Tag: ದೇವೇಂದ್ರ ಫಡ್ನವಿಸ್

  • ಕ್ಲೈಮಾಕ್ಸ್ ತಲುಪಿದ ‘ಮಹಾ’ ಹೈಡ್ರಾಮ- ಬಿಜೆಪಿಗೆ ರಾಜ್ಯಪಾಲರು ಆಹ್ವಾನ

    ಕ್ಲೈಮಾಕ್ಸ್ ತಲುಪಿದ ‘ಮಹಾ’ ಹೈಡ್ರಾಮ- ಬಿಜೆಪಿಗೆ ರಾಜ್ಯಪಾಲರು ಆಹ್ವಾನ

    ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಹಗ್ಗಜಗ್ಗಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.

    ವಿಧಾನಸಭಾ ಚುನಾವಣೆ ನಡೆದು 15 ದಿನ ಕಳೆದರು ಇನ್ನೂ ಯಾವುದೇ ಪಕ್ಷ ಸರ್ಕಾರ ರಚಿಸುವ ಕುರಿತು ಹಕ್ಕು ಮಂಡಿಸದೇ ಇದ್ದ ಕಾರಣ ಬಿಜೆಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ಗೆ ಹಕ್ಕು ಮಂಡಿಸಿ ಸರ್ಕಾರ ರಚಿಸಲು ಅವಕಾಶ ನೀಡಿದ್ದು ಸೋಮವಾರದೊಳಗೆ ಬಹುಮತ ಸಾಬೀತಿಗೆ ಸೂಚಿಸಲಾಗಿದೆ. ಇದು ಸಾಧ್ಯವಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ.

    ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳು ತಾವು ಸರ್ಕಾರ ರಚಿಸಲು ಸಿದ್ಧ ಎಂದು ಹೇಳಿವೆ. ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಆದರೆ, ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿರುವುದು ಬಿಜೆಪಿ ಪಾಲಿಗೆ ಮುಳುವಾಗಿದೆ.

    ಶುಕ್ರವಾರ ವಿಧಾನಸಭಾ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ರಾಜೀನಾಮೆ ನೀಡಿದ್ದರು. ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ರಾಜ್ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಇಷ್ಟು ದಿನ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಪ್ರಜೆಗಳಿಗೆ ಧನ್ಯವಾದ ಹೇಳಿದರು. ಜೊತೆಗೆ 5 ವರ್ಷಗಳ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ನಾವು ಮಹಾರಾಷ್ಟ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿಯೇ ಈ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು.

    ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. 50 -50 ಸೂತ್ರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮೈತ್ರಿ ಮಾಡಿಕೊಂಡಿದ್ದರೂ ಚುನಾವಣಾ ಫಲಿತಾಂಶ ಬಂದ ದಿನವೇ ಶಿವಸೇನೆ ಎಲ್ಲ ಅವಕಾಶಗಳ ಬಾಗಿಲು ತೆರೆಯುತ್ತೇವೆ ಎಂದು ಹೇಳಿದ್ದು ಸರಿಯಲ್ಲ ಎಂದು ನೇರವಾಗಿಯೇ ಹೇಳಿ ಟೀಕಿಸಿದ್ದರು.

  • ಮಹಾ ಚುನಾವಣೆಯಲ್ಲಿ ಮೈತ್ರಿಯಾದ್ರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಶಿವಸೇನೆ ನೇರ ಸ್ಪರ್ಧೆ

    ಮಹಾ ಚುನಾವಣೆಯಲ್ಲಿ ಮೈತ್ರಿಯಾದ್ರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಶಿವಸೇನೆ ನೇರ ಸ್ಪರ್ಧೆ

    – ಫಡ್ನಾವಿಸ್, ಉದ್ಧವ್ ಠಾಕ್ರೆ ಪ್ರಚಾರ
    – ದೇಶದ ಗಮನ ಸೆಳೆದಿದೆ ಸಿಂಧೂದುರ್ಗ ಜಿಲ್ಲೆಯ ಕ್ಷೇತ್ರ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಆದರೆ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ, ಶಿವಸೇನೆ ನೇರ ಹಣಾಹಣಿ ಎದುರಿಸುವಂತಾಗಿದೆ.

    ಸೋಮವಾರ ಮಹಾರಾಷ್ಟ್ರ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದ್ದು, ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಅಭ್ಯರ್ಥಿಗಳು ಎದುರಾಳಿಗಳಾಗಿದ್ದಾರೆ. ಸಿಂಧೂದುರ್ಗ ಜಿಲ್ಲೆಯ ಕಂಕವ್ಲಿ ಕ್ಷೇತ್ರದಲ್ಲಿ ಬಿಜೆಪಿಯ ನಿತೀಶ್ ರಾಣೆ ಹಾಗೂ ಶಿವ ಸೇನೆಯ ಸತೀಶ್ ಸಾವಂತ್ ಪರಸ್ಪರ ಎದುರಾಳಿಯಾಗಿದ್ದಾರೆ.

    2014ರಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಜಯಗಳಿಸಿದ್ದ ರಾಣೆ, ನಂತರ ಅವರ ತಂದೆಯಾದಿಯಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಹೀಗಾಗಿ ಬಿಜೆಪಿ ಇವರಿಗೆ ಟಿಕೆಟ್ ನೀಡಲೇಬೇಕೆಂಬ ಒತ್ತಡದಲ್ಲಿ ಸಿಲುಕಿತು. ಇತ್ತ ಶಿವಸೇನೆಯ ಸಾವಂತ್ ಸಹ ತಮ್ಮ ಹಠವನ್ನು ಬಿಡಲಿಲ್ಲ. ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಾವಂತ್ ನಿರ್ಧರಿಸಿದ್ದರು. ಅಲ್ಲದೆ ನಾಮಪತ್ರವನ್ನು ಸಹ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಶಿವಸೇನೆಯಿಂದ ಸಾವಂತ್ ಅವರನ್ನು ಮನವೊಲಿಸಲು ಸಾಧ್ಯವಾಗದ ಕಾರಣ ಪಕ್ಷದಿಂದಲೇ ಟಿಕೆಟ್ ನೀಡಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

    ನಿತೀಶ್ ರಾಣೆ ಹಾಗೂ ಅವರ ತಂದೆ, ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಈ ತಿಂಗಳ ಆರಂಭದಲ್ಲಿ ಬಿಜೆಪಿ ಸೇರಿದ್ದರು. ವಿಶೇಷ ಏನೆಂದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇಬ್ಬರೂ ಸಹ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಇಲ್ಲಿ ಪ್ರಚಾರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕಂಕವ್ಲಿ ಕ್ಷೇತ್ರ ಇದೀಗ ಮಹಾರಾಷ್ಟ್ರದಲ್ಲಿ ಭಾರೀ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ ಕಂಕವ್ಲಿಯಲ್ಲಿ ಬಿಜೆಪಿಯ ನಿತೀಶ್ ರಾಣೆ ಶೇ.70 ಮತಗಳನ್ನು ಪಡೆದು ಜಯಗಳಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ನಾರಾಯಣ್ ರಾಣೆ ಹಾಗೂ ಅವರ ಕುಟುಂಬ ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ತುಂಬಾ ಸಂತಸವಾಗಿದೆ. ಕೊಂಕಣ ಸಮಸ್ಯೆ ಬಂದಾಗಲೆಲ್ಲ ನಿತೀಶ್ ರಾಣೆ ತುಂಬಾ ಆಕ್ರಮಣಕಾರಿಯಾಗುತ್ತಿದ್ದರು. ಅವರಿಗೆ ತಂದೆ ನಾರಾಯಣ್ ತರಬೇತಿ ನೀಡಿದ್ದಾರೆ. ಆದರೆ ಈಗ ಅವರು ನಮ್ಮ ಶಾಲೆಗೆ ಬರಬೇಕಿದೆ. ಅವರ ಆಕ್ರಮಣಶೀಲತೆಯನ್ನು ನಾವು ಕಡಿಮೆ ಮಾಡುವುದಿಲ್ಲ. ಬದಲಿಗೆ ಸ್ವನಿಯಂತ್ರಣ ಹಾಕಿಕೊಳ್ಳುವ ಕುರಿತು ಅವರಿಗೆ ಕಲಿಸಿಕೊಡುತ್ತೇವೆ ಎಂದು ಹೇಳಿದ್ದರು.

    ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಹ ಇಲ್ಲಿ ಪ್ರಚಾರ ಮಾಡಿದ್ದು, ನಿತೀಶ್ ರಾಣೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಠಾಕ್ರೆ, ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ ಈ ಕ್ಷೇತ್ರಕ್ಕೆ ನಾನು ಬಂದಿದ್ದೇನೆ. ಏಕೆಂದರೆ ಇಲ್ಲಿ ಶಿವಸೇನೆ ಅಭ್ಯರ್ಥಿ ಗೆಲ್ಲಬೇಕಿದೆ. ಇದರರ್ಥ ಶಿವಸೇನೆ ಹಾಗೂ ಬಿಜೆಪಿ ಮತ್ತೆ ಹೋರಾಡುತ್ತಿದೆ ಎಂದಲ್ಲ. ಅಲ್ಲದೆ ಮುಖ್ಯಮಂತ್ರಿ ಹಾಗೂ ನಾನು ವಾದ ಮಾಡುತ್ತಿದ್ದೇವೆ ಎಂದೂ ಅಲ್ಲ, ಮುಖ್ಯಮಂತ್ರಿ ಹಾಗೂ ನಾನು ಉತ್ತಮ ಸ್ನೇಹಿತರು. ಬಿಜೆಪಿಯೊಂದಿಗೆ ಗಟ್ಟಿಯಾದ ಮೈತ್ರಿ ಹೊಂದಿದ್ದೇವೆ. ಬಿಜೆಪಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ನಾವು ಅವರ ಪರವಾಗಿಯೇ ಪ್ರಚಾರ ಮಾಡುತ್ತಿದ್ದೆವು. ನಾವು ಈ ಹಿಂದೆ ತಪ್ಪು ಮಾಡಿದ್ದೇವೆ, ಅದೇ ತಪ್ಪನ್ನು ನನ್ನ ಸ್ನೇಹಿತರು ಮಾಡಬಾರದು. ಹೀಗಾಗಿ ಶಿವಸೇನೆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

    ಅಲ್ಲದೆ 2004-05ರಲ್ಲಿ ಅವರು ಶಿವಸೇನೆಯನ್ನು ಬಿಡಲಿಲ್ಲ. ನಾವೇ ಅವರನ್ನು ಪಕ್ಷದಿಂದ ಹೊರಹಾಕಿದ್ದೇವೆ ಎಂದು ನಾರಾಯಣ ರಾಣೆ ವಿರುದ್ಧ ಠಾಕ್ರೆ ಆರೋಪಿಸಿದ್ದರು.

    ಮಹಾರಾಷ್ಟ್ರದ ಚುನಾವಣೆ ರಂಗೇರಿದೆ. ಅದರ ಮಧ್ಯೆಯೇ ಕಂಕವ್ಲಿ ಕ್ಷೇತ್ರ ಸಹ ಇನ್ನೂ ರಂಗೇರಿದ್ದು, ಮೈತ್ರಿಯನ್ನು ಲೆಕ್ಕಿಸದೆ ಕೇವಲ ಈ ಕ್ಷೇತ್ರಕ್ಕಾಗಿ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.