ಮುಂಬೈ: ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ವಿಚಾರವಾಗಿ (Badlapur Encounter) ಮಹಾರಾಷ್ಟ್ರ (Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis), ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ ಎಂದು ವಿಪಕ್ಷಗಳಿಗೆ ಪ್ರಶ್ನಿಸಿದ್ದಾರೆ.
ಆರೋಪಿಯ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ದಾಳಿಯ ವೇಳೆ ಪೊಲೀಸರು ಚಪ್ಪಾಳೆ ತಟ್ಟುವುದಿಲ್ಲ. ಇಂತಹ ಘಟನೆಗಳ ವೈಭವೀಕರಣ ನಡೆಯಬಾರದು. ಪ್ರಕರಣ ಸಂಬಂಧ ನ್ಯಾಯಯುತ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: Badlapur Encounter | ಆರೋಪಿ ತಲೆಗೆ ಗುಂಡಿಟ್ಟಿದ್ದು ಏಕೆ? – ಪ್ರಕರಣ ಟೈಮ್‌ಲೈನ್ ಕೊಡುವಂತೆ ʻಹೈʼಸೂಚನೆ!

ನಾವು ಎನ್‍ಕೌಂಟರ್ ಬೆಂಬಲಿಸುವುದಿಲ್ಲ. ಕಾನೂನಿನ ನಿಯಮವನ್ನು ಅನುಸರಿಸಬೇಕು ಮತ್ತು ಅದರ ಪ್ರಕಾರ ಅಪರಾಧಿಗೆ ಶಿಕ್ಷೆಯಾಗಬೇಕು. ಅದು ತ್ವರಿತವಾಗಿ ಆಗಬೇಕು ಎಂಬುದು ನನ್ನ ಅಭಿಪ್ರಾಯ. ನಮ್ಮ ಪೊಲೀಸರು ದಾಳಿ ಮಾಡಿದರೆ ಚಪ್ಪಾಳೆ ತಟ್ಟುವುದಿಲ್ಲ. ಅವರು ಆರೋಪಿಗಳ ಮೇಲೆ ಗುಂಡು ಹಾರಿಸುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಆರೋಪಿ ಹತ್ಯೆ ಬಳಿಕ ಬ್ಯಾನರ್‍ಗಳನ್ನು ಹಾಕಿ ಸಂಭ್ರಮಿಸಿದ ವಿಚಾರಕ್ಕೆ, ಇದು ಸಂಪೂರ್ಣವಾಗಿ ತಪ್ಪು. ಇದು ಸಂಭವಿಸಬಾರದು. ಇಂತಹ ಘಟನೆಗಳ ವೈಭವೀಕರಣ ನಡೆಯಬಾರದು ಎಂದಿದ್ದಾರೆ.
ಬದ್ಲಾಪುರ ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅಕ್ಷಯ್ ಶಿಂಧೆ, ತಲೋಜಾ ಜೈಲಿನಿಂದ ಬದ್ಲಾಪುರಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಪಿಸ್ತೂಲ್ ಕಸಿದುಕೊಂಡು ಬೆಂಗಾವಲು ತಂಡದ ಮೇಲೆ ಗುಂಡು ಹಾರಿಸಿದ್ದ. ಬಳಿಕ ಪೊಲೀಸರ ಪ್ರತಿ ದಾಳಿಯಲ್ಲಿ ಹತ್ಯೆಗೀಡಾಗಿದ್ದ. ಆರೋಪಿ ಅಕ್ಷಯ್ ಪಾಂಡೆಯ ಎನ್‍ಕೌಂಟರ್ ಮೇಲೆ ವಿಪಕ್ಷ ಕಾಂಗ್ರೆಸ್ ಹಾಗೂ ಶಿವಸೇನೆ ಅನುಮಾನ ವ್ಯಕ್ತಪಡಿಸಿದ್ದವು.
ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಎನ್‍ಕೌಂಟರ್ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು




















