Tag: ದೇಶದ್ರೋಹ

  • ಪಾಕ್ ಪರ ಘೋಷಣೆ ಕೂಗುವುದು ದೇಶ ದ್ರೋಹದ ಕೆಲಸ: ಎಚ್‍ಡಿಕೆ

    ಪಾಕ್ ಪರ ಘೋಷಣೆ ಕೂಗುವುದು ದೇಶ ದ್ರೋಹದ ಕೆಲಸ: ಎಚ್‍ಡಿಕೆ

    ರಾಮನಗರ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರುದ್ಧದ ಹೋರಾಟದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಅಮೂಲ್ಯ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳ ಬಗ್ಗೆ ಸಂಘಟನಕಾರರು ಎಚ್ಚರದಿಂದ ಇರಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ತಿಳಿಸಿದ್ದಾರೆ.

    ರಾಮನಗರದ ಹೊರವಲಯದ ಜನಪದಲೋಕ ಬಳಿ ತಮ್ಮ ಪುತ್ರ ನಿಖಿಲ್ ಮದುವೆ ಹಿನ್ನೆಲೆಯಲ್ಲಿ ಭೂಮಿಗೆ ಶಕ್ತಿ ತುಂಬುವ ವಿಶೇಷ ಹೋಮ, ಹವನ, ಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದಾಳೋ, ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾಳೋ, ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಇಂತಹ ದೇಶ ದ್ರೋಹದ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ನಮ್ಮ ಪಕ್ಷದ ಕಾರ್ಯಕರ್ತರಾದ ಇಮ್ರಾನ್ ಸಹ ಕಾರ್ಯಕ್ರಮದ ಸಂಘಟನೆ ಹೊಣೆ ಹೊತ್ತಿದ್ದರು. ಯುವತಿ ಘೋಷಣೆ ಕೂಗಿದ ಕೂಡಲೇ ಆಕೆಯ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟನಕರಿಂದ ಆ ರೀತಿಯ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮೊದಲು ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ಹೋರಾಟಕ್ಕೆ ಇತರರು ಕೈಜೋಡಿಸುತ್ತಾರೆ. ಈ ರೀತಿಯ ಅಪಪ್ರಚಾರ ಯಾರಿಗೂ ಬೇಡ ಎಂದರು. ಬಿಜೆಪಿ ಈ ರೀತಿಯ ಪ್ರಯತ್ನಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಹೊರಟಿದೆ. ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ ಎಂದು ಗುಡುಗಿದರು.

    ಹೋರಾಟಗಾರರು ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸಿದ್ದಾರೆಯೇ ಹೊರತು ಪಾಕಿಸ್ತಾನದ ಧ್ವಜವನ್ನಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಾರಿದ್ದ ರಾಷ್ಟ್ರಧ್ವಜಕ್ಕಿಂತ ಹತ್ತು ಪಟ್ಟು ಧ್ವಜಗಳು ಇಂದು ಹೋರಾಟದ ಹೆಸರಿನಲ್ಲಿ ಹಾರುತ್ತಿವೆ. ಸಂವಿಧಾನ ಕೊಟ್ಟ ಹಕ್ಕನ್ನು ಸಂವಿಧಾನದ ಆಶಯಗಳು ಮತ್ತು ದೇಶವನ್ನು ಯಾರಿಂದಲೂ ಛಿದ್ರಗೊಳಿಸಲು ಆಗದು. ಯಾರೋ ಒಬ್ಬರು ತಿಳಿಗೇಡಿ ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

  • ಪಾಕ್ ಮಾಜಿ ಅಧ್ಯಕ್ಷ ಮುಷರಫ್‍ಗೆ ಗಲ್ಲುಶಿಕ್ಷೆ

    ಪಾಕ್ ಮಾಜಿ ಅಧ್ಯಕ್ಷ ಮುಷರಫ್‍ಗೆ ಗಲ್ಲುಶಿಕ್ಷೆ

    ಪೇಶಾವರ: ದೇಶದ್ರೋಹ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರಫ್ ಅವರಿಗೆ ಪೇಶಾವರ ಹೈಕೋರ್ಟ್ ಗಲ್ಲುಶಿಕ್ಷೆಯನ್ನು ವಿಧಿಸಿದೆ.

    ಪೇಶಾವರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಶೇಷ ನ್ಯಾಯಮಂಡಳಿಯ ತ್ರಿಸದಸ್ಯ ಪೀಠ 2:1 ಅನುಪಾತದಲ್ಲಿ ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದೆ. ಈ ಮೂಲಕ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಗಲ್ಲು ಶಿಕ್ಷೆಗೆ ಒಳಗಾದ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಫ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ನಾವು ತರಬೇತಿ ನೀಡಿದ್ದೇವೆ, ಲಾಡೆನ್ ನಮ್ಮ ಹೀರೋ – ಪರ್ವೇಜ್ ಮುಷರಫ್

    ಸದ್ಯ ದುಬೈನಲ್ಲಿ ನೆಲೆಸಿರುವ ಮುಷರಫ್ 1999 ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಅಧ್ಯಕ್ಷರಾಗಿದ್ದ ಮುಷರಫ್, 2007ರ ನವೆಂಬರ್ 3ರಂದು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿ ಘೋಷಿಸಿದ್ದರು. ನಂತರ ಅಧಿಕಾರಕ್ಕೆ ಏರಿದ ನವಾಜ್ ಷರೀಫ್ ನೇತೃತ್ವದ ಸರ್ಕಾರ, ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ 2013ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. 2014ರ ಮಾರ್ಚ್ 31ರಂದು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.

  • ಪ್ರಧಾನಿಗೆ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದೇಶದ್ರೋಹ ಕೇಸ್ ದಾಖಲು

    ಪ್ರಧಾನಿಗೆ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದೇಶದ್ರೋಹ ಕೇಸ್ ದಾಖಲು

    – ಜುಲೈ ತಿಂಗಳಿನಲ್ಲಿ ಪತ್ರ ಬರೆದಿದ್ದ ಗಣ್ಯರು
    – ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಸ್ ದಾಖಲು
    – ದೇಶಕ್ಕೆ ಕೆಟ್ಟ ಹೆಸರು ತರಲು ಉದ್ದೇಶಪೂರ್ವಕವಾಗಿ ಪತ್ರ ಆರೋಪ

    ಪಾಟ್ನಾ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮಾಬ್ ಲಿಂಚಿಂಗ್(ಗುಂಪು ಹತ್ಯೆ) ನಿಲ್ಲಬೇಕು ಎಂದು ಆಗ್ರಹಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದ ದೇಶದ ನಾನಾ ಕ್ಷೇತ್ರಗಳ 49 ಜನಪ್ರಿಯ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಜಿಲ್ಲಾ ಕೋರ್ಟ್ ನ್ಯಾ. ಸೂರ್ಯಕಾಂತ್ ತ್ರಿಪಾಠಿ ಎಫ್‍ಐಆರ್ ದಾಖಲಿಸಲು ಅನುಮತಿ ನೀಡಿದ ಎರಡು ತಿಂಗಳ ಬಳಿಕ ಬಿಹಾರದ ಮುಜಾಫರಾಬಾದ್ ನಲ್ಲಿ ರಾಮಚಂದ್ರ ಗುಹಾ, ಮಣಿರತ್ನಂ, ಅಪರ್ಣ ಸೇನ್ ಸೇರಿದಂತೆ 49 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಕೀಲ ಸುಧೀರ್ ಕುಮಾರ್ ಓಜಾ, ಜಿಲ್ಲೆಯ ಮುಖ್ಯ ನ್ಯಾಯಾಧೀಶರು ಆಗಸ್ಟ್ 20 ರಂದು ನನ್ನ ಅರ್ಜಿಯನ್ನು ಪರಿಗಣಿಸಿ ಎಫ್‍ಐಆರ್ ದಾಖಲು ಮಾಡಲು ಅನುಮತಿ ನೀಡಿದರು. ಹೀಗಾಗಿ ಸದರ್ ಪೊಲೀಸ್ ಠಾಣೆಯಲ್ಲಿ ನಾನು ದೂರು ನೀಡಿದ್ದೇನೆ. ಪ್ರಧಾನಿ ಮೋದಿ ಉತ್ತಮ ಕಾರ್ಯ ಮಾಡುತ್ತಿದ್ದರೂ ಉದ್ದೇಶ ಪೂರ್ವಕವಾಗಿ ದೇಶದ ಏಕತೆ ಮತ್ತು ಸಮಗ್ರತೆ ಧಕ್ಕೆ ತರಲು ಈ ಪತ್ರವನ್ನು ಬರೆದಿದ್ದಾರೆ. ಪ್ರತ್ಯೇಕವಾದಿ ಮನಸ್ಥಿತಿಯನ್ನು ಬೆಂಬಲಿಸಲೆಂದೇ ಈ ಪತ್ರವನ್ನು ಬರೆಯಲಾದ ಹಿನ್ನೆಲೆಯಲ್ಲಿ ನಾನು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ದೂರಿನ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಐಪಿಸಿಯ ದೇಶದ್ರೋಹ, ಧಾರ್ಮಿಕ ಭಾವನೆಗೆ ಧಕ್ಕೆ, ಉದ್ದೇಶ ಪೂರ್ವಕವಾಗಿ ಪ್ರಚೋದಿಸಿ ಶಾಂತಿ ಕದಡುವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಪತ್ರದಲ್ಲಿ ಏನಿತ್ತು?
    ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಹೆಚ್ಚುತ್ತಿರುವ ಕೋಮು ದ್ವೇಷದ ಅಪರಾಧಗಳು ಹಾಗೂ ಗುಂಪು ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ 49 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು.

    ಜು. 23ರಂದು ಕಳುಹಿಸಲಾದ ಈ ಪತ್ರಕ್ಕೆ ಇತಿಹಾಸಕಾರ ರಾಮಚಂದ್ರ ಗುಹಾ, ಸಮಾಜಶಾಸ್ತ್ರ ತಜ್ಞ ಆಶಿಸ್ ನಂದಿ, ಚಿತ್ರ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್, ಅಪರ್ಣ ಸೇನ್, ಶಾಸ್ತ್ರೀಯ ಸಂಗೀತ ಗಾಯಕಿ ಶುಭಾ ಮುದ್ಗಲ್, ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ಅನುಪಮ್ ರಾಯ್, ಕೊಂಕಣ್ ಸೇನ್ ಶರ್ಮಾ ಅವರಂತಹ ಚಿತ್ರರಂಗದ ಪ್ರಮುಖರು ಸೇರಿದಂತೆ ಒಟ್ಟು 49 ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದರು.

    ‘ಜೈ ಶ್ರೀರಾಮ್’ ನಾಮಘೋಷವು ಇಂದು ಹಿಂಸಾಚಾರ, ಶೋಕದ ಮೂಲಮಂತ್ರವೆನಿಸಿದೆ. ಶಾಂತಿಪ್ರಿಯರೂ, ಹೆಮ್ಮೆಯ ಭಾರತೀಯರೂ ಆಗಿರುವ ನಮ್ಮಲ್ಲಿ, ನಮ್ಮ ಪ್ರೀತಿಯ ಭಾರತದಲ್ಲಿ ಧರ್ಮಾಧಾರಿತ ಹಿಂಸಾಚಾರಗಳು ಆತಂಕ ಸೃಷ್ಟಿಸಿವೆ. ಮುಸ್ಲಿಮರು, ದಲಿತರು, ಇತರೆ ಅಲ್ಪಸಂಖ್ಯಾತರ ಮೇಲಿನ ಥಳಿತ ಹತ್ಯೆಗಳು ಹೆಚ್ಚಾಗುತ್ತಿದ್ದು ಇವುಗಳು ನಿಲ್ಲಲೇಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದರು.

    ಶಾಂತಿಪ್ರಿಯರಾದ ಮತ್ತು ಹೆಮ್ಮೆ ಪಡುವಂತಹ ಭಾರತೀಯರಾದ ನಾವು ಇತ್ತೀಚೆಗೆ ನಮ್ಮ ನಲ್ಮೆಯ ದೇಶದಲ್ಲಿ ಹೆಚ್ಚಿರುವ ಕರಾಳ ಘಟನೆಗಳಿಂದ ತೀವ್ರ ಕಳವಳಗೊಂಡಿದ್ದೇವೆ. ಕಳೆದ 9 ವರ್ಷಗಳಿಂದ ದಲಿತರ ವಿರುದ್ಧ ದೌರ್ಜನ್ಯ, ಕೋಮು ಗಲಭೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಈ ಪೈಕಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಎಂಬ ವಿಷಯ ತಿಳಿದು ಆಘಾತವಾಗಿದೆ. ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳ ಕುರಿತು ಸಂಸತ್ತಿನಲ್ಲಿ ನೀವು ಖಂಡನೆ ವ್ಯಕ್ತಪಡಿಸಿದ್ದೀರಿ. ಆದರೆ, ಇದು ಸಾಲುವುದಿಲ್ಲ. ಇಂತಹ ಕೃತ್ಯ ಎಸಗಿದವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಪತ್ರದಲ್ಲಿ ಮೋದಿ ಅವರನ್ನು ಪ್ರಶ್ನಿಸಲಾಗಿತ್ತು.

  • ಪುಲ್ವಾಮಾ ದಾಳಿ ಹಿಂದೆ ಮೋದಿ,ಬಿಜೆಪಿ ಕೈವಾಡವಿದೆ ಎಂದಿದ್ದ ವ್ಯಕ್ತಿ ವಿರುದ್ಧ ಎಫ್‍ಐಆರ್

    ಪುಲ್ವಾಮಾ ದಾಳಿ ಹಿಂದೆ ಮೋದಿ,ಬಿಜೆಪಿ ಕೈವಾಡವಿದೆ ಎಂದಿದ್ದ ವ್ಯಕ್ತಿ ವಿರುದ್ಧ ಎಫ್‍ಐಆರ್

    ಕಲಬುರಗಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ 40 ಮಂದಿ ಯೋಧರು ವೀರಮರಣವಪ್ಪಿದ್ದು, ಆ ಬಳಿಕ ಕೆಲ ದೇಶದ್ರೋಹಿಗಳ ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ. ಈ ವಿಚಾರಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಉಮರ್ ಜುನೈದಿ ವಿರುದ್ಧ ಈ ಎಫ್‍ಐಆರ್ ದಾಖಲಾಗಿದ್ದು, ಈತ ಜಿಲ್ಲೆಯ ವಾಡಿ ನಿವಾಸಿಯಾಗಿದ್ದಾನೆ. ಜುನೈದಿ ವಿರುದ್ಧ ಬಿಜೆಪಿ ದೂರು ನೀಡಿದೆ. ಜುನೈದಿ ಸಾಮಾಜಿಕ ಜಾಲತಾಣದ ಫೇಸ್ ಬುಕ್ ನಲ್ಲಿ ಲೈವ್ ಬಂದು `ಪುಲ್ವಾಮಾ ಉಗ್ರರ ದಾಳಿ ಹಿಂದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಕೈವಾಡವಿದೆ’ ಎಂದು ಹೇಳಿದ್ದಾನೆ. ಈ ಹೇಳಿಕೆ ಇದೀಗ ವೈರಲ್ ಆಗಿದೆ.

    ಈ ವಿಚಾರ ಚಿತ್ತಾಪುರ ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಅವರ ಗಮನಕ್ಕೆ ಬಂದಿದ್ದು, ಜುನೈದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಸಿಪಿಐಗೆ ಮನವಿ ಮಾಡಿದ್ದಾರೆ. ಈ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv