Tag: ದೇವಸ್ಥಾನ

  • ಪತ್ನಿ, ಪುತ್ರ ಜೊತೆ ದೇವಿ ಚಾಮುಂಡೇಶ್ವರಿಗೆ ಯದುವೀರ್ ಪೂಜೆ

    ಪತ್ನಿ, ಪುತ್ರ ಜೊತೆ ದೇವಿ ಚಾಮುಂಡೇಶ್ವರಿಗೆ ಯದುವೀರ್ ಪೂಜೆ

    ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯದುವೀರ್ ದಂಪತಿ ಕುಟುಂಬ ಸಮೇತವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಪತ್ನಿ ತ್ರಿಷಿಕಾ ಹಾಗೂ ಪುತ್ರ ಆದ್ಯವೀರ್ ಜೊತೆಗೂಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಸಂಪ್ರದಾಯದಂತೆ ವಾಲಗ ಸಮೇತವಾಗಿ ದೇಗುಲದ ಅರ್ಚಕರು ಯದುವೀರ್ ಹಾಗೂ ಅವರ ಕುಟುಂಬದವರನ್ನು ಬರಮಾಡಿಕೊಂಡಿದ್ದಾರೆ.

    ಇನ್ನೂ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ಯದುವೀರ್ ಜೊತೆ ಸೆಲ್ಫಿಗೆ ಜನರು ಮುಗಿಬಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾರಿನಲ್ಲಿ ಕೂತಿದ್ದ ವೇಳೆ ಜನರು ಸೆಲ್ಫಿಗೆ ಯದುವೀರ್ ಪೋಸ್ ನೀಡಿದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

  • ದೇವರ ಪ್ರತಿಷ್ಠಾಪನೆ ತಡೆಯೋಕೆ ಬಾಂಬ್ ತಯಾರಿಕಾ ಸಾಮಾಗ್ರಿಗಳನ್ನಿಟ್ರಾ ಕಿಡಿಗೇಡಿಗಳು?

    ದೇವರ ಪ್ರತಿಷ್ಠಾಪನೆ ತಡೆಯೋಕೆ ಬಾಂಬ್ ತಯಾರಿಕಾ ಸಾಮಾಗ್ರಿಗಳನ್ನಿಟ್ರಾ ಕಿಡಿಗೇಡಿಗಳು?

    ಚಿಕ್ಕಬಳ್ಳಾಪುರ: ಬಾಂಬ್ ತಯಾರಿಕೆಯಲ್ಲಿ ಬಳಸುವ ಜಿಲೆಟಿನ್ ಕಡ್ಡಿ ಹಾಗೂ ಡಿಟೈನರ್ ಪತ್ತೆಯಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೊಡದವಾಡಿ ಗ್ರಾಮದಲ್ಲಿ ನಡೆದಿದೆ.

    ಕೊಡದವಾಡಿ ಗ್ರಾಮದ ಸುರೇಶ್ ಎಂಬವರ ಕಿರಾಣಿ ಅಂಗಡಿ ಬಳಿ ಇಂದು ವಾರಸುದಾರರಿಲ್ಲದ ಬಾಕ್ಸ್ ವೊಂದು ಪತ್ತೆಯಾಗಿದೆ. ಕುತೂಹಲದಿಂದ ತೆಗೆದ ನೋಡಿದ ಗ್ರಾಮಸ್ಥರಿಗೆ ಬಾಕ್ಸ್ ನಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆಯಲ್ಲಿ ಬೃಹತ್ ಬಂಡೆಗಳನ್ನು ಸ್ಫೋಟಿಸಲು ಬಳಸುವ ಜಿಲೆಟಿನ್ ಕಡ್ಡಿ ಚೀಟಿಯೊಂದು ಕಂಡಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಕ್ಸ್ ನಲ್ಲಿದ್ದ ಸ್ಫೋಟಕ ವಸ್ತುಗಳು ಹಾಗೂ ಚೀಟಿಯೊಂದನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಚೀಟಿಯಲ್ಲಿ ಅದೇ ಗ್ರಾಮಸ್ಥರ 37 ಮಂದಿಯ ಹೆಸರು ಪತ್ತೆಯಾಗಿದೆ.

    37 ಮಂದಿ ಗ್ರಾಮಸ್ಥರು ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ದ್ವೇಷದಿಂದ ಕೆಲ ಕಿಡಿಗೇಡಿಗಳು ಪ್ರಕರಣದಲ್ಲಿ ಪ್ರಮುಖ ಗ್ರಾಮಸ್ಥರನ್ನು ಸಿಕ್ಕಿ ಹಾಕಿಸುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿದೆ.

    ಜೂನ್ 23 ಮತ್ತು 24ರಂದು ಲಕ್ಷ್ಮೀನಾರಾಯಣ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯ ರದ್ದು ಮಾಡಬೇಕು ಎಂದು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ನಾಗೇಶ್ ರವರು ಸ್ಫೋಟದ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸುರೇಶ್ ಅವರು ನೀಡಿದ ದೂರಿನನ್ವಯ ತನಿಖೆ ಮುಂದುವರೆಸಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿಯವರೂ ಸಹ ಸ್ಫೋಟಕ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

  • ಕೇಂದ್ರದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳ ಯೋಜನೆಯ ಪಟ್ಟಿಯಲ್ಲಿ ಮಂತ್ರಾಲಯ, ಶಬರಿಮಲೆ

    ಕೇಂದ್ರದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳ ಯೋಜನೆಯ ಪಟ್ಟಿಯಲ್ಲಿ ಮಂತ್ರಾಲಯ, ಶಬರಿಮಲೆ

    ನವದೆಹಲಿ: ಕೇರಳದ ಪ್ರಖ್ಯಾತ ಶಬರಿಮಲೆ ಹಾಗೂ ಆಂಧ್ರ ಪ್ರದೇಶದ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳಾಗಿ ಗುರುತಿಸಲಾಗಿದೆ.

    ಸಾಂಪ್ರದಾಯಿಕ ಸ್ಥಳಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳು( ಸಿಪ್) ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸಿಪ್ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದೆ. ಯೋಜನೆಯ ಮೂರನೇ ಹಂತದಲ್ಲಿ ಆಯ್ಕೆಯಾಗಿರುವ 10 ಸ್ಥಳಗಳಲ್ಲಿ ಶಬರಿಮಲೆ, ಮಂತ್ರಾಲಯ ಸ್ಥಾನವನ್ನು ಪಡೆದಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    2016ರಲ್ಲಿ ಯೋಜನೆ ಶುರುವಾಗಿದ್ದು ಮೊದಲ ಹಂತದಲ್ಲಿ ರಾಜಸ್ಥಾನದ ಅಜ್ಮೀರ್ ದರ್ಗಾ, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ಪಂಜಾಬ್ ನ ಗೋಲ್ಡನ್ ಟೆಂಪಲ್ ಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಎರಡನೇ ಹಂತದಲ್ಲಿ ಮಧ್ಯಪ್ರದೇಶದ ಮಹಾಕಾಲೇಶ್ವರ್, ತೆಲಂಗಾಣದ ಚಾರ್ ಮಿನಾರ್ ಗಳಲ್ಲಿ ಯೋಜನೆ ಪೂರೈಸಿದ್ದು ಮೂರನೇ ಹಂತವನ್ನು ಉತ್ತರಾಖಂಡ್ ನ ಬದರೀನಾಥದಲ್ಲಿ ಶುರು ಮಾಡಲಾಗಿದೆ.

    ಪ್ರವಾಸಿ ಸ್ಥಳಗಳು ಆಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳನ್ನು ಯೋಜನೆಯಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ವಚ್ಛವಾಗಿದ್ದಷ್ಟು ಹೆಚ್ಚು ಪ್ರವಾಸಿಗರನ್ನು ಸ್ಥಳಗಳು ಸೆಳೆಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆಗೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಜೊತೆ ಸೇರಿ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.

    ಮೊದಲ ಹಂತದಲ್ಲಿ ಆಯ್ಕೆಗೊಂಡ ಸ್ಥಳಗಳಲ್ಲಿ ಗುಣಾತ್ಮಕ ಕ್ರಮಗಳನ್ನು ತೆಗೆದುಕೊಂಡು ಒಳಚರಂಡಿ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಶುದ್ಧ ನೀರು ಘಟಕಗಳು, ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿರುವುದನ್ನು ಪರಿಶೀಲಿಸಿದ್ದೇವೆ. ಎರಡನೇ ಹಂತದ ಸ್ಥಳಗಳ ಪರಿಶೀಲನೆಯನ್ನು ಮುಂದಿನ ತಿಂಗಳು ಮಾಡಲಿದ್ದೇವೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ತಿಳಿಸಿದ್ದಾರೆ.

    ಮೂರನೇ ಹಂತದಲ್ಲಿ ಪಶ್ಚಿಮ ಬಂಗಾಳ ಹಜಾಡ್ರ್ವಾರಿ ಅರಮನೆ, ಹರಿಯಾಣದ ಬ್ರಹ್ಮ ಸರೋವರ್, ಉತ್ತರ ಪ್ರದೇಶದ ವಿದುರ್ ಕುಟಿ, ಉತ್ತರಾಖಂಡ್‍ದ ಮನ ಗ್ರಾಮ, ಜಮ್ಮು ಮತ್ತು ಕಾಶ್ಮೀರದ ಪಾಂಗೊಂಗ್ ಸರೋವರ, ಉತ್ತರ ಪ್ರದೇಶದ ನಾಗವಾಸುಕಿ ದೇವಸ್ಥಾನ, ಮಣಿಪುರದ ಇಮಾಕೀಥಲ್ ಮಾರುಕಟ್ಟೆ ಹಾಗೂ ಉತ್ತರಾಖಂಡ್ ನ ಕನ್ವಾಶ್ರಮ್‍ವು ಸೇರಿಕೊಂಡಿದೆ.

  • ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    ದೇವಸ್ಥಾನದಲ್ಲಿ ದೇವಾಳದ ಸಿಬ್ಬಂದಿಯಿಂದ ಭಕ್ತರ ಮೇಲೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಮೃಣಾಲಿನಿ ಪಧಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಆದರ್ಶ ಗೋಯಲ್ ಮತ್ತು ನ್ಯಾ ಅಶೋಕ್ ಭೂಷಣ್ ಅವರಿದ್ದ ಪೀಠ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.

    ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣವ ದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.

    ದೇವಸ್ಥಾನದ ಸುತ್ತಲಿನ ಪರಿಸರ ಹಾಳಾಗಿದ್ದು ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ದೇವರ ಸೇವಾ ಕಾರ್ಯಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿದೆ ಎಂದು ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿದ್ದರು.

    ಲಕ್ಷಾಂತರ ಭಕ್ತರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ದಾನವನ್ನು ಅರ್ಪಣೆ ಮಾಡುತ್ತಾರೆ. ಹಾಗಾಗಿ ಭಕ್ತರ ಸೇವಾದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಹಾಗೂ ದೇವಸ್ಥಾನದ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಪೀಠ ತಿಳಿಸಿದೆ.

    ದೇವಸ್ಥಾನದಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆಗಳು ಹಾಗೂ ಆಡಳಿತ ಮಂಡಳಿಯಲ್ಲಿರುವ ನ್ಯೂನತೆಗಳನ್ನು ಜೂನ್ 30 ರೊಳಗೆ ಮಧ್ಯಂತರ ವರದಿ ಮಾಡುವಂತೆ ಪೂರಿ ಜಿಲ್ಲಾ ನ್ಯಾಯಾಧೀಶರಿಗೆ ಪೀಠ ಆದೇಶಿಸಿದೆ.

    1954 ರ ಶ್ರೀ ಜಗನ್ನಾಥ ದೇವಸ್ಥಾನದ ಕಾಯ್ದೆ ಪ್ರಕಾರ ಭಕ್ತರು ನೇರವಾಗಿ ಸಿಬ್ಬಂದಿಗೆ ಹಣವನ್ನು ನೀಡಿ ಸೇವೆ ಮಾಡುವಂತಿಲ್ಲ. ಹಣ ಹಾಕುವುದಿದ್ದರೆ ಹುಂಡಿಯಲ್ಲಿ ಹಾಕಬೇಕು ಅಥವಾ ಸೇವಾ ಕೌಂಟರ್ ನಲ್ಲಿ ಹಣವನ್ನು ಪಾವತಿಸಿ ಸೇವೆ ಮಾಡಬೇಕು.

    ದೇವಸ್ಥಾನದಲ್ಲಿ ನಡೆಯುತ್ತಿರುವ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾರ್ಪಾಡು ಅವಶ್ಯಕತೆ ಇದ್ದಲ್ಲಿ ಸೂಚಿಸುವಂತೆ ಕೇಂದ್ರಕ್ಕೆ ಪೀಠ ತಿಳಿಸಿದೆ. ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಮ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಪೀಠ ನೇಮಿಸಿದೆ. ಎಲ್ಲಾ ವರದಿಗಳನ್ನು ನೋಡಿ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.

  • ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಉಡುಪಿ: ಕಾರ್ಕಳ ಸಮೀಪದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿದರು. ನಾಗಬನದಲ್ಲಿ ತನು ತಂಬಿಲ ಸೇವೆ ನೀಡಿದರು. ಟೀಂ ಇಂಡಿಯಾ ಬಗ್ಗೆ ಕೂಡಾ ಮಾತನಾಡಿದ್ರು.

    ಕ್ರಿಕೆಟಿಗೂ ನಾಗಬ್ರಹ್ಮನಿಗೂ ಏನಾದ್ರೂ ಸಂಬಂಧ ಇದ್ಯಾ? ಇಲ್ಲ ಅಂತ ಹೇಳ್ಬೇಡಿ. ವಿಶ್ವದ ನಂಬರ್ ಒನ್ ಟೀಂನ ಕೋಚ್ ರವಿಶಾಸ್ತ್ರಿಗೂ ಭಾರೀ ಸಂಬಂಧವಿದೆ. ಅವರ ವೃತ್ತಿ ಜೀವನಕ್ಕೆ ಕ್ರಿಕೆಟ್ ಕೈ ಹಿಡಿದ್ರೆ  ಸಾಂಸಾರಿಕಾ ಜೀವನದ ಕೈ ಹಿಡಿದದ್ದು ದೇವರ ಮೇಲಿನ ನಂಬಿಕೆ.

    ಮದುವೆಯಾಗಿ 17 ವರ್ಷ ಸಂತಾನ ಭಾಗ್ಯ ಇಲ್ಲದೇ ಇದ್ದಾಗ ರವಿಶಾಸ್ತ್ರಿ ಎರ್ಲಪ್ಪಾಡಿ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಹೊತ್ತಿದ್ದರು. ನಂತರ ರವಿಶಾಸ್ತ್ರಿಗೆ ಸಂತಾನಭಾಗ್ಯ ದಕ್ಕಿತು. ನಾಗದೇವರ ಆಶೀರ್ವಾದವನ್ನು ನೆನೆಯುವ ರವಿಶಾಸ್ತ್ರಿ ಪ್ರತೀ ವರ್ಷ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಎರ್ಲಪ್ಪಾಡಿಗೆ ಬರುತ್ತಾರೆ. ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಾರಿ ಕೂಡಾ ನಾಗಬನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರವಿಶಾಸ್ತ್ರಿ ಸಂಬಂಧಿ, ಆಪ್ತ ಮನೋಹರ ಪ್ರಸಾದ್ ಹೇಳಿದರು.

    ರವಿಶಾಸ್ತ್ರಿ ಪೂರ್ವಿಕರು ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನೆಲೆಸಿದ್ದರು. ಇಲ್ಲಿಂದ ವಲಸೆ ಹೋದ ನಂತರವೂ ಇಲ್ಲಿನ ಕಾರ್ಣಿಕ ತಿಳಿದ ರವಿ ಶಾಸ್ತ್ರಿ ವರ್ಷಕ್ಕೊಮ್ಮೆಯಾದ್ರೂ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಬೆಳೆಸಿದ್ದಾರೆ.

    ವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಬನದ ಸೇವೆಯಲ್ಲಿ ನಾನು ಮನಶಾಂತಿ ಪಡೆಯುತ್ತೇನೆ. ಭಾರತ ಮುಂದೆ ದೊಡ್ಡ ಪಂದ್ಯಾಟವನ್ನು ಎದುರು ನೋಡುತ್ತಿದೆ. ಇದೇ ಸಂದರ್ಭ ದೇವರ ದರ್ಶನವಾಗಿರುವುದು ಖುಷಿಯಾಗಿದೆ ಎಂದರು. ಟೀಂನ ಹುಡುಗರಿಗೂ ನನಗೂ ಹೊಂದಾಣಿಕೆ ಚೆನ್ನಾಗಿದೆ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

    ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬವಿದ್ದಂತೆ. ರವಿಶಾಸ್ತ್ರಿ ಬಂದ್ರೆ ದೇವಸ್ಥಾನದಲ್ಲಿ ಹಬ್ಬದೂಟ ಆಯೋಜನೆಯಾಗುತ್ತದೆ.  ಶಾಸ್ತ್ರಿ ಸಾಮಾನ್ಯ ಜನರಂತೆ ಸಹಭೋಜನದಲ್ಲಿ ಪಾಲ್ಗೊಂಡರು. ರವಿ ಶಾಸ್ತ್ರಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಊರಿನ ಜನರು ಸನ್ಮಾನಿಸಿದರು.

    ರವಿಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ. ಇಲ್ಲಿನ ಸರ್ಕಾರಿ ಶಾಲೆಗೆ ಒಂದು ಲಕ್ಷ ರೂಪಾಯಿ ನೀಡಿದ್ದರು. ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಮುಂದಿನ ಕ್ರಿಕೆಟ್ ಮಹಾಸಮರಕ್ಕೆ ಸಿದ್ಧಗೊಳ್ಳುತ್ತಿರುವ ರವಿಶಾಸ್ತ್ರಿಯ ತಂಡಕ್ಕೆ  ಎರ್ಲಪ್ಪಾಡಿ ಗ್ರಾಮದ ಜನ ಶುಭಕೋರಿದ್ದಾರೆ.

  • ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬೆಂಗಳೂರು: ಈ ಚುನಾವಣೆ ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಚುನಾವಣೆಯಲ್ಲ. ರಾಜ್ಯದ ಜನರ ಸ್ಫೂರ್ತಿಯ ಚುನಾವಣೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಜನರ ಮೇಲೆ ನಂಬಿಕೆಯಿಟ್ಟಿದ್ದೇವೆ. ಯುವಜನತೆಗೆ ಉದ್ಯೋಗ ಸೃಷ್ಠಿ ನಮ್ಮ ಗುರಿ. ಐಟಿ ಸಿಟಿ, ಗಾರ್ಡನ್ ಸಿಟಿ ಹೆಸರು ನಾವು ಉಳಿಸುತ್ತೇವೆ. ಮಹದಾಯಿ ನದಿ ನೀರು ಹಂಚಿಕೆ ಕುರಿತು ಕಾಂಗ್ರೆಸ್ ನಿಲುವೇನು ಎಂಬುದನ್ನು ಶೀಘ್ರದಲ್ಲಿಯೇ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು.

    ಮಾತನಾಡಿದ ಅವರು ಈ ಚುನಾವಣೆ ನನ್ನ ಭವಿಷ್ಯಕ್ಕಾಗಿ ಅಲ್ಲ. ಮುಂದೆ ಪ್ರಧಾನಿ ಆಗಲು ಸಹಕಾರಿಯೂ ಅಲ್ಲ. ಬೆಂಗಳೂರು ರಾಷ್ಟ್ರದ ಹೆಮ್ಮೆ. ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಈ ಚುನಾವಣೆಯಿಂದ ಕರ್ನಾಟಕ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕಡೆಗೆ ನಡೆಯಬೇಕಿದೆ ಎಂದು ಹೇಳಿದರು.

    ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಓಡಾಡಿದ್ದೇನೆ. ನಾವು ಯಾರ ವಿರುದ್ಧವೂ ಟೀಕೆ ಮಾಡಿಲ್ಲ. ಸಂವಿಧಾನದ ಆಶಯಗಳನ್ನಿಟ್ಟುಕೊಂಡು ಚುನಾವಣೆಗೆ ಹೊರಟಿದ್ದೇವೆ. ರಾಜ್ಯದ ಜನರನ್ನ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಿದ್ದೇವೆ. ಜನರ ಆಶಯಗಳಿಗೆ ಅನುಗುಣವಾಗಿ ಪ್ರಣಾಳಿಕೆ ತಯಾರಾಗಿದೆ. ವೀರಪ್ಪ ಮೊಯ್ಲಿ ಉತ್ತಮ ಪ್ರಣಾಳಿಕೆ ರಚಿಸಿದ್ದಾರೆ. ಕರ್ನಾಟಕದ ಜನರ ಧ್ವನಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಕೊಟ್ಟ ಭರವಸೆ ಈಡೇರಿಸುವ ಗುರಿ ನಮ್ಮದು. ರಾಜ್ಯದ ಜನ ಚುನಾವಣೆಯಲ್ಲಿ ನಮ್ಮ ಪರ ನಿಲ್ಲಲಿದ್ದಾರೆ, ಆ ಭರವಸೆ ನಮಗಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆಗೆ ಆಸ್ಪದವೇ ಇಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ. ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪೂರ್ತಿ. ಆರ್‍ಎಸ್‍ಎಸ್ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಜಾಗ್ರತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದರು.

    ಭಾಷೆ, ಸಂಸ್ಕ್ರತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್‍ಎಸ್‍ಎಸ್ ಹೊರಟಿದೆ. ಆರ್‍ಎಸ್‍ಎಸ್ ಸಿದ್ಧಾಂತ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ. ಕರ್ನಾಟಕದ ಅಸ್ಮಿತೆಯನ್ನ ಉಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

    ಈ ಬಾರಿ ಬಿಜೆಪಿಯವರು ನನ್ನ ಹಾಗೂ ನಮ್ಮ ನಾಯಕರುಗಳ ಮೇಲೆ ವೈಯುಕ್ತಿಕವಾಗಿ ವಾಗ್ದಾಳಿ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಆದರೆ ಮಹಿಳೆ, ಯುವತಿಯರ ಮೇಲಿನ ಅತ್ಯಾಚಾರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ. ಇದು ದೇಶದಲ್ಲೇ ಚರ್ಚೆಯಾಗಬೇಕಾದ ವಿಚಾರ. ದೇಶದ ಜನರ ಹಕ್ಕು, ರಕ್ಷಣೆಯ ವಿಚಾರ. ಕಚ್ಛಾ ತೈಲ ಬ್ಯಾರಲ್ ಬೆಲೆ 140 ಡಾಲರ್ ನಿಂದ 70 ಡಾಲರ್ ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಇದರಿಂದ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ ಎಂದು ಕಿಡಿಕಾರಿದರು.

    ರೆಡ್ಡಿ ಬ್ರದರ್ಸ್ ರಾಜ್ಯವನ್ನೇ ಲೂಟಿ ಹೊಡೆದಿದ್ದಾರೆ. 35 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಇದರ ಬಗ್ಗೆ ಯಾಕೆ ಯಾರು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

    ದಲಿತರಿಗೆ ದೇಶದಲ್ಲಿ ರಕ್ಷಣೆಯಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ಹಲ್ಲೆ ನಿಂತಿಲ್ಲ. ತಡೆಯುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ರೋಹಿತ್ ವೇಮುಲ ಸಾವು ಏನಾಯ್ತು?. ಉನ್ನಾವ್, ಕತುವಾ ಅತ್ಯಾಚಾರದಲ್ಲಿ ಹೇಗೆ ನಡೆದುಕೊಂಡರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     

     

  • ಹಿಂದೂ ವಿರೋಧಿಯಾಗಿದ್ದಲ್ಲಿ ನಾನೇ ಸರ್ವನಾಶವಾಗ್ಲಿ- ಕಾಯಿ ಇಟ್ಟು ಕಾಂಗ್ರೆಸ್ ಅಭ್ಯರ್ಥಿ ಆಣೆ

    ಹಿಂದೂ ವಿರೋಧಿಯಾಗಿದ್ದಲ್ಲಿ ನಾನೇ ಸರ್ವನಾಶವಾಗ್ಲಿ- ಕಾಯಿ ಇಟ್ಟು ಕಾಂಗ್ರೆಸ್ ಅಭ್ಯರ್ಥಿ ಆಣೆ

    ಕಾರವಾರ: ಭಟ್ಕಳದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ದೇವಸ್ಥಾನಗಳಲ್ಲಿ ದೇವರಿಗೆ ಕಾಯಿ ಇಟ್ಟು ಆಣೆ ಪ್ರಮಾಣ ಮಾಡಿದ್ದಾರೆ.

    ನಾನು ಹಿಂದುತ್ವದ ವಿರುದ್ಧವಿದ್ದರೆ ಸರ್ವನಾಶವಾಗಿ ಹೋಗಲಿ. ಇಲ್ಲವೇ ಯಾರು ನನ್ನ ವಿರುದ್ಧ ಹಿಂದೂ ವಿರೋಧಿ ಎಂದು ಹಬ್ಬಿಸುತ್ತಿದ್ದಾರೋ ಅವರು ಸರ್ವನಾಶವಾಗಲಿ. ನಾನು ಹಿಂದೂ ವಿರೋಧಿಯಲ್ಲ. ಕಸಾಯಿ ಖಾನೆ ಮಾಡಲು ಹೊರಟಿಲ್ಲ. ಇವೆಲ್ಲವನ್ನೂ ನನ್ನ ತೇಜೋವಧೆಗಾಗಿ ವಾಟ್ಸಪ್, ಫೇಸ್‍ಬುಕ್ ಅಲ್ಲದೇ ಸ್ಥಳೀಯ ಪತ್ರಿಕೆಗಳಲ್ಲೂ ಸುಳ್ಳು ಸುದ್ದಿ ಮಾಡಿ ನಾನೊಬ್ಬ ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾನು ಯಾವತ್ತೂ ಹಿಂದೂ ವಿರೋಧಿಯಲ್ಲ, ನಾನು ಹಿಂದೂ ವಿರೋಧವಾಗಿ ಕೆಲಸ ಮಾಡಿದ್ದರೆ ಸರ್ವನಾಶವಾಗಿ ಹೋಗಲಿ, ಇಲ್ಲವೇ ಅವರು ಸರ್ವನಾಶವಾಗಬೇಕೆಂದು ಇಡಗುಂಜಿ ಗ್ರಾಮದ ನೀಲಗೋಡು ಯಕ್ಷ ಚೌಡೇಶ್ವರಿ ದೇವರಿಗೆ ತೆಂಗಿನ ಕಾಯಿಗಳನ್ನಿಟ್ಟು ಮಂಕಾಳು ವೈದ್ಯ ಪ್ರಮಾಣ ಮಾಡಿದ್ದಾರೆ.

    ಪ್ರಚಾರಕ್ಕೆ ತೆರಳಿದ ಪ್ರತಿ ಗ್ರಾಮದ ಶಕ್ತಿ ದೇವರಿಗೆ ಕಾಯಿಗಳನ್ನಿಟ್ಟು ಮಂಕಾಳು ವೈದ್ಯ ಪ್ರಮಾಣ ಮಾಡುತ್ತಿರುವುದು ವಿಶೇಷ.

  • ದೇವಸ್ಥಾನದೊಳಗೆ ಬಂದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂದ್ರು ಸ್ಮೃತಿ ಇರಾನಿ!

    ದೇವಸ್ಥಾನದೊಳಗೆ ಬಂದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂದ್ರು ಸ್ಮೃತಿ ಇರಾನಿ!

    ಬಳ್ಳಾರಿ: ಬಿಜೆಪಿ ನಾಯಕರು ಒಂದೆಡೆ ಟೆಂಪಲ್ ರನ್ ಮಾಡತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೇವಾಲಯದೊಳಗೆ ಪ್ರವೇಶ ಮಾಡೋದು ಅಕ್ರಮ ಅನ್ನೋ ಹೇಳಿಕೆ ನೀಡಿದ್ದಾರೆ.

    ಸಂಡೂರಿನಲ್ಲಿಂದು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸ್ಮೃತಿ ಇರಾನಿಯವರನ್ನು ಪಕ್ಷದ ಮುಖಂಡರು ಸಂಡೂರಿನ ವಿರಕ್ತ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವಾಲಯದೊಳಗೆ ಪ್ರವೇಶ ಮಾಡಲು ನಿರಾಕರಿಸಿದ ಸೃತಿ ಇರಾನಿ, ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ನಡೆಸಲು ಮುಂದಾದ್ರು.

    ಕಾರ್ಯಕರ್ತರ ಮಠದೊಳಗೆ ಆಗಮಿಸುವಂತೆ ಮನವಿ ಮಾಡಿದಾಗ ದೇವಾಲಯದೊಳಗೆ ಪ್ರವೇಶ ಮಾಡಿದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ. ಹೀಗಾಗಿ ನಾನು ಬರಲ್ಲವೆಂದು ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.

    ಬಳಿಕ ಮಾತನಾಡಿದ ಸ್ಮೃತಿ ಇರಾನಿ, ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ. ಹೀಗಾಗಿ ಎಲ್ಲಾ ಮತದಾರರು ಬಿಜೆಪಿಗೆ ಮತ ಹಾಕಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಅಭ್ಯರ್ಥಿ ರಾಘವೇಂದ್ರ ಸಹ ಈ ಭಾರೀ ಸಂಡೂರಿನಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಪ್ರಧಾನಿ ಮೋದಿ ಬಳ್ಳಾರಿ ಪ್ರವಾಸ ಮಾಡಿದ ನಂತರ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

  • ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮುಸ್ಲಿಂ ಯುವಕನಿಂದ ದೇವಾಲಯದಲ್ಲಿ ದೀರ್ಘ ದಂಡ ನಮಸ್ಕಾರ

    ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮುಸ್ಲಿಂ ಯುವಕನಿಂದ ದೇವಾಲಯದಲ್ಲಿ ದೀರ್ಘ ದಂಡ ನಮಸ್ಕಾರ

    ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ್ ಗೆಲುವಿಗಾಗಿ ಮುಸ್ಲಿಂ ಯುವಕನೋರ್ವ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

    ಪಟ್ಟಣದ ರಾಜಾಬಕ್ಷಿ ಬಿಲ್ಲು ಖಾನ್ ಎಂಬವರು ವೀರಭದ್ರೇಶ್ವರ ದೇವಸ್ಥಾನದಿಂದ ದಾವಲ್ ಮಲ್ಲಿಕ್ ದರ್ಗಾದವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಅಂತಾ ರಾಜಾಭಕ್ಷಿ ಹರಕೆಯನ್ನು ಹೊತ್ತಿದ್ದಾರೆ.

    ಜಿ.ಎಸ್.ಪಾಟೀಲ್ ಈ ಬಾರಿಯೂ ರೋಣದಿಂದ ಚುನಾಯಿತರಾಗಬೇಕು. ಜೊತೆಗೆ ಸಚಿವ ಸಂಪುಟದಲ್ಲಿ ಮಹತ್ವದ ಸಚಿವ ಖಾತೆ ಪಡೆಯಬೇಕು ಎಂದು ಹಿಂದು ಹಾಗೂ ಮುಸ್ಲಿಂ ದೇವರಲ್ಲಿ ರಾಜಾಬಕ್ಷಿ ಹರಕೆ ಹೊತ್ತಿದ್ದಾರೆ.

    ಸುಮಾರು ಒಂದೂವರೆ ಕಿಲೋಮಿಟರ್ ದೂರದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಮೆಚ್ಚುಗೆಗೆ ರಾಜಾಭಕ್ಷಿ ಪಾತ್ರರಾಗಿದ್ದಾರೆ. ಈ ದೀರ್ಘ ದಂಡ ನಮಸ್ಕಾರ ವೇಳೆ ಪಕ್ಷದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

  • ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ 400 ವರ್ಷದ ಸಂಪ್ರದಾಯ ಮುರಿದ ಗಂಡಸರು!

    ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ 400 ವರ್ಷದ ಸಂಪ್ರದಾಯ ಮುರಿದ ಗಂಡಸರು!

    ಭುವನೇಶ್ವರ್: ಸಮುದ್ರದ ಮಟ್ಟ ಏರಿಕೆಯಾಗಿ ಒಡಿಶಾದ 400 ವರ್ಷ ಹಳೆಯ ದೇವಸ್ಥಾನದಲ್ಲಿನ ವಿಗ್ರಹಗಳನ್ನು ಸ್ಥಳಾಂತರಿಸಲಾಗಿದೆ.

    ಸತಾಭಯ ಹಳ್ಳಿಯ ಸಮುದ್ರ ತೀರದ ಮಾ ಪಂಚಬರಾಹಿ ದೇವಾಲಯದಲ್ಲಿರುವ ಗರ್ಭಗುಡಿಯ ವಿಗ್ರಹಗಳನ್ನು ಗಂಡಸರು ಮುಟ್ಟುವ ಅಥವಾ ಪೂಜೆ ಮಾಡುವ ಹಾಗೆ ಇರಲಿಲ್ಲ. ಸ್ಥಳೀಯ ಮೀನುಗಾರ ಸಮುದಾಯದ ಮದುವೆಯಾದ ಮಹಿಳೆಯರು ಮಾತ್ರ ದೇವರುಗಳನ್ನು ಪೂಜಿಸಬಹುದಾಗಿತ್ತು.

    ಪೂಜೆಗೆ 400 ವರ್ಷಗಳಲ್ಲಿ ಯಾವುದೇ ಅಡಚಣೆಯಾಗಿರಲಿಲ್ಲ. ಆದರೆ ಈಗ ಹವಾಮಾನ ಬದಲಾವಣೆಯಿಂದಾಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ದೇವಸ್ಥಾನದ ಅಸ್ತಿತ್ವಕ್ಕೆ ಪ್ರಶ್ನೆಯಾಗಿದೆ. ಈ ಕಾರಣಕ್ಕೆ ಸಮುದ್ರ ತೀರದಿಂದ ಸುಮಾರು 12 ಕಿಮೀ ದೂರವಿರುವ ಬಾಗಪತ್ಯ ದೇವಸ್ಥಾನಕ್ಕೆ ವಿಗ್ರಹಗಳನ್ನು ಸ್ಥಳಾಂತರ ಮಾಡಲಾಗಿದೆ. ಒಂದೊಂದು ವಿಗ್ರಹವು 1.5 ಟನ್ ತೂಕವಿದ್ದ ಕಾರಣ ಮಹಿಳೆಯರಿಗೆ ಸ್ಥಳಾಂತರಿಸಲು ಆಗುತ್ತಿರಲಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಪುರುಷರು ಈ ಕಾರ್ಯದಲ್ಲಿ ಭಾಗಿಯಾಗುವ ಮೂಲಕ 400 ವರ್ಷದ ಸಂಪ್ರದಾಯವನ್ನು ಮುರಿದಿದ್ದಾರೆ.

    ಭಾರವಾದ ಕಪ್ಪು ವಿಗ್ರಹಗಳನ್ನು ಸ್ಥಳಾಂತರಿಸಲು ಗಂಡಸರು ಮತ್ತು ಶಿಲ್ಪಿಗಳ ಸಹಾಯ ಪಡೆಯಬೇಕಾಯಿತು ಎಂದು ದೇವಾಲಯವನ್ನು ಪೂಜೆ ಮಾಡುತ್ತಿರುವ ಐದು ಮಂದಿ ಮಹಿಳೆಯರಲ್ಲಿ ಒಬ್ಬರಾಗಿರುವ ಸಬಿತಾ ದಾಲಿ ಹೇಳಿದ್ದಾರೆ.

    ಸ್ಥಳಾಂತರಗೊಂಡ ಮೇಲೆ ಮಹಿಳೆಯರು ಶಾಸ್ತ್ರೋಕ್ತವಾಗಿ ಪೂಜೆಗಳನ್ನು ನೆರವೇರಿಸುವ ಮೂಲಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. 50 ವರ್ಷದ ಕೆಳಗೆ ದೇವಸ್ಥಾನ ಸಮುದ್ರದಿಂದ 5 ಕಿಮೀ ದೂರದಲ್ಲಿತ್ತು. ಈಗ ಕೆಲವೇ ಮೀಟರ್ ಹತ್ತಿರಕ್ಕೆ ಬಂದಿರುವ ಕಾರಣ ಮೀನುಗಾರರು ಆತಂಕಗೊಂಡಿದ್ದಾರೆ.