ಬೆಂಗಳೂರು: ಹಿಂದೂ ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬ ಚಿಂತನೆ ಇದೆ ಅಂತ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸರ್ಕಾರದ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಹಸ್ತಾಂತರ ವಿಚಾರ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ, ಆರ್ ಎಸ್.ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಸ್ಥಾನಗಳನ್ನ ಹಸ್ತಾಂತರಿಸುವ ಅಜೆಂಡಾ ಎಂಬ ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು.
ಹಿಂದೂ ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬ ಚಿಂತನೆ ಇದೆ. ಭಕ್ತರು ಅಂದ್ರೆ ಬಿಜೆಪಿ, ಆರ್.ಎಸ್.ಎಸ್ ಕಾರ್ಯಕರ್ತರು ಆಗಿರಬಹುದು. ಡಿಕೆಶಿ ಶಿವಕುಮಾರ್ ಕೂಡ ಆಗಿರಬಹುದು. ಭಕ್ತರು ಅಂದ್ರೆ ಎಲ್ಲರು ಬರುತ್ತಾರೆ. ನಾವು ಭಕ್ತರಿಗೆ ಕೊಡಬೇಕು ಅಂತ ಆಲೋಚಿಸಿದ್ದೇವೆ. ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ ಎಂದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ- ಆದಾಯ ದೇವಾಲಯಗಳ ಅಭಿವೃದ್ಧಿಗೆ ಮೀಸಲು
ಇದೇ ವೇಳೆ ಉಡುಪಿ ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೋಲಿಸರು ವಿನಾಕಾರಣ ಹಲ್ಲೆ ಮಾಡಲಾಗಿತ್ತು. ಒಬ್ಬ ಪಿಎಸ್‍ಐ, ಸಸ್ಪೆಂಡ್ ಆರು ಜನರ ವರ್ಗಾವಣೆ ಕೂಡ ಮಾಡಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಎಸ್‍ಪಿ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೆ. ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಒಬ್ಬ ಕಾನ್ಸ್‍ಟೇಬಲ್ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದೆ. ಅಲ್ಲಿರುವ ಪರಿಸ್ಥಿತಿಯನ್ನು ಗೃಹಸಚಿವರಿಗೆ ವಿವರಿಸಿದ್ದೆ ಎಂದರು.
ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಸ್‍ಪಿ ಅವರಿಗೆ ಕರೆ ಮಾಡಿ ಪ್ರಕರಣದ ವಿಚಾರ ಕಾನೂನುಪ್ರಕಾರ ದೂರು ದಾಖಲಿಸಲು ಸೂಚಿಸಿದ್ದಾರೆ. ದಲಿತರಿಗೆ ಯಾವುದೇ ತೊಂದರೆಯಾಗದಂತೆ ಗೃಹಸಚಿವರು ಸೂಚಿಸಿದ್ದಾರೆ. ಕೊರಗರ, ಗಿರಿಜನರ, ದಲಿತ ಬಂಧುಗಳಿಗೆ ಭಯಪಡುವ ಅವಶ್ಯಕತೆ ಇಲ್ಲ. ನಾನು, ಗೃಹ ಸಚಿವರು ಹಾಗೂ ಸರ್ಕಾರ ನಿಮ್ಮ ಜೊತೆ ಇದೆ. ಏನಾದರೂ ಇದ್ರೆ ಸಿಎಂಗೂ ಮಾಹಿತಿ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರು: ಕೇಂದ್ರ ಸರ್ಕಾರ ಜೂನ್ 30 ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ್ದು, ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಜೂನ್ 1ಕ್ಕೆ ದೇವಾಲಯ ತೆರೆಯಲು ದೇವಾಲಯಗಳ ಸಿಬ್ಬಂದಿ ಸಿದ್ಧವಾಗಿದ್ದರು. ದೇವಸ್ಥಾನಗಳನ್ನ ಸ್ವಚ್ಛ ಮಾಡಿ ಅರ್ಚಕರು ಕೂಡ ಸಿದ್ಧರಾಗಿದ್ದರು. ಆದರೆ ಜೂನ್ 1 ಅಲ್ಲ ಜೂನ್ 8 ರಿಂದ ದೇವಾಲಯಗಳನ್ನು ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಈ ವಾರವೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ. ಮಸೀದಿ, ಮಂದಿರ, ಚರ್ಚ್‍ಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.
ಷರತ್ತುಗಳು ಏನಿರಬಹುದು?
* ಪ್ರತಿದಿನ ದೇವಾಲಯದ ಒಳಗೆ, ಹೊರಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು
* ಭಕ್ತರು ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಂತೆ ನೋಡಿಕೊಳ್ಳಬೇಕು
* ಪ್ರತಿಯೊಬ್ಬರಿಗೂ ಥರ್ಮಲ್ ಸ್ಯ್ಕಾನಿಂಗ್ ಮಾಡಬೇಕು
* ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಡಬೇಕು
* ಜನರನ್ನ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿ ಬೇಕಾದ್ರೆ ದೇವಸ್ಥಾನದ ಖರ್ಚಿನಲ್ಲಿ ನೇಮಕಾತಿ ಮಾಡಿಕೊಳ್ಳಬೇಕು
* ದೇವಸ್ಥಾನಗಳನ್ನು ತೆರೆಯಲು ಸಮಯ ನಿಗದಿ ಸಾಧ್ಯತೆ
* ಅರ್ಚಕರು, ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿಗಿದ್ದರೆ, ಶೇ.50 ರಷ್ಟು ಹಾಜರಿ
* ಭಕ್ತರು ಕೊಡುವ ಕಾಣಿಕೆ, ಹರಕೆ ವಸ್ತು, ಹೂ ಹಣ್ಣು ಸ್ವೀಕಾರಕ್ಕೆ ಪ್ರತ್ಯೇಕ ಸ್ಥಳ
* ದಿನಕ್ಕೆ ಎರಡರಿಂದ ಮೂರು ಸಲ ಇಡೀ ದೇವಸ್ಥಾನ ಸ್ಯಾನಿಟೈಸ್
ಮಸೀದಿಯಲ್ಲಿ ಷರತ್ತುಗಳು ಏನಿರಬಹುದು?
* ಮುಸ್ಲಿಂ ಬಾಂಧವರು ಸಾಧ್ಯವಾದಷ್ಟು ಮನೆಗಳಲ್ಲೇ ವಝೂ ಅಂದ್ರೆ ಮುಖ ಕೈ ಕಾಲು ಶುಚಿಗೊಳಿಸಿ ಮಸೀದಿಗೆ ಬರಬೇಕು
* ಮಸೀದಿಗಳಲ್ಲಿ ಕೈಕಾಲು ಶುಚಿಗೊಳಿಸುವ ಕೊಳವನ್ನು ಮುಚ್ಚಬೇಕು. ಅದರ ಬದಲು ಟ್ಯಾಪ್ ಬಳಸಬೇಕು
* ಮಸೀದಿಗಳಲ್ಲಿ ಒಂದೇ ಆಗಮನ, ನಿರ್ಗಮನ ದ್ವಾರ ಇರಬೇಕು
* ಪ್ರತಿ ಪ್ರಾರ್ಥನೆ ಮುನ್ನ ಮಸೀದಿಯ ಹಾಲ್ ಅನ್ನು ಶುಚಿಗೊಳಿಸಬೇಕು
* ಮಸೀದಿಗೆ ಬರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಬೇಕು
* ಪ್ರಾರ್ಥನೆ ವೇಳೆ 1 ರಿಂದ 2 ಮೀಟರ್ ಅಂತರ ಕಾಯಬೇಕು
* ಪ್ರತಿ ವ್ಯಕ್ತಿ ತನ್ನ ಸ್ವಂತ ಪ್ರಾರ್ಥನಾ ಚಾಪೆಯನ್ನು ತರಬೇಕು
* ಫರ್ಜ್ ನಮಾಜನ್ನು 10-15 ನಿಮಷಕ್ಕೆ ಸೀಮಿತಗೊಳಿಸಬೇಕು
* ನಮಾಜ್ ಮಾಡಲು ಅತಿ ಹೆಚ್ಚು ಜನರಿದ್ದರೆ, ಎರಡು ಜಮಾತ್‍ಗೆ ವ್ಯವಸ್ಥೆ ಕಲ್ಪಿಸಬೇಕು
* ಸುನ್ನತ್ ಮತ್ತು ನಫೀಸ್ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು
* ಶುಕ್ರವಾರದ ಪ್ರಾರ್ಥನೆ 15-20 ನಿಮಿಷಕ್ಕೆ ಸೀಮಿತವಾಗಿರಬೇಕು
* ಮಸೀದಿ, ದರ್ಗಾಗಳ ಬಳಿ ಭಿಕ್ಷಾಟನೆಗೆ ನಿಷೇಧ
* ಮಸೀದಿ ಬಳಿ ಪ್ರಸಾದ ಹಂಚುವುದಕ್ಕೆ ನಿರ್ಬಂಧ
* ದರ್ಗಾದಲ್ಲಿನ ಸಮಾಧಿಗಳೆದುರು ಕೂತು ಪ್ರಾರ್ಥನೆ ಮಾಡಬಾರದು
* ಆಲಿಂಗನ, ಹಸ್ತಲಾಘವಕ್ಕೆ ನಿರ್ಬಂಧ
ಚರ್ಚ್ ತೆರೆಯಲು ಷರತ್ತು ಏನಿರಬಹುದು?
* ಚರ್ಚ್‍ನಲ್ಲಿ ಭಕ್ತರ ಸಂಖ್ಯೆಗೆ ಮಿತಿ ಹೇರಿಕೆ ಸಾಧ್ಯತೆ
* ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
* ಇನ್ನೂ ದಿನದ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಚರ್ಚ್ ತೆರೆಯಲು ಅವಕಾಶ ಸಾಧ್ಯತೆ
* ಪ್ರಾರ್ಥನೆ ಬಳಿಕ ಚರ್ಚ್ ಒಳಗೆ ಸ್ವಚ್ಛಗೊಳಿಸೋದು ಕಡ್ಡಾಯ
* ಯಾವುದೇ ಕಾರಣಕ್ಕೂ ಜನಜಾತ್ರೆ ಆಗದಂತೆ ಕಟ್ಟುನಿಟ್ಟಿನ ಕ್ರಮ
ಮಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ ತಮ್ಮ ಪತ್ನಿ ಜೊತೆ ತುಳುನಾಡಿನ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮನೀಶ್ ಪಾಂಡೆ ತಮ್ಮ ಪತ್ನಿ ಆಶ್ರಿತಾ ಶೆಟ್ಟಿ ಜೊತೆ ಇಂದು ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮನೀಶ್ ಪಾಂಡೆ ವಿವಾಹ ತುಳುನಾಡಿನ ಬೆಡಗಿ, ತಮಿಳು ಹಾಗೂ ತುಳು ನಟಿ ಆಶ್ರಿತಾ ಶೆಟ್ಟಿ ಜೊತೆ ಮುಂಬೈಯಲ್ಲಿ ನಡೆದಿತ್ತು. ವಿವಾಹದ ಬಳಿಕ ದಂಪತಿ ಮೊದಲ ಬಾರಿಗೆ ಕುಕ್ಕೆ ಕ್ಷೇತ್ರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ
ಮಾರ್ಚ್ 6 ರಂದು ಕುಕ್ಕೆ ಸುಬ್ರಹಣ್ಯಕ್ಕೆ ತಮ್ಮ ಗೆಳೆಯನ ಜೊತೆ ಆಗಮಿಸಿದ ದಂಪತಿ ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ನಾಗದೇವರಿಗೆ ವಿಶೇಷ ಪೂಜೆಯಾದ ಆಶ್ಲೇಷ ಪೂಜೆಯನ್ನು ನೆರೆವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಪಡೆದರು.
ಬೆಂಗಳೂರು: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡಿಯಾ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಲಿ ಎಂದು ಕ್ರಿಕೆಟ್ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾಭಿಮಾನಿಗಳು ಕ್ರೀಡಾಂಗಣದಲ್ಲಿ ವಿಕೆಟ್ ಮತ್ತು ಬ್ಯಾಟ್ ಗಳಿಗೆ ಪೂಜೆ ಸಲ್ಲಿಸಿ ಭಾರತ ತಂಡ ಗೆದ್ದು ಬರಲಿ ಎಂದು ಜಯಕಾರ ಕೂಗಿದ್ದಾರೆ. ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ಧ ಈ ಹಿಂದೆ ನಡೆದಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಜಯಗಳಿಸಿದೆ. ಈ ಬಾರಿಯೂ ಸಹ ಗೆದ್ದು ಇತಿಹಾಸ ನಿರ್ಮಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಜೊತೆಗೆ ಬ್ಯಾಟ್ ಮತ್ತು ಚೆಂಡಿಗೂ ಪೂಜೆ ಸಲ್ಲಿಸಿ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.
ಭಾರತ ಪಾಕಿಸ್ತಾನ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ನಗರದ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬ್ಯಾಟ್ ಹಾಗೂ ಚೆಂಡಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲುವು ಸಾಧಿಸಲಿ ಎಂದು ಕ್ರಿಕೆಟ್ ಅಭಿಮಾನಿಗಳು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಾರ್ಥಿಸಿದ್ದಾರೆ.
ಹುಬ್ಬಳ್ಳಿಯ ಫತೆಷಾವಲಿ ದರ್ಗಾದಲ್ಲಿ ಮುಸಲ್ಮಾನರು ಕೂಡ ಕ್ರಿಕೆಟ್‍ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಹಳೇ ಹುಬ್ಬಳ್ಳಿಯ ಇಂಡಿಪಂಪ್ ನಲ್ಲಿ ಇರುವ ಫತೆಶಾವಲಿ ದರ್ಗಾದಲ್ಲಿ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ಧ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.
ಇತ್ತ ಕಲಬುರಗಿ ನಗರದ ಶಾಹಬಜಾರ ಲಾಲ್ ಹನುಮಾನ್ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗಿದೆ. ಜೈ ಹೋ ಟೀಂ ಇಂಡಿಯಾ ಎಂದು ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಟೀಂಗೆ ಶುಭ ಕೋರಿದ್ದಾರೆ.
ಗದುಗಿನ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಶಾಲಾ ಮಕ್ಕಳು ಭಾರತದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಲಿಂಗೈಕ್ಯ, ಪಂಡಿತ್ ಪುಟ್ಟರಾಜ್ ಗವಾಯಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಾಡಿ, ಗೆಲ್ಲಲಿ ಗೆಲ್ಲಲಿ…ಇಂಡಿಯಾ ಗೆಲ್ಲಲಿ, ಜೀತೆಗಾ ಜೀತೇಗಾ… ಇಂಡಿಯಾ ಜೀತೆಗಾ ಎಂದು ಗದಗ್‍ನ ಪುಣ್ಯಾಶ್ರಮದ ಶಾಲಾ ಮಕ್ಕಳು ಘೋಷಣೆ ಕೂಗಿದ್ದಾರೆ.
ಇಂದು ದೇವರ ನಾಡು ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು 40ರ ಆಸುಪಾಸಿನ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ. ಮಹಿಳೆಯರು ದೇಗುಲವನ್ನು ಪ್ರವೇಶಿಸಿದ ಕುರಿತು ಕೇರಳ ಸರ್ಕಾರ ಖಚಿತಪಡಿಸಿತ್ತು. ದೇಗುಲದ ಆಡಳಿತ ಮಂಡಳಿ ಸಹ ಸಿಸಿಟಿವಿ ಪರಿಶೀಲನೆ ನಡೆಸಿ ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿಕೊಂಡು ದೇಗುಲವನ್ನು ಶುದ್ಧೀಕರಣಗೊಳಿಸಿದೆ.
ಮಹಿಳೆಯ ಪ್ರವೇಶಕ್ಕೆ ಧರ್ಮ ಗುರುಗಳು ಸೇರಿದಂತೆ ಹಲವರು ಅಕ್ರೋಶ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಕಾನೂನಾತ್ಮಕವಾಗಿ ದೇವಾಲಯ ಪ್ರವೇಶಿಸುವ ಹಕ್ಕು ನಮಗಿದೆ. ದೇಗುಲ ಪ್ರವೇಶ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ತನ್ನದೇ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಐದು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಈ ಐದರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲವನ್ನು ಪ್ರವೇಶ ಮಾಡುವ ಮೂಲಕ 800 ಇತಿಹಾಸಕ್ಕೆ ಬ್ರೇಕ್ ಬಿದ್ದಿದೆ. ಹಾಗಾದಾರೆ ಉಳಿದ ನಾಲ್ಕು ಧಾರ್ಮಿಕ ಕೇಂದ್ರಗಳ ಮಾಹಿತಿ ಇಲ್ಲಿದೆ.
1. ಹಾಜಿ ಅಲಿ ದರ್ಗಾ, ಮುಂಬೈ:
ಮುಂಬೈ ಕಡಲ ತೀರದಲ್ಲಿರುವ ಹಾಜಿ ಅಲಿ ದರ್ಗಾದ ಡೇರಾ ಬಳಿಗೆ ಬರಲು ಮಹಿಳೆಯರಿಗೆ ಅನುಮತಿ ಇಲ್ಲ. ಇದು 15ನೇ ಶತಮಾನದ ಸೂಫಿ ಹಾಜಿ ಅಲಿ ಅವರ ಸಮಾಧಿ ಸ್ಥಳವಾಗಿದೆ. ದರ್ಗಾ ಪ್ರವೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ದ್ವಾರ ನಿರ್ಮಿಸಲಾಗಿದ್ದು, ಅಲ್ಲಿಂದಲೇ ಡೇರಾವನ್ನು ನೋಡಬಹುದು ಮತ್ತು ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.
ಮಹಿಳೆಯರು ಹಾಜಿ ಅಲಿ ದರ್ಗಾ ಪ್ರವೇಶಿಸಬಹುದು ಎಂದು 2016ರಲ್ಲಿ ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅವಕಾಶ ಕಲ್ಪಿಸಬೇಕೆಂದು ತೀರ್ಪು ನೀಡಿತ್ತು. ಬಾಂಬೆ ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ದರ್ಗಾ ಮಂಡಳಿ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ : ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ
ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಲೇ ಭೂಮಾತಾ ಬ್ರಿಗೇಡ್ ನ ಅಧ್ಯಕ್ಷೆ ತೃಪ್ತಿ ದೇಸಾಯಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ದರ್ಗಾ ಪ್ರವೇಶ ಮಾಡಿದ್ದರು. ಆದ್ರೆ ದರ್ಗಾದ ಸಮಾಧಿ ಸ್ಥಳಕ್ಕೆ ಮಾತ್ರ ಹೋಗಿರಲಿಲ್ಲ. ತೃಪ್ತಿ ದೇಸಾಯಿ ಅಹ್ಮದ್ ನಗರದ ಶನಿ ಶಿಗ್ನಾಪುರ ದೇವಸ್ಥಾನ ಮತ್ತು ನಾಶಿಕ್ ನ ತ್ರ್ಯಂಬಕೇಶ್ವರ ದೇವಾಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸುವ ಯಶಸ್ವಿ ಆಂದೋಲನ ನಡೆಸಿದ್ದರು. ಹಿಂದೆ ಅಯ್ಯಪ್ಪ ದೇಗುಲ ಪ್ರವೇಶಿಸಿ ವಿಫಲರಾಗಿದ್ದರು.
2. ಅಯ್ಯಪ್ಪ ದೇಗುಲ, ಶಬರಿಮಲೆ:
ಬ್ರಹ್ಮಚಾರಿ ದೇವರು ಎಂದು ಕರೆಸಿಕೊಳ್ಳುವ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. 10 ರಿಂದ 50 ವರ್ಷದ ಒಳಗಿನ ಮಹಿಳೆಯರು ಕೂಡ ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂದು ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ವಿಶೇಷ ಪೂಜೆ ನಿಮಿತ್ತ ಅಕ್ಟೋಬರ್ ನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ದೇವಸ್ಥಾನ ಸಮೀಸುತ್ತಿದ್ದಂತೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಜನವರಿ 2ರ ಬೆಳಗಿನ ಜಾವ ಕನಕದುರ್ಗಾ ಮತ್ತು ಬಿಂದು ಎಂಬವರು ದೇಗುಲವನ್ನು ಪ್ರವೇಶಿಸುವ ಮೂಲಕ 800 ವರ್ಷಗಳ ಇತಿಹಾಸವನ್ನು ಮುರಿದಿದ್ದಾರೆ.
3. ಪತ್‍ಬೌಸಿ ಸತ್ರ, ಅಸ್ಸಾಂ
ಅಸ್ಸಾಂ ರಾಜ್ಯದ ಬರ್ಪಟೆ ಜಿಲ್ಲೆಯ ಪತ್‍ಬೌಸಿ ಸತ್ರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. ದೇಗುಲದಲ್ಲಿ ಶುದ್ಧತೆಯನ್ನು ಕಾಪಾಡುವುದಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಲ್ಲ ಎಂಬುವುದು ದೇಗುಲ ಮಂಡಳಿಯ ವಾದ. ಇಲ್ಲಿ ವೈಷ್ಣವ ಗುರುಗಳನ್ನು ಪೂಜಿಸಲಾಗುತ್ತಿದ್ದು, ಶಂಕರದೇವ ಮತ್ತು ಮಂಟಾ ಶಂಕರದೇವ ಎಂಬ ಮಂದಿರಗಳಿವೆ. 2010ರಲ್ಲಿ ಅಂದಿನ ಅಸ್ಸಾಂ ರಾಜ್ಯಪಾಲ ಜೆಬಿ ಪಟ್ನಾಯಕ್ 20 ಮಹಿಳೆಯರೊಂದಿಗೆ ಸತ್ರಾ ಪ್ರವೇಶ ಮಾಡಿದ್ದರು. ಆದ್ರೆ ಇಂದೂ ಸಹ ಸತ್ರದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.
4. ಕಾರ್ತಿಕೇಯ ದೇವಾಲಯ, ಹರಿಯಾಣ
ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಪೆಹುವಾ ನಗರದಲ್ಲಿ ಕಾರ್ತಿಕೇಯ ದೇವಾಲಯವಿದೆ. ಬ್ರಹ್ಮಚಾರಿ ಕಾರ್ತಿಕೇಯ ದೇವರಿಗೆ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ರೆ ಕಾರ್ತಿಕೇಯ ಶಾಪ ನೀಡುತ್ತಾನೆ ಎನ್ನುವ ನಂಬಿಕೆಯಿದೆ. ದೇಗುಲದ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳನ್ನು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ತಿಕೇಯ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ.
5. ರಂಕಾಪುರ ದೇವಾಲಯ, ರಾಜಸ್ಥಾನ
ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿ ರಂಕಾಪುರ ದೇವಾಲಯ ಸಹ ಒಂದು. ಈ ದೇವಾಲಯಕ್ಕೆ ದೇಶ-ವಿದೇಶ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷ ಕೆತ್ತನೆಯಿಂದ ದೇಗುಲ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮುಟ್ಟಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದೆಂಬ ನಿಯಮವಿದೆ. ದೇವಾಲಯ ಪ್ರವೇಶಿಸುವ ಮಹಿಳೆಯರು ಪಾಶ್ಚಾತ್ಯ ಬಟ್ಟೆ ಧರಿಸುವಂತಿಲ್ಲ ಹಾಗು ದೇಗುಲದ ಆವರಣದಲ್ಲಿ ಪಾದಗಳು ಮುಚ್ಚಿರಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಸಂಪೂರ್ಣ ನಿಷೇಧಿಸಲಾಗಿರುತ್ತದೆ.
ಇನ್ನುಳಿದಂತೆ ಹಲವು ದೇವಾಲಯ, ದರ್ಗಾಗಳಲ್ಲಿ ಗರ್ಭಗುಡಿ ಅಥವಾ ಡೇರಾ ಅಥವಾ ಪೌಳಿ ಬಳಿ ಮಹಿಳೆಯರಿಗೆ ಪ್ರವೇಶವಿಲ್ಲ. ಆಂಧ್ರ ಪ್ರದೇಶದ ವಿಜಯವಾಡ ನಗರದಲ್ಲಿರುವ ಭವಾನಿ ದೀಕ್ಷಾ ಮಂದಪಮ್, ಉತ್ತರ ಪ್ರದೇಶದ ರಿಷಿ ಧ್ರೂಮ್ ಆಶ್ರಮ, ದೇಗುಲ, ಧರ್ಮಸ್ಥಳದ ಅಣ್ಣಪ್ಪ ದೇಗುಲಕ್ಕೆ ಪ್ರವೇಶವಿಲ್ಲ.
ಮಹಿಳೆಯರಿಗೆ ಧಾರ್ಮಿಕ ಸ್ಥಳಗಳಲ್ಲಿ ಪ್ರವೇಶ ನೀಡಬೇಕೇ ಅಥವಾ ನಿಷೇಧಿಸಬೇಕೇ? ಇಂದು ನಸುಕಿನ ಜಾವ ಬಿಂದು ಮತ್ತು ಕನಕದುರ್ಗ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಅಥರಗಾ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೊಂದರಲ್ಲಿ ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ಗ್ರಾಮದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಾಗಿರುವ ಇದು 106 ವರ್ಷದ ಹಳೆಯದಾಗಿದ್ದು, ಅಲ್ಲಿ ಈ ಶಾಲೆಯ ಶಿಕ್ಷಕ ರೇವಣಸಿದ್ದ ಎಂಬವರ ದೇವಾಲಯವನ್ನು ಕಟ್ಟಿಸಿದ್ದಾರೆ. ರೇವಣಸಿದ್ದ ಶಿಕ್ಷಕರು ವಿಜಯಪುರದ ಮನಗೂಳಿ ಗ್ರಾಮದಲ್ಲಿ 1925 ಜನಿಸಿ ನಂತರ ಶಿಕ್ಷಕರಾಗಿ ಅಥರಗಾ ಗ್ರಾಮದಲ್ಲಿ 30 ವರ್ಷ ಸೇವೆಸಲ್ಲಿದ್ದರು. ಅನಕ್ಷರತೆ, ಬಡತನ ಸೇರಿದಂತೆ ಶಾಲೆ ಬಿಟ್ಟ ಮಕ್ಕಳು ಹೆಚ್ಚಿಗಿದ್ದರು. ಆಗ ರೇವಣಸಿದ್ದ ಶಿಕ್ಷಕರು ದೊಡ್ಡವರಿಂದ ಹಿಡಿದು ಎಲ್ಲ ಮಕ್ಕಳಿಗೂ ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಿದ್ದರು.
ಅದಕ್ಕಾಗಿ ಅವರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಅವರು ತೀರಿ ಹೋದ ಮೇಲೆ ಶಾಲೆಯಲ್ಲಿ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿ ದೇವಾಲಯವನ್ನೆ ಕಟ್ಟಿಸಿದ್ದಾರೆ. ಪ್ರತಿ ನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಅವರಿಗೆ ಪೂಜೆ ಪುನಸ್ಕಾರ ನೆರವೇರುಸುತ್ತಾ ಬಂದಿದ್ದು, ಅವರನ್ನು ದೇವರ ಸಮಾನರಾಗಿ ಕಾಣುತ್ತಾರೆ.
ಗುರು ಬ್ರಹ್ಮ ಗುರು ವಿಷ್ಣು ಗುರುದೇವೊ ಮಹೇಶ್ವರ ಎಂಬಂತೆ ಇಲ್ಲಿ ರೇವಣಸಿದ್ದ ಶಿಕ್ಷಕರನ್ನು ದೇವರ ಸಮಾನರಾಗಿ ಕಾಣುವುದರ ಜೊತೆಗೆ ಅವರನ್ನು ದೇವರಂತೆ ಪೂಜಿಸುತ್ತಿರುವುದು ಶಿಕ್ಷಕ ವೃತ್ತಿಗೆ ಸಂದ ಅಭೂತ ಪೂರ್ವ ಗೌರವವಾಗಿದೆ.
ಧಾರವಾಡ: ಇಂದಿನ ಕಾಲದಲ್ಲಿ ಜಮೀನು ಅಂದರೆ ಯಾರೂ ಬಿಟ್ಟು ಕೊಡಲ್ಲ. ಅಲ್ಲದೇ ಬೇರೆಯವರ ಜಮೀನನ್ನೇ ಲಪಟಾಯಿಸಲಿಕ್ಕೆ ನೋಡುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ನರಸಿಂಗರಾವ್ ಧಾರವಾಡಕರ್ ಅವರು ಧಾರವಾಡದ ಮುರುಘಾಮಠದ ಬಳಿಯ ತೆಲಗರ ಕಾಲೋನಿಯಲ್ಲಿರುವ ವೆಂಕಮ್ಮ ದೇವಸ್ಥಾನಕ್ಕೆ ಮೂರು ಗುಂಟೆ ಭೂಮಿಯನ್ನ ದಾನ ಮಾಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಮೂರುಗುಂಟೆ ಜಾಗಕ್ಕೆ ಸುಮಾರು 60 ಲಕ್ಷ ಬೆಲೆ ಇದೆ. ಈ ಜಾಗದ ಪಕ್ಕದಲ್ಲಿ ವೆಂಕಮ್ಮ ದೇವಸ್ಥಾನ ಇದೆ.
ಈ ದೇವಸ್ಥಾನಕ್ಕೆ ಧಾರವಾಡಕರ್ ಅವರ ಕುಂಟುಬಸ್ಥರು ಕಳೆದ 25 ವರ್ಷಗಳ ಹಿಂದೆ ಭೂಮಿಯನ್ನ ದಾನವಾಗಿ ನೀಡುವುದಾಗಿ ಮಾತು ಕೊಟ್ಟಿದ್ದರಂತೆ. ಆದರೆ ದಾಖಲೆಗಳು ಮಾತ್ರ ಭೂಮಿಯ ಮಾಲೀಕರ ಹೆಸರಲ್ಲಿತ್ತು. ಈ ಜಾಗವನ್ನ ಸುತ್ತಲಿನವರು ಅತಿಕ್ರಮಣ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ಜಾಗದ ದಾಖಲೆಗಳನ್ನ ಪರಿಶೀಲಿಸಿದ್ದಾನೆ. ಆಗ ಈ ಜಾಗ ಹುಬ್ಬಳ್ಳಿಯ ಧಾರವಾಡಕರ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.
ಯುವಕ ಮಾಲೀಕರಿಗೆ ಈ ಬಗ್ಗೆ ತಿಳಿಸಿದಾಗ, ಜಾಗದ ಮಾಲೀಕರು ನರಸಿಂಗರಾವ್ ಅವರು ಭೂಮಿಯನ್ನ ದೇವಸ್ಥಾನಕ್ಕೆ ಬಿಟ್ಟು ಕೊಟ್ಟು, ದಾಖಲೆಗಳನ್ನ ದೇವಸ್ಥಾನದ ಹೆಸರಿನಲ್ಲಿ ಮಾಡಿ ಕೊಡುವ ಭರವಸೆ ನೀಡಿದ್ದಾರೆ. ಸದ್ಯ ಈ ಸುದ್ದಿ ತಿಳಿದ ಸ್ಥಳೀಯರಿಗೆ ಕೂಡಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಧಾರವಾಡ: ಮನೆಯವರ ವಿರೋಧ ನಡುವೆಯೂ ಪ್ರೇಮಿಗಳಿಬ್ಬರು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಜಿಲ್ಲೆಯ ಸುಳ್ಯ ಗ್ರಾಮದ ಯುವಕ ಬಸವರಾಜ್ ದೇಸಾಯಿ (27) ಹಾಗೂ ಮಹಾರಾಷ್ಟ್ರ ಮೂಲದ ಮೋನಿಕಾ ತುಳವೆ (24) ಪ್ರೇಮಿಗಳಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ದಲಿತ ಪರ ಸಂಘಟನೆ ನೇತೃತ್ವದಲ್ಲಿ ಈ ಮದುವೆ ನೆರವೇರಿದೆ.
ಇವರಿಬ್ಬರು ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಪ್ರೀತಿ ವಿಚಾರವನ್ನು ಮನೆಯವರ ಮುಂದೆ ಯುವತಿ ಪ್ರಸ್ತಾಪಿಸಿದ್ದರು. ಆದ್ರೆ ಆಕೆಯ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಇದರಿಂದ ಯುವತಿ ಯುವಕವನೊಂದಿಗೆ ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಧಾರವಾಡಕ್ಕೆ ಬಂದಿದ್ದಾರೆ. ಯುವಕ ಮತ್ತು ಯುವತಿ ಬೇರೆ ಜಾತಿಯಾಗಿದ್ದರಿಂದ ಅವರ ಕುಟುಂಬದವರು ಮದುವೆಗೆ ನಿರಾಕರಿಸಿದ್ದರು. ಆದ್ದರಿಂದ ಇಬ್ಬರು ಮನೆಬಿಟ್ಟು ಬಂದು ಮದುವೆಯಾಗಿದ್ದಾರೆ.
ಸದ್ಯ ಮೋನಿಕಾ ಪುಣೆಯಲ್ಲಿ ಎಂಎಸ್‍ಡಬ್ಲು ಮಾಡಿಕೊಂಡಿದ್ದಾರೆ. ಬಸವರಾಜ್ ನೆಟ್ ವರ್ಕಿಂಗ್ ಕೆಲಸ ಮಾಡುತ್ತಿದ್ದಾರೆ.
ಮೈಸೂರು: ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಕಾಣಿಕೆಯ ಆದಾಯ ಕೋಟಿ ದಾಟಿದೆ.
1 ತಿಂಗಳ ಅವಧಿಯ ಹುಂಡಿ ಏಣಿಕೆಯಲ್ಲಿ ಒಂದು ಕೋಟಿ ಹಣ ಸಂಗ್ರಹವಾಗಿದೆ. ಇದರ ಜೊತೆಗೆ 94 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಸೇರಿ 42 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.
ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಸಮ್ಮುಖದಲ್ಲಿ 200 ಸಿಬ್ಬಂದಿಗಳು ಹುಂಡಿ ಏಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಕಳೆದ ತಿಂಗಳು ಒಂದು ಕೋಟಿ ರೂ. ಹೆಚ್ಚು ಹಣ ಆದಾಯವಾಗಿ ಹರಿದುಬಂದಿತ್ತು. ಈ ತಿಂಗಳು ಮತ್ತೆ ಕೋಟಿ ಆದಾಯ ಬಂದಿದೆ.
ನಿತ್ಯವೂ ನಂಜನಗೂಡಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪ್ರತಿ ತಿಂಗಳು ಹುಂಡಿ ಹಣ ಹೆಚ್ಚಾಗುತ್ತಲೇ ಇದೆ ಎಂದು ನಂಜನಗೂಡು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳೂರು: ಭಾರೀ ಮಳೆಯಿಂದಾಗಿ ಮೂಲ್ಕಿ ಬಳಿ ಇರುವ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನದಿ ನೀರು ನುಗ್ಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಗಳೂರು ಮೂಲಕ ಜಾರ್ಖಂಡ್ ರಾಜ್ಯದ ರಾಂಚಿಗೆ ಅಧ್ಯಯನ ಪ್ರವಾಸಕ್ಕೆಂದು ತೆರಳುತ್ತಿದ್ದ ನಳಿನ್ ಕುಮಾರ್ ಶನಿವಾರ ರಾತ್ರಿಯೇ ಪ್ರವಾಸ ಮೊಟಕುಗೊಳಿಸಿ ಜಿಲ್ಲೆಗೆ ಆಗಮಿಸಿದ್ದರು. ಮಳೆಯ ಕಾರಣ ಪ್ರವಾಸ ರದ್ದುಗೊಳಿಸಿ ಇಂದು ಮಂಗಳೂರು ತಾಲೂಕಿನ ಮೂಲ್ಕಿ ಭಾಗದ ಮಳೆ ಪೀಡಿತ ಪ್ರದೇಶಕ್ಕೆ ತೆರಳಿದ್ದಾರೆ.
ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಶಾಂಭವಿ ನದಿ ಉಕ್ಕಿ ಹರಿದಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ ನೆರೆ ನೀರು ನುಗ್ಗಿತ್ತು. ಬಪ್ಪನಾಡು ಕ್ಷೇತ್ರದ ಒಳಗೆ ನುಗ್ಗಿದ್ದ ನೀರು ಇಂದು ಬೆಳಗ್ಗೆಯೂ ಅಂಗಣದಲ್ಲಿ ಉಳಿದುಕೊಂಡಿತ್ತು. ಇದೇ ವೇಳೆ ಕಟೀಲು ದೇವಸ್ಥಾನ ಬಳಿ ಶಾಂಭವಿ ನದಿ ಧುಮ್ಮಿಕ್ಕಿ ಹರಿಯುತ್ತಿದೆ.