Tag: ದೇವಸ್ಥಾನ

  • ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನಕ್ಕಾಗಿ ಕಾದು ಕುಳಿತ ಜನರು

    ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನಕ್ಕಾಗಿ ಕಾದು ಕುಳಿತ ಜನರು

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾದ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಪ್ರಮುಖ ದೇವಾಲಯಗಳಿಂದ ಸಿದ್ಧಗೊಳ್ಳುತ್ತಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಜನರು ಕಾದು ಕುಳಿತಿದ್ದಾರೆ.

    ಈ ಬಾರಿ ಪಂಚಮುಖಿ ಆಂಜನೇಯನ ದರ್ಶನ, ನರಸಿಂಹನಿಂದ ಹಿರಣ್ಯ ಕಶಿಪು ವಧೆ, ಮಹಿಷಾಸುರ ಮರ್ಧಿನಿ, ಸುಬ್ರಹ್ಮಣ್ಯನಿಂದ ತಾರಕಾಸುರ ವಧೆ, ಅರ್ಧನಾರೀಶ್ವರ ದರ್ಶನ, ತ್ರಿಪುರಾಸುರ ವಧೆ ಹೀಗೆ ನಾನಾ ಕಥಾ ಭಾಗಗಳನ್ನು ಬೃಹತ್ ಧ್ವನಿ ಬೆಳಕಿನ ಸಂಯೋಜನೆಗಳೊಂದಿಗೆ ಕೃತಕವಾಗಿ ತಯಾರಿಸಿದ, ಟ್ಯಾಬ್ಲೋಗಳ ಪ್ರದರ್ಶನ ಎಲ್ಲರನ್ನು ಬೆರಗುಗೊಳಿಸಲಿದೆ.

    ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ಮುಂಜಾನೆಯವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ದಶಮಂಟಪಗಳನ್ನು ಸಿದ್ಧಗೊಳಿಸುವ ಕಾರ್ಯ ಈಗಾಗಲೇ ಮುಗಿದಿದ್ದು, ಅಂತಿಮ ತಯಾರಿ ನಡೆಯುತ್ತಿದೆ. ಹಗಲಿನಲ್ಲಿ ಮೈಸೂರು ದಸರಾ ರಾತ್ರಿ ಮಡಿಕೇರಿ ದಸರಾ ಎಂದೇ ಪ್ರಸಿದ್ಧಗೊಂಡಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ವರ್ಣರಂಜಿತ ದಶಮಂಟಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು ಜನರು ರಾತ್ರಿಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿಗಳು ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದಾರೆ.

  • ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿಯಲ್ಲೊಂದು ಗಾಂಧಿ ದೇವಸ್ಥಾನ, ನಿತ್ಯ ನಡೆಯುತ್ತೆ ಪೂಜೆ

    ಯಾದಗಿರಿ: ಮಹಾತ್ಮ ಗಾಂಧಿ ಹೆಸರಿನ ವೃತ್ತಗಳು, ಭವನಗಳು, ರಸ್ತೆಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಗ್ರಾಮದಲ್ಲಿ ಜನ ಮಹಾತ್ಮ ಗಾಂಧಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ್ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ದೇವಸ್ಥಾನವಿದೆ. ಕೇವಲ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮಾತ್ರವಲ್ಲ, ದಿನ ನಿತ್ಯ ಬಾಪೂಜಿಗೆ ಗ್ರಾಮಸ್ಥರು ಪೂಜೆ ಮಾಡಿ ಮಹಾತ್ಮನನ್ನು ಸ್ಮರಿಸುತ್ತಾರೆ.

    ಬಲಶೆಟ್ಟಿಹಾಳ ಗ್ರಾಮಸ್ಥರು ಗಾಂಧೀಜಿ ಮೇಲಿನ ಅಭಿಮಾನದಿಂದ ಸ್ವಾತಂತ್ರ್ಯಾನಂತರ 1948ರಲ್ಲಿ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿನ ಆದರ್ಶ ಶಿಕ್ಷಕ ದಿ.ಹಂಪಣ್ಣ ಸಾಹುಕಾರ್ ಎನ್ನುವವರು, ಸ್ವತಃ ಗಾಂಧೀಜಿ ಅವರ ಪುತ್ಥಳಿ ತಯಾರಿಸಿ, ದೇವಸ್ಥಾನ ನಿರ್ಮಿಸಿದ್ದಾರಂತೆ. ಅಂದಿನಿಂದ ಇಂದಿನವರೆಗೆ ಇಲ್ಲಿನ ಗ್ರಾಮಸ್ಥರು ಗಾಂಧೀಜಿಯವರ ಈ ಪುತ್ಥಳಿಗೆ ದೇವತಾ ಸ್ಥಾನಮಾನ ನೀಡಿ, ಇತರೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಈ ದೇವಸ್ಥಾನದಲ್ಲೂ ಸುಮಾರು 70 ವರ್ಷಗಳಿಂದ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ.

    ಬಲಶೆಟ್ಟಿಹಾಳ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿಯೇ ಗಾಂಧಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶಾಲಾ ಮಕ್ಕಳು ದಿನ ಮಹಾತ್ಮ ಗಾಂಧಿಜೀಯವರ ಮೂರ್ತಿಯನ್ನು ಸ್ವಚ್ಛಗೊಳಿಸಿ ಅದಕ್ಕೆ ಪುಷ್ಪಾಲಂಕಾರಗಳಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ. ಅಲ್ಲದೆ ಈ ಗ್ರಾಮದ ಯಾವುದೇ ಸಮಸ್ಯೆಗಳನ್ನು ಮತ್ತು ನ್ಯಾಯ ಪಂಚಾಯತಿಗಳನ್ನು, ಇದೇ ಗಾಂಧಿ ದೇವಸ್ಥಾನದ ಕಟ್ಟೆಯಲ್ಲೇ ಇಲ್ಲಿನ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತಾರೆ. ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ಇಲ್ಲಿ ನಡೆಯುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಅಹಿಂಸೆಯ ಮೂಲಕ ರಕ್ಷಿಸಿದ ಮಹಾತ್ಮ ಗಾಂಧೀಜಿಯವರನ್ನು ದೇವರ ಸ್ಥಾನದಲ್ಲಿಟ್ಟು, ದೇವಾಲಯ ಕಟ್ಟಿ ಎಲ್ಲ ದೇವರಿಗೆ ಪೂಜಿಸುವಂತೆ, ನಿತ್ಯ ಪೂಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಕೋಟೇಶ್ವರದಿಂದ ಬಂದ 2.5 ಕೋಟಿ ವೆಚ್ಚದ ಬ್ರಹ್ಮರಥಕ್ಕೆ ಮಂಗ್ಳೂರಿನಲ್ಲಿ ಅದ್ಧೂರಿ ಸ್ವಾಗತ

    ಕೋಟೇಶ್ವರದಿಂದ ಬಂದ 2.5 ಕೋಟಿ ವೆಚ್ಚದ ಬ್ರಹ್ಮರಥಕ್ಕೆ ಮಂಗ್ಳೂರಿನಲ್ಲಿ ಅದ್ಧೂರಿ ಸ್ವಾಗತ

    ಮಂಗಳೂರು: ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಸೇರಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರ್ಪಣೆ ಮಾಡಲಿರುವ ಬ್ರಹ್ಮರಥಕ್ಕೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

    ಮಂಗಳೂರಿನ ಕದ್ರಿ ದೇವಸ್ಥಾನ ಬಳಿ ಸೋಮವಾರ ರಾತ್ರಿ ತಂಗಿದ್ದ ಬ್ರಹ್ಮರಥಕ್ಕೆ ಇಂದು ಬೆಳಗ್ಗೆ ಸಾರ್ವಜನಿಕರು, ಪ್ರಮುಖರು ಸೇರಿ ಆರತಿ ಎತ್ತಿದರು. ಸುಮಾರು 2.5 ಕೋಟಿ ವೆಚ್ಚದಲ್ಲಿ ಕುಂದಾಪುರದ ಕೋಟೇಶ್ವರದಲ್ಲಿ ಅಪೂರ್ವ ರಥ ನಿರ್ಮಿಸಲಾಗಿದ್ದು, ದೇವಸ್ಥಾನಕ್ಕೆ ತಲುಪಿದ ಬಳಿಕ ಚಕ್ರ, ಇನ್ನಿತರ ಪರಿಕರಗಳ ಜೋಡಣೆ ಆಗಲಿದೆ. ಇದನ್ನೂ ಓದಿ: ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉದ್ಯಮಿ ರಾಕೇಶ್ ಮಲ್ಲಿ, ದಾನಿ ಅಜಿತ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಚೆಂಡೆ ವಾದ್ಯಗಳ ಮೂಲಕ ರಥವನ್ನು ಸ್ವಾಗತಿಸಿ, ಬಳಿಕ ಉಪ್ಪಿನಂಗಡಿಯತ್ತ ಬೀಳ್ಕೊಡಲಾಯಿತು.

    ಇಂದು ಬಂಟ್ವಾಳ ಕಲ್ಲಡ್ಕ ಮೂಲಕ ಉಪ್ಪಿನಂಗಡಿಗೆ ತೆರಳಿ, ಅಲ್ಲಿಂದ ಬುಧವಾರ ಸಂಜೆ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯ ತಲುಪಲಿದೆ. ರಥದ ಜೊತೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಾಥ್ ನೀಡಿದ್ದಾರೆ.

  • ಕಟೀಲು ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದ ಶಿಲ್ಪಾ ಶೆಟ್ಟಿ

    ಕಟೀಲು ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದ ಶಿಲ್ಪಾ ಶೆಟ್ಟಿ

    ಮಂಗಳೂರು: ಬಾಲಿವುಡ್ ಖ್ಯಾತ ನಟಿ, ಕುಡ್ಲದ ಕುವರಿ ಶಿಲ್ಪಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕಟೀಲು ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಶಿಲ್ಪಾ ಶೆಟ್ಟಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಶಿಲ್ಪಾ ಶೆಟ್ಟಿ ಅವರಿಗೆ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. ಜೊತೆಗೆ ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬರುವಂತೆ ಕೋರಿ, ಆಮಂತ್ರಣ ಪತ್ರಿಕೆಯನ್ನು ನೀಡಿದರು.

    ಆಮಂತ್ರಣ ಹಾಗೂ ವಿಶೇಷ ಗೌರವವನ್ನು ಸ್ವೀಕರಿಸಿದ ಶಿಲ್ಪಾ ಶೆಟ್ಟಿ ಅವರು, ಬ್ರಹ್ಮಕಲಶೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಮಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಮಾತನಾಡಿ, ತಮ್ಮ ತಾಯ್ತನದ ಗುಟ್ಟನ್ನೂ ಹಂಚಿಕೊಂಡಿದ್ದಾರೆ. ತಾಯ್ನುಡಿ ತುಳುವಿನಲ್ಲಿಯೇ ಮಾತು ಆರಂಭಿಸಿ, ಮಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ತಮ್ಮ ಮೊದಲ ಬಾಣಂತನ ತುಂಬ ಕಷ್ಟಕರವಾಗಿತ್ತು ಎನ್ನುವುದನ್ನು ಹೇಳಿಕೊಂಡ ಶಿಲ್ಪಾ, ಮಹಿಳೆಯರು ಗರ್ಭ ಧರಿಸಿದ ಸಂದರ್ಭದಲ್ಲಿ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವುದು ಮುಖ್ಯ. ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು ಅಂತ ಕಿವಿಮಾತು ಹೇಳಿದರು.

    ಬಳಿಕ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಮತ್ತು ಮಹಿಳೆಯರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಮಹಿಳೆಯರ ಆರೋಗ್ಯ ಮತ್ತು ಅಡುಗೆ ಬಗ್ಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ವಿಚಾರವನ್ನೂ ಹಂಚಿಕೊಂಡರು.

  • ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

    ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

    ಗದಗ: ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲುಬಂಡೆಗಳು ಉರುಳಿಬಂದು ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿರುವ ಘಟನೆ ಗಜೇಂದ್ರಗಡ ತಾಲೂಕಿನ ಬೊಮ್ಮಸಾಗರದಲ್ಲಿ ನಡೆದಿದೆ.

    ಬೊಮ್ಮಸಾಗರಕ್ಕೆ ಹೊಂದಿಕೊಂಡು ಬೃಹತ್ ಗುಡ್ಡವಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿಯಲು ಆರಂಭಿಸಿದ್ದು, ಗುರುವಾರ ಭಾರೀ ಅನಾಹುತ ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಗುಡ್ಡ ಕುಸಿತದಿಂದಾಗಿ ಬೃಹದಾಕಾರದ ಬಂಡೆಗಳು ಗ್ರಾಮದ ಕಡೆಗೆ ಉರುಳಿ ಬರುತ್ತಿವೆ. ಪರಿಣಾಮ ಬೊಮ್ಮಸಾಗರ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿದೆ. ಅದೃಷ್ಟವಶಾತ್ ಈ ವೇಳೆ ಉಗ್ರಾಣದಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಆದರೆ ಗ್ರಾಮವು ಗುಡ್ಡದ ಅಡಿಯಲ್ಲೇ ಇರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

    ಗ್ರಾಮಕ್ಕೆ ಗಜೇಂದ್ರಗಡದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ, ಇ-ಹುಂಡಿ ವ್ಯವಸ್ಥೆ ಜಾರಿಗೆ ಸರ್ಕಾರ ನಿರ್ಧಾರ

    ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ, ಇ-ಹುಂಡಿ ವ್ಯವಸ್ಥೆ ಜಾರಿಗೆ ಸರ್ಕಾರ ನಿರ್ಧಾರ

    ಬೆಂಗಳೂರು: ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿವ ಬಿಜೆಪಿ ಸರ್ಕಾರವು, ಇ-ಹುಂಡಿ ವ್ಯವಸ್ಥೆ ಜಾರಿಗೆ ತರಲು ನಿರ್ಧಾರ ಕೈಗೊಂಡಿದೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, 15 ದಿನಗಳಲ್ಲಿ ರಾಜ್ಯ ಧಾರ್ಮಿಕ ಪರಿಷತ್ ರಚನೆ ಆಗಲಿದೆ. ಜೊತೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ರಚನೆ ಮಾಡುತ್ತೇವೆ. ಈ ಬೆನ್ನಲ್ಲೇ ಇ-ಹುಂಡಿ ಪ್ರಕ್ರಿಯೆ ಜಾರಿಗೆ ತರುತ್ತಿದ್ದೇವೆ. ಪ್ರಾರಂಭದಲ್ಲಿ 10-15 ದೇವಸ್ಥಾನಗಳಲ್ಲಿ ಇ-ಹುಂಡಿ ಪ್ರಕ್ರಿಯೆ ಜಾರಿ ಬಲಿದೆ ಎಂದು ತಿಳಿಸಿದರು.

    ಜಿಲ್ಲಾ ಪರಿಷತ್ ರಚನೆ ಆದ ಬಳಿಕ ಬಿ ಮತ್ತು ಸಿ ವಲಯದ ದೇವಾಲಯಗಳಿಗೆ ಆಡಳಿತ ಮಂಡಳಿಗಳ ನೇಮಕ ಮಾಡಲಾಗುತ್ತದೆ. ರಾಜ್ಯದಲ್ಲಿ ಇರು ಮುಜರಾಯಿ ದೇವಾಲಯಗಳ ಜಾಗ ಸರ್ವೆ ಮಾಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ವೆ ತಂಡ ರಚನೆ ಮಾಡಲಾಗುವುದು. ಸರ್ವೆ ವೇಳೆ ದೇವಸ್ಥಾನದ ಜಾಗ ಅತಿಕ್ರಮ ಮಾಡಿದ್ದರೆ ವಶಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇಷ್ಟು ದಿನ ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದ್ದ ಇಂಜಿನಿಯರಿಂಗ್ ವಿಭಾಗದ ಬದಲಾಗಿ ಇಲಾಖೆಯಿಂದಲೇ ಇಂಜಿನಿಯರಿಂಗ್ ವಿಭಾಗ ಪ್ರಾರಂಭ ಮಾಡಲಾಗುತ್ತೆ. ಇಲಾಖೆಯ ವ್ಯಾಪ್ತಿಗೆ ಬರುವ ಅನುವಂಶಿಕ ದೇವಸ್ಥಾನಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಎ ವರ್ಗದ 62 ದೇವಾಲಯಗಳಿಗೆ ಆಡಳಿತ ಮಂಡಳಿ ರಚನೆ ಮಾಡುವ ಆದೇಶ ಹೊರಡಿಸಲಾಗಿದೆ. ಇದಲ್ಲದೆ ಇಲಾಖೆಯಲ್ಲಿ ಅಗತ್ಯವಾಗಿ ಖಾಲಿ ಇರುವ ಒಂದು ಸಾವಿರ ಹುದ್ದೆಗಳ ನೇಮಕ ಶೀಘ್ರವೇ ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

    ಏನಿದು ಇ-ಹುಂಡಿ?
    ಭಕ್ತರು ನೀಡುವ ಕಾಣಿಕೆಯನ್ನು ನೇರವಾಗಿ ಇ-ಹುಂಡಿಗೆ ಹಾಕುವುದು. ಇದರಿಂದಾಗಿ ಕಾಣಿಕೆ ನೀಡುವುದಕ್ಕೆ ಯಾವುದೇ ವ್ಯಕ್ತಿಗಳ ಅವಶ್ಯಕತೆ ಇರುವುದಿಲ್ಲ. ಎಷ್ಟು ಹಣ ಹಾಕಲಾಗಿದೆ, ಹೆಸರು ಸಮೇತ ನಿಮಗೆ ಮಾಹಿತಿ ತಕ್ಷಣಕ್ಕೆ ಲಭ್ಯವಾಗುತ್ತದೆ. ಕಾಣಿಕೆ ಮೊತ್ತದ ವಿವರ ಸ್ಲಿಪ್‍ನಲ್ಲಿ ತಕ್ಷಣವೇ ಲಭ್ಯವಾಗಲಿದೆ. ಯಾವುದೇ ವ್ಯಕ್ತಿ ಕೈಗೆ ಕಾಣಿಕೆ ಕೊಡುವ ಅವಶ್ಯಕತೆ ಇರುವುದಿಲ್ಲ. ಅಷ್ಟೇ ಅಲ್ಲದೆ ಸ್ಲಿಪ್ ಬರೆಸುವ ಗೋಜು ಇರುವುದಿಲ್ಲ. ಭಕ್ತರು ಇ-ಹುಂಡಿಯಲ್ಲಿ ಹಾಕಿದ ಹಣ ನೇರವಾಗಿ ದೇವಸ್ಥಾನ ಬ್ಯಾಂಕ್ ಅಕೌಂಟ್‍ಗೆ ಜಮೆ ಆಗುತ್ತೆ. ಈ ಸೇವೆಗಳನ್ನು ನಿಂತಲ್ಲೆ ಬುಕ್ ಮಾಡಿಸಬಹುದು. ಇ-ಹುಂಡಿಯಲ್ಲಿ ಹಣ ಕಟ್ಟಿ ವಿಶೇಷ ಸೇವೆಗಳನ್ನು ದೇವಸ್ಥಾನಗಳಲ್ಲಿ ಮಾಡಿಸಬಹುದು.

    ಇದೇ ವೇಳೆ ನೆರೆ ಪರಿಹಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಕೇಂದ್ರ ತಂಡ ಪರಿಶೀಲನೆ ಮಾಡಿಕೊಂಡು ಹೋಗಿದೆ. ಆದಷ್ಟು ಬೇಗ ಕೇಂದ್ರ ಹೆಚ್ಚು ಅನುದಾನ ನೀಡುವ ನಿರೀಕ್ಷೆ ರಾಜ್ಯ ಸರ್ಕಾರಕ್ಕೆ ಇದೆ. ಆದಷ್ಟು ಬೇಗ ಕೇಂದ್ರದಿಂದ ಅನುದಾನ ಬರುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅನುದಾನ ರಾಜ್ಯಕ್ಕೆ ಬರಲಿದೆ. ಕೇಂದ್ರ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ ಎಂದು ತಿಳಿಸಿದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪರ ಬುಧವಾರ ನಡೆದ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಜಾರಿ ನಿರ್ದೇಶನಾಲಯ (ಇಡಿ) ತೆಗೆದುಕೊಂಡ ನಿರ್ಧಾರ ಸರಿ ಇದೆ. ನಮ್ಮ ಬಿಜೆಪಿ ನಾಯಕರು ಯಾರು ಪ್ರತಿಭಟನೆ ಹೋಗಿಲ್ಲ. ಯಾರಾದರು ಹೋಗಿದ್ದರೆ ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ನನ್ನ ಗಮನಕ್ಕೆ ಬಂದಿರುವಂತೆ ನಮ್ಮ ಪಕ್ಷದ ಯಾವ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಬಂಧನದಲ್ಲಿ ಕೇಂದ್ರ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ದೇವಸ್ಥಾನದ ವಿಚಾರಕ್ಕೆ ಗ್ರಾ.ಪಂ ಮಾಜಿ ಅಧ್ಯಕ್ಷ, ಪುತ್ರನ ಬರ್ಬರ ಹತ್ಯೆ

    ದೇವಸ್ಥಾನದ ವಿಚಾರಕ್ಕೆ ಗ್ರಾ.ಪಂ ಮಾಜಿ ಅಧ್ಯಕ್ಷ, ಪುತ್ರನ ಬರ್ಬರ ಹತ್ಯೆ

    – ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರೂ ಕ್ಯಾರೇ ಎನ್ನಲಿಲ್ಲ ಕ್ರೂರಿಗಳು

    ಧಾರವಾಡ: ದೇವಸ್ಥಾನದ ವಿಚಾರವಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಆತನ ಮಗನನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.

    ಜಮ್ಮಿಹಾಳ ಗ್ರಾಮದ ವೀರಭದ್ರಪ್ಪ ಸತ್ತೂರು (55) ಹಾಗೂ ರವಿಕುಮಾರ್ ಸತ್ತೂರು (29) ಕೊಲೆಯಾದ ತಂದೆ-ಮಗ. ಅದೇ ಗ್ರಾಮದ ಅಕ್ಕಿ ಕುಟುಂಬದ ಕೆಲವರು ಕೃತ್ಯ ಎಸಗಿದ ಆರೋಪಿಗಳು. ಗ್ರಾಮದ ಹೊರ ವಲಯದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ.

    ಜಮೀನು ಹಾಗೂ ಬೂದನಗುಡ್ಡದ ಬಸವೇಶ್ವರ ದೇವಸ್ಥಾನ ವಿಚಾರವಾಗಿ ಈ ಹಿಂದೆ ಸುತ್ತೂರು ಹಾಗೂ ಅಕ್ಕಿ ಕುಟುಂಬಗಳ ನಡುವೆ ಜಗಳವಾಗಿತ್ತು. ಸೋಮವಾರ ರಾತ್ರಿ 11 ಗಂಟೆ ಸುಮಾರು ಎರಡೂ ಕುಟುಂಬಗಳ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ವೀರಭದ್ರಪ್ಪ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲ ಕೆಲವರ ಮೇಲೆ ಹಲ್ಲೆ ಮಾಡಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವರ ಬಗ್ಗೆ ಆರೋಪಿಗಳು ಕಿಂಚಿತ್ತು ಕರುಣೆ ತೋರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ಎಸ್‍ಪಿ ವರ್ತಿಕಾ ಕಟಿಯಾರ್, ವೀರಭದ್ರಪ್ಪ ಸ್ಥಳದಲ್ಲೇ ಸಾವನ್ನಪಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರವಿಕುಮಾರ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 7 ಗಂಟೆ ಸುಮಾರು ಮೃತಪಟ್ಟಿದ್ದಾನೆ. ಉಳಿದಂತೆ 5 ಜನ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಕಲ್ಲಪ್ಪ ಸತ್ತೂರು ಅವರು ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಮ್ಮ ಸಿಬ್ಬಂದಿ 17 ಜನ ಆರೋಪಿಗಳ ಪೈಕಿ 13 ಮಂದಿಯನ್ನು ಬಂಧಿಸಿದ್ದಾರೆ. ಈಗಾಗಲೇ ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಜಮ್ಮಿಹಾಳ ಗ್ರಾಮದಲ್ಲಿ ಸದ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.

  • ಧರೆಗುರುಳಿದ ಬೃಹತ್ ಆಲದ ಮರ- ಶತಮಾನಗಳ ಇತಿಹಾಸವುಳ್ಳ ದೇಗುಲ ಜಖಂ

    ಧರೆಗುರುಳಿದ ಬೃಹತ್ ಆಲದ ಮರ- ಶತಮಾನಗಳ ಇತಿಹಾಸವುಳ್ಳ ದೇಗುಲ ಜಖಂ

    ದಾವಣಗೆರೆ: ಗಾಳಿ ಮಳೆಯಿಂದಾಗಿ ಹಳೆಯ ಆಲದ ಮರ ಪುರಾತನ ಗುಡಿಯ ಮೇಲೆ ಬಿದ್ದು, ದೇಗುಲದ ಮೇಲ್ಛಾವಣಿಗೆ ಧಕ್ಕೆಯಾದ ಘಟನೆ ತಾಲೂಕಿನ ಅಣಜಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

    ಅಣಜಿ ಗ್ರಾಮಕ್ಕೆ ಹೊಂದಿಕೊಂಡಿರುವ 2-3 ಶತಮಾನಗಳಷ್ಟು ಹಳೆಯದಾದ ಕೆರೆ ಹೊನ್ನಮ್ಮ ದೇವಿ ದೇವಸ್ಥಾನದ ಮೇಲೆ ದೈತ್ಯ ಆಲದ ಮರ ಉರುಳಿ ಬಿದ್ದಿದೆ. ಅಣಜಿಯ ಕೆರೆ ಹೊನ್ನಮ್ಮ ದೇವಿ ದೇಗುವ ಈ ಭಾಗದಲ್ಲಿ ಪ್ರಸಿದ್ಧವಾಗಿದ್ದು, ಇಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಸೇರುತ್ತಾರೆ. ಒಂದು ಭಾಗದಲ್ಲಿ ಕೆರೆ ಇದ್ದರೆ ಮತ್ತೊಂದು ಭಾಗದಲ್ಲಿ ಈ ಗುಡಿ ಇದೆ. ಆದ್ದರಿಂದ ಈ ಗುಡಿ ಖ್ಯಾತಿ ಪಡೆದುಕೊಂಡಿದೆ.

    ಇದರ ಜೊತೆಗೆ ಸುಮಾರು 130 ವರ್ಷಗಳ ಇತಿಹಾಸವಿದ್ದ ಆಲದ ಮರ, ದೇಗುಲಕ್ಕೆ ಮತ್ತಷ್ಟು ಕಳೆ ತಂದಿತ್ತು. ದೈತ್ಯ ಆಲದ ಮರ ಸತತ ಮಳೆಯಿಂದಾಗಿ ಹಾಗೂ ಹಳೆಯ ಮರವಾಗಿದ್ದರಿಂದ ಅದರ ಒಳಗೊಳಗೆ ನೀರು ತುಂಬಿತ್ತು.

    ಈ ಮರದ ಮಧ್ಯೆ ಇರುವ ಪೊಟರೆಗಳಲ್ಲಿ ನೀರು ನಿಂತು ಬೇರುಗಳು ಹಾಳಾಗಿದ್ದವು. ಹೀಗಾಗಿ ಗಾಳಿ ಬೀಸಿದಾಗ ಮರ ವಾಲುತ್ತಲೇ ಇತ್ತು. ಸದ್ಯ ಈ ಇತಿಹಾಸವುಳ್ಳ ಆಲದ ಮರ ಶನಿವಾರ ಸುರಿದ ಗಾಳಿ, ಮಳೆಗೆ ಧರೆಗುರುಳಿದೆ. ಪರಿಣಾಮ ಅದರ ಪಕ್ಕದಲ್ಲಿದ್ದ ದೇವಸ್ಥಾನ ಜಖಂಗೊಂಡಿದೆ. ದೇವಸ್ಥಾನದ ಮೇಲ್ಛಾವಣಿ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ.

  • ಜೀವನದಿ ಸ್ವರ್ಣೆಗೆ ಬಾಗಿನ ಅರ್ಪಿಸಿದ ಸಚಿವ ಕೋಟ ದಂಪತಿ

    ಜೀವನದಿ ಸ್ವರ್ಣೆಗೆ ಬಾಗಿನ ಅರ್ಪಿಸಿದ ಸಚಿವ ಕೋಟ ದಂಪತಿ

    ಉಡುಪಿ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯ ಜೀವನದಿ ಸ್ವರ್ಣೆಗೆ ಬಾಗಿನ ಅರ್ಪಿಸಿದ್ದಾರೆ. ಶೀಂಬ್ರಾ ಸಿದ್ಧಿ ವಿನಾಯಕ ದೇವಸ್ಥಾನದ ತಪ್ಪಲಲ್ಲಿರುವ ಸ್ನಾನ ಘಟ್ಟಕ್ಕೆ ಕೋಟ ದಂಪತಿ ಸಮೇತ ಆಗಮಿಸಿ ಸ್ವರ್ಣೆಗೆ ಬಾಗಿನ ಅರ್ಪಿಸಿದರು.

    ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ತೀರ್ಥ, ಹಾಲು, ಬಾಗಿನವನ್ನು ಅರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಗಿನ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಶೀಂಬ್ರಾ ದೇವಸ್ಥಾನ, ಸ್ನಾನಘಟ್ಟವನ್ನು ಮುಜರಾಯಿ ಇಲಾಖೆಯಿಂದ ಅಭಿವೃದ್ಧಿ ಮಾಡಲಾಗುವುದು. ಡಾ. ವಿಎಸ್ ಆಚಾರ್ಯ ಕಾಲದಿಂದ ಈ ಕ್ಷೇತ್ರ ಪ್ರಸಿದ್ಧಿಯಲ್ಲಿದೆ ಎಂದರು.

    ಮುಜರಾಯಿ ದೇವಸ್ಥಾನದ ಹಣ ದುರ್ಬಳಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯ ಹಣ ದುರ್ಬಳಕೆ ಆಗಲು ಬಿಡಲ್ಲ. ಇದು ಮುಜುರಾಯಿ ಇಲಾಖೆಯ ನಿರ್ಣಯ. ಈ ಬಗ್ಗೆ ಈಗಾಗಲೇ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. 27 ಸಾವಿರ ದೇವಸ್ಥಾನಗಳಿಗೆ ಇಲಾಖೆಯಿಂದ ತಸ್ತೀಕು (ಸಂಬಳ) ನೀಡಲಾಗುತ್ತಿದೆ. ವರ್ಷಕ್ಕೆ 48 ಸಾವಿರ ತಸ್ತೀಕು ಕೊಡುತ್ತೇವೆ. ತಸ್ತೀಕಿನಲ್ಲಿ ತಾರತಮ್ಯ ಇದೆ ಎಂಬ ಆರೋಪ ಇದೆ. ಈ ಗವರ್ನೆನ್ಸ್ ಮೂಲಕ ಖಾತೆಗೆ ಹಣ ಜಮಾ ಮಾಡಲು ಯೋಜನೆ ಹಾಕಿದ್ದೇವೆ ಎಂದರು. ಈ ಬಗ್ಗೆ ಸೂಕ್ತ ಆದೇಶ ಹೊರಡಿಸಿದ್ದೇನೆ, ವಾರದೊಳಗೆ ಈ ಕುರಿತ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಕೋಟ ಹೇಳಿದರು.

  • ದೇವರ ಸೇವೆಗೆ ಬಂದ ಹಣವನ್ನು ತನ್ನ ಖಾತೆಗೆ ಹಾಕಿಕೊಂಡ ಅರ್ಚಕ

    ದೇವರ ಸೇವೆಗೆ ಬಂದ ಹಣವನ್ನು ತನ್ನ ಖಾತೆಗೆ ಹಾಕಿಕೊಂಡ ಅರ್ಚಕ

    ಮೈಸೂರು: ದೇವಸ್ಥಾನಕ್ಕೆ ಭಕ್ತರು ಮನಿ ಆರ್ಡರ್ ಮೂಲಕ ಕಳುಹಿಸಿದ ಹಣವನ್ನು ಅರ್ಚಕ ತನ್ನ ಖಾತೆಗೆ ಹಾಕಿಕೊಂಡ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ನಂಜನಗೂಡು ತಾಲೂಕಿನ ಹೆಮ್ಮರಗಾಲದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅರ್ಚಕ ಎನ್. ವೀರರಾಘವನ್ ಹೀಗೆ ದೇವಸ್ಥಾನದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅರ್ಚಕನ ಮೇಲೆ ಗ್ರಾಮಸ್ಥರು ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

    ಗ್ರಾಮಸ್ಥರ ದೂರಿಗೆ ಸ್ಪಂದಿಸಿ ತಹಶೀಲ್ದಾರ್ ಲೆಕ್ಕ ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ವೇಳೆಯಲ್ಲಿ 2011ರಿಂದ 2015 ರವರೆಗೆ 188 ಮನಿ ಆರ್ಡರ್ ಗಳು ವೀರರಾಘವನ್ ಖಾತೆಗೆ ಜಮಾ ಆಗಿರುವುದು ಗೊತ್ತಾಗಿದೆ.

    ಈ ಬಗ್ಗೆ ತಹಶೀಲ್ದಾರ್ ನೀಡಿದ ನೋಟೀಸ್‍ಗೆ ಹೆದರಿದ ಅರ್ಚಕ ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಿ ಈಗ ಪ್ರಕರಣ ಇತ್ಯರ್ಥಗೊಳಿಸುವಂತೆ ತಹಶೀಲ್ದಾರ್‍ಗೆ ಪತ್ರ ಬರೆದಿದ್ದಾರೆ.