Tag: ದೇವಸ್ಥಾನ

  • ಸಿಡಿಲು ಬಡಿದು ದೇವಾಲಯದ ಗೋಪುರ ಛಿದ್ರ

    ಸಿಡಿಲು ಬಡಿದು ದೇವಾಲಯದ ಗೋಪುರ ಛಿದ್ರ

    ಚಿಕ್ಕಬಳ್ಳಾಪುರ: ದೇವಾಲಯಕ್ಕೆ ಸಿಡಿಲು ಬಡಿದ ಪರಿಣಾಮ ದೇವಾಲಯದ ಗೋಪುರ ಛಿದ್ರ-ಛಿದ್ರವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ದೇವರಾದ ಶ್ರೀ ಲಕ್ಷ್ಮೀಜನಾರ್ಧನಸ್ವಾಮಿ ದೇಗುಲಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ದೇವಾಲಯದ ಗೋಪುರದ ಕಳಸ ಕಿತ್ತು ಬಂದಿದೆ. ಗೋಪುರದ ಬಹುತೇಕ ಭಾಗ ಕಳಚಿದ್ದು ಸಿಡಿಲು ಬಡಿದ ಶಬ್ಧಕ್ಕೆ ಇಡೀ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.

    ಸಿಡಲಿನ ಹೊಡೆತಕ್ಕೆ ದೇವಾಲಯದ ಗೋಡೆಗಳು ಬಿರುಕು ಬಿಟ್ಟಿದ್ದು, ಗೋಡೆ ಹಾಗೂ ನೆಲಹಾಸುಗಳಿಗೆ ಅಳವಡಿಸಿದ್ದ ಟೈಲ್ಸ್ ಗಳು ಕಿತ್ತು ಬಂದಿವೆ. ಸಿಡಿಲಿನ ಶಬ್ಧದಿಂದ ಬೆಚ್ಚಿಬಿದ್ದಿರುವ ಗ್ರಾಮಸ್ಥರು ದೇವಾಲಯದ ಬಳಿ ಬಂದು ನೋಡಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ.

    ದೇವಾಲಯದ ಬಹುತೇಕ ಭಾಗ ಹಾನಿಗೆ ಒಳಗಾಗಿದೆ. ಗ್ರಾಮಸ್ಥರನ್ನು ರಕ್ಷಿಸುವ ಸಲುವಾಗಿ ದೇವರೇ ತನ್ನ ಮೇಲೆ ಸಿಡಿಲನ್ನು ಬರ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ದೇವರ ಶಕ್ತಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

  • ದೇವಸ್ಥಾನದ ಪುಷ್ಕರಣಿಯಲ್ಲೂ ನೀರಿಲ್ಲ- ಆಡಳಿತ ಮಂಡಳಿಯಿಂದ ಕೆಸರೆತ್ತುವ ಕಾರ್ಯ

    ದೇವಸ್ಥಾನದ ಪುಷ್ಕರಣಿಯಲ್ಲೂ ನೀರಿಲ್ಲ- ಆಡಳಿತ ಮಂಡಳಿಯಿಂದ ಕೆಸರೆತ್ತುವ ಕಾರ್ಯ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿಂದೆಂದೂ ಇಲ್ಲದ ನೀರಿನ ಸಮಸ್ಯೆ ಈ ಬಾರಿ ಎದುರಾಗಿದೆ. ನದಿಗಳೆಲ್ಲಾ ಬತ್ತಿದ್ದು, ಕೆರೆ ಬಾವಿಯ ನೀರು ಆವಿಯಾಗಿದೆ. ದೇವಸ್ಥಾನಗಳ ಪುಷ್ಕರಣಿಗಳು ಕೂಡ ನೀರಿಲ್ಲದೆ ಒಣಗುತ್ತಿದೆ.

    ಈ ಪರಿಸ್ಥಿತಿಯನ್ನು ಉಪಯೋಗಿಸಲು ಹೊರಟಿರುವ ದೇವಸ್ಥಾನದ ಆಡಳಿತ ಮಂಡಳಿ, ಕೆರೆಯ ಕೆಸರೆತ್ತುವ ಕೆಲಸ ಮಾಡುತ್ತಿದೆ. ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಹೂಳೆತ್ತುವ ಕೆಲಸ ಬಿರುಸಿನಿಂದ ನಡೆಯುತ್ತಿದೆ.

    ಕಳೆದ ನಾಲ್ಕು ದಿನದಿಂದ ಈ ಕೆಲಸ ನಡೆಯುತ್ತಿದ್ದು, ಭಾರೀ ಪ್ರಮಾಣದ ಹೂಳು ಮೇಲೆತ್ತಲಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಉಡುಪಿಯ ಪುರಾತನ ದೇವಸ್ಥಾನವಾಗಿದ್ದು, ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೆಸರೆತ್ತಲಾಗಿದೆ.

    ಸದ್ಯ ಅಭಿಷೇಕ ಪ್ರಿಯನಾಗಿರುವ ಈಶ್ವರ ದೇವರಿಗೆ ಈ ಮಳೆಗಾಲದಲ್ಲಿ ಶುದ್ಧ ನೀರು ಲಭ್ಯವಾಗಲಿದೆ.

  • ತಮಿಳುನಾಡು ದೇಗುಲದತ್ತ ಎಚ್‍ಡಿಡಿ ಪ್ರಯಾಣ!

    ತಮಿಳುನಾಡು ದೇಗುಲದತ್ತ ಎಚ್‍ಡಿಡಿ ಪ್ರಯಾಣ!

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ಟೆಂಪಲ್ ರನ್ ಮುಂದುವರಿಸಿದ್ದು, ಈಗ ತಮಿಳುನಾಡಿನ ದೇಗುಲದತ್ತ ಪ್ರಯಾಣ ಬೆಳೆಸಿದ್ದಾರೆ.

    ದೇವೇಗೌಡರು ಮೊದಲಿಗೆ ತಮಿಳುನಾಡಿನ ತಿರುವರೂರು ಜಿಲ್ಲೆಯ ರಾಜಗೋಪಾಲಸ್ವಾಮಿ ಮತ್ತು ಭಾಸ್ಕರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಶ್ರೀರಂಗಂಗೆ ಪ್ರಯಾಣ ಬೆಳಸಲಿದ್ದಾರೆ. ಶ್ರೀರಂಗಂನಲ್ಲಿ ದೇವೇಗೌಡರು ರಂಗನಾಥ ಸ್ವಾಮಿ ದೇವರ ದರ್ಶನ ಪಡೆಯಲಿದ್ದಾರೆ.

    ಕಳೆದ ವಾರ ವಾರವಷ್ಟೇ ದೇವೇಗೌಡರು ಧರ್ಮಸ್ಥಳ, ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದರು. ಇದೀಗ ಮತ್ತೆ ತಮ್ಮ ಟೆಂಪಲ್ ರನ್ ಮುಂದುವರಿಸಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ದೇವೇಗೌಡರು ತೆರಳಿದ್ದಾರೆ.

    ದೇವೇಗೌಡರೊಂದಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಕೂಡ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಕೂಡ ದೇಗುಲ ಪ್ರವಾಸ ಮಾಡಬೇಕಿತ್ತು. ಆದರೆ ಸಿಎಂ ಕೊನೆ ಕ್ಷಣದಲ್ಲಿ ದೇಗುಲ ಪ್ರವಾಸ ಕೈ ಬಿಟ್ಟಿದ್ದಾರೆ. ಹೀಗಾಗಿ ದೇವೇಗೌಡ ಹಾಗೂ ರೇವಣ್ಣ ಮಾತ್ರ ಪ್ರವಾಸ ಕೈಗೊಂಡಿದ್ದಾರೆ. ದೇವೇಗೌಡರು ಎರಡು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಿದ್ದಾರೆ.

  • ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಚಾಮರಾಜನಗರ: ಸುಳ್ವಾಡಿ ದುರಂತದ ಕ್ರಿಮಿ ಇಮ್ಮಡಿ ಮಹದೇವ ಸ್ವಾಮೀಜಿ ಜೈಲಿನಲ್ಲಿ ಇದ್ದುಕೊಂಡು ದರ್ಬಾರ್ ನಡೆಸುತ್ತಿದ್ದಾನೆ. ಈತನ ಪ್ಲಾನ್‍ಗೆ ಜೈಲಾಧಿಕಾರಿಗಳು ಫುಲ್ ಸಪೋರ್ಟ್ ಮಾಡಿದ್ದಾರೆ.

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಸುಳ್ವಾಡಿ ವಿಷಪ್ರಸಾದ ದುರಂತ ನಡೆದು 5 ತಿಂಗಳಾಯಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿಯಲು ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ಇತರ ಮೂವರು ಸೇರಿ ಮಾಡಿದ ಪಿತೂರಿಗೆ 17 ಮಂದಿ ಬಲಿಯಾಗಿ 112 ಮಂದಿ ಅಸ್ವಸ್ಥರಾಗಿದ್ದರು. ವಿಷವಿಕ್ಕಿದ ಪಾಪಿಗಳು ಜೈಲಲ್ಲಿದ್ದಾರೆ. ಆದರೆ ಇಮ್ಮಡಿ ಮಹದೇವಸ್ವಾಮಿ ಮಾತ್ರ ಜೈಲಿನಲ್ಲಿ ಇದ್ದುಕೊಂಡೇ ಸಾಲೂರು ಮಠದ ಆಸ್ತಿಯನ್ನು ತನ್ನ ವೈಯಕ್ತಿಕ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

     

    1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಲ್ಲಿ ಲಿಂಗಣಾಪುರ ಎಂಬಲ್ಲಿ 2 ಎಕರೆ 44 ಸೆಂಟ್ಸ್ ಜಮೀನನ್ನು ಖರೀದಿಸಿದ್ದನು. ಆದರೆ ಈಗ ಈತ ಜೈಲಿಂದ ಹೇಗಾದ್ರೂ ಹೊರಬರಲು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಮಾರಾಟ ಮಾಡಲು ಇದೇ ಮೇ 3ರಂದು ತನ್ನ ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

    2018ರ ಫೆಬ್ರವರಿ 20 ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದ. ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ 1 ವರ್ಷವಾದ್ರೂ ಅರ್ಜಿಯ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ 2 ವಾರಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

  • ದೇವಸ್ಥಾನದಿಂದ 1 ಲಕ್ಷಕ್ಕೂ ಹೆಚ್ಚು ಹಣ, 1.5 ಕೆ.ಜಿಯ ಬೆಳ್ಳಿ ಕಿರೀಟ ಕಳವು!

    ದೇವಸ್ಥಾನದಿಂದ 1 ಲಕ್ಷಕ್ಕೂ ಹೆಚ್ಚು ಹಣ, 1.5 ಕೆ.ಜಿಯ ಬೆಳ್ಳಿ ಕಿರೀಟ ಕಳವು!

    ಕೋಲಾರ: ನಗರದಲ್ಲಿರುವ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ರಾತ್ರಿ ಕಿಡಿಗೇಡಿಗಳು ಹುಂಡಿ ಕಳವು ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗನಿಬಂಡೆ ಗ್ರಾಮದ ವೆಂಕಟರಮಣ ದೇವಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಳೆದ ರಾತ್ರಿ ದೇವಾಲಯದ ಬಾಗಿಲು ಮುರಿದು ಹುಂಡಿ ಕಳವು ಮಾಡಿದರುವ ಕಳ್ಳರು, ಸುಮಾರು 1 ಲಕ್ಷಕ್ಕೂ ಹೆಚ್ಚು ಹಣ ಮತ್ತು ದೇವರ ಮೇಲೆ ಅಲಂಕರಿಸಿದ್ದ 1.5 ಕೆ ಜಿಯ ಬೆಳ್ಳಿ ಕಿರೀಟ ಕಳವು ಮಾಡಿದ್ದಾರೆ.

    ಇಂದು ಬೆಳಗ್ಗೆ ಪೂಜಾರಿ ಶ್ರೀನಾಥ್ ದೇವಾಲಯದ ಬಾಗಿಲು ತೆರೆದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಭಕ್ತರಂತೆ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ ಹಸು

    ಭಕ್ತರಂತೆ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ ಹಸು

    ಶಿವಮೊಗ್ಗ: ಭಕ್ತರಂತೆ ಒಂದು ಹಸು ದೇವಾಲಯಕ್ಕೆ ಬಂದು ಗಂಟೆ ಬಾರಿಸಿ ಹೋಗಿರುವ ಕೌತುಕಮಯ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಡಿ.ಬಿ ಹಳ್ಳಿಯಲ್ಲಿ ನಡೆದಿದೆ.

    ಇಲ್ಲಿರುವ ವೀರಭದ್ರಸ್ವಾಮಿ ಹಾಗೂ ಮುಗ್ದ ಸಂಮೇಶ್ವರ ಸ್ವಾಮೀಜಿಗಳ ಗದ್ದಿಗೆ ಇರುವ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಗ್ರಾಮದ ಮಂಜಪ್ಪ ಎಂಬವರಿಗೆ ಸೇರಿದ ಈ ಹಸು ಗಂಟೆ ಬಾರಿಸಿದ ವಿಷಯ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಆದಾಗ ಶರಣ ದೊಂಬರ ಚನ್ನಮ್ಮ ಈ ಊರಿಗೆ ಬಂದು ನೆಲೆಸಿದರು ಎನ್ನಲಾಗಿದೆ. ಈ ಕಾರಣದಿಂದ ಗ್ರಾಮಕ್ಕೆ ದೊಂಬರ ಭೈರನಹಳ್ಳಿ ಎಂದು ಹೆಸರಿಡಲಾಗಿದೆ. ಆಗಿನ ಕಾಲದಿಂದಲೂ ಈ ದೇವಾಲಯದಲ್ಲಿ ಪವಾಡಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಅಪ್ಪಣೆ ಕೇಳುವ ವಿಷಯದಲ್ಲಿ ಈ ದೇವಾಲಯ ಖ್ಯಾತಿ ಪಡೆದಿದೆ. ಬೇಕು ಬೇಡಗಳನ್ನು ಎಡ-ಬಲ ಹೂ ಕೊಟ್ಟು ಹೇಳುವ ಈ ದೇವರು ಗ್ರಾಮಸ್ಥರ ಅಚ್ಚುಮೆಚ್ಚು. ಈಗ ಹಸು ಗಂಟೆ ಬಾರಿಸಿರುವುದು ದೇವಾಲಯದ ಬಗ್ಗೆ ಇದ್ದ ಭಕ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ರಾಮನಗರದಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ – ಬೆಂಕಿ ಕೆಂಡದಲ್ಲಿ ಬಿದ್ದ ಅರ್ಚಕನಿಗೆ ಗಂಭೀರ ಗಾಯ

    ರಾಮನಗರದಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ – ಬೆಂಕಿ ಕೆಂಡದಲ್ಲಿ ಬಿದ್ದ ಅರ್ಚಕನಿಗೆ ಗಂಭೀರ ಗಾಯ

    ರಾಮನಗರ: ಜಿಲ್ಲೆಯಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ ಜರುಗಿದ್ದು, ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ಬೆಂಕಿ ಕೆಂಡದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಸ್ವಗ್ರಾಮದಲ್ಲಿ ನಡೆದಿದೆ.

    ಅರ್ಚಕ ಬಸವರಾಜ್ ಅಗ್ನಿಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವರಾಜ್ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಅರ್ಚರಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಇಂದು ಬಸವೇಶ್ವರ ದೇವರ ಅಗ್ನಿಕೊಂಡ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ರಾತ್ರಿ ಗ್ರಾಮದಲ್ಲೆಲ್ಲ ಎಳವಾರವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಬೆಳಗ್ಗೆ ಗ್ರಾಮದ ಜನರಲ್ಲದೇ ಅಕ್ಕಪಕ್ಕದ ಗ್ರಾಮದ ನೂರಾರು ಜನರು ಅಗ್ನಿಕೊಂಡ ಮಹೋತ್ಸವ ನೋಡಲು ಆಗಮಿಸಿದ್ರು. ಕಳೆದ ನಾಲ್ಕು ವರ್ಷಗಳಿಂದ ಬಸವೇಶ್ವರ ದೇವರ ಅಗ್ನಿಕೊಂಡ ಹಾಯುತ್ತಿದ್ದ ಬಸವರಾಜ್ ಇಂದು ಕೂಡ ಅಗ್ನಿಕೊಂಡ ಹಾಯುವ ಕಾರ್ಯದಲ್ಲಿದ್ರು.

    ರಾತ್ರಿಯೆಲ್ಲಾ ಕಟ್ಟಿಗೆಗಳನ್ನಾಕಿ ಸುಟ್ಟು ಬೆಂಕಿ ಕೆಂಡವನ್ನು ಮಾಡಲಾಗಿತ್ತು. ಬೆಳಗ್ಗಿನ ವೇಳೆ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ನಾಲ್ಕು ಹೆಜ್ಜೆಗಳನ್ನಿಟ್ಟು ಓಡುವ ವೇಳೆ ಅಗ್ನಿಕೊಂಡದಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ನಂತರ ತಡಬಡಿಸಿ ಎದ್ದು ಅಗ್ನಿಕೊಂಡದಿಂದ ಹೊರಗೆ ಓಡಿ ಬಂದಿದ್ದು ಬೆಂಕಿ ಕೆಂಡದಲ್ಲಿ ಬಿದ್ದ ರಭಸಕ್ಕೆ ಮೈ-ಕೈ ಎಲ್ಲವೂ ಸಹ ಬೆಂಕಿ ಕೆಂಡದಿಂದ ಸುಟ್ಟಿದೆ. ಇನ್ನೂ ಗಂಭೀರವಾಗಿ ಗಾಯಗೊಂಡಿರುವ ಅರ್ಚಕ ಬಸವರಾಜ್‍ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

    ಇದೇ ತಿಂಗಳ 2ರಂದು ಮಾಗಡಿ ತಾಲೂಕಿನ ಕುದೂರಿನ ಕುದೂರಮ್ಮ ದೇವಿ ಅಗ್ನಿಕೊಂಡ ಮಹೋತ್ಸವದಲ್ಲಿ ಹರಕೆಯೊತ್ತು ದೇವಿಯ ಅಗ್ನಿಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತನೋರ್ವ ಅಗ್ನಿಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ದೇವಿಭಕ್ತ ರಮೇಶ್ ಅಗ್ನಿಕೊಂಡ 52ನೇ ಭಕ್ತನಾಗಿ ಅಗ್ನಿಕೊಂಡ ಹಾಯುವ ವೇಳೆ ಆಯ ತಪ್ಪಿ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದರು. ಅಲ್ಲದೇ ಬಿದ್ದ ಬಳಿಕ ಅಗ್ನಿಕೊಂಡದಲ್ಲಿ ಎದ್ದು ಮತ್ತೆ ಓಡುವ ವೇಳೆ ಎರಡು ಬಾರಿ ಬೆಂಕಿ ಕೆಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸುಟ್ಟಗಾಯಗಳಿಗೆ ಒಳಗಾಗಿರುವ ರಮೇಶ್‍ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ವೈಭವಪೂರ್ಣವಾಗಿ ನಡೆಯಿತು ಬೆಂಗಳೂರಿನ ಕರಗ ಮಹೋತ್ಸವ

    ವೈಭವಪೂರ್ಣವಾಗಿ ನಡೆಯಿತು ಬೆಂಗಳೂರಿನ ಕರಗ ಮಹೋತ್ಸವ

    ಬೆಂಗಳೂರು: ಚೈತ್ರ ಪೂರ್ಣಿಮೆಯ ದಿನವಾದ ಶುಕ್ರವಾರ ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬೆಂಗಳೂರು ಕರಗ ಮಹೋತ್ಸವ ವೈಭವಪೂರ್ಣವಾಗಿ ನಡೆಯಿತು.

    ಕರಗ ಹೊತ್ತಿದ್ದ ಅರ್ಚಕ ಎನ್. ಮನು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ಗೋವಿಂದಾ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿದರು.

    ಅವೆನ್ಯೂ ರಸ್ತೆಯಿಂದ ಆರಂಭವಾದ ಕರಗದ ಮೆರವಣಿಗೆ, ಕಬ್ಬನ್ ಪಾರ್ಕ್ ಆಂಜನೇಯ ದೇವಾಲಯ, ಸಿದ್ದಣ್ಣ ಗಲ್ಲಿಯಿಂದ ಅವೆನ್ಯೂ ರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆ ಮೂಲಕ ಬೆಳಗಿನ ಜಾವ 6 ಗಂಟೆಗೆ ಮತ್ತೆ ದೇವಾಲಯ ತಲುಪಿತು. ಈ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು.

  • ದೇವಸ್ಥಾನಕ್ಕೆ ಕರ್ಕೊಂಡು ಬಂದು ಪತಿಯಿಂದ್ಲೇ ಪತ್ನಿ ಹತ್ಯೆ

    ದೇವಸ್ಥಾನಕ್ಕೆ ಕರ್ಕೊಂಡು ಬಂದು ಪತಿಯಿಂದ್ಲೇ ಪತ್ನಿ ಹತ್ಯೆ

    ಹಾವೇರಿ: ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ನಂತರ ಅನುಮಾನ ಬಾರದಂತೆ ಆಕೆಯ ಸೀರೆಯಿಂದ ಕುತ್ತಿಗೆ ಬಿಗಿದಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ.

    ಶಿವಮೊಗ್ಗ ತಾಲೂಕಿನ ಭದ್ರಾಪುರ ನಿವಾಸಿ ಗಾಯತ್ರಿ(27) ಪತಿಯಿಂದಲೇ ಹತ್ಯೆಯಾದ ಪತ್ನಿ. ಪತಿ ಸತೀಶ್ ಎಂಬಾತನಿಂದ ಹತ್ಯೆ ನಡೆದಿದೆ. ಆರೋಪಿ ಸತೀಶ್ ಭಾನುವಾರ ಬೈಕ್ ಮೇಲೆ ರಾಣೇಬೆನ್ನೂರು ತಾಲೂಕು ದೇವರಗುಡ್ಡದ ಮಾಲತೇಶ ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಗಾಯತ್ರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಮೂರು ವರ್ಷಗಳ ಹಿಂದೆ ಗಾಯಿತ್ರಿ ಮತ್ತು ಸತೀಶ್‍ಗೆ ಮದುವೆಯಾಗಿತ್ತು. ಆದರೆ ಇತ್ತೀಚೆಗೆ ಆರೋಪಿ ಸತೀಶ್ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದನು. ಈ ಕಾರಣದಿಂದ ಕೊಲೆ ಮಾಡಿರಬಹುದು ಎಂದು ತಿಳಿದು ಬಂದಿದೆ.

    ಸದ್ಯಕ್ಕೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಸತೀಶ್‍ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸೌಕೂರು ದುರ್ಗಾಪರಮೇಶ್ವರಿಗೆ ಸಿಎಂ ಪೂಜೆ

    ಸೌಕೂರು ದುರ್ಗಾಪರಮೇಶ್ವರಿಗೆ ಸಿಎಂ ಪೂಜೆ

    ಉಡುಪಿ: ಲೋಕಸಭಾ ಚುನಾವಣಾ ಅಖಾಡದಲ್ಲಿ ಬ್ಯುಸಿಯಾಗಿರುವ ಸಿಎಂ ಕುಮಾರಸ್ವಾಮಿ ರಾಜಕೀಯದ ನಡುವೆಯೂ ದೇವರು, ದೇವಸ್ಥಾನ ಮರೆತಿಲ್ಲ. ಪ್ರಚಾರದ ನಡುವೆ ಕುಂದಾಪುರದ ಸೌಕೂರು ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಇಂದು ಕೊಪ್ಪ ಪ್ರವಾಸ ಮಾಡಲಿದ್ದಾರೆ. ಮಾರ್ಗ ಮಧ್ಯೆ ಕುಂದಾಪುರ ತಾಲೂಕಿನ ಸೌಕೂರು ದೇವಸ್ಥಾನಕ್ಕೆ ಸಿಎಂ ಭೇಟಿ ಕೊಟ್ಟಿದ್ದಾರೆ.

    ರಾತ್ರಿ ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ ಬಂದ ಸಿಎಂ ಕುಮಾರಸ್ವಾಮಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಸಂದರ್ಭದಲ್ಲಿ ಪುತ್ರ ನಿಖಿಲ್, ತಂದೆ ದೇವೇಗೌಡ ಸೇರಿದಂತೆ ಕುಟುಂಬದ ಒಳಿತು ಮತ್ತು ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಸಿಎಂ ಜೊತೆ ವಿಧಾನಪರಿಷತ್ ಸದಸ್ಯ ಭೋಜೇಗೌಡ ಮತ್ತು ಸ್ಥಳೀಯ ಜೆಡಿಎಸ್, ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಕೆಲ ಹೊತ್ತು ದೇವಸ್ಥಾನದಲ್ಲಿದ್ದು ನಂತರ ಸಿಎಂ ಕುಮಾರಸ್ವಾಮಿ ಕೊಪ್ಪಕ್ಕೆ ತೆರಳಿದ್ದಾರೆ.