Tag: ದೈವಸ್ಥಾನ

  • ವಿಷ ಜಂತು ಕಡಿತಕ್ಕೊಳಗಾದವರಿಗೆ ಈ ಬಾವಿಯ ನೀರೇ ಸಂಜೀವಿನಿ!

    ವಿಷ ಜಂತು ಕಡಿತಕ್ಕೊಳಗಾದವರಿಗೆ ಈ ಬಾವಿಯ ನೀರೇ ಸಂಜೀವಿನಿ!

    ಮಂಗಳೂರು: ಈ ಬಾವಿಯ ನೀರು ಎಲ್ಲಾ ಬಾವಿಗಳಲ್ಲಿ ಸಿಗುವ ಮಾಮೂಲಿ ನೀರಲ್ಲ. ಬದಲಾಗಿ ಜೀವ ಉಳಿಸುವ ಸಂಜೀವಿನಿ. ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಆ ಬಾವಿಯ ನೀರನ್ನು ಕುಡಿದು, ಅಲ್ಲಿನ ಮಣ್ಣನ್ನು ಹಾಕಿಕೊಂಡರೆ ವಿಷವೆಲ್ಲಾ ಇಳಿದು ಬಿಡುತ್ತದೆ. ಆದರೆ ಆ ಬಾವಿಯ ನೀರು ವರ್ಷಕ್ಕೊಂದು ಬಾರಿ ಮಾತ್ರ ಸಿಗೋದು.

    ಹೌದು. ಮಂಗಳೂರಿನ ಕಟೀಲು ಸಮೀಪದ ಶಿಬರೂರು (Shibaroor) ಎಂಬಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನದ (Kodamanithaya Daiva) ಪವಿತ್ರ ಬಾವಿ ಇದು. ವರ್ಷಕ್ಕೊಂದು ಬಾರಿ ನಡೆಯುವ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಐದು ದಿನಗಳ ಕಾಲ ಮಾತ್ರ ಈ ಬಾವಿಯ ನೀರನ್ನು ತೆಗೆದು ಭಕ್ತರಿಗೆ ನೀಡಲಾಗುತ್ತದೆ. ಪುರಾತನ ಕಾಲದಲ್ಲಿ ಸ್ಥಳೀಯ ದೈವೀ ವೈದ್ಯರಾದ ತ್ಯಾಂಪಣ್ಣ ಶೆಟ್ಟಿ ಎಂಬವರು ತನ್ನಲ್ಲಿದ್ದ ವಿಷ ಹೀರುವ ಕಲ್ಲೊಂದನ್ನು ಲೋಕದ ಜನತೆಯ ಒಳಿತಿಗಾಗಿ ಈ ಬಾವಿಗೆ (Well) ಹಾಕಿದ್ದಾರೆ. ಹೀಗಾಗಿ ಆ ಶಕ್ತಿಯಿಂದಲೇ ಈ ಬಾವಿಯ ನೀರು ಯಾವುದೇ ರೀತಿಯ ವಿಷವನ್ನು ಹೀರಿಕೊಳ್ಳುತ್ತದೆ ಅನ್ನುವ ನಂಬಿಕೆ. ಹಿಂದಿನ ಕಾಲದಿಂದ ಇಂದಿನವರೆಗೂ ಉಳಿದುಕೊಂಡು ಬಂದಿದೆ.

    ಜಾತ್ರಾ ಮಹೋತ್ಸವದ 5 ದಿನದಲ್ಲಿ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಈ ಪವಿತ್ರ ನೀರನ್ನು ಕೊಂಡೊಯ್ಯಲು ಬರುತ್ತಾರೆ. ವರ್ಷದಲ್ಲಿ ಒಂದು ಸಲ ಮಾತ್ರ ಸಿಗುವ ನೀರನ್ನು ಅಲ್ಲೇ ತೀರ್ಥ ರೂಪದಲ್ಲಿ ಕುಡಿದು ನಂತರ ಕೊಂಡೊಯ್ಯುದು ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಈ ನೀರನ್ನು ಕುಡಿಯುವುದರಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಹೋಗುತ್ತದೆ. ಜೊತೆಗೆ ವಿಷಜಂತುಗಳು ಕಡಿದಂತಹ ಸಂದರ್ಭದಲ್ಲಿ ತಕ್ಷಣ ಈ ನೀರನ್ನು ಕುಡಿದು ನಂತರ ಈ ಕ್ಷೇತ್ರದಲ್ಲೇ ಸಿಗುವ ಮಣ್ಣನ್ನು ನೀರಲ್ಲಿ ಬೆರೆಸಿ ಗಾಯಕ್ಕೆ ಹಚ್ಚಿದರೆ ವಿಷ ಕಾರುತ್ತದೆ ಅನ್ನುವ ನಂಬಿಕೆ ಇಂದಿಗೂ ಉಳಿದಿದೆ. ನಾನಾ ಊರುಗಳಿಂದ ಬರುವ ಭಕ್ತರು ಈ ಆಧುನಿಕ ಯುಗದಲ್ಲೂ ಈ ನಂಬಿಕೆಯನ್ನು ಇಟ್ಟು ನೀರು ಹಾಗೂ ಮಣ್ಣನ್ನು ಕೊಂಡೊಯ್ಯಲು ಮುಗಿ ಬೀಳುತ್ತಾರೆ. ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ – ಕುಡಿದು ವಾಹನ ಚಾಲನೆ ಮಾಡಿದ್ರೆ ಜಪ್ತಿಯಾಗುತ್ತೆ ವಾಹನ

    ಈ ಪವಿತ್ರ ನೀರಿಗೆ ಒಂದು ವರ್ಷಗಳ ಕಾಲ ಶಕ್ತಿ ಇರುತ್ತದೆ. ಹೀಗಾಗಿ ಪ್ರತಿ ವರ್ಷವೂ ಹೊಸ ನೀರನ್ನು ಹಾಗೂ ಮಣ್ಣನ್ನು ಕೊಂಡೊಯ್ಯಲು ಭಕ್ತರು ಜಾತ್ರಾ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಇಂದಿಗೂ ಹಳ್ಳಿ ಪ್ರದೇಶದ ಜನ ವಿಷ ಜಂತುಗಳ ಕಡಿತಕ್ಕೊಳಗಾದರೆ ಈ ನೀರು ಹಾಗೂ ಮಣ್ಣಿನ ಮೊರೆ ಹೋಗುತ್ತಾರೆಯೇ ಹೊರತು ಆಸ್ಪತ್ರೆಗೆ ಹೋಗೋದಿಲ್ಲ. ಒಟ್ಟಿನಲ್ಲಿ ಈಗಿನ ಕಾಲದಲ್ಲೂ ಇಂತಹ ನಂಬಿಕೆ ಉಳಿಯಬೇಕಿದ್ದರೆ ಈ ಕ್ಷೇತ್ರದಲ್ಲಿ ಹಾಗೂ ಬಾವಿಯಲ್ಲಿ ದೈವಿ ಶಕ್ತಿ ಇದೆ ಅನ್ನೋದರಲ್ಲಿ ಸಂದೇಹವಿಲ್ಲ.

  • ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ಮಂಗಳೂರು: ದೈವಸ್ಥಾನದಲ್ಲಿ ವಿಕೃತಿ ಮೆರೆದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಸಾಹುಲ್ ಹಮೀದ್(27) ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಹೊರವಲಯದ ಕೈಕಂಬದ ಕಂದಾವರ ಎಂಬಲ್ಲಿನ ಕಂದಾವರ ಪದವು ಶ್ರೀ ಕೋಡ್ದಬ್ಬು ದೇವಸ್ಥಾನಕ್ಕೆ ಆರೋಪಿ ಅಕ್ರಮವಾಗಿ ಪ್ರವೇಶಿಸಿ ಕೃತ್ಯ ಎಸಗಿದ್ದಾನೆ.

    ರಾತ್ರಿ ಹೊತ್ತು ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿ ಆಯದಕಲ್ಲಿಗೆ ಹಾಗೂ ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಡಿದ್ದಾನೆ. ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಬಬ್ಬುಸ್ವಾಮಿಯ ದರ್ಶನ ನಡೆಸಿದ್ದರು. ದುಷ್ಕರ್ಮಿ ಪತ್ತೆಯಾಗಬೇಕೆಂದು ಪ್ರಾರ್ಥಿಸಿದರು. ಅಲ್ಲದೆ ಪೊಲೀಸ್ ಠಾಣೆಗೂ ದೂರು ನೀಡಿದರು. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ ಬಂಧನ ಯಾವಾಗ?: ಕಾಂಗ್ರೆಸ್ ಪ್ರಶ್ನೆ

    ದೂರು ದಾಖಲಾದ ಕೆಲವೇ ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಸಾಹುಲ್ ಹಮೀದ್ ಬಳಲುತ್ತಿರುವುದಾಗಿ ಮಾಹಿತಿ ದೊರಕಿದೆ. ಕೈ ಗಾಯಮಾಡಿಕೊಂಡು ದೈವಸ್ಥಾನಕ್ಕೆ ಪ್ರವೇಶಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು

    ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, ಆರೋಪಿ ಸಾಹುಲ್ ನನ್ನು ಈಗಾಗಲೇ ಬಂಧನ ಮಾಡಿದ್ದೇವೆ. ಘಟನೆಯ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಯುವಕನ ಕೃತ್ಯದ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೆಡಿಕಲ್ ಟೆಸ್ಟ್ ವೇಳೆ ಆರೋಪಿ ಮಾನಸಿಕ ಅಸ್ವಸ್ಥ ಅಂತಾ ಕಂಡುಬಂದಿಲ್ಲ. ಆರೋಪಿ ಮಾಡಿರುವ ಕೃತ್ಯದ ಉದ್ದೇಶ ಗೊತ್ತಾಗಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುವುದರ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.

  • ಕೊರಗಜ್ಜನ ಬಳಿಕ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

    ಕೊರಗಜ್ಜನ ಬಳಿಕ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

    ಮಂಗಳೂರು: ನಗರದ ಕೊರಗಜ್ಜನ ಸನ್ನಿಧಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿ ವಿಕೃತಿ ಮೆರೆದವರಿಗೆ ದೇವರೇ ಉಗ್ರ ಶಿಕ್ಷೆ ನೀಡಿರುವುದು ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆಯಾಗಿದೆ.

    ಹೌದು. ಮಂಗಳೂರು ಹೊರವಲಯದ ಕೊಂಡಾಣ ಬಂಟ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಘಟನೆ ನಡೆದಿದೆ. ಮೂರು ತಿಂಗಳ ಹಿಂದಷ್ಟೇ ಕಾಣಿಕೆ ಹುಂಡಿ ತೆರೆಯಲಾಗಿತ್ತು. ಆ ಬಳಿಕ ಆಡಳಿತ ಸಮಿತಿ ಭಾನುವಾರ ಮತ್ತೆ ಹುಂಡಿ ತೆರೆದಾಗ ಕಾಂಡೋಮ್ ಇರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೈವ ಸ್ಥಳಗಳನ್ನು ಅಪವಿತ್ರಗೊಳಿಸಿದ್ದ ಓರ್ವ ರಕ್ತಕಾರಿ ಸಾವು – ಇನ್ನಿಬ್ಬರು ದೈವಗಳ ಮುಂದೆ ಶರಣು

    ಈ ಹಿಂದೆ ಮಂಗಳೂರಿನ ಅನೇಕ ದೈವಸ್ಥಾನಗಳ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಕಾಂಡೋಮ್ ಹಾಕಿದ ಬಳಿಕ ದೈವದ ಶಾಪಕ್ಕೆ ತುತ್ತಾಗಿ ಓರ್ವ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಅಲ್ಲದೇ ಕೊರಗಜ್ಜ ಮತ್ತು ಬಬ್ಬುಸ್ವಾಮಿ ಸಾನಿಧ್ಯಕ್ಕೆ ಬಂದು ಶರಣಾಗಿದ್ದರು. ಈ ಮಧ್ಯೆ ಇದೀಗ ಮತ್ತೆ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

  • ಭೀಕರ ಪ್ರವಾಹವಾದ್ರೂ `ರಕ್ತೇಶ್ವರಿ’ ಗುಡಿಗೆ ಏನೂ ಆಗಿಲ್ಲ- ದಿಡುಪೆಯಲ್ಲೊಂದು ಅಚ್ಚರಿ

    ಭೀಕರ ಪ್ರವಾಹವಾದ್ರೂ `ರಕ್ತೇಶ್ವರಿ’ ಗುಡಿಗೆ ಏನೂ ಆಗಿಲ್ಲ- ದಿಡುಪೆಯಲ್ಲೊಂದು ಅಚ್ಚರಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಪ್ರಾಕೃತಿಕ ವಿಕೋಪ, ನೆರೆ ಹಾವಳಿಗೆ ತುತ್ತಾಗಿ ಮನೆ, ಕೃಷಿಭೂಮಿ ನಾಶವಾಗಿ ಹೋಗಿದೆ. ಆದರೆ, ಇದರ ಮಧ್ಯೆ ಇದ್ದ ದೈವಸ್ಥಾನಗಳಿಗೆ ಯಾವುದೇ ಹಾನಿಯಾಗದೇ ಇರುವುದು ಅಚ್ಚರಿ ಮೂಡಿಸಿದೆ.

    ಜಲ ಸ್ಫೋಟಕ್ಕೆ ಮನೆ, ಸುತ್ತಲ ಕೃಷಿ ಭೂಮಿ ಕೊಚ್ಚಿ ಹೋದರೂ, ತುಳುನಾಡಿನ ಕಾರಣಿಕ ಶಕ್ತಿಯ ಗುಡಿಗಳಿಗೆ ಕಿಂಚಿತ್ತೂ ಹಾನಿಯಾಗಿಲ್ಲ. ಬೆಳ್ತಂಗಡಿ ತಾಲೂಕಿನ ದಿಡುಪೆ ಪ್ರದೇಶದಲ್ಲಿ ನೆರೆ ಹಾವಳಿಗೆ ಬೆಟ್ಟ ಸ್ಫೋಟಗೊಂಡು ಬೃಹತ್ ಮರಗಳು ಛಿದ್ರ, ಛಿದ್ರವಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು.

    ಮರಗಳ ದಿಮ್ಮಿಗಳ ಜೊತೆ ಬಂದ ನದಿಯ ಪ್ರವಾಹಕ್ಕೆ ತುತ್ತಾಗಿ ಸೇತುವೆ, ಆಸು-ಪಾಸಿನ ಮನೆ, ಕೃಷಿ ಭೂಮಿಯನ್ನೂ ಬಿಡದೆ ಸರ್ವನಾಶ ಮಾಡಿತ್ತು. ಆದರೆ ಅದೇ ಸ್ಥಳದಲ್ಲಿ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯಗಳಿದ್ದು, ಅವುಗಳು ಒಂದಿಂಚೂ ಧಕ್ಕೆಯಾಗದೆ ಉಳಿದಿವೆ.

    ಸ್ಥಳೀಯರಲ್ಲಿ ಈ ವಿದ್ಯಮಾನ ಆಶ್ಚರ್ಯ ತಂದಿದ್ದು, ದೈವೀ ಪವಾಡಕ್ಕೆ ಬೆರಗಾಗಿದ್ದಾರೆ.

  • ಕಾನತ್ತೂರಿಗೆ ಭೇಟಿ ನೀಡಿದ್ದು ನಿಜ, ಪ್ರಾರ್ಥನೆ ಏನನ್ನೋದು ನನಗೆ ಬಿಟ್ಟಿದ್ದು- ರಮಾನಾಥ ರೈ ಸ್ಪಷ್ಟನೆ

    ಕಾನತ್ತೂರಿಗೆ ಭೇಟಿ ನೀಡಿದ್ದು ನಿಜ, ಪ್ರಾರ್ಥನೆ ಏನನ್ನೋದು ನನಗೆ ಬಿಟ್ಟಿದ್ದು- ರಮಾನಾಥ ರೈ ಸ್ಪಷ್ಟನೆ

    ಮಂಗಳೂರು: ಕಾನತ್ತೂರು ದೈವಸ್ಥಾನಕ್ಕೆ ಭೇಟಿ ನೀಡಿ ದೂರು ನೀಡಿರುವ ಕುರಿತು ಮಾಜಿ ಸಚಿವ ರಮಾನಾಥ ರೈ ಸ್ಪಷ್ಟನೆ ನಿಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು ನಾನು ಕಾನತ್ತೂರಿಗೆ ಭೇಟಿ ನೀಡಿದ್ದೇನೆ. ನಾನೊಬ್ಬ ಪರಿಪೂರ್ಣ ಆಸ್ತಿಕವಾದಿ. ದೈವ ದೇವರುಗಳ ಮೇಲೆ ಅಚಲ ನಂಬಿಕೆ ಹೊಂದಿದ್ದೇನೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕಾನತ್ತೂರಿನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದಾರೆ, ಅದಕ್ಕಾಗಿ ಪ್ರಾರ್ಥಿಸಿದ್ದೇನೆ. ಏನು ಪ್ರಾರ್ಥನೆ ಅನ್ನೋದು ನನಗೆ ಬಿಟ್ಟಿದ್ದು. ಆರೋಪಿಗಳ ಪತ್ತೆಯಾಗಿದೆ, ಆದ್ರೂ ಆರೋಪ ಮಾಡಿರುವುದು ಯಾವ ನ್ಯಾಯ ಅಂತ ಪ್ರಶ್ನಿಸಿದ್ದಾರೆ.

    ತಮ್ಮ ಮೇಲಿನ ಅಪಪ್ರಚಾರವನ್ನು ಖಂಡಿಸಿ ರೈ ನ್ಯಾಯ ದೇಗುಲದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿತ್ತು. ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಗಳಲ್ಲಿ ಬಿ. ರಮಾನಾಥ ರೈ ಮೇಲೆ ಆರೋಪವೂ ಕೂಡಾ ಕೇಳಿಬಂದಿತ್ತು. ಅಲ್ಲದೇ ಈ ವಿಚಾರ ಮತಗಳ ಧೃವೀಕರಣಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆಗಳಿಂದ ಮನನೊಂದ ಮಾಜಿ ಸಚಿವ ರಮಾನಾಥ ರೈ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೂರು ಸಲ್ಲಿಸಿದ್ದರು ಎಂದು ವರದಿಯಾಗಿತ್ತು.

    ಶರತ್ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಅಪಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ನನಗೆ ಮಾನಸಿಕವಾಗಿ ತೀವ್ರ ನೋವುಂಟಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ಸುಮ್ಮನೇ ನನ್ನ ಮೇಲೆ ಆರೋಪ ಮಾಡಿದವರನ್ನು ಕರೆದು ವಿಚಾರಣೆ ನಡೆಸಿ ಎಂದು ದೇವಸ್ಥಾನದ ಸನ್ನಿಧಿಯಲ್ಲಿ ವಿನಂತಿ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದುಬಂದಿತ್ತು.

  • ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

    ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

    ಮಂಗಳೂರು: ವಿಧಾನಸಭಾ ಚುನಾವಣೆ ಘೋಷಣೆ ಮಧ್ಯೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ದೈವಸ್ಥಾನಕ್ಕೆ ಭೇಟಿ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ಸುರತ್ಕಲ್ ಬಳಿಯ ಹೊಸಬೆಟ್ಟು ಎಂಬಲ್ಲಿರುವ ಕೋರ್ದಬ್ಬು ದೈವಸ್ಥಾನಕ್ಕೆ ಮೊಯ್ದೀನ್ ಬಾವಾ ಭೇಟಿ ನೀಡಿದ್ದರು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ದೈವಸ್ಥಾನದವರ ಆಮಂತ್ರಣದ ಮೇರೆಗೆ ಶಾಸಕರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದೀನ್ ಬಾವ, ಹಿಂದೂಗಳ ಮತ ಸೆಳೆಯಲು ದೈವಸ್ಥಾನಕ್ಕೆ ಭೇಟಿ ನೀಡಿದ್ದಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆದರೆ ವಿಡಿಯೋದಲ್ಲಿ ಮೊಯ್ದೀನ್ ಬಾವಾ ಎಂದಿನಂತೆ ದೇವಸ್ಥಾನಕ್ಕೆ ತೆರಳಿ ಹಿಂದಿರುಗಿದ್ದಾರೆ.

    ಓಲೈಕೆಯ ರಾಜಕಾರಣವೇ ಆಗಿದ್ದರೂ, ಮೂಲಭೂತವಾದಿ ಮುಸ್ಲಿಮರು ಮಾತ್ರ ಈ ವಿಡಿಯೋವನ್ನು ವೈರಲ್ ಮಾಡಿದ್ದಲ್ಲದೆ, ಶಾಸಕರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮತಗಳನ್ನು ಪಡೆಯಲು ಶಾಸಕ ಬಾವಾ ಈ ರೀತಿಯ ನಾಟಕವಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ಆದರೆ ಶಾಸಕ ಬಾವಾ ಮಾತ್ರ, ಪ್ರತೀವರ್ಷದಂತೆ ಈ ಬಾರಿಯೂ ಭೇಟಿ ನೀಡಿದ್ದೇನೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

  • ಮಂಗಳೂರಿನ ದೈವಸ್ಥಾನದಲ್ಲಿ ನಡೆಯುತ್ತೆ ಮೀನು ಜಾತ್ರೆ!

    ಮಂಗಳೂರಿನ ದೈವಸ್ಥಾನದಲ್ಲಿ ನಡೆಯುತ್ತೆ ಮೀನು ಜಾತ್ರೆ!

    ಮಂಗಳೂರು: ನಗರದಲ್ಲಿರೋ ದೈವಸ್ಥಾನವೊಂದರ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಿದ್ದರು. ಆದರೆ ಅವರೆಲ್ಲ ಮೀನುಗಾರರು ಅಲ್ಲ. ಬದಲಾಗಿ ಅವರೆಲ್ಲ ಆ ದೈವಸ್ಥಾನದ ದೈವ ಭಕ್ತರು.

    ಹೌದು. ಮಂಗಳೂರಿನ ಚೇಳ್ಯಾರು ಶ್ರೀ ಧರ್ಮರಸು ಉಳ್ಳಾಲ ದೈವಸ್ಥಾನದ ಜಾತ್ರೆ ಆರಂಭಗೊಳ್ಳುವುದೇ ಭಕ್ತರು ಮೀನು ಹಿಡಿಯುವುದರೊಂದಿಗೆ.ತಾವು ಹಿಡಿದ ಮೀನನ್ನು ದೈವದ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಆ ಮೀನುಗಳನ್ನು ತಿಂದರೆ ರೋಗರುಜಿನಗಳು ಬರೋದಿಲ್ಲ ಅನ್ನುವ ನಂಬಿಕೆಯಂತೆ.

    ಮೇ ತಿಂಗಳ ಸಂಕ್ರಮಣದಂದು ಮುಂಜಾನೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನದಿ ಸಮೀಪ ಸೇರುತ್ತಾರೆ. ಈ ನದಿಗೆ ದೈವಸ್ಥಾನದ ಪ್ರಸಾದ ಹಾಕಿದ ನಂತರ ಸುಡುಮದ್ದು(ಪಟಾಕಿ)ಬಿಟ್ಟಾಗ ಎಲ್ಲರೂ ಒಟ್ಟಿಗೆ ನದಿಗಿಳಿಯುತ್ತಾರೆ. ಮಕ್ಕಳು ಮದುಕರೆನ್ನದೆ ಎಲ್ಲರೂ ನೀರಿಗಿಳಿದು ಮೀನಿನ ಬೇಟೆ ಆರಂಭಿಸುತ್ತಾರೆ. ತಾವೇ ತಂದಿರುವ ವಿವಿಧ ರೀತಿಯ ಬಲೆಗಳನ್ನು ಹಾಕಿ ಮೀನುಗಳನ್ನು ಹಿಡಿಯುತ್ತಾರೆ. ದೈವದ ಅನುಗ್ರಹದಿಂದ ಹೆಚ್ಚಿನ ಮೀನುಗಳು ಇರುತ್ತದೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ನದಿಗಿಳಿದ ಪ್ರತಿಯೊಬ್ಬರಿಗೂ ಪದಾರ್ಥಕ್ಕೆ ಬೇಕಾಗುವ ಮೀನು ಸಿಗದೇ ಇರೋದಿಲ್ಲ.

    ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನದಿಗಿಳಿಯೋದರಿಂದ ನೀರು ತಲ್ಲಣಗೊಂಡು ಎಲ್ಲೆಡೆ ಕೂತಿರುವ ಮೀನುಗಳೂ ಮೇಲಕ್ಕೆ ಬರುತ್ತದೆ.ನದಿಯ ಸುತ್ತಲೂ ಎಲ್ಲರು ಬಲೆ ಬೀಸುವುದರಿಂದಾಗಿ ಮೀನುಗಳು ಸುಲಭವಾಗಿ ಬಲೆಗೆ ಬೀಳುತ್ತವೆ. ಇಲ್ಲಿ ಯಾರೂ ಬೇಕಾದರೂ ತಮಗೆ ಬೇಕಾದಷ್ಟು ಮೀನುಗಳನ್ನು ಹಿಡಿಯಬಹುದು. ಹೀಗೆ ಸಿಕ್ಕಿದ ಮೀನಗಳನ್ನು ಭಕ್ತರು ಮನೆಗೆ ಕೊಂಡೊಯ್ದು ಪದಾರ್ಥ ಮಾಡಿ ದೈವ ಪ್ರಸಾದವಾಗಿ ಸ್ವೀಕರಿಸುತ್ತಾರೆ.

    ಹಿಂದೆಲ್ಲ ಭಕ್ತರು ತಾವು ಹಿಡಿದ ಮೀನನ್ನು ಇತರರಿಗೆ ಹಂಚಿ ತಿನ್ನುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಮೀನು ಹಿಡಿದವರು ಮಾರಾಟ ಮಾಡುವ ಮೂಲಕ ಇತರ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುತ್ತಾರೆ. ಎಷ್ಟೇ ಹಣವಾದರೂ ಇಲ್ಲಿಗೆ ಬರುವ ಭಕ್ತರು ಭಕ್ತಿಯಿಂದ ಈ ಮೀನುಗಳನ್ನು ಖರೀದಿಸುತ್ತಾರೆ. ಮನೆಗೆ ಕೊಂಡೊಯ್ಯುದು ದೇವರ ಪ್ರಸಾದವಾದ ಮೀನಿನ ಭೋಜನ ಮಾಡುತ್ತಾರೆ. ಈ ಜಾತ್ರೆಯ ಮೀನನ್ನು ತಿಂದರೆ ದೇವರು ಪ್ರಸನ್ನಗೊಳ್ಳುತ್ತಾರೆ. ಜೊತೆಗೆ ವರ್ಷವಿಡೀ ಯಾವುದೇ ರೋಗರುಜಿನಗಳು ಬರೋದಿಲ್ಲ ಅನ್ನೋದು ಭಕ್ತರ ನಂಬಿಕೆ.

    ಮುಂಜಾನೆಯಿಂದ ಮೀನಿನ ಬೇಟೆಯಲ್ಲಿರುವ ಭಕ್ತರು ಸೂರ್ಯ ನೆತ್ತಿ ಮೇಲೆ ಬಂದಾಗ ಬಲೆಗೆ ಬಿದ್ದ ಮೀನನ್ನೆಲ್ಲಾ ಹಿಡಿದುಕೊಂಡು ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ದೈವದ ಪ್ರಸಾದವಾದ ಈ ಮೀನುಗಳನ್ನು ಪದಾರ್ಥ ಮಾಡಿ ಸತ್ತು ಸ್ವರ್ಗ ಸೇರಿದ ತಮ್ಮ ಹಿರಿಯರಿಗೆ ಮೊದಲು ಈ ಮೀನಿನ ಊಟವನ್ನು ಬಡಿಸಿ ನಂತರ ಮನೆ ಮಂದಿಯೆಲ್ಲೇ ಒಟ್ಟಿಗೆ ಪ್ರಸಾದದ ಮೀನಿನ ಊಟ ಮಾಡುತ್ತಾರೆ.

    ತುಳುನಾಡಿನ ಗಾದೆ ಮಾತಿನಂತೆ `ಎರ್ಮಾಳು ಜಪ್ಪು ಕಂಡೇವು ಅಡೆಪು’ ಅಂದರೆ `ಎರ್ಮಾಳಿನಿಂದ ಜಾತ್ರೆಗಳು ಆರಂಭಗೊಂಡರೆ ಈ ಖಂಡಿಗೆ ಜಾತ್ರೆಯೊಂದಿಗೆ ತುಳುನಾಡಿನಲ್ಲಿ ಜಾತ್ರೆಗಳು ಕೊನೆಗೊಳ್ಳುತ್ತದೆ’. ಈ ಭಕ್ತಿಯ ಮೀನು ಹಿಡಿಯುವ ಜಾತ್ರೆಯೊಂದಿಗೆ ತುಳುನಾಡಿನ ಎಲ್ಲಾ ಜಾತ್ರೆಗಳಿಗೆ ತೆರೆ ಬೀಳುತ್ತದೆ.

    https://www.youtube.com/watch?v=W_Juo5YN7dc&feature=youtu.be