Tag: ದೇವ್ ರಂಗಭೂಮಿ

  • ಗಿಣಿ ಹೇಳಿದ್ದು ಪ್ರೀತಿ ತುಂಬಿದ ಅಚ್ಚುಕಟ್ಟಾದ ಕಥೆ!

    ಗಿಣಿ ಹೇಳಿದ್ದು ಪ್ರೀತಿ ತುಂಬಿದ ಅಚ್ಚುಕಟ್ಟಾದ ಕಥೆ!

    ಬೆಂಗಳೂರು: ಅಪ್ಪಟ ಕನ್ನಡತನದ ಶೀರ್ಷಿಕೆಯೊಂದಿಗೇ ಸದ್ದು ಮಾಡಿದ್ದ ಚಿತ್ರ ಗಿಣಿ ಹೇಳಿದ ಕಥೆ. ಇದೀಗ ಗಿಣಿ ಹೇಳಿದ ಕಥೆಯನ್ನು ಪ್ರೇಕ್ಷಕರು ಕೇಳಿದ್ದಾರೆ. ಯಾವ ಆಡಂಬರವೂ ಇಲ್ಲದ ಸಹಜ ಸುಂದರವಾದ ಪ್ರೀತಿ ಬೆರೆತ ಕಥೆ ಕೇಳಿದವರ ಕಣ್ಣುಗಳಲ್ಲಿ ಒಂದೊಳ್ಳೆ ಸಿನಿಮಾ ನೋಡಿದ ತೃಪ್ತಿಯ ಕಾಂತಿ ಸ್ಪಷ್ಟವಾಗಿಯೇ ಹೊಳೆಯುತ್ತಿದೆ. ಈ ಮೂಲಕ ರಂಗಭೂಮಿ ಪ್ರತಿಭೆಗಳ ಮಹಾ ಸಂಗಮದಂತಿರೋ ಈ ತಂಡಕ್ಕೆ ಆರಂಭಿಕವಾಗಿಯೇ ಗೆಲುವಿನ ಸೂಚನೆ ಸಿಕ್ಕಂತಾಗಿದೆ!

    ದೇವ್ ರಂಗಭೂಮಿ ಬುದ್ಧ ಚಿತ್ರಾಲಯ ಬ್ಯಾನರಿನಡಿಯಲ್ಲಿ ನಿರ್ಮಿಸಿ ನಾಯಕನಾಗಿಯೂ ನಟಿಸಿರೋ ಚಿತ್ರ ಗಿಣಿ ಹೇಳಿದ ಕಥೆ. ಒಂದು ಪಯಣ, ಆ ದಾರಿಯಲ್ಲಿ ಡ್ರೈವರ್ ಒಬ್ಬ ಪ್ಯಾಸೆಂಜರುಗಳ ಬಳಿ ಹೇಳಿಕೊಳ್ಳೋ ಕಥೆ, ಅದಕ್ಕೆ ಅಪ್ಪಟ ಪ್ರೇಮದ ಕಂಪು ಮತ್ತು ಎಂಥವರನ್ನೂ ದಿಗಿಲಾಗಿಸುವ, ಕಸಿವಿಸಿಗೆ ತಳ್ಳುವಂಥಾದ್ದೊಂದು ಅನಿರೀಕ್ಷಿತ ದುರಂತ… ಇದಿಷ್ಟರ ನಡುವೆ ಗಿಣಿ ಹೇಳೋ ಕಥೆ ಯಾವ ಅಡೆತಡೆಗಳೂ ಇಲ್ಲದೆ ನೋಡಿಸಿಕೊಂಡು ಹೋಗುತ್ತದೆ.

    ಈ ಕಥೆಯ ಕೇಂದ್ರ ಬಿಂದು ಬೆಂಗಳೂರಿನ ಡ್ರೈವರ್ ವೃತ್ತಿಯ ಯುವಕ. ಆತ ಗಣೇಶ್ ಅಲಿಯಾಸ್ ಗಿಣಿ. ಆ ಪಾತ್ರಕ್ಕೆ ದೇವ್ ರಂಗಭೂಮಿ ಜೀವ ತುಂಬಿದ್ದಾರೆ. ಈ ಮೂಲಕವೇ ಡ್ರೈವರ್ ಗಳ ಖಾಸಗೀ ಜಗತ್ತನ್ನು ಒಂದಷ್ಟು ಬೆರಗು ಹುಟ್ಟಿಸುವಂತೆ ತೆರೆದಿಟ್ಟಿದ್ದಾರೆ. ಈ ಡ್ರೈವರ್ ಕೊಡಗಿನತ್ತ ಪ್ಯಾಸೆಂಜರುಗಳನ್ನು ಕರೆದುಕೊಂಡು ಹೋಗುವಾಗ ತನ್ನ ಕಥೆ ಹೇಳಿಕೊಳ್ಳುತ್ತಾನೆ. ತಾನು ನಾಯಕಿಯ ಹಿಂದೆ ಸುತ್ತಿ ಪ್ರೀತಿ ದಕ್ಕಿಸಿಕೊಂಡಿದ್ದರಿಂದ ಮೊದಲ್ಗೊಂಡು ಮೋಹಕವಾಗಿಯೇ ಕಥೆ ಚಲಿಸುತ್ತೆ. ಆದರೆ ಏಕಾಏಕಿ ಆ ಹುಡುಗಿ ಕಣ್ಮರೆಯಾಗ್ತಾಳೆ. ಅದರ ಹಿಂದೊಂದು ಭೀಕರ ಕಾರಣವಿರುತ್ತೆ ಮತ್ತು ಈತ ಕರೆದೊಯ್ಯುತ್ತಿದ್ದ ಪ್ಯಾಸೆಂಜರುಗಳಿಗೂ ಆ ಹುಡುಗಿಯ ಸಾವಿನ ಸುತ್ತಲ ವಿದ್ಯಾಮಾನಗಳಿಗೆ ಲಿಂಕೂ ಇರುತ್ತೆ. ಅದೇನೆಂಬುದು ಗಿಣಿ ಹೇಳೋ ಕಥೆಯ ನಿಜವಾದ ಆತ್ಮ.

    ನಾಯಕ ದೇವ್ ರಂಗಭೂಮಿ ಈ ಪಾತ್ರಕ್ಕೆ ತಾವೇ ಸೂಕ್ತ ಎಂಬ ಫೀಲ್ ಪ್ರೇಕ್ಷಕರಿಗೆ ಹುಟ್ಟುವಂತೆ ನಟಿಸಿದ್ದಾರೆ. ನಾಯಕಿ ಗೀತಾಂಜಲಿ ಕೂಡಾ ಮೊದಲ ಅನುಭವವಾದರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಹೆಚ್ಚಿನ ಪಾತ್ರಗಳನ್ನು ರಂಗಭೂಮಿ ಕಲಾವಿದರು ನುಂಗಿಕೊಂಡಂತೆ ನಟಿಸಿದ್ದಾರೆ. ರಾಜ ನೇಸರ ಅವರು ಬರೆದಿರೋ ಹಾಡೂ ಸೇರಿದಂತೆ ಎಲ್ಲವೂ ಇಂಪಾಗಿವೆ. ಕ್ಯಾಮೆರಾ ಕೆಲಸವೂ ಮುದ ನೀಡುತ್ತದೆ. ಸಂಕಲನದ ಕೆಲಸವೂ ಗಮನ ಸೆಳೆಯುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಿಣಿ ಹೇಳಿದ ಕಥೆ: ನೋಡದಿದ್ರೆ ಮಿಸ್ ಆಗುತ್ತೆ ಮಧುರಾನುಭೂತಿ!

    ಗಿಣಿ ಹೇಳಿದ ಕಥೆ: ನೋಡದಿದ್ರೆ ಮಿಸ್ ಆಗುತ್ತೆ ಮಧುರಾನುಭೂತಿ!

    ಬೆಂಗಳೂರು: ಬುದ್ಧ ಚಿತ್ರಾಲಯ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಗಿಣಿ ಹೇಳಿದ ಕಥೆ ಈ ವಾರದಿಂದ ಶುರುವಾಗಲಿದೆ. ಶುದ್ಧ ಕನ್ನಡತನದ ಶೀರ್ಷಿಕೆ ಮತ್ತು ಹೊಸ ಬಗೆಯ ಕಥೆಯ ಹೊಳಹಿನಿಂದ ಈಗಾಗಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಅದುವೇ ಹೊಸ ಪ್ರಯತ್ನವೊಂದರ ಗೆಲುವಿನ ಹೆಜ್ಜೆಯಾಗಿಯೂ ಗೋಚರವಾಗುತ್ತಿದೆ.

    ಈ ವಾರ ಗಿಣಿ ಹೇಳ ಹೊರಟಿರೋದು ಪಕ್ಕಾ ಭಿನ್ನವಾದ ಕಥೆ. ಹಾಗಂತ ಇದು ಕಲಾತ್ಮಕ ಚಿತ್ರ ಅಂದುಕೊಳ್ಳಬೇಕಿಲ್ಲ. ಆದರೆ ಸಿದ್ಧ ಸೂತ್ರಗಳ ಕಮರ್ಶಿಯಲ್ ಚೌಕಟ್ಟೂ ಕೂಡಾ ಇದಕ್ಕಿಲ್ಲ. ನಮ್ಮ ನಡುವಿನ ಪಾತ್ರಗಳೇ ತೆರೆ ಮೇಲೆ ಕದಲುತ್ತಿವೆ, ನಮ್ಮದೇ ಮಾತುಗಳಿಗೆ ಆ ಪಾತ್ರಗಳು ಬಾಯಾಗಿವೆ ಎಂಬಂಥಾ ವಿಶಿಷ್ಟವಾದ ಫೀಲ್ ಹುಟ್ಟಿಸೋ ರೀತಿಯಲ್ಲಿ ಇಡೀ ಸಿನಿಮಾ ರೂಪುಗೊಂಡಿದೆಯಂತೆ.

    ಅದು ಯಾವ ವಿಚಾರವೇ ಆಗಿರಬಹುದು. ನೇರಾ ನೇರ ಮುಖಕ್ಕೆ ಹೊಡೆದಂತೆ ಹೇಳೋದರಿಂದ ಘರ್ಷಣೆ, ವೈಮನಸ್ಯದ ಹೊರತಾಗಿ ಬೇರ್ಯಾವ ಪ್ರಯೋಜನವೂ ಆಗೋದಿಲ್ಲ. ಅದನ್ನೇ ಕೂಲಾಗಿ, ತಮಾಷೆಯಾಗಿ ಹೇಳಿದರೆ ಅದರ ಎಫೆಕ್ಟೇ ಬೇರೆ. ಅಂಥಾದ್ದೊಂದು ಸೂತ್ರದಿಂದ ಗಂಭೀರವಾದ ವಿಚಾರವನ್ನೂ ಕೂಡಾ ಲಘುವಾದ ಶೈಲಿಯಲ್ಲಿ ಇಲ್ಲಿ ಹೇಳಲಾಗಿದೆ. ಮನರಂಜನೆಯನ್ನೇ ಮುಖ್ಯ ಉದ್ದೇಶವಾಗಿಸಿಕೊಂಡಿರೋ ಈ ಚಿತ್ರ ಪ್ರೇಕ್ಷಕರ ಪಾಲಿಗೆ ಹೊಸ ವರ್ಷಾರಂಭದಲ್ಲಿಯೇ ಮಧುರಾನುಭೂತಿ ನೀಡಲಿರೋದಂತೂ ನಿಜ.

    ದೇವ್ ರಂಗಭೂಮಿ ಈ ಚಿತ್ರದ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ನಾಯಕನಾಗಿಯೂ ನಟಿಸಿದ್ದಾರೆ. ಇವರಿಗಿಲ್ಲಿ ಗುಂಗುರು ಕೂದಲ ಚೆಲುವೆ ಗೀತಾಂಜಲಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಗಿಣಿ ಹೇಳಿದ ಕಥೆಯ ಬಗ್ಗೆ ಪ್ರೇಕ್ಷಕರಲ್ಲೊಂದು ಕಲ್ಪನೆ ಇದೆಯಲ್ಲಾ? ಅದನ್ನೂ ಮೀರಿದ ಸೊಗಸನ್ನು ಈ ಚಿತ್ರ ತುಂಬಿಕೊಂಡಿದೆ. ಅಂತೂ ಈ ವರ್ಷದ ಆರಂಭದಲ್ಲಿಯೇ ಹೊಸ ಅಲೆಯ ಚಿತ್ರವೊಂದು ಗೆದ್ದು ಸದ್ದು ಮಾಡೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಚಿತ್ರಕ್ಕೆ ಬೇಕಿದ್ದದ್ದು ಗುಂಗುರು ಕೂದಲ ಗಿಣಿ!

    ಈ ಚಿತ್ರಕ್ಕೆ ಬೇಕಿದ್ದದ್ದು ಗುಂಗುರು ಕೂದಲ ಗಿಣಿ!

    ಬೆಂಗಳೂರು: ಅಪ್ಪಟ ಕನ್ನಡದ ಶೀರ್ಷಿಕೆ ಮತ್ತು ಅಗಾಧವಾಗಿ ಹಬ್ಬಿಕೊಂಡಿರೋ ಕುತೂಹಲ… ಇಂಥಾದ್ದರ ಒಡ್ಡೋಲಗದಲ್ಲಿ ಗಿಣಿ ಹೇಳಿದ ಕಥೆ ಚಿತ್ರ ಇದೇ ತಿಂಗಳ 11ರಂದು ತೆರೆ ಕಾಣಲು ತಯಾರಾಗಿದೆ. ದೇವ್ ರಂಗಭೂಮಿ ನಿರ್ಮಾಣದ ಈ ಸಿನಿಮಾ ಹೊಸಾ ಅಲೆಯದ್ದು. ಏನಾದರೊಂದು ಕಮಾಲ್ ಸೃಷ್ಟಿಸುತ್ತೆ ಎಂಬ ಪ್ರೇಕ್ಷಕರ ಭರವಸೆ ತುಂಬಿದ ನಿರೀಕ್ಷೆ ಗಿಣಿ ಹೇಳಿದ ಕಥೆಯ ಮೇಲಿದೆ.

    ಒಂದು ಚಿತ್ರವೆಂದ ಮೇಲೆ ಹೀಗೀಗೇ ಇರಬೇಕೆಂಬ ಅಳತೆಗೋಲುಗಳಿವೆ. ಅದನ್ನು ಮೀರಿಕೊಂಡ ಸಿನಿಮಾಗಳು ಗೆಲುವು ದಾಖಲಿಸಿದ್ದೂ ಇದೆ. ಅದೇ ಪಥದಲ್ಲಿರೋ ಚಿತ್ರ ಗಿಣಿ ಹೇಳಿದ ಕಥೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಾಯಕನಾಗಿಯೂ ದೇವ್ ನಟಿಸಿದ್ದಾರೆ. ನಿರ್ಮಾಣದ ಭಾರವನ್ನೂ ಅವರೇ ಹೊತ್ತುಕೊಂಡಿದ್ದಾರೆ.

    ಈ ಚಿತ್ರದಲ್ಲಿ ಎಂಭತ್ತಕ್ಕೂ ಹೆಚ್ಚು ಪಾತ್ರಗಳಿವೆ. ಆ ಅಷ್ಟೂ ಪಾತ್ರಗಳಿಗೂ ಅಳೆದೂ ತೂಗಿ ಹೊಂದುವಂಥಾ ನಟ ನಟಿಯರನ್ನೇ ದೇವ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಿದ್ದ ಮೇಲೆ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡುವಾಗ ಎಚ್ಚರ ವಹಿಸದೇ ಇರ್ತಾರಾ? ಈ ಕಥೆಗೆ ಗುಂಗುರು ಕೂದಲಿನ, ಮುಗ್ಧ ಮುಖಭಾವ ಹೊಂದಿರೋ ಹುಡುಗಿ ಬೇಕಿತ್ತು. ಇದಕ್ಕಾಗಿ ದೇವ್ ಆಡಿಷನ್ ನಡೆಸಿದ್ದರು. ಅದರಲ್ಲಿ ಹತ್ತಾರು ಹುಡುಗಿಯರು ಪಾಲ್ಗೊಂಡಿದ್ದರು. ಅವೆಲ್ಲರ ಮಧ್ಯೆ ಗೀತಾಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದರು.

    ಆಕೆ ಗುಂಗುರು ಕೂದಲು ಹೊಂದಿದ್ದಾರೆಂಬುದು ಮಾತ್ರವೇ ಆಯ್ಕೆಗೆ ಕಾರಣವಾಗಿರಲಿಲ್ಲ. ನಟಿಸೋ ಕಲೆಯೂ ಗೀತಾಂಜಲಿಗಿತ್ತು. ಅಂತೂ ದೇವ್ ಈ ಕಥೆ ಕೇಳುತ್ತಿದ್ದ ಕರ್ಲಿ ಕೂದಲ ಗಿಣಿಯನ್ನು ಹುಡುಕಿದ್ದೂ ಕೂಡಾ ಒಟ್ಟಾರೆ ಚಿತ್ರ ರೂಪುಗೊಂಡ ಶ್ರದ್ಧೆಗೆ ಕನ್ನಡಿಯಂತಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಿಣಿ ಹೇಳ ಹೊರಟಿರೋ ಕಥೆ ಸಾಮಾನ್ಯವಾದುದಲ್ಲ!

    ಗಿಣಿ ಹೇಳ ಹೊರಟಿರೋ ಕಥೆ ಸಾಮಾನ್ಯವಾದುದಲ್ಲ!

    ಬೆಂಗಳೂರು: ಸದ್ಯ ಗಿಣಿ ಹೇಳಿದ ಕಥೆ ಚಿತ್ರ ಎಲ್ಲೆಡೆ ಸುದ್ದಿಯಲ್ಲಿದೆ. ಬಿಡುಗಡೆಗೆ ತಯಾರಾಗಿ ನಿಂತಿರೋ ಈ ಸಿನಿಮಾ ಹೆಸರಿನಷ್ಟೇ ವಿಶಿಷ್ಟವಾದ ಅನೇಕ ವಿಚಾರಗಳನ್ನೂ ಬಚ್ಚಿಟ್ಟುಕೊಂಡಿದೆ. ಇದರ ಸಾರಥ್ಯ ವಹಿಸಿಕೊಂಡಿರುವವರು ದೇವ್ ರಂಗಭೂಮಿ. ಈ ಚಿತ್ರದ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಮುಖ್ಯ ಪಾತ್ರವನ್ನೂ ಕೂಡಾ ದೇವ್ ನಿಭಾಯಿಸಿದ್ದಾರೆ. ಈ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

    ದೇವ್ ರಂಗಭೂಮಿಯಲ್ಲಿ ನಟನಾಗಿ ಅಭಿನಯಿಸಿದ್ದರೂ ನಾಯಕನಾಗಿ ಚಿತ್ರರಂಗದಲ್ಲಿ ಅವರದ್ದಿದು ಮೊದಲ ಪ್ರಯತ್ನ. ಆದರದು ಪರ್ಫೆಕ್ಟ್ ಆಗಿರಬೇಕೆಂಬುದು ಅವರ ಹಂಬಲ. ಆ ಕಾರಣದಿಂದಲೇ ಅಖಂಡ 4 ವರ್ಷ ತೆಗೆದುಕೊಂಡು ಗಿಣಿ ಹೇಳಿದ ಕಥೆಯ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ತಾವೇ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ನಾಗರಾಜ್ ಉಪ್ಪುಂದ ಅವರಿಗೆ ಒಪ್ಪಿಸಿದ್ದಾರೆ.

    ಈ ಚಿತ್ರ ಯಾವ ಬಗೆಯದ್ದು ಎಂಬುದು ಕಥೆ ಏನು ಎಂಬಷ್ಟೇ ಸಂದಿಗ್ಧದ ಪ್ರಶ್ನೆ. ಯಾಕೆಂದರೆ ಇದು ಮಾಮೂಲಿ ಜಾಡಿನದ್ದಲ್ಲ. ಹಾಗಂತ ಕಲಾತ್ಮಕ ಚೌಕಟ್ಟಿನದ್ದು ಅಂದುಕೊಳ್ಳುವಂತೆಯೂ ಇಲ್ಲ. ಗಂಭೀರವಾದ ವಿಚಾರವನ್ನು ಹಾಸ್ಯ ಶೈಲಿಯಲ್ಲಿ ದಾಟಿಸೋದೂ ಸೇರಿದಂತೆ ಇಡೀ ಸಿನಿಮಾವನ್ನು ದೇವ್ ಅಂದುಕೊಂಡಂತೆಯೇ ಸಹಜವಾಗಿ ಕಟ್ಟಿ ಕೊಟ್ಟಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ಹಂತದಲ್ಲಿಯೇ ಭರಪೂರವಾದೊಂದು ಗೆಲುವು, ಹೊಸ ಅಲೆಯ ಚಿತ್ರಗಳ ಹಂಗಾಮಕ್ಕೆ ಗಿಣಿ ಹೇಳಿದ ಕಥೆ ಶ್ರೀಕಾರ ಹಾಕೋ ಲಕ್ಷಣಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಫರೆಂಟಾದ ಕಥೆ ಹೇಳಹೊರಟಿದೆ ಗಿಣಿ!

    ಡಿಫರೆಂಟಾದ ಕಥೆ ಹೇಳಹೊರಟಿದೆ ಗಿಣಿ!

    ಈಗ ಎಲ್ಲೆಡೆ ಗಿಣಿ ಹೇಳಿದ ಕಥೆ ಚಿತ್ರದ ಬಗ್ಗೆ ಚರ್ಚೆಗಳಾಗುತ್ತಿವೆ. ಹೊಸಾ ಥರದ ಶೀರ್ಷಿಕೆಯಿಂದಲೇ ಗಮನ ಸೆಳೆದ ಒಂದಷ್ಟು ಚಿತ್ರಗಳಿವೆಯಲ್ಲಾ ಆ ಸಾಲಿಗೆ ಈ ಸಿನಿಮಾವೂ ಸೇರುತ್ತದೆ. ಅಪ್ಪಟ ಕನ್ನಡತನದ ಕಥೆಯ ಜೊತೆಗೆ, ಅಷ್ಟೇ ಭಿನ್ನವಾದ ಕಥೆಯೊಂದನ್ನು ಈ ಗಿಣಿ ಹೇಳ ಹೊರಟಿದೆ.

    ಗಿಣಿ ಹೇಳಿದ ಕಥೆಯನ್ನು ಬುದ್ಧ ಚಿತ್ರಾಲಯ ಲಾಂಛನದಲ್ಲಿ ದೇವ್ ರಂಗಭೂಮಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದೂ ಅವರೇ. ಇದರೊಂದಿಗೆ ನಾಯಕನಾಗಿಯೂ ಅವರು ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಇದನ್ನು ನಾಗರಾಜ್ ಉಪ್ಪುಂದ ನಿರ್ದೇಶನ ಮಾಡಿದ್ದಾರೆ.

    ಹಾಗಾದರೆ ಈ ಗಿಣಿ ಯಾವ ಜಾಡಿನ ಕಥೆ ಹೇಳ ಹೊರಟಿದೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿದೆ. ಅದಕ್ಕೆ ಚಿತ್ರತಂಡದ ಕಡೆಯಿಂದ ಮತ್ತಷ್ಟು ಕೌತುಕ ಮೂಡಿಸೋ ಒಂದಷ್ಟು ವಿಚಾರಗಳೇ ಹೊರ ಬೀಳುತ್ತವೆ. ಈ ಚಿತ್ರದಲ್ಲಿ ಸಿದ್ಧಸೂತ್ರಗಳ ಸುಳಿವಿರೋದಿಲ್ಲ. ಇದರ ಪ್ರಧಾನ ಉದ್ದೇಶವೇ ಮನರಂಜನೆ. ಭರಪೂರ ಹಾಸ್ಯದ ಜೊತೆಗೇ ಗಂಭೀರವಾದ ವಿಚಾರಗಳನ್ನೂ ದಾಟಿಸೋ ಸದುದ್ದೇಶವನ್ನ ಈ ಚಿತ್ರ ಒಳಗೊಂಡಿದೆ. ಪ್ರತೀ ವರ್ಗದ ಪ್ರೇಕ್ಷಕರಿಗೂ ತಲುಪಿಕೊಳ್ಳುವ ಮಹದಾಸೆಯಿಂದಲೇ ಒಟ್ಟಾರೆ ಚಿತ್ರ ಸಿದ್ಧಗೊಂಡಿದೆ.

    ಗಿಣಿ ಹೇಳಿದ ಕಥೆಯಲ್ಲಿ ಒಂದು ಮಧುರವಾದ ಪ್ರೇಮ ಕಥೆಯೂ ಇದೆ. ಗೀತಾಂಜಲಿ ಎಂಬ ಹೊಸ ಹುಡುಗಿ ಈ ಮೂಲಕ ನಾಯಕಿಯಾಗಿ ದೇವ್ ಗೆ ಜೊತೆಯಾಗಿದ್ದಾರೆ. ಇಲ್ಲಿ ಹೀರೋಯಿಸಂ ಇಲ್ಲ. ಆದರೆ ನಿಜವಾದ ಹೀರೋಗಳು ಯಾರೆಂಬುದರ ಬಗ್ಗೆ ವಿವರಣೆಯಿದೆ. ಕಥೆಯೇ ಪಾತ್ರಗಳನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ಕೊಂಡೊಯ್ದು ಬಿಡುವಂಥಾ ಕೆಲಸವನ್ನೂ ನಿಭಾಯಿಸುತ್ತದೆಯಂತೆ.

    ಇನ್ನುಳಿದಂತೆ ಸಂಗೀತ, ಸಂಕಲನ, ಛಾಯಾಗ್ರಹಣ ಎಲ್ಲದರಲ್ಲಿಯೂ ಹೊಸತನವೇ ನಿಗಿ ನಿಗಿಸುವಂತೆ ಈ ಚಿತ್ರವನ್ನ ದೇವ್ ರೂಪಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಗಿಣಿ ಹೇಳೋ ಕಥೆ ಕೇಳುವ ಸೌಭಾಗ್ಯ ಪ್ರೇಕ್ಷಕರದ್ದಾಗಲಿದೆ.

    https://www.facebook.com/publictv/videos/1499818953482880/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv