Tag: ದೇವಸ್ಥಾನ

  • ಗರ್ಭಗುಡಿ ಬಾಗಿಲು ಮುರಿದು ದೇವರ ಆಭರಣ ದೋಚಿದ ಕಳ್ಳರು

    ಗರ್ಭಗುಡಿ ಬಾಗಿಲು ಮುರಿದು ದೇವರ ಆಭರಣ ದೋಚಿದ ಕಳ್ಳರು

    ಹಾಸನ: ಗರ್ಭಗುಡಿಯ ಬಾಗಿಲು ಮುರಿದ ಕಳ್ಳರು ದೇವರ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆರೆಕೋಡಿಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಗ್ರಾಮದ ಹೊರಭಾಗದಲ್ಲಿ ಇರುವ ಚೋಣುರಯ್ಯ ದೇವಾಲಯದ ಗರ್ಭಗುಡಿಯ ಬಾಗಿಲು ಒಡೆದು ಆಭರಣ ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ದೇವಸ್ಥಾನದ ಪೂಜಾರಿಯಾದ ಮಹದೇವ್ ಅವರು ದೇವಾಲಯಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

    ದೇವಸ್ಥಾನದ ಬೀಗವನ್ನು ಬ್ಲೇಡ್ ಉಪಯೋಗಿಸಿ ಕಟ್ ಮಾಡಿರುವ ಕಳ್ಳರು ನಂತರ ಗರ್ಭಗುಡಿಯ ಬಾಗಿಲನ್ನು ಮುರಿದು ಸುಮಾರು ಒಂದು ಲಕ್ಷ ಬೆಲೆ ಬಾಳುವ ದೇವರ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಇತ್ತೀಚಿಗೆ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಸ್ಥಾನದ ಬಾಗಿಲು ಮುರಿದು ಕಳ್ಳತನ

    ದೇವಸ್ಥಾನದ ಬಾಗಿಲು ಮುರಿದು ಕಳ್ಳತನ

    ಕಾರವಾರ: ಬಾಗಿಲು ಒಡೆದು ಕಳ್ಳತನ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ್‍ನ ದೇವಕಿ ಕೃಷ್ಣ ದೇವಸ್ಥಾನದಲ್ಲಿ ನಡೆದಿದೆ.

    ದೇವಸ್ಥಾನದ ಮುಂಭಾಗದ ಬಾಗಿಲು ಒಡೆದು ಒಳ ಹೊಕ್ಕ ಕಳ್ಳರು ದೇವಸ್ಥಾನ ಗರ್ಭಗುಡಿಗೆ ಲೇಪಿಸಿದ್ದ ಬೆಳ್ಳಿ ಬಾಗಿಲು, ಕಾಣಿಕೆ ಹುಂಡಿಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ.

    ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಶ್ವಾನದಳ ಹಾಗೂ ಕುಮಟಾ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಶಿವಲಿಂಗದ ಮೇಲೆ ಚಿಮ್ಮಿದ ರಕ್ತ- ನಿಧಿಗಾಗಿ ಮೂರು ನರಬಲಿ ಪಡೆದಿರುವ ಶಂಕೆ

    ಶಿವಲಿಂಗದ ಮೇಲೆ ಚಿಮ್ಮಿದ ರಕ್ತ- ನಿಧಿಗಾಗಿ ಮೂರು ನರಬಲಿ ಪಡೆದಿರುವ ಶಂಕೆ

    ಹೈದರಾಬಾದ್: ಶಿವಲಿಂಗದ ಮೇಲೆ ರಕ್ತ ಚಿಮ್ಮಿರುವ ಭೀಕರ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

    ಶಿವನ ದೇಗುಲದ ಆವರಣದಲ್ಲಿ ಅರ್ಚಕ ಸೇರಿದಂತೆ ಮೂರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೋಮವಾರದಂದು ಜಿಲ್ಲೆಯ ಕೊಡಿತಿಕಿಟ ಗ್ರಾಮದ ಶಿವನ ದೇಗುಲದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

    ದೇವಸ್ಥಾನದ ಆವರಣದಲ್ಲಿ ಅರ್ಚಕರಾದ ಶಿವರಾಮಿ ರೆಡ್ಡಿ(70), ಕೆ. ಕಮಲಮ್ಮ(75) ಮತ್ತು ಲಕ್ಷ್ಮಮ್ಮ(70) ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಲ್ಲದೆ ದೇವಸ್ಥಾನದಲ್ಲಿರುವ ಶಿವಲಿಂಗದ ಮೇಲೆ ರಕ್ತದ ಚಿಮ್ಮಿರುವುದು ಕೂಡ ಕಂಡುಬಂದಿದ್ದು, ನಿಗೂಢ ನಿಧಿಗಾಗಿ ದುಷ್ಕರ್ಮಿಗಳು ನರಬಲಿ ಪಡೆದಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

    ಬೆಂಗಳೂರಿನಲ್ಲಿ ನೆಲಸಿದ್ದ ಲಕ್ಷ್ಮಮ್ಮ ತಮ್ಮ ಹರಕೆ ತೀರಿಸಲು ಕೊಡಿತಿಕಿಟ ಗ್ರಾಮದ ಶಿವನ ದೇವಸ್ಥಾನಕ್ಕೆ ಭಾನುವಾರವಷ್ಟೇ ಬಂದಿದ್ದರು ಎನ್ನಲಾಗಿದ್ದು, ಹರಕೆ ತೀರಿಸಲು ಬಂದು ಮಸಣ ಸೇರಿದ್ದಾರೆ. ದೇಗುಲದ ಆವರಣದ ಬೇರೆ ಬೇರೆ ಕಡೆಯಲ್ಲಿ ಮೂವರ ಮೃತದೇಹವು ಪತ್ತೆಯಾಗಿದೆ.

    ಇದನ್ನು ಕಂಡು ಆತಂಕಕ್ಕೊಳಗಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತದೇಹಗಳು ಸಿಕ್ಕಿರುವ ಸ್ಥಿತಿ ಹಾಗೂ ಶಿವಲಿಂಗದ ಮೇಲೆ ರಕ್ತ ಸಿಂಚಿಸಿರುವ ದೃಶ್ಯವನ್ನು ನೋಡಿದ ಜನರು, ಈ ಕೊಲೆಗಳನ್ನು ನಿಧಿಗಾಗಿ ಮಾಡಿದ್ದಾರೆ. ನಿಧಿ ಪಡೆಯಲು ನರಬಲಿ ನೀಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಾಮಾಚಾರಕ್ಕೂ ಕೂಡ ಹತ್ಯೆ ಮಾಡಿರಬಹುದಾ? ನರಬಲಿ ಎಂದು ಈ ದುಷ್ಕೃತ್ಯ ಎಸಗಿರಬಹುದಾ? ಎಂಬ ಶಂಕೆ ಪೊಲೀಸರಲ್ಲೂ ಮೂಡಿದೆ.

  • ಚಂದ್ರಗ್ರಹಣ – ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಪೂಜಾ ಸಮಯ ಬದಲು

    ಚಂದ್ರಗ್ರಹಣ – ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಪೂಜಾ ಸಮಯ ಬದಲು

    ಮಂಗಳೂರು: ಇಂದು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಪೂಜಾ ಸಮಯ ಬದಲಾಗಿದೆ.

    ಚಂದ್ರಗ್ರಹಣ ಇರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ಪೂಜೆ 6.30ಕ್ಕೆ ಮುಕ್ತಾಯವಾಗಲಿದೆ. ಅಲ್ಲದೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ಕೂಡ ರದ್ದು ಮಾಡಲಾಗಿದೆ. ಧರ್ಮಸ್ಥಳದಲ್ಲೂ ಕೂಡ ಪೂಜೆ ಹಾಗೂ ಅನ್ನ ಸಂತರ್ಪಣೆ ರಾತ್ರಿ 8.30ಕ್ಕೆ ಮುಕ್ತಾಯವಾಗಲಿದೆ.

    ಇತ್ತ ಕಟೀಲು ದೇವಸ್ಥಾನದಲ್ಲಿ ರಾತ್ರಿ ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ನಿಗದಿತ ಹೂವಿನ ಪೂಜೆ ಹಾಗೂ ರಂಗಪೂಜೆ ಸೇವೆಗಳೂ ರದ್ದಾಗಿದೆ. ಕಟೀಲು ದೇಗುಲದಲ್ಲಿ ರಾತ್ರಿ ಊಟದ ವ್ಯವಸ್ಥೆಯೂ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

    ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ವರ್ಷದ 2ನೇ ಚಂದ್ರಗ್ರಹಣ ಇದಾಗಿದ್ದು, ದಕ್ಷಿಣ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ, ಯೂರೋಪ್, ಆಸ್ಟ್ರೇಲಿಯಾದಲ್ಲಿ ಗೋಚರವಾಗುವುದು. ಒಟ್ಟು 2 ಗಂಟೆ 58 ನಿಮಿಷಗಳ ಕಾಲ ಸಂಭವಿಸುವ ಗ್ರಹಣದ ಸಮಯದಲ್ಲಿ ಚಂದ್ರನ ಕಾಂತಿಯಲ್ಲಿ ಶೇ.65 ವ್ಯತ್ಯಾಸ ಗೋಚರವಾಗಲಿದೆ.

    ಇದೇ ವರ್ಷದ ಜನವರಿ 6 ರಂದು ಸಂಪೂರ್ಣ ಚಂದ್ರಗಹಣ ಸಂಭವಿಸಿತ್ತು. ಈ ಗ್ರಹಣದಿಂದ ಯಾವುದೇ ಪ್ರಾಕೃತಿಕ ವಿಕೋಪಗಳು ಆಗುವುದಿಲ್ಲ. ಗ್ರಹಣದಿಂದ ಯಾವುದೇ ನೈಸರ್ಗಿಕ ಬದಲಾವಣೆಗಳು ಜರುಗುವುದಿಲ್ಲ. ಇದು ಆಕಾಶದಲ್ಲಿ ನಡೆಯುವ ನೈಸರ್ಗಿಕ ಕ್ರಿಯೆ ಎಂದು ಖಗೋಳಶಾಸ್ತ್ರಜ್ಞ ಸುಬ್ರಮಣ್ಯ ಹೇಳಿದ್ದಾರೆ.

    ಗ್ರಹಣದ ಸಮಯ
    ಸ್ಪರ್ಶಕಾಲ : ರಾತ್ರಿ 1.30 ಕ್ಕೆ.
    ಮಧ್ಯಕಾಲ : ರಾತ್ರಿ 3.00 ಕ್ಕೆ
    ಮೋಕ್ಷಕಾಲ : ರಾತ್ರಿ 4.30 ಕ್ಕೆ

  • ಬಿ.ಸಿ ಪಾಟೀಲ್ ಮರಳಿ ಬರುವಂತೆ ಕೈ ಕಾರ್ಯಕರ್ತರ ಪ್ರತಿಭಟನೆ

    ಬಿ.ಸಿ ಪಾಟೀಲ್ ಮರಳಿ ಬರುವಂತೆ ಕೈ ಕಾರ್ಯಕರ್ತರ ಪ್ರತಿಭಟನೆ

    ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಶಾಸಕ ಬಿ.ಸಿ ಪಾಟೀಲ್ ಮರಳಿ ಬರುವಂತೆ ಆಗ್ರಹಿಸಿ ಹಿರೇಕೆರೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪಾಟೀಲ್ ಮರಳಿ ಬನ್ನಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಬಿ.ಸಿ ಪಾಟೀಲ್ ಅವರು ಮುಂಬೈಯಿಂದ ಮರಳಿ ಬಂದು ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ. ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಕೈ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ಆಗಿದೆ. ಈ ಬಾರಿ ಸಚಿವ ಸ್ಥಾನ ಖಚಿತವಾಗಿ ಕಾಂಗ್ರೆಸ್ ಪಕ್ಷ ನೀಡುತ್ತದೆ, ಬನ್ನಿ ಎಂದು ಮುಖಂಡರು ಕರೆಯುತ್ತಿದ್ದಾರೆ. ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ರಾಜೀನಾಮೆ ನೀಡಿದ ಬಳಿಕ ಬಿ.ಸಿ ಪಾಟೀಲ್ ಅವರು ಉಳಿದ ಅತೃಪ್ತ ಶಾಸಕರ ಜೊತೆ ಮುಂಬೈನ ಹೋಟೆಲಿನಲ್ಲಿ ತಂಗಿದ್ದಾರೆ. ಬಿ.ಸಿ ಪಾಟೀಲ್ ಅವರು ಶುಕ್ರವಾರ ಶಾಸಕರಾದ ಬೈರತಿ ಬಸವರಾಜ್, ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಜೊತೆ ಮುಂಬೈನ ಬಾಂದ್ರದಲ್ಲಿರುವ ಸಿದ್ಧಿವಿನಾಯಕ ದರ್ಶನ ಪಡೆದು ಸಂಕಷ್ಟ ನಿವಾರಿಸಲು ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಅವರು ಶಿರಡಿ ಹಾಗೂ ಐತಿಹಾಸಿಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

  • ಶಿರಡಿ ಸಾಯಿಬಾಬಾನ ದರ್ಶನ ಪಡೆದು ಅತೃಪ್ತರಿಂದ ಶಪಥ

    ಶಿರಡಿ ಸಾಯಿಬಾಬಾನ ದರ್ಶನ ಪಡೆದು ಅತೃಪ್ತರಿಂದ ಶಪಥ

    ಮುಂಬೈ: ಕಳೆದ ಒಂದು ವಾರದಿಂದ ಮುಂಬೈನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ ಅತೃಪ್ತ ಶಾಸಕರು ಇಂದು ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇಂದು ಶಾಸಕರು ಶಿರಡಿ ಸಾಯಿ ಬಾಬಾನ ದರ್ಶನ ಮಾಡಿ ಶಪಥ ಮಾಡಿದ್ದಾರೆ.

    ಇಂದು ಬೆಳಗ್ಗೆ ಅತೃಪ್ತ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈನಿಂದ ಶಿರಡಿಗೆ ತೆರಳಿದ್ದರು. ಈ ವೇಳೆ ಸಾಯಿ ಬಾಬಾನ ದರ್ಶನ ಪಡೆದ ಅವರು, ವಿಶ್ವಾಸಮತ ಯಾಚನೆ ವೇಳೆ ನಾವು ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗುವುದಿಲ್ಲ. ಬಹುಮತಯಾಚನೆ ವೇಳೆ ನಾವು ಗೈರಾಗುತ್ತೇವೆ. ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯಲೇಬಾರದು. ರಾಜೀನಾಮೆ ಕೊಟ್ಟು ವಿಶ್ವಾಸಮತಯಾಚನೆ ವೇಳೆ ಹಾಜರಾದರೆ ಅರ್ಥನೇ ಇಲ್ಲ ಎಂದು ಶಪಥ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅತೃಪ್ತ ಶಾಸಕರು ಶಿರಡಿ ಸಾಯಿ ಬಾಬಾನ ದರ್ಶನ ಪಡೆದ ನಂತರ ಶನಿಶಿಂಗ್ನಾಪುರಕ್ಕೆ ತೆರಳಿದ್ದಾರೆ. ನಂತರ ಅಲ್ಲಿಂದ ಅಜಂತಾ, ಎಲ್ಲೋರಾ ಗುಹಾಂತರ ದೇಗುಲಗಳಿಗೆ ಭೇಟಿ ಕೊಟ್ಟಿದ್ದಾರೆ. ಇಂದು ರಾತ್ರಿ ಔರಂಗಾಬಾದ್‍ನಲ್ಲಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ನಂತರ ಭಾನುವಾರ ನಾಸಿಕ್‍ನ ತ್ರಯಂಬಕೇಶ್ವರನ ದರ್ಶನ ಮುಗಿಸಿ ಸಂಜೆ ಮತ್ತೆ ಮುಂಬೈಗೆ ವಾಪಸ್ ಆಗಲಿದ್ದಾರೆ.

    ಶುಕ್ರವಾರ ಮುಂಬೈನ ರಿನೈಸನ್ಸ್ ಹೋಟೆಲ್‍ನಿಂದ ಹೊರ ಬಂದ ರೆಬೆಲ್ ಶಾಸಕರಾದ ಬಿ.ಸಿ ಪಾಟೀಲ್, ಬೈರತಿ ಬಸವರಾಜ್, ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಸಂಕಷ್ಟ ನಿವಾರಿಸಲು ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಮುಂಬೈನ ಬಾಂದ್ರದಲ್ಲಿರುವ ಸಿದ್ಧಿವಿನಾಯಕ ದರ್ಶನ ಪಡೆದ ನಾಲ್ವರು ಶಾಸಕರು ನಂತರ ಮುಂಬೈನ ದಾದರ್ ನಲ್ಲಿರುವ ಗೋವಾ ಪೋರ್ಚುಗೀಸ್ ಹೋಟೆಲಿನಲ್ಲಿ ಊಟ ಮುಗಿಸಿ ಮತ್ತೆ ರಿನೈಸನ್ಸ್ ಕಡೆ ತೆರಳಿದ್ದರು.

  • ಶೃಂಗೇರಿ ನಂತರ ತಿರುಪತಿ ತಿಮ್ಮಪ್ಪನ ಮೊರೆ ಹೋದ ರೇವಣ್ಣ

    ಶೃಂಗೇರಿ ನಂತರ ತಿರುಪತಿ ತಿಮ್ಮಪ್ಪನ ಮೊರೆ ಹೋದ ರೇವಣ್ಣ

    ಬೆಂಗಳೂರು: ಸರ್ಕಾರ ಉಳಿಯಲಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.

    ರೇವಣ್ಣ ಅವರು ಇಂದು ಬೆಳ್ಳಂಬೆಳಗ್ಗೆ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ, ಹೇಗಾದರೂ ಮಾಡಿ ಸರ್ಕಾರ ಉಳಿಸಪ್ಪ ಎಂದು ಬೇಡಿಕೊಂಡಿದ್ದಾರಂತೆ. ಅಲ್ಲದೆ ಕಳೆದ ಆರು ದಿನಗಳಿಂದ ಬರಿಗಾಲಲ್ಲೇ ಓಡಾಡುತ್ತಿರೋ ರೇವಣ್ಣ ಅವರಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಬುಧವಾರ ತಿರುಪತಿಗೆ ಹೋಗುವ ಮುನ್ನ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಗುತ್ತಿಗೆದಾರರಿಗೆ 1,500 ಕೋಟಿ ರೂ. ಬಿಲ್ ಚುಕ್ತಾ ಮಾಡಿದ್ದಾರೆ ಎನ್ನಲಾಗಿದೆ.

    ಮಂಗಳವಾರ ಬೆಳಗ್ಗೆಯೇ ರೇವಣ್ಣ ಅವರು ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟದ ದೇವರಾಗಿದ್ದು, ಹೀಗಾಗಿ ಒಂದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಬಂದು ಪೂಜೆ ಸಲ್ಲಿಸಿದ್ದರು.

    ಈ ಹಿಂದೆ ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ನಂತರ ಸರ್ಕಾರಕ್ಕೆ ಸಂಚಕಾರ ಬಂದಾಗ ದೇವೇಗೌಡರು ಒಂದೊಂದು ಯಾಗ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕೂಡ ಶೃಂಗೇರಿಯಲ್ಲಿ ಮೂರ್ನಾಲ್ಕು ಯಾಗ ಮಾಡಿಸಿದ್ದರು. ಗುರುವಾರ ಸಚಿವ ರೇವಣ್ಣ ಮತ್ತೆ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ದರು.

  • ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ

    ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ

    ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇತ್ತ ಸರ್ಕಾರ ಉಳಿಸಲು ರೇವಣ್ಣ ದೇವರ ಮೊರೆ ಹೋಗಿದ್ದಾರೆ.

    ಇಂದು ಬೆಳಗ್ಗೆಯೇ ರೇವಣ್ಣ ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟದ ದೇವರಾಗಿದ್ದು, ಹೀಗಾಗಿ ಒಂದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಬಂದು ಪೂಜೆ ಸಲ್ಲಿಸಿದ್ದಾರೆ.

    ಈ ಹಿಂದೆ ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ನಂತರ ಸರ್ಕಾರಕ್ಕೆ ಸಂಚಕಾರ ಬಂದಾಗ ದೇವೇಗೌಡರು ಒಂದೊಂದು ಯಾಗ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕೂಡ ತಮ್ಮ ಕುರ್ಚಿ ಉಳಿವಿಗಾಗಿ ಶೃಂಗೇರಿಯಲ್ಲಿ ಮೂರ್ನಾಲ್ಕು ಯಾಗ ಮಾಡಿಸಿದ್ದರು. ಇಂದು ರೇವಣ್ಣ ಮತ್ತೆ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ದಾರೆ.

    ವಿಧಾನ ಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗಳನ್ನು ಶೃಂಗೇರಿಗೆ ತಂದು ಪೂಜೆ ಮಾಡಿ ಬಳಿಕ ನಾಮಪತ್ರ ಸಲ್ಲಿಸಲಾಗಿತ್ತು.

    ಇತ್ತ ಮಾಜಿ ಪ್ರಧಾನಿ ದೇವೇಗೌಡರು ಕೂಡ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಈಶ್ವರನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಪದ್ಮನಾಭ ನಗರದ ಮನೆಯಿಂದ ಹೋಗಿ ಪೂಜೆ ಮಾಡಿಸಿ ಬಂದಿದ್ದರು.

  • ಮಹಾರಾಷ್ಟ್ರದಲ್ಲಿ ಭಾರೀ ಮಳೆ – ಚಿಕ್ಕೋಡಿಯಲ್ಲಿ ದೇವಸ್ಥಾನ ಜಲಾವೃತ, ತುಂಬಿದ ನದಿಗಳು

    ಮಹಾರಾಷ್ಟ್ರದಲ್ಲಿ ಭಾರೀ ಮಳೆ – ಚಿಕ್ಕೋಡಿಯಲ್ಲಿ ದೇವಸ್ಥಾನ ಜಲಾವೃತ, ತುಂಬಿದ ನದಿಗಳು

    ಚಿಕ್ಕೋಡಿ/ಬೆಳಗಾವಿ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ಪಂಚಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ.

    ನದಿಗಳು ತುಂಬಿ ಹರಿಯುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದೂಧಗಂಗಾನದಿ ದಡದಲ್ಲಿರುವ ಯಕ್ಸಂಬಾ ಪಟ್ಟಣದ ಹೊರ ಪೀರಸಾಬ ದರ್ಗಾ ಹಾಗೂ ಪಂಚ ಗಂಗಾನದಿ ತಟದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಸುಪ್ರಸಿದ್ಧ ನರಸಿಂಹವಾಡಿಯ ದತ್ತ ದೇವಸ್ಥಾನ ಜಲಾವೃತಗೊಂಡಿವೆ.

    ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ಉಪ ನದಿಗಳ 40ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಈಗಾಗಲೇ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ_ ಯಡೂರ, ದೂಧಗಂಗಾ ನದಿಯ ಕಾರದಗಾ_ ಭೋಜ, ವೇದಗಂಗಾ ನದಿಯ ಭೊಜವಾಡಿ_ ಕುಣ್ಣೂರ, ವೇದಗಂಗಾ ನದಿಯ ಸಿದ್ನಾಳ – ಅಕ್ಕೋಳ, ವೇದಗಂಗಾ ನದಿಯ ಜತರಾಟ- ಭೀವಶಿ ಹಾಗೂ ದುಧಗಂಗಾ ನದಿಯ _ ಮಲಿಕವಾಡ_ ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಮುಳುಗಡೆಯಾಗಿವೆ.

    ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದು ಸುತ್ತುವರೆದು ಪರ್ಯಾಯ ಮಾರ್ಗಗಳಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನೂ ಕೃಷ್ಣಾ ನದಿಗೆ ಕೇವಲ ಮಳೆ ನೀರಿನಿಂದ 50 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ನದಿಯಲ್ಲಿ ಇಳಿಯದಂತೆ ಚಿಕ್ಕೋಡಿ ತಾಲೂಕಾಡಳಿತ ಜನರಲ್ಲಿ ವಿನಂತಿಸಿದೆ.

  • ಕಾಂಚಿಪುರ ವಿಶೇಷ – 40 ವರ್ಷಗಳ ಬಳಿಕ ಭಕ್ತಾದಿಗಳಿಗೆ ದರ್ಶನ ನೀಡಿದ `ಅಥಿ ವರದಾರ್’

    ಕಾಂಚಿಪುರ ವಿಶೇಷ – 40 ವರ್ಷಗಳ ಬಳಿಕ ಭಕ್ತಾದಿಗಳಿಗೆ ದರ್ಶನ ನೀಡಿದ `ಅಥಿ ವರದಾರ್’

    ಚೆನ್ನೈ: ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.

    ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ.

    ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ ಭಕ್ತಾದಿಗಳಿಗೆ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ.

    ಈ ವರ್ಷ ಮತ್ತೆ ಆ ವಿಶೇಷ ಅವಧಿ ಬಂದಿದೆ. ಜುಲೈ 1ರ ಸೋಮವಾರದಿಂದ 48 ದಿನಗಳ ಕಾಲ ಅಂದರೆ ಆಗಸ್ಟ್ 17ರವರೆಗೆ ಭಕ್ತಾದಿಗಳಿಗೆ ದರ್ಶನದ ಅವಕಾಶ ಸಿಗಲಿದೆ. ಪ್ರತಿ ದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಬಹುದು.

    ಮೊದಲ 40 ದಿನಗಳ ಕಾಲ ಅಂದರೆ ಜುಲೈ 1ರಿಂದ ಆಗಸ್ಟ್ 9ರವರೆಗೆ ಮಲಗಿಸಿದ ರೀತಿಯಲ್ಲಿ ದೇವರ ವಿಗ್ರಹವನ್ನು ಇರಿಸಲಾಗುತ್ತದೆ. ಬಳಿಕ ಕೊನೆಯ ಎಂಟು ದಿನಗಳು ಆಗಸ್ಟ್ 10ರಿಂದ 17ರವರೆಗೆ ನಿಂತಿರುವ ಭಂಗಿಯಲ್ಲಿ ವಿಗ್ರಹವನ್ನು ನಿಲ್ಲಿಸಲಾಗುತ್ತದೆ.

    ಹಿನ್ನೆಲೆ ಏನು?
    16ನೇ ಶತಮಾನದಲ್ಲಿ ಶ್ರೀ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಅಥಿ ವರದಾರ್ ಮೂರ್ತಿಗೆ ಮೂಜೆ ಮಾಡಲಾಗುತಿತ್ತು. ಆಗ ದೇವಸ್ಥಾನದ ಮೇಲೆ ದಾಳಿ ನಡೆದಾಗ ದೇವಿಯ ವಿಗ್ರಹವನ್ನು ದೇಗುಲದ ಕಲ್ಯಾಣಿಯಲ್ಲಿ ಬಚ್ಚಿಡಲಾಗಿತ್ತು. ಆದರೆ ದಾಳಿಯ ಬಳಿಕ ಬಂದ ದೇವಸ್ಥಾನದ ಸಿಬ್ಬಂದಿಗೆ ಅಥಿ ವರದಾರ್ ದೇವರ ಮೂಲ ವಿಗ್ರಹ ಎಲ್ಲಿದೆ ಎನ್ನುವ ವಿಚಾರ ತಿಳಿದಿರಲಿಲ್ಲ. ಆ ನಂತರ ಅಥಿ ವರದಾರ್ ದೇವರ ಇನ್ನೊಂದು ವಿಗ್ರಹ ಮಾಡಿಸಿ ಪೂಜೆ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು.

    ಆದರೆ 40 ವರ್ಷದ ಬಳಿಕ 17ಂ9ರಲ್ಲಿ ದೇವಸ್ಥಾನದ ಕಲ್ಯಾಣಿ ಕಾರಣಾಂತರಗಳಿಂದ ಖಾಲಿಯಾಗಿತ್ತು. ಆ ವೇಳೆ ಕಲ್ಯಾಣಿಯಲ್ಲಿ ಬಚ್ಚಿಟ್ಟಿದ್ದ ಅಥಿ ವರದಾರ್ ದೇವರ ಮೂಲ ವಿಗ್ರಹ ಪತ್ತೆಯಾಗಿತ್ತು. ಆ ಬಳಿಕ 40 ವರ್ಷಕ್ಕೊಮ್ಮೆ 48 ದಿನಗಳ ಕಾಲ ದೇವಿಯನ್ನು ನೀರಿನಿಂದ ಹೊರತೆಗೆದು ಪೂಜಿಸುವ ಸಂಪ್ರದಾಯ ಹುಟ್ಟಿಕೊಂಡಿತು.

    ಸದ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂರು ತಾತ್ಕಾಲಿಕ ಬಸ್ ನಿಲ್ದಾಣವನ್ನು ಪಟ್ಟಣದ ಹೊರಗಡೆ ನಿರ್ಮಿಸಲಾಗಿದೆ. ಹಾಗೆಯೇ ಕಾರುಗಳು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಅಷ್ಟೇ ಅಲ್ಲದೆ ಭಕ್ತಾದಿಗಳನ್ನು ಶ್ರೀ ವರದರಾಜ ಪೆರುಮಾಳ್ ದೇವಸ್ಥಾನಕ್ಕೆ ಕರೆತರಲು ದೋಣಿಯ ವ್ಯವಸ್ಥೆ ಕೂಡ ಇದೆ ಎಂದು ದೇವಾಲಯದ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ.