Tag: ದೇವಸ್ಥಾನ

  • ದೇವಿ ಕಣ್ಬಿಟ್ಟಿದ್ದಾಳೆಂದು ಹಬ್ಬಿತು ಸುದ್ದಿ – ಜನ ಸೇರ್ತಿದ್ದಾಗೆ ಬಯಲಾಯ್ತು ಅಸಲಿಯತ್ತು

    ದೇವಿ ಕಣ್ಬಿಟ್ಟಿದ್ದಾಳೆಂದು ಹಬ್ಬಿತು ಸುದ್ದಿ – ಜನ ಸೇರ್ತಿದ್ದಾಗೆ ಬಯಲಾಯ್ತು ಅಸಲಿಯತ್ತು

    ಹುಬ್ಬಳ್ಳಿ: ಜಿಲ್ಲೆಯ ಮಂಟೂರು ರಸ್ತೆ ವಲ್ಲಭಬಾಯಿ ನಗರದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ಸಂಜೆ ನಲ್ಲಮ್ಮ ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಕೇಳಿ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದು ಬಂದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಆದರೆ ಸಮಯ ಕಳೆದಂತೆ ದೇವಿಯ ಕಣ್ಣಿನ ಅಸಲಿಯತ್ತನ್ನ ಕಂಡ ಜನ ಶಾಕ್ ಆಗಿದ್ದಾರೆ.

    ಕೆಲವು ಯುವಕರು ದೇವಸ್ಥಾನದ ಪಕ್ಕದ ಮೈದಾನದಲ್ಲಿ ಫುಟ್‍ಬಾಲ್ ಆಡುತ್ತಿದ್ದರು. ಸಂಜೆ 4 ಗಂಟೆ ಸುಮಾರು ಯುವಕನೊಬ್ಬ ದೇವಸ್ಥಾನದ ಬಳಿ ಬಂದಿದ್ದ. ನಲ್ಲಮ್ಮ ದೇವಿ ಗುಡಿಯ ಬಾಗಿಲು ತೆರೆದಿತ್ತು. ಬಾಗಿಲು ಮುಚ್ಚಲೆಂದು ಹೋದಾಗ ದೇವಿ ಕಣ್ಣು ತೆರೆದಿರುವುದನ್ನು ನೋಡಿ ಅಚ್ಚರಿಯಾಗಿ ಕೂಡಲೇ ಜನರನ್ನು ಸೇರಿಸಲಾಗಿತ್ತು. 30 ವರ್ಷದಿಂದ ಇರುವ ಈ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಪವಾಡ ನೋಡಲು ಜನಸಾಗರವೇ ಹರಿದುಬಂದಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪಬ್ಲಿಕ್ ಟಿವಿ ತಂಡಕ್ಕೂ ಅನುಮಾನ ಹುಟ್ಟಿತ್ತು.

    ದೇವಿಗೆ ಬಂದಿರುವ ಕಣ್ಣು ಅಸಲಿಯೋ ನಕಲಿಯೋ ಎಂಬ ಚರ್ಚೆಯೂ ನಮ್ಮ ಮನದಲ್ಲೇ ಶುರುವಾಗಿತ್ತು. ಪರೀಕ್ಷಿಸಲು ಮುಂದಾದ್ರೂ ನೂಕುನುಗ್ಗಲು ಉಂಟಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ದೇವಿ ಕಣ್ಣು ಬಿಟ್ಟಿರುವುದನ್ನು ನೋಡಲು ಜನ ಬರುತ್ತಲೇ ಇದ್ದುದರಿಂದ ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು.

    ಕಣ್ಣು ಮೂಡಿದ್ದ ದೇವರ ಫೋಟೋ ಪರೀಕ್ಷಿಸಿ ನೋಡಿದಾಗ ಅದು ಬಾಹ್ಯವಾಗಿ ಅಂಟಿಸಿದ್ದು ಎಂಬ ಅನುಮಾನ ಬಂದಿತ್ತು. ಬಳಿಕ ಶ್ರೀರಾಮ ದೇವಸ್ಥಾನದ ಟ್ರಸ್ಟಿಗಳು ಪೊಲೀಸರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲಾಯಿತು. ನಲ್ಲಮ್ಮ ದೇವಿಯ ಮೂರ್ತಿಯನ್ನು ದೊಡ್ಡ ಹರಿವಾಣದಲ್ಲಿಟ್ಟು ನೀರಿನಿಂದ ಸ್ಚಚ್ಛವಾಗಿ ತೊಳೆದಾಗ ಅಸಲಿಯತ್ತು ಬಯಲಾಯಿತು.

    ಬಾಗಿಲಿಗೆ ಬೀಗ ಇಲ್ಲದ ಚಿಕ್ಕ ಗುಡಿ ಪ್ರವೇಶಿಸಿದ್ದ ಖದೀಮರು ಹುಣಸೇ ಹಣ್ಣು ಬಳಸಿ ಮೂರ್ತಿಗೆ ಪ್ಲಾಸ್ಟಿಕ್ ಕಣ್ಣನ್ನು ಅಂಟಿಸಿ, ಅರಿಶಿಣ-ಕುಂಕುಮ ಹಾಕಿದ್ದರು. ತುಸು ದೂರದಿಂದ ನೋಡಿದರೆ, ಅಸಲಿ ಕಣ್ಣು ಮೂಡಿರುವಂತೆಯೇ ಭಾಸವಾಗುತ್ತಿತ್ತು. ಇದನ್ನೇ ಪವಾಡ ಎಂದು ನಂಬಿದ ಕೆಲವರು ಗುಲ್ಲೆಬ್ಬಿಸಿದ್ದರಿಂದ ನೂರಾರು ಜನ ಜಮಾಯಿಸಿದ್ದರು. ಪವಾಡ ಬಯಲಾಗುತ್ತಿದ್ದಂತೆಯೇ ಅಲ್ಲಿದ್ದ ಜನರೆಲ್ಲ ಅಪರಿಚಿತ ಖದೀಮನನ್ನು ಶಪಿಸುತ್ತ ವಾಪಸ್ಸಾದರು.

    ಶ್ರೀರಾಮ ದೇವಸ್ಥಾನದ ಆವರಣದಲ್ಲಿ ನಲ್ಲಮ್ಮದೇವಿ ಗುಡಿ ಇದೆ. ಇದು ರೈಲ್ವೆ ಇಲಾಖೆಯ ಜಾಗೆಯೂ ಹೌದು. ತನ್ನದೇ ಜಾಗ ಆದ್ದರಿಂದ ರೈಲ್ವೆ ಇಲಾಖೆ ಇತ್ತೀಚೆಗೆ ದೇವಸ್ಥಾನ ತೆರವು ಮಾಡಲು ಮುಂದಾಗಿತ್ತು. ಅದನ್ನು ತಪ್ಪಿಸಲೆಂದು ಕೆಲವರು ಈ ರೀತಿ ನಾಟಕ ಮಾಡಿ ಜನರ ಭಾವನೆ ಕೆರಳಿಸಲು ಪ್ರಯತ್ನ ನಡೆಸಿದ್ದರು ಎಂಬ ಮಾತು ಕೇಳಿಬಂದಿದೆ. ತನಿಖೆಯ ನಂತರವಷ್ಟೇ ಇದರ ಹಿಂದೆ ಯಾರ ಕೈವಾಡವಿದೆ ಅಂತ ತಿಳಿಯಬೇಕಿದೆ.

  • ಮೇಲುಕೋಟೆಯಲ್ಲಿ ಸರಣಿ ಕಳ್ಳತನ – ದೇವರ ತಾಳಿಯನ್ನೂ ಬಿಡದೆ ಕದ್ದೊಯ್ದ ಖದೀಮರು

    ಮೇಲುಕೋಟೆಯಲ್ಲಿ ಸರಣಿ ಕಳ್ಳತನ – ದೇವರ ತಾಳಿಯನ್ನೂ ಬಿಡದೆ ಕದ್ದೊಯ್ದ ಖದೀಮರು

    ಮಂಡ್ಯ: ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್, ಸಾವಿರಾರು ರೂ. ನಗದು ಜೊತೆಗೆ ದೇವರ ತಾಳಿಯನ್ನೂ ಬಿಡದೆ ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ದೇವಾಲಯಗಳು ಹಾಗೂ ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಮೇಲುಕೋಟೆಯ ಪ್ರಮುಖ ರಸ್ತೆಯಲ್ಲಿರುವ ಕಾಳಮ್ಮ, ಮುಕ್ತಿನಾಥ, ಶನೇಶ್ವರ ದೇಗುಲದಲ್ಲಿ ಹುಂಡಿ ಹಾಗೂ ಇತರೆ ವಸ್ತುಗಳ ಕಳ್ಳತನ ಮಾಡಿದ್ದಾರೆ. ಕಾಳಮ್ಮ ದೇಗುಲದಲ್ಲಿ ದೇವರ 3 ತಾಳಿ, 5 ಸಾವಿರ ನಗದು ಹಣವನ್ನು ದೋಚಿದ್ದಾರೆ. ಹಾಗೆಯೇ ಶನೇಶ್ವರ ದೇಗುಲದಲ್ಲಿ ಐವತ್ತು ಸಾವಿರ ರೂ. ಕಳವು ಮಾಡಿದ್ದಾರೆ.

    ಸ್ಥಳೀಯ ನಿವಾಸಿ ಭಾನುಮತಿ ಅವರ ಮನೆಯಲ್ಲಿ 1.20 ಲಕ್ಷ ನಗದು ಜೊತೆಗೆ ಸಾವಿರಾರು ರೂ. ಮೌಲ್ಯದ ರೇಷ್ಮೆ ಸೀರೆಗಳನ್ನು ಕಳ್ಳರು ದೋಚಿದ್ದಾರೆ. ಕೆಎಸ್‌ಆರ್‌ಟಿಸಿ ಚಾಲಕ ರಂಗನಾಥ್ ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ತಮ್ಮ ಕೈಚಳಕ ತೋರಿದ್ದಾರೆ.

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ದೇವಸ್ಥಾನದಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಿಬ್ಬಂದಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ದೇವಸ್ಥಾನದಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಿಬ್ಬಂದಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಕಲಬುರಗಿ: ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ದೇವಸ್ಥಾನದ ದ್ವಿತೀಯ ದರ್ಜೆ ಸಹಾಯಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಅಫಜಲಪುರದ ಘತ್ತರಗಾ ಗ್ರಾಮದಲ್ಲಿರುವ ಶ್ರೀಕ್ಷೇತ್ರ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ಯತ್ನಿಸಿದ ಆರೋಪಿಯನ್ನು ದೇವಸ್ಥಾನದ ದ್ವಿತಿಯ ದರ್ಜೆ ಸಹಾಯಕ ಸದಾಶಿವ ವಗ್ಗೆ ಎಂದು ಗುರುತಿಸಲಾಗಿದೆ. ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಮೇಲೆ ಸದಾಶಿವ ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ನಡೆಸಿದ್ದಾನೆ. ಈ ದೃಶ್ಯಾವಳಿ ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಘಟನೆ ನಂತರ ಘತ್ತರಗಾ ಗ್ರಾಮ ಪಂಚಾಯತ್ ಸದಸ್ಯರು ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಹಾಗು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಹಲ್ಲೆಗೆ ಒಳಗಾದ ಮಹಿಳೆ ಮಾತ್ರ ಆರೋಪಿಯ ಬೆದರಿಕೆಗೆ ಗುರಿಯಾಗಿ ಇಲ್ಲಿಯವರೆಗೂ ದೂರು ದಾಖಲಿಸಿಲ್ಲ.

  • ದೇವಸ್ಥಾನ, ಮಸೀದಿ ಸುತ್ತಿದ್ರೆ ಬುದ್ಧಿವಂತರಾಗಲ್ಲ: ಕೆ.ಎಸ್.ಭಗವಾನ್

    ದೇವಸ್ಥಾನ, ಮಸೀದಿ ಸುತ್ತಿದ್ರೆ ಬುದ್ಧಿವಂತರಾಗಲ್ಲ: ಕೆ.ಎಸ್.ಭಗವಾನ್

    – ಓದಿದರೆ ಮಾತ್ರ ಬುದ್ಧಿ ಬರೋದು

    ದಾವಣಗೆರೆ: ಅಂತರ್ಜಾತಿ ವಿವಾಹವಾಗುವವರಿಗೆ ಮಾತ್ರ ಸರ್ಕಾರಿ ಕೆಲಸ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತಹ ಕಾನೂನು ರಚನೆಯಾಗಬೇಕು. ಆಗ ಮಾತ್ರ ಸಮಾನತೆ ತರಲು ಸಾಧ್ಯ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.

    ಜಿಲ್ಲೆಯ ಹರಿಹರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಮೇಲು ಕೀಳು ಹೋಗಿಲ್ಲ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗುತ್ತದೆ. ಆದರೆ ಯಾರೂ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಯಾರು ಅಂತರ್ಜಾತಿ ವಿವಾಹ ಆಗುತ್ತಾರೋ ಅವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗುವಂತಾಗಬೇಕು. ಅಲ್ಲದೆ, ಅಂತಹವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಆ ರೀತಿಯ ಕಾನೂನನ್ನು ಜಾರಿಗೆ ತರಬೇಕು ಎಂದು ತಿಳಿಸಿದರು. ಇದನ್ನು ಓದಿ: ಎಂಎಂ ಕಲ್ಬುರ್ಗಿ ಹತ್ಯೆ ಕೇಸ್- 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‍ಐಟಿ

    ಪ್ರಸ್ತುತ ಭಾರತದಲ್ಲಿ ಜಾತಿಯೇ ಮುಖ್ಯ ಹೊರತು ಜ್ಞಾನಕ್ಕೆ ಬೆಲೆ ಇಲ್ಲ. ಎಲ್ಲರೂ ಮೊದಲು ಒಂದೇ ಜಾತಿಯವರು, ಕಾಲದ ನಂತರ ಜಾತಿಗಳಾಗಿವೆ. ಪುಸ್ತಕಗಳನ್ನು ಓದುವುದರಿಂದ ತಿಳುವಳಿಕೆ ಬರುತ್ತದೆ. ಅದನ್ನು ಬಿಟ್ಟು ದೇವಸ್ಥಾನ, ಮಸೀದಿಗಳಿಗೆ ಹೋಗುವುದರಿಂದ ಬುದ್ಧಿವಂತರಾಗುವುದಿಲ್ಲ. ಓದಿ ಬುದ್ಧಿಶಕ್ತಿ ಬೆಳಸಿಕೊಂಡಾಗ ಮಾತ್ರ ಬುದ್ಧಿವಂತರಾಗುತ್ತಾರೆ ಎಂದು ತಿಳಿಸಿದರು.

    ಕಲಬುರ್ಗಿ ಹತ್ಯೆ ಕುರಿತು ಪ್ರತಿಕ್ರಿಯಿಸಲ್ಲ
    ಈಗಾಗಲೇ ಎರಡು, ಮೂರು ಕೇಸ್ ಆಗಿದೆ. ನಾನೇನಾದರೂ ಮಾತನಾಡಿದರೆ ಮತ್ತೊಂದು ಕೇಸ್ ಬಿದ್ದು ಓಡಾಡುವ ಕೆಲಸವಾಗುತ್ತದೆ. ಈ ಕುರಿತು ಮೈಸೂರಿನಲ್ಲಿ ಮಾತನಾಡುತ್ತೇನೆ ಎಂದು ಪ್ರೊ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಲು ಭಗವಾನ್ ನಿರಾಕರಿಸಿದರು.

    370ನೇ ವಿಧಿ ರದ್ದು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ, ಅದು ಮೋದಿಯವರ ಒಳ್ಳೆಯ ಕೆಲಸ. ಇಡೀ ಭಾರತದಲ್ಲಿ ಎಲ್ಲಾ ರಾಜ್ಯಗಳು ಸಮಾನ ಎಂದು ಸಾರಿದೆ. ತತ್ವ ಸಿದ್ಧಾಂತಗಳು ಏನೇ ಇದ್ದರು ಒಳ್ಳೆಯದನ್ನು ಮಾಡಿದಾಗ ಮೆಚ್ಚಬೇಕು, ಸ್ವಾಗತಿಸಬೇಕು. ಈ ಹಿಂದೆಯು ಮೋದಿಯವರು ಸಂವಿಧಾನ ರಾಷ್ಟ್ರ ಧರ್ಮ ಗ್ರಂಥ ಎಂದು ಹೇಳಿದ್ದರು ಅದನ್ನು ಮೆಚ್ಚಿ ಲೇಖನ ಬರೆದಿದ್ದೇನೆ. ವಿರೋಧ ಮಾಡುತ್ತೇವೆಂದು ಎಲ್ಲದನ್ನೂ ವಿರೋಧಿಸಬಾರದು ಎಂದು ಭಗವಾನ್ ಸ್ಪಷ್ಟಪಡಿಸಿದರು.

  • ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

    ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

    ಬೀದರ್: ಕಾಲಿಗೆ ಪೆಟ್ಟಾಗಿದ್ದ ನವಿಲೊಂದು ರಕ್ಷಣೆಗಾಗಿ ಕಾಡಿನಿಂಡ ನಾಡಿಗೆ ಬಂದು ಆಂಜಿನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿದ್ದ ನವಿಲಿಗೆ ಗ್ರಾಮಸ್ಥರು ನೆರವಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಂಗಲಿಗಿ ಗ್ರಾಮದಲ್ಲಿ ನಡೆದಿದೆ.

    ಕಾಲಿಗೆ ಪೆಟ್ಟಾಗಿದ್ದು ದಿಕ್ಕು ದೋಚದೇ ನವಿಲೊಂದು ಪರದಾಡುತ್ತಿತ್ತು, ಬಳಿಕ ಕಾಡಿನಿಂದ ಹೊರಬಂದು ಮಂಗಲಿಗಿ ಗ್ರಾಮದ ಆಂಜನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿತ್ತು. ಆದರೆ ಕಾಲಿಗಾದ ಪೆಟ್ಟಿನಿಂದ ನವಿಲು ಒದ್ದಾಡುತ್ತಿತ್ತು. ಈ ವೇಳೆ ನವಿಲಿನ ಕಾಲಿಗೆ ಪೆಟ್ಟಾಗಿದ್ದನ್ನ ಗಮನಿಸಿದ ಗ್ರಾಮಸ್ಥರು ಅದಕ್ಕೆ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿದ್ದಾರೆ.

    ಸದ್ಯ ಗ್ರಾಮಸ್ಥರ ನೆರವಿನಿಂದ ನವಿಲು ಕೊಂಚ ಚೇತರಿಸಿಕೊಂಡಿದ್ದು, ಈಗಲೂ ದೇವಸ್ಥಾನದ ಬಳಿಯೇ ತಂಗಿದೆ. ಈಗಿನ ಕಾಲದಲ್ಲಿ ಒಬ್ಬರಿಗೆ ಒಬ್ಬರು ಕಷ್ಟಕಾಲದಲ್ಲಿ ಸಹಾಯ ಮಾಡದ ಜನೆ ಮಧ್ಯೆ ಮಂಗಲಿಗಿ ಗ್ರಾಮಸ್ಥರು ಒಂದು ಪಕ್ಷಿಗೆ ನೆರವಾಗಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

    ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

    ವಿಜಯಪುರ: ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗಡಿ ಭಾಗದಲ್ಲಿ ಬರುವ ನಾರಾಯಣಪೂರ ಸಮೀಪದ ಛಾಯಾ ಭಗವತಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.

    ಜಲಾವೃತಗೊಂಡ ಕಾರಣ ಛಾಯಾ ಭಗವತಿಗೆ ದೇವಸ್ಥಾನದಲ್ಲಿ ಪೂಜೆ ಸ್ಥಗಿತಗೊಂಡಿದೆ. ಅಲ್ಲದೆ ಪೊಲೀಸರು ಪ್ರವಾಸಿಗರನ್ನು ಮೆಟ್ಟಿಲು ಬಳಿ ತೆರಳದಂತೆ ಕಣ್ಗಾವಲು ಇಟ್ಟಿದ್ದಾರೆ.

    ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಅಡಿ ಇದ್ದು, ಇಂದಿನ ಮಟ್ಟ 517.10 ಅಡಿಯಾಗಿದೆ. ಒಟ್ಟು 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 87.737 ಟಿಎಂಸಿ ನೀರಿನ ಸಂಗ್ರಹವಿದೆ. ಆಲಮಟ್ಟಿ ಜಲಾಶಯದ ಒಳಹರಿವು 3,67,318 ಕ್ಯೂಸೆಕ್ ಇದ್ದರೆ, 3,90,929 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ.

    ಇತ್ತ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲೆಯ ಅಲಮೇಲ ತಾಲೂಕಿನ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಂದು ಬೆಳಗ್ಗೆ ತಾರಾಪುರಕ್ಕೆ ತೆರಳುವ ರಸ್ತೆ ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ.

    ಗ್ರಾಮದ ಸಂಪರ್ಕ ಸೇತುವೆ ಮೇಲೆ 4 ಅಡಿ ಅಷ್ಟು ನೀರು ನಿಂತಿದ್ದು, ಗ್ರಾಮಸ್ಥರು ವಾಹನಗಳು ಗ್ರಾಮದ ಹೊರಗಡೆ ನಿಲ್ಲಿಸಿದ್ದಾರೆ. ವಾಹನಗಳು ಗ್ರಾಮದ ಒಳಗೆ ಹೋಗಲು ಸಾಧ್ಯವಾಗದ ಕಾರಣ ಜನರು ನಡೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದಾರೆ. ತಾರಾಪುರಕ್ಕೆ ತೆರಳುವ ರಸ್ತೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯಲ್ಲಿ ನೀರು ಆವರಿಸುತ್ತಿದೆ.

  • ಬರ್ಬರವಾಗಿ ಹತ್ಯೆಗೈದು ದೇವಸ್ಥಾನದ ಬಳಿಯೇ ಶವ ಬಿಸಾಡಿದ್ರು

    ಬರ್ಬರವಾಗಿ ಹತ್ಯೆಗೈದು ದೇವಸ್ಥಾನದ ಬಳಿಯೇ ಶವ ಬಿಸಾಡಿದ್ರು

    ಕೋಲಾರ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾರಿಯಮ್ಮ ದೇವಾಲಯದಲ್ಲಿ ನಡೆದಿದೆ.

    ಪ್ರದೀಪ್ ರಾಜ್ 28 ಕೊಲೆಯಾದ ದುರ್ದೈವಿ. ಭಾನುವಾರ ಬಡಾವಣೆಯ ಮಾರಿಯಮ್ಮ ದೇವಾಲಯದಲ್ಲಿ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯರೊಂದಿಗೆ ಕುಡಿದು ಪ್ರದೀಪ್ ಗಲಾಟೆ ಮಾಡಿಕೊಂಡಿದ್ದನು ಎನ್ನಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆತನನ್ನು ಕಿಡಿಗೇಡಿಗಳು ಕೊಲೆ ಮಾಡಿ ನಂತರ ಶವವನ್ನು ದೇವಾಲಯದ ಬಳಿ ತಂದು ಬಿಸಾಡಿದ್ದಾರೆ ಎಂದು ಆರೋಪಿಸಿಲಾಗಿದೆ. ಇಂದು ಮುಂಜಾನೆ ಶವವಾಗಿ ಪ್ರದೀಪ್ ರಾಜ್ ಪತ್ತೆಯಾಗಿದ್ದು, ಕೊಲೆ ಮಾಡಿ ದೇವಾಲಯ ಬಳಿ ಬಿಸಾಡಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

    ಕೊಲೆಯಾದ ಪ್ರದೀಪ್ ರಾಜ್ ಮುಖ ಹಾಗೂ ತಲೆಯ ಭಾಗದಲ್ಲಿ ಗಾಯಗಳಾಗಿದ್ದು, ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಮೊಹ್ಮದ್ ಸುಜೀತ ಸೇರಿದಂತೆ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಸಂಬಂಧ ಅಂಡರ್‍ ಸನ್ ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ದಾವಣಗೆರೆಯಲ್ಲಿ ಮಳೆಗಾಗಿ ದೇವಸ್ಥಾನದ ಮುಂಭಾಗ ಸಂತೆ

    ದಾವಣಗೆರೆಯಲ್ಲಿ ಮಳೆಗಾಗಿ ದೇವಸ್ಥಾನದ ಮುಂಭಾಗ ಸಂತೆ

    ದಾವಣಗೆರೆ: ಮಳೆಗಾಗಿ ದೇವರ ಮೊರೆ ಹೋಗುವುದು ಹಾಗೂ ಹೋಮ ಹವನಗಳನ್ನು ಮಾಡುವುದನ್ನು ಕೇಳಿದ್ದೇವೆ ಆದರೆ, ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ವಿಶಿಷ್ಟವಾಗಿ ದೇವರ ಸಂತೆಯನ್ನು ಮಾಡುವ ಮೂಲಕ ಉತ್ತಮ ಮಳೆಯಾಗಲೆಂದು ಬೇಡಿಕೊಂಡಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಮಳೆ ಇಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಲೆಂದು ಜಗಳೂರು ಪಟ್ಟಣದಲ್ಲಿ ದೇವರ ಸಂತೆ ಮಾಡಲಾಗುತ್ತಿದೆ. ಪಟ್ಟಣದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಪೂಜೆ ಸಲ್ಲಿಸಿ ಸಂತೆ ನಡೆಸಲಾಯಿತು.

    ಮೂರು ವಾರ ದೇವಸ್ಥಾನದ ಮುಂಭಾಗ ಸಂತೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಅದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದರೆ ಫಸಲು ಕೈ ಸೇರುತ್ತದೆ. ಹೀಗಾಗಿ ಮಳೆ ಕರುಣಿಸುವಂತೆ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಸಂತೆ ಮಾಡುವ ಮೂಲಕ ಬೇಡಿಕೊಳ್ಳುತ್ತಿದ್ದಾರೆ.

    ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಈ ವಾರದಿಂದ ಮೂರು ವಾರಗಳ ಕಾಲ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗ ಸಂತೆ ನಡೆಸಿದರೆ, ಮಳೆಯಾಗುತ್ತದೆ ಎಂಬುದು ಅನಾದಿಕಾಲದಿಂದಲೂ ಇರುವ ನಂಬಿಕೆ. ಹೀಗಾಗಿ ಜನ ಸಂತೆಯನ್ನೂ ಮಾಡಿ ನೋಡಿಯೇ ಬಿಡೋಣ ಮಳೆ ಬರಬಹುದು ಎಂದು ನಿರ್ಧರಿಸಿದ್ದಾರೆ.

  • ‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

    ‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ಹಾಗೂ ಹಾಲಿ ಶ್ರೀನಿವಾಪುರ ಶಾಸಕ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಅಂದಹಾಗೆ 1977 ರ ಮೇ 22 ರಂದು ರಮೇಶ್ ಕುಮಾರ್ ಇದೇ ದೇವಾಲಯದಲ್ಲಿ ವಿವಾಹವಾಗಿದ್ದರು. ದೇವರ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇತ್ತೀಚಿನ ರಾಜ್ಯದ ರಾಜಕೀಯ ಘಟನಾವಳಿಗಳಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೆ. ಹೀಗಾಗಿ ದೇವರ ದರ್ಶನ ಪಡೆದು ಮನಸ್ಸು ನಿರಾಳ ಮಾಡಿಕೊಳ್ಳಲು ದೇವಾಲಯಕ್ಕೆ ಆಗಮಿಸಿದ್ದೇನೆ. ಇದು ಖಾಸಗಿ ಭೇಟಿ ಆಗಿದ್ದು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.

    ಇದೇ ವೇಳೆ ಅನರ್ಹ ಶಾಸಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಏನು ತೀರ್ಮಾನ ಆಗುತ್ತೋ ನೋಡಬೇಕು. ಅಮೇಲೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಬೇಕು ಎಂದು ಹೇಳಿದರು.

    ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಕೆ ವಿಚಾರ ಸಂಬಂಧ ಮಾತನಾಡಿ, ಉಪಚುನಾವಣೆಯೇ ಬಂದಿಲ್ಲ ಮಗು ಹುಟ್ಟಿದರೆ ತಾನೇ ಮಗುವಿಗೆ ಸೋಮಲಿಂಗನೋ ಭೀಮಲಿಂಗನೋ ಎಂದು ಹೆಸರಿಡೋದು. ಮದುವೆಯೇ ಆಗಿಲ್ಲ ಮಗುನೇ ಹುಟ್ಟಿಲ್ಲ ಮಗು ಗಂಡಾ ಹೆಣ್ಣಾ ಎಂದು ಕೇಳಿದರೆ ಹೇಗೆ ಎಂದು ಹಾಸ್ಯ ಮಾಡಿದರು.

    ರಾಜ್ಯದಲ್ಲಿ ಸಿದ್ದರಾಮಯ್ಯ ಬಹಳ ಪ್ರಭಾವಯುತ ನಾಯಕರಾಗಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ನಾವು ಮಾಡುತ್ತೇವೆ. ಶಾಸಕರ ಅನರ್ಹತೆಯನ್ನು ಸ್ಪೀಕರ್ ಸ್ಥಾನದಿಂದ ನಾನು ಮಾಡಿದ್ದೇನೆ. ಆದರೆ ಈಗ ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಗೌರವ ಅಲ್ಲ. ಈಗ ಪಕ್ಷದ ಕಾರ್ಯಕರ್ತನಾಗಿ ಸವಾಲು ಇದೆ. ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟುವ ಕೆಲಸ ನಾವೆಲ್ಲರೂ ಮಾಡುತ್ತೇವೆ. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಹಂತಕ್ಕೆ ನಾವು ಹೋಗಿಯೇ ಇಲ್ಲ ಎಂದು ತಿಳಿಸಿದರು.

  • ಅಬ್ದುಲ್ ಕಲಾಂರನ್ನು ಸ್ಮರಿಸಿ ಬಿಎಸ್‍ವೈಯಿಂದ ದಿನಚರಿ ಬಗ್ಗೆ ಟ್ವೀಟ್

    ಅಬ್ದುಲ್ ಕಲಾಂರನ್ನು ಸ್ಮರಿಸಿ ಬಿಎಸ್‍ವೈಯಿಂದ ದಿನಚರಿ ಬಗ್ಗೆ ಟ್ವೀಟ್

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ ನಂತರ ಬಿಎಸ್‍ವೈ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

    ಮೊದಲಿಗೆ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಸಿಎಂ ಯಡಿಯೂರಪ್ಪ ಅವರು ಸ್ಮರಿಸಿದ್ದಾರೆ. “ದೇಶ ಕಂಡ ಜನಸಾಮಾನ್ಯರ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಸ್ಮರಿಸೋಣ” ಎಂದು ಟ್ವೀಟ್ ಮಾಡಿದ್ದು, ಅವರ ಫೋಟೋ ಹಾಕಿ ಜೊತೆಗೆ #missileman ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

    ನಂತರ ತಮ್ಮ ದಿನಚರಿಯನ್ನೂ ಟ್ವಿಟ್ಟರ್ ಮೂಲಕವೇ ಹಂಚಿಕೊಂಡಿದ್ದಾರೆ. “ಇಂದು ಗವಿಮಠ ಶ್ರೀ ಸಿದ್ದಲಿಂಗೇಶ್ವರ ಸವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಬೂಕನಕೆರೆ ಗ್ರಾಮದೇವತೆ ದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಅಲ್ಲಿಂದ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.

    ಶುಕ್ರವಾರ ಸಂಜೆ “ನನ್ನ ಮೇಲೆ ಇಟ್ಟಿರುವ ನಂಬಿಕೆ ಅಪಾರ. ಪ್ರಗತಿ, ಸಮೃದ್ಧಿ, ಸರ್ವರ ಭಾಗಿತ್ವ, ಅಭಿವೃದ್ಧಿಯ 4 ಅಂಶಗಳನ್ನು ಆಡಳಿತದ ಆಧಾರವಾಗಿಸಿ ಕರ್ನಾಟಕದ ಜನತೆಯನ್ನು ಪ್ರತಿನಿಧಿಸಿ, ಅವರ ಅಶೋತ್ತರಗಳನ್ನು ಪೂರೈಸುತ್ತೇನೆ. ಬಿಜೆಪಿ ಶಾಸಕರ, ಪ್ರತಿಯೊಬ್ಬ ಕಾರ್ಯತರ್ಕರನ್ನು ಅವರ ಅವಿರತ ಶ್ರಮ, ದೃಢ ಪ್ರಯತ್ನ ಮತ್ತು ಸಮರ್ಪಣಾ ಭಾವಕ್ಕಾಗಿ ವಂದಿಸುತ್ತೇನೆ” ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದರು.