Tag: ದೇವಸ್ಥಾನ

  • ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ

    ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ

    ಮೈಸೂರು: ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದವನು ಸುಸೂತ್ರವಾಗಿ ದೇವಸ್ಥಾನದ ಗೇಟ್ ಮುರಿದು ಒಳಹೋಗಿ ದೇವಸ್ಥಾನದಲ್ಲಿದ್ದ ಬಂಗಾರ, ಹುಂಡಿಯ ದುಡ್ಡು ಏನ್ನನ್ನೂ ಕದಿಯದೆ ಭಯದಿಂದ ಹೊರಬಂದಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

    ಶನಿ ದೇವರ ದೇವಸ್ಥಾನದಲ್ಲಿ ಕಳ್ಳ ಹೆದರಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೈಸೂರಿನ ದಟ್ಟಗಳ್ಳಿಯಲ್ಲಿನ ಶನಿ ದೇವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶನಿ ದೇವರ ದೇವಸ್ಥಾನ ಕಳ್ಳತನಕ್ಕೆ ಕಳ್ಳ ನುಗ್ಗಿದ್ದು, ದೇವಸ್ಥಾನದ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮುರಿದು ಒಳಪ್ರವೇಶಿಸಿದ್ದಾನೆ. ನಂತರ ಗಾಬರಿಯಿಂದ ಬರಿಗೈಯಲ್ಲಿ ಹೊರಬಂದಿದ್ದಾನೆ. ಶನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ದೇವಸ್ಥಾನದ ಗೇಟ್ ಮುರಿದು ಒಳಗೆ ಹೋದವನು ಏನೂ ಕಳ್ಳತನ ಮಾಡದೆ ಬರಿಗೈಯಲ್ಲಿ ವಾಪಸ್ ಬಂದುರುವುದು ಸ್ಪಷ್ಟವಾಗಿದೆ. ಹಿಂದೆ ಎರಡು ಬಾರಿ ಈ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಕುವೆಂಪುನಗರ ಪೊಲೀಸರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ದೂರು ನೀಡಿದ್ದಾರೆ.

  • ಸಿಸಿಟಿವಿ ಪುಡಿ ಮಾಡಿ ದೇವಸ್ಥಾನ ಒಳಗಡೆ ನುಗ್ಗಿ ದೇವಿ ವಿಗ್ರಹ, ಆಭರಣ ಕಳ್ಳತನ

    ಸಿಸಿಟಿವಿ ಪುಡಿ ಮಾಡಿ ದೇವಸ್ಥಾನ ಒಳಗಡೆ ನುಗ್ಗಿ ದೇವಿ ವಿಗ್ರಹ, ಆಭರಣ ಕಳ್ಳತನ

    ಮಂಗಳೂರು: ದೇವಸ್ಥಾನಕ್ಕೆ ನುಗ್ಗಿ ದೇವಿ ವಿಗ್ರಹ ಮತ್ತು ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದ ಮರಕತ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

    ಕಳ್ಳರು ದೇವಿಯ ಪ್ರಾಚೀನ ವಿಗ್ರಹ, ಪ್ರಭಾವಳಿ ಮತ್ತು ಆಭರಣವನ್ನು ದೋಚಿದ್ದಾರೆ. ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪುಡಿಗೈದು ಕೃತ್ಯ ಎಸಗಿದ್ದಾರೆ.

    ಸುಮಾರು 10 ಲಕ್ಷ ರೂ. ಅಧಿಕ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಸ್ಥಾನದ ಮೇಲೆ ಹಾರಾಡಿದ ಪಾಕಿಸ್ತಾನ ಬಾವುಟ

    ದೇವಸ್ಥಾನದ ಮೇಲೆ ಹಾರಾಡಿದ ಪಾಕಿಸ್ತಾನ ಬಾವುಟ

    ಭೋಪಾಲ್: ಮಧ್ಯಪ್ರದೇಶದ ನರಸಿಂಗ್‍ಪುರ್ ಎಂಬಲ್ಲಿ ಗುರುವಾರದಂದು ಆಂಜನೇಯ ದೇವಸ್ಥಾನದ ಮೇಲೆ ಪಾಕಿಸ್ತಾನದ ಬಾವುಟ ಹಾರಿಸಲಾಗಿದೆ.

    ಅಲ್ಲದೆ ಹಿಂದೂಗಳನ್ನ ನಿರ್ನಾಮ ಮಾಡುವುದಾಗಿ ದೇವಸ್ಥಾನದ ಗೋಡೆಯ ಮೇಲೆ ಹಿಂದಿಯಲ್ಲಿ ಬರೆಯಲಾಗಿದೆ. ಈ ಕೃತ್ಯವೆಸಗಿದವರು ಯಾರು ಎಂದು ಪತ್ತೆಹಚ್ಚಲು ಪೊಲೀಸರು ಇದೂವರೆಗೂ 100 ಜನರನ್ನು ವಿಚಾರಣೆ ಮಾಡಿದ್ದಾರೆ.

    ನರಸಿಂಗ್‍ಪುರ್‍ನ ಎಸ್‍ಪಿ ಮೋನಿಕಾ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡಿ, ದೇವಸ್ಥಾನದ ಹತ್ತಿರದ ಸಿಸಿಟಿವಿಯಲ್ಲಿ ಕಿಡಿಗೇಡಿಗಳ ದೃಶ್ಯ ಸೆರೆಯಾಗಿರಬಹುದು. ಆದ್ರೆ ಆ ಸಿಸಿಟಿವಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅದರ ರಿಪೇರಿಗಾಗಿ ಮೆಕಾನಿಕ್‍ನನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ಹಿನ್ನೆಲೆಯಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳು ಗುರುವಾರದಂದು ಪ್ರತಿಭಟನೆ ನಡೆಸಿದ್ದು, ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    https://twitter.com/reallysravan/status/901026974239301632

  • ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ

    ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ

    ಮಂಗಳೂರು: ಕಲ್ಲಡ್ಕ ಪ್ರಭಾಕರ್ ನೇತೃತ್ವದ ಎರಡು ಶಾಲೆಗಳಿಗೆ ಬರುತ್ತಿದ್ದ ಅನುದಾನವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಕಡಿತಗೊಳಿಸಿದೆ.

    ಬಂಟ್ವಾಳದಲ್ಲಿ ನಡೆದ ಕೋಮುಗಲಭೆ ವೇಳೆ ಸರ್ಕಾರ ಹಾಗೂ ಕಲ್ಲಡ್ಕ ಪ್ರಭಾಕರ್ ನಡುವೆ ದೊಡ್ಡ ಸಂಘರ್ಷವೇ ನಡೆದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿದ್ದ ಶ್ರೀರಾಮ ವಿದ್ಯಾ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ ಬರುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದಾರೆ.

    ಕಳೆದ ಹತ್ತು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಈ ಶಾಲೆಗಳಿಗೆ ಅನುದಾನ ನೀಡಲಾಗ್ತಿತ್ತು. ಈ ಎರಡು ಶಾಲೆಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಾಲಯ ದತ್ತು ಪಡೆದುಕೊಂಡಿತ್ತು. ಕಳೆದ ಹತ್ತು ವರ್ಷಗಳಲ್ಲಿ ಕೊಲ್ಲೂರು ದೇಗುಲದಿಂದ 2.83 ಕೋಟಿ ಅನುದಾನ ನೀಡಲಾಗಿತ್ತು. ಕಲ್ಲಡ್ಕ ವಿದ್ಯಾಕೇಂದ್ರಕ್ಕೆ 2.32 ಕೋಟಿ ರೂ. ನೆರವು ಲಭಿಸಿತ್ತು. ಹಾಗೆ ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ 50.72 ಲಕ್ಷ ನೆರವು ಲಭಿಸಿತ್ತು.

    ಇದೀಗ ಕೊಲ್ಲೂರು ದೇಗುಲ ದತ್ತು ತೆಗೆದುಕೊಂಡಿದ್ದ ಆದೇಶ ಹಿಂದಕ್ಕೆ ಪಡೆಯಲಾಗಿದ್ದು, ದೇವಸ್ಥಾನದ ದುಡ್ಡು ಶಾಲೆಗೆ ನೀಡಬಾರದೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

  • ಹಾಲು ಕುಡಿಯುತ್ತೆ, ಜನರೊಂದಿಗೆ ಆಟವಾಡುತ್ತೆ- ಕಾಡು ಬಿಟ್ಟು ಆಂಜನೇಯ ದೇವಸ್ಥಾನದಲ್ಲೇ ವಾಸವಾದ ನರಿ!

    ಹಾಲು ಕುಡಿಯುತ್ತೆ, ಜನರೊಂದಿಗೆ ಆಟವಾಡುತ್ತೆ- ಕಾಡು ಬಿಟ್ಟು ಆಂಜನೇಯ ದೇವಸ್ಥಾನದಲ್ಲೇ ವಾಸವಾದ ನರಿ!

    ಚಿಕ್ಕಮಗಳೂರು: ಅದೊಂದು ಕ್ರೂರ ಪ್ರಾಣಿ. ಏಕಾಏಕಿ ದಾಳಿ ಮಾಡೋದು ಅದರ ಚಾಳಿ. ರಾತ್ರಿಯಲ್ಲಷ್ಟೆ ಸಂಚರಿಸೋ ಅದು ಸಾಮಾನ್ಯವಾಗಿ ಹಗಲಲ್ಲಿ ಯಾರ ಕಣ್ಣಿಗೂ ಹೆಚ್ಚಾಗಿ ಕಾಣಲ್ಲ. ಆದ್ರೆ ಅಂತಹ ಪ್ರಾಣಿ ಇಲ್ಲಿ ಆಂಜನೇಯನ ಪರಮಭಕ್ತನಾಗಿದೆ. ಮೂರ್ ಹೊತ್ತು ಊಟ ಮಾಡ್ಕೊಂಡ್ ಅಲ್ಲೇ ವಾಸವಿದೆ. ಶನಿವಾರ ಬಂತೆಂದ್ರೆ ಆಂಜನೇಯನನ್ನ ಬಿಟ್ಟು ಕದಲೋದಿಲ್ಲ.

    ಹೀಗೆ ನಿಂತಲ್ಲಿ ನಿಲ್ಲದೆ, ಕಾಲಿಗೆ ಚಕ್ರ ಕಟ್ಕೊಂಡಂತೆ ಓಡಾಡ್ತಿರೋ ಇದನ್ನ ನೋಡಿ. ಹ್ಹೇ….ನಾಯಿ ಅನ್ಕೋಬೇಡಿ, ಇದು ನರಿ. ತುಂಬಾನೇ ಸೂಕ್ಷ್ಮ ಹಾಗೂ ಡೆಂಜರಸ್ ಪ್ರಾಣಿ. ಕೇವಲ ಅರಣ್ಯದಲ್ಲಷ್ಟೇ ಇರುತ್ತೆ. ಆದ್ರೆ ದಾರಿ ತಪ್ಪಿ ಅಮ್ಮನಿಂದ ಬೇರಾದ ಈ ನರಿಮರಿ, ನಾಡಲ್ಲೇ ಸೆಟ್ಲ್ ಆಗಿದೆ.

    ಇದು ಸೆಟ್ಲ್ ಆಗಿರೊದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಮಲ್ಲೇಶ್ವರ ಗ್ರಾಮದಲ್ಲಿ. ಇಲ್ಲಿನ ಆಂಜನೇಯ ದೇವಾಲಯದ ಆವರಣವನ್ನ ಬಿಟ್ಟು ಎಲ್ಲೂ ಹೋಗದ ನರಿಮರಿ, ಚಿಕ್ಕ ನಾಯಿಗಳು ಬಂದ್ರೆ ಹೆದರಿ ಓಡಿಸುತ್ತೆ, ದೊಡ್ಡವು ಬಂದ್ರೆ ಓಡಿಹೋಗುತ್ತೆ. ಸ್ಥಳೀಯರು ಕೊಡೋ ಹಾಲು, ಬಿಸ್ಕೆಟ್, ತೆಂಗಿನಕಾಯಿಯನ್ನ ತಿನ್ಕೊಂಡು ಕಳೆದ ಎರಡು ತಿಂಗಳಿನಿಂದ ಇಲ್ಲೇ ಇದೆ. ನರಿಯ ಈ ಜೀವನಶೈಲಿಯನ್ನ ಕಂಡ ಸ್ಥಳೀಯರು ನರಿ ಹೀಗೆಲ್ಲಾ ಇರೋ ಪ್ರಾಣಿಯಲ್ಲ, ಕಲಿಗಾಲ ಏನ್ ಬೇಕಾದ್ರು ಆಗ್ಬೋದು ಅಂತಿದ್ದಾರೆ.

    ದೇಗುಲದ ಹಿಂದಿನ ಕಲ್ಲಿನ ಗುಡ್ಡದಲ್ಲಿ ನರಿಮರಿ ವಾಸ ಮಾಡುತ್ತೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹಾಲು ಕರೆಯೋ ವೇಳೆಗೆ ಪಕ್ಕದಲ್ಲೇ ಇರೋ ಮನೆಗೆ ಬರುತ್ತೆ. ಹಾಲು ಕುಡಿದು ಮತ್ತೆ ದೇವಾಲಯದ ಆವರಣಕ್ಕೆ ಹೋಗುತ್ತೆ. ದೇವಾಲಯಕ್ಕೆ ಬರೋ ಭಕ್ತರ ಕೈ ನೆಕ್ಕುತ್ತಾ, ಕಾಲು ಮೂಸೂತ್ತಾ ಆಟವಾಡುತ್ತೆ.

    ನರಿಯನ್ನು ಅದೃಷ್ಟದ ಪ್ರಾಣಿ ಅಂತಾ ಭಾವಿಸಲಾಗಿದೆ. ಬೆಳಗೆದ್ದು ನರಿ ಮುಖ ನೋಡಿದ್ರೆ ಅದೃಷ್ಟ ಖುಲಾಯಿಸುತ್ತೆ ಅಂತಾರೆ. ಅದಕ್ಕೆ ಏನೋ, ನರಿ ನೋಡಲು ದೇಗುಲಕ್ಕೆ ಜನ ಸಾಗರವೇ ಬರ್ತಿದೆ.

  • ಹೂವಿನ ತೊಟ್ಟಿಲಲ್ಲಿ ಅಂಬಲ್ಪಾಡಿಯ ಅಮ್ಮ- ಚಿಕ್ಕಬಳ್ಳಾಪುರದ ಭಕ್ತನಿಂದ ಸ್ಪೆಷಲ್ ಹರಕೆ

    ಹೂವಿನ ತೊಟ್ಟಿಲಲ್ಲಿ ಅಂಬಲ್ಪಾಡಿಯ ಅಮ್ಮ- ಚಿಕ್ಕಬಳ್ಳಾಪುರದ ಭಕ್ತನಿಂದ ಸ್ಪೆಷಲ್ ಹರಕೆ

    ಉಡುಪಿ: ಕಷ್ಟ ಬಂದಾಗ ದೇವರ ಮೊರೆ ಹೋಗುತ್ತೇವೆ. ಕಷ್ಟ ಬಗೆಹರಿಸು ದೇವಾ ಅಂತ ನಾನಾ ವಿಧದ ಹರಕೆಗಳನ್ನು ಹೊರುತ್ತೇವೆ. ಕಷ್ಟ ಬಗೆಹರಿದು ಸುಖ ಸಿಕ್ಕಾಗ ಹರಕೆ ತೀರಿಸುತ್ತೇವೆ. ಇಲ್ಲೊಬ್ಬ ಭಕ್ತರು ವಿಭಿನ್ನ ಹರಕೆ ಹೊತ್ತು, ಪ್ರತಿ ವರ್ಷ ದೇವರನ್ನು ನಂದನವನದಲ್ಲಿ ಕೂರಿಸುತ್ತಾರೆ.

    ಮೂಲತಃ ಚಿಕ್ಕಬಳ್ಳಾಪುರದ ನಿವಾಸಿ ರಮೇಶ್ ಬಾಬು ಎಂಬವರು ದೇವರಿಗೆ ವಿಶೇಷ ಹರಕೆ ಸಲ್ಲಿಸುತ್ತಾ ಬಂದಿದ್ದಾರೆ. 10 ವರ್ಷದ ಹಿಂದೆ ಇವರ ಬಳಿ ಒಂದು ಸೈಕಲ್ ಕೂಡ ಇರಲಿಲ್ಲ. ಆದ್ರೆ ಇವತ್ತು ಕೋಟಿಗಳ ಒಡೆಯ. ರಮೇಶ್ ಅವರ ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ ಎಂದು ನಂಬಿದ್ದಾರೆ. ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ಪ್ರತಿ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ರಮೇಶ್ ಬಾಬು ಮಾತನಾಡಿ, ನಾನು 20 ವರ್ಷದ ಹಿಂದೆ ಏನೂ ಆಗಿರಲಿಲ್ಲ. ದಿನಸಿ ಸಾಮಾನು ಕಟ್ಟಿಕೊಂಡಿದ್ದೆ. ಅಂಬಲ್ಪಾಡಿ ಮಹಾಕಾಳಿ- ಜನಾರ್ದನ ದೇವಸ್ಥಾನಕ್ಕೆ ಬಂದ ನಂತರ ನನ್ನ ಜೀವನವೇ ಬದಲಾಯ್ತು. ಇವತ್ತಿಗೆ ಕೋಟಿ ರೂಪಾಯಿ ಸಂಪಾದನೆ ಮಾಡಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಅಮ್ಮನ ದೇವಸ್ಥಾನವನ್ನು ಸ್ಥಾಪನೆ ಮಾಡಿದ್ದೇನೆ. ನಾಲ್ಕು ವರ್ಷದಿಂದ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿ ಹರಕೆ ತೀರಿಸುತ್ತಿದ್ದೇನೆ. ಕೊನೆಯ ಉಸಿರು ಇರೊವರೆಗೂ ಈ ಹರಕೆ ಮುಂದುವರೆಯುತ್ತದೆ ಎಂದು ಹೇಳಿದರು.

    ಆಷಾಢದ ಕೊನೆಯ ಶುಕ್ರವಾರದಂದು 200 ಮಂದಿ ಯುವಕರ ತಂಡದ ಜೊತೆ ರಮೇಶ್ ಉಡುಪಿಗೆ ಬರ್ತಾರೆ. ಕಳೆದ ನಾಲ್ಕು ವರ್ಷದಿಂದ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತರುತ್ತಿದ್ದಾರೆ. ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡುತ್ತಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸುತ್ತಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಳವಾಗಿ ಪರಿವರ್ತನೆಗೊಳ್ಳುತ್ತದೆ.

    ಚಿಕ್ಕಬಳ್ಳಾಪುರದಿಂದ ಉಡುಪಿಗೆ ಫ್ಲವರ್ ಡೆಕೋರೇಟ್ ಮಾಡುವ ಭೈರೇಗೌಡ ಮತ್ತು ತಂಡ ಬರುತ್ತದೆ. ದಿನಪೂರ್ತಿ ಹೂವಿನ ಅಲಂಕಾರ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಕೂತು ಈ ಅಲಂಕಾರ ಮಾಡಿದ್ದೇವೆ. ಹೂವಿನ ದೇವಸ್ಥಾನದಂತೆ ಅಮ್ಮನ ದೇವಸ್ಥಾನ ಕಾಣಿಸುತ್ತಿದೆ. ನಮಗೆ ಇದೇ ಮನಸ್ಸಿಗೆ ಖುಷಿ. ರಮೇಶ್ ಬಾಬು ಅವರ ಈ ಹರಕೆ ನೋಡಿದ ಮೇಲೆ ನೂರಾರು ಮಂದಿ ಹೂವನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಅದನ್ನೆಲ್ಲಾ ಅಲಂಕಾರಕ್ಕೆ ಉಪಯೋಗಿಸಿದ್ದೇವೆ ಅಂತ ಭೈರೇಗೌಡ ಹೇಳಿದ್ದಾರೆ.

    ಲಕ್ಷಾಂತರ ರೂಪಾಯಿಯ ಹೂವಿನಿಂದ, ಸಾವಿರಾರು ರೂಪಾಯಿಯ ದ್ರಾಕ್ಷಿ, ಅನನಾಸು, ಜೋಳ, ಹಣ್ಣು ಹಂಪಲಿನಿಂದ ದೇವಸ್ಥಾನವನ್ನು ಈ ಯುವಕರ ತಂಡ ಸಿಂಗಾರ ಮಾಡಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಂಬಲ್ಪಾಡಿ ದೇವಸ್ಥಾನ ಹೂವಿನ ದೇವಸ್ಥಾನದಂತೆ ಕಂಗೊಳಿಸ್ತಾಯಿತ್ತು.

     

     

  • ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ತುಮಕೂರು: ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಯತ್ನಿಸುತಿದ್ದ ಕಳ್ಳರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ತಿಪಟೂರು ತಾಲೂಕಿನ ಬಿದರೆಗುಡಿಯ ಬಿದರಾಂಬಿಕಾ ದೇವಸ್ಥಾನದ ಹುಂಡಿ ಕದಿಯಲು ಹೊಂಚು ಹಾಕುತಿದ್ದಾಗ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದಿದ್ದಾರೆ. ಚನ್ನರಾಯಪಟ್ಟಣದ ಹಿರಿಸಾವೆಯ ಮೂಲದವರಾದ ನಿಖಿಲ್ ಮತ್ತು ಲಯನ್‍ನನ್ನು ಗ್ರಾಮಸ್ಥರು ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.

    ಬಳಿಕ ಹೊನವಳ್ಳಿ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಈ ನಡುವೆ ಮತ್ತೊಬ್ಬ ಕಳ್ಳ ನರಸಿಂಹ ಮೂರ್ತಿ ಎಂಬಾತ ಪರಾರಿಯಾಗಿದ್ದಾನೆ. ಇವರು ವೃತ್ತಿಪರ ಕಳ್ಳರಾಗಿದ್ದು ಬ್ಯಾಗಲ್ಲಿ ಎಕ್ಸೆಲ್ ಬ್ಲೇಡ್ ಸೇರಿದಂತೆ ಬೀಗ ಮುರಿಯುವ ಹಲವು ಆಯುಧಗಳು ಪತ್ತೆಯಾಗಿವೆ. ಈ ಸಂಬಂಧ ಹೊನ್ನಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಾಲಯದ ಪ್ರವೇಶಕ್ಕೆ ನಿರ್ಬಂಧ: ಅರಣ್ಯಾಧಿಕಾರಿಗಳ ಜೊತೆ ಜನ್ರ ತಳ್ಳಾಟ, ನೂಕಾಟ- ವಿಡಿಯೋ

    ದೇವಾಲಯದ ಪ್ರವೇಶಕ್ಕೆ ನಿರ್ಬಂಧ: ಅರಣ್ಯಾಧಿಕಾರಿಗಳ ಜೊತೆ ಜನ್ರ ತಳ್ಳಾಟ, ನೂಕಾಟ- ವಿಡಿಯೋ

    ಚಾಮರಾಜನಗರ: ಅರಣ್ಯದಲ್ಲಿರುವ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸಾರ್ಜನಿಕರ ಮಧ್ಯೆ ತಳ್ಳಾಟ ನೂಕಾಟ ನಡೆದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

    ಗುಂಡ್ಲುಪೇಟೆ ತಾಲೂಕಿನ ಮದ್ದೂರು ಅರಣ್ಯ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

    ಸೋಮವಾರದಂದು ಅರಣ್ಯದ ಅಕ್ಕ ಪಕ್ಕದ ಹೊಂಗಳ್ಳಿ, ಹಳ್ಳದ ಮಾದಳ್ಳಿ ಹಾಗೂ ಅಕ್ಕನಪುರದ ಗ್ರಾಮಸ್ಥರು ಕಾಡಿನೊಳಗೆ ಇರುವ ದೇವಸ್ಥಾನದಲ್ಲಿ ಜಾತ್ರೆ ನಡೆಸಲು ಮುಂದಾಗಿದ್ದರು. ಆದರೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯ ವ್ಯಾಪ್ತಿಯಲ್ಲಿರುವ ಐನೋರಾ ಮಾರಿಗುಡಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಅರಣ್ಯ ಅಧಿಕಾರಿಗಳು ನಿರ್ಬಂಧಿಸಿದ್ದರು.

    ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಸುಮಾರು ಒಂದುವರೆ ಸಾವಿರ ಮಂದಿ ಅರಣ್ಯಾಧಿಕರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಅಲ್ಲದೇ ಚೆಕ್ ಪೋಸ್ಟ್ ನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ತಳ್ಳಾಟ ನೂಕಾಟ ಜರುಗಿತು. ಇದರಿಂದ ಕರ್ನಾಟಕ ಹಾಗೂ ಕೇರಳ ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು.

    https://youtu.be/iBVBJcf47Ig

  • ವಿಡಿಯೋ: ದೇವಸ್ಥಾನದ ಗರ್ಭಗುಡಿಯಲ್ಲಿ 6 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ

    ವಿಡಿಯೋ: ದೇವಸ್ಥಾನದ ಗರ್ಭಗುಡಿಯಲ್ಲಿ 6 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ

    ಹಾವೇರಿ: ಒಂದು ದೇವಸ್ಥಾನದ ಗರ್ಭಗುಡಿಯಲ್ಲಿ ನಾಗರಹಾವು ಪ್ರತ್ಯಕ್ಷವಾದ್ರೆ ಇನ್ನೊಂದು ದೇವಸ್ಥಾನದಲ್ಲಿ ನಿಧಿಯಾಸೆಯಿಂದ ದೇವಸ್ಥಾನದಲ್ಲಿನ ಮೂರ್ತಿಯನ್ನ ಧ್ವಂಸ ಮಾಡಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಣವಿಸಿದ್ದಗೇರಿ ಗ್ರಾಮದ ಬಳಿ ಇರೋ ಕಣವಿಸಿದ್ದೇಶ್ವರ ದೇವಸ್ಥಾನದಲ್ಲಿ ಸುಮಾರು ಆರು ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಮೂರ್ನಾಲ್ಕು ಗಂಟೆಗಳಿಂದ ದೇವಸ್ಥಾನದಲ್ಲಿನ ಈಶ್ವರಲಿಂಗುವಿನ ಬಳಿ ನಾಗರಹಾವು ಕುಳಿತುಕೊಂಡಿತ್ತು. ಈ ನಾಗರಹಾವನ್ನು ನೋಡಲು ನೂರಾರು ಗ್ರಾಮಸ್ಥರು ಆಗಮಿಸಿದ್ದರು. ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿರೋ ನಾಗರಹಾವು ಕಂಡು ಜನರು ಆಶ್ಚರ್ಯಗೊಂಡ್ರು.

    ಎರಡು ಮೂರು ದಿನಗಳ ಹಿಂದೆ ಕಳ್ಳರು ದೇವಸ್ಥಾನದ ಬಳಿ ನಿಧಿಗಾಗಿ ಒಡಾಡಿದ್ದರು ಎನ್ನಲಾಗಿದೆ. ಹೀಗಾಗಿ ದೇವರ ನಾಗರಹಾವು ನಿಧಿ ಕಾಯಲು ಬಂದಿದೆ ಎಂದು ಸ್ಥಳೀಯರು ಮಾತನಾಡಿಕೊಳ್ತಿದ್ದಾರೆ.

    ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಕಲ್ಮೆಶ್ವರ ದೇವರ ಮೂರ್ತಿಯನ್ನ ನಿಧಿಗಾಗಿ ಧ್ವಂಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    https://www.youtube.com/watch?v=lgah6v0kuQg&feature=youtu.be

  • ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

    ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

    ಉಡುಪಿ: ದೂರದ ಅಮೆರಿಕದಲ್ಲಿ ಕೃಷ್ಣನಾದ ಮೊಳಗಿದೆ. ಡೋನಾಲ್ಡ್ ಟ್ರಂಪ್ ದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅವತಾರ ಪುರುಷನ ನಿತ್ಯ ದರುಶನ ಪಡೆಯಬೇಕೆಂಬ ಆಸೆ ನನಸಾಗಿದೆ.

    ಉಡುಪಿಯ ಪುತ್ತಿಗೆ ಮಠಾಧೀಶರು ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ. ವಿಶೇಷ ಅಂದ್ರೆ 7 ಕೋಟಿ ರೂಪಾಯಿ ಕೊಟ್ಟು ಹಳೆಯ ಚರ್ಚ್ ಖರೀದಿಸಿ ಅದನ್ನು ಕೃಷ್ಣ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ದೇಗುಲದಲ್ಲಿ ಸಾಲಿಗ್ರಾಮ ಕಲ್ಲಿನಿಂದ ಕೆತ್ತಲಾಗಿರುವ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಮುಖ್ಯಪ್ರಾಣ ದೇವರ ಗುಡಿ, ರಾಘವೇಂದ್ರ ಗುರುಸಾರ್ವಭೌಮರ ವೃಂದಾವನವೂ ಇದೆ.

    ತಜ್ಞ ಶಿಲ್ಪಿಗಳ ಸುಮಾರು ಒಂದು ವರ್ಷದ ಕೈಚಳಕದಲ್ಲಿ ವಿಶೇಷ ಕೆತ್ತನೆಗಳುಳ್ಳ ಭವ್ಯ ದೇಗುಲ ನಿರ್ಮಾಣವಾಗಿದೆ. ಭಾಗವತದಲ್ಲಿ ವರ್ಣಿಸಿದ ಕೃಷ್ಣನ ಲೀಲೆಗಳನ್ನು ಕೆತ್ತಲಾಗಿದ್ದು, ಬೇಲೂರು-ಹಳೇಬೀಡಿನಲ್ಲಿರುವ ದೇವಸ್ಥಾನದಂತೆ ಆಕರ್ಷಿಸುತ್ತಿದೆ. ಒಂದು ವಾರಗಳ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿವೆ.