Tag: ದೇವ್ ದೇವಯ್ಯ

  • ‘ಕಪಟಿ’ ಟೀಸರ್‌ ಔಟ್- ಡಾರ್ಕ್ ವೆಬ್ ಜಗತ್ತಿನ ಅಸಲಿತನ ತೆರೆದಿಡಲಿದೆ ಸಿನಿಮಾ

    ‘ಕಪಟಿ’ ಟೀಸರ್‌ ಔಟ್- ಡಾರ್ಕ್ ವೆಬ್ ಜಗತ್ತಿನ ಅಸಲಿತನ ತೆರೆದಿಡಲಿದೆ ಸಿನಿಮಾ

    ಡಿ.ಪಿಕ್ಚರ್ಸ್ ಲಾಂಛನದಲ್ಲಿ ದಯಾಳ್ ಪದ್ಮನಾಭನ್ ನಿರ್ಮಿಸಿರುವ, ರವಿಕಿರಣ್ ಹಾಗೂ ಚೇತನ್ ಎಸ್.ಪಿ ಅವರ ಜಂಟಿ ನಿರ್ದೇಶನದಲ್ಲಿ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಪಟಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ‘ಕಪಟಿ’ ಸಿನಿಮಾದ (Kapati Film) ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಸಾಥ್ ನೀಡಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: ಆರ್ಥಿಕ ನೆರವು ನೀಡಿದ ರಶ್ಮಿಕಾ, ಸೂರ್ಯ, ಮಮ್ಮುಟ್ಟಿ

    ಇದು ನಮ್ಮ ಡಿ.ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನ್ನೆರಡನೇ ಚಿತ್ರ. ಹನ್ನೆರಡು ಚಿತ್ರಗಳಲ್ಲಿ ಹತ್ತು ಕನ್ನಡ ಹಾಗೂ ಎರಡು ತಮಿಳು ಚಿತ್ರಗಳು. 11 ಚಿತ್ರಗಳನ್ನು ನಾನೇ ನಿರ್ಮಿಸಿ, ನಿರ್ದೇಶನವನ್ನೂ ಮಾಡಿದ್ದೇನೆ. ಆದರೆ ಈ ಚಿತ್ರವನ್ನು ನಾನು ನಿರ್ಮಾಣ ಮಾತ್ರ ಮಾಡಿದ್ದೇನೆ. ರವಿಕಿರಣ್ ಹಾಗೂ ಚೇತನ್ ಎಸ್.ಪಿ ನಿರ್ದೇಶನ ಮಾಡಿದ್ದಾರೆ. ಇವರು ಹಿಂದೆ ‘ಕೋಮ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇವರು ಬಂದು ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಡಾರ್ಕ್ ನೆಟ್ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಕನ್ನಡದಲ್ಲಿ ‘ಗುಳ್ಟು’ ಚಿತ್ರದ ನಂತರ ಈ ಜಾನರ್‌ನ ಚಿತ್ರ ಬಂದಿರಲಿಲ್ಲ. ಇನ್ನೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಂದ ಯಾವತ್ತು ಯಾರಿಗೂ ನಷ್ಟವಾಗಲ್ಲ ಎಂದು ನಂಬಿರುವವನು ನಾನು. ಆದರೆ ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಚಿತ್ರಗಳು. ‘ಕಪಟಿ’ ಚಿತ್ರವನ್ನು ಇತ್ತೀಚೆಗೆ ಸ್ನೇಹಿತರ ಜೊತೆ ನೋಡಿದೆ. ಚೆನ್ನಾಗಿ ಮೂಡಿ ಬಂದಿದೆ. ಟೀಸರ್ ಬಿಡುಗಡೆ ಮಾಡಿ ಕೊಟ್ಟ ಡಾರ್ಲಿಂಗ್ ಕೃಷ್ಣಗೆ ಧನ್ಯವಾದ ಎಂದುನಿರ್ಮಾಪಕ ದಯಾಳ್ ಪದ್ಮನಾಭನ್ (Dayal Padmanabhan) ಮಾತನಾಡಿದರು.

    ಸುಮಾರು ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥಾಹಂದರ ಹೊಂದಿರುವ ಚಿತ್ರವಿದು. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ದೇಶಕ ರವಿಕಿರಣ್ ಹಾಗೂ ಚೇತನ್ ತಿಳಿಸಿದರು.

    ನಾನು ಚಿತ್ರರಂಗವನ್ನು ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹು ದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಎಂದು ‘ಜಟ್ಟ’ ಚಿತ್ರದ ಖ್ಯಾತಿಯ ಸುಕೃತ ವಾಗ್ಲೆ (Sukrutha Wagle) ಮಾತನಾಡಿದ್ದಾರೆ.

    ಪ್ರಮುಖ ಪಾತ್ರದಲ್ಲಿ ನಟಿಸಿರುವ ದೇವ್ ದೇವಯ್ಯ ಹಾಗೂ ಸಾತ್ವಿಕ್ ಕೃಷ್ಣನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ, ಅವಕಾಶ ನೀಡಿದ ನಿರ್ಮಾಪಕ ದಯಾಳ್ ಅವರಿಗೆ ಧನ್ಯವಾದ ಹೇಳಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಜೋಹನ್ ಮಾತನಾಡಿದರು.

  • ವಿಭಿನ್ನ ಕಥಾಹಂದರದ ‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾ ಟ್ರೇಲರ್ ಬಿಡುಗಡೆ

    ವಿಭಿನ್ನ ಕಥಾಹಂದರದ ‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾ ಟ್ರೇಲರ್ ಬಿಡುಗಡೆ

    ಮಾಮೂಲಿ ತರಹದ ಕಥೆಯಲ್ಲದೇ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಜೈ ಎಂದದ್ದು ಹೆಚ್ಚು. ಅಂತಹ ವಿಭಿನ್ನ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಯೆಲ್ಲೋ ಗ್ಯಾಂಗ್ಸ್” (Yellow Gangs) ಚಿತ್ರದ ಟ್ರೇಲರ್ (Trailer) ವಿಭಿನ್ನವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಬೇರೊಂದು ಉದ್ಯೋಗ ಮಾಡುತ್ತಿದ್ದ ನನ್ನನ್ನು ಚಿತ್ರರಂಗ ಆಕರ್ಷಿಸಿತ್ತು. ಮೊದಲ ಪ್ರಯತ್ನವಾಗಿ ಈ ಚಿತ್ರ ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳು ಬಂದಿದೆಯಾದರೂ, ಇದು ಸ್ವಲ್ಪ ಭಿನ್ನ. ನಾಯಕ ದೇವ್ ದೇವಯ್ಯ (Dev Deviah), ನಾಯಕಿ ಅರ್ಚನಾ ಕೊಟ್ಟಿಗೆ (Archana Kottige) ಸೇರಿದಂತೆ ಹತ್ತೊಂಬತ್ತು ಪ್ರಮುಖ ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಎಲ್ಲಾ ಪಾತ್ರಗಳ ಮೇಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ. ಮೂರು ಗ್ಯಾಂಗ್ ಗಳಿದ್ದು, ಅದಕ್ಕೆ ಮೂರು ಜನ ಮುಖ್ಯಸ್ಥರಿರುತ್ತಾರೆ. ಸುಜ್ಞಾನ್ ಅವರ ಸುಂದರ ಛಾಯಾಗ್ರಹಣ ಹಾಗೂ ರೋಹಿತ್ ಸೋವರ್ ಅವರ ಸಂಗೀತ ನಿರ್ದೇಶನ ಈ ಚಿತ್ರದ ಹೈಲೆಟ್. ಇಡೀ ಚಿತ್ರವನ್ನು ಟ್ರ್ಯಾಲಿ ಬಳಸದೆ , ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರಿಸಿರುವುದು ವಿಶೇಷ. ಇಂತಹ ಹಲವು ವಿಶೇಷಗಳ ಸಂಗಮವಾಗಿರುವ ನಮ್ಮ “ಯೆಲ್ಲೋ ಗ್ಯಾಂಗ್ಸ್” ಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ.

    ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಹಣ ಹೂಡಿದ್ದೇವೆ. ಏಕೆಂದರೆ ನಿರ್ದೇಶಕ ರವೀಂದ್ರ ನಮ್ಮ ಸಹಪಾಠಿ. ಮೊದಲಿನಿಂದಲೂ ಅವರ ಯೋಚನೆ ವಿಭಿನ್ನವಾಗಿರುವುದರಿಂದ ನಮ್ಮ ಸಂಸ್ಥೆಗೆ ವಿಭಿನ್ನ ಸ್ಟುಡಿಯೋಸ್ ಎಂದು ಹೆಸರಿಟ್ಟಿದ್ದೇವೆ ಎಂದರು ನಿರಂಜನ್.

    ವಿಕ್ರಮ್ ಎಂಬ ಹೆಸರಿನಿಂದ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿರುವುದಾಗಿ ನಾಯಕ ದೇವ್ ದೇವಯ್ಯ ಹೇಳಿದರು. ನನಗೆ ಇದೊಂದು ಉತ್ತಮ ಚಿತ್ರವೆಂದರು ನಾಯಕಿ ಅರ್ಚನಾ ಕೊಟ್ಟಿಗೆ. ಚಿತ್ರದಲ್ಲಿ ನಟಿಸಿರುವ ಸತ್ಯ ಬಿ.ಜಿ, ಅರುಣ್ ಕುಮಾರ್, ನಾಟ್ಯ ರಂಗ, ವಿನೀತ್ ಕಟ್ಟಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಹಾಡುಗಳಿಲ್ಲ. ರೀರೇಕಾರ್ಡಿಂಗ್ ಚಿತ್ರದ ಹೈಲೆಟ್ ಎಂದರು ಸಂಗೀತ ನಿರ್ದೇಶಕ ರೋಹಿತ್. ಸಹ ನಿರ್ಮಾಪಕ ಮನೋಜ್ ಪಿ ಅವರ ಪುತ್ರಿ ಪ್ರತೀಕ್ಷ ಟ್ರೇಲರ್ ಬಿಡುಗಡೆ ಮಾಡಿದರು. ನಿರ್ದೇಶಕರೊಟ್ಟಿಗೆ ಸಂಭಾಷಣೆ ಬರೆದಿರುವ ಪ್ರವೀಣ್ ಕುಮಾರ್ ಅಚ್ಚುಕಟ್ಟಾಗಿ ಸಮಾರಂಭ ನಡೆಸಿಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಖ್ಯಾತಿಯ ದೇವ್‌ ನಟನೆಯ ʻಯೆಲ್ಲೋ ಗ್ಯಾಂಗ್ಸ್ʼ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌

    ಜೊತೆ ಜೊತೆಯಲಿ ಖ್ಯಾತಿಯ ದೇವ್‌ ನಟನೆಯ ʻಯೆಲ್ಲೋ ಗ್ಯಾಂಗ್ಸ್ʼ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌

    ಒಂದು ಕಡೆಯಿಂದ ಭರಪೂರ ಗೆಲುವುಗಳ ಮೂಲಕ ಕನ್ನಡ ಚಿತ್ರರಂಗ ಕಳೆಗಟ್ಟಿಕೊಂಡಿದೆ. ಅದರ ಜೊತೆ ಜೊತೆಗೇ ಚಿತ್ರರಂಗವನ್ನು ಮತ್ತಷ್ಟು ಕಳೆಗಟ್ಟಿಸುವಂಥಾ ಭಿನ್ನ ಪ್ರಯೋಗಗಳ ಚಿತ್ರಗಳೂ ಕೂಡಾ ಸದ್ದಿಲ್ಲದೆ ರೂಪುಗೊಂಡು ಬಿಡುಗಡೆಗೆ ತಯಾರಾಗಿ ನಿಂತಿವೆ. ಆ ಸಾಲಿನಲ್ಲಿ ಬಹುಮುಖ್ಯವಾಗಿ ಗುರುತಿಸಿಕೊಳ್ಳುವ ಚಿತ್ರ, ರವೀಂದ್ರ ಪರಮೇಶ್ವರಪ್ಪ (Ravindra Parameshwarappa) ನಿರ್ದೇಶನದಲ್ಲಿ ಮೂಡಿ ಬಂದಿರುವ ʻಯೆಲ್ಲೋ ಗ್ಯಾಂಗ್ಸ್ʼ(Yellow Gangs Film). ಈ ಶೀರ್ಷೀಕೆ ಕೇಳಿದರೇನೇ ಒಂದು ಚೌಕಟ್ಟಿನ ಕಥಾನಕದ ಸುಳಿವು ತಂತಾನೇ ಬಿಚ್ಚಿಕೊಳ್ಳುತ್ತೆ. ಆದರೆ, ನಿರ್ದೇಶಕರು ತೆರೆದಿಡುತ್ತಾ ಬಂದಿರುವ ಒಂದಷ್ಟು ಅಂಶಗಳು ಇದೊಂದು ಚೌಕಟ್ಟು ಮೀರಿದ, ಹೊಸಾ ಪ್ರಯೋಗಗಳನ್ನು ಹೊಂದಿರುವ ಅಪರೂಪದ ಚಿತ್ರ ಎಂಬುದನ್ನು ಖಾತರಿಯಾಗಿಸುತ್ತದೆ. ಹೀಗೆ ನಾನಾ ಬಗೆಯಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಈ ಸಿನಿಮಾದ ಬಿಡುಗಡೆಗೀಗ ಮುಹೂರ್ತ ನಿಗಧಿಯಾಗಿದೆ.

    ʻಯೆಲ್ಲೋ ಗ್ಯಾಂಗ್ಸ್ʼ ಇದೇ ನವೆಂಬರ್ 11ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ಒಂದಷ್ಟು ರೀತಿಯಲ್ಲಿ ಸದರಿ ಚಿತ್ರ ಪ್ರೇಕ್ಷಕರ ಚಿತ್ತ ಸೆಳೆದಿದೆ. ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಅತ್ಯಂತ ಭಿನ್ನ ನೆಲೆಯಲ್ಲಿ ʻಯೆಲ್ಲೋ ಗ್ಯಾಂಗ್ಸ್ʼ ಅನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಚೌಕಟ್ಟಿಗೂ ಒಳಗಾಗದೆ, ಪ್ರತೀ ಹಂತದಲ್ಲಿಯೂ ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿರುವ ಈ ಕಥಾನಕ ಒಂದು ಡ್ರಗ್ ಡೀಲ್(Drugs Deal) ಸುತ್ತಾ ತೆರೆದುಕೊಂಡು, ಕಾಳಧನ ಕೇಂದ್ರಿತವಾಗಿ ಚಲಿಸುವ ಅಪರೂಪದ ಕಥಾನಕವನ್ನೊಳಗೊಂಡಿದೆ. ಹಾಗಂತ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಮತ್ತು ಹಿಂದಿಯಲ್ಲಿ ಕಾಂತಾರ: ರಿಲೀಸ್ ಡೇಟ್ ಫಿಕ್ಸ್

    ಡ್ರಗ್ಸ್ ಮತ್ತು ಕಾಸುಗಳ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ʻಯೆಲ್ಲೋ ಗ್ಯಾಂಗ್ಸ್ʼ ಕಥೆ, ನಂತರದಲ್ಲಿ ಸಂಬಂಧವಿಲ್ಲದವರನ್ನೂ ಬಳಸಿಕೊಂಡು ಸಾಗುತ್ತದೆ. ಆ ಯಾನದಲ್ಲಿ ಯಾರೂ ಊಹಿಸಿಕೊಳ್ಳಲಾಗದ ತಿರುವುಗಳೂ ಎದುರಾಗುತ್ತವೆ. ಪ್ರೇಕ್ಷಕರು ಒಂದು ದಿಕ್ಕಿನಲ್ಲಿ ಅಂದಾಜಿಸಿದರೆ, ಮತ್ಯಾವುದೋ ದಿಕ್ಕಿನಿಂದ ತೂರಿ ಬರುವ ಸಸ್ಪೆನ್ಸುಗಳು ನೋಡುಗರನ್ನೆಲ್ಲ ಥ್ರಿಲ್ ಆಗಿಸುವಂತಿವೆ ಎಂಬ ಭರವಸೆ ರವೀಂದ್ರ ಪರಮೇಶ್ವರಪ್ಪ ಅವರಲ್ಲಿದೆ. ಈ ಚಿತ್ರ ಕ್ರೈಂ ಥ್ರಿಲ್ಲರ್ ಮಾದರಿಯದ್ದೆಂದು ಹೇಳಬಹುದಾದರೂ, ಆ ಜಾನರಿನ ಸಿದ್ಧಸೂತ್ರಗಳ ಸೋಂಕಿಲ್ಲದಂತೆ ತಯಾರುಗೊಂಡಿದೆ. ಪ್ರೇಕ್ಷಕರನ್ನು ಪ್ರತೀ ಹಂತದಲ್ಲಿಯೂ ಕುತೂಹಲದ ಉತ್ತುಂಗಕ್ಕೇರಿಸುವಂತೆ ಒಟ್ಟಾರೆ ಚಿತ್ರ ಮೂಡಿ ಬಂದಿದೆಯಂತೆ.

    ಇದೊಂದು ರಾ ಕಥಾನಕವಾದ್ದರಿಂದ ಒಂದಿಡೀ ಚಿತ್ರವನ್ನು ಆ ಫೀಲ್‌ಗೆ ತಕ್ಕುದಾಗಿಯೇ ಚಿತ್ರೀಕರಣ ನಡೆಸಲಾಗಿದೆ. ಅದರೊಳಗಿನ ಪಾತ್ರಗಳು ನಮ್ಮ ನಡುವಿಂದಲೇ ಕದಲುತ್ತಿವೆಯೇನೋ ಎಂಬಂಥಾ ಭಾವ ಮೂಡಿಸುವಷ್ಟು ಶಕ್ತವಾಗಿ ಇಲ್ಲಿನ ದೃಷ್ಯಾವಳಿಗಳು ಮೂಡಿ ಬಂದಿವೆಯಂತೆ. ಈ ತಾಜಾತನ ಉಳಿಸಿಕೊಳ್ಳಲೆಂದೇ ಹ್ಯಾಂಡ್ ಹೆಲ್ಡ್ ತಂತ್ರಜ್ಞಾನದಲ್ಲಿ, ಸಾಕಷ್ಟು ಸವಾಲುಗಳನ್ನೆದುರಿಸಿ ʻಯೆಲ್ಲೋ ಗ್ಯಾಂಗ್ಸ್ʼ ಅನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ದೇವ್ ದೇವಯ್ಯ(Actor dev devaih), ಅರ್ಚನಾ ಕೊಟ್ಟಿಗೆ (Archana Kottige), ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

    ಇನ್ನುಳಿದಂತೆ, ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿವೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿಕೊಂಡಿರುವ ರವೀಂದ್ರ ಪರಮೇಶ್ವರಪ್ಪ ಯೆಲ್ಲೋ ಗ್ಯಾಂಗ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]