Tag: ದೇವಸ್ಥಾನ

  • ತುಂಬಿ ಹರಿದ ಕೃಷ್ಣಾ ನದಿ-ಐತಿಹಾಸಿಕ ನವಲಿಯ ಜಡೆಶಂಕರಲಿಂಗೇಶ್ವರ ದೇವಸ್ಥಾನ ಜಲಾವೃತ

    ತುಂಬಿ ಹರಿದ ಕೃಷ್ಣಾ ನದಿ-ಐತಿಹಾಸಿಕ ನವಲಿಯ ಜಡೆಶಂಕರಲಿಂಗೇಶ್ವರ ದೇವಸ್ಥಾನ ಜಲಾವೃತ

    ರಾಯಚೂರು: ಕೃಷ್ಣಾನದಿ ತುಂಬಿ ಹರಿಯುತ್ತಿರುವುದರಿಂದ ರಾಯಚೂರಿನ ಐತಿಹಾಸಿಕ ನವಲಿಯ ಜಡೆಶಂಕರಲಿಂಗೇಶ್ವರ ದೇವಸ್ಥಾನ ಜಲಾವೃತವಾಗಿದೆ.

    ಲಿಂಗಸಗೂರು ತಾಲೂಕಿನ ನವಲಿ ಗ್ರಾಮದಲ್ಲಿರುವ ಜಡೆಲಿಂಗೇಶ್ವರ ದೇವಸ್ಥಾನ ತನ್ನದೇ ಆದ ಗತ ವೈಭವದಿಂದ ಪ್ರಸಿದ್ದಿ ಪಡೆದಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಕುಟುಂಬದ ಆರಾಧ್ಯ ದೈವವಾಗಿರುವ ಜಡೆಶಂಕರಲಿಂಗೇಶ್ವರ ದರ್ಶನ ಭಾಗ್ಯ ಈಗ ಭಕ್ತರಿಗೆ ಇಲ್ಲದಂತಾಗಿದೆ.

    ನಾರಾಯಣಪುರ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನಲೆ ಈಗ ದೇವಸ್ಥಾನ ಮುಳುಗಡೆಯಾಗಿದೆ. ನದಿ ನೀರಿನಿಂದ ದೇವಸ್ಥಾನ ರಕ್ಷಿಸಲು 1 ಕೋಟಿ 82 ಲಕ್ಷ ರೂಪಾಯಿ ಖರ್ಚಿನಲ್ಲಿ ಪ್ರಾಚ್ಯವಸ್ತು ಸಂರಕ್ಷಣ ಇಲಾಖೆ ತಡೆಗೋಡೆ ನಿರ್ಮಿಸಿತ್ತು. ಆದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ದೇವಸ್ಥಾನ ಅರ್ಧದಷ್ಟು ಮುಳುಗಿದೆ, ಪೂಜಾ ಕೈಂಕರ್ಯಗಳಿಲ್ಲದೇ ದೇವಾಲಯ ಸ್ಥಬ್ಧವಾಗಿದೆ. ಪುರಾತನ ಕಲಾಕೃತಿಗಳು, ಶಾಸನಗಳು, ನೀರಿನಲ್ಲಿ ಮುಳುಗಿವೆ. ತಡೆಗೋಡೆಯಿದ್ದರೂ ನೀರು ಬಸಿದು ಪ್ರಾಂಗಣಕ್ಕೆ ನುಗ್ಗಿದೆ.

    ದೇವಸ್ಥಾನ ಆಡಳಿತ ಮಂಡಳಿ ವಿದ್ಯುತ್ ಮೋಟರ್ ಮೂಲಕ ನೀರನ್ನ ಹೊರಹಾಕಲು ಚಿಂತನೆ ನಡೆಸಿದ್ದಾರೆ.

  • ನಿಧಿ ಆಸೆಗೆ ದೇವಸ್ಥಾನವನ್ನೇ ವಿಘ್ನಗೊಳಿಸಿದ ಖದೀಮರು!

    ನಿಧಿ ಆಸೆಗೆ ದೇವಸ್ಥಾನವನ್ನೇ ವಿಘ್ನಗೊಳಿಸಿದ ಖದೀಮರು!

    ದಾವಣಗೆರೆ: ನಿಧಿ ಆಸೆಗಾಗಿ ಖದೀಮರು ದೇವಸ್ಥಾನವನ್ನೇ ವಿಘ್ನಗೊಳಿಸಿದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ನಡೆದಿದೆ.

    ತೆಲಿಗಿ ಗ್ರಾಮದ ಕೆರೆಯ ಮೇಲಿರುವ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಾಗಿ ಬಸವೇಶ್ವರ ವಿಗ್ರಹದ ಕೆಳಗೆ ನಾಲ್ಕೈದು ಅಡಿಯಷ್ಟು ಗುಂಡಿ ತೆಗೆದಿದ್ದಾರೆ. ಗುಂಡಿ ತೆಗೆದ ಜಾಗದಲ್ಲಿ ಪೂಜೆ ಮಾಡಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಪೂಜೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಕೋಡಿ ಬಸವೇಶ್ವರ ದೇವಸ್ಥಾನದ ವಿಗ್ರಹದ ಕೆಳಗೆ ನಿಧಿ ಇದೆ ಎನ್ನುವ ಗಾಳಿಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಆದ್ದರಿಂದ ಈ ನಿಧಿ ಆಸೆಗೆ ಕಳ್ಳರು ದೇವಸ್ಥಾನದ ವಿಗ್ರಹದ ಕೆಳಗೆ ಗುಂಡಿ ತೆಗೆದಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಈ ಘಟನೆ ಹಲವಾಗಿಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಬಾದಾಮಿಯ ಬನಶಂಕರಿ ದೇವಿಯ ದರ್ಶನ ಪಡೆದ್ರು ಪವರ್ ಸ್ಟಾರ್

    ಬಾದಾಮಿಯ ಬನಶಂಕರಿ ದೇವಿಯ ದರ್ಶನ ಪಡೆದ್ರು ಪವರ್ ಸ್ಟಾರ್

    ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಬಾದಾಮಿಯಲ್ಲಿರೋ ಬನಶಂಕರಿ ದೇವಿಯ ದರ್ಶನ ಪಡೆದುಕೊಂಡು, ದೇವಿಯ ಅನುಗ್ರಹ ಇರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

    `ನಟ ಸಾರ್ವಭೌಮ’ ಚಿತ್ರದ ಶೂಟಿಂಗ್ ನಲ್ಲಿರುವ ಪುನೀತ್, ಕಳೆದ ಐದು ದಿನಗಳಿಂದ ಬಾದಾಮಿಯಲ್ಲೇ ತಂಗಿದ್ದರು. ಉತ್ತರ ಕರ್ನಾಟಕದಲ್ಲಿ ಬನಶಂಕರಿ ದೇವಿಯ ಮಹತ್ವ ಇರುವುದರಿಂದ ಶೂಟಿಂಗ್ ನ ಬಿಡುವಿನ ವೇಳೆಯಲ್ಲಿ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿ, ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.

    ಮಹಾಕೂಟದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಟ ಪುನೀತ್ ಅಗತ್ಯ ಇರುವ ಕಡೆ ಶೂಟಿಂಗ್ ಮುಗಿಸಲಾಗಿದೆ. ಉಳಿದ ಶೂಟಿಂಗ್ ಅವರ ಅನುಪಸ್ಥಿತಿಯಲ್ಲಿ ನಡೆಯಲಿದೆ. ಅವರ ರೂಲ್ ಮುಗಿದ ಹಿನ್ನೆಲೆ ಪುನೀತ್ ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ತೆರಳುವ ಮುಂಚೆ ದೇವಿಯ ಆರ್ಶಿವಾದ ಪಡೆದುಕೊಂಡಿದ್ದಾರೆ

    ಪುನೀತ್ ರಾಜ್ ಕುಮಾರ್ ಅಭಿನಯದ `ನಟ ಸಾರ್ವಭೌಮ’ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್ ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.

  • ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

    ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

    ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ.

    ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮದೇವತೆ ಬಂಗಾಳಿ ಬಾಬಾ ದೇವಸ್ಥಾನ ಆವರಣದಲ್ಲಿ ನದಿ ನೀರು ನುಗ್ಗಿದೆ. ಈ ದೇವಸ್ಥಾನ ದೂದ ಗಂಗಾ ನದಿ ಸಮೀಪದಲ್ಲಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರಸಿದ್ಧ ದೇವಸ್ಥಾನ ನರಸಿಂಹವಾಡಿಯ ಗರ್ಭಗುಡಿ, ಪಂಚ ಗಂಗಾ ಮತ್ತು ಕೃಷ್ಣಾ ನದಿಯ ಸಂಗಮ ಸ್ಥಳದ ದೇವಸ್ಥಾನಕ್ಕೂ ನದಿ ನೀರು ನುಗ್ಗಿದೆ.

    ಕೃಷ್ಣಾ ನದಿ ಹಾಗೂ ಉಪನದಿಗಳ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಕೃಷ್ಣಾ ಸೇರಿ ಉಪ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಒಟ್ಟು 6 ಸೇತುವೆಗಳು ಜಲಾವೃತಗೊಂಡಿವೆ. ಕೊಲ್ಲಾಪೂರ ಹಾಗೂ ಸಾಂಗಲಿ ಜಿಲ್ಲೆಯ ಸುಮಾರು 54 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.

    ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ- ಯಡೂರು ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಭೋಜ ಸೇತುವೆ, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ ಮತ್ತು ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದತ್ತವಾಡ – ಮಲಿಕವಾಡ ಗ್ರಾಮಗಳ ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಚಿಕ್ಕೋಡಿಯ 12 ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.

  • ಶ್ರೀ ವಿರಾಂಜನೇಯನ ದರ್ಶನ ಪಡೆದ ನಟಿ ಅಮೂಲ್ಯ, ಪತಿ ಜಗದೀಶ್ ಗೌಡ!

    ಶ್ರೀ ವಿರಾಂಜನೇಯನ ದರ್ಶನ ಪಡೆದ ನಟಿ ಅಮೂಲ್ಯ, ಪತಿ ಜಗದೀಶ್ ಗೌಡ!

    ಚಿಕ್ಕಬಳ್ಳಾಪುರ: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಗೌಡ ಚಿಕ್ಕಬಳ್ಳಾಪುರ ನಗರ ಹೊರವಲಯದ ಶ್ರೀ ವಿರಾಂಜನೇಯನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯಲ್ಲಿರುವ ಸೂಲಾಲಪ್ಪನದಿನ್ನೆ ಶ್ರೀ ವೀರಾಂಜನೇಯ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತಿಭಾವದಿಂದ ಇಷ್ಟಾರ್ಥಸಿದ್ದಿಗಾಗಿ ಅಮೂಲ್ಯ ದಂಪತಿ ಬೇಡಿಕೊಂಡರು. ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿರಾಂಜನೇಯನಿಗೆ ವಿಶೇಷ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

    ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅಮೂಲ್ಯ ಹಾಗೂ ಜಗದೀಶ್ ಗೌಡ ದಂಪತಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವಾದಿಸಿದರು. ನಂತರ ಅಗಲಗುರ್ಕಿ ಗ್ರಾಮದ ಬಳಿಯ ಬಿಜಿಎಸ್ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಗೌಡ ಪಾಲ್ಗೊಂಡಿದ್ದರು.

    ಇನ್ನೂ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯ ಅಂಗವಾಗಿ ಬಿಜಿಎಸ್ ಶಾಲೆಯ ಕಲರ್ ಫುಲ್ ರಂಗೇರಿತ್ತು. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿಗಳು ಜಾನಪದ ಕಲಾ ತಂಡಗಳೊಂದಿಗೆ ಅತಿಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ್ರು. ನಟಿ ಅಮೂಲ್ಯ ಕಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸಗೊಂಡರು. ಇನ್ನೂ ವಿದ್ಯಾರ್ಥಿಗಳು ವೇಷಭೂಷಣ ಹಾಗೂ ನೃತ್ಯ ಕಂಡ ನಟಿ ಅಮೂಲ್ಯ ದಂಪತಿ ಕೂಡ ಅಷ್ಟೇ ಸಂತಸಗೊಂಡರು.

  • ಲಾರಿ ಡಿಕ್ಕಿಗೆ ನೆಲಸಮವಾದ ಬಸವೇಶ್ವರ ದೇವಸ್ಥಾನ!

    ಲಾರಿ ಡಿಕ್ಕಿಗೆ ನೆಲಸಮವಾದ ಬಸವೇಶ್ವರ ದೇವಸ್ಥಾನ!

    ಮೈಸೂರು: ವೇಗವಾಗಿ ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿ ರಸ್ತೆಯ ಬದಿಯ ದೇವಸ್ಥಾನಕ್ಕೆ ಗುದ್ದಿದ ಪರಿಣಾಮ ದೇವಸ್ಥಾನ ನೆಲಸಮಗೊಂಡ ಘಟನೆ ನಗರದ ನಂಜನಗೂಡು ರಸ್ತೆಯ ರಿಂಗ್ ರಸ್ತೆ ಬಳಿ ಸಂಭವಿಸಿದೆ.

    ನಗರದ ಹೊರಹೊಲಯದ ನಂಜನಗೂಡ ರಸ್ತೆಯ ರಿಂಗ್ ರಸ್ತೆ ವೃತ್ತದಲ್ಲಿ ವೇಗವಾಗಿ ಬಂದ ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿದೆ. ಈ ವೇಳೆ ರಸ್ತೆ ಬದಿ ಇದ್ದ ಬಸವೇಶ್ವರ ದೇಗುಲಕ್ಕೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ದೇವಸ್ಥಾನ ಸಂಪೂರ್ಣ ನೆಲಸಮಗೊಂಡಿದೆ. ರಸ್ತೆ ಬದಿ ನಿಂತಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬಸವೇಶ್ವರ ಮೂರ್ತಿ ಭಗ್ನಗೊಂಡಿದೆ.

    ಘಟನೆ ಸಂಬಂಧ ಸಾರ್ವಜನಿಕರು ರೊಚ್ಚಿಗೆದ್ದು ನಂಜನಗೂಡು ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ಕೂಡಲೇ ದೇವಸ್ಥಾನವನ್ನು ಮತ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಧರ್ಮಸ್ಥಳದಲ್ಲಿ ಭದ್ರತಾ ಸಿಬ್ಬಂದಿ, ಭಕ್ತರ ನಡುವೆ ಹೊಡೆದಾಟ: ವಿಡಿಯೋ ವೈರಲ್

    ಧರ್ಮಸ್ಥಳದಲ್ಲಿ ಭದ್ರತಾ ಸಿಬ್ಬಂದಿ, ಭಕ್ತರ ನಡುವೆ ಹೊಡೆದಾಟ: ವಿಡಿಯೋ ವೈರಲ್

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಭಕ್ತರು ಮತ್ತು ಭದ್ರತಾ ಸಿಬ್ಬಂದಿ ಹೊಡೆದಾಡಿದ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಭಕ್ತರ ದಟ್ಟಣೆ ಹೆಚ್ಚಿರುವಾಗ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗಬೇಕಾಗುತ್ತದೆ. ದೇವಸ್ಥಾನದ ಬಲ ಬದಿಯಿಂದ ಆರಂಭಿಸಿ ಒಂದು ಸುತ್ತು ಸಾಲು ಇರುತ್ತದೆ. ಈ ಸರತಿ ಸಾಲಿನ ಮಧ್ಯೆ ಮಾತಿಗೆ ಮಾತು ಬೆಳೆದು ಭದ್ರತಾ ಸಿಬ್ಬಂದಿ ಹಾಗೂ ಭಕ್ತರು ಹೊಡೆದಾಡಿದ್ದಾರೆ. ಮಹಿಳೆಯರು, ಯುವಕರು ಸೇರಿ ಭದ್ರತಾ ಸಿಬ್ಬಂದಿ ಮೇಲೆ ಕೈ ಮಾಡಿದ್ದಲ್ಲದೇ, ದೇವಸ್ಥಾನ ಎನ್ನುವುದನ್ನು ಲೆಕ್ಕಿಸದೇ ಬೈದಾಡಿಕೊಂಡಿದ್ದರು. ಕೊನೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ಧರ್ಮಸ್ಥಳ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಗಲಾಟೆ ನಡೆಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯನ್ನು ಸಾಲಿನಲ್ಲಿ ನಿಂತಿದ್ದ ಭಕ್ತರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಭದ್ರತಾ ಸಿಬ್ಬಂದಿ ದರ್ಪದಿಂದಾಗಿ ಘಟನೆ ಸಂಭವಿಸಿದೆ ಎನ್ನುವಂತೆ ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಯುವಕರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

    https://youtu.be/JZTfaP1hyss

  • ಕುಸಿದ ಮಚ್ಚರೆ ಗ್ರಾಮದ ಶಾಲಾ ಕಟ್ಟಡ – ದೇವಾಲಯದಲ್ಲಿ ಶಾಲಾ ಮಕ್ಕಳಿಗೆ ಪಾಠ

    ಕುಸಿದ ಮಚ್ಚರೆ ಗ್ರಾಮದ ಶಾಲಾ ಕಟ್ಟಡ – ದೇವಾಲಯದಲ್ಲಿ ಶಾಲಾ ಮಕ್ಕಳಿಗೆ ಪಾಠ

    ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಮುಚ್ಚರೆ ಗ್ರಾಮದಲ್ಲಿ ಶಾಲಾ ಕಟ್ಟಡ ಕುಸಿದಿರುವ ಪರಿಣಾಮಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ದೇವಸ್ಥಾನದ ಆವರಣದಲ್ಲೇ ಪಾಠ ಕೇಳುತ್ತಿದ್ದಾರೆ.

    ಮುಚ್ಚರೆ ಗ್ರಾಮದಲ್ಲಿನ ಸರ್ಕಾರಿ ಶಾಲೆಯು ಕುಸಿದ ಕಾರಣ ವಿದ್ಯಾರ್ಥಿಗಳು ಅನಿವಾರ್ಯವಾಗಿ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಪಾಠ ಕೇಳುವ ಪರಿಸ್ಥಿತಿ ಬಂದಿದೆ. ಈ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಗಳಿದ್ದು, ಒಟ್ಟು 25 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಶಾಲೆ ಕಟ್ಟಡ ಕುಸಿದು ಹಲವು ದಿನಗಳೇ ಕಳೆದರೂ, ಜನಪ್ರತಿನಿಧಿಗಳು ಇತ್ತ ಸುಳಿದಿಲ್ಲ. ಶಾಲಾ ಕಟ್ಟಡವು ಸಂಪೂರ್ಣ ಶಿಥಿಲವಾಗಿದ್ದು, ಕೊಠಡಿಯಲ್ಲಿ ಮೇಲ್ಛಾವಣೆಯ ಕುಸಿದು ಬೀಳುತ್ತಿದೆ. ಇದು ಮಕ್ಕಳ ಜೀವಕ್ಕೇ ಅಪಾಯವಿರುವ ಕಾರಣ ಗ್ರಾಮಸ್ಥರು ದೇವಸ್ಥಾನದ ಆವರಣದಲ್ಲೇ ಶಾಲೆ ನಡೆಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

     

    ಈ ಕುರಿತು ಗ್ರಾಮಸ್ಥರು ಹತ್ತಾರು ಭಾರೀ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ಜನಪ್ರತಿನಿಧಿಗಳು ನಮಗೇ ಬೇಕೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಮಾಡಿಕೊಡಬೇಕಾಗಿದೆ.

  • ದೇವಸ್ಥಾನಕ್ಕೆ ಹೋದವ್ರು ಸ್ವತಃ ದೇವಮಾನವರಾದ್ರು-ಪರಮೇಶ್ವರ್ ಕಾಲಿಗೆರಗಿದ ಮಹಿಳಾ ಮಣಿಗಳು, ಕಾರ್ಯಕರ್ತರು!

    ದೇವಸ್ಥಾನಕ್ಕೆ ಹೋದವ್ರು ಸ್ವತಃ ದೇವಮಾನವರಾದ್ರು-ಪರಮೇಶ್ವರ್ ಕಾಲಿಗೆರಗಿದ ಮಹಿಳಾ ಮಣಿಗಳು, ಕಾರ್ಯಕರ್ತರು!

    ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಇಂದು ಜಿಲ್ಲೆಯ ಸೀಬಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಪರಮಶ್ವರ್ ಅವರು ತಾವು ಹೊತ್ತುಕೊಂಡಿದ್ದ ಹರಕೆ ತೀರಿಸಲೆಂದು ದೇವಾಸ್ಥಾನಕ್ಕೆ ಹೋಗಿದ್ದರು. ಡಿಸಿಎಂ ಬೇಟಿ ನೀಡುತ್ತಿದ್ದಂತೆಯೇ ಅವರ ಬೆಂಬಲಿಗರು ಹೂ ಹಾರಗಳನ್ನು ಹಾಕಿ ಸ್ವಾಗತಿಸಿಕೊಂಡಿದ್ದಾರೆ. ಬಳಿಕ ಅವರು ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಸ್ವತಃ ತಾವೇ ದೇವಮಾನವರಾಗಿದ್ದಾರೆ. ದೇವಸ್ಥಾನಕ್ಕೆ ಬಂದ ಮಹಿಳಾ ಮಣಿಗಳು ಹಾಗೂ ಕಾರ್ಯಕರ್ತರು ದೇವರಿಗೆ ಕೈ ಮುಗಿಯೋದನ್ನು ಬಿಟ್ಟು ಪರಮೇಶ್ವರ್ ಕಾಲಿಗೆ ಎರಗಿದ್ದಾರೆ.

    ಒಬ್ಬರಾದ ಮೇಲೆ ಒಬ್ಬರು ಸರತಿ ಸಾಲಿನಲ್ಲಿ ನಿಂತು ಪರಂ ಕಾಲಿಗೆ ಬಿದ್ದಿದ್ದಾರೆ. ಇಷ್ಟಾದರೂ ತುಟಿಕ್ ಪಿಟಿಕ್ ಅನ್ನದ ಡಿಸಿಎಂ ಕಾಲಿಗೆ ನಮಸ್ಕರಿಸುತ್ತಿರುವುದನ್ನು ನಿರಾಕರಿಸಿಲ್ಲ. ಎಲ್ಲರೂ ಕಾಲಿಗೆ ಬೀಳುವವರೆಗೂ ಸಾವಧಾನವಾಗಿ ನಿಂತುಕೊಂಡಿದ್ದರು. ಪ್ರಗತಿಪರರು ಅಂದುಕೊಳ್ಳುವ ಜಿ.ಪರಮೇಶ್ವರ್ ಈ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

  • ಭೀಕರ ರಸ್ತೆ ಅಪಘಾತ ಮೂರು ಜನ ವಿದ್ಯಾರ್ಥಿಗಳು ಸಾವು

    ಭೀಕರ ರಸ್ತೆ ಅಪಘಾತ ಮೂರು ಜನ ವಿದ್ಯಾರ್ಥಿಗಳು ಸಾವು

    ಬೆಳಗಾವಿ: ಭೂತನಾಥ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂರು ಜನ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಬಳಿ ನಡೆದಿದೆ.

    ಅಥರ್ವ(16), ಅಮನ್ ಕಬ್ಲೇಶ್ವರಿ(17) ಹಾಗೂ ಹರ್ಷ(17) ಮೃತ ವಿದ್ಯಾರ್ಥಿಗಳು. ದೇವರ ದರ್ಶನ ಮುಗಿಸಿ ಬೈಕಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೂರು ಜನ ಮೃಪಟ್ಟಿದ್ದಾರೆ. ಇನ್ನೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.