Tag: ದೇವಸ್ಥಾನ

  • ದಾಸೋಹ ಕೇಂದ್ರದ ಹುಂಡಿಯಲ್ಲಿದ್ದ ನೋಟು ಕದ್ದು, ಚಿಲ್ಲರೆ ಬಿಟ್ಟೋದ ಕಳ್ಳರು

    ದಾಸೋಹ ಕೇಂದ್ರದ ಹುಂಡಿಯಲ್ಲಿದ್ದ ನೋಟು ಕದ್ದು, ಚಿಲ್ಲರೆ ಬಿಟ್ಟೋದ ಕಳ್ಳರು

    ರಾಮನಗರ: ಕೈಲಾಂಚ ಹೋಬಳಿಯ ಐತಿಹಾಸಿಕ ಪ್ರಸಿದ್ಧ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿನ ಅನ್ನದಾಸೋಹ ಕಟ್ಟಡದಲ್ಲಿ ಕಳ್ಳರು ಕೈಚಳಕ ತೋರಿದ್ದು, ಹುಂಡಿಯ ಹಣವನ್ನು ಹೊತ್ತೊಯ್ದಿದ್ದಾರೆ.

    ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಭಕ್ತರು ಪ್ರಸಾದ ಸೇವನೆ ಮಾಡಿದ ಬಳಿಕ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಹುಂಡಿಯಲ್ಲಿ ಹಾಕುತ್ತಿದ್ದರು. ಈ ಹುಂಡಿಯ ಮೇಲೆ ಕಳ್ಳರ ಕಣ್ಣು ಬಿದ್ದಿತ್ತು. ರಾತ್ರಿ ದಾಸೋಹ ಕಟ್ಟಡದಲ್ಲಿದ್ದ ಹುಂಡಿಯನ್ನು ಕದ್ದು, ದೇವಾಲಯದ ಪಕ್ಕದ ಜಮೀನಿನಲ್ಲಿ ಹುಂಡಿಯ ಬೀಗ ಒಡೆದು, ನೋಟುಗಳನ್ನ ತೆಗೆದುಕೊಂಡ ನಂತರ ಹುಂಡಿಯನ್ನು ಹಾಗೂ ಅದರಲ್ಲಿದ್ದ ಚಿಲ್ಲರೆ ಕಾಸನ್ನು ಬಿಟ್ಟು ಹೋಗಿದ್ದಾರೆ.

    ಬೆಳಿಗ್ಗೆ ಎಂದಿನಂತೆ ದಾಸೋಹ ಭವನಕ್ಕೆ ಬಂದ ದೇವಸ್ಥಾನದ ಸಿಬ್ಬಂದಿಗೆ ಹುಂಡಿ ಕಳ್ಳತನ ಆಗಿರುವುದು ತಿಳಿದು ಬಂದಿದೆ. ದಾಸೋಹ ಭವನದಲ್ಲಿ ಇರಿಸಲಾಗಿದ್ದ ಹುಂಡಿಯಲ್ಲಿನ ಹಣವನ್ನು ಕಳೆದ ನಾಲ್ಕು ತಿಂಗಳಿನಿಂದ ಹೊರಗೆ ತೆಗೆದಿರಲಿಲ್ಲ ಈ ಬಗ್ಗೆ ಮಾಹಿತಿ ಇರುವವರೇ ಕಳವು ಮಾಡಿರಬಹುದೆಂದು ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಗೆ ದೇವಸ್ಥಾನದ ಟ್ರಸ್ಟ್ ನವರು ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

  • ಸಿಸಿಟಿವಿ ಕ್ಯಾಮೆರಾ ಒಡೆದು ದೇವರ ಹುಂಡಿಗೆ ಕನ್ನಾ

    ಸಿಸಿಟಿವಿ ಕ್ಯಾಮೆರಾ ಒಡೆದು ದೇವರ ಹುಂಡಿಗೆ ಕನ್ನಾ

    ಮಂಡ್ಯ: ದೇವಸ್ಥಾನದ ಬೀಗ ಒಡೆದು ಹುಂಡಿಯಲ್ಲಿರುವ ಹಣವನ್ನು ಕಳ್ಳತನ ಮಾಡಲಾಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ದಂಡಿಮಾರಮ್ಮನ ದೇವಸ್ಥಾನದ ಹುಂಡಿಗೆ ಕಳ್ಳರು ಕನ್ನಾ ಹಾಕಿದ್ದಾರೆ. ಮಂಗಳವಾರ ರಾತ್ರಿ ದೇವಸ್ಥಾನದ ಬಳಿ ಯಾರು ಇಲ್ಲದೇ ವೇಳೆ ಕಳ್ಳರು ಮೊದಲು ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ.

    ಕ್ಯಾಮೆರಾ ಒಡೆದ ಬಳಿಕ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ. ಬಳಿಕ ದೇವರ ಮುಂದೆ ಇದ್ದ ಹುಂಡಿಯ ಬೀಗವನ್ನು ಒಡೆದು, ಭಕ್ತರು ಹಾಕಿದ್ದ ಹಣ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಾಹನ ಸವಾರರ ಹಿತ ಕಾಯುತಿದ್ದ ಚೌಡಮ್ಮ ದೇವಸ್ಥಾನ ಸ್ಥಳಾಂತರ

    ವಾಹನ ಸವಾರರ ಹಿತ ಕಾಯುತಿದ್ದ ಚೌಡಮ್ಮ ದೇವಸ್ಥಾನ ಸ್ಥಳಾಂತರ

    – ದೇವಿಯ ಒಪ್ಪಿಗೆ ಮೇರೆಗೆ ಸ್ಥಳಾಂತರ

    ಚಿತ್ರದುರ್ಗ: ತಾಲೂಕಿನ ಭರಮಸಾಗರದ ಬಳಿ ಇರುವ ಕೋಳಾಳ್ ಚೌಡೇಶ್ವರಿ ದೇವಾಲಯವನ್ನು ಸ್ಥಳಾಂತರಿಸಿದ್ದಕ್ಕೆ ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರಿಯ ಹೆದ್ದಾರಿ 14ರ ದಾವಣಗೆರೆ-ಚಿತ್ರದುರ್ಗ ನಡುವೆ ಭರಮಸಾಗರದ ಬಳಿ ಈ ದೇವಾಲಯವಿದ್ದು, ನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ನೂರಾರು ವಾಹನಗಳ ಸವಾರರು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ ಮುಂದೆ ಸಾಗುತ್ತಿದ್ದರು. ಆದರೆ ಇತ್ತೀಚೆಗೆ ರಸ್ತೆ ಅಗಲೀಕರಣದಿಂದಾಗಿ ರಸ್ತೆಯ ಪಕ್ಕದಲ್ಲೇ ಇರುವ ಈ ದೇವಿಯ ದೇವಸ್ಥಾನವನ್ನು ಪಕ್ಕಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿತ್ತು. ಇದಕ್ಕೆ ಹಲವು ಅಡೆತಡೆಗಳು ಎದುರಾಗಿ, ಸಾವು ನೋವುಗಳು ಸಹ ಸಂಭವಿಸಿದ್ದವು. ಇದು ಅಪಶಕುನ ಎಂದು ಭಾವಿಸಿದ ಭಕ್ತರು ದೇವತೆಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    ದೇವತೆಯ ದರ್ಶನಕ್ಕಾಗಿ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಮಳೆ ಬೆಳೆ ಚೆನ್ನಾಗಿ ಆಗಲೆಂದು ಪೂಜೆ ಸಲ್ಲಿಸುತ್ತಾರೆ. ವರ್ಷಕ್ಕೊಮ್ಮೆ ದೇವಿಯ ಹಬ್ಬ ಆಚರಿಸಿ, ಅನ್ನಸಂತರ್ಪಣೆ ಸಹ ಏರ್ಪಡಿಸುತ್ತಾರೆ. ಹೀಗಾಗಿ ರಸ್ತೆ ಅಗಲೀಕರಣದ ವಿಚಾರ ಬಂದಾಗ ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸ್ಥಳಾಂತರಿಸಲು ಒಪ್ಪಿರಲಿಲ್ಲ. ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಹೂವಿನ ಪ್ರಸಾದದ ಮೂಲಕ ದೇವಿಯ ಅಪ್ಪಣೆ ಕೇಳಿದ್ದು, ಭಕ್ತರ ಕೋರಿಕೆಗೆ ದೇವತೆ ಸ್ಪಂದಿಸಿದ್ದಾಳೆ. ದೇವಿಯ ವಿಗ್ರಹ ಸ್ಥಳಾಂತರಕ್ಕೆ ತಾಯಿ ಚೌಡೇಶ್ವರಿ ಒಪ್ಪಿಗೆ ನೀಡಿದ್ದಾಳೆ ಎಂದು ಹೇಳಲಾಗಿದೆ.

    ದೇವತೆ ಒಪ್ಪಿಗೆ ಮೇರೆಗೆ ರಸ್ತೆ ಬಳಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣ ಮಾಡಲು ಇಲ್ಲಿನ ಭಕ್ತರು ನಿರ್ಧರಿಸಿದ್ದಾರೆ.

  • ಸಂಕಷ್ಟದಲ್ಲಿರುವ ಶಾಲೆ, ದೇವಸ್ಥಾನಕ್ಕೆ ಜಾಗತಿಕ ಬಂಟರ ಸಂಘ ನೆರವು: ಐಕಳ ಹರೀಶ್ ಶೆಟ್ಟಿ

    ಸಂಕಷ್ಟದಲ್ಲಿರುವ ಶಾಲೆ, ದೇವಸ್ಥಾನಕ್ಕೆ ಜಾಗತಿಕ ಬಂಟರ ಸಂಘ ನೆರವು: ಐಕಳ ಹರೀಶ್ ಶೆಟ್ಟಿ

    ಮಂಗಳೂರು: ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಈಗಾಗಲೇ ನೆರವು ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ ಅದನ್ನು ಮುಂದುವರಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ಪ್ರಥಮ ಗ್ರಾಮ ವಾಸ್ತವ್ಯ ನಡೆದ ಕುತ್ಲೂರು ಸರ್ಕಾರಿ ಶಾಲೆಗೆ ಪೀಠೋಪಕರಣ ಹಾಗೂ ಅತಿಥಿ ಉಪನ್ಯಾಸಕರಿಗೆ ಗೌರವಧನ ವಿತರಿಸಲಾಯಿತು. ಆ ಬಳಿಕ ಮಾತನಾಡಿದ ಹರೀಶ್ ಶೆಟ್ಟಿ, ಉತ್ತಮ ಶಿಕ್ಷಣದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಮುಂಬೈ ಉದ್ಯಮಿಗಳು, ದಾನಿಗಳ ಸಹಾಯದಿಂದ ಸಾಮಾಜಿಕ ಸೇವೆಯನ್ನು ಮಾಡುತ್ತಿವೆ ಎಂದು ಭರವಸೆ ನೀಡಿದರು.

    ಕಳೆದ ಎರಡು ವರ್ಷಗಳಿಂದ ಸಂಘದಿಂದ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ವಿಶೇಷ ನೆರವನ್ನು ನೀಡುತ್ತಾ ಬರಲಾಗಿದೆ. ಸಹಕಾರ ಕೇಳಿ ಬಂದ ಯಾವುದೇ ಮನವಿಯನ್ನು ಈವರೆಗೆ ತಿರಸ್ಕಾರ ಮಾಡಿಲ್ಲ. ಜಾಗತಿಕ ಬಂಟರ ಸಂಘದಿಂದ ಕುತ್ಲೂರು ಶಾಲೆಯ ಪೀಠೋಪಕರಣಕ್ಕೆ ಮತ್ತು ಆ ಶಾಲೆಯ ಅತಿಥಿ ಉಪನ್ಯಾಸಕರಿಗೆ ಗೌರವ ಧನ ಚೆಕ್ ಹಸ್ತಾಂತರ ಮಾಡಲಾಗಿದೆ. ಕುತ್ಲೂರು ಶಾಲೆಯನ್ನು ಸಂಘ ದತ್ತು ತೆಗೆದುಕೊಳ್ಳುವ ಬೇಡಿಕೆ ಬಂದಿದ್ದು, ಸಂಘದ ಸಭೆಯಲ್ಲಿ ಪ್ರಸ್ತಾಪ ಮಾಡಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಕುತ್ಲೂರು ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ರಾಮಚಂದ್ರ ಭಟ್ ಮಾತನಾಡಿ, ಜಾಗತಿಕ ಬಂಟರ ಸಂಘದಿಂದ ಶಾಲೆಗೆ ನೀಡಿದ ಸಹಕಾರ ನಿಜಕ್ಕೂ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಶಾಲೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದ್ದು, ಶಾಲೆಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮವಾಸ್ತವ್ಯ, ಬ್ರ್ಯಾಂಡ್ ಮಂಗಳೂರು, ಪತ್ರಕರ್ತರಿಗೆ ಕಾರ್ಯಾಗಾರ, ಪತ್ರಕರ್ತರ ಆರೋಗ್ಯ ಶಿಬಿರದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಗ್ರಾಮವಾಸ್ತವ್ಯದಲ್ಲಿ ಪತ್ರಕರ್ತರ ಸಂಘ ನೀಡಿದ ಬಹುತೇಕ ಬೇಡಿಕೆಗಳನ್ನು ದಾನಿಗಳು, ಅಧಿಕಾರಿಗಳ ಸಹಕಾದಿಂದ ಈಡೇರಿಸಲಾಗಿದೆ ಎಂದರು.

    ಈ ಕಾರ್ಯಕ್ರಮದಲ್ಲಿ ದಾನಿಗಳಾದ ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ಆನಂದ್ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಕೋಟ್ಯಾನ್ ಪಡು ವಂದಿಸಿದರು.

  • ಸಿಸಿಟಿವಿಯನ್ನೂ ಬಿಡದ ಕಳ್ಳರು – ದೇವಸ್ಥಾನ, ಶಾಲೆ ದೋಚಿ ಪರಾರಿ

    ಸಿಸಿಟಿವಿಯನ್ನೂ ಬಿಡದ ಕಳ್ಳರು – ದೇವಸ್ಥಾನ, ಶಾಲೆ ದೋಚಿ ಪರಾರಿ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದೇವಾಲಯಕ್ಕೆ ಕನ್ನ ಹಾಕುವ ಖದೀಮರ ಕಾಟ ಹೆಚ್ಚಾಗಿದ್ದು, ಇಷ್ಟು ದಿನ ದೇವಾಲಯಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಕಳ್ಳರು ಇದೀಗ ಸಿಸಿಟಿವಿ ಕ್ಯಾಮೆರಾವನ್ನೂ ಕಳವು ಮಾಡಿದ್ದಾರೆ.

    ತಾಲೂಕಿನ ಸೋಮವಾರಪೇಟೆ ಬಳಿಯ ಶಿರಗಳ್ಳಿ ಲಕ್ಷ್ಮೀ ದೇವಿ ದೇವಾಲಯಕ್ಕೆ ಕನ್ನ ಹಾಕಿರುವ ಖದೀಮರು ಸಿಸಿಟಿವಿ ಕ್ಯಾಮೆರಾ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಡಿವಿಆರ್ ಸಹ ಕಳವು ಮಾಡಿದ್ದಾರೆ. ದೇವಾಲಯಕ್ಕೆ ಕನ್ನ ಹಾಕಿದ ಬಳಿಕ ಸಮೀಪದಲ್ಲಿರುವ ಯೂನಿವರ್ಸಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲೂ ಕಳ್ಳತನ ಮಾಡಿದ್ದಾರೆ. ಶಾಲೆಯ ಬೀಗ ಮುರಿದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ.

    ಬೆಳಗ್ಗೆ ದೇವಸ್ಥಾನ ಹಾಗೂ ಶಾಲೆಗೆ ಸಿಬ್ಬಂದಿ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಚಾಮರಾಜನಗರ ಪೂರ್ವ ಠಾಣಾ ಪೋಲಿಸರ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ.

  • ಮಹಾತ್ಮ ಗಾಂಧೀಜಿ ಪ್ರತಿಮೆ ಎದುರೇ ಬಾರ್ ಓಪನ್

    ಮಹಾತ್ಮ ಗಾಂಧೀಜಿ ಪ್ರತಿಮೆ ಎದುರೇ ಬಾರ್ ಓಪನ್

    – ಸಾಮಾಜಿಕ ಕಾರ್ಯಕರ್ತರಿಂದ ಬಿಬಿಎಂಪಿಗೆ ದೂರು

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿರ ಬೃಹತ್ ಪ್ರತಿಮೆ ಎದುರೇ ಬಾರ್ ಶಾಪ್ ಓಪನ್ ಆರಂಭವಾಗುತ್ತಿದ್ದು, ನಗರದ ಎಂ.ಜಿ.ರಸ್ತೆಯ ಜಂಕ್ಷನ್ ಬಳಿ ಮಹಾತ್ಮಗಾಂಧೀ ಉದ್ಯಾನವನವಿದೆ. ಈ ಉದ್ಯಾನವನದಲ್ಲಿ ಬೃಹತ್ ಗಾಂಧೀಜಿಯವರ ಪ್ರತಿಮೆ ಎದುರೇ ಟಾನಿಕ್ ಎನ್ನುವ ಹೆಸರಿನಲ್ಲಿ ಬೃಹತ್ ಬಾರ್ ಶಾಪ್ ಓಪನ್ ಆಗುತ್ತಿದೆ.

    ಏಷ್ಯಾದ ಬಿಗ್ಗೆಸ್ಟ್ ಬಾರ್ ಟಾನಿಕ್ ಎಂದು ಹೇಳಲಾಗುತ್ತಿದ್ದು, ಈ ಬಾರಿನ 10 ಅಡಿ ದೂರದಲ್ಲಿ ಅತಿ ದೊಡ್ಡ ಚರ್ಚ್ ಮತ್ತು ಪೊಲೀಸ್ ಠಾಣೆ ಕೂಡ ಇದೆ. ಬಾರಿನಿಂದ 100 ಮೀಟರ್ ವ್ಯಾಪ್ತಿಯಲ್ಲಿ ದೇವಸ್ಥಾನ ಮತ್ತು ಮಹಾತ್ಮ ಗಾಂಧಿ ಪ್ರತಿಮೆ ಇದೆ. 100 ಮೀಟರ್ ಅಂತರದಲ್ಲೇ ದೇವಸ್ಥಾನ ಸೇರಿದಂತೆ ಗಾಂಧೀಜಿ ಪ್ರತಿಮೆ ಇದ್ದರೂ ಕೂಡ ಅಬಕಾರಿ ನಿಯಮಗಳ ಗಾಳಿಗೆ ತೂರಿ ಬಾರ್ ಶಾಪ್ ಓಪನ್ ಮಾಡಲಾಗುತ್ತಿದೆ.

    ಗಾಂಧೀಜಿ ಪ್ರತಿಮೆ ಎದುರೇ ಬಾರ್ ತೆರೆಯುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರು, ಚಿಂತಕರು ಸೋಶಿಯಲ್ ಮೀಡಿಯಾದಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಬಿಬಿಎಂಪಿ ಮತ್ತು ಆರ್.ಟಿ.ಓ ಇಲಾಖೆಗೂ ದೂರು ನೀಡಿದ್ದಾರೆ. ಟಾನಿಕ್ ಎಂಬ ಹೆಸರಿನಲ್ಲಿ ಓಪನ್ ಆಗುತ್ತಿರುವ ಈ ಬಾರ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದರ ಹಿಂದೆ ಕಾಣದ ಕೈವಾಡ ಇದೆ. ಹಲವಾರು ಜನ ವಿರೋಧ ಮಾಡಿದ್ದರೂ ಬಾರ್ ತೆರೆಯಲು ಮುಂದಾಗುತ್ತಿದ್ದಾರೆ. ಪರಿಣಾಮ ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

    ಹಲವಾರು ದಿನಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿ ಎಷ್ಟು ದೂರು ಕೊಟ್ಟರು ಅಧಿಕಾರಿಗಳು ಮಾತ್ರ ಕ್ರಮ ಜರುಗಿಸುತ್ತಿಲ್ಲ. ಆದಷ್ಟು ಬೇಗ ಅಧಿಕಾರಿಗಳು ಇದರ ಬಗ್ಗೆ ಕ್ರಮ ಜರುಗಿಸಲಿಲ್ಲ ಅಂದರೆ ಪ್ರತಿಭಟನೆಗಳು, ಹೋರಾಟಗಳು ಹೆಚ್ಚಾಗುವ ಎಚ್ಚರಿಕೆ ನೀಡಲಾಗಿದೆ.

  • ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಜೈಪುರ: ತನಗೆ ಮದುವೆ ಮಾಡಿಸಿಲ್ಲ ಎಂದು ಯುವಕನೋರ್ವ ಗುಡಿಯಲ್ಲಿದ್ದ ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನ ಜೈಪುರ ಜಿಲ್ಲೆಯ ಛೊಮು ಪಟ್ಟಣದಲ್ಲಿ ನಡೆದಿದೆ.

    ಭೂಷಣ್ ಹನುಮನ ಮೂರ್ತಿ ಧ್ವಂಸಗೊಳಿಸಿದ ಯುವಕ. ಮದುವೆ ಮಾಡಿಸು ಎಂದು ಹನುಮಂತನನ್ನು ಭೂಷಣ್ ಪ್ರತಿದಿನ ಪೂಜಿಸುತ್ತಿದ್ದನು. ತನ್ನ ಪಾರ್ಥನೆಗೆ ದೇವರು ಸ್ಪಂದಿಸಲಿಲ್ಲವೆಂಬ ಹತಾಶೆಯಿಂದ ಮೂರ್ತಿಯನ್ನು ಧ್ವಂಸ ಮಾಡಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ಭೂಷಣ್ ನನಗೆ ಮದುವೆಯಾಗಿಲ್ಲ ಎಂದು ಈ ರೀತಿ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಹೇಳಿದ್ದಾನೆ.

    ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಹನುಮನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ ಎಂದು ಊರಿನ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶ್ವಾನದಳದ ಸಹಾಯದಿಂದ ಈ ಕೆಲಸವನ್ನು ಮಾಡಿರುವುದು ದೇವಸ್ಥಾನ ಮಾಲೀಕನ ಮೊಮ್ಮಗ ಭೂಷಣ್ ಎಂದು ಎರಡು ಗಂಟೆಯೊಳಗೆ ಕಂಡುಹಿಡಿದಿದ್ದಾರೆ.

    ಪೊಲೀಸರು ಭೂಷಣ್ ವಿಚಾರಣೆ ನಡೆಸಿದಾಗ ಕಳೆದ ಮೂರು ತಿಂಗಳಿನಿಂದ ತನ್ನ ಮದುವೆಗಾಗಿ ಹನುಮನಲ್ಲಿ ಪಾರ್ಥಿಸುತ್ತಿದೆ ಎಂದು ಹೇಳಿದ್ದಾನೆ. ಅದರೂ ನನಗೆ ಮದುವೆಯಾಗಿಲ್ಲ. ಆದ್ದರಿಂದ ತನ್ನ ಪಾರ್ಥನೆಗೆ ಸ್ಪಂದಿಸದೇ ಇದ್ದ ಹನುಮನನ್ನು ಶನಿವಾರ ಕಬ್ಬಿಣದ ರಾಡ್ ಅನ್ನು ತೆಗೆದುಕೊಂಡು ಒಡೆದು ಹಾಕಿದೆ. ನಂತರ ನಾನು ಮನಗೆ ಹೋಗಿ ಮಲಗಿಕೊಂಡೆ ಎಂದು ಹೇಳಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಬೆಗಾರಾಮ್, ಈ ಘಟನೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಈ ದೇವಸ್ಥಾನ ಆತನ ಮನೆಯವರದೇ ಆದ ಕಾರಣ ಅವರು ದೂರನ್ನು ವಾಪಸ್ ಪಡೆದಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

  • ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ

    ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ

    ಮಂಗಳೂರು: ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಮಂಗಳೂರಿನ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಅರ್ಚಕರು ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಗೆ ಕಳುಹಿಸಿದ್ದಾರೆ.

    ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನದಲ್ಲಿ ಕಳೆದ ಸೋಮವಾರ ಷಷ್ಠಿ ಮಹೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಸುಮಾರು 25 ಸಾವಿರ ಭಕ್ತರು ಈ ಷಷ್ಠಿ ಮಹೋತ್ಸವದಲ್ಲಿ ಭಾಗಿಯಾಗಿದ್ದರಿಂದ ಸ್ಥಳೀಯ ಮೂಡಬಿದ್ರೆ ಪೊಲೀಸರು ಸಂಪೂರ್ಣ ಭದ್ರತೆ ನೀಡಿದ್ದು, ಶಾಂತಿ ಸುವ್ಯವಸ್ಥೆಗೆ ಸಕಲ ಬಂದೋಬಸ್ತ್ ನಡೆಸಿದ್ದರು.

    ದೇವಸ್ಥಾನದ ಒಳಾಂಗಣದಲ್ಲಿ ಭಕ್ತರ ಜನ ಸಂದಣಿಯನ್ನು ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ದಲಿತ ಸಮುದಾಯದವರು ಎಂದು ಗೊತ್ತಾಗಿದ್ದೇ ತಡ, ಅಲ್ಲಿನ ಅರ್ಚಕ ವೃಂದದವರು ತಕ್ಷಣ ಆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳಿಸಿದ್ದಾರೆ. ಪಾರ್ಕಿಂಗ್ ಸ್ಥಳದಲ್ಲಿ ಬಂದೋ ಬಸ್ತ್ ಮಾಡಿ, ದೇವಸ್ಥಾನದ ಒಳಗೆ ನಿಮ್ಮನ್ನು ಬಿಟ್ಟದ್ದು ಯಾರು? ಕ್ಷೇತ್ರಕ್ಕೆ ನಿಮ್ಮಿಂದ ಮೈಲಿಗೆಯಾಗಿದೆ ಎಂದು ಸಾವಿರಾರು ಭಕ್ತರ ಮುಂದೆಯೇ ಅವಮಾನಿಸಿ ಹೊರಗಡೆ ಕಳುಹಿಸಿದ್ದಾರೆ.

    ಇದನ್ನು ಕೆಲವರು ವಿರೋಧಿಸಿದರೂ ಅರ್ಚಕ ವೃಂದ ಕ್ಯಾರೇ ಎನ್ನದೆ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ್ದಾರೆ. ಮಾತ್ರವಲ್ಲದೆ ಭೋಜನ ವ್ಯವಸ್ಥೆಯಲ್ಲೂ ತಾರತಮ್ಯ ನಡೆಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಪೂಜೆ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದ್ದು, ಅವರು ಊಟ ಮಾಡಿದ ನಂತರ ಉಳಿದ ಜಾತಿಯ ಭಕ್ತರಿಗೆ ಊಟ ನೀಡಲಾಗಿದೆ.

    ಸಹಪಂಕ್ತಿ ಭೋಜನದ ವ್ಯವಸ್ಥೆ ಆಗಬೇಕೆಂದು ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರೂ ಒತ್ತಾಯ ಮಾಡುತ್ತಿದ್ದರೂ ಈ ಕ್ಷೇತ್ರದಲ್ಲಿ ಇಂತಹ ಜಾತಿ ಆಧಾರದಲ್ಲಿ ಭೋಜನ ವ್ಯವಸ್ಥೆ ಮಾಡೋದು ಇಂದಿಗೂ ಜೀವಂತವಾಗಿ ಉಳಿದಿದೆ. ಮಾತ್ರವಲ್ಲದೆ ದೇವಳಕ್ಕೆ ಬರುವ ಭಕ್ತರನ್ನು ಇಲ್ಲಿನ ಅರ್ಚಕ ವೃಂದ ಜಾತಿ ಆಧಾರದಲ್ಲಿ ಗುರುತಿಸಿ ಸದಾ ಹೀಯಾಳಿಸುತ್ತಿರುವುದು ಭಕ್ತರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ಭಕ್ತರು ನೀಡುವ ಕಾಣಿಕೆ ಹಣಕ್ಕೆ ಯಾವುದೇ ಜಾತಿಯನ್ನು ನೋಡದೆ ಕಾಣಿಕೆ ಸಂಗ್ರಹಿಸುವ ಅರ್ಚಕರು, ಕ್ಷೇತ್ರ ಪ್ರವೇಶ, ಭೋಜನ ವ್ಯವಸ್ಥೆಗೆ ಜಾತಿ ಆಧಾರದಲ್ಲಿ ನೋಡುವುದು ಸರಿಯಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೋಟೇಲಿನಲ್ಲಿ ಪೊಲೀಸರ ಊಟ
    ಷಷ್ಠಿ ಮಹೋತ್ಸವದ ಸಂದರ್ಭ ಸುವ್ಯವಸ್ಥೆಗೆ ನಿಯೋಜನೆಗೊಂಡ ತಮ್ಮ ಸಹದ್ಯೋಗಿ ದಲಿತ ಮಹಿಳಾ ಸಿಬ್ಬಂದಿಗೆ ಅವಮಾನ ಮಾಡಿದ ದೇವಸ್ಥಾನದ ಅರ್ಚಕ ವೃಂದದ ನಡೆಯಿಂದ ಹಾಗೂ ಭೋಜನದಲ್ಲೂ ಪಂಕ್ತಿ ಭೇದ ಮಾಡಿದ ಅರ್ಚಕರ ವರ್ತನೆಯಿಂದ ಕರ್ತವ್ಯನಿರತ ಎಲ್ಲ ಪೊಲೀಸರು ಸ್ಥಳೀಯ ಹೋಟೇಲ್‍ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದರು. ದೇವಸ್ಥಾನದಲ್ಲಿ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರೂ ಈ ಘಟನೆಯಿಂದ ಆಕ್ರೋಶಗೊಂಡ ಸ್ವಾಭಿಮಾನಿ ಭಕ್ತರೂ ಕ್ಷೇತ್ರದ ಭೋಜನ ಸ್ವೀಕರಿಸದೇ ಅವರವರ ಮನೆಯಲ್ಲಿ ಊಟ ಮಾಡಿದ್ದು, ಅರ್ಚಕ ವೃಂದದ ಕೃತ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.

  • ಐತಿಹಾಸಿಕ ಸ್ಥಳಗಳ ಉಳಿವಿಗಾಗಿ ಸರ್ಕಾರಿ ನೌಕರರು ಪಣ

    ಐತಿಹಾಸಿಕ ಸ್ಥಳಗಳ ಉಳಿವಿಗಾಗಿ ಸರ್ಕಾರಿ ನೌಕರರು ಪಣ

    – ಯುವ ಜನಾಂಗಕ್ಕೆ ಸ್ಥಳ ಪರಿಚಯದ ಜೊತೆಗೆ ಸ್ವಚ್ಛತೆ
    – ವಿದ್ಯಾರ್ಥಿಗಳೂ ಸಾಥ್

    ಕೊಪ್ಪಳ: ಅವರೆಲ್ಲ ಸರ್ಕಾರಿ ನೌಕರರು, ನಿತ್ಯ ಕೆಲಸ ಮುಗಿಸಿ ಮನೆಗೆ ಹೋದರೆ ಸಾಕು ಅಂದುಕೊಳ್ಳುವವರು. ಆದರೆ ಇಂದು ಆ ಸರ್ಕಾರಿ ನೌಕರರೆಲ್ಲ ಒಂದು ಐತಿಹಾಸಿಕ ಸ್ಥಳದ ಉಳಿವಿಗೆ ಮುಂದಾಗಿದ್ದಾರೆ.

    ಹೌದು. ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕುಮಾರರಾಮನ ಕುಮ್ಮಟ ದುರ್ಗ ಉಳಿಸಲು ಸರ್ಕಾರಿ ನೌಕರರು ಪಣ ತೊಟ್ಟಿದ್ದಾರೆ. ಇವರಿಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡ ಸಾಥ್ ನೀಡಿದ್ದಾರೆ.

    ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಸಮೀಪ ಇರೋ ಕುಮ್ಮಟ ದುರ್ಗವನ್ನ ಸ್ವಚ್ಛಗೊಳಿಸಿದ್ದಾರೆ. ಗಂಗಾವತಿಯ ಸರ್ಕಾರಿ ಕೆಲಸ ಮಾಡುವ ಕೆಲವರು ‘ಚಾರಣ’ ಎಂಬ ಹೆಸರಲ್ಲಿ ಗುಂಪು ಕಟ್ಟಿಕೊಂಡು ಐತಿಹಾಸಿಕ ಸ್ಥಳಗಳ ಉಳಿವಿಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಅಧಿಕಾರಿಗಳು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಕೂಡ ದೇವಸ್ಥಾನದ ಸುತ್ತಲೂ ಬೆಳೆದಿದ್ದ ಕಸವನ್ನು ಕ್ಲೀನ್ ಮಾಡಿದ್ದಾರೆ.

    ಗಂಗಾವತಿಯ ಚಾರಣ ಬಳಗವು ಕಳೆದ ನಾಲ್ಕು ತಿಂಗಳಿಂದ ಐತಿಹಾಸಿಕ ಪರಂಪರೆ ಹೊಂದಿದ ಸ್ಥಳಗಳಿಗೆ ಭೇಟಿ ನೀಡಿದೆ. ಈ ಚಾರಣ ಬಳಗವು ಯುವ ಜನಾಂಗಕ್ಕೆ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಕಾರ್ಯದ ಜೊತೆಗೆ ಸ್ವಚ್ಛತೆಗೆ ಮುಂದಾಗಿದೆ. ಈ ತಂಡ ಪ್ರತಿ ತಿಂಗಳ 2ನೇ ಭಾನುವಾರ ಚಾರಣ ಕಾರ್ಯಾಗಾರವನ್ನು ನಡೆಸುತ್ತದೆ. ಚಾರಣ ಹೋಗುವ ಸ್ಥಳ ಸೇರಿದಂತೆ ಇತರೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದೆ.

    ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಐತಿಹಾಸಿಕ ಸ್ಥಳಗಳ ಸದ್ಯದ ಸ್ಥಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಿದೆ. ಈಗಾಗಲೇ ಈ ಚಾರಣ ಬಳಗವು ಹಿರೇಬೆಣಕಲ್‍ನ ಮೋರೇರ ಸ್ಥಳ, ಅಂಜನಾದ್ರಿ ಬೆಟ್ಟ, ಗವಿ ಸ್ಥಳಗಳಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳ ಮೇಲೆ ಗಿಡ ಹಾಗೂ ಗಂಟಿ ಬೆಳೆದಿದ್ದನ್ನು ಸಂಪೂರ್ಣ ಸ್ವಚ್ಚಗೊಳಿಸಿದೆ. ಈ ಮೂಲಕ ಐತಿಹಾಸಿಕ ಸ್ಥಳಗಳಿಗೆ ಜನರು ಬರುವ ಹಾಗೆ ಮಾಡಿದ್ದಾರೆ.

    ಫೇಸ್‍ಬುಕ್‍ನಲ್ಲಿ ಚಾರಣಕ್ಕೆ ಆಗಮಿಸುವವರಿಗೆ ದಿನಾಂಕ, ಸಮಯವನ್ನು ಶೇರ್ ಮಾಡುತ್ತಾರೆ. ಎಲ್ಲರೂ ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ತೆರಳುತ್ತಾರೆ. ಸ್ಮಾರಕಗಳು ಹಾಳಾಗುತ್ತಿವೆ. ಬನ್ನಿ ಕೈ ಜೋಡಿಸಿ, ಕುಮ್ಮಟ ದುರ್ಗಕ್ಕೆ ಕೊಡಲಿ, ಕುಡುಗೋಲು ಇದ್ದರೆ ತೆಗೆದುಕೊಂಡು ಬನ್ನಿ. ಐತಿಹಾಸಿಕ ಸ್ಥಳದ ದೇವಸ್ಥಾನದ ಮೇಲೆ ಬೆಳೆ ಗಿಡ, ಗಂಟಿಗಳನ್ನು ತೆಗೆದು ಹಾಕಬೇಕಾಗಿದೆ. ಅಲ್ಲದೆ ಸ್ವಚ್ಛತೆ ಮಾಡುವುದು ಅವಶ್ಯವಿದೆ ಎಂಬ ಸಂದೇಶವನ್ನು ಕೂಡ ಈ ತಂಡ ರವಾನಿಸುತ್ತದೆ. ಹಾಗೆಯೇ ಚಾರಣಕ್ಕೆ ಆಗಮಿಸುವವರು ಸ್ವಚ್ಛತೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ.

    ಒಟ್ಟಾರೆ ಈ ಚಾರಣ ಬಳಗವು ಯುವ ಜನಾಂಗಕ್ಕೆ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಕಾರ್ಯದ ಜೊತೆಗೆ ಸ್ವಚ್ಛತೆಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಯುವತಿಯ ರೇಪ್‍ಗೈದು ಕೊಲೆ

    ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಯುವತಿಯ ರೇಪ್‍ಗೈದು ಕೊಲೆ

    ಹೈದರಾಬಾದ್: ಹುಟ್ಟುಹಬ್ಬದ ನಿಮಿತ್ತ ದೇವಸ್ಥಾನಕ್ಕೆ ತೆರಳುತ್ತಿದ್ದ 19 ವರ್ಷದ ಯುವತಿ ಮೇಲೆ ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

    ತೆಲಂಗಾಣದ ಹನುಮಕೊಂಡ ನಗರದಲ್ಲಿ ಘಟನೆ ನಡೆದಿದ್ದು, ಹುಟ್ಟುಹಬ್ಬವಾದ್ದರಿಂದ ಯುವತಿ ಬುಧವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳಿದ್ದಾಳೆ. ಈ ವೇಳೆ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

    ಹಲವು ಗಂಟೆಗಳು ಕಳೆದರೂ ಯುವತಿ ಬಾರದ್ದರಿಂದ ಭಯಭೀತರಾಗಿ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದೆವು. ಆದರೆ ಅವಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಯುವತಿಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಘಟನೆಯಿಂದ ಎಚ್ಚತ್ತ ಯುವತಿಯ ಪೋಷಕರು, ಪೊಲೀಸ್ ಠಾಣೆಗೆ ತೆರಳಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಯುವತಿಯನ್ನು ಹುಡುಕಲು ಪೊಲೀಸ್ ತಂಡ ರಚಿಸಿದ್ದಾರೆ. ತಡರಾತ್ರಿ ಯುವತಿಯ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ವಾರಂಗಲ್‍ನ ಎಂಜಿಎಂ ಆಸ್ಪತ್ರೆಗೆ ಕಳುಹಿಸಲಾಗಿದೆ.

    ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸುಳಿವನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ತನಿಖಾಧಿಕಾರಿಗಳು ಸಂತ್ರಸ್ತೆಯ ಮೊಬೈಲ್ ಕರೆಯ ದಾಖಲೆಗಳು ಹಾಗೂ ಸಿಸಿಟಿವಿ ಫೂಟೇಜ್‍ಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.