Tag: ದೇವಸ್ಥಾನ

  • ನಿತ್ಯಾನಂದನ ಜೊತೆಗಿರುವ ಫೋಟೋ ನಕಲಿ – ಚಿನ್ಮಯಿ ಶ್ರೀಪಾದ ಸ್ಪಷ್ಟನೆ

    ನಿತ್ಯಾನಂದನ ಜೊತೆಗಿರುವ ಫೋಟೋ ನಕಲಿ – ಚಿನ್ಮಯಿ ಶ್ರೀಪಾದ ಸ್ಪಷ್ಟನೆ

    ಚೆನ್ನೈ: ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದೀಗ ನಿತ್ಯಾನಂದನ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಚಿನ್ಮಯಿ ಹಾಗೂ ಅವರ ತಾಯಿ ನಿತ್ಯಾನಂದನಿಂದ ಹೂ ಪಡೆಯುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಅಭಿಮಾನಿ ಚಿನ್ಮಯಿ ಅವರಲ್ಲಿ ನೀವು ನಿತ್ಯಾನಂದನ ಭಕ್ತರೇ ಎಂದು ಕೇಳಿದ್ದಾರೆ.

    ಅಭಿಮಾನಿಗಳ ಪ್ರಶ್ನೆಗೆ ಚಿನ್ಮಯಿ ಅವರು ನೈಜ ಹಾಗೂ ನಕಲಿ ಚಿತ್ರ ಎರಡೂ ಫೋಟೋಗಳನ್ನು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನೈಜ ಚಿತ್ರದಲ್ಲಿ ಚಿನ್ಮಯಿ ಮತ್ತು ತಾಯಿ ದೇವಾಲಯ ಅರ್ಚಕರಿಂದ ಪ್ರಸಾದ ಪಡೆಯುತ್ತಿದ್ದರೆ, ಕಿಡಿಗೇಡಿಗಳು ಈ ಚಿತ್ರವನ್ನು ಎಡಿಟ್ ಮಾಡಿ ನಿತ್ಯಾನಂದನನ್ನು ಸೇರಿಸಿದ್ದಾರೆ. ಇದರಲ್ಲಿ ಹೂವು ನೀಡುತ್ತಿರುವ ಅರ್ಚಕರ ಜಾಗಕ್ಕೆ ನಿತ್ಯಾನಂದನ ಫೋಟೋ ಹಾಕಲಾಗಿದೆ.

    ಇದು ನಕಲಿ ಫೋಟೋ ಎಂದು ಹಲವು ಬಾರಿ ಹೇಳಿದರೂ ಅಭಿಮಾನಿಗಳು ಯಾಕೆ ಪದೇ ಪದೆ ಈ ಫೋಟೋವನ್ನು ಹರಿಬಿಡುತ್ತಿದ್ದಾರೆ ತಿಳಿಯುತ್ತಿಲ್ಲ. ಇದನ್ನು ಸುಮ್ಮನೆ ಮಾಡುತ್ತಿದ್ದಿರೋ ಅಥವಾ ಯಾರಾದರೂ ಹಣ ಕೊಟ್ಟು ಮಾಡಿಸುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.

    ಈ ಫೋಟೋ ಟ್ವೀಟ್ ಮಾಡಿದ ವ್ಯಕ್ತಿಯ ಟ್ವಿಟ್ಟರ್ ಖಾತೆಯ ಲಿಂಕನ್ನು ಚಿನ್ಮಯಿ ತಮ್ಮ ಟ್ವೀಟಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆ ಖಾತೆಯಿಂದ ಇದೀಗ ಪೋಸ್ಟ್ ಡಿಲೀಟ್ ಆಗಿದ್ದು ಈ ಕುರಿತು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಚಿನ್ಮಯಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.

    ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಕನ್ನಡದಲ್ಲಿಯೂ ಹಲವು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ಹಾಗೂ ತಮಿಳು ಸಾಹಿತಿ ವೈರಮುತ್ತು ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಯಾಗಿದ್ದರು.

  • ರೋಹಿಣಿ ಸಿಂಧೂರಿ ಹೆಸ್ರಲ್ಲಿ ಹಾಸನದ ದೇವಾಲಯದಲ್ಲಿ ಪ್ರತಿ ಸೋಮವಾರ ಪೂಜೆ

    ರೋಹಿಣಿ ಸಿಂಧೂರಿ ಹೆಸ್ರಲ್ಲಿ ಹಾಸನದ ದೇವಾಲಯದಲ್ಲಿ ಪ್ರತಿ ಸೋಮವಾರ ಪೂಜೆ

    ಹಾಸನ: ಪುರಾತನ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಹಾಸನದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.

    ಇದರ ಜೊತೆಗೆ ಅಧಿಕಾರಿಯ ಹೆಸರಿನಲ್ಲಿ ಮರ ಬೆಳೆಸಲಾಗುತ್ತಿದ್ದು ಪ್ರತಿದಿನ ಜಲಾಭಿಷೇಕ ಕೂಡ ನಡೆಯುತ್ತದೆ. ಈ ಪುರಾತನ ದೇವಾಲಯ ಶಿಥಿಲಾವಸ್ಥೆಗೆ ತೆರಳಿದ್ದರೂ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಲಿಲ್ಲ. ಆದರೆ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದರು.

    2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ತಕ್ಷಣ 30 ಲಕ್ಷ ಹಣ ಬಿಡುಗಡೆ ಮಾಡಿಸಿದ್ದರು. ಪರಿಣಾಮ ದೇವಾಲಯಕ್ಕೆ ವಿಶೇಷವಾದ ಮೇಲ್ಛಾವಣಿ, ನೆಲಹಾಸು ಮತ್ತು ವಿದ್ಯುತ್ ಸೌಕರ್ಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಯಿತು. ಅಂದಿನಿಂದ ಇಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಇಲ್ಲಿ ಪ್ರತಿ ಸೋಮವಾರ ಅರ್ಚನೆ ಮಾಡಲಾಗುತ್ತದೆ.

    ಗಿಡಗಂಟೆಗಳು ಬೆಳೆದು ಕಾಡಿನಂತಿದ್ದ ದೇವಾಲಯದ ಆವರಣದಲ್ಲಿ ವಿಶೇಷವಾದ ಮರಗಳಿದ್ದು ಅವುಗಳೊಂದಿಗೆ ರೋಹಿಣಿ ಸಿಂಧೂರಿ ಹೆಸರಿನಲ್ಲಿಯೂ ಸಹ ಒಂದು ಗಿಡವನ್ನು ನೆಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಈ ಗಿಡವನ್ನು ತಂದು ದೇವಾಲಯದ ಆವರಣದಲ್ಲಿ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಗಿಡಕ್ಕೆ ಪ್ರತಿದಿನ ದೇವಾಲಯದ ಪೂಜೆಯ ಅಭಿಷೇಕದ ನೀರನ್ನು ಹಾಕುತ್ತಾರೆ. ಪ್ರತಿ ಸೋಮವಾರ ಗಿಡಕ್ಕು ಸಹ ಅಭಿಷೇಕ ಮಾಡಲಾಗುತ್ತದೆ. ದೇವಾಲಯಕ್ಕೆ ತಮ್ಮ ತಾಯಿಯೊಂದಿಗೆ ಭೇಟಿ ನೀಡಿದ ಸಿಂಧೂರಿ ಅಂದು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಮಾಡಿದ ಒಂದು ಕೆಲಸ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

  • ಶ್ರೀಶೈಲಂನಲ್ಲಿ ರಾಜ್ಯದ ಭಕ್ತರಿಗೆ ಅನ್ಯಾಯ – ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಭಕ್ತರ ಪರದಾಟ

    ಶ್ರೀಶೈಲಂನಲ್ಲಿ ರಾಜ್ಯದ ಭಕ್ತರಿಗೆ ಅನ್ಯಾಯ – ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಭಕ್ತರ ಪರದಾಟ

    ರಾಯಚೂರು: ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಎಂದರೆ ದೇಶದ ಮೂಲೆ ಮೂಲೆಯಲ್ಲೂ ಭಕ್ತರಿದ್ದಾರೆ. ಆದರೆ ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರಿಗೆ ಮಾತ್ರ ಅನ್ಯಾಯವಾಗುತ್ತಿದೆ. ಹೀಗಾಗಿ ರಾಯಚೂರಿನ ನೂರಾರು ಭಕ್ತರು ಹೋರಾಟಕ್ಕೆ ಮುಂದಾಗಿದ್ದಾರೆ.

    ಕರ್ನಾಟಕ ಸರ್ಕಾರ ಪರಭಾರೆಯಿರುವ 4 ಎಕರೆ 13 ಗುಂಟೆ ಜಾಗ ಈಗ ಆಂಧ್ರಪ್ರದೇಶ ಪಾಲಾಗುತ್ತಿದೆ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಕರ್ನಾಟಕ ಭಕ್ತರಿಗಾಗಿ 99 ವರ್ಷ ಕಾಲ ರಾಜ್ಯಕ್ಕೆ ನೀಡಿದ ಭೂಮಿ ರಾಜ್ಯ ಸರ್ಕಾದಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದೆ. ಹೀಗಾಗಿ ಶ್ರೀಶೈಲಂ ಆಡಳಿತ ಮಂಡಳಿ ಕರ್ನಾಟಕಕ್ಕೆ ಮಾಹಿತಿಯನ್ನು ನೀಡದೆ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ.

    ಶ್ರೀಶೈಲಂನಲ್ಲಿರುವ ಕರ್ನಾಟಕ ಛತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು, ಭಕ್ತರಿಗೆ ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ. ರಾಜ್ಯದಿಂದ ತೆರಳುವ ಸಾವಿರಾರು ಭಕ್ತರು ವಸತಿ ವ್ಯವಸ್ಥೆ ಇಲ್ಲದೆ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನ ಭಕ್ತರು ಶ್ರೀಶೈಲಂನಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯಕ್ಕೆ ನೀಡಿದ ಜಾಗವನ್ನು ಅಭಿವೃದ್ಧಿಪಡಿಸಿ ರಾಜ್ಯದ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿದ್ದಾರೆ.

  • ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

    ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

    ಚಾಮರಾಜನಗರ: ವಿಷ ಪ್ರಸಾದ ಸೇವನೆಯಿಂದ 17 ಮಂದಿ ಸಾವನ್ನಪ್ಪಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು ಸಹ ಭಕ್ತರಿಗೆ ಆ ದೇವಿಯ ಮೇಲಿನ ಭಕ್ತಿ ಒಂದಿನಿತು ಕಡಿಮೆಯಾಗಿಲ್ಲ. ಈ ದುರಂತದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿ ಒಂದು ವರ್ಷ ಕಳೆಯುತ್ತಾ ಬಂದಿದೆ. ದೇವಿಯ ದರ್ಶನ ಸಿಗದೇ ಭಕ್ತರು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ಮುನಿಸಿಕೊಂಡಿದ್ದಾಳೆ ಎಂಬುದು ಅಲ್ಲಿನ ಜನರ ನಂಬಿಕೆ. ಹೀಗಾಗಿಯೇ ಹಲವಾರು ರೀತಿಯ ರೋಗ ರುಜಿನಗಳು, ಸಂಕಷ್ಟಗಳು ಬರುತ್ತಿವೆ ಎಂದು ಭಕ್ತರು ನಂಬಿದ್ದಾರೆ.

    ಹೌದು. ಜಿಲ್ಲೆಯ ಹನೂರು ತಾಲೋಕಿನ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವ ಹುನ್ನಾರಕ್ಕೆ 17 ಮಂದಿ ಬಲಿಯಾಗಿದ್ದರು. ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗು ಇತರ ಮೂವರು ಸೇರಿ ಪ್ರಸಾದದಲ್ಲಿ ವಿಷಬೆರೆಸಿ ದೊಡ್ಡ ದುರಂತಕ್ಕೆ ಕಾರಣವಾಗಿ ಕಂಬಿ ಎಣಿಸುತ್ತಿದ್ದಾರೆ.

    ಈ ದುರಂತದ ಹಿನ್ನೆಲೆಯಲ್ಲಿ ಕಿಚ್ ಗುತ್ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸಿ ಬೀಗ ಜಡಿಯಲಾಗಿದೆ. ಹೀಗಾಗಿ ಪೂಜೆಯು ನಿಂತು ಹೋಗಿದೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ದೇವಿ ಮುನಿಸಿಕೊಂಡಿದ್ದಾಳೆ. ಹಾಗಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ತಾಯಿ ಮಾರಮ್ಮನ ಬಾಗಿಲು ಮುಚ್ಚಿದ ನಂತ್ರ ಸಂಕಷ್ಟಗಳು ಎದುರಾಗಿದ್ದು ಇದೆಲ್ಲ ದೂರಾಗಬೇಕು ಅಂದರೆ ದೇವಾಸ್ಥಾನದ ಬಾಗಿಲು ತೆರೆಯುವಂತೆ ಅಳಲು ತೋಡಿಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿಕ್ಷಣ ಸಚಿವ ಇಂದು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಕ್ತರ ಕಣ್ಣಿರ ಕಟ್ಟೆ ಒಡೆಯಿತು. ದೇವಸ್ಥಾನವನ್ನು ಕೂಡಲೇ ತೆರೆಯುವಂತೆ ಭಕ್ತರು ಗೋಳಿಟ್ಟ ಪ್ರಸಂಗ ನಡೆಯಿತು. ಈ ವೇಳೆ ಸಚಿವರು, ಕಿಚ್ ಗುತ್ ಮಾರಮ್ಮ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅನುಮತಿ ಪಡೆದು ಆದಷ್ಟು ಬೇಗ ಅರ್ಚಕರನ್ನು ನೇಮಿಸಿ ದೇವಸ್ಥಾನ ತೆರೆಯುವುದಾಗಿ ಭರವಸೆ ನೀಡಿದರು.

    ಇದಕ್ಕೂ ಮೊದಲು ಸಚಿವ ಸುರೇಶ್ ಕುಮಾರ್ ವಿಷ ದುರಂತದ ಸಂತ್ರಸ್ತರನ್ನು ಭೇಟಿಯಾಗಿದ್ದು, ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ ಮೃತಪಟ್ಟವರ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

  • ಅದ್ಧೂರಿಯಾಗಿ ಸಾಗಿದ 99 ನೇ ವರ್ಷದ ಗಣಪತಿ ಬ್ರಹ್ಮರಥೋತ್ಸವ

    ಅದ್ಧೂರಿಯಾಗಿ ಸಾಗಿದ 99 ನೇ ವರ್ಷದ ಗಣಪತಿ ಬ್ರಹ್ಮರಥೋತ್ಸವ

    ಮಡಿಕೇರಿ: ಜಿಲ್ಲೆಯ ಗಡಿಭಾಗ ಕುಶಾಲನಗರದಲ್ಲಿ ಐತಿಹಾಸಿಕ ಗಣಪತಿ ದೇವಾಲಯದ 99ನೇ ವರ್ಷದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.

    ಅಭಿಜಿನ್ ಲಗ್ನದಲ್ಲಿ ಅರಂಭವಾದ ಗಣಪತಿ ರಥಕ್ಕೆ ಸಾವಿರಾರು ಭಕ್ತರು ಬಾಳೆಹಣ್ಣು ಎಸೆದು ಭಕ್ತಿಭಾವ ಮೆರೆದರು. ಇದಕ್ಕೂ ಮೊದಲು ದೇವಾಲಯದ ಒಳಗಿನಿಂದ ಬೆಳ್ಳಿಯ ಗಣಪತಿ ಉತ್ಸವ ಮೂರ್ತಿಯನ್ನು ಹೊರಗೆ ತರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಗಣಪತಿಬಪ್ಪಾ ಮೋರಿಯಾ ಎಂದು ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

    ದೇವಾಲಯ ಮುಂಭಾಗ ನೂರಾರು ಅಯ್ಯಪ್ಪ ಭಕ್ತ ಮಾಲಾಧಾರಿಗಳು ಓಂ ಆಕಾರದಲ್ಲಿ ಕರ್ಪೂರ ಹಚ್ಚಿ ಭಜಿಸಿದರು. ಒಂದುಗಂಟೆಗೆ ಸರಿಯಾಗಿ ಆರಂಭವಾದ ರಥೋತ್ಸವಕ್ಕೆ ಸಾವಿರಾರು ಭಕ್ತರು ತೆಂಗಿನ ಕಾಯಿಗಳನ್ನು ಈಡುಗಾಯಿ ಹೊಡೆದು ತಮ್ಮ ಇಷ್ಟಾರ್ಥಗಳು ಫಲಿಸಲೆಂದು ಹರಕೆ ತೀರಿಸಿದರು.

    ಗಣಪತಿ ದೇವಾಲಯದಿಂದ ರಥಬೀದಿಯ ಮೂಲಕ ಆಂಜನೇಯ ದೇವಾಲಯದವರೆಗೆ ಸಾವಿರಾರು ಭಕ್ತರು ರಥ ಎಳೆದು ಭಕ್ತಿ ಮೆರೆದರು. ದೇಶದಲ್ಲಿಯೇ ಇದು ಪ್ರತೀ ವರ್ಷದ ಮೊದಲ ಮತ್ತು ಗಣಪತಿ ರಥೋತ್ಸವ ಎನ್ನೋದು ವಿಶೇಷ. ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ನೇತೃತ್ವದಲ್ಲಿ ರಥೋತ್ಸವ ನೆರವೇರಿತು.

  • ದೇವಾಲಯದ ಚಪ್ಪರಕ್ಕೆ ನೇಣು ಬಿಗಿದುಕೊಂಡು ವಿಧಾನಸೌಧದ ಉದ್ಯೋಗಿ ಆತ್ಮಹತ್ಯೆ

    ದೇವಾಲಯದ ಚಪ್ಪರಕ್ಕೆ ನೇಣು ಬಿಗಿದುಕೊಂಡು ವಿಧಾನಸೌಧದ ಉದ್ಯೋಗಿ ಆತ್ಮಹತ್ಯೆ

    ರಾಮನಗರ: ದೇವಾಲಯಕ್ಕೆ ಬಂದ ಉದ್ಯೋಗಿಯೊಬ್ಬರು ದೇವಸ್ಥಾನದ ಚಪ್ಪರಕ್ಕೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ವಿಧಾನಸೌಧದ ಸಹಕಾರಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಹೇಮಾವತಿ ಆತ್ಮಹತ್ಯೆಗೆ ಶರಣಾದ ಉದ್ಯೋಗಿ.

    ಆತ್ಮಹತ್ಯೆಗೆ ಶರಣಾದ ಹೇಮಾವತಿ ಕಲ್ಲನಕಪ್ಪೆ ಗ್ರಾಮದ ಮಹಾದೇಶ್ವರ ದೇವಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ದೇವಾಲಯಕ್ಕೆ ಬಂದಾಗ ದೇವಾಲಯದ ಮುಂಭಾಗ ಹಾಕಿದ್ದ ಚಪ್ಪರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

    ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

  • ಕೊಟ್ಟಿಗೆಯಲ್ಲಿ ಸಿಕ್ತು ದೇವಿ ಮೂರ್ತಿ – ದೇವಸ್ಥಾನ ಕಟ್ಟಿಸಿದ ಭಕ್ತರು

    ಕೊಟ್ಟಿಗೆಯಲ್ಲಿ ಸಿಕ್ತು ದೇವಿ ಮೂರ್ತಿ – ದೇವಸ್ಥಾನ ಕಟ್ಟಿಸಿದ ಭಕ್ತರು

    ಧಾರವಾಡ: ಇದು ಜನ ಮರಳೋ ಜಾತ್ರೆ ಮರಳೋ ಎಂಬಂತಿದೆ. ಯಾಕೆಂದರೆ ಧಾರವಾಡದ ದುಂಡಿ ಓಣಿಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂದು ಅಲ್ಲಿನ ಜನ ಹೇಳುತಿದ್ದಾರೆ. ಹೌದು, ಧಾರವಾಡ ನಗರದ ಹೊಸಯಲ್ಲಾಪೂರದ ದುಂಡಿ ಓಣಿಯಲ್ಲಿರುವ ಯಲ್ಲನಗೌಡ ಪಾಟೀಲರ ಮನೆಯಲ್ಲಿ ಈ ಪವಾಡ ನಡೆದಿದೆ.

    ದೀಪಾವಳಿ ಪಾಂಡ್ಯಮಿಯ ದಿನ ಮನೆಗೆ ಬಂದ ಅಪರಿಚಿತ ಮಹಿಳೆಯೋರ್ವಳು ದನದ ಕೊಟ್ಟಿಗೆ ಹತ್ತಿರ ಇರುವ ಜಾಗದಲ್ಲಿ ನಿಂತು, ಇಲ್ಲಿ ಗೋಡೆಯ ಮೇಲೆ ದ್ಯಾಮವ್ವ ದೇವಿ ಇದ್ದಾಳೆ ಎಂದು ಹೇಳಿದ್ದಳಂತೆ. ಇದನ್ನು ನಂಬಿದ ಆ ಮನೆಯವರು ದನದ ಕೊಟ್ಟಿಗೆಯನ್ನು ತೆಗದು ತೆಗೆದು ನೋಡಿದರೆ ಅಲ್ಲಿ ದೇವಿಯ ಪಾದಗಳು ಅವರಿಗೆ ಸಿಕ್ಕಿವೆ.

    ನಂತರ ಕಲ್ಲಿನ ಮೇಲೆ ಮೂರ್ತಿ ಕೆತ್ತನೆ ಮಾಡಿದ್ದು ಸಿಕ್ಕಿದೆ. ಇದು ಸಿಕ್ಕಿದ್ದೇ ತಡ ಎಲ್ಲ ಜನರು ಹಾಗೂ ಮನೆಯವರು ಇದೊಂದು ಪವಾಡ ಎಂದು ತಿಳಿದು ಮನೆಯಲ್ಲಿ ದೇವಿ ನೋಡಲು ಈಗ ಜನಸಾಗರವೇ ಹರಿದು ಬರುತ್ತಿದ್ದು, ಪ್ರತಿ ದಿನ ಪೂಜೆ ಪುನಸ್ಕಾರ ಆರಂಭವಾಗಿದೆ. ಈ ಮನೆಯವರು ದೇವಿ ಸಿಕ್ಕ ಜಾಗದಲ್ಲಿ ಸಣ್ಣ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

  • ನೋಟುಗಳಿಂದ ಅಲಂಕಾರಗೊಂಡ ಮಹಾಲಕ್ಷ್ಮಿ

    ನೋಟುಗಳಿಂದ ಅಲಂಕಾರಗೊಂಡ ಮಹಾಲಕ್ಷ್ಮಿ

    ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಮೈಸೂರಿನ ಅಮೃತೇಶ್ವರಿ ದೇಗುಲದಲ್ಲಿ ಮಹಾಲಕ್ಷ್ಮಿ ದೇವಿಗೆ ನೋಟುಗಳಿಂದ ಅಲಂಕಾರ ಮಾಡಲಾಗಿದೆ.

    ದೀಪಾವಳಿ ಅಮವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ದೇಗುಲಕ್ಕೆ ನೀಡಿದ ಹಣ ಮತ್ತು ನಾಣ್ಯಗಳಲ್ಲಿಯೇ ದೇವಿಗೆ ಅಲಂಕಾರ ಮಾಡಲಾಗಿದೆ. ಅಲಂಕಾರಕ್ಕಾಗಿ ಸುಮಾರು 10 ಲಕ್ಷ ರೂ. ಬಳಸಲಾಗಿದೆ. ಬೆಳಗ್ಗೆ ಧನಲಕ್ಷ್ಮಿ ಹೋಮ ಮತ್ತು ಸಂಜೆ ಧನಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ನಂತರ ಭಕ್ತಾದಿಗಳಿಗೆ ಪ್ರಸಾದ, ನಾಣ್ಯ ಮತ್ತು ಕುಂಕುಮ ವಿತರಿಸಲಾಗುತ್ತದೆ ಎಂದು ಅರ್ಚಕ ಸೋಮಶೇಖರ್ ಹೇಳಿದ್ದಾರೆ.

    ಇದೇ ವೇಳೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಲೆಂದು ವಿಶೇಷ ಹೋಮ ಹವನಗಳನ್ನು ನೆರವೇರಿಸಲಾಯಿತು. ನೋಟುಗಳಿಂದ ದೇವಿಗೆ ಅಲಂಕಾರ ಮಾಡಿರೋದನ್ನು ನೋಡಲು ಭಕ್ತಾಧಿಗಳು ತಂಡೋಪತಂಡವಾಗಿ ಆಗಮಿಸಿದ ತಾಯಿಯ ದರ್ಶನ ಪಡೆದರು.

  • ದೇವಸ್ಥಾನದಲ್ಲಿ ಮೋಜು-ಮಸ್ತಿ ವಿರೋಧಿಸಿದ್ದ ಯುವಕನ ಕೊಲೆಗೆ ಯತ್ನ

    ದೇವಸ್ಥಾನದಲ್ಲಿ ಮೋಜು-ಮಸ್ತಿ ವಿರೋಧಿಸಿದ್ದ ಯುವಕನ ಕೊಲೆಗೆ ಯತ್ನ

    ಮಂಗಳೂರು: ದೇವಸ್ಥಾನದಲ್ಲಿ ಮೋಜು-ಮಸ್ತಿ ವಿರೋಧಿಸಿದ್ದ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರು ಹೊರ ವಲಯದಲ್ಲಿ ನಡೆದಿದೆ.

    ಮಂಗಳೂರು ನಿವಾಸಿ ಸಂತೋಷ್ ಹಲ್ಲೆಗೊಳಗಾದ ಯುವಕ. ಹಲ್ಲೆಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಂತೋಷ್‍ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಗರದ ಹೊರ ವಲಯದ ದೇವಸ್ಥಾನವೊಂದರಲ್ಲಿ ಬುಧವಾರ ನಾಲ್ವರು ಮದ್ಯ ಸೇವಿಸಿ ಮೋಜು-ಮಸ್ತಿ ನಡೆಸಿದ್ದರು. ಇದನ್ನು ನೋಡಿದ್ದ ಸಂತೋಷ್ ಅವರಿಗೆ ಹಿಗ್ಗಾಮುಗ್ಗಾ ಬೈದು ಕಳುಹಿಸಿದ್ದ. ಇದರಿಂದ ಕೋಪಗೊಂಡಿದ್ದ ದುಷ್ಕರ್ಮಿಗಳು ಸಂತೋಷ್ ಕೊಲೆಗೆ ಪ್ಲ್ಯಾನ್ ರೂಪಿಸಿದ್ದರು.

    ಸಂತೋಷ್ ಬೈಕ್‍ನಲ್ಲಿ ಮಂಗಳೂರಿನಿಂದ ಮನೆಗೆ ತೆರಳುತ್ತಿದ್ದ. ಈ ವೇಳೆ ಮಂಗಳೂರು ಹೊರವಲಯದ ನೀರುಮಾರ್ಗ ಬಳಿಯ ಪಡು ಎಂಬಲ್ಲಿ ಸಂತೋಷ್‍ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ಮಾಡಿದ್ದಾರೆ. ಘಟನೆಯಿಂದಾಗಿ ಗಾಯಗೊಂಡ ಸಂತೋಷ್ ಸ್ಥಳದಲ್ಲಿಯೇ ಬಿದ್ದು ಒದ್ದಾಡುತ್ತಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ, ಸಂತೋಷ್‍ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

    ಈ ಸಂಬಂಧ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಬೀದರ್: ಸಿಡಿಲು ಬಡಿದರೂ ಭಕ್ತರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಉಪ್ಪಳ ಗ್ರಾಮದ ಬಳಿ ಇರುವ ಗುತ್ತಿ ಭವಾನಿ ಮಾತಾ ದೇವಸ್ಥಾನದಲ್ಲಿ ನಡೆದಿದೆ.

    ವಿಜಯದಶಮಿ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ದೇವಾಲಯಕ್ಕೆ ಸಿಡಿಲು ಬಡಿದಿದೆ. ಸಿಡಿಲ ಬಡಿತಕ್ಕೆ ದೇವಸ್ಥಾನದ ಗೋಪುರ, ಗೋಡೆ ಮುರಿದು ಹೋದರೂ ದೇವಸ್ಥಾನದ ಒಳಗಡೆ ಇದ್ದ ಭಕ್ತರು ಪವಾಡ ಎಂಬಂತೆ ಅಪಾಯದಿಂದ ಪಾರಾಗಿದ್ದಾರೆ.

    ಭಕ್ತರೊಬ್ಬರು ಪ್ರತಿಕ್ರಿಯಿಸಿ, ಬಡಿದ ಸಿಡಿಲು ದೇವಾಲಯ ಒಳಗಡೆ ಹೋದ ಅನುಭವವಾಗಿದೆ. ನಂತರ ಈ ಸಿಡಿಲು ಕಾಣೆ ಆಗಿದ್ದು ಹೇಗೆ ಎನ್ನುವುದೇ ಆಶ್ಚರ್ಯ ಎಂದು ಹೇಳಿದ್ದಾರೆ.

    ಈಗ ಸಿಡಿಲನ್ನೇ ತಡೆದು ಭಕ್ತರನ್ನು ಕಾಪಾಡಿದ ಭಾವಾನಿ ಮಾತಾ ದೇವಸ್ಥಾನ ನೋಡಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬರುತ್ತಿದೆ.