ಚಿಕ್ಕಬಳ್ಳಾಪುರ: ಸಂಸದ ವೀರಪ್ಪ ಮೊಯ್ಲಿ ಮೂರು ಕಾರಿಗೆ ಅನುಮತಿ ಪಡೆದು ಮೂವತ್ತು ವಾಹನದಲ್ಲಿ ಆಗಮಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಚಾರಕ್ಕೆ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಿ ಪತ್ರ ಬರೆದಿತ್ತು. ಆದರೆ ವೀರಪ್ಪಮೊಯ್ಲಿ ವಾಹನದ ಹಿಂದೆ ಮೂವತ್ತಕ್ಕೂ ಹೆಚ್ಚು ವಾಹನಗಳ ಓಡಾಟ ನಡೆಸುತ್ತಿದೆ.

ಇಂದು ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸುವ ಮುನ್ನ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ಭೋಗನಂಧೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಶಾಸಕ ಎಂಟಿಬಿ ನಾಗರಾಜ್ ಆರತಿ ತಟ್ಟೆಗೆ 1 ಸಾವಿರ ರೂ. ಹಾಕಿದರೆ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣ್ಣಯ್ಯ ಅವರು 200 ರೂ. ಹಾಕಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ವೀರಪ್ಪ ಮೊಯ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದಾರೆ. ವೀರಪ್ಪ ಮೊಯ್ಲಿಗೆ ಸಚಿವ ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಾಸಕ ಸುಧಾಕರ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.
ದೇವಸ್ಥಾನ ನಂತರ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ದರ್ಗಾಗೆ ಭೇಟಿ ನೀಡಿದ್ದಾರೆ. ಶ್ರೀ ಭೋಗನಂಧೀಶ್ವರ ದೇವಾಲಯದ ಹಿಂಭಾಗದಲ್ಲೇ ದರ್ಗಾ ಇರುವುದರಿಂದ ಮೊಯ್ಲಿ ಅಲ್ಲಿಗೂ ಭೇಟಿ ನೀಡಿದ್ದಾರೆ. ವೀರಪ್ಪಮೊಯ್ಲಿ ಟೆಂಪಲ್ ರನ್ ಗೆ ಶಾಸಕರು ಬೆಂಬಲಿಗರು ಸಾಥ್ ನೀಡಿದ್ದಾರೆ.





















