Tag: ದೇವೇಗೌಡ ಕುಟುಂಬ

  • ನಮ್ಮನ್ನ ಪ್ರಚೋದನೆ ಮಾಡೋದೆ ಮೈತ್ರಿ ಸರ್ಕಾರದ ಉದ್ದೇಶ : ರೇಣುಕಾಚಾರ್ಯ

    ನಮ್ಮನ್ನ ಪ್ರಚೋದನೆ ಮಾಡೋದೆ ಮೈತ್ರಿ ಸರ್ಕಾರದ ಉದ್ದೇಶ : ರೇಣುಕಾಚಾರ್ಯ

    – ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ
    – ಡಿಕೆಶಿ ನಾಟಕ ಆಡುತ್ತಿದ್ದಾರೆ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ, ಸಚಿವ ಡಿ.ಕೆ ಶಿವಕುಮಾರ್ ಅವರು ನಾಟಕ ಆಡುತ್ತಿದ್ದಾರೆ ಎಂದು ಬೆಳ್ಳಂಬೆಳಗ್ಗೆ ದೋಸ್ತಿ ನಾಯಕರ ವಿರುದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

    ರಮಡ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಈ ನಡುವೆ ರೇಣುಕಾಚಾರ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಸ್ವೀಕರ್ ರಮೇಶ್ ಕುಮಾರ್ ಅವರು ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಕೆಲಸ ಆಗಿಲ್ಲ. ಇದು ಹೀಗೆ ಮುಂದುವರಿದರೆ ಮತ್ತೊಮ್ಮೆ ಇವರು ವಚನ ಭ್ರಷ್ಟರಾಗುತ್ತಾರೆ. ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ಮೈತ್ರಿ ಉಳಿಸಲು ಡಿ.ಕೆ ಶಿವಕುಮಾರ್ ಅವರು ನಾಟಕ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ನಮ್ಮನ್ನ ಪ್ರಚೋದನೆ ಮಾಡುವುದೇ ಮೈತ್ರಿ ಸರ್ಕಾರದ ಉದ್ದೇಶವಾಗಿದೆ. ನಾವು ಶಿಸ್ತಿನಿಂದ ಇದ್ದೇವೆ. ನಾವು ಯಾವ ಅಧಿಕಾರಕ್ಕೂ ಅಂಟಿಕೊಂಡಿಲ್ಲ. ಸರ್ಕಾರ ನಮ್ಮ ಅಪ್ಪನ ಆಸ್ತಿಯೂ ಅಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ ವಿಶ್ವಾಸ ಮತ ಯಾಚನೆ ಮಾಡುತ್ತಿಲ್ಲ. ಗೂಟ ಹೊಡೆದುಕೊಂಡು ಕೂತ್ತಿದ್ದೀರಾ? ಎಂದು ಪ್ರಶ್ನಿಸಿದರು. ಬಳಿಕ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದೀರಾ, ರಾಜೀನಾಮೆ ಕೊಟ್ಟುಹೊಗಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂಬೈನಲ್ಲಿರೋ ಶಾಸಕರೆ ಸ್ವತಃ ಹೇಳಿದ್ದಾರೆ. ಆದ್ರೆ ಡಿಕೆಶಿ ನಾಟಕ ಆಡುತ್ತಿದ್ದಾರೆ. ನಮ್ಮ ಮೇಲೆ ಸುಮ್ಮನೆ ಅರೋಪ ಮಾಡುತ್ತಿದ್ದಾರೆ. ಅವರಿಗೆ ಸಂಖ್ಯೆ ಬಲ ಇಲ್ಲ ಎಂದು ಗೊತ್ತು. ಅದಕ್ಕಾಗಿ ಅವರು ಈ ರೀತಿ ಮಾತಾನಾಡಿ ಸದನವನ್ನು ಮುಂದೂಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

  • ತಾತ, ಮೊಮ್ಮಕ್ಕಳಿಗೆ ಸೋಲು ಖಚಿತ, ಚುನಾವಣೆ ನಂತ್ರ ಹುಡುಕಬೇಕು: ರಾಜುಗೌಡ

    ತಾತ, ಮೊಮ್ಮಕ್ಕಳಿಗೆ ಸೋಲು ಖಚಿತ, ಚುನಾವಣೆ ನಂತ್ರ ಹುಡುಕಬೇಕು: ರಾಜುಗೌಡ

    ಯಾದಗಿರಿ: ಲೋಕಸಭೆ ಚುನಾವಣಾ ಬಳಿಕ ಪ್ರಧಾನಿ ದೇವೇಗೌಡರನ್ನು, ಮಗ ನಿಖಿಲ್‍ರನ್ನು ಮತ್ತು ಅಣ್ಣಮಗ ಪ್ರಜ್ವಲ್ ಅವರನ್ನು ಎಲ್ಲಿದ್ದಿರಪ್ಪಾ ಅಂತ ಕರೆದು ಹುಡುಕಬೇಕಾದ ಪರಿಸ್ಥಿತಿ ಸಿಎಂ ಕುಮಾರಸ್ವಾಮಿಗೆ ಬರಲಿದೆ ಎಂದು ಸುರಪುರ ಶಾಸಕ ರಾಜುಗೌಡ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಬಳಸಿ ದೇವೇಗೌಡರ ಕುಟುಂಬವನ್ನು ಲೇವಡಿ ಮಾಡಿದ್ದಾರೆ.

    ತಾತ ಮತ್ತು ಇಬ್ಬರೂ ಮೊಮ್ಮಕ್ಕಳು ಸೋಲುವುದು ಖಚಿತವಾಗಿದೆ. ಲೋಕಸಭಾ ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಡುವುದಾಗಿ ದೇವೇಗೌಡರು ಹೇಳಿದ್ದರು. ಆದರೆ ಅವರೇನು ದೇಶ ಬಿಡಲಿಲ್ಲ. ಈಗ ರೇವಣ್ಣ ಸನ್ಯಾಸಿ ಆಗುತ್ತೇನೆ ಎನ್ನುತ್ತಾರೆ. ಇದರಿಂದಲೇ ಜೆಡಿಎಸ್‍ನವರಿಗೆ ಎರಡು ನಾಲಗೆ ಇದೆ ಎಂದು ಎನ್ನುವುದು ಗೊತ್ತಾಗುತ್ತದೆ ಎಂದು ದೇವೇಗೌಡರಿಗೆ ಮಾತಿನ ಚಾಟಿ ಬಿಸಿದರು.

    ನಿಖಿಲ್ ಎಲ್ಲಿದ್ಯಪ್ಪ ಅಂತ ಸಿನಿಮಾ ಮಾಡಿದರೆ ನೀವು ಅದರಲ್ಲಿ ನಟಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು, ನಾನಲ್ಲ ನಮ್ಮ ಮನೆ ಕೆಲಸದವರು ಕೂಡ ಆ ಚಿತ್ರದಲ್ಲಿ ಪಾತ್ರ ಮಾಡಲು ಇಷ್ಟಪಡಲ್ಲ. ಆದರೆ ಮೋದಿ ಅವರ ಸಿನಿಮಾ ಬಂದರೆ ಅದರಲ್ಲಿ ಬೇಕಾದರೇ ಸೈನಿಕನ ಪಾತ್ರ ಮಾಡುತ್ತೇನೆ ಅಂತ ಹೇಳಿದರು.

    ಕಾಂಗ್ರೆಸ್ ನಾಯಕರು ಆಯೋಜಿಸಿರುವ ವೀರಶೈವ ಲಿಂಗಾಯತ ಸಮಾವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ಧಿ ಬಂದಂತೆ ಲಿಂಗಾಯತ ಧರ್ಮ ಒಡೆಯಲು ಹೋದ ಬಳಿಕ ಕಾಂಗ್ರೆಸ್ ನಾಯಕರಿಗೆ ಈಗ ಬುದ್ಧಿ ಬಂದಿದೆ. ಧರ್ಮ ಒಡೆದವರು ಈಗ ಲೋಕಸಭೆ ಚುನಾವಣೆಯಲ್ಲಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಂತವರು ಸರ್ವನಾಶ ಅಗಲಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

  • 38 ಸೀಟ್ ತಕ್ಕೊಂಡವರು 108 ಸೀಟ್ ಗೆದ್ದವರ ಬಗ್ಗೆ ಮಾತನಾಡುತ್ತಾರೆ: ಬಿಎಸ್‍ವೈ

    38 ಸೀಟ್ ತಕ್ಕೊಂಡವರು 108 ಸೀಟ್ ಗೆದ್ದವರ ಬಗ್ಗೆ ಮಾತನಾಡುತ್ತಾರೆ: ಬಿಎಸ್‍ವೈ

    ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಅಧಿಕಾರದ ಮದ ಹಾಗೂ ಸೊಕ್ಕಿನಿಂದ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ನಡೆದ ಬಳಿಕ ಅವರೆಲ್ಲಿರುತ್ತಾರೆ ಅಂತ ನಾವು ನೀವು ಹುಡುಕೋಣ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದೇ ಅಕ್ಷಮ್ಯ ಅಪರಾಧ. 38 ಸೀಟ್ ತೆಗೆದುಕೊಂಡು ಸಿಎಂ ಆದವರು 108 ಸೀಟ್ ತೆಗೆದುಕೊಂಡವರ ಬಗ್ಗೆ ಮಾತಾಡ್ತಾರೆ. ಸೊಕ್ಕಿನಿಂದ ಮತನಾಡುವ ಅವರಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜಿ.ಎಂ. ಸಿದ್ದೇಶ್ವರ್ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಗೆದ್ದಿದ್ದಾರೆ. ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರ, ದೇಶದಲ್ಲಿ 300 ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತುಮಕೂರಿನಲ್ಲಿ ದೇವೇಗೌಡರು ಸೋಲೋದು ಖಚಿತ, ಅಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಗೆಲ್ಲುತ್ತಾರೆ. ಸದ್ಯ ಮಂಡ್ಯದಲ್ಲಿ ಐಟಿ ರೇಡ್ ಬಗ್ಗೆ ಹಗುರವಾಗಿ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ ಹಣದಲ್ಲಿ 1,344 ಕೋಟಿ ರೂ. ಅಕ್ರಮ ನಡೆದಿದೆ. 5 ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಮೈತ್ರಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಈಗ 5 ಕಾಮಗಾರಿಗಳಿಗೂ ಹಣ ಪಾವತಿಸಿ ಸಿಕ್ಕಿ ಬಿದ್ದಿದ್ದಾರೆ. ಇನ್ನೂ ಅನೇಕ ಹಗರಣ ಬಯಲಾಗತ್ತವೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳ ಚುನಾವಣೆ ಮುಗಿದ ಮೇಲೆ ಮನೆ ಕಡೆ ಹೋಗಬೇಕಾಗುತ್ತದೆ ಎಂದು ಟೀಕಿಸಿದರು.

    ನಂತರ ದೇಶ ಸಾಕಷ್ಟು ಅಭಿವೃದ್ಧಿ ಆಗಿದೆ. ಹೊರ ದೇಶದ ಹೂಡಿಕೆದಾರರು ದೇಶದ ಕಡೆ ಮುಖ ಮಾಡುತ್ತಿದ್ದಾರೆ. 16 ಲಕ್ಷ ಕೋಟಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ದೇಶದ ಆರ್ಥಿಕ ಸ್ಥಿತಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಮೋದಿ ಸರ್ಕಾರ ಬಹಳಷ್ಟು ಅಭಿವೃದ್ಧಿಯನ್ನು ದೇಶದಲ್ಲಿ ಮಾಡಿದೆ ಎಂದು ತಿಳಿಸಿದರು.

  • ಮೋದಿ 20 ಗಂಟೆ ಕೆಲ್ಸ ಮಾಡಿದ್ರೆ ಕಾಂಗ್ರೆಸ್ಸಿನವರು ಮಧ್ಯಾಹ್ನ ಎದ್ದುಕೊಂಡು ಬರ್ತಾರೆ: ಆಯನೂರು

    ಮೋದಿ 20 ಗಂಟೆ ಕೆಲ್ಸ ಮಾಡಿದ್ರೆ ಕಾಂಗ್ರೆಸ್ಸಿನವರು ಮಧ್ಯಾಹ್ನ ಎದ್ದುಕೊಂಡು ಬರ್ತಾರೆ: ಆಯನೂರು

    – ಕರ್ನಾಟಕ ಕಣ್ಣೀರು ಮುಕ್ತ ರಾಜ್ಯವಾಗಬೇಕು
    – ದೇವೇಗೌಡರ ಕುಟುಂಬದವರ ಕಣ್ಣೀರು ಬತ್ತಲ್ಲ

    ದಾವಣಗೆರೆ: ಮೋದಿ ಅವರು ದಿನದ 20 ಗಂಟೆ ಕೆಲಸ ಮಾಡುವ ಪ್ರಧಾನಿ. ಆದ್ರೆ ನಮ್ಮ ಕಾಂಗ್ರೆಸ್ ನಾಯಕರು ಮಧ್ಯಾಹ್ನ ಎದ್ದು ಕಣ್ಣೊರೆಸಿಕೊಂಡು ಬರುತ್ತಾರೆ ಎಂದು ಬಿಜೆಪಿ ನಾಯಕ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.

    ರೇಣುಕಾ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಏನೇ ಕೆಲಸ ಇರಲಿ ಅವರು ಏಳುವುದು ಮಧ್ಯಾಹ್ನ 12 ಗಂಟೆಗೆ. ಅವರು ಪ್ರಧಾನಿ ಬಗ್ಗೆ ಮಾತನಾಡುತ್ತಾರೆ. ಅವರು ಯಾರು ಎನ್ನುವುದು ಜಿಲ್ಲೆಯ ಜನತೆಗೆ ಗೊತ್ತಿದೆ. ಮಧ್ಯಾಹ್ನದ ವರೆಗೂ ಮಲಗುವವರು ರಾತ್ರಿಯಲ್ಲಿ ಏನ್ ಕಡೆದು ಕಟ್ಟೆ ಹಾಕ್ತಾರೆ ಎಂದು ಪ್ರಶ್ನಿಸಿ ಹೆಸರು ಹೇಳದೇ ಶಾಮನೂರು ಹಾಗೂ ಅವರ ಮಕ್ಕಳಿಗೆ ಟಾಂಗ್ ನೀಡಿದ್ದಾರೆ.

    ನರೇಂದ್ರ ಮೋದಿ ಶ್ರೀಮಂತರ ಮಗನಲ್ಲ. ಕೂಲಿ ಕಾರ್ಮಿಕನ ಮಗ. ಆದರೆ ಈಗ ದೇಶದ ಪ್ರಧಾನಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಸಮಾರಂಭಕ್ಕೆ ಹೋದ್ರೂ ನಿದ್ದೆ ಮಾಡಿಕೊಂಡೇ ಇರುತ್ತಾರೆ. ಶಾಲೆಯಲ್ಲಿ ಮಾಸ್ಟರ್ ನಿದ್ದರಾಮಯ್ಯ ಅಂತ ಬರಿಯೋದು ಬಿಟ್ಟು ಸಿದ್ದರಾಮಯ್ಯ ಅಂತ ಬರೆದುಬಿಟ್ಟಿದ್ದಾರೆ. ಮಧ್ಯಾಹ್ನದವರೆಗೂ ಮಲಗುವ ಅವರನ್ನು ಸೋಲಿಸಿ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನ ಶಾಮನೂರು ಹಾಗೂ ಮಲ್ಲಿಕಾರ್ಜುನ್‍ರನ್ನು ಸೋಲಿಸಿ ಎಂದು ಕಾರ್ಯಕರ್ತರಿಗೆ ಆಯನೂರು ಕರೆ ಕೊಟ್ಟಿದ್ದಾರೆ.

    ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರಷ್ಟು ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ. ಕಾಂಗ್ರೆಸ್ ಪಕ್ಷವನ್ನು ಯಾರಾದ್ರೂ ಕೈ ಹಿಡಿದು ನಡೆಸುವ ದುಸ್ಥಿತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.

    ಕಾಂಗ್ರೆಸ್ ಪಕ್ಷದ ಸಚಿವರೇ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಿದ್ದಾರೆ. ಶಾಮನೂರು ಕುಟುಂಬ ವಿರುದ್ಧ ಎಂ.ಬಿ ಪಾಟೀಲ್, ಎಂಬಿ ಪಾಟೀಲ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕುಟುಂಬ. ಬಹಿರಂಗವಾಗಿ ಅವರು ಎಷ್ಟು ಹೊಡೆದು ತಿಂದರು. ಇವರೆಷ್ಟು ಹೊಡೆದು ತಿಂದರು ಎಂದು ಹೇಳುತ್ತಾರೆ. ಹೊಡೆದು ಆಸ್ತಿ ಮಾಡಿಕೊಳ್ಳುವರ ವಿರುದ್ಧ ಅವರೇ ಹೇಳಿಕೊಳ್ಳುತ್ತಾರೆ. ಇವರಿಂದ ದೇಶ ಉಳಿಸಲು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿ. ದೇಶವನ್ನು ಕಾಂಗ್ರೆಸ್ ಮುಕ್ತ ಭಾರತದಂತೆ, ಕರ್ನಾಟಕವನ್ನು ಕಣ್ಣೀರು ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ದೇವೇಗೌಡರ ಕುಟುಂಬಕ್ಕೆ ಆಯನೂರು ಟಾಂಗ್ ನೀಡಿದರು.

    ಕಾವೇರಿಯಲ್ಲಿ ನೀರು ಬತ್ತಬಹುದು ಆದ್ರೆ ದೇವೇಗೌಡರ ಕುಟುಂಬದವರ ಕಣ್ಣಲ್ಲಿ ನೀರು ಬತ್ತೋದಿಲ್ಲ. ಹಾಸನದಲ್ಲಿ ಹೋಲ್ ಸೇಲ್ ಆಗಿ ಕಣ್ಣೀರು ಹಾಕಿದ್ರು. ಕುಮಾರಸ್ವಾಮಿ ನನ್ನನ್ನು ಮುಖ್ಯಮಂತ್ರಿ ಮಾಡಿ ಇಲ್ಲ ಸಾಯುತ್ತೇನೆ ಎಂದರು. ದೇಶದ ಇತಿಹಾಸದಲ್ಲಿ ಇದೇ ಮೊದಲು ಮುಖ್ಯಮಂತ್ರಿ ಮಾಡಿ ಇಲ್ಲ ಸಾಯುತ್ತೇನೆ ಎಂದಿರುವುದು ಎದು ದೇವೇಗೌಡರ ಕುಟುಂಬವನ್ನು ಆಯನೂರು ಮಂಜುನಾಥ್ ಲೇವಡಿ ಮಾಡಿದರು.

  • ಮೊಮ್ಮಕ್ಕಳು ನಿಂತಾಯ್ತು, ಮುಂದಿನ 3 ದಶಕಗಳ ಕಾಲ ಗೌಡರ ಕುಟುಂಬಕ್ಕೆ ಕಾರ್ಯಕರ್ತರು ದುಡಿಯಬೇಕು: ಕರಂದ್ಲಾಜೆ

    ಮೊಮ್ಮಕ್ಕಳು ನಿಂತಾಯ್ತು, ಮುಂದಿನ 3 ದಶಕಗಳ ಕಾಲ ಗೌಡರ ಕುಟುಂಬಕ್ಕೆ ಕಾರ್ಯಕರ್ತರು ದುಡಿಯಬೇಕು: ಕರಂದ್ಲಾಜೆ

    ಶಿವಮೊಗ್ಗ: ಹಾಸನದಲ್ಲಿ ಪ್ರಜ್ವಲ್, ಮಂಡ್ಯದಲ್ಲಿ ನಿಖಿಲ್ ಚುನಾವಣೆಗೆ ನಿಂತಿದ್ದಾರೆ. ಆದ್ದರಿಂದ ಮುಂದಿನ ಮೂರು ದಶಕಗಳ ಕಾಲ ಮತ್ತೆ ಗೌಡರ ಕುಟುಂಬಕ್ಕಾಗಿ ಕಾರ್ಯಕರ್ತರು ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ಕೊಟ್ಟಿದ್ದಾರೆ.

    ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಿಂದ ಈ ಬಾರಿ ಹೆಚ್ಚು ಬಿಜೆಪಿ ಸಂಸದರು ಸಂಸತ್ ಪ್ರವೇಶಿಸಲಿದ್ದಾರೆ. ಬಹಳ ವರ್ಷಗಳ ಕಾಲ ಕುಟುಂಬ ರಾಜಕಾರಣ ನಡೆಯುವುದಿಲ್ಲ. ಇಷ್ಟು ವರ್ಷಗಳ ಕಾಲ ದೇವೇಗೌಡರಿಗಾಗಿ ಹಾಸನದಲ್ಲಿ ಜನ ಬೆಂಬಲ ನೀಡಿ ಕೆಲಸ ಮಾಡಿದ್ದಾರೆ. ಇದೀಗ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಕೂಡ ಹಾಸನದಿಂದ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಜೆಡಿಎಸ್‍ಗೆ ಬೆಂಬಲಿಸಿದ ಕಾರ್ಯಕರ್ತರಿಗೆ ಏನೂ ಸಿಕ್ಕಿಲ್ಲ. ಅವರಿಗೆ ಈವರೆಗೆ ಯಾವುದೇ ಕೆಲಸವಾಗಿಲ್ಲ ಎಂದರು.

    ಕಳೆದ 2-3 ದಶಕದಿಂದ ರಾಜ್ಯದ ಜನ ದೇವೇಗೌಡರ ಕುಟುಂಬದ ಕಣ್ಣೀರು ನೋಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ದೇಶದ ಜನ ಇಂದು ಕಣ್ಣೀರು ಹಾಕುತ್ತಿದ್ದಾರೆ. ಕಣ್ಣೀರಿಗೆ ರಾಜ್ಯದ ಜನರು ಮರುಳಾಗಲ್ಲ. ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ವಾತವಾರಣವಿದೆ. ದೇಶದ ಅಭಿವೃದ್ಧಿ, ರಕ್ಷಣೆಗಾಗಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಜನರು ಕೂಡ ಅದನ್ನೇ ಬಯಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಟೀಕಿಸಿದ ಬಿಜೆಪಿ ಕಾರ್ಯಕರ್ತರು

    ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಟೀಕಿಸಿದ ಬಿಜೆಪಿ ಕಾರ್ಯಕರ್ತರು

    ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‍ನಿಂದ ಕುಟುಂಬ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬವನ್ನು ಮನಬಂದಂತೆ ಟೀಕಿಸುತ್ತಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿ, ಲೇವಡಿ ಮಾಡಿ ಪೋಸ್ಟ್ ಗಳನ್ನು ಕೂಡ ಹಾಕುತ್ತಿದ್ದಾರೆ.

    ಕಳೆದ 25 ವರ್ಷಗಳಿಂದ ಪಕ್ಷಕ್ಕೋಸ್ಕರ ದುಡಿದು, ಬೆವರು, ರಕ್ತ ಸುರಿಸಿ ಹೋರಾಡಿದ ನನ್ನ ಜೆಡಿಎಸ್ ಅಣ್ತಮ್ಮಂದಿರ ಆತ್ಮಕ್ಕೆ ಶಾಂತಿ ಸಿಗಲಿ. ಮಂಡ್ಯ ಜಿಲ್ಲೆ ಸ್ವಾಭಿಮಾನ ಅಡವಿಟ್ಟ ನಿಮ್ಮ ಜನ್ಮಕ್ಕೆ ಧಿಕ್ಕಾರವಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಹಾಗೂ ಮಂಡ್ಯದ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಲೋಕಸಭಾ ಚುನಾವನೆಯಲ್ಲಿ ಆಕಸ್ಮಾತ್ ವಲಸಿಗ ಗೆದ್ದರೆ ನಿಮ್ಮನ್ನ ಮಂಡ್ಯ ಇತಿಹಾಸ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಕೆಲವರು ಬರೆದಿದ್ದರೆ, ಇನ್ನೂ ಕೆಲವರು ಸದ್ಯ ನಮ್ ಪುಣ್ಯ, ನಮ್ ಗೌಡ್ರು ಕ್ರಿಕೆಟ್ ಆಡಕ್ಕೆ ಕಲಿತು ಇಂಡಿಯಾ ಕ್ರಿಕೆಟ್ ಟೀಂ ಸೇರಿಲ್ಲ. ಇಲ್ಲಾಂದಿದ್ದರೆ ಇಷ್ಟೊತ್ತಿಗೆ ಫುಲ್ ಟೀಮ್ ಅಲ್ಲಿ ಅವರ ಕುಟುಂಬದವರೇ ಇರುತ್ತಿದ್ದರು ಎಂದು ಟೀಕಿಸಿದ್ದಾರೆ.

    ಕೆಲವರು ಮೊದಲೆಲ್ಲ ಮಂಡ್ಯ ಬಸ್ ನಿಲ್ದಾಣದಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಎಂದು ಕೂಗುತ್ತಿದ್ದರು. ಈಗ ಜೆಡಿಎಸ್ ಅಂದಾಭಿಮಾನಿಗಳು ಮಂಡ್ಯಕ್ಕೆ ನಿಖಿಲ್, ಮದ್ದೂರು ಡಿಸಿ ತಮ್ಮಣ್ಣ, ಚೆನ್ನಪಟ್ಟಣ ಕುಮಾರಸ್ವಾಮಿ, ರಾಮನಗರ ಅನಿತಾ ಕುಮಾರಸ್ವಾಮಿ, ಬೆಂಗಳೂರು ದೇವೇಗೌಡ್ರು ಎಂದು ಕೂಗುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗೆ ಟೀಕೆ ಮಾಡಿದವರಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜೆಡಿಎಸ್‍ಗೆ ಬಿಜೆಪಿ ಟೀಕಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

    ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

    ಮೈಸೂರು: ನಾನು ನನ್ನ ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಜನಸೇವೆ ಬಗ್ಗೆ ಯೋಚನೆ ಮಾಡ್ತೀನಿ. ಆದ್ರೆ ಕೆಲವರು ಮಕ್ಕಳು, ಮರಿಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾರೆ ಅಂತ ಸಂಸದ ಪ್ರತಾಪ್ ಸಿಂಹ ಅವರು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ನಡೆದ ರೈಲ್ವೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ಮಗಳ ಬಗ್ಗೆ ಯೋಚನೆ ಮಾಡಲ್ಲ. ಆದ್ರೆ ಕೆಲವರು ಮಕ್ಕಳು, ಮರಿಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾರೆ. ನಾನು ಮೈಸೂರಿನ ಜನತೆ ಬಗ್ಗೆ ಯೋಚನೆ ಮಾಡುತ್ತೇನೆ. ನಾನು ಬೇರೆ ರಾಜಕಾರಣಿಗಳಂತೆ ಕಮಿಷನ್ ವ್ಯವಹಾರ ಮಾಡಲ್ಲ. ನಾನು ಜನ ಸೇವೆ ಮಾಡಲು ಬಂದಿದ್ದೇನೆ. ಬೇರೆ ಯಾವ ರಾಜಕಾರಣಿಗಳು ಮಾಡದ ಜನಪರ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಉಮೇಶ್ ಜಾಧವ್ ಬಿಜೆಪಿ ಬರುವುದು ಅಪರೇಷನ್ ಕಮಲ ಅಲ್ಲ. ಆಪರೇಷನ್ ನಡೆಯುವುದು ಕೆ.ಆರ್.ಆಸ್ಪತ್ರೆಯಲ್ಲಿ. ಜಾಧವ್ ಅವರು ಬಿಜೆಪಿ ಸೇರುತ್ತಿರುವುದು ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ಎಂದು ತಿಳಿಸಿದ್ದಾರೆ.

    ನನ್ನ ಎದುರಾಳಿ ಯಾರು ಎಂಬುದನ್ನು ನೋಡಲ್ಲ. ನಾನು ನಾಲ್ಕೂವರೆ ವರ್ಷ ಮಾಡಿದ ಅಭಿವೃದ್ಧಿ ಕೆಲಸವನ್ನ ಜನರು ನೋಡಿದ್ದಾರೆ. ನನ್ನ ಅಭಿವೃದ್ಧಿ ಕಾರ್ಯ ಜನರು ನೋಡಿ ಮತಹಾಕುತ್ತಾರೆ ಎಂದು ಪ್ರತಾಪ್ ಸಿಂಹ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv