Tag: ದೇವೇಗೌಡರು. ಕುಮಾರಸ್ವಾಮಿ

  • ಹೆಚ್‍ಡಿಡಿ, ಹೆಚ್‍ಡಿಕೆ, ಡಿ.ಸಿ ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿರೇಮಠ್

    ಹೆಚ್‍ಡಿಡಿ, ಹೆಚ್‍ಡಿಕೆ, ಡಿ.ಸಿ ತಮ್ಮಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿರೇಮಠ್

    ಗದಗ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ ತಮ್ಮಣ್ಣ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಭೂಕಬಳಿಕೆ ಆರೋಪ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಡಿ.ಸಿ ತಮ್ಮಣ್ಣ, ರಾಮನಗರ ತಾಲೂಕಿನ ಬಿಡದಿ ಹೋಬಳಿ ಕೆತಿನಹಳ್ಳಿ ಗ್ರಾಮದ 110 ಗೋಮಾಳ ಸೇರಿದಂತೆ 200 ಎಕರೆ ಜಮೀನನ್ನು ಕಬಳಿಸಿದ್ದಾರೆ. ಅತಿಕ್ರಮಣ ಮಾಡಿದವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಇದೇ ವೇಳೆ ಕಪ್ಪತ್ತಗುಡ್ಡಕ್ಕೆ ಕಂಟಕ ಬಂದರೆ ಮತ್ತೆ ಹೋರಾಟ ಮಾಡುವುದಾಗಿ ಎಸ್.ಆರ್ ಹಿರೇಮಠ್ ಎಚ್ಚರಿಕೆ ನೀಡಿದರು. ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅಕ್ರಮ ಗಣಿಗಾರಿಕೆ ನಡೆಸಲು ಕಂಪನಿಗಳು ಮುಂದೆ ಬಂದಿದ್ದವು. ಬಲ್ಡೋಟಾ ಹಾಗೂ ಪೋಸ್ಕೋ ಕಂಪನಿಗಳು ಹುನ್ನಾರ ನಡೆಸಿದ್ದವು. ತೋಂಟದಾರ್ಯ ಸ್ವಾಮೀಜಿ ಹಾಗೂ ಹೋರಾಟಗಾರರು ಪ್ರತಿಭಟನೆ ನಡೆಸಿದ ಪ್ರತಿಫಲವಾಗಿ ಈ ಕಂಪನಿಗಳು ದೂರ ಸರಿದ್ದವು.

    ಬಲ್ಡೋಟಾ ಕಂಪನಿ ಪಿಐಎಎಲ್ ಸೋಗಿನಲ್ಲಿ ಬಹಳಷ್ಟು ಪ್ರಯತ್ನ ನಡೆಸಿತು. ಆದರೆ ಅದೆಲ್ಲವೂ ಶತಾಯಗತಾಯ ಸೋಲನುಭವಿಸಬೇಕಾಯಿತು. ನೂತನ ಸಚಿವ ಆನಂದ ಸಿಂಗ್ ಹಾಗೂ ಗಣಿ ಮತ್ತು ವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಯತ್ನ ಮುಂದುವರಿಸಿವೆ. ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಸುದ್ದಿಗೋಷ್ಠಿನಲ್ಲಿ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಕುಷ್ಟಗಿ, ಎಸ್.ಕೆ ಪೂಜಾರ್, ಚಂದ್ರು ಚವ್ಹಾಣ್ ಉಪಸ್ಥಿತರಿದ್ದರು.