Tag: ದೇವಸ್ಥಾನ

  • ಕದಂಕಕ್ಕೆ ಬಿತ್ತು ಪಿಕಪ್ ವಾಹನ – 8 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಕದಂಕಕ್ಕೆ ಬಿತ್ತು ಪಿಕಪ್ ವಾಹನ – 8 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಮಗಳೂರು: ಕಂದಕಕ್ಕೆ ಪಿಕಪ್ ವಾಹನ ಬಿದ್ದು ಎಂಟು ಮಂದಿಗೆ ಗಾಯಗಳಾಗಿ, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕ್ಕಮಗಳೂರು ಮೂಡಿಗೆರೆಯ ಮಲಯ ಮಾರುತ ತಿರುವಿನಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಸುಮಾರು 8.30ಕ್ಕೆ ಪಿಕಪ್ ವಾಹನ ಕಂದಕ್ಕೆ ಬಿದ್ದಿದೆ. ಬೆಳ್ತಂಗಡಿ ಮೂಲದ ಬಿಳ್ಳದಾಳ ಗ್ರಾಮದ ಪಿಕಪ್ ವಾಹನ ಎಂದು ಹೇಳಲಾಗುತ್ತಿದೆ. ಹಾಸನದ ಪುರದಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೋಗುವಾಗ ಈ ಅಪಘಾತ ಸಂಭವಿಸಿದೆ.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಾಳುಗಳಿಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಿಕಪ್ ವಾಹನದ ಸ್ಟೇರಿಂಗ್ ಕಟ್ಟಾಗಿ ವಾಹನ ಕಂದಕ್ಕೆ ಉರುಳಿದ್ದು, ಸದ್ಯ ಭಾರೀ ದುರಂತ ತಪ್ಪಿದೆ.

    ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರತಕ್ಷತೆ ಬಳಿಕ ದೇಶದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ಕೊಟ್ಟ ದೀಪ್‍ವೀರ್!

    ಆರತಕ್ಷತೆ ಬಳಿಕ ದೇಶದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ಕೊಟ್ಟ ದೀಪ್‍ವೀರ್!

    ಮುಂಬೈ: ಬಾಲಿವುಡ್‍ನ ಕ್ಯೂಟ್ ಕಪಲ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಕುಟುಂಬಸ್ಥರೊಂದಿಗೆ ಶುಕ್ರವಾರದಂದು ನಗರದ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ದೀಪಿಕಾ ಹಾಗೂ ರಣ್‍ವೀರ್ ಇಬ್ಬರು ಮ್ಯಾಚಿಂಗ್ ಬಣ್ಣದ ಉಡುಪನ್ನು ಧರಿಸಿದ್ದರು. ಒಂದೆಡೆ ರಣ್‍ವೀರ್ ಪೈಜಾಮ- ಕುರ್ತಾ ಜೊತೆ ನೆಹರು ಜಾಕೆಟ್ ಧರಿಸಿದ್ದರೆ, ಇನ್ನೊಂದೆಡೆ ದೀಪಿಕಾ ಲಾಂಗ್ ಕುರ್ತಾ ಜೊತೆ ಡಿಸೈನರ್ ದುಪ್ಪಟ್ಟಾದಲ್ಲಿ ಎಲ್ಲರ ಗಮನ ಸೆಳೆದರು.

    ಸಿದ್ಧಿವಿನಾಯಕನ ದರ್ಶನ ಪಡೆದ ನಂತರ ಅಭಿಮಾನಿಗಳು ಕ್ಲಿಕ್ಕಿಸಿದ ಫೋಟೋಗಳಿಗೆ ನವದಂಪತಿ ಖುಷಿಯಾಗಿ ಪೋಸ್ ಕೊಟ್ಟಿದ್ದಾರೆ. ದೀಪಿಕಾ ಅವರ ತಂದೆ ಪ್ರಕಾಶ್ ಪಡುಕೋಣೆ, ತಂಗಿ ಅನಿಷಾ ಹಾಗೂ ರಣ್‍ವೀರ್ ಅವರ ತಂದೆ ಜಗ್ಜೀತ್ ಭಾವ್ನಾನಿ, ತಾಯಿ ಅಂಜು ಮತ್ತು ತಂಗಿ ರಿತಿಕಾ ಕೂಡ ನವಜೋಡಿ ಜೊತೆ ದೇವಸ್ಥಾನಕ್ಕೆ ಬಂದಿದ್ದರು.

    ಕಳೆದ ನವೆಂಬರ್ 14 ಮತ್ತು 15 ರಂದು ದೀಪಿಕಾ ರಣ್‍ವೀರ್ ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಂತೆ ಇಟಲಿಯಲ್ಲಿ ವಿವಾಹವಾಗಿದ್ದರು. ಬಳಿಕ ಮೊದಲು ಬೆಂಗಳೂರಿನಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ನಂತರ ನವೆಂಬರ್ 28 ರಂದು ಮುಂಬೈನಲ್ಲಿ ಆರತಕ್ಷತೆ ಮಾಡಿಕೊಂಡಿದ್ದರು. ಆದರೆ ಶನಿವಾರ ಚಿತ್ರರಂಗದ ಸ್ನೇಹಿತರಿಗಾಗಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್..!

    ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್..!

    ಬೆಂಗಳೂರು: ಸಿಂಪಲ್ ಮದುವೆ ಆಗುವವರಿಗೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ದೇವಸ್ಥಾನದಲ್ಲಿ ಇನ್ಮುಂದೆ ಮದುವೆ ಆಗುವುದಕ್ಕೆ ಅನುಮತಿಯಿಲ್ಲ.

    ಮುಜರಾಯಿ ಇಲಾಖೆ ದೇಗುಲದಲ್ಲಿ ಮದುವೆಯನ್ನು ನಿಷಿದ್ಧ ಮಾಡಿದೆ. ಪತಿ ಅಥವಾ ಪತ್ನಿಗೆ ಹೇಳದೇ ಇನ್ನೊಂದು ವಿವಾಹ, ಕುಟುಂಬಕ್ಕೆ ಮಾಹಿತಿ ನೀಡದೇ ಮದ್ವೆ, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವುದು ಹೀಗೆ ಅನೇಕ ಪ್ರಕರಣ ನಡೆಯುತ್ತಿದ್ದು, ಕೇಸ್‍ಗಳಾದರೆ ಅರ್ಚಕರೇ ಸಾಕ್ಷಿಗಳಾಗಬೇಕಾಗುತ್ತೆ.

    ಅಲ್ಲದೇ ಕೆಲವರು ಅರ್ಚಕರಿಗೆ ಹೆದರಿಸಿ ಬೆದರಿಸಿ ಮದುವೆ ಮಾಡುವಂತೆ ಕಿರಿಕ್ ಮಾಡುತ್ತಿದ್ದಾರೆ. ಇದಕ್ಕಾಗಿ ಅರ್ಚಕರೇ ಸ್ವತಃ ಮುಜರಾಯಿಗೆ ಮನವಿ ಮಾಡಿದ್ದು ಈಗ ನಗರದ ಎಲ್ಲಾ ಮುಜರಾಯಿಯಲ್ಲೂ ಮದುವೆ ಬ್ಯಾನ್ ಮಾಡಲಾಗಿದೆ.

    ದೇಗುಲಕ್ಕೆ ಹೊಂದಿಕೊಂಡ ಕಲ್ಯಾಣ ಮಂಟಪದಲ್ಲಿ ಮದುವೆಯಾಗಬೇಕು ಎಂದರೂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿ ಮೂವತ್ತು ದಿನಗಳಾಗಿರಬೇಕು. ನಂತರವಷ್ಟೇ ಮದುವೆಗೆ ಅನುಮತಿ ನೀಡಲಾಗುತ್ತಿದೆ.

    ಸದ್ಯ ಇದರ ಜೊತೆಗೆ ನಾಮಕರಣ, ಸೇರಿದಂತೆ ದೇವಸ್ಥಾನದಲ್ಲಿ ನಡೆಯುವ ಇತರೇ ಕಾರ್ಯಕ್ರಮಗಳಿಗೆ ಮುಜರಾಯಿ ನಿಷೇಧವನ್ನು ಹೇರಿದೆ.

    ಈ ಬಗ್ಗೆ ಅರ್ಚಕರೊಬ್ಬರು ಮಾತನಾಡಿ, ತಂದೆ-ತಾಯಿ ವಿರೋಧ ವ್ಯಕ್ತಪಡಿಸಿ, ಮದುವೆ ಇಷ್ಟವಿಲ್ಲವೆಂದ್ರೆ ಪ್ರೇಮಿಗಳು ದೇವಸ್ಥಾನಕ್ಕೆ ಬಂದು ತಾಳಿ ಕಟ್ಟಿ ಹೋಗುತ್ತಿದ್ದರು. ಬಳಿಕ ಹೆತ್ತವರ ಗಲಾಟೆಗಳಿಂದ ಬಿಟ್ಟು ಹೋಗುತ್ತಿದ್ದರು. ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದರಿಂದ ನಮಗೆ ತುಂಬಾ ತೊಂದರೆಗಳಾಗುತ್ತಿತ್ತು. ಹೀಗಾಗಿ ದಯಮಾಡಿ ದೇವಸ್ಥಾನಗಳಲ್ಲಿ ಮದುವೆ ಮಾಡುವ ಮೊದಲು ಕಮಿಷನ್ ಗೆ ಪತ್ರ ಬರೆದು ಎರಡೂ ಕಡೆಯವರು ಒಪ್ಪಿಕೊಂಡು ನಂತರ ಕಮಿಷನರ್ ಆಯಾ ಪ್ರದೇಶದ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಲು ಅನುಮತಿ ನೀಡಬೇಕು ಅಂತ ನಾವೆಲ್ಲರೂ ಸೇರಿ ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದೆವು. ಹೀಗಾಗಿ ಸದ್ಯ ಕೆಲ ದೇವಸ್ಥಾನಗಳನ್ನು ಬಿಟ್ಟು ಉಳಿದೆಲ್ಲಾ ದೇವಾಲಯಗಳಲ್ಲಿ ಪ್ರೇಮಿಗಳಿಗೆ ಮದುವೆ ಮಾಡುವುದುನ್ನು ನಿಲ್ಲಿಸಲಾಗಿದೆ ಅಂತ ಹೇಳಿದ್ರು.

    ಮದುವೆ ನಡೆಯುತ್ತಿದ್ದ ಪ್ರಮುಖ ಮುಜರಾಯಿ ದೇವಾಲಯ
    1. ಹಲಸೂರು ಸುಬ್ರಮಣ್ಯ ದೇಗುಲ – ಬೆಂಗಳೂರು
    2. ಬನಶಂಕರಿ ದೇಗುಲ ಬೆಂಗಳೂರು
    3. ಕುಕ್ಕೆ ಸುಬ್ರಮಣ್ಯ ದೇಗುಲ
    4. ಗವಿಗಂಗಾಧರ ದೇಗುಲ
    5. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ
    6. ನಿಮಿಷಾಂಬಾ ದೇಗುಲ ಮಂಡ್ಯ
    7. ಕೊಲ್ಲೂರು ಮೂಕಾಂಬಿಕ ದೇಗುಲ


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಿರುಪತಿಯಂತೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿ- ಹೇಗೆ ತಯಾರಿಸ್ತಾರೆ..? ಏನಿದರ ವಿಶೇಷತೆ..?

    ತಿರುಪತಿಯಂತೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿ- ಹೇಗೆ ತಯಾರಿಸ್ತಾರೆ..? ಏನಿದರ ವಿಶೇಷತೆ..?

    ಚಾಮರಾಜನಗರ: ವಿಶ್ವ ಪ್ರಸಿದ್ಧಿಯಾದ ತಿರುಪತಿ ಲಡ್ಡು ಮಾದರಿಯಲ್ಲೇ ಮಲೆಮಹದೇಶ್ವರ ಬೆಟ್ಟದಲ್ಲೂ ಲಡ್ಡು ತಯಾರಿಸಲಾಗುತ್ತಿದೆ. ಪ್ರತಿ ವರ್ಷ ಮೂರು ಬಾರಿ ರಥೋತ್ಸವ ನಡೆಯುವ ಮಾದಪ್ಪನ ಬೆಟ್ಟದಲ್ಲಿ ಲಕ್ಷಗಟ್ಟಲೆ ಲಡ್ಡು ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.

    ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ. ಲಕ್ಷಾಂತರ ಮಂದಿಯ ಆರಾಧ್ಯ ದೈವ ಪವಾಡ ಪುರುಷ ಮಲೆ ಮಹದೇಶ್ವರ. ಅತೀ ಹೆಚ್ಚು ಆದಾಯ ಬರುವ ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವರುಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಇಲ್ಲಿನ ಹುಂಡಿಯಲ್ಲಿ ವಾರ್ಷಿಕ 15ರಿಂದ 20 ಕೋಟಿ ಸಂಗ್ರಹವಾಗುತ್ತೆ. ಇನ್ನು ಚಿನ್ನದ ತೇರು ಎಳೆಯುವುದು, ವಿಶೇಷ ಪೂಜೆ, ಮುಡಿಸೇವೆ ಹೀಗೆ ಬೇರೆ ಬೇರೆ ರೀತಿಯಲ್ಲೂ ಕೋಟ್ಯಂತರ ರೂ. ಆದಾಯವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಬರುತ್ತಾರೆ.

    ಹಬ್ಬಗಳು ರಜಾ ದಿನಗಳು, ಅಮಾವಸ್ಯೆ, ದೀಪಾವಳಿ, ಶಿವರಾತ್ರಿ, ಯುಗಾದಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಂತೂ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಲಡ್ಡು ನೀಡಲಾಗುತ್ತೆ. ಈ ಲಡ್ಡು ತಯಾರಿಕೆಗೆಂದು ದೇವಸ್ಥಾನದ ಮಗ್ಗುಲಲ್ಲೇ ಅಡುಗೆ ಕೋಣೆ ನಿರ್ಮಿಸಲಾಗಿದೆ. ಈ ಬಾರಿ ನವೆಂಬರ್ 8ರಂದು ರಥೋತ್ಸವ ನಡೆಯಲಿದ್ದು, ದೀಪಾವಳಿಗೆಂದೆ ಮೂರು ಲಕ್ಷ ಲಡ್ಡುಗಳನ್ನು ತಯಾರಿ ಮಾಡಲಾಗಿದೆ.

    ದೇವಸ್ಥಾನದ 40ಕ್ಕೂ ಹೆಚ್ಚು ಮಂದಿ ನೌಕರರು ಕಳೆದ 15 ದಿನಗಳಿಂದ ಲಡ್ಡು ತಯಾರಿಸುತ್ತಾರೆ. ಸಕ್ಕರೆ, ಕಡ್ಲೆಹಿಟ್ಟು, ತುಪ್ಪ, ಏಲಕ್ಕಿ ಪಚ್ಚೆಕರ್ಪೂರ, ಕಲ್ಲುಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಹದವಾಗಿ ಮಿಶ್ರಣ ಮಾಡಿ ಲಡ್ಡು ತಯಾರಿಸಲಾಗುತ್ತೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೆ ಲಡ್ಡು ತಯಾರಿಕೆಗೆ ಬಳಸಲಾಗುತ್ತೆ. ಪ್ರತಿ ಲಡ್ಡು ಒಂದೇ ಸಮನಾದ ಗಾತ್ರ ಹೊಂದಿದ್ದು 100 ಗ್ರಾಂ ತೂಕವಿರುತ್ತೆ. ಲಡ್ಡು ವಿತರಣೆಗೆಂದೇ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿದ್ದು 20 ರೂ.ಗೆ ಒಂದರಂತೆ ಭಕ್ತರಿಗೆ ಲಡ್ಡು ಪ್ರಸಾದ ನೀಡಲಾಗುತ್ತೆ. ಶುಚಿ, ರುಚಿಯಾಗಿರುವ ಈ ಲಡ್ಡು ಪ್ರಸಾದಕ್ಕೆ ವಿಶೇಷ ಸಂದರ್ಭಗಳಲ್ಲಿ ಭಾರೀ ಬೇಡಿಕೆ ಇದೆ.

    ತಿರುಪತಿ ಮಾದರಿಯಲ್ಲೇ ಇಲ್ಲಿ ಲಡ್ಡು ತಯಾರಿಸಲಾಗುತ್ತೆ. ಹಾಗಾಗಿ ಮಹದೇಶ್ವರ ಬೆಟ್ಟದ ಲಡ್ಡು ತಿರುಪತಿ ಲಡ್ಡುವಿನಷ್ಟೇ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನೇ ಬಳಸುವುದರಿಂದ ಎಷ್ಟೇ ದಿನವಿಟ್ಟರೂ ಈ ಲಡ್ಡು ಕೆಡುವುದಿಲ್ಲ. ವಾರ್ಷಿಕ 15 ಲಕ್ಷ ಲಡ್ಡುಗಳನ್ನು ಇಲ್ಲಿ ತಯಾರಿಸಲಾಗುತ್ತೆ. ಲಡ್ಡು ತಯಾರಿಕೆಯಿಂದಲೇ ಮಾದಪ್ಪನ ಸನ್ನಿಧಿಗೆ ಕೋಟ್ಯಂತರ ರೂ. ಆದಾಯ ಹರಿದು ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂಲಭೂತ ಸೌಲಭ್ಯ ನೀಡುವಲ್ಲಿ ಜಿಲ್ಲಾಡಳಿತ ವಿಫಲ- ಹಾಸನಾಂಬೆಯಲ್ಲಿ ಭಕ್ತರ ಆಕ್ರೋಶ

    ಮೂಲಭೂತ ಸೌಲಭ್ಯ ನೀಡುವಲ್ಲಿ ಜಿಲ್ಲಾಡಳಿತ ವಿಫಲ- ಹಾಸನಾಂಬೆಯಲ್ಲಿ ಭಕ್ತರ ಆಕ್ರೋಶ

    ಹಾಸನ: ಇಂದಿನಿಂದ ಹಾಸನಾಂಬೆಯ ದರ್ಶನ ಸಾರ್ವಜನಿಕರಿಗೆ ಸಿಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರ ಆಗಮಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತದ ಅತಿಯಾದ ಭದ್ರತೆಯ ಕಿರಿಕಿರಿಗೆ ಬೇಸತ್ತ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಮಿಸಿರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.

    ಶೌಚಾಲಯದ ಅವ್ಯವಸ್ಥೆಯಿಂದ ಭಕ್ತರು ಕಂಗೆಟ್ಟಿದ್ದಾರೆ. ಭಕ್ತರ ಸೌಲಭ್ಯಕ್ಕಾಗಿ ನಿರ್ಮಿಸಿರುವ ಶೌಚಾಲಯಗಳಲ್ಲಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರುಷ ಪೊಲೀಸ್ ಸಿಬ್ಬಂದಿ ಮಹಿಳಾ ಶೌಚಾಲಯವನ್ನು ಬಳಸುತ್ತಿದ್ದು, ಕೆಲ ಪೊಲೀಸರು ಶೌಚಾಲಯದ ಹೊರಗಡೆಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಹೆಚ್ಚಿನ ಭಕ್ತರ ಆಗಮನದ ನಿರೀಕ್ಷೆ ಇದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಜಿಲ್ಲಾಡಳಿತ ಮೂಲಭೂತ ಸೌಲಭ್ಯ ನೀಡುವಲ್ಲಿ ವಿಫಲವಾಗಿರುವ ಕಾರಣ ಭಕ್ತರು ಕಿಡಿಕಾರಿದ್ದಾರೆ.

    ಇಂದಿನಿಂದ ದರ್ಶನ:
    ವರ್ಷಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಎರಡನೇ ದಿನ. ಆಶ್ವೀಜ ಮಾಸದ ಮೊದಲ ಗುರುವಾರ ಬಾಗಿಲು ತೆಗೆಯಲಾಗಿದ್ದು, ಇಂದು ಮೊದಲ ಶುಕ್ರವಾರ. ರಜೆಗಳು ಮುಗಿದ ಹಿನ್ನಲೆ ಅಥವಾ ಮತ್ತೇನು ಕಾರಣವೋ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಕೊಂಚವಿರಳವಾಗಿದೆ ಎಂಬ ಮಾಹಿತಿ ಲಭಿಸಿದೆ.

    ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆಯುವ ಹಾಸನಾಂಬ ದೇವಾಲಯದಲ್ಲಿ ಹಣ ಇದ್ದವರಿಗೆ ಮಾತ್ರ ಹಾಸನಾಂಬೆ ದರ್ಶನವಾಗಿದೆ. ಹಾಸನದ ಹಾಸನಾಂಬೆ ದೇವಾಲಯದಲ್ಲಿ ತಲಾ ಒಂದುಸಾವಿರ ಟಿಕೆಟ್ ಮಾಡಿರುವ ಹಾಸನ ಜಿಲ್ಲಾಡಳಿತದ ಕ್ರಮದಿಂದಾಗಿ ಭಕ್ತರ ಸಂಖ್ಯೆ ಗಣನೀಯವಾಗಿ ಸಂಪೂರ್ಣ ಕಡಿಮೆಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಪ್ರತೀ ದಿನ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೇವಲ ಸಾವಿರಾರು ಸಂಖ್ಯೆಗೆ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬೆ ದರ್ಶನ ಇಂದಿನಿಂದ ಆರಂಭ

    ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬೆ ದರ್ಶನ ಇಂದಿನಿಂದ ಆರಂಭ

    ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನದ ಹಾಸನಾಂಬೆ ದೇವಿಯ ದರ್ಶನ ಇಂದಿನಿಂದ ಆರಂಭವಾಗಲಿದೆ. ಆಶ್ವೀಜ ಮಾಸದ ಮೊದಲ ಗುರುವಾರ ಅಂದರೆ ಇಂದು ಮಧ್ಯಾಹ್ನ 12.30 ರ ನಂತರ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಎಲ್ಲಾ ಸಿದ್ಧತೆ ಬಹುತೇಕ ಪೂರ್ಣವಾಗಿದೆ.

    ವೃದ್ಧರು, ಅಂಗವಿಕಲರಿಗೆ ಬೇರೆ ಕ್ಯೂ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ಧತೆ ಪರಿಶೀಲನೆ ನಂತರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಈ ಬಾರಿ ಹೆಚ್ಚು ಕಡೆ ಮೊಬೈಲ್ ಶೌಚಾಲಯಕ್ಕೆ ಆದ್ಯತೆ ನೀಡಲಾಗಿದೆ. ಕಳೆದ ಮಹಾ ಮಸ್ತಕಾಭಿಷೇಕದಲ್ಲಿ ಜಾರಿ ಮಾಡಿದಂತೆ ಹಾಸನಾಂಬೆ ದರ್ಶನ ವೇಳೆ 10 ದಿನಗಳ ಕಾಲ ಹೆಲಿ ಟ್ಯೂರಿಸಂ ಸೌಲಭ್ಯ ಕಲ್ಪಿಸಲಾಗಿದೆ.

    ಹಾಗೆಯೇ 300 ರೂ. ಟಿಕೆಟ್ ಖರೀದಿ ಮಾಡಿದ ಹಾಸನ ದರ್ಶನ ಪ್ಯಾಕೇಜ್ ನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಈ ಬಾರಿಯ ವಿಶೇಷತೆ ಹೂವಿನ ಅಲಂಕಾರ. ಅದು ತುಂಬಾ ಆಕರ್ಷಕವಾಗಿದೆ ಡಿಸಿ ರೋಹಿಣಿ ಹೇಳಿದ್ದಾರೆ.

    ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ದೀಪಗಳು ಕಂಗೊಳಿಸುತ್ತಿವೆ. ಹಾಗೆಯೇ ದೇವಾಲಯ ವ್ಯಾಪ್ತಿಯಲ್ಲೂ ಬಗೆಬಗೆಯ ಹೂ, ಹಣ್ಣು ಗಳಿಂದ ಸಿಂಗಾರ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೆಲುವನಾರಾಯಣ ಸ್ವಾಮಿ  ಮೆರವಣಿಗೆಯಲ್ಲಿ ಅಪಶಕುನ- ಉತ್ಸವದ ವೇಳೆ ಮುರಿದು ಬಿದ್ದ ಬೊಂಬು

    ಚೆಲುವನಾರಾಯಣ ಸ್ವಾಮಿ ಮೆರವಣಿಗೆಯಲ್ಲಿ ಅಪಶಕುನ- ಉತ್ಸವದ ವೇಳೆ ಮುರಿದು ಬಿದ್ದ ಬೊಂಬು

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ  ಅಂದರೆ ಮೈಸೂರು ರಾಜರಿಗೆ ವಿಶೇಷವಾದ ಭಕ್ತಿ, ನಂಬಿಕೆ ಇದೆ. ಚೆಲುವನಾರಾಯಣ ಸ್ವಾಮಿ  ದೇವಾಲಯದ ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಕೆಲವು ವಿಶೇಷ ಸಂದರ್ಭಗಳಲ್ಲಿ ಚೆಲುವನಾರಾಯಣ ಸ್ವಾಮಿಗೆ ಮೈಸೂರು ಮಹಾರಾಜರ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತೆ. ಅದೇ ರೀತಿ ವಿಜಯದಶಮಿಯ ದಿನ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಗೆ ರಾಜರ ವೇಷ ಧರಿಸಿ ಮೆರವಣಿಗೆ ಮಾಡುವಾಗ ಅಪಶಕುನ ಜರುಗಿ ಹೋಗಿದೆ.

    ಶುಕ್ರವಾರ ವಿಜಯದಶಮಿ ಆದ್ದರಿಂದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅಶ್ವವಾಹನೋತ್ಸವ ಸಂಭ್ರಮದಿಂದ ಜರುಗುತ್ತಿತ್ತು. ಮಹಾರಾಜರ ಅಲಂಕಾರದಲ್ಲಿದ್ದ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಆಂಜನೇಯಸ್ವಾಮಿ ದೇವಾಲಯದ ಬಳಿಯಿರುವ ಬನ್ನಿ ಮಂಟಪದವರೆಗೂ ಹೊತ್ತುಕೊಂಡು ಬರಲಾಯಿತು. ಆ ನಂತರ ಬನ್ನಿ ಪೂಜೆ ನೆರವೇರಿಸಿ ದೇವಾಲಯಕ್ಕೆ ಮರಳಿ ಬರಲಾಗುತ್ತಿತ್ತು. ಈ ವೇಳೆ ರಾಜ ಬೀದಿಯಲ್ಲಿ ಇದ್ದಕ್ಕಿದ್ದಂತೆ ಅಪಶಕುನ ನಡೆದು ಹೋಯಿತು. ಭಕ್ತಾದಿಗಳು ನೋಡು ನೋಡುತ್ತಿದ್ದಂತೆ, ಅಶ್ವಾರೋಹಿಯಾಗಿದ್ದ ಚೆಲುವನಾರಾಯಣ ಸ್ವಾಮಿಯನ್ನು ಹೊತ್ತಿದ್ದ ಮರದ ಬೊಂಬು ಮುರಿದು ಹೋಯಿತು. ಇನ್ನೇನು ದೇವರ ವಿಗ್ರಹ ನೆಲಕ್ಕೆ ಬಿತ್ತು ಎನ್ನುವಷ್ಟರಲ್ಲಿ ಸುತ್ತಲೂ ನೆರೆದಿದ್ದ ಭಕ್ತರು ಚೆಲುವನಾರಾಯಣ ಸ್ವಾಮಿ ವಿಗ್ರಹ ನೆಲಕ್ಕೆ ಬೀಳದಂತೆ ಹಿಡಿದುಕೊಂಡರು.

    ಈ ಘಟನೆ ನಡೆಯುತ್ತಿದ್ದಂತೆಯೇ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಭಕ್ತರು ಇದೇನು ಅಪಶಕುನದ ಮುನ್ಸೂಚನೆಯಾ ಎಂದು ಮಾತನಾಡಲು ಆರಂಭಿಸಿದ್ದಾರೆ. ಹಿಂದೆಲ್ಲ ಮೈಸೂರು ಮಹಾರಾಜರೇ ಮುಂದೆ ನಿಂತು ಚೆಲುವನಾರಾಯಣ ಸ್ವಾಮಿಯ ಅಶ್ವವಾಹನೋತ್ಸವ ನಡೆಸುತ್ತಿದ್ದರು. ಇತಿಹಾಸದಲ್ಲಿ ಒಮ್ಮೆಯೂ ಕೂಡ ಉತ್ಸವದ ವೇಳೆ ಈ ರೀತಿ ಅವಘಡ ಸಂಭವಿಸಿರಲಿಲ್ಲ. ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ ಇರುವಾಗಲೇ ಇದೇ ಮೊದಲ ಬಾರಿಗೆ ಈ ರೀತಿ ಅವಘಡ ಸಂಭವಿಸಿದೆ. ಈ ರೀತಿಯ ಘಟನೆಗಳನ್ನು ಶಕುನ ಅಪಶಕುನದ ರೀತಿ ನೋಡುತ್ತೇವೆ. ಇದು ಊರಿಗೆ ದೇವರಿಗೆ ಆಗುವ ಅಪಚಾರದ ಮುನ್ಸೂಚನೆ ಇರಬಹುದು. ಮಹಾರಾಜರಿಗೆ ಸಂಕಟ ಆಗುವ ಸಮಸ್ಯೆಗಳು ಹೆಚ್ಚಾಗುವ ಮುನ್ಸೂಚನೆಯೂ ಇರಬಹುದು ಎಂದು ಮೇಲುಕೋಟೆ ಸ್ಥಾನಾಚಾರ್ಯರಾದ ಶ್ರೀನಿವಾಸನ್ ನರಸಿಂಹನ್ ಗುರೂಜಿ ಹೇಳುತ್ತಾರೆ.

    ಉತ್ಸವ ನಡೆಯುವಾಗ ಅಶ್ವಾರೋಹಿಯಾದ ಚೆಲುವನಾರಾಯಣ ಸ್ವಾಮಿಯನ್ನು ಹೊತ್ತಿದ್ದ ಬೊಂಬು ಮುರಿಯಲು ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಉತ್ಸವ ಮೂರ್ತಿ ಹೊರುವ ಬೊಂಬು ಗಟ್ಟಿಯಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧವೂ ಅಸಮಾಧಾನ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಸ್ಥಾನದ 2 ಹುಂಡಿ ಬೀಗ ಒಡೆದು ಲಕ್ಷಾಂತರ ಹಣ ಕಳವು

    ದೇವಸ್ಥಾನದ 2 ಹುಂಡಿ ಬೀಗ ಒಡೆದು ಲಕ್ಷಾಂತರ ಹಣ ಕಳವು

    ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ಧ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಶ್ರೀ ಬೋಗನಂದೀಶ್ವರ ದೇಗುಲಕ್ಕೆ ನುಗ್ಗಿರುವ ಕಳ್ಳರು 2 ಹುಂಡಿಯ ಬೀಗ ಒಡೆದು ಹಣ ಕಳವು ಮಾಡಿದ್ದಾರೆ.

    ದೇವಾಲಯದ ಕಲ್ಯಾಣಿ ಕಡೆಯ ಬಾಗಿಲಿನಿಂದ ಒಳನುಗ್ಗಿರುವ ಕಳ್ಳರು, ಪ್ರಾಂಗಣದಲ್ಲಿನ ಹುಂಡಿಗೆ ಮುದ್ರೆ ಹಾಕಲಾಗಿದ್ದ ಬೀಗವನ್ನ ಒಡೆದು ಹಣ ದೋಚಿದ್ದಾರೆ. ಹೀಗಾಗಿ ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳ್ಳರ ಪಾಲಾಗಿದ್ದು, ಭದ್ರತಾ ಸಿಬ್ಬಂದಿ ಇದ್ದರೂ ಕಳ್ಳತನ ನಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ದೇವಾಲಯಕ್ಕೆ ಶ್ವಾನದಳ ಬೆರಳಚ್ಚು ತಜ್ಞರ ತಂಡದೊಂದಿಗೆ ಆಗಮಿಸಿದ್ದ ನಂದಿಗಿರಿಧಾಮ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಹಿಂದೆ ಬೋಗನಂದೀಶ್ವರಲಾಯದ ಅರುಚಲೇಶ್ವರ ದೇವರ ಶಿಖರದ ಮೇಲಿನ ಪಂಚ ಲೋಹದ ಕಳಸ ಕೂಡ ಕಳವು ಆಗಿತ್ತು. 2013 ರಲ್ಲಿ ನಂದಿ ಬೆಟ್ಟದ ಮೇಲಿನ ಯೋಗ ನಂದೀಶ್ವರ ದೇವಾಲಯದಲ್ಲೂ ಹುಂಡಿ ಕಳವು ಆಗಿತ್ತು. ಪದೇ ಪದೇ ಕಳ್ಳತನ ಪ್ರಕರಣ ಕಂಡುಬಂದರೂ ಆಡಳಿತ ಮಂಡಳಿ ಸುಮ್ಮನಿರುವುದರಿಂದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನನ್ನು ಥಳಿಸಿದ ಗ್ರಾಮಸ್ಥರು

    4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನನ್ನು ಥಳಿಸಿದ ಗ್ರಾಮಸ್ಥರು

    ಬಾಗಲಕೋಟೆ: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.

    ಸಿದ್ದಯ್ಯ ಗುರುಪಾದಯ್ಯ ಕಾಡದೇವರ ಎಂಬಾತನೇ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಕಾಮುಕ. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಕಾಡಸಿದ್ದೇಶ್ವರ ದೇವಾಲಯದ ಬಳಿ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದ ಬಳಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಯತ್ನಿಸಿದಾಗ ಸ್ಥಳೀಯ ಯುವಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಸಿದ್ದಯ್ಯ ಗುರುಪಾದಯ್ಯ ಈ ಹಿಂದೆ ಕೆಲ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದು, ಈತನ ವಿರುದ್ಧ ಬನಹಟ್ಟಿ ಪೊಲೀಸರು ಪೋಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಜಾಮೀನು ಸಿಗುತ್ತಿದ್ದಂತೆ ದೇವರ ಮೊರೆ ಹೋದ ಡಿಕೆಶಿ

    ಜಾಮೀನು ಸಿಗುತ್ತಿದ್ದಂತೆ ದೇವರ ಮೊರೆ ಹೋದ ಡಿಕೆಶಿ

    ಕಲಬುರಗಿ: ಹವಾಲ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಸಿಕ್ಕ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಕಲಬುರಗಿಯ ಶ್ರೀ ಕ್ಷೇತ್ರ ಗಾಣಗಾಪುರದ ಪುರಾಣ ಪ್ರಸಿದ್ಧ ದತ್ತಾತ್ರೇಯ ದೇಗುಲದತ್ತ ಮುಖ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದೇಗುಲಕ್ಕೆ ಭೇಟಿ ನೀಡಲಿರುವ ಸಚಿವರು ವಿಶೇಷ ಪೂಜೆ ನೆರವೇರಿಸಲಿದ್ದಾರೆ.

    ಮರದ ಸ್ವರೂಪದಲ್ಲಿರುವ ಶ್ರೀ ದತ್ತಾತ್ರೇಯರು ಹಿಂದೆ ರಾಜ-ಮಹಾರಾಜರು, ಪ್ರಜೆಗಳ ಸಂಕಷ್ಟ ನಿವಾರಣೆ ಮಾಡ್ತಿದ್ದರು ಎಂಬ ಐತಿಹ್ಯ ಈ ದೇಗುಲಕ್ಕಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆಯ ಆಂಧ್ರ-ಮಹಾರಾಷ್ಟ್ರ ರಾಜ್ಯಗಳ ಅಪಾರ ಭಕ್ತರು ಇಲ್ಲಿಗೆ ಬಂದು ತಮ್ಮ ಸಂಕಷ್ಟಗಳನ್ನು ಕಳೆದುಕೊಂಡಿದ್ದಾರಂತೆ. ಈ ಸನ್ನಿಧಿಗೆ ಸಚಿವೆ ಜಯಮಾಲಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳು ಭೇಟಿ ಕೊಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನೂ ಓದಿ: ಸಚಿವ ಡಿಕೆ ಶಿವಕುಮಾರ್ ಅವರಿಗೆ  ಷರತ್ತು ಬದ್ಧ ಜಾಮೀನು-ಏನಿದು ಪ್ರಕರಣ ಇಲ್ಲಿದೆ ಮಾಹಿತಿ

    ಡಿಕೆ ಶಿವಕುಮಾರ್ ಅವರ ರಾಜಕೀಯ ಗುರು ದ್ವಾರಕನಾಥ ಸಹ ಈ ದೇಗುಲಕ್ಕೆ ಭೇಟಿ ನೀಡಿ ತಮಗೆ ಬಂದ ಸಂಕಷ್ಟದಿಂದ ಪಾರಾಗಿದ್ದಾರಂತೆ. ಇದೀಗ ಸಚಿವ ಡಿ.ಕೆ.ಶಿವಕುಮಾರ್ ಅದೇ ಹಾದಿ ಹಿಡಿದಿದ್ದಾರೆ. ತಮ್ಮ ವಿರುದ್ಧ ಐಟಿ, ಇಡಿ ಹಾಗು ಜಾರಕಿಹೊಳಿ ಬ್ರದರ್ಸ್ ಸಂಕಟದಿಂದ ಪಾರು ಪಾರಾಗಲು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಡಿಕೆ ಶಿವಕುಮಾರ್ ಬಳಿಕ ಸಿಎಂ ಕುಮಾರಸ್ವಾಮಿ ಕೂಡ ಸೆಪ್ಟೆಂಬರ್ 17 ರಂದು ಶ್ರೀ ಕ್ಷೇತ್ರದ ದರ್ಶನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv