Tag: ದೈವ ಪಾತ್ರಿ

  • ಗಣೇಶೋತ್ಸವ ಮೆರವಣಿಗೆಯಲ್ಲಿ ದೈವಪಾತ್ರಿ ವೇಷ

    ಗಣೇಶೋತ್ಸವ ಮೆರವಣಿಗೆಯಲ್ಲಿ ದೈವಪಾತ್ರಿ ವೇಷ

    – ವಿವಾದಕ್ಕೀಡಾದ ನಂತ್ರ ಕ್ಷಮೆ ಕೇಳಿದ ಪಾತ್ರಧಾರಿ

    ಉಡುಪಿ: ದೈವದ ಪಾತ್ರಿಯ ವೇಷ ಧರಿಸಿ ವ್ಯಕ್ತಿಯೊಬ್ಬ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಘಟನೆ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಈ ಘಟನೆ ನಡೆದಿದೆ.

    ಗಣಪತಿ ಮೂರ್ತಿ ವಿಸರ್ಜನೆ ವೇಳೆ ವೈಭವದ ಶೋಭಾಯಾತ್ರೆ ನಡೆಯುತ್ತದೆ. ಮೆರವಣಿಗೆಯಲ್ಲಿ ಟ್ಯಾಬ್ಲೋ, ವಿವಿಧ ವೇಷಗಳಿರುತ್ತದೆ. ಈ ಮಧ್ಯೆ ಸ್ಥಳೀಯ ಸುಧಾಕರ್ ಎಂಬವರು ದೈವದ ಪಾತ್ರಿಯ ವೇಷ ಹಾಕಿದ್ದಾರೆ. ಆವೇಷ ಬಂದವರಂತೆ ನಟಿಸಿ, ದೈವದ ನುಡಿಕೊಡುವವರಂತೆ ಮಾತನಾಡಿ ಸ್ಥಳದಲ್ಲಿದ್ದವರನ್ನು ರಂಜಿಸಿದ್ದಾರೆ.

    ಆ ವೀಡಿಯೋ ಎಲ್ಲಾ ಕಡೆ ಈಗ ಹರಿದಾಡುತ್ತಿದೆ. ಭೂತಾರಾಧನೆಯಲ್ಲಿ ದೈವಪಾತ್ರಿಗೆ ಮಹತ್ವದ ಸ್ಥಾನವಿದೆ. ಈ ರೀತಿ ಅಣಕ ಮಾಡಿರುವುದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂದು ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ವೇಷಧಾರಿ ಸುಧಾಕರ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೈವಪಾತ್ರಿಯ ಪಾತ್ರಧಾರಿ ಸುಧಾಕರ್ ಕೊನೆಗೆ ಕ್ಷಮೆ ಕೇಳಿದ್ದಾರೆ.

    ಮೆರವಣಿಗೆ, ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ದೈವ, ದೇವರನ್ನು ವೇದಿಕೆಗೆ, ರಸ್ತೆಗೆ ತರಬಾರದೆಂದು ನಾಲ್ಕೈದು ವರ್ಷಗಳ ಹಿಂದೆ ಕರಾವಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಹಳೇ ಚಾಳಿಯನ್ನು ಶುರುಮಾಡಿರುವುದು ಆಸ್ತಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ಜನರ ನಂಬಿಕೆಯನ್ನು ಅಣಕ ಮಾಡಬಾರದು ಎಂಬ ಕೂಗು ಕೇಳಿಬಂದಿದೆ.

  • ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!

    ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!

    ಮಂಗಳೂರು: ಅನುಚಿತ ವರ್ತನೆ ತೋರಿದ ದೈವ ಪಾತ್ರಿಯೋರ್ವರ ಕೂದಲನ್ನು ಭಕ್ತರು ಬಲವಂತವಾಗಿ ಕತ್ತರಿಸಿ, ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದೆ.

    ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ದೌರ್ಜನ್ಯ ನಡೆದಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ. ದೈವ ಪಾತ್ರಿ ಲೊಕೇಶ್ ಅವರಿಗೆ ಜನರ ಗುಂಪೊಂದು ಪ್ರಶ್ನಿಸಿದ್ದು, ಕೈಯಲ್ಲಿನ ಖಡಗ ತೆಗೆಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಬಲವಂತವಾಗಿ ಪಾತ್ರಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಹಿರಿಯರು ತಡೆಯಲು ಯತ್ನಿಸಿದರೂ ಯುವಕರ ಗುಂಪು ಲೋಕೇಶ್ ಮೇಲೆ ಹಲ್ಲೆ ನಡೆಸಿದೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೈವ ಪಾತ್ರಿಗೆ ಅವಮಾನ ಮಾಡಿರೋ ಬಗ್ಗೆ ವಿರೋಧ ಕೇಳಿಬಂದಿದೆ. ಆದರೆ ಕೃತ್ಯ ಎಸಗಿದವರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.

    ಲೋಕೇಶ್ ಪೂಜಾರಿ ವೃತ್ತಿಯಲ್ಲಿ ದೈವದ ಪಾತ್ರಿಯಾಗಿದ್ದರೂ, ಸಲಿಂಗ ಕಾಮ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದೈವದ ಪಾತ್ರಿಗಳು ಇಂಥ ವರ್ತನೆ ತೋರಿದರೆ ಹೇಗೆ ಎನ್ನುವ ಆಕ್ರೋಶದಿಂದ ಯುವಕರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

    ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

    ಮಂಗಳೂರು: ಭೂತ ಕೋಲದ ವೇಳೆ ತೆಂಗಿನ ಮರದಿಂದ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದೈವ ಪಾತ್ರಿಯೊಬ್ಬರು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಸುಮೇಶ್(40) ಮೃತಪಟ್ಟ ದೈವ ಪಾತ್ರಿ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ ಎಂಬಲ್ಲಿ ಫೆಬ್ರವರಿ 21ರ ಮುಂಜಾನೆ ಈ ದುರ್ಘಟನೆ ಸಂಭವಿಸಿತ್ತು.

    ಆಗಿದ್ದೇನು? ಕೇರಳದಲ್ಲಿ ಬಪ್ಪರ್ಯನ್ ಭೂತ ಕೋಲದ ಸಂಪ್ರದಾಯದಂತೆ ತೆಂಗಿನ ಮರಕ್ಕೆ ಏರಿ ನರ್ತನ ಮಾಡುವ ಪದ್ದತಿ ಇದೆ. ದೈವ ಪಾತ್ರಿ ಸುಮೇಶ್, ತೆಂಗಿನ ಮರ ಏರಿ ನರ್ತನ ಮಾಡುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.

    ಸುಮೇಶ್ ನೇರವಾಗಿ ತೆಂಗಿನ ಮರ ಕೆಳಗೆ ಹಾಕಲಾಗಿದ್ದ ಬೆಂಕಿಯ ಕುಂಡಕ್ಕೆ ಬಿದ್ದಿದ್ದು, ಕೂಡಲೇ ಅವರನ್ನು ಕಣ್ಣೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಮೇಶ್ ಇಂದು ಸಾವನ್ನಪ್ಪಿದ್ದಾರೆ.

     

    ತೆಂಗಿನ ಮರದಿಂದ ದೈವ ಪಾತ್ರಿ ಬಿದ್ದು ಮೃತಪಡುವ ಎರಡನೇ ಪ್ರಕರಣ ಇದಾಗಿದೆ. ಇಲ್ಲಿ ಪಾತ್ರಧಾರಿ ತೆಂಗಿನ ಮರದಿಂದ ಬೀಳುತ್ತಿರುವ ವಿಡಿಯೋ ಮತ್ತು ಈ  ಭೂತಕೋಲ ಹೇಗೆ ನಡೆಯುತ್ತದೆ ಎಂದು ತೋರಿಸುವ ಮತ್ತೊಂದು ವಿಡಿಯೋವನ್ನು ನೀಡಲಾಗಿದೆ.

    https://www.youtube.com/watch?v=-0-JdrxIBAo