Tag: ದೇವೀರಮ್ಮ ಬೆಟ್ಟ

  • ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

    ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

    ಚಿಕ್ಕಮಗಳೂರು: ಸಮುದ್ರಮಟ್ಟದಿಂದ 3,000 ಅಡಿಗಳಷ್ಟು ಎತ್ತರದ ಪಿರಮಿಡ್ ಆಕಾರದ ಗುಡ್ಡದ ತುದಿಯಲ್ಲಿ ನೆಲೆ ನಿಂತಿರೋ ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.‌

    ವರ್ಷಕ್ಕೊಮ್ಮೆ ದರ್ಶನ ನೀಡೋ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿ ಜಿಲ್ಲೆಯಲ್ಲಿ ವಿಪರೀತ ಮಳೆ ಹೆಚ್ಚಾಗಿರುವುದರಿಂದ ಭಕ್ತರು ಬೆಟ್ಟ ಹತ್ತುವಾಗ ತುಂಬಾ ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕೂಡ ಮನವಿ ಮಾಡಿದೆ.

    ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಈಗಾಗಲೇ ಬೆಟ್ಟವನ್ನು ಹತ್ತಿ ಪರಿಶೀಲನೆ ನಡೆಸಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿ ದೇವರ ಮೊರೆ ಹೋಗುತ್ತಾರೆ. ಆದರೆ, ಬಿಂಡಿಗ ದೇವಿರಮ್ಮನ ಭಕ್ತರು ತಮ್ಮ ಬಯಕೆ ಈಡೇರಿಸಿಕೊಳ್ಳಲು ತಾಯಿ ಎದುರು ದೇಹವನ್ನು ದಂಡಿಸುತ್ತಾರೆ. ಬರಿಗಾಲಲ್ಲೇ 3,000 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರಾ ಮಹೋತ್ಸವದಲ್ಲಿ ಈ ಬಾರಿಯೂ ಸಾವಿರಾರು ಭಕ್ತರು ಪಾಲ್ಗೊಳ್ಳೋ ನಿರೀಕ್ಷೆ ಇದೆ. ಇದೇ ತಿಂಗಳ 31 ರಿಂದ ನವೆಂಬರ್ 3ರ ವರೆಗೆ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬೆಟ್ಟಕ್ಕೆ 80,000 ಅಧಿಕ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಸಾವಿರಾರು ಭಕ್ತರು ರಾತ್ರೋರಾತ್ರಿ ಬೆಟ್ಟವನ್ನೇರಿ ದೇವಿ ದರ್ಶನ ಪಡೆಯುತ್ತಾರೆ. ದೀಪಾವಳಿ ಅಂಗವಾಗಿ ಮೂರು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.

    3,000 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿರೋ ದೇವಿರಮ್ಮ ವರ್ಷಕ್ಕೊಮ್ಮೆ ಮಾತ್ರ ಜನರಿಗೆ ದರ್ಶನ ನೀಡೋದು. ಮತ್ತೊಂದು ವಿಶೇಷ ಅಂದ್ರೆ 3000 ಅಡಿ ಎತ್ತರವಿರೋ ಈ ಬೆಟ್ಟವನ್ನ ಭಕ್ತಾಧಿಗಳು ಬರಿಗಾಲಲ್ಲೇ ಹತ್ತುತ್ತಾರೆ. ಮೂರು ದಿನಗಳ ಕಾಲ ನಡೆಯೋ ದೇವರಮ್ಮನ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಅಕ್ಟೋಬರ್ 31ರ ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆಸಿ ಬೆಳಗಿನ ಜಾವ 4 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸೋದ್ರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ಳುತ್ತಾರೆ.

  • ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

    ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

    ಚಿಕ್ಕಮಗಳೂರು: ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದ ಗುಡ್ಡದ (Hill) ತುದಿಯಲ್ಲಿರುವ ತಾಲೂಕಿನ ಬಿಂಡಿಗ (Bindiga) ದೇವೀರಮ್ಮನ (Deviramma) ದರ್ಶನಕ್ಕಾಗಿ ಇಂದು ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿದ್ದಾರೆ. ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ.

    ಭಾನುವಾರ ಸಂಜೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್ಸನ್ನು ಹತ್ತಿ ಬಿಂಡಿಗ ಗ್ರಾಮದತ್ತ ಸಾವಿರಾರು ಭಕ್ತರು ಸಾಗಿದ್ದರು. ಬಳಿಕ ರಾತ್ರಿಯಿಂದಲೇ ಬೆಟ್ಟ ಹತ್ತೋಕೆ ಆರಂಭಿಸಿದ್ದರು. ಸೋಮವಾರ ಬೆಳಗಿನ ಜಾವ ದೇವೀರಮ್ಮ ತಾಯಿಗೆ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

    ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಆಯಾಸವನ್ನು ಲೆಕ್ಕಿಸದೇ ಪಿರಮಿಡ್ ಆಕಾರದ ಬೆಟ್ಟವನ್ನು ಉತ್ಸಾಹದಿಂದ ಹತ್ತಿದರು. ಕಾಫಿತೋಟ, ಕಲ್ಲುಮುಳ್ಳಿನ, ಕಡಿದಾದ ರಸ್ತೆಯಲ್ಲಿ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಸರದಿ ಸಾಲಲ್ಲಿ ಸಾಗಿ ಗುಡ್ಡದ ತುದಿಯ ದೇವಿ ದರ್ಶನ ಪಡೆದಿದ್ದಾರೆ.

    ವಾಹನಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿದ ಭಕ್ತರು 4 ಕಿ.ಮೀ ದೂರದಲ್ಲೇ ಗಾಡಿ ನಿಲ್ಲಿಸಿ ಕಾಫಿ ತೋಟದೊಳಗಿನಿಂದ ನಡೆಯೋಕೆ ಆರಂಭಿಸಿದ್ದರು. ದೇವಿಯ ದರ್ಶನ ಪಡೆದು ಹಿಂದಿರುಗುವಾಗ ಸೂರ್ಯ ಕ್ರಮೇಣ ನೆತ್ತಿ ಮೇಲೆ ಬರುತ್ತಿದ್ದಂತೆ ಭಕ್ತರು ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.

    ದೇವೀರಮ್ಮ ದೀಪೋತ್ಸವದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್‌ಪಿ, 8 ಮಂದಿ ಸಿಪಿಐ, 32 ಪಿಎಸ್‌ಐ, 87 ಎಎಸ್‌ಐ, 453 ಮುಖ್ಯ ಪೇದೆ ಮತ್ತು ಪೇದೆ, 62 ಗೃಹ ರಕ್ಷಕದಳ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

    ಮಲ್ಲೇನಹಳ್ಳಿ ಸಮೀಪ 15 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ಸಾಗುವ ಭಕ್ತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ಸುರಕ್ಷಿತವಾಗಿ ಬೆಟ್ಟ ಹತ್ತಲು ಅಗ್ನಿಶಾಮಕ ದಳ, ಗ್ರಾಮಸ್ಥರು ಮತ್ತು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

    ಕಳೆದ 2-3 ವರ್ಷಗಳಿಂದ ಕೊರೊನಾ, ಮಳೆ ಕಾರಣಕ್ಕೆ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಆದರೆ ಈ ವರ್ಷ ಊಹೆಗೂ ಮೀರಿ ಭಕ್ತರ ಸಾಗರವೇ ಹರಿದು, ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದಿದ್ದಾರೆ. ದೀಪಾವಳಿ ಅಮಾವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರುವ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯುತ್ತದೆ. ಆ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರುತ್ತಾರೆ. ಇಲ್ಲಿ ಹರಕೆ ಕಟ್ಟಿದರೆ, ಆ ಹರಕೆ ಈಡೇರುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ, ಕಟ್ಟದ ಭಕ್ತರು ಪ್ರತಿ ವರ್ಷ ಇಲ್ಲಿಗೆ ಬಂದೇ ಬರುತ್ತಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

    ವಿದ್ಯುತ್ ಸಂಪರ್ಕ ಕೂಡ ಇಲ್ಲದ, ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಭಾನುವಾರ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ. ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಅವರ ಶಕ್ತಿಗನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನು ದೇವಿಗೆ ಸಮರ್ಪಿಸುತ್ತಾರೆ.

    ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತದಲ್ಲಿರುವ ದೇವೀರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರವೇ ಪೂಜೆ ನಡೆಯುತ್ತದೆ. ವೃತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದವರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡುತ್ತಾರೆ. ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ (Chikkamagaluru) ಸುತ್ತಮುತ್ತಲಿನ ಜನರು ಆ ಜ್ಯೋತಿಯನ್ನು ಭಕ್ತಿಯಿಂದ ನೋಡುತ್ತಾರೆ. ಬಳಿಕ ಅದಕ್ಕೆ ಆರತಿ ಮಾಡಿ, ದೀಪಾವಳಿಯನ್ನು ಆಚರಿಸುತ್ತಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲಾತಿ ಕಾಂಗ್ರೆಸ್‌ ಪಕ್ಷದ ಕೂಸು – ಡಿಕೆಶಿ

    ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧವಿದೆ. ಪ್ರತಿ ವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ, ಕುಂಕುಮ ಸೇರಿದಂತೆ ಪೂಜೆಯ ವಸ್ತುಗಳು ಬರುತ್ತದೆ. ಈ ವರ್ಷ ಪುನೀತ್ ರಾಜ್‌ಕುಮಾರ್ ಅವರ ಸಾವಿರಾರು ಅಭಿಮಾನಿಗಳು ಕೂಡಾ ಬೆಟ್ಟ ಹತ್ತಿದ್ದು, ಅಪ್ಪುವಿನ ಫ್ಲೆಕ್ಸ್ ಹಿಡಿದು ಗುಡ್ಡದ ತುದಿಯಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಆದರೆ ಒಂದು ರಾತ್ರಿ, ಒಂದು ಹಗಲಲ್ಲಿ ಬರುವ ಸುಮಾರು ಲಕ್ಷದಷ್ಟು ಭಕ್ತರನ್ನು ನಿಭಾಯಿಸಿ, ಸಂಭಾಳಿಸುವಷ್ಟರಲ್ಲಿ ಪೊಲೀಸರು ಮಾತ್ರ ಹೈರಾಣಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]