ಮೈಸೂರು: ದೇವಸ್ಥಾನಗಳಿಗೆ ಹೋಗಬೇಡಿ. ಹೋದರೆ ನೀವು ದಡ್ಡರಾಗುತ್ತೀರಿ. ರಾಮ ದೇವರಲ್ಲ ಅಂತ ಪ್ರಗತಿಪರ ಚಿಂತಕ ಪ್ರೊ.ಕ ಎಎಸ್ ಭಗವಾನ್ ಹೇಳಿದ್ದಾರೆ.
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪ್ರೊ.ಕೆ.ಎಸ್.ಭಗವಾನ್ ಇಂದು ಭಾಗವಹಿಸಿ, ರಾಮನ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸದ್ದು ಗದ್ದಲ ಏರ್ಪಟ್ಟಿತು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅಲಕ್ಷಿತ ಸಮುದಾಯಗಳು ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಭಗವಾನ್ ರಾಮನ ಬಗ್ಗೆ ಪ್ರಸ್ತಾಪ ಮಾಡಿದ್ರು.
ರಾಮ ಒಬ್ಬ ಜಾತಿವಾದಿ, ಅವನು ದೇವರಲ್ಲ, ಹೆಂಡತಿಯನ್ನು ತುಂಬು ಗರ್ಭಿಣಿಯಾಗಿದ್ದಾಗ ಕಾಡಿಗೆ ಕಳುಹಿಸಿದವನು, ಕೆಲವರ ತಲೆ ಕಡಿದವನು ಇಂಥವನ ದೇವಸ್ಥಾನ ಕಟ್ಟಲು ಈಗ ಮುಂದಾಗಿದ್ದಾರೆ ಎಂದು ಭಗವಾನ್ ಪ್ರಸ್ತಾಪಿಸಿದ್ರು.
ಈ ವೇಳೆ ಸಭಾಂಗಣದಲ್ಲಿದ್ದ ಕೆಲವರು ನೀನು ಮಾತಾಡುತ್ತಿರೋದು ತಪ್ಪು ಎಂದು ಗದ್ದಲ ಸೃಷ್ಟಿಸಿದ್ರು. ಇನ್ನು ಕೆಲವರು ಭಗವಾನ್ ಪರ ನಿಂತು ಭಗವಾನ್ ಮಾತಾಡಿರೋದು ಸರಿ ಎಂದು ಕೂಗಾಡಿದ್ರು. ಭಗವಾನ್ ಭಾಷಣ ಮುಗಿಯುವವರೆಗೂ ಸಭಾಂಗಣದಲ್ಲಿ ಮಾತ್ರ ಪರ ವಿರೋಧಗಳ ಬಗ್ಗೆ ಸದ್ದು ಗದ್ದಲ ಉಂಟಾಯಿತು. ನಂತರ ಕಾರ್ಯಕ್ರಮ ಮುಗಿದ ಮೇಲೆ ಪೊಲೀಸ್ ಭದ್ರತೆಯೊಂದಿಗೆ ಭಗವಾನ್ ರನ್ನು ಕರೆದೊಯ್ಯಲಾಯ್ತು.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮೌಢ್ಯ, ಕಂದಾಚಾರ ಇವುಗಳನ್ನು ಬೆಳೆಸುತ್ತಾರೆ ಹೊರತು ಬುದ್ಧಿ ಬೆಳೆಸುವುದಿಲ್ಲ. ಹೀಗಾಗಿ ಬುದ್ಧಿ ಬೆಳೆಸದೇ ಇದ್ದರೆ ಜನ ಭಕ್ತಿ ಅನ್ನೋ ಹೆಸರಿನಲ್ಲಿ ದಡ್ಡರಾಗುತ್ತಾರೆ. ದೇವಸ್ಥಾನ `ದೆವ್’ ಎಂಬ ಧಾತುವಿನಿಂದ ಬಂದಿದೆ. `ದೆವ್’ ಅಂದ್ರೆ ಬೆಳಕು ಎಂದರ್ಥ. ಆದ್ರೆ ದೇವಸ್ಥಾನದಲ್ಲಿ ಬೆಳಕು ಎಲ್ಲಿದೆ. ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗುತ್ತಿಲ್ಲ ಅಂತ ಹೇಳಿದ್ರು.
ದೇವಸ್ಥಾನದಲ್ಲಿ ತಾರತಮ್ಯ, ಮೇಲು-ಕೀಳು ಇದೆ. ಹೀಗಾಗಿ ನಾನು ಕಳೆದ 58 ವರ್ಷಗಳಿಂದ ದೇವಸ್ಥಾನಕ್ಕೆ ಹೋಗುತ್ತಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ರಾಮ ದೇವರಲ್ಲ ಎಂದಿದ್ದಾನೆ. ಅದಕ್ಕೆ ನಾನು ರಾಮ ದೇವರಲ್ಲ ಎನ್ನುತ್ತಿದ್ದೇನೆ. ದೇವಸ್ಥಾನಗಳಿಗೆ ಹೋದರೆ ನಮ್ಮಲ್ಲಿ ಮೌಢ್ಯ ಬೆಳೆಯುತ್ತದೆ. ಆದ್ದರಿಂದ ನಾನು ದೇವಸ್ಥಾನಕ್ಕೆ ಹೋಗಲ್ಲ ನೀವೂ ಹೋಗಬೇಡಿ ಅಲ್ಲಿ ದೇವರಿಲ್ಲ ಎಂದಿದ್ದಾರೆ.
ಮುಂಬೈ: ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಗಾಯಕಿಯೊಬ್ಬರು ಆಯತಪ್ಪಿ ಮ್ಯಾನ್ ಹೋಲ್ ಗೆ ಬಿದ್ದ ಘಟನೆ ನಡೆದಿದೆ.
ಈ ಘಟನೆ ಮಂಗಳವಾರ ಬೆಳಗ್ಗೆ ಮುಲುಂದ್ ನ ಭಕ್ತಿ ಮಾರ್ಗ್ ಎಂಬಲ್ಲಿ ಸುಮಾರು 6.15ಕ್ಕೆ ನಡೆದಿದೆ. ಕೂಡಲೇ ಈ ಘಟನೆ ಗಮನಿಸಿದ ಅಲ್ಲೇ ಇದ್ದ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಗಾಯಕಿಯನ್ನು ನೀಲಿಮ ಪುರಾಣಿಕ್ ಎಂದು ಗುರುತಿಸಲಾಗಿದೆ. ಇವರು ಪ್ರತೀ ನಿತ್ಯದಂತೆ ನಿನ್ನೆಯೂ ಗಣೇಶನ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ವೇಳೆ ಆಯತಪ್ಪಿ ತೆರೆದ ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ ಅಂತ ಅದೇ ದೇವಸ್ಥಾನಕ್ಕೆ ಪ್ರತಿನಿತ್ಯ ಬರುವ ರಿಯಲ್ ಎಸ್ಟೇ ಏಜೆಂಟ್ ಗೋಪಾಲ್ ಮರಾಡಿಯರ್ ಹೇಳಿದ್ದಾರೆ.
ನೀಲಿಮ ಅವರು ಪ್ರತೀ ದಿನ 6 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಬರುತ್ತಾರೆ. ಬಳಿಕ ದೇವಸ್ಥಾನದಲ್ಲಿ 10 ರಿಂದ 15 ನಿಮಿಷ ಇದ್ದು ಹೊರಡುತ್ತಾರೆ. ನಿನ್ನೆ ನಾನು ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತೆರೆದ ಮ್ಯಾನ್ ಹೋಲ್ ಇರುವುದನ್ನು ಗಮನಿಸಿದ್ದೆ. ಅಲ್ಲದೇ ಅದರ ಮೇಲಿರುವ ಮುಚ್ಚಳವು ನಾಪತ್ತೆಯಾಗಿತ್ತು. 6.15ರ ಸುಮಾರಿಗೆ ಯಾರೋ ಒಬ್ಬರು ಮ್ಯಾನ್ ಯಾರೋ ಒಬ್ಬರು ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ ಎಂಬ ಸುದ್ದಿಯನ್ನು ಕೇಳಿದೆ. ಕೂಡಲೇ ನಾನು ಅಲ್ಲಿಗೆ ತೆರಳಿ ನೋಡಿದಾಗ ಅದು ನೀಲಿಮ ಎಂದು ತಿಳಿಯಿತು ಅಂತ ಅವರು ವಿವರಿಸಿದ್ದಾರೆ.
ತಕ್ಷಣವೇ ನಾನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. 20 ನಿಷದ ಬಳಿಕ ಅಧಿಕಾರಿಗಳು ರ್ಸಥಳಕ್ಕೆ ದೌಡಾಯಿಸಿ ನಿಲೀಮ ಅವರನ್ನು ಮ್ಯಾನ್ ಹೋಲ್ ನಿಂದ ಹೊರತೆಗೆದಿದ್ದಾರೆ. ಘಟನೆಯಿಂದ ದೇಹದ ಮೇಲೆ ಸ್ವಲ್ಪ ಗಾಯಾಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಅಂದ್ರು.
ನಿಲೀಮಾ ಅವರು 10 ಅಡಿ ಆಳಕ್ಕೆ ಬಿದಿದ್ದಾರೆ ಅಂತ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಸದ್ಯ ಅವರು ವೀರ್ ಸಾಚರ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಹಿರಿಯ ಪೊಲೀಸ್ ಅಧಿಕಾರಿ ಶ್ರೀಪದ್ ಕಾಲೆ ತಿಳಿಸಿದ್ದಾರೆ.
ಬಿಎಂಸಿ ಹಾಗೂ ಸ್ಥಳೀಯರಿಂದ ಇಂತಹ ಹಲವು ಘಟನೆಗಳ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಸದ್ಯ ಪ್ರಕರಣಗಳ ತನಿಖೆ ನಡೆಸುವಂತೆ ಕೆಲವು ತಂಡಗಳನ್ನು ನಿಯೋಜಿಸಿದ್ದೇವೆ ಅಂತ ಅವರು ಹೇಳಿದ್ರು. ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಅಂತ ಘಟನೆಗೆ ಸಂಬಂಧಿಸಿದಂತೆ ನಿಲೀಮ ಅವರ ಪುತ್ರ ನಿಖಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮುಂಬೈ: ಮಹಿಳೆ ಒಬ್ಬರು ಸರಿಯಾದ ಉಡುಪು ಧರಿಸಿಲ್ಲ ಎಂದು ದೇವಸ್ಥಾನದ ಒಳಗೆ ಹೋಗಲು ತಡೆದಿದ್ದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಬ್ ಇನ್ಸ್ ಪೆಕ್ಟರ್ ಆದ ಪ್ರತೀಕ್ಷಾ ಲಾಕಡೆ ತನ್ನ ತಾಯಿ ಹಾಗೂ ತನ್ನ ಮಗನ ಜೊತೆ ಮುಂಬೈನ ಕಲ್ಯಾಣ್ ನಲ್ಲಿರುವ ಜರಿಮರಿ ದೇವಸ್ಥಾನಕ್ಕೆ ಹೋಗಿದ್ದರು. ಆಗ ದೇವಸ್ಥಾನದ ಸಿಬ್ಬಂದಿ ಒಬ್ಬರು ಪ್ರತೀಕ್ಷಾ ಉಡುಪುನ್ನು ನೋಡಿ ಪ್ರವೇಶ ನಿರಾಕರಿಸಿದ್ದಾರೆ.
ಸಿಐಡಿ ಡಿವಿಷನ್ ನ ಅಧಿಕಾರಿ ಪ್ರತೀಕ್ಷಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ಸಂಜೆ ಸುಮಾರು 7 ಘಂಟೆಗೆ ಪೂಜೆ ನಡೆಯುವ ಸಮಯದಲ್ಲಿ ನನ್ನ ಮಗ ಆಟವಾಡಲು ಹೊರಗೆ ಓಡಿ ಹೋದನು. ನಾನು ಹೊರಗೆ ಹೋಗಿ ಅವನನ್ನು ಕರೆದುಕೊಂಡು ಒಳಗೆ ಬರುವಾಗ ಅಲ್ಲಿದ ಸಿಬ್ಬಂದಿ ಒಬ್ಬರು ನನ್ನನ್ನು ತಡೆದು, ನನ್ನ ಉಡುಪು ಸರಿಯಿಲ್ಲ ಎಂದು ಹೇಳಿ ದೇವಸ್ಥಾನದ ಹೊರಗೆ ಹೋಗಲು ಹೇಳಿದ್ದರು. ಗೌನ್ ಧರಿಸಿ ಬರುವವರಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ ಎಂದು ದೇವಸ್ಥಾನದ ಆವರಣದಲ್ಲಿ ಬೋರ್ಡ್ ಹಾಕಲಾಗಿದೆ ಆದರೂ ಪ್ರವೇಶ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ನಾನು ರಾತ್ರಿ ವೇಳೆ ಧರಿಸುವ ಉಡುಪು ಹಾಕಿದ್ದೇನೆ ಎಂದು ಹೇಳಿ ನಿಂದಿಸಲು ಶುರು ಮಾಡಿದ್ದರು. ದೇವಸ್ಥಾನದ ಒಳಗೆ ಹೋಗಲು ಬಿಡದೆ ನನ್ನನ್ನು ತಡೆದರು ಎಂದು ಹೇಳಿದರು.
ಪ್ರತೀಕ್ಷಾ ಧರಿಸಿದ್ದ ಉಡುಪು ಹೇಗಿತ್ತು?
ನಾನು ಉದ್ದವಾದ ಸ್ಕರ್ಟ್ ಮತ್ತು ಟೀ- ಶರ್ಟ್ ಹಾಕಿದ್ದೇನೆ ಎಂದು ಹೇಳಿದ್ದರೂ ದೇವಸ್ಥಾನದ ಸಿಬ್ಬಂದಿ ಆದ ಆಶಾ ಗಾಯಕ್ ವಾಡ್ ನನ್ನ ಮಾತು ಕೇಳಲಿಲ್ಲ. ನನ್ನ ಮಾತು ಕೇಳದೆ ನನ್ನನ್ನು ನಿಂದಿಸಲು ಶುರು ಮಾಡಿ ನಂತರ ಅಸಭ್ಯವಾಗಿ ಮಾತನಾಡಿದ್ದರು. ನನ್ನ ಮಗನ ಮುಂದೆಯೇ ಆಶಾ ಆ ರೀತಿ ಮಾತನಾಡಲು ಶುರು ಮಾಡಿದ್ದಾಗ ನಾನು ನನ್ನ ತಾಳ್ಮೆಯನ್ನು ಕಳೆದುಕೊಂಡೆ ಎಂದು ಪ್ರತೀಕ್ಷಾ ವಿವರಿಸಿದ್ದಾರೆ.
ಜಗಳ ಶುರುವಾಗಿದ್ದು ಹೇಗೆ?:
ದೇವಾಲಯ ಪ್ರವೇಶಿಸಲು ನಿಗದಿಯಾಗಿದ್ದ ನಿಯಮದ ಪ್ರಕಾರ ಧರಿಸಬೇಕಾದ ಉಡುಪು ಧರಿಸಿಲ್ಲ ಎಂದು ಹೇಳಿ ಪತ್ರೀಕ್ಷಾರ ಉಡುಪನ್ನು ಗಾಯಕ್ ವಾಡ್ ಹಿಡಿದು ಎಳೆದಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಪ್ರತೀಕ್ಷಾ ಗಾಯಕ್ ವಾಡ್ ಗೆ ಹೊಡೆದಿದ್ದಾರೆ. ಜಗಳದ ಬಗ್ಗೆ ಪ್ರತೀಕ್ಷಾ ಪ್ರತಿಕ್ರಿಯಿಸಿ, ನಾನು ನನ್ನ ರಕ್ಷಣೆಗಾಗಿ ಆಕೆಯ ಮೇಲೆ ಕೈ ಮಾಡಿದೆ. ನನ್ನ ಮಗ ನಮ್ಮಿಬ್ಬರ ಜಗಳವನ್ನು ತಡೆಯಲು ಬಂದಿದ್ದನು. ಆದರೆ ಅವನಿಗೆ ಪೆಟ್ಟು ಬೀಳಬಾರದೆಂದು ಆತನನ್ನು ದೂರದಲ್ಲಿ ಕೂರಿಸಿದೆ. ಆದರೆ ಆ ಮಹಿಳೆ ಮತ್ತೆ ಅಸಭ್ಯವಾಗಿ ನಿಂದಿಸಲು ಶುರು ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ಹೊಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರತೀಕ್ಷಾ ಹಾಗೂ ಗಾಯಕ್ ವಾಡ್ ನಡುವೆ ವಾಗ್ವಾದ ನಡೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಲಾಕಡೆ ಅವರು ಗಾಯ್ಕ್ ವಾಡ್ ಮೇಲೆ ಹಲ್ಲೆ ನಡೆಸಿರೋದು ಕಂಡು ಬಂದಿದೆ.
ಘಟನೆ ನಡೆದ ನಂತರ ಗಾಯಕ್ ವಾಡ್ ಮತ್ತು ಪ್ರತೀಕ್ಷಾ ದೂರು ನೀಡಿದ್ದು ನಾನ್- ಕಾಗ್ನಿಸೆಬಲ್ ಕೇಸ್ ದಾಖಲಾಗಿದೆ. ಈ ಬಗ್ಗೆ ಕೋಶಲೆವಾಡಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿ, ಈ ಜಗಳ ಮೊದಲು ಯಾರೂ ಶುರು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಾಮರಾಜನಗರ: ದೇವಸ್ಥಾನದ ಆವರಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿದೆ.
ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿಯಿಂದಲೂ ಅಪರಿಚಿತ ಶವ ಬಿದ್ದಿದರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ದೇವಸ್ಥಾನದ ಆವರಣದಲ್ಲಿ ಶವವನ್ನು ನೋಡುತ್ತಿರುವ ಭಕ್ತರು ಇದೀಗ ಗಾಬರಿಯಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗೆ ತಿಳಿಸಿದರೂ ಸಹ ಶವವನ್ನು ಸ್ಥಳಾಂತರ ಮಾಡುವ ಕೆಲಸಕ್ಕೆ ಮಾತ್ರ ಮುಂದಾಗುತ್ತಿಲ್ಲ. ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮುಂದೆಯೇ ಈ ಘಟನೆ ಜರುಗಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.
ಕಳೆದ 3 ತಿಂಗಳ ಹಿಂದೆಯೂ ಶವ ಪತ್ತೆಯಾಗಿತ್ತು. ಆ ಸಂದರ್ಭದಲ್ಲೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ.
ಬೆಂಗಳೂರು: ಕಳೆದ ಐದು ದಿನಗಳಿಂದ ನಾಯಿಯೊಂದು ಹಗಲು ರಾತ್ರಿಯೆನ್ನದೆ ಅರಳಿಕಟ್ಟೆಯನ್ನು ಸುತ್ತುತ್ತಿರುವ ಅಚ್ಚರಿಯ ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಮಹಿಳೆ ಅಥವಾ ಯುವತಿಯರು ದೇವರಲ್ಲಿ ಬೇಡಿಕೆಯನ್ನಿಟ್ಟು, ಈಡೇರಿಸುವಂತೆ ಬೇಡಿಕೊಂಡು ಅರಳಿಕಟ್ಟೆ ಸುತ್ತುವುದನ್ನ ನೋಡಿದ್ದೇವೆ. ಆದರೆ ಇಲ್ಲಿ ನಾಯಿಯೊಂದು ಆಯ್ಯಪ್ಪಸ್ವಾಮಿ ದೇವಸ್ಥಾನದ ಮುಂದಿರುವ ಅರಳಿಕಟ್ಟೆಯನ್ನು ಐದು ದಿನದಿಂದ ಹಗಲು ರಾತ್ರಿಯೆನ್ನದೆ ಸುತ್ತುತ್ತಿದೆ. ಈ ನಾಯಿ ಐದು ದಿನದಿಂದ ತಿಂಡಿ ಆಹಾರವನ್ನು ಸ್ವೀಕರಿಸದೇ ದಿನದ 24 ಗಂಟೆಯೂ ಮರವನ್ನ ಸುತ್ತುತ್ತಿದೆ. ಈ ಅಚ್ಚರಿಯ ದೃಶ್ಯವನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.
ಮೊದಲ ಬಾರಿಗೆ ಪ್ರಾಣಿಯೊಂದು ಮರವನ್ನು ಸುತ್ತುತ್ತಿರುವುದನ್ನು ನಾವು ನೋಡುತ್ತಿರುವುದು. ಈ ನಾಯಿಗೆ ದೇವರ ಕರುಣೆ ಇದೆ. ಅದಕ್ಕಾಗಿ ಈ ರೀತಿ ಮರವನ್ನು ಸುತ್ತುತ್ತಿದೆ. ನಾಯಿಯು ಮೊದಲು ಬಿಲ್ವೆಪತ್ರೆ ಮರ ಸುತ್ತಿದ್ದು, ನಂತರ ಬನ್ನಿಮರ ಹಾಗೂ ಅರಳಿಮರವನ್ನು ಸುತ್ತಿ ಕೊನೆಯಲ್ಲಿ ಎಲ್ಲಾ ಮರಗಳನ್ನು ಸುತ್ತುತ್ತಿದೆ. ನಾಯಿಗೆ ತಿಂಡಿ ನೀರು ನೀಡಿದರೂ ಅದು ಏನನ್ನೂ ತಿನ್ನಲಿಲ್ಲ. ಸುಸ್ತಾದರೆ ಸ್ವಲ್ಪ ಕುಳಿತುಕೊಳ್ಳುತ್ತದೆ. ಇಲ್ಲವಾದ್ರೆ ಮರವನ್ನು ಸುತ್ತುತ್ತಲೇ ಇರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಶುಕ್ರವಾರದಿಂದ ಕಾರ್ತೀಕ ಪೌರ್ಣಿಮೆ ಇದೆ. ಈ ದೇವಸ್ಥಾನದ ಜಾಗದಲ್ಲಿ ಒಂದು ಶಕ್ತಿ ಇರಬಹುದು. ನಾಯಿ ಮರ ಸುತ್ತುವುದು ಜನರ ಗಮನಕ್ಕೆ ಬಂದಿರಲಿಲ್ಲ. ಶುಕ್ರವಾರ ಮಧ್ಯಾಹ್ನದಿಂದ ಬಿಸ್ಕೆಟ್, ಹಾಲು, ನೀರು ಕೊಟ್ಟರೂ ಅದು ತಿನ್ನುತ್ತಿಲ್ಲ. ಇಲ್ಲಿ ಸುಮಾರು 30 ವರ್ಷಗಳಿಂದ ಅಯ್ಯಪ್ಪನ ಸನ್ನಧಿ ಇದೆ. ಶಬರಿಮಲೆಯಲ್ಲಿ ಯಾವ ರೀತಿ ಪೂಜೆ ನಡೆಯುವುದೋ ಅದೇ ತೆರನಾಗಿ ಇಲ್ಲಿಯೂ ನಡೆಯುತ್ತದೆ. ಈ ನಾಯಿಗೂ ಇಲ್ಲಿಗೂ ಒಂದು ನಿಕಟ ಸಂಬಂಧ ಇದೆ. ಅದರ ಪೂವರ್ಜರು ಇಲ್ಲಿ ಇದ್ದಿರಬಹುದು. ಇಲ್ಲಿ ದೇವಸ್ಥಾನವನ್ನು ಕಟ್ಟಿದವರಿರಬಹುದು. ಇನ್ನೂ ಬಾಕಿ ಇರುವ ಸೇವೆಯನ್ನು ಈ ನಾಯಿ ರೂಪದಲ್ಲಿ ಬಂದು ಸಲ್ಲಿಸುತ್ತಿರಬಹುದು ಎಂದು ದೇವಸ್ಥಾನದ ಪೂಜಾರಿ ಪ್ರಶಾಂತ್ ಭಟ್ ಹೇಳಿದ್ರು.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಇದೇ ಮೊದಲ ಬಾರಿಗೆ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಕ್ಟೋಬರ್28ರ ಶನಿವಾರದಿಂದ ಅಕ್ಟೋಬರ್ 29ರವರೆಗೆ ಸಾರ್ವಜನಿಕರಿಗೆ ಮಂಜುನಾಥನ ದರ್ಶನವನ್ನು ನಿರ್ಬಂಧಿಸಲಾಗಿದೆ.
ಭದ್ರತೆಯ ದೃಷ್ಟಿಯಿಂದ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಭಕ್ತಾದಿಗಳಿಗೆ ಕ್ಷೇತ್ರದ ಸ್ವಾಮಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಆಡಳಿತ ವರ್ಗ ಹೇಳಿದೆ.
ಇತ್ತ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 29ರಂದು ಬೆಳಿಗ್ಗೆ 11.30ಕ್ಕೆ ಮೋದಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಉಜಿರೆಗೆ ತೆರಳಲಿರುವ ಮೋದಿ ಎಸ್‍ಡಿಎಂ ಮೈದಾನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ವಿಶೇಷ ಭದ್ರತಾ ತಂಡ ಧರ್ಮಸ್ಥಳದಲ್ಲಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿತು. ಇತ್ತ ಎಡಿಜಿಪಿ ಅಲೋಕ್ ಮೋಹನ್ ಸಮಾರಂಭ ನಡೆಯುವ ಮೈದಾನ, ಧರ್ಮಸ್ಥಳದ ಹೆಲಿಪ್ಯಾಡ್‍ನ್ನು ಪರಿಶೀಲನೆ ನಡೆಸಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದ್ರು. ಮೋದಿ ಪ್ರವಾಸ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹತ್ತು ಎಸ್‍ಪಿ ಶ್ರೇಣಿಯ ಅಧಿಕಾರಿಗಳು, ಡಿವೈಎಸ್‍ಪಿ, ಇನ್ಸ್‍ಪೆಕ್ಟರ್, ಪಿಎಸ್‍ಐ ಸೇರಿದಂತೆ 150 ಮಂದಿ ಅಧಿಕಾರಿಗಳು, ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ನಕ್ಸಲ್ ಚಟುವಟಿಕೆ ಇರೋ ಧರ್ಮಸ್ಥಳ, ಬೆಳ್ತಂಗಡಿ ಪರಿಸರದ ದಟ್ಟ ಕಾಡಲ್ಲಿ ನಕ್ಸಲ್ ನಿಗ್ರಹ ದಳದ 25 ತಂಡಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ.
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ದಾಖಲೆ ಪ್ರಮಾಣದ ಹಣ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಈವರೆಗಿನ ಎಲ್ಲಾ ದಾಖಲೆಗಳು ಬ್ರೇಕ್ ಆಗಿದ್ದು ಒಂದು ತಿಂಗಳಲ್ಲೇ ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ಹುಂಡಿಗೆ ಬಿದ್ದಿದೆ.
ಕೊಲ್ಲೂರಿನಲ್ಲಿ ಪ್ರತಿ ತಿಂಗಳು ಹುಂಡಿಯ ಹಣವನ್ನು ಲೆಕ್ಕ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಈ ಬಾರಿ 1.10 ಕೋಟಿ ರೂಪಾಯಿ ಹುಂಡಿಗೆ ಕಾಣಿಕೆ ಬಿದ್ದಿದೆ. ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ 1 ಕೋಟಿ 60 ಸಾವಿರ ರೂಪಾಯಿ ಸಂಗ್ರಹವಾಗಿ ಅದೇ ಈ ವರೆಗಿನ ದಾಖಲೆಯಾಗಿತ್ತು. ಈ ಪೈಕಿ 63 ಸಾವಿರ ರೂಪಾಯಿ 1000 ಮತ್ತು 500 ಮುಖಬೆಲೆಯ ಹಳೆಯ ನೋಟುಗಳು ಅನ್ನೋದು ವಿಶೇಷ.
ಈ ವರ್ಷ 9 ಲಕ್ಷ 40 ಸಾವಿರ ರೂಪಾಯಿ ಹೆಚ್ಚುವರಿ ಸಂಗ್ರಹವಾಗಿದೆ. ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ದೇವಸ್ಥಾನದ ಸಿಬ್ಬಂದಿ, ಸಾರ್ವಜನಿಕರು, ಶಾಲಾ ಮಕ್ಕಳು ಕೊಲ್ಲೂರು ಕ್ಷೇತ್ರದ ಎಲ್ಲಾ ಹುಂಡಿಗಳನ್ನು ಲೆಕ್ಕ ಮಾಡಿದ್ದಾರೆ. ತಡರಾತ್ರಿ 12.30ರ ತನಕವೂ ಸಿಬ್ಬಂದಿ ಚಿಲ್ಲರೆ- ನೋಟು ವಿಭಜನೆ, ಕಟ್ಟು ಕಟ್ಟುವುದು- ಲೆಕ್ಕ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅನುರಾಧಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಈ ಬಾರಿ ಹುಂಡಿಯಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ದೇವಿ ಮೂಕಾಂಬಿಕೆಗೆ 870 ಗ್ರಾಂ ಚಿನ್ನದ ಆಭರಣ- 3 ಕಿಲೋ ಬೆಳ್ಳಿಯ ಆಭರಣಗಳು ಹರಕೆ ರೂಪದಲ್ಲಿ ಬಂದಿದೆ. ಇದೂವರೆಗಿನ ದೊಡ್ಡ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಹರಕೆ. ಈ ಬಾರಿ 63 ಸಾವಿರ ರೂಪಾಯಿಯ ಹಳೇ ನೋಟುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಹೀಗೆ ಮಾಡಿದ್ರೋ..? ಇದರಲ್ಲೂ ಕಪ್ಪು ಹಣ ಇತ್ತೋ ಅನ್ನೋದು ಉತ್ತರ ಸಿಗದ ಪ್ರಶ್ನೆ.
ನವರಾತ್ರಿ ತಿಂಗಳಲ್ಲಿ ದೇಶಾದ್ಯಂತ ಭಕ್ತರು ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದು ತಮ್ಮ ಹರಕೆ ತೀರಿಸುತ್ತಾರೆ. ಕೇರಳ ತಮಿಳುನಾಡು ರಾಜ್ಯದಿಂದ ಹೆಚ್ಚು ಮಂದಿ ಭಕ್ತರು ಕೊಲ್ಲೂರು ಕ್ಷೇತ್ರಕ್ಕೆ ಬರುವುದು ವಾಡಿಕೆ. ಈ ಬಾರಿ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದೆ. ಜೊತೆಗೆ ಬಂದ ಭಕ್ತರು ಹುಂಡಿಗೆ ಹಾಕಿದ- ಹೊತ್ತುಕೊಂಡ ಹರಕೆಯ ಮೊತ್ತವೂ ಹೆಚ್ಚಾಗಿದೆ.
ಕಾರವಾರ: ಮುಜರಾಯಿ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ರಾಜ್ಯಸರ್ಕಾರ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲು ಮುಂದಾಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆ ಚುರುಕು ಗೊಂಡಿದೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ವಿವಾದ ಏನು?
ಈ ಹಿಂದೆ ಮುಜರಾಯಿ ಇಲಾಖೆಯ ಕಾಯ್ದೆಯು ಕರ್ನಾಟಕದಲ್ಲಿ ಒಂದೊಂದು ಭಾಗಕ್ಕೆ ಅದರದೇ ಆದ ಕಾಯ್ದೆಯನ್ನು ಮಾಡಲಾಗಿತ್ತು. ಇದರಂತೆ ರಾಜ್ಯದಲ್ಲಿ ಮದ್ರಾಸ್, ಕೊಡಗು, ಮೈಸೂರು, ಹೈದರಾಬಾದ್, ಮುಂಬೈ ಕರ್ನಾಟಕ ದತ್ತಿ ನಿಯಮಗಳು ಜಾರಿಯಲ್ಲಿದ್ದು. ಒಂದೊಂದು ಭಾಗಕ್ಕೆ ಅದರದೇ ಆದ ಹಕ್ಕುಗಳು ಜಾರಿಯಲ್ಲಿದ್ದ ಕಾರಣ ಹಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿತ್ತು. ಈ ತೊಂದರೆಯನ್ನು ನೀಗಿಸಲು ಏಕರೂಪ ಶಾಸನ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ 1997 ಮತ್ತು ನಿಯಮಗಳು 20002 ಎಂಬ ಏಕರೂಪ ಮುಜರಾಯಿ ಕಾಯ್ದೆಯನ್ನು 2003ರ ಮೇ 1 ರಂದು ಜಾರಿಗೆ ತಂದಿದೆ. ಆದರೇ ಇದನ್ನು ಪ್ರಶ್ನಿಸಿ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾ ಮಂಡಳಿ ಧಾರವಾಡ ಕೋರ್ಟ ನಲ್ಲಿ ದಾವೇ ಹೂಡಿ ಈ ಕಾಯ್ದೆ ರದ್ದಾಗುವಂತಾಯ್ತು. ಇನ್ನು ಅಂದಿನ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳಾದ ರಾಮಜೋಯಿಸ್ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಯ್ದೆಯನ್ನು ಜಾರಿಗೊಳಿಸಿತ್ತು.
ಇನ್ನು ಈ ಬಗ್ಗೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಕಾಯ್ದೆ ರದ್ದಾಗುವಂತೆ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯದ ಮಹಾಮಂಡಳಿಗಳು ಪ್ರಯತ್ನಿಸಿದ್ದವು, ಆದರೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದೆ. ಅಲ್ಲದೇ ಕಾಯ್ದೆಯ ಕಾಲಂ 25, 29 ರ ಅಡಿಯಲ್ಲಿ ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯಲು ಸಮಿತಿ ರಚನೆಗೆ ಅನುವು ಮಾಡಿಕೊಟ್ಟಿದೆ.
ಈ ಕಾಯ್ದೆಯನ್ನು ಸದುಪಯೋಗ ಪಡಿಸಿಕೊಂಡ ಅಂದಿನ ಬಿಜೆಪಿ ಸರ್ಕಾರ ಉಡುಪಿಯ ಕೃಷ್ಣ ದೇವಸ್ಥಾನ, ಗೋಕರ್ಣದ ಮಹಾಭಲೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯಿಂದ ಕೈ ತಪ್ಪುವಂತೆ ಮಾಡಿತ್ತು. ಪ್ರಸ್ತುತ ಸಿಎಂ ಸಿದ್ಧರಾಮಯ್ಯ ನವರ ಸರ್ಕಾರ ಇದೇ ನಿಟ್ಟಿನಲ್ಲಿ ಮುಂದುವರೆದಿದ್ದು ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯಲು ಮೂರು ವರ್ಷ ಅಧಿಕಾರಾವಧಿಯ 9 ಜನರ ಸಮಿತಿ ರಚನೆಗೆ ಮುಂದಾಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಸಮಿತಿ ಹೇಗೆ ರಚನೆಯಾಗುತ್ತೆ..?
ವ್ಯವಸ್ಥಾಪನಾ ಸಮಿತಿ ರಚನೆಯಲ್ಲಿ ಒಂದು ಎಸ್‍ಸಿ, ಎಸ್‍ಟಿ, ಪ್ರತಿನಿಧಿ, 1 ಮಹಿಳೆ, ದೇವಸ್ಥಾನದ ಅರ್ಚಕ ಸೇರಿದಂತೆ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಸಮಿತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಧಾರ್ಮಿಕ ನ್ಯಾಯ ಸಮಿತಿಯ ಸದಸ್ಯರೊಳಗೊಂಡ ನಿರ್ದೇಶಿತ ಸದಸ್ಯರು ನೇರ ಸಂದರ್ಶನದಲ್ಲಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಈ ಸಮಿತಿಯು ದೇವಸ್ಥಾನದ ಆಡಳಿತ, ಅಭಿವೃದ್ಧಿ, ಕೆಲಸಗಾರರ ನೇಮಕ ಮುಂತಾದ ಅಧಿಕಾರವನ್ನು ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 622 ಮುಜರಾಯಿ ದೇವಸ್ಥಾನಗಳಲ್ಲಿ 10 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ 113 ಸಿ ಮತ್ತು ಬಿ ಹಂತದ ಧಾರ್ಮಿಕ ಪರಿಷತ್ ಗೆ ಒಳಪಟ್ಟ ದೇವಸ್ಥಾನಗಳಿಗೆ 9 ಜನ ಸದಸ್ಯರಿರುವ ಸಮಿತಿಯನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಇದರಲ್ಲಿ 30 ದೇವಸ್ಥಾನಗಳಿಗೆ ಸಮಿತಿ ಸದಸ್ಯತ್ವಕ್ಕಾಗಿ ಸಾರ್ವಜನಿಕರಿಂದ ಅರ್ಜಿ ಬಂದಿದ್ದು ಉಳಿದ 83 ದೇವಸ್ಥಾನಗಳಿಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಇನ್ನು ಬಿ ವರ್ಗದ 9 ದೇವಸ್ಥಾನಗಳಲ್ಲಿ 5 ದೇವಸ್ಥಾನಗಳಿಗೆ ಸಮಿತಿ ರಚಿಸಲಾಗಿದ್ದು ಉಳಿದ 4 ದೇವಸ್ಥಾನದ ಆಡಳಿತವರ್ಗ ಕೋರ್ಟ್ ಮೆಟ್ಟಿಲೇರಿದೆ.
ಪರ, ವಿರೋಧ ಯಾಕೆ..?
ದೇವಸ್ಥಾನಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ಈ ಸಮಿತಿ ರಚನೆಯಾಗಿದ್ದರೂ ಈ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಿಂದೂಗಳ ಧಾರ್ಮಿಕ ಹಕ್ಕಿಗೆ ತೊಂದರೆಯಾಗುತ್ತಿದ್ದು, ಸಮಿತಿ ರಚನೆಯಿಂದ ದೇವಸ್ಥಾನಕ್ಕೆ ಬರುವ ಹಣ ಕೂಡ ದುರುಪಯೋಗವಾಗಬಹುದು ಎಂಬುದು ಕೆಲವರ ವಾದವಾಗಿದೆ. ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಈ ಹಿಂದೆ ವಂಶಪಾರಂಪರ್ಯವಾಗಿ ಆಡಳಿತ ಮಾಡುತ್ತಿದ್ದ ಕೆಲವರು ದೇವಸ್ಥಾನದ ಹಕ್ಕಿನ ಜಾಗವನ್ನೇ ಮಾರಿ ತಮ್ಮ ಸ್ವಂತಕ್ಕೆ ಬಳಸಿಕೊಂಡ ನಿದರ್ಶನಗಳಿದ್ದು ಇದನ್ನು ತಪ್ಪಿಸಲು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಇಂತಹ ಘಟನೆಗಳು ಜರುಗಿದ್ದರಿಂದಾಗಿ ತಕ್ಷಣದಲ್ಲಿ ಸಮಿತಿ ರಚಿಸಲು ಕ್ರಮ ಕೈಗೊಂಡಿದೆ. ಶೀಘ್ರದಲ್ಲಿ ಸಮಿತಿ ರಚಿಸುತ್ತಿರುವುದರಿಂದ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯದ ಮಹಾ ಮಂಡಲಿ ಬುಧವಾರ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಪ್ರತಿಭಟನಾ ಸಭೆ ನಡೆಸಿ ಮುಂದೆ ಕಾನೂನಿನ ಹೋರಾಟಕ್ಕೆ ಸಜ್ಜಾಗಿದೆ.
ವ್ಯವಸ್ಥಾಪನಾ ಸಮಿತಿ ರಚನೆಯಿಂದ ದೇವಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುವುದರ ಜೊತೆಗೆ ಹಿಂದು ಧಾರ್ಮಿಕ ಹಕ್ಕಿಗೆ ಚ್ಯುತಿ ಬರುತ್ತದೆ.
ಈಗಾಗಲೇ ಸುಪ್ರೀಂ ಕೋರ್ಟ ನಲ್ಲಿ ದಾವೆ ಇರುವುದರಿಂದ ಒಂದು ವೇಳೆ ಕೋರ್ಟ್ ಸರ್ಕಾರದ ಪರವಾಗಿ ಆದೇಶ ನೀಡಿದರೆ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಗಳು ಮುಜರಾಯಿ ಕೈ ಸೇರುವುದರಲ್ಲಿ ಅನುಮಾನವಿಲ್ಲ ಎಂಬುದು ಧಾರ್ಮಿಕ ಮುಖಂಡರ ವಾದ. ಆದರೆ ಸರ್ಕಾರ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡಲು ಈ ಸಮಿತಿ ಅಗತ್ಯವಿದೆ ಎಂದು ಹೇಳಿದೆ.
ಹಾಸನ: ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಿದ್ಧತೆ ಶುರುವಾಗಿದೆ. ಅಧಿದೇವತೆ ಹಾಸನಾಂಬೆಯ ದರ್ಶನ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ.
ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಇದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಅಕ್ಟೋಬರ್ 12 ರಿಂದ 21 ರ ರವರೆಗೆ ಹಾಸನಾಂಬೆ ಜಾತ್ರೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ದಿನವಿಡೀ ದರ್ಶನ ವ್ಯವಸ್ಥೆ ಮಾಡಿರುವುದಿರಿಂದ ಭಕ್ತರ ನೂಕುನುಗ್ಗಲು ಕಡಿಮೆಯಾಗುವ ನಿರೀಕ್ಷೆ ಇದೆ.
ಸಂಪ್ರದಾಯದ ಪ್ರಕಾರ ಅರಸು ವಂಶಸ್ಥರು ಬಾಳೆಕಂಬ ಕಡಿದ ಕೂಡಲೇ, ವರ್ಷದಿಂದ ಮುಚ್ಚಿದ್ದ ಅಮ್ಮನವರ ಗರ್ಭಗುಡಿ ಬಾಗಿಲು ಮಧ್ಯಾಹ್ನ 12.30ಕ್ಕೆ ತೆರೆಯಲಿದೆ. ಈಗಾಗಲೇ ಹೇಳಿರುವಂತೆ ಮೊದಲ ದಿನ ದೇವಿಯ ಗರ್ಭಗುಡಿ ಸ್ವಚ್ಛತೆ, ಸುಣ್ಣಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗಿರುವ ಆಭರಣಧಾರಣೆ ನಂತರ ಪೂಜಾಕಾರ್ಯ ನಡೆಯಬೇಕಿರುವುದರಿಂದ ದರ್ಶನ ವ್ಯವಸ್ಥೆ ಇರುವುದಿಲ್ಲ. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಮಧ್ಯಾಹ್ನ 1.30 ರಿಂದ 3.30 ರ ವರೆಗೆ ನೈವೇದ್ಯ ಸಮಯ ಹೊರತುಪಡಿಸಿ, ಉಳಿದ ಸಮಯದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಬಹುದಾಗಿದೆ.
ಹಾಸನಾಂಬೆ ಹಲವು ಪವಾಡ ಸದೃಶ ಮಹಿಮೆಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಇಷ್ಟಾರ್ಥವನ್ನು ಸಿದ್ಧಿಸುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಹಿಂದೆ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟ ಹಣತೆ ಹಾಗೆಯೇ ಉರಿಯಲಿದೆ. ದೇವಿಯ ಮಹಿಮೆ ಅಪಾರ ಎನ್ನುವುದು ಅಸಂಖ್ಯಾತ ಭಕ್ತರ ನಂಬಿಕೆ. ಪರಂಪರೆ ಈಗಲೂ ನಡೆದುಕೊಂಡು ಬಂದಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಸಾಗರವೇ ಹರಿದು ಬರುವ ಸಾಧ್ಯತೆ ಇದೆ.
ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವಾಗ ಮಳೆ-ಬಿಸಿಲಿನ ತಾಪ ತಪ್ಪಸಿಕೊಳ್ಳಲು ನೆರಳಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದಂತೆ ಲಾಡು-ಪ್ರಸಾದಕ್ಕೂ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಶುಲ್ಕವಿದೆ: ಶೀಘ್ರ ದರ್ಶನಕ್ಕೆ 300 ಮತ್ತು ಗಣ್ಯರು ಪ್ರವೇಶದ್ವಾರದಲ್ಲೇ ತೆರಳಿ ನೇರ ದರ್ಶನ ಪಡೆಯಲು ಇದೇ ಮೊದಲ ಬಾರಿ 1 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಬಾರಿ 9 ದಿನಗಳ ದರ್ಶನ ಇರುವುದರಿಂದ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಪರಾಧ ಪತ್ತೆಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಒಟ್ಟು ಮೂರು ಶಿಫ್ಟ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಕ್ಟೋಬರ್ 21 ರ ಮಧ್ಯಾಹ್ನ ಅಂದ್ರೆ ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಬಾಗಿಲು ಮುಚ್ಚಲಿದೆ. ನೂಕು ನುಗ್ಗಲು ತಡೆಯುವ ಉದ್ದೇಶದಿಂದ ಅಂದೂ ಸಹ ಭಕ್ತರ ದರ್ಶನವನ್ನು ನಿರ್ಬಂಧಿಸಲಾಗಿದೆ.
ಬೆಂಗಳೂರು: ನಗರದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಕೆಲವು ದೇವಾಯಲಗಳನ್ನ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ಆದರೆ ಲಕ್ಷಾಂತರ ರೂಪಾಯಿಗಳ ಅನುದಾನ ಪಡೆದು ಅಭಿವೃದ್ಧಿ ಹೆಸರಲ್ಲಿ ಸರ್ಕಾರಕ್ಕೆ ದತ್ತಿ ಇಲಾಖೆ ಮೋಸ ಮಾಡುತ್ತಿದೆ.
ಧಾರ್ಮಿಕ ದತ್ತಿ ಇಲಾಖೆಯಡಿ ಕೆಲಸ ಮಾಡೋ ಪೂಜಾರಿ, ತಮ್ಮ ದಿನಭತ್ಯೆ ಪಡೆಯೋಕೂ ಇಲ್ಲಿ ಲಂಚ ಕೊಡಬೇಕು. ಎಷ್ಟು ರಾಜಾರೋಷವಾಗಿ ಅಂದ್ರೆ ನನ್ನ ಮೇಲೆ ಬಂಡವಾಳ ಹಾಕಿ ಅಂತಾ ಬೆಂಗಳೂರಿನ ಉತ್ತರ ವಿಭಾಗದ ಶಿರಸ್ತೇದಾರ್ ಕೇಳುತ್ತಾರೆ. ಜೊತೆಗೆ ಲೇಡಿ ಕ್ಲರ್ಕ್ ಕೂಡಾ 50 ಸಾವಿರ ರೂ. ಕೊಟ್ಟು ಬಿಡಿ, ಎಲ್ಲವನ್ನು ಮಾಡಿಕೊಡ್ತಿವಿ ಅಂತಾ ಬಾಯಿಬಿಟ್ಟು ಕೇಳುತ್ತಾರೆ.
ಬಳೇಪೇಟೆಯ ಕಾಶಿ ವಿಶ್ವನಾಥ ದೇವಸ್ಥಾನದ ಪೂಜಾರಿ ಮನೆ ಅಭಿವೃದ್ಧಿಗೆ ಇಲಾಖೆಯಿಂದ 3 ಲಕ್ಷ ರೂ. ಮಂಜೂರಾಗಿ ವರ್ಷ ಕಳೆದಿದೆ. ಇದೇ ಬಳೇಪೇಟೆಯಲ್ಲಿರುವ ವೆಂಕಟೇಶ್ವರ ದೇವಾಲಯದ ಪಾಕಶಾಲೆಗೆ ಬರೋಬ್ಬರಿ 7 ಲಕ್ಷ ರೂಪಾಯಿ ಮಂಜೂರಾಗಿದೆ. ಆದ್ರೇ ಪಾಕಶಾಲೆ ಮಾತ್ರ ಇವತ್ತೋ ನಾಳೆನೋ ಬೀಳೋ ಸ್ಥಿತಿಯಲ್ಲಿದೆ.
ಇನ್ನು ಮಲ್ಲೇಶ್ವರಂನಲ್ಲಿರುವ ಇತಿಹಾಸ ಪ್ರಸಿದ್ಧ ವೇಣುಗೋಪಾಲ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯ ಕೊಠಡಿಗೆ 3 ಲಕ್ಷ ರೂ. ಮಂಜೂರಾಗಿದೆ. ಆದರೆ ಈ ಹಣ ಅಧಿಕಾರಿಗಳ ಹೊಟ್ಟೆ ಸೇರಿದೆ. ಅಷ್ಟೇ ಅಲ್ಲ ಲಕ್ಷ್ಮೀನರಸಿಂಹ ದೇವಾಲಯದ ಚಪ್ಪಲಿ ಸ್ಟ್ಯಾಂಡ್‍ಗೆ 2 ಲಕ್ಷದ 77 ಸಾವಿರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಅಲ್ಲಿ ಚಪ್ಪಲಿ ಸ್ಟ್ಯಾಂಡ್ ಸಹ ಇಲ್ಲ.
ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಅನುದಾನ ಮಾತ್ರ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಹೀಗಾಗಿ ತಪ್ಪಿಸ್ಥತರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.