದುರಂತಕ್ಕೆ ಕಾರಣವೇನು?: ಇಂದು ಕಾರ್ತಿಕ ಮಾಸದ ಕೊನೆಯ ಭಾನುವಾರ. ಹಾಗಾಗಿ ಜನರು ಪವಿತ್ರ ಸಂಗಮಂ ಘಾಟ್ ತೆರಳಿದ್ದಾರೆ. ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪವಿತ್ರ ಸಂಗಮಂ ಇದೊಂದು ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಅನೇಕ ಪ್ರವಾಸಿಗರು ಪ್ರವಾಸಿ ಸ್ಥಳವನ್ನು ನೋಡಲು ಹೋಗುತ್ತಾರೆ. ಆದರೆ ಇಂದು ಕಾರ್ತಿಕ ಮಾಸ ಕೊನೆಯ ಭಾನುವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಇದೇ ಸ್ಥಳದಲ್ಲಿ ಗೋದಾವರಿ ಮತು ಕೃಷ್ಣಾ ನದಿಯ ಸಂಗಮವಾಗುತ್ತದೆ. ಪ್ರವಾಸಿಗರೆಲ್ಲರೂ ಭವಾನಿ ದ್ವೀಪದಿಂದ ಪವಿತ್ರ ಸಂಗಮಂ ನಲ್ಲಿ ನಡೆಯುವ ಪವಿತ್ರ ಆರತಿಯನ್ನು ಕಣ್ತುಂಬಿಸಿಕೊಳ್ಳಲು ತೆರಳುತ್ತಿದ್ರು.

    ಬೋಟ್ ನಲ್ಲಿದ್ದ ಹೆಚ್ಚಿನ ಸಂಖ್ಯೆಯ ಜನರು ಪ್ರಕಾಶಂ ಜಿಲ್ಲೆಯ ಒಂಗಲ್ ನಿವಾಸಿಗಳು ಎಂದು ತಿಳಿದು ಬಂದಿದ್ದು, ಎಲ್ಲರೂ ಕ್ರೀಡಾಕೂಟಗಳಲ್ಲಿ ಬಳಕೆಯಾಗುವ ಸಾಧರಾಣ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದರು.

    ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸುವಂತೆ ಆದೇಶ ನೀಡಿದ್ದಾರೆ.

  • 60 ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ – 19 ಸಾವು

    60 ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ – 19 ಸಾವು

    ಲಕ್ನೋ: ಉತ್ತರಪ್ರದೇಶದ ಭಾಗ್ಪತ್ ಬಳಿ 60 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಸುಮಾರು 19 ಜನ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಷ್ಟು ಮಂದಿ ಮುಳುಗಿರುವ ಆತಂಕ ವ್ಯಕ್ತವಾಗಿದೆ.

     

    ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಂಡೊಯ್ಯುತ್ತಿದ್ದುದ್ದರಿಂದ ಮಗುಚಿಬಿದ್ದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಈಗಾಗಲೇ 12 ಮಂದಿಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸಂದರ್ಭದಲ್ಲಿ ಜನರಿಂದ ಕಕ್ಕಿರಿದಿದ್ದ ದೋಣಿ ಹರಿಯಾಣ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಬಂಗಾಳಕೊಲ್ಲಿಯಲ್ಲಿ ದೋಣಿ ದುರಂತ – 9 ಪ್ರವಾಸಿಗರ ಸಾವು

    ಬಂಗಾಳಕೊಲ್ಲಿಯಲ್ಲಿ ದೋಣಿ ದುರಂತ – 9 ಪ್ರವಾಸಿಗರ ಸಾವು

    ಟುಟಿಕೋರಿನ್: ಬಂಗಾಳಕೊಲ್ಲಿಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಭಾನುವಾರ ಸಂಜೆ 5.30ರ ವೇಳೆಯಲ್ಲಿ ಪ್ರವಾಸಿಗರಿದ್ದ ಬೋಟ್ ಮಗುಚಿಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಟುಟಿಕೋರಿನ್‍ನಿಂದ 60 ಕಿ.ಮೀ ದೂರದಲ್ಲಿರುವ ಮನಪ್ಪಾಡು ಎಂಬಲ್ಲಿ ನಡೆದಿದೆ.

    ಐವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 9 ಮಂದಿಯ ಶವಗಳು ಸಿಕ್ಕಿವೆ. ರಕ್ಷಣಾ ಕಾರ್ಯದಲ್ಲಿ 11 ಮಂದಿಯನ್ನ ರಕ್ಷಿಸಲಾಗಿದೆ ಎಂದು ಟುಟಿಕೋರಿನ್ ಜಿಲ್ಲಾಧಿಕಾರಿ ಎಂ ರವಿಕುಮಾರ್ ತಿಳಿಸಿದ್ದಾರೆ.

    ಮಧುರೈ ಮತ್ತು ತಿರುಚ್ಚಿಯ ಮೂರು ಕುಟುಂಬಗಳು ಬೋಟ್‍ಗಳನ್ನ ಬುಕ್ ಮಾಡಿದ್ದಾರೆಂಬ ಮಾಹಿತಿ ಸದ್ಯಕ್ಕೆ ದೊರೆತಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಮಂದಿ ಬೋಟ್‍ನಲ್ಲಿ ಪ್ರಯಾಣಿಸುತ್ತಿದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ.