Tag: ದೇವಸ್ಥಾನ

  • ಉಡುಪಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ಉಡುಪಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ಉಡುಪಿ: ಇಲ್ಲಿನ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಭೇಟಿ ನೀಡಿದ್ರು.

    ಉಡುಪಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನವನ್ನು ಮೂವತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಪ್ರಯುಕ್ತ ಪಡೆದ ಸಭಾ ಕಾರ್ಯಕ್ರಮದಲ್ಲಿ ದರ್ಶನ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ರು.

    ಕೈ ಮುಗಿದು ವೇದಿಕೆ ಹತ್ತಿದ ದರ್ಶನ್, ನಾಡಿನ ಹಿರಿಯ ಯತಿ ಪೇಜಾವರ ಸ್ವಾಮೀಜಿಯ ಆಶೀರ್ವಾದ ಪಡೆದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಅಪೂರ್ವ ಶಿಲ್ಪಕಲಾ ಕೆತ್ತನೆಯನ್ನು ಬೆರಗುಗಣ್ಣಿನಿಂದ ನೋಡಿದರು. ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.

    ದರ್ಶನ್ ಗೆ ಖ್ಯಾತ ನಟರಾದ ಸೃಜನ್ ಲೋಕೇಶ್, ಧನಂಜಯ್ ಮತ್ತಿತರರು ಸಾಥ್ ನೀಡಿದ್ರು. ದೇವರ ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರು ದರ್ಶನ್ ದರ್ಶನದಿಂದ ಪುಳಕಿತರಾಗಿದ್ರು. ಈ ವೇಳೆ ಮಾತನಾಡಿದ ದರ್ಶನ್, ಪೂರ್ವಿಕರು ನೀಡಿದ ಆಸ್ತಿಯಯನ್ನು ಉಳಿಸುವುದು, ಜೀರ್ಣೋದ್ಧಾರಗೊಳಿಸುವುದು ಪುಣ್ಯದ ಕೆಲಸ. ಈ ಕಾರ್ಯ ಮಾಡಿದ ಹಿರಿಯಡ್ಕ ಜನತೆಗೆ ಧನ್ಯವಾದ ಅಂತ ಹೇಳಿದ್ರು.

  • ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದ 3 ಕ್ಷೇತ್ರದಲ್ಲಿಂದು ರಾಹುಲ್ ಪ್ರವಾಸ

    ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದ 3 ಕ್ಷೇತ್ರದಲ್ಲಿಂದು ರಾಹುಲ್ ಪ್ರವಾಸ

    ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮಂಡ್ಯದಲ್ಲಿ ತಮ್ಮ ಪ್ರವಾಸ ಕೈಗೊಳ್ಳಲಿದ್ದಾರೆ.

    ವಿಶೇಷ ಅಂದ್ರೆ ರಾಹುಲ್ ಇಂದು ಪ್ರವಾಸ ಮಾಡುತ್ತಿರುವ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಲ್ಲ. ಶನಿವಾರವಷ್ಟೇ ಹಳೆ ಮೈಸೂರು ಭಾಗದ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ, ಈ ಭಾಗದ ಪ್ರಬಲ ಮಠಗಳಿಗೆ ಭೇಟಿ ನೀಡದೇ ಅಂತರ ಕಾಯ್ದುಕೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ರಾಹುಲ್‍ಗೆ ಎನ್‍ಸಿಸಿ ಟ್ರೈನಿಂಗ್ ಬಗ್ಗೆ ಗೊತ್ತೇ ಇಲ್ಲ-ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ರಾಗಾ

    ಮೈಸೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ರು. ಆದ್ರೆ ಲಿಂಗಾಯತ ಸಮುದಾಯದ ಸುತ್ತೂರು ಮಠದತ್ತ ಸುಳಿಯಲಿಲ್ಲ.

    ಇಂದು ಜೆಡಿಎಸ್ ಭದ್ರಕೋಟೆ ಮಂಡ್ಯಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ, ಒಕ್ಕಲಿಗರ ಆದಿಚುಂಚನಗಿರಿ ಮಠಕ್ಕೂ ಭೇಟಿ ನೀಡದಿರಲು ನಿರ್ಧರಿಸಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಕೆಆರ್ ಪೇಟೆಗೆ ಆಗಮಿಸಲಿರುವ ರಾಹುಲ್, ಬಸ್ ನಿಲ್ದಾಣದ ಬಳಿ ಚಿಕ್ಕ ವೇದಿಕೆಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ರಾಹುಲ್ ಗಾಂಧಿ ಹೀಗಂದ್ರು

    ಕೆಆರ್ ಪೇಟೆಯಲ್ಲಿಯೇ ಮಧ್ಯಾಹ್ನದ ಊಟ ಮಾಡಲಿದ್ದಾರೆ. ನಂತರ ಬಸ್ ಮೂಲಕ ಪಾಂಡವಪುರ ಮತ್ತು ಶ್ರೀರಂಗಪಟ್ಟಣಕ್ಕೆ ತೆರಳಿ ರೈತರು, ಸಾರ್ವಜನಿಕರೊಂದಿಗೆ ಕಾರ್ನರ್ ಸಭೆ ನಡೆಸಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಬಂಡಾಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ರಾಹುಲ್ ಗಾಂಧಿಯವರನ್ನು ಸ್ವಾಗತಿಸಲಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ರಸ್ತೆ ಮಾರ್ಗವಾಗಿ ಮೈಸೂರು ತಲುಪಲಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಮತಾಂತರದ ಕಿರಿಕ್-ಮತಾಂತರದ ಆರೋಪದಲ್ಲಿ ದೇಗುಲವೇ ಆಯ್ತು ರಣರಂಗ

    ಸಿಲಿಕಾನ್ ಸಿಟಿಯಲ್ಲಿ ಮತಾಂತರದ ಕಿರಿಕ್-ಮತಾಂತರದ ಆರೋಪದಲ್ಲಿ ದೇಗುಲವೇ ಆಯ್ತು ರಣರಂಗ

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿಯ ಗೂಡಾಂಜನೇಯ ದೇವಸ್ಥಾನದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ದೇವಾಲಯದ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿ ಕೆಲಕಾಳ ಗಲಾಟೆಯೂ ನಡೆಯಿತು.

    ಎನ್‍ಜಿಓವೊಂದರ ಸದಸ್ಯರು ನಾಲ್ಕು ದಿನಗಳಿಂದ ಸುಮಾರು ಮೂವತ್ತರಿಂದ ನಲವತ್ತು ಜನರನ್ನು ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ಕೂಡಿಹಾಕಿದ್ದಾರೆ. ಸ್ಥಳೀಯ ಜನ ಇದ್ರಿಂದ ಕುತೂಹಲಗೊಂಡು ನೋಡಿದಾಗ ಕ್ರಿಶ್ಚಿಯನ್ ಮತದ ಭೋದನೆ ನಡೆಯತ್ತಿತ್ತು ಅಂತಾ ಆರೋಪಿಸಿ ಕಲ್ಯಾಣಮಂಟಪದ ಬಾಗಿಲು ಮುರಿದು ಒಳಹೊಕ್ಕು ಗಲಾಟೆ ಮಾಡಿದ್ದಾರೆ. ಅಲ್ಲಿದ್ದ ಎನ್‍ಜಿಓ ದವರ ಮೇಲೆಯೂ ಹಲ್ಲೆ ನಡೆಸಿದ್ದಾರೆ.

    ಸರ್ಕಾರ ಹಾಗೂ ನಾವು ಜಂಟಿಯಾಗಿ ಜೀತಕ್ಕಿಟ್ಟ ಕಾರ್ಮಿಕರನ್ನು ರಕ್ಷಿಸಿ ಇಲ್ಲಿ ಕರೆತಂದಿದ್ದೇವೆ. ಒರಿಸ್ಸಾಗೆ ರೈಲು ಸಿಗದ ಕಾರಣ ಇಲ್ಲಿ ಇಟ್ಟಿದ್ದೇವೆ ಅಂತಾ ಎನ್‍ಜಿಓ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಜನರು ಮಾತ್ರ ನಂಬೋದಕ್ಕೆ ತಯಾರಿರಲಿಲ್ಲ, ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಇವರು ಕಾರ್ಮಿಕರನ್ನು ರಕ್ಷಣೆ ಮಾಡಿ ಇಲ್ಲಿ ಇಟ್ಟಿದ್ದೇವೆ. ಮತಾಂತರ ನಡೆದ್ರೇ ತನಿಖೆ ನಡೆಸುತ್ತೇವೆ ಅಂತಾ ತಿಳಿಸಿದ್ದಾರೆ.

  • ಶಿವಮೊಗ್ಗದಲ್ಲಿ ನಿಧಿ ಆಸೆಗೆ ನರಬಲಿ- ಆರೋಪಿಗಳ ಬಂಧನ

    ಶಿವಮೊಗ್ಗದಲ್ಲಿ ನಿಧಿ ಆಸೆಗೆ ನರಬಲಿ- ಆರೋಪಿಗಳ ಬಂಧನ

    ಶಿವಮೊಗ್ಗ: ನಿಧಿಯಾಸೆಗಾಗಿ ನರಬಲಿ ಕೊಟ್ಟಿರುವ ಆಘಾತಕಾರಿ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ನಡೆದಿದೆ.

    ಕೇಶ್ಯನಾಯ್ಕ್(65) ನಿಧಿಯಾಸೆಗೆ ಬಲಿಯಾದ ವ್ಯಕ್ತಿ. ಸ್ಥಳಿಯರಾದ ರಂಗಪ್ಪ, ಶೇಖರಪ್ಪ, ಮಂಜುನಾಥ ಹಾಗೂ ಗೌಸ್ ಪೀರ್ ಎಂಬವರಿಂದ ಈ ಕೃತ್ಯ ನಡೆದಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಾಡಿನ ಹೊಳೆ ದಂಡೆಯಲ್ಲಿ ಇರುವ ಹೊನ್ನೇಮರ ಚೌಡಮ್ಮ ದೇವಾಲಯದ ಬಳಿ ನಿಧಿ ಇದೆ ಎಂದು ಆರೋಪಿಗಳು ನಂಬಿದ್ದರು. ನರಬಲಿ ಕೊಟ್ಟರೆ ಈ ನಿಧಿ ಪಡೆಯಬಹುದು ಎಂಬ ಮೂಢನಂಬಿಕೆಯಿಂದ ಈ ಕೃತ್ಯ ನಡೆದಿದೆ.

    ಇದೇ ತಿಂಗಳ 7ರಂದು ರುಂಡವಿಲ್ಲದ ಶವ ಪತ್ತೆಯಾಗಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ನರಬಲಿ ಪ್ರಕರಣ ಬೆಳಕಿಗೆ ಬಂದಿದೆ.

  • ಆಹಾರ ನೀರು ಬಿಟ್ಟು ದೇವಸ್ಥಾನ ಸುತ್ತುತ್ತಿರುವ ಶ್ವಾನ

    ಆಹಾರ ನೀರು ಬಿಟ್ಟು ದೇವಸ್ಥಾನ ಸುತ್ತುತ್ತಿರುವ ಶ್ವಾನ

    ಬೆಂಗಳೂರು: ಶ್ವಾನವೊಂದು ಆಹಾರ ನೀರು ಬಿಟ್ಟು ದೇವರ ಗುಡಿಯನ್ನು ಸುತ್ತುವ ಮೂಲಕ ಅಚ್ಚರಿಗೆ ಕಾರಣವಾಗಿರುವ ಘಟನೆ ನಗರದ ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ.

    ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ದೇವಾಲಯದ ಮುಂದೆ ಇರುವ ಬಿಸಿಲು ಮಾರಮ್ಮನ ಗುಡಿ ಹಾಗೂ ಗರುಡಗಂಬವನ್ನು ಶ್ವಾನವೊಂದು ಕಳೆದ ಮೂರು ದಿನಗಳಿಂದ ಸತತವಾಗಿ ಆಹಾರ ನೀರು ಬಿಟ್ಟು ಸುತ್ತುತ್ತಿರುವುದು ಸ್ಥಳೀಯರ ಆಚ್ಚರಿಗೆ ಕಾರಣವಾಗಿದೆ. ಶ್ವಾನ ಯಾವ ಕಾರಣಕ್ಕಾಗಿ ಈ ರೀತಿ ಸುತ್ತುತ್ತಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ. ಇದನ್ನೂ ಓದಿ: 5 ದಿನಗಳಿಂದ ಅರಳಿಕಟ್ಟೆ ಸುತ್ತುತ್ತಿದೆ ನಾಯಿ-ಬೈಯಪ್ಪನ ಹಳ್ಳಿಯಲ್ಲಿ ಅಚ್ಚರಿಯ ಘಟನೆ-ವಿಡಿಯೋ ನೋಡಿ

    ಶ್ವಾನವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಅಗಮಿಸುತ್ತಿದ್ದಾರೆ. ಇನ್ನು ಬನ್ನೇರುಘಟ್ಟದ ಶ್ರೀ ಚಂಪಕಧಾಮಸ್ವಾಮಿ ಜಾತ್ರೆ ಮುಗಿದು ಕೆಲವೇ ದಿನಗಳಾಗಿದ್ದು ಇದೀಗ ಶ್ವಾನ ದೇವರ ಗುಡಿ ಸುತ್ತುತ್ತಿರುವುದು ಸ್ಥಳೀಯರಲ್ಲಿ ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.

    https://youtu.be/cb5PPuAu07s

  • ದೇಗುಲಕ್ಕೆ ದಲಿತರನ್ನು ತಡೆಯಲು ಪ್ಲಾನ್- ಸತ್ತೋಗ್ತೀರಾ ಅಂತ ಸವರ್ಣೀಯ ಮಹಿಳೆ ಬೆದರಿಕೆ

    ದೇಗುಲಕ್ಕೆ ದಲಿತರನ್ನು ತಡೆಯಲು ಪ್ಲಾನ್- ಸತ್ತೋಗ್ತೀರಾ ಅಂತ ಸವರ್ಣೀಯ ಮಹಿಳೆ ಬೆದರಿಕೆ

    ತುಮಕೂರು: ದೇವಸ್ಥಾನವೊಂದಕ್ಕೆ ದಲಿತರು ಪ್ರವೇಶ ಮಾಡಿದ್ದರಿಂದ ಕುಪಿತಗೊಂಡ ಸವರ್ಣಿಯ ಮಹಿಳೆ ತನ್ನ ಮೇಲೆ ದೇವರು ಬಂದಂತೆ ನಾಟಕವಾಡಿ ದಲಿತರಿಗೆ ಬೆದರಿಕೆ ಹಾಕಿದ ವಿಲಕ್ಷಣ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಕೆಂಕೇರಮ್ಮ ದೇವಸ್ಥಾನದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ. ಬಿಳಿದೇವಾಲಯದ ಗ್ರಾಮದ ಸವರ್ಣೀಯರು ಸೇರಿದಂತೆ ದಲಿತರಿಂದ ವಂತಿಗೆ ಸಂಗ್ರಹಿಸಿ ಕೆಂಕೇರಮ್ಮನ ಜಾತ್ರೆ ಮಾಡುವುದು ಇಲ್ಲಿನ ವಾಡಿಕೆ. ಆದ್ರೆ ದಲಿತರು ವಂತಿಗೆ ಕೊಡಬೇಕೇ ಹೊರತು ದೇವಸ್ಥಾನದ ಒಳಕ್ಕೆ ಬರುವ ಹಾಗಿಲ್ಲ. ಇದನ್ನೂ ಓದಿ: ವಿಡಿಯೋ: ಶಾಲಾ ಮುಖ್ಯಸ್ಥೆಯ ಮೈಮೇಲೆ ಬಂತಂತೆ ಮಹಾಕಾಳಿ- ತ್ರಿಶೂಲ ಹಿಡಿದು ಅಧಿಕಾರಿಗಳಿಗೆ ಆಜ್ಞೆ

    ಭಾನುವಾರ ನಡೆದ ಜಾತ್ರೆಯಲ್ಲಿ ಪ್ರಜ್ಞಾವಂತ ಕೆಲ ದಲಿತ ಯುವಕರು ದೇವಸ್ಥಾನ ಪ್ರವೇಶ ಮಾಡಿದ್ರು. ಇನ್ನೂ ಕೆಲ ದಲಿತರು ಪ್ರವೇಶ ಮಾಡೋದಕ್ಕೆ ಸವರ್ಣೀಯ ಮುಖಂಡರು ಅಡ್ಡಿಪಡಿಸಿದ್ರು. ಪರಿಣಾಮ ಎರಡೂ ಸಮುದಾಯದ ನಡುವೆ ಮಾತಿನ ಚಕಮಕಿ ಉಂಟಾಯಿತು. ಈ ನಡುವೆ ಸವರ್ಣಿಯ ಮಹಿಳೆಯೋರ್ವಳು ಮೈ ಮೇಲೆ ದೇವರು ಬಂದ ನಾಟಕವಾಡಿ, ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದೀರಾ..? ಇದರಿಂದ ದೇವಸ್ಥಾನ ಮೈಲಿಗೆ ಆಗಿದೆ. ನಿಮಗೆ ವಾಂತಿ ಭೇದಿ ಬಂದು ಸಾಯುತ್ತಿರಾ ಎಂದು ಬೆದರಿಸಿದ್ದಾಳೆ.

    ಸವರ್ಣೀಯ ಮಹಿಳೆಯ ಬೆದರಿಕೆಗೆ ಜಗ್ಗದೆ ದಲಿತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

  • ಬೆಂಗ್ಳೂರಲ್ಲಿ 800 ಕೋಟಿ ರೂ.ನಷ್ಟು ಮುಜರಾಯಿ ಇಲಾಖೆ ಜಾಗ ಕಂಡವರ ಪಾಲು

    ಬೆಂಗ್ಳೂರಲ್ಲಿ 800 ಕೋಟಿ ರೂ.ನಷ್ಟು ಮುಜರಾಯಿ ಇಲಾಖೆ ಜಾಗ ಕಂಡವರ ಪಾಲು

    ಬೆಂಗಳೂರು: ನಗರದಲ್ಲಿ ಮುಜರಾಯಿ ಇಲಾಖೆಯ ಜಾಗ ಎಷ್ಟು ಪ್ರಮಾಣದಲ್ಲಿ ಖಾಸಗಿ ಬಿಲ್ಡರ್ ಗಳ ಪಾಲಗಿದೆ ಅನ್ನೋ ಲೆಕ್ಕ ನೋಡಿದ್ರೇ ನೀವು ಓ ಮೈ ಗಾಡ್ ಅನ್ನದೇ ಇರಲ್ಲ.

    ಹೌದು. ಬೆಂಗಳೂರು ನಗರವೊಂದರಲ್ಲಿ ಬರೋಬ್ಬರಿ ಸುಮಾರು ಎಂಟುನೂರು ಕೋಟಿಯಷ್ಟು ಆಸ್ತಿ ಕಂಡವರ ಪಾಲಾಗಿದೆ ಅಂತಾ ಅಂದಾಜಿಸಲಾಗಿದೆ. 12 ವರ್ಷದ ಹಿಂದೆ ಮುಜರಾಯಿ ಜಮೀನಿನ ರಕ್ಷಣೆಗೆ ಕಾಯ್ದೆ ರೂಪಿಸಬೇಕು ಅಂತಾ ಗೆಜೆಟ್ ನೊಟಿಫಿಕೇಶನ್ ಹೊರಡಿಸಿದ್ರೂ ಇಷ್ಟು ವರ್ಷವಾದ್ರೂ ಈ ಕಾಯ್ದೆ ಜಾರಿಗೆ ತಂದಿಲ್ಲ. ಜೊತೆಗೆ ಮುಜರಾಯಿ ಇಲಾಖೆ ಜಮೀನು ಎಷ್ಟಿದೆ ಅನ್ನೋದು ಖುದ್ದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲ ಅನ್ನೋ ಮಾಹಿತಿ ಆರ್‍ಟಿಐನಲ್ಲಿ ಬಹಿರಂಗವಾಗಿದೆ.

    ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರ, ಕಾಡು ಮಲ್ಲೇಶ್ವರ ದೇಗುಲದ ಜಾಗವೂ ಸಾಕಷ್ಟು ಪರರ ಪಾಲಾಗಿದೆ. ಮುಜರಾಯಿ ದೇಗುಲದ ದುಡ್ಡುನ್ನು ಸರ್ಕಾರ ಎಲ್ಲಿ ಬಳಕೆ ಮಾಡುತ್ತೆ ಅನ್ನೋದು ಗೊತ್ತಾಗಲ್ಲ, ಆದ್ರೇ ದೇಗುಲ ರಕ್ಷಣೆ ಮಾಡಲ್ಲ ಅಂತಾ ಹಿಂದೂ ಜನಜಾಗೃತಿ ಸಮಿತಿ ಕಿಡಿ ಕಾರಿದೆ.

  • ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ: ಶೋಭಾ ಕರಂದ್ಲಾಜೆ

    ಉಡುಪಿ: ಚುನಾವಣೆ ಬಂದರೆ ರಾಹುಲ್ ಗಾಂಧಿ ದೇವಸ್ಥಾನ ಸುತ್ತುತ್ತಾರೆ. ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಹಿಂಬಾಲಿಸ್ತಾರೆ. ಆರು ಬಾರಿ ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಬಾರದ ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದರೆ ಜನ ಬಡಿಗೆ ತೆಗೆದುಕೊಳ್ಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಉಡುಪಿಯಲ್ಲಿ ಜನಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಇಳಿವಯಸ್ಸಿನ ಪೇಜಾವರ ಸ್ವಾಮೀಜಿ ಹಲವು ಬಾರಿ ಆಮಂತ್ರಣ ಕೊಟ್ಟರೂ ಸಿಎಂ ಮಠಕ್ಕೆ ಬರಲಿಲ್ಲ. ಕನಕನಿಗೆ ಒಲಿದ ಕೃಷ್ಣನ ದರ್ಶನ ಮಾಡದೆ ಹಠಕ್ಕೆ ಬಿದ್ದರು. ರಾಹುಲ್ ಗಾಂಧಿ ಬಂದಾಗ ಕೃಷ್ಣ ಮಠಕ್ಕೆ ಬರುತ್ತೀರಾ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದರು.

    ಓಟ್ ನ ಸಂದರ್ಭದಲ್ಲಿ ಉಡುಪಿ ಮಠಕ್ಕೆ ಬಂದರೆ ಇಲ್ಲಿನ ಜನ ಬಡಿಗೆ ತಗೊಳ್ಳಿ ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದ್ರು. ಇವರು ಚುನಾವಣೆ ಬಂದಾಗ ಬರುವುದು ದೇವರ ಮೇಲಿನ ಭಕ್ತಿಯಿಂದಲ್ಲ, ಕೃಷ್ಣಮಠವನ್ನು ವಶಪಡಿಸುವ ಷಡ್ಯಂತ್ರದಿಂದ. ಇಷ್ಟೆಲ್ಲಾ ಮಾಡಿದ ನಿಮ್ಮನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುತ್ತಾರೆ. ಶುದ್ಧವಾಗಿರಬೇಕು ಎಂಬ ನಂಬಿಕೆಗೆ ಇದರಿಂದ ಧಕ್ಕೆಯಾಗಿದೆ. ಇದರಿಂದ ಜನರ ಧಾರ್ಮಿಕ ಭಾವನೆಗೆ ಹಿನ್ನಡೆಯಾಗಿದೆ. ಸಿಎಂ ಗೋಮಾಂಸ ತಿಂತೇನೆ ಅಂತಾರೆ. ಈಗ ಯಾಕೆ ದೇವಸ್ಥಾನಕ್ಕೆ ಹೋಗುತ್ತೀರಾ ಎಂದು ಸಿಎಂಗೆ ಪ್ರಶ್ನೆ ಕೇಳಿ ಗರಂ ಆದ್ರು.

  • ಹನುಮನ ಮೇಲೆ ಮಂಗನ ಪ್ರೀತಿ- ಹಿಡಿಯಲು ಹೋದ್ರೆ ಗುರಾಯಿಸುತ್ತೆ, ತಲೆ ಮೇಲೆ ಹತ್ತಿ ಕೂತು ತುಂಟಾಟ ಮಾಡುತ್ತೆ

    ಹನುಮನ ಮೇಲೆ ಮಂಗನ ಪ್ರೀತಿ- ಹಿಡಿಯಲು ಹೋದ್ರೆ ಗುರಾಯಿಸುತ್ತೆ, ತಲೆ ಮೇಲೆ ಹತ್ತಿ ಕೂತು ತುಂಟಾಟ ಮಾಡುತ್ತೆ

    ಬೆಂಗಳೂರು: ರಾಮನ ಸನ್ನಿಧಾನದಲ್ಲಿ ಅಂಜನೇಯನ ಪ್ರತಿಷ್ಠಾಪನಾ ಸ್ಥಳದಿಂದ ಕೋತಿ ಕದಲುತ್ತಿಲ್ಲ. ಒಂದು ವಾರದಿಂದ ಕೋತಿ ಹಿಡಿಯಲು ಅರಣ್ಯ ಘಟಕ ಹರಸಾಹಸ ಪಡುತ್ತಿದ್ದು, ಬಲೆ ಹಿಡ್ಕೊಂಡು ಹೋದರೆ ಗುರಾಯಿಸ್ತಾನೆ. ಇಲ್ಲದೇ ಇದ್ದರೆ ಅರಣ್ಯಾಧಿಕಾರಿಗಳ ಜೊತೆಗೆ ಆಟ ಆಡುತ್ತಾನೆ. ಬೆಂಗಳೂರಿನ ಐತಿಹಾಸಿಕ ದೇಗುಲದ ವಿಶೇಷ ಕೋತಿ ಈಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    ಬೆಂಗಳೂರಿನ ಹೆಚ್‍ಬಿಆರ್ ಲೇಔಟ್‍ನ ಐತಿಹಾಸ ಪ್ರಸಿದ್ಧ ಕೋದಂಡರಾಮ ದೇಗುಲದಲ್ಲೀಗ ಈ ವಿಶಿಷ್ಟ ಕೋತಿಯದ್ದೇ ಕಾರುಬಾರು. ಚುರುಕು ಕಣ್ಣಿನ ಈ ಕೋತಿ ಈ ದೇಗುಲವನ್ನು ಬಿಟ್ಟು ಕದಲುತ್ತಿಲ್ಲ. ವಿಶೇಷ ಎಂದರೆ ಇನ್ನೊಂದು ತಿಂಗಳಲ್ಲಿ ಬೆಂಗಳೂರಿನ ಅತೀ ದೊಡ್ಡ ಅಂಜನೇಯನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕಾದ ಜಾಗದಲ್ಲಿಯೇ ಈ ಕೋತಿ ಕಳೆದೊಂದು ವಾರದಿಂದ ಇದೆ. ಈಗಾಗಲೇ ತರ್ಲೆ ಮಾಡಿರುವ ಊರಿನ ನಾಲ್ಕು ಜನರಿಗೆ ಕೋತಿ ಕಚ್ಚಿರೋದ್ರಿಂದ ಬಿಬಿಎಂಪಿ ಅರಣ್ಯ ಘಟಕದವರು ಸ್ಥಳಕ್ಕೆ ಹೋಗಿ ಕೋತಿಯನ್ನ ಹಿಡಿಯೋಣ ಎಂದುಕೊಂಡರೆ ಅಧಿಕಾರಿಗಳೇ ತಬ್ಬಿಬ್ಬು ಆಗಿದ್ದಾರೆ.

    ಅಧಿಕಾರಿಗಳನ್ನು ಕಂಡರೆ ಈ ಕೋತಿ ಅವರ ಹತ್ತಿರ ಹೋಗಿ ಕೈಯನ್ನು ಹಿಡಿದು ಅದೇನೋ ಮಾಡುತ್ತಿರುತ್ತೆ. ಅವರ ತಲೆಯ ಮೇಲೆ ಹತ್ತಿ ಕೂತು ತುಂಟಾಟ ಮಾಡೋದಕ್ಕೆ ಶುರುಮಾಡಿದೆ. ಕೆಲ ಊರಿನ ಹಿರಿಯ ಜೀವಿಗಳನ್ನು ಕಂಡರೆ ಪ್ರೀತಿಸೋ ಈ ಕೋತಿ ಅವರ ತೊಡೆಯೇರಿ ಕೂತು ಮುದ್ದು ಮಾಡಿಸಿಕೊಳ್ಳುತ್ತೆ. ಆದರೆ ಹಿಡಿಯೋಕೆ ಬಲೆ ತೆಗೆದುಕೊಂಡು ಬಂದರೆ ಗುರಾಯಿಸಿಕೊಂಡು ಹೋಗಿ ಚಕ್ ಎಂದು ನೆಗೆದು ತಪ್ಪಿಸಿಕೊಳ್ಳುತ್ತೆ.

    ಇದು ಕರ್ನಾಟಕದ ಕೋತಿ ಅಲ್ಲ ಮಹಾರಾಷ್ಟ್ರದ ಕೋತಿ. ನಾವು ಯಾವ ಕೋತಿಯನ್ನು ಹಿಡಿಯೋದಕ್ಕೂ ಈ ಪರಿ ಕಷ್ಟ ಪಟ್ಟಿಲ್ಲ ಅಂತಾರೆ ಅರಣ್ಯ ಘಟಕದವರು. ಆದರೆ ಜನ ಮಾತ್ರ ಇದು ಅಂಜನೇಯ ಸ್ವಾಮಿನೇ ಎಂದು ಖುಷಿಪಡುತ್ತಿದ್ದಾರೆ. ಜನರಿಗೆ ಕಚ್ಚಿರೋದ್ರಿಂದ ಒಂದು ವಾರದಿಂದ ಸತತವಾಗಿ ಅರಣ್ಯಾಧಿಕಾರಿಗಳು ಕೋತಿ ಹಿಡಿಯೋಕೆ ಹೋಗಿ ನಿರಾಸೆಯಿಂದ ವಾಪಸ್ಸಾಗಿದ್ದಾರೆ. ದೇಗುಲದ ಅಂಗಳದಲ್ಲಿ ಓಡಾಡೋ ಕೋತಿ ಜನರ ಪಾಲಿಗೆ ವಿಸ್ಮಯವಾಗಿ ಕಾಣುತ್ತಿದೆ.

  • ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸಿದ ಶಾಸಕ ಶಿವರಾಜ್ ತಂಗಡಗಿ

    ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸಿದ ಶಾಸಕ ಶಿವರಾಜ್ ತಂಗಡಗಿ

    ಕೊಪ್ಪಳ: ರಾಜಕೀಯ ನಾಯಕರು ಜನ ಸಮೂಹದ ಮುಂದೆ ಭಾಷಣ ಮಾಡುವಾಗ, ಕೊಟ್ಟ ಆಶ್ವಾಸನೆ ಈಡೇರಿಸದೇ ಕಾಗೆ ಹಾರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಶಾಸಕರೊಂದಿಗೆ ಸೇರಿ ದೇವರಿಗೂ ಕಾಗೆ ಹಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಮತ್ತು ರಾಹುಲ್ ಕನಕಗಿರಿಯ ಲಕ್ಷ್ಮೀ ನರಸಿಂಹ ಕನಕಾಚಲಪತಿ ದೇವರಿಗೆ ನೀಡಿದ್ದ ಆಶ್ವಾಸನೆಯನ್ನೇ ಮರೆತಿದ್ದಾರೆ. ಕಳೆದ ವಾರ ಹೈದರಾಬಾದ್ ಕರ್ನಾಟಕ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಫೆ.11 ರಂದು ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಸನ್ಮಾನಿಸಿದ ಶಾಸಕ ಶಿವರಾಜ್ ತಂಗಡಗಿ ಬೆಳ್ಳಿ ಖಡ್ಗವನ್ನು ಉಡುಗೊರೆ ನೀಡಿದ್ದರು.

    ಖಡ್ಗ ಕೈಗಿಡುತ್ತಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಲಹೆಯಂತೆ ರಾಹುಲ್ ಗಿಫ್ಟ್ ತಿರಸ್ಕರಿಸಿದ್ದರು. ರಾಹುಲ್ ಈ ನಡೆಗೂ ಒಂದು ಫ್ಲ್ಯಾಶ್ ಬ್ಯಾಕ್ ಇದೆ. ಅದೇನೆಂದರೆ ಫೆ. 10 ರಂದು ಹೊಸಪೇಟೆಯಲ್ಲಿ ಕೂಡ್ಲಿಗಿ ಮಾಜಿ ಶಾಸಕ ನಾಗೇಂದ್ರ ರಾಹುಲ್ ಗಾಂಧಿಗೆ ಕೆಜಿಗಟ್ಟಲೇ ಚಿನ್ನ ಮತ್ತು ಬೆಳ್ಳಿ ಮಿಶ್ರಿತ ವಾಲ್ಮೀಕಿ ಮೂರ್ತಿಯನ್ನು ಉಡುಗೊರೆಯಾಗಿ ಮಾಡಿದ್ದರು. ಇದರಿಂದ ರಾಹುಲ್ ದುಬಾರಿ ಉಡುಗೊರೆ ಪಡೆದರು ಎಂದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿ, ರಾಹುಲ್ ಮುಜುಗರಕ್ಕೆ ಈಡಾಗಿದ್ದರು.

    ಕೂಡಲೇ ಎಚ್ಚೆತ್ತ ರಾಹುಲ್, ಗಿಫ್ಟ್ ವಾಪಾಸ್ ನೀಡಲು ನಿರ್ಧರಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಸಲಹೆಯಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನೀಡುವುದಾಗಿ ಘೋಷಣೆ ಮಾಡಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಈ ಕಾರಣಕ್ಕೆ ಶಾಸಕ ಶಿವರಾಜ್ ತಂಗಡಗಿ ನೀಡಿದ ಬೆಳ್ಳಿ ಖಡ್ಗವನ್ನು ರಾಹುಲ್ ನಿರಾಕರಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಈ ಬಗ್ಗೆ ಜನರ ಮುಂದೆ ಅನೌನ್ಸ್ ಮಾಡಿದ ಶಾಸಕ ಶಿವರಾಜ್ ತಂಗಡಗಿ, ಈ ಬೆಳ್ಳಿ ಖಡ್ಗವನ್ನು ಕನಕಾಚಲಪತಿ ದೇವಸ್ಥಾನಕ್ಕೆ ನೀಡುವುದಾಗಿ ತಿಳಿಸಿದ್ದರು.

    ಆದರೆ ಕಾರ್ಯಕ್ರಮ ಮುಗಿದು 12 ದಿನ ಕಳೆದರೂ ಖಡ್ಗ ದೇವಸ್ಥಾನ ಸೇರಿಲ್ಲ. ಇದರಿಂದ ಶಾಸಕ ತಂಗಡಗಿ ಇದನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡರಾ ಅಥವಾ ಮಾಧ್ಯಮಗಳ ಬಾಯಿ ಮುಚ್ಚಿಸಲು ನಾಟಕ ಮಾಡಿ, ರಾಹುಲ್ ಗಾಂಧಿಯೇ ಖಡ್ಗವನ್ನು ತೆಗೆದುಕೊಂಡು ಹೋದರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.